ಅತ್ಯಾಡಿ ಗ್ರಾಮಸ್ಥರಿಗೆ ಮರೀಚಿಕೆಯಾದ ಶಾಶ್ವತ ಸೇತುವೆ | ಅಡಿಕೆ ಪಾಲದ ಅಪಾಯಕಾರಿ ನಡಿಗೆಯೇ ಆಸರೆ
ಮಳೆಗಾಲದಲ್ಲಿ ಹೊರಗಿನ ಸಂಪರ್ಕ ಕಡಿತ
ಮಡಿಕೇರಿ : ಸುತ್ತಲೂ ದಟ್ಟಾರಣ್ಯ, ಹಚ್ಚ ಹಸಿರಿನಿಂದ ಕೂಡಿದ ಚೆಂಬು ಗ್ರಾಮವನ್ನು ತಲುಪಲು ಕಲ್ಲುಗುಂಡಿಯಿಂದ ೯ ಕಿ.ಮೀ. ಜೀಪ್‌ನಲ್ಲೇ ಬರಬೇಕು. ಕೆಸರುಮಯವಾದ ಕಿರಿದಾದ ರಸ್ತೆಯಲ್ಲಿ ಗ್ರಾಮಕ್ಕೆ ತಲುಪಿದರೂ ಮನೆ ತಲುಪುವಷ್ಟರಲ್ಲಿ ಜೀವ ಕೈಗೆ ಬಂದಿರುತ್ತದೆ. ಯಾಕೆಂದರೆ ಉಕ್ಕಿ ಹರಿಯುತ್ತಿರುವ ಉಂಬಳೆ ಹೊಳೆ ಒಂದೆಡೆಯಾದರೆ ಮತ್ತೊಂದೆಡೆ ಅಡಿಕೆ ಮರದಲ್ಲಿ ನಿರ್ಮಿಸಿರುವ ಪಾಲದಲ್ಲಿ ಅಪಾಯಕಾರಿ ನಡಿಗೆ ಮೂಲಕ ಮನೆ ತಲುಪಬೇಕು. ಕೊಂಚ ಕಾಲು ಜಾರಿದರೂ ಗ್ರಾಮಸ್ಥರಿಗೆ ಅಪಾಯ ಗ್ಯಾರಂಟಿ.
ಹೌದು, ಪ್ರತೀ ವರ್ಷ ಮಳೆಗಾಲದಲ್ಲಿ ತಾಲೂಕಿನ ಗಡಿ ಭಾಗವಾದ ಎಂ.ಚೆಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ಯಾಡಿ ಉಂಬಳೆ ಗ್ರಾಮವು ದ್ವೀಪದಂತಾಗುತ್ತಿದ್ದು, ಕಳೆದ ಐದು ದಶಕಗಳಿಂದ ಸಂಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗ್ರಾಮದ ಜನರಿಗೆ ಹೊಳೆ ದಾಟಲು ಸೇತುವೆ ಇಲ್ಲದಿರುವುದರಿಂದ ಮಳೆಗಾಲದ ಮೂರು ತಿಂಗಳು ಅತ್ಯಾಡಿ ಗ್ರಾಮಸ್ಥರಿಗೆ ಹೊರಗಿನ ಪ್ರಪಂಚವೇ ಕಣ್ಮರೆಯಾಗುತ್ತದೆ.
ಬೇಸಿಗೆಯಲ್ಲಿ ಉಂಬಳೆ ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಹೊಳೆಯನ್ನು ದಾಟುತ್ತಾರೆ. ಆದರೆ, ಮಳೆಗಾಲದಲ್ಲಿ ಉಂಬಳೆ ಹೊಳೆಯು ಉಕ್ಕಿ ಹರಿಯುತ್ತದೆ. ಈ ವೇಳೆ ಗ್ರಾಮಸ್ಥರಿಗೆ ಮನೆ ಸೇರಲು ಅಡಿಕೆಯಲ್ಲಿ ನಿರ್ಮಿಸಿರುವ ಪಾಲವೇ ಆಸರೆಯಾಗುತ್ತದೆ. ಮಳೆಗಾಲದಲ್ಲಿ ಅಡಿಕೆ ಪಾಲದ ಮಟ್ಟಕ್ಕೆ ನೀರು ಹರಿಯುತ್ತಿದ್ದು, ಇದನ್ನು ದಾಟಲು ಹರಸಾಹಸ ಪಡಬೇಕು. ಮಳೆಗಾಲದಲ್ಲಿ ಮನೆಗೆ ಬೇಕಾದ ಮೂರು ತಿಂಗಳ ದಿನಸಿ ವಸ್ತುಗಳನ್ನು ಮೊದಲೇ ಶೇಖರಿಸಿಟ್ಟಿರುತ್ತಾರೆ.
ಅಡಿಕೆ ಪಾಲದಲ್ಲಿ ಅಪಾಯಕಾರಿ ನಡಿಗೆಗೆ ಇಲ್ಲವೇ ಮುಕ್ತಿ?: ಅತ್ಯಾಡಿ ಗ್ರಾಮದಲ್ಲಿ ೯ ಕುಟುಂಬಗಳ ವಿದ್ಯಾರ್ಥಿಗಳು ಸೇರಿ ೩೫ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ತಮ್ಮ ಮನೆ ಸೇರಬೇಕೆಂದರೆ ಉಂಬಳೆ ಹೊಳೆ ದಾಟಬೇಕು. ಉಂಬಳೆ ಹೊಳೆ ದಾಟಲು ಅಡಿಕೆ ಪಾಲವೇ ಅತ್ಯಾಡಿ ಗ್ರಾಮಸ್ಥರಿಗೆ ಆಸರೆ.
ಆದರೆ, ಪ್ರತೀ ವರ್ಷ ಅಡಿಕೆ ಮರದಲ್ಲಿ ನಿರ್ಮಿಸಿರುವ ಪಾಲವು ಮುರಿದು ಬೀಳುತ್ತದೆ. ಪಾಲದ ಎರಡು ಬದಿಯಲ್ಲಿಯೂ ಯಾವುದೇ ಸುರಕ್ಷತೆ ಇಲ್ಲ. ಪಾಲದಲ್ಲಿ ತಮ್ಮ ಕೈ ಬಿಟ್ಟು, ಜೀವ ಕೈಯಲ್ಲಿ ಹಿಡಿದು ಅಪಾಯಕಾರಿ ನಡಿಗೆ ಮೂಲಕ ಮನೆ ಸೇರಬೇಕು. ಪ್ರತೀ ವರ್ಷ ಅಡಿಕೆ ಪಾಲ ಕೈ ಕೊಡುತ್ತದೆ. ಅಡಿಕೆ ಪಾಲ ನಿರ್ಮಿಸಲು ೫ ರಿಂದ ಏಳು ಸಾವಿರ ರೂ. ಖರ್ಚಾಗುತ್ತದೆ. ಆದರೆ, ಚೆಂಬು ಗ್ರಾಪಂ ಅಡಿಕೆ ಪಾಲವನ್ನು ನಿರ್ಮಿಸಲು ಕೇವಲ ಒಂದು ಸಾವಿರ ರೂ. ನೀಡಿ ಕೈ ತೊಳೆದುಕೊಳ್ಳುತ್ತಿದೆ. ಉಳಿದ ಹಣವನ್ನು ಗ್ರಾಮಸ್ಥರೇ ಹಾಕಿ ತಾತ್ಕಾಲಿಕವಾಗಿ ಪ್ರತೀ ವರ್ಷ ಪಾಲವನ್ನು ನಿರ್ಮಿಸುತ್ತಿದ್ದಾರೆ.
ಆರೋಗ್ಯದಲ್ಲಿ ಏರುಪೇರಾದರೆ ೯ ಕಿ.ಲೋ.ಮೀ ದೂರದ ಕಲ್ಲುಗುಂಡಿ ಪಟ್ಟಣಕ್ಕೆ ಕಲ್ಲುಗಳಿಂದ ಕೂಡಿದ ರಸ್ತೆಯಲ್ಲಿ ಜೀಪಿನಲ್ಲೇ ಬರಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಕ್ಕೆ ಆ್ಯಂಬುಲೆನ್ಸ್ ಕೂಡ ಬರಲು ಸಾಧ್ಯವೇ ಇಲ್ಲ. ಕಲ್ಲುಗುಂಡಿಯಿಂದ ಅತ್ಯಾಡಿ ಗ್ರಾಮಕ್ಕೆ ತಲುಪಲು ಜೀಪ್‌ನಲ್ಲಿ ಕನಿಷ್ಠ ಒಂದು ಗಂಟೆ ಪ್ರಯಾಣಿಸಬೇಕು. ಬೇರೆ ಯಾವುದೇ ವಾಹನಕ್ಕೆ ಗ್ರಾಮಕ್ಕೆ ಬರಲು ಕಷ್ಟಸಾಧ್ಯ. ಕಲ್ಲುಗುಂಡಿಯಿಂದ ಅತ್ಯಾಡಿ ಗ್ರಾಮಕ್ಕೆ ೭೦೦ ರೂ. ಬಾಡಿಗೆ ನೀಡಿ ಬರಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರ ಅಳಲು ತೋಡಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಆಸರೆ: ಅತ್ಯಾಡಿ ಗ್ರಾಮದಿಂದ ಶಾಲಾ-ಕಾಲೇಜು ತಲುಪಲು ಕಲ್ಲುಗುಂಡಿ ಅಥವಾ ಸುಳ್ಯಕ್ಕೆ ತೆರಳಬೇಕು. ಮಳೆಗಾಲದಲ್ಲಿ ದ್ವೀಪದಂತಾಗುವ ಗ್ರಾಮ ಹೊರ ಪ್ರಪಂಚದ ಸಂಪರ್ಕವನ್ನು ಕಳೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್,ಮತ್ತು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಿಂತು ಶಿಕ್ಷಣ ಪಡೆಯುವಂತಹ ಪರಿಸ್ಥಿತಿ ಇದೆ. ಇದರಿಂದ ಅತ್ಯಾಡಿ ಗ್ರಾಮದ ವಿದ್ಯಾರ್ಥಿಗಳಿಗೆ ತಮ್ಮ ತಂದೆ-ತಾಯಿಂದಿರೊಂದಿಗೆ ಜೀವನ ನಡೆಸುವ ಭಾಗ್ಯವೇ ಇಲ್ಲದಂತಾಗಿದೆ.
ಅತ್ಯಾಡಿ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯೂ ಇದ್ದು, ಶಾಲಾ-ಕಾಲೇಜು ರಜಾ ದಿನಗಳಲ್ಲೂ ವಿದ್ಯಾರ್ಥಿಗಳು ಮನೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತುರ್ತು ಸಂದರ್ಭದಲ್ಲಿಯೂ ಕರೆ ಮಾಡಲು ಸಿಗುವುದಿಲ್ಲ. ನೆಟ್‌ವರ್ಕ್ ಸಿಗಬೇಕೆಂದರೆ ತೋಟದ ಅಡಿಕೆ ಮರವನ್ನು ಏರುವುದು ಅನಿವಾರ್ಯವಾಗಿದೆ ಎಂದು ಗ್ರಾಮಸ್ಥರು ಸಂಕಷ ತೋಡಿಕೊಳ್ಳುತ್ತಿದ್ದಾರೆ.
ಕೂಲಿ ಕಾರ್ಮಿಕರ ಹಿಂದೇಟು: ಅತ್ಯಾಡಿ ಗ್ರಾಮದಲ್ಲಿ ಒಂದೆರೆಡು ಎಕರೆ ಅಡಿಕೆ ತೋಟವನ್ನು ಬೆಳೆಸಿ ಗ್ರಾಮಸ್ಥರು ಜೀವನ ನಡೆಸುವವರಿದ್ದಾರೆ. ಆದರೆ, ಅಡಿಕೆ ಹಾಗೂ ಕರಿಮೆಣಸು ಕೊಯ್ಲಿನ ಅವಧಿಯಲ್ಲಿ ದುಬಾರಿ ಸಂಬಳ ನೀಡಿದರೂ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ. ಅಡಿಕೆ ಮತ್ತು ಕಾಳುಮೆಣಸನ್ನು ತಾವೇ ಕೊಯ್ಲು ಮಾಡುವಂತಹ ಪರಿಸ್ಥಿತಿ ಅತ್ಯಾಡಿ ಗ್ರಾಮಸ್ಥರದ್ದು.
ಕಾಡಿನಿಂದ ಮನೆಗೆ ಭಾಗಕ್ಕೆ ಕಾಡಾನೆಗಳು ಲಗ್ಗೆಯಿಡದಂತೆ ಗ್ರಾಮಸ್ಥರು ಜಲವಿದ್ಯುತ್ ತಂತಿ ಬೇಲಿ ನಿರ್ಮಿಸಿ ಸ್ವಯಂ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅದಲ್ಲದೆ ವಿದ್ಯುತ್ ಸಮಸ್ಯೆಗೆ ಜಲವಿದ್ಯುತ್ ಕಿರುಘಟಕ, ಕುಡಿಯುವ ನೀರಿಗಾಗಿ ಹೊಳೆಯಿಂದ ಪೈಪ್ ಲೈನ್ ಹಾಕಿ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಂಡಿದ್ದಾರೆ. ಆದರೆ, ಕಳೆದ ಮೂವತ್ತು ವರ್ಷಗಳಿಂದ ಶಾಶ್ವತವಾದ ಸೇತುವೆಗಾಗಿ ಮನವಿ ಸಲ್ಲಿಸಿದ್ದರೂ ಆಡಳಿತ ವರ್ಗದವರು ಈ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಪ್ರತೀವರ್ಷ ಮಳೆಗಾಲದಲ್ಲಿ ನಾವು ಅಡಿಕೆ ಪಾಲವನ್ನು ನಿರ್ಮಿಸಬೇಕು. ಅಡಿಕೆ ಪಾಲ ಬರೀ ಒಂದು ವರ್ಷ ಮಾತ್ರ ಬಾಳಿಕೆ ಬರುವುದು. ಗ್ರಾಪಂ ಬರೀ ಸಾವಿರ ರೂ. ನೀಡುತ್ತದೆ. ಗ್ರಾಮಸ್ಥರ ಕೈಯಿಂದ ಹಣ ಹಾಕಿ ನಾವು ಪ್ರತೀವರ್ಷ ಅಡಿಕೆ ಪಾಲವನ್ನು ನಿರ್ಮಿಸುತ್ತಿದ್ದೇವೆ. ಪಾಲ ನಿರ್ಮಿಸಲು ಕನಿಷ್ಠ ೭ ರಿಂದ ೮ ಸಾವಿರ ರೂ. ಖರ್ಚಾಗುತ್ತದೆ. ನಮ್ಮ ಅಜ್ಜಂದಿರ ಕಾಲದಿಂದಲೂ ಅಡಿಕೆ ಪಾಲದಲ್ಲಿ ನಾವು ಸಂಚರಿಸುತ್ತಿದ್ದೇವೆ. ಆದರೆ, ಇದುವರೆಗೂ ಸೇತುವೆ ನಿರ್ಮಾಣ ಮಾಡಿಕೊಟ್ಟಿಲ್ಲ. ಸರಕಾರ ಅತ್ಯಾಡಿ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ನಾವು ಯಾರಿಗೂ ಮತ ಹಾಕುವುದಿಲ್ಲ.
-ರಾಧಾಕೃಷ್ಣ,ಅತ್ಯಾಡಿ ಗ್ರಾಮಸ್ಥ
ನನ್ನ ಮಗಳು ಎರಡನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಅಡಿಕೆ ಪಾಲ ದಾಟಲು ಸಾಧ್ಯವಿಲ್ಲ. ಇದರಿಂದ ನನ್ನ ತಂದೆಯ ಮನೆಯಲ್ಲಿಯೇ ನಿಂತು ಶಾಲೆಗೆ ಹೋಗುತ್ತಿದ್ದಾಳೆ. ಸೇತುವೆ ಇಲ್ಲದೆ ನನ್ನ ಮಗಳಿಗೆ ನನ್ನೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ಇನ್ನೂ ಬೇರೆ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದಾರೆ. ನನ್ನ ಎರಡು ವರ್ಷದ ಮಗುವನ್ನು ಕೈಯಲ್ಲಿ ಹಿಡಿದು ನಾನು ಅಡಿಕೆ ಪಾಲವನ್ನು ದಾಟಬೇಕು. ವಯಸ್ಕರಿಗೆ ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸೇತುವೆ ನಿರ್ಮಿಸಲು ಕಬ್ಬಿಣ, ಜಲ್ಲಿ ತಂದು ಹಾಕಿದ್ದರು. ಆದರೆ, ಇದೀಗ ಬಂದಾಗ ಕಬ್ಬಿಣ ಜಲ್ಲಿ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾರೆ. ೧೦ ಲಕ್ಷ ರೂ. ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದಾರೆ. ಸೇತುವೆ ನಿರ್ಮಿಸಲು ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದಾರೆಯೇ ಹೊರತು, ಇದುವರೆಗೆ ಸೇತುವೆ ನಿರ್ಮಾಣ ಮಾಡಿಕೊಟ್ಟಿಲ್ಲ.
-ಮನುಜ, ಗೃಹಿಣಿ, ಅತ್ಯಾಡಿ ಗ್ರಾಮ
ನಾನೊಬ್ಬ ಅಂಗವಿಕಲ. ಈ ಹಿಂದೆ ನನಗೆ ಆರೋಗ್ಯ ಹದಗೆಟ್ಟಿತ್ತು. ಅಡಿಕೆ ಪಾಲದಲ್ಲಿ ದಾಟಲು ಸಾಧ್ಯವಾಗದೆ ಗ್ರಾಮಸ್ಥರು ನನ್ನನ್ನು ಬೆನ್ನ ಹಿಂದೆ ಹೊತ್ತುಕೊಂಡು ಆಸ್ಪತ್ರೆ ಸೇರಿಸಿದ್ದರು. ನನಗೆ ಅಡಿಕೆ ಪಾಲದಲ್ಲಿ ದಾಟಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ನನಗೆ ಹೊರಗಡೆಯೂ ಹೋಗಲು ಆಗುವುದಿಲ್ಲ. ಉಂಬಳೆ ಹೊಳೆಯಲ್ಲಿ ನೀರಿನ ಹರಿವು ಕಡಿಮೆ ಇದ್ದರೆ ಕುಂಟುತ್ತಾ ಹೇಗಾದರೂ ಮಾಡಿ ನಾನು ಹೊಳೆ ದಾಟುತ್ತೇನೆ. ಆದರೆ, ಮಳೆಗಾಲದಲ್ಲಿ ಪಾಲವನ್ನು ದಾಟಲು ಭಯವಾಗುತ್ತದೆ.
-ನಿತ್ಯಾನಂದ, ಅತ್ಯಾಡಿ ಗ್ರಾಮಸ್ಥ
ನೆಟ್‌ವರ್ಕ್‌ಗಾಗಿ ನಾವು ಗುಡ್ಡಕ್ಕೆ ಹೋಗಬೇಕು. ವಿದ್ಯಾರ್ಥಿಗಳು ಯಾರೂ ಗ್ರಾಮದಲ್ಲಿ ಇರಲು ಸಾಧ್ಯವಿಲ್ಲ. ಏನಾದರೂ ತುರ್ತು ಇದ್ದರೆ ಯಾರಿಗೂ ಕರೆ ಮಾಡಲು ಸಾಧ್ಯವಿಲ್ಲ. ಮಕ್ಕಳಿಗೆ, ವೃದ್ಧರಿಗೆ ಅಡಿಕೆ ಪಾಲದಲ್ಲಿ ನಡೆಯಲು ಸಾಧ್ಯವಿಲ್ಲ. ಅಡಿಕೆ ಪಾಲದಲ್ಲಿ ದಾಟಬೇಕಾಗಿರುವುದರಿಂದ ಮನೆಯಲ್ಲಿ ಯಾವುದೇ ಕಾರ್ಯಕ್ರಮವನ್ನೂ ನಡೆಸಲು ಸಾಧ್ಯವಾಗುತ್ತಿಲ್ಲ. ಸಂಬಂಧಿಕರೂ ಮನೆಗೆ ಬರುತ್ತಿಲ್ಲ.
-ಸುತನ್, ವಿದ್ಯಾರ್ಥಿ, ಅತ್ಯಾಡಿ ಗ್ರಾಮ
ಅತ್ಯಾಡಿ ಉಂಬಳೆ ಗ್ರಾಮದಲ್ಲಿ ಸೇತುವೆ ಸಮಸ್ಯೆ ಗಮನಕ್ಕೆ ಬಂದಿದೆ. ನಾನು ಕಳೆದ ಆರು ತಿಂಗಳನಿಂದ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅತ್ಯಾಡಿ ಗ್ರಾಮಕ್ಕೆ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶಾಶ್ವತ ಸೇತುವೆ ನಿರ್ಮಿಸಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
-ಬಿದ್ದಪ್ಪ, ಪಿಡಿಒ, ಚೆಂಬು ಗ್ರಾಮ ಪಂಚಾಯತ್