ಡಿಜಿಟಲ್ ಲೆಂಡಿಂಗ್ ಆ್ಯಪ್‌ಗಳೆಂಬ ಸಾವಿನ ಕೂಪಗಳು

ಡಿಜಿಟಲ್ ಲೆಂಡಿಂಗ್ (ಸಾಲ ಅಪ್ಲಿಕೇಶನ್‌ಗಳು) ವ್ಯವಹಾರವು 2022ರಲ್ಲಿ ಸುಮಾರು 270 ಶತಕೋಟಿ ಡಾಲರ್ ಮೌಲ್ಯದ್ದಾಗಿತ್ತು ಮತ್ತು 2023ರಲ್ಲಿ 350 ಶತಕೋಟಿ ಡಾಲರ್ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ, ಡಿಜಿಟಲ್ ಸಾಕ್ಷರತೆಯಿಲ್ಲದ ಡಿಜಿಟಲೀಕರಣ ಮತ್ತು ಕಠಿಣ ಡಿಜಿಟಲ್ ಸಾಲ ನೀತಿಗಳು ಮತ್ತು ಚೌಕಟ್ಟಿನ ಕೊರತೆಯು ಡಿಜಿಟಲ್ ಸಾಲದ ಬಲೆಗೆ ಕಾರಣವಾಗುತ್ತಿದೆ.
ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಸುಲಭ ಲಭ್ಯತೆಯೊಂದಿಗೆ, ನೂರಾರು ಸಾಲ ನೀಡುವ ಅಪ್ಲಿಕೇಶನ್‌ಗಳು ಪ್ರತೀ ಮೊಬೈಲ್ ಫೋನ್‌ಗೆ ತಲುಪುತ್ತಿವೆ. ಮೊಬೈಲ್ ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲಾದ ಸಾಲ ನೀಡುವ ಅಪ್ಲಿಕೇಶನ್‌ಗಳು ಎಲ್ಲಾ ಗೌಪ್ಯತೆ ನಿಯಮಗಳನ್ನು ಉಲ್ಲಂಘಿಸಿ ಫೋನ್ ಸಂಪರ್ಕ ಪಟ್ಟಿಗೆ ಪ್ರವೇಶವನ್ನು ಪಡೆಯುತ್ತಿವೆ. ಈ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವವರಿಗೆ ವೇಗವಾಗಿ ಸಾಲದ ಅಗತ್ಯವಿರುತ್ತದೆ ಮತ್ತು ಎಲ್ಲಾ ಮಾಹಿತಿಗಳಿಗೆ ನಿಷ್ಕ್ರಿಯವಾಗಿ ಪ್ರವೇಶವನ್ನು ನೀಡುವಾಗ ಅಪಾಯವನ್ನು ನಿರ್ಣಯಿಸಲು ಸಾಧ್ಯವಾಗುವುದಿಲ್ಲ.
ಸಾಲ ನೀಡುವ ಅಪ್ಲಿಕೇಶನ್‌ನ ಮೂಲಕ ರೂ. 3,000 ಸಾಲವನ್ನು ತೆಗೆದುಕೊಂಡ 23 ವರ್ಷದ ಅರವಿಂದ್ ಆತ್ಮಹತ್ಯೆ ಮಾಡಿಕೊಂಡಿದ್ದ; ಪೊಲೀಸ್ ತನಿಖೆಯಲ್ಲಿ ತಿಳಿದಂತೆ, ಸಾಲ ನೀಡಿದವರು ಅವನ ಬಗ್ಗೆ ಎಸ್ಸೆಮ್ಮೆಸ್ ಸಂದೇಶಗಳನ್ನು ಅವನ ಸಂಪೂರ್ಣ ಸಂಪರ್ಕ ಪಟ್ಟಿಗೆ ಕಳುಹಿಸಿದ ನಂತರ ಆತ ದುಃಖಿತನಾಗಿದ್ದ. ಅವನು ತನ್ನ ತಾಯಿ ಮತ್ತು ಸಹೋದರಿಯನ್ನು ವೇಶ್ಯೆಯರಾಗಿ ಕೆಲಸ ಮಾಡಲು ಕಳುಹಿಸುತ್ತಾನೆ ಮತ್ತು ಅವರು ಗಳಿಸಿದ ಹಣವನ್ನು ತೆಗೆದುಕೊಳ್ಳುತ್ತಾನೆ ಎಂದು ಒಂದು ಎಸ್ಸೆಮ್ಮೆಸ್ ಸಂದೇಶದಲ್ಲಿ, ಮತ್ತೊಂದು ಎಸ್ಸೆಮ್ಮೆಸ್ ಸಂದೇಶದಲ್ಲಿ, ಅವನು ತನ್ನ ಸ್ನೇಹಿತರನ್ನು ತನ್ನ ತಾಯಿ, ಪತ್ನಿ ಮತ್ತು ಮಗಳೊಂದಿಗೆ ಲೈಂಗಿಕ ಸಂಬಂಧ ಹೊಂದಲು ಕಳುಹಿಸುತ್ತಾನೆ ಎಂದಿತ್ತು. (ಮೂಲ: News Laundry)
ಇನ್ನೊಂದು ಘಟನೆಯಲ್ಲಿ ‘‘ಮಧ್ಯಪ್ರದೇಶದಲ್ಲಿ ಸಾಲ ನೀಡುವ ಅಪ್ಲಿಕೇಶನ್‌ನಿಂದ ಕಿರುಕುಳಕ್ಕೊಳಗಾದ, ಯುವ ದಂಪತಿ ಮಕ್ಕಳನ್ನು ಕೊಂದಿದ್ದಾರೆ’’ ಎಂದು ಟೈಮ್ಸ್ ಆಫ್ ಇಂಡಿಯಾ, ವರದಿ ಮಾಡಿತ್ತು. ಕೇವಲ 25,000 ರೂ. ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಇಡೀ ಕುಟುಂಬ ಜೀವನ ತ್ಯಾಗ ಮಾಡಿತು.
ವೈಯಕ್ತಿಕ ಮಾಹಿತಿ ದತ್ತಾಂಶದ ದುರುಪಯೋಗ ಮತ್ತು ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್ ಕಂಪೆನಿಗಳ ಕಿರುಕುಳದಿಂದಾಗಿ 2022 ರಿಂದ 60ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಇದು ಕೇವಲ ಒಂದು ಸಂಖ್ಯೆಯಾಗಿರಲಿಕ್ಕಿಲ್ಲ. ವರದಿಯಾಗದ ಪ್ರಕರಣಗಳು ಮತ್ತು ಸಾಲದ ಮರುಪಡೆಯುವಿಕೆಯ ಹೆಸರಿನಲ್ಲಿ ಗ್ರಾಹಕರು ಆಘಾತಕ್ಕೊಳಗಾದ ಪ್ರಕರಣಗಳು ಮೌನವಾಗಿರಬಹುದು.
ಡಾರ್ಕ್ ಡಿಜಿಟಲ್ ಸಾಲದ ಜಾಲವು ನಿರಂತರವಾಗಿ ವ್ಯಕ್ತಿಗಳ ಗೌಪ್ಯತೆಯನ್ನು ಉಲ್ಲಂಘಿಸುತ್ತಿದೆ ಮತ್ತು ಹಣಕಾಸಿನ ಮಾಹಿತಿಯನ್ನು ಸಹ ಸಂಗ್ರಹಿಸುತ್ತಿದೆ. ಆಕರ್ಷಕ ಜಾಹೀರಾತುಗಳು, ತ್ವರಿತ ಸಾಲಗಳ ಭರವಸೆಯೊಂದಿಗೆ ಲಾಭದಾಯಕ ಕೊಡುಗೆಗಳು, ವೇಗದ ಸಾಲಗಳು, ದಾಖಲೆಗಳಿಲ್ಲದ ಸಾಲಗಳು, ಕೆವೈಸಿ ಇಲ್ಲದ ಸಾಲಗಳು ಇತ್ಯಾದಿಗಳು ಜನರನ್ನು, ವಿಶೇಷವಾಗಿ ಯುವಕರನ್ನು ಸಾಲದ ಚಕ್ರದಲ್ಲಿ ಸಿಲುಕಿಸುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ವೇಗವಾಗಿ ಬೆಳೆಯುತ್ತಿರುವ ಸಾಲ ನೀಡುವ ಅಪ್ಲಿಕೇಶನ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ಜಾಗೃತಿ ಮೂಡಿಸುವುದು ಅಥವಾ ನಿಯಂತ್ರಿಸುವುದು ಮಾತ್ರವಲ್ಲದೆ ಮಾಹಿತಿಯನ್ನು ಮತ್ತು ದತ್ತಾಂಶದ ದುರುಪಯೋಗ, ಕಿರುಕುಳ ಮತ್ತು ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸುವ ಅಗತ್ಯವನ್ನು ವ್ಯಕ್ತಪಡಿಸಿದೆ. ಆದರೆ ಡಾರ್ಕ್ ಡಿಜಿಟಲ್ ಸಾಲದ ಅಪಾಯವನ್ನು ನಿಯಂತ್ರಿಸುವುದು ಕೇವಲ ಆರ್‌ಬಿಐನ ಜವಾಬ್ದಾರಿಯಾಗಿರಬಾರದು. ‘ಡಿಜಿಟಲ್ ಇಂಡಿಯಾ’ದ ಶ್ರೇಯವನ್ನು ಪಡೆಯುತ್ತಿರುವ ಕೇಂದ್ರ ಸರಕಾರವು ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಪ್ರಮುಖ ಅಪ್ಲಿಕೇಶನ್‌ಗಳು ಕಠಿಣ ಪರವಾನಿಗೆ ಪ್ರಕ್ರಿಯೆಗೆ ಒಳಗಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚಿನ ಜನರು ಅನಧಿಕೃತ, ಕಾನೂನುಬಾಹಿರ ಮತ್ತು ಮೋಸದ ಸಾಲ ಅಪ್ಲಿಕೇಶನ್‌ಗಳಿಗೆ ಬಲಿಯಾಗುವ ಮೊದಲು ಸಮಗ್ರ ಸಾಲ ಮತ್ತು ಸಾಲ ಮರುಪಡೆಯುವಿಕೆ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು.
ಎಲ್ಲಾ ಸಾಲ ನೀಡುವ ಅಪ್ಲಿಕೇಶನ್‌ಗಳು ಯಾವುದೇ ನಿರ್ಬಂಧಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು ಮುಖ್ಯವಾದುದು ಎಂದರೆ ಅವೆಲ್ಲವೂ ಕರಾಳ ಮುಖ ಹೊಂದಿವೆ, ಸುಳ್ಳು ಭರವಸೆಗಳನ್ನು ನೀಡುವುದಲ್ಲದೆ ಗ್ರಾಹಕರ ಗೌಪ್ಯತೆಯನ್ನು ಉಲ್ಲಂಘಿಸುತ್ತವೆ. ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ರೀತಿಯ ಆಕ್ರೋಶ ಮತ್ತು ನಿರಂತರ ಪ್ರಚಾರವು ಭಾರತದ ಯುವ ಮತ್ತು ದುರ್ಬಲ ಜನರನ್ನು ಕತ್ತಲೆಯಲ್ಲಿ ಮೌನವಾಗಿ ಕೊಲ್ಲುತ್ತಿರುವ ಸಾಲ ನೀಡುವ ಅಪ್ಲಿಕೇಶನ್‌ಗಳ ಸಾಲದ ಬಲೆಗಳ ಬಗ್ಗೆ ಗೋಚರಿಸುವುದಿಲ್ಲ.
ಕೆಲವು ಮಾಧ್ಯಮಗಳು ಅವಮಾನ ಮತ್ತು ಭಯದಿಂದ ವ್ಯಕ್ತಿಗಳು ಮತ್ತು ಕುಟುಂಬಗಳ ಸಾವಿನ ಭಯಾನಕ ಕಥೆಗಳನ್ನು ನಿರಂತರವಾಗಿ ವರದಿ ಮಾಡುತ್ತಿರುವಾಗ ಸಾಮಾಜಿಕ ಮಾಧ್ಯಮದಲ್ಲಿ ‘BanLoanApps’ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿಲ್ಲ. ಗೇಮಿಂಗ್ ಅಪ್ಲಿಕೇಶನ್‌ನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ, ಯುವಕರು ಹಣ ಮತ್ತು ಜೀವಗಳನ್ನು ಕಳೆದುಕೊಳ್ಳುತ್ತಾ ಗೇಮಿಂಗ್ ಅಪ್ಲಿಕೇಶನ್‌ಗೆ ವ್ಯಸನಿಯಾಗುತ್ತಿದ್ದಾರೆ.
ಸಾಲ ನೀಡುವ ಅಪ್ಲಿಕೇಶನ್ ಡಾರ್ಕ್‌ನೆಟ್‌ನ ಸಮಸ್ಯೆಗಳ ಪ್ರಮಾಣ ಮತ್ತು ಅದರಿಂದ ಸಮಾಜದ ಮೇಲಾಗಿರುವ ಪರಿಣಾಮಗಳನ್ನು ಅರಿಯಲು ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಪ್ರಧಾನಿ ಮೋದಿ ಅವರು ತಮ್ಮ ‘ಮನ್ ಕೀ ಬಾತ್’ನಲ್ಲಿ ಡಿಜಿಟಲೀಕರಣದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ, ಆದರೂ ಡಿಜಿಟಲೀಕರಣದಿಂದಾಗಿ ಮತ್ತು ಡಿಜಿಟಲ್ ಜಾಗೃತಿ ಮತ್ತು ಡಿಜಿಟಲ್ ಸಾಕ್ಷರತೆಯ ಕೊರತೆಯಿಂದಾಗಿ ನಡೆಯುತ್ತಿರುವ ವಂಚನೆಗಳು, ಹಗರಣಗಳು, ಲೂಟಿಗಳನ್ನು ಪರಿಹರಿಸುವ ಬಗ್ಗೆ ಮಾತನಾಡಿದ್ದು ಬಹಳ ಕಡಿಮೆ.
ಕೇಂದ್ರ ಸರಕಾರದ ಹಣಕಾಸು ನೀತಿಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿವೆ, ಬ್ಯಾಂಕುಗಳ ವಿಲೀನ/ವಿಭಜನೆ, ಕಾರ್ಪೊರೇಟ್ ವಂಚನೆಗಳು, ಹೆಚ್ಚುತ್ತಿರುವ ಎನ್‌ಪಿಎಗಳು, ದೊಡ್ಡ ಸಾಲದ ತಪ್ಪಿತಸ್ಥರು, ಕಾರ್ಪೊರೇಟ್ ಸಾಲ ಪುನರ‌್ರಚನೆ ಇತ್ಯಾದಿಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿವೆ, ಇದರಿಂದಾಗಿ ಸಾಮಾನ್ಯ ಜನರಿಗೆ ಸಾಲಗಳನ್ನು ಪಡೆಯುವುದು ಕಷ್ಟಕರವಾಗಿದೆ.
ಸಾಲ ವಸೂಲಿ ಏಜೆಂಟರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಹಲವಾರು ಪ್ರಕರಣಗಳ ನಂತರ, ಕರ್ನಾಟಕ ಸರಕಾರವು ಕರ್ನಾಟಕದಲ್ಲಿ ‘ಮೈಕ್ರೋ ಫೈನಾನ್ಸ್’ ಕಂಪೆನಿಗಳಿಂದ ಸಾಲ ವಸೂಲಿ ಮಾಡುವ ಅಕ್ರಮ ವಿಧಾನವನ್ನು ಕೊನೆಗೊಳಿಸುವ ಪ್ರಕ್ರಿಯೆಯಲ್ಲಿದೆ.
ಕೇವಲ ‘ಮೈಕ್ರೋ ಫೈನಾನ್ಸ್’ ಮಾತ್ರವಲ್ಲ ರಾಜ್ಯ ಸರಕಾರಗಳು ಕೇಂದ್ರ ಸರಕಾರದೊಂದಿಗೆ ಎಲ್ಲಾ ರೀತಿಯ ಸಾಲ ನೀಡುವ ಅಪ್ಲಿಕೇಶನ್‌ಗಳು ಮೊಬೈಲ್ ಫೋನ್‌ಗಳಲ್ಲಿ ಹೇಗೆ ಪ್ರವೇಶಿಸುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಮತ್ತು ಅನಧಿಕೃತ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಅಪ್ಲಿಕೇಶನ್ ಸ್ಟೋರ್‌ಗಳಿಗೆ ದಂಡ ವಿಧಿಸಬೇಕು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಂತಹ ದೃಢೀಕರಣ ಮತ್ತು ಕಾರ್ಯಾಚರಣಾ ಪ್ರಕ್ರಿಯೆಯನ್ನು ಸ್ಥಾಪಿಸಬೇಕು. ಡಿಜಿಟಲ್ ಇಂಡಿಯಾದಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳಲು ಸೈಬರ್ ಅಪರಾಧಗಳು, ವಂಚನೆಗಳ ಬಗ್ಗೆ ಡಿಜಿಟಲ್ ಜಾಗೃತಿ ಮೂಡಿಸಲು ನಿರಂತರ ಅಭಿಯಾನಗಳು ಸಮಯದ ಕರೆಯಾಗಿದೆ.