ಉಪಮುಖ್ಯಮಂತ್ರಿಯವರ ಹೇಳಿಕೆ ಅತ್ಯಂತ ಖಂಡನೀಯ
ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ‘‘ಕಾಂಗ್ರೆಸ್ ಪಕ್ಷದ ಕಚೇರಿಗೆ ಸಾಹಿತಿಗಳನ್ನು ಕರೆದು ಸಭೆ ನಡೆಸಿದ್ದು ನಾನೇ, ಅದರಲ್ಲಿ ತಪ್ಪೇನು. ಸಾಹಿತಿಗಳು ರಾಜಕಾರಣಿಗಳೇ’’, ಎಂಬ ಮಾತನ್ನಾಡಿದ್ದಾರೆ. ಮುಂದುವರಿದು, ‘‘ಅಕಾಡಮಿಯ ನೇಮಕಗಳೂ ಸಹ ನಿಗಮ ಮತ್ತು ಮಂಡಳಿಗಳ ನೇಮಕದಂತೆ ಪಕ್ಷದ ಹಿತಾಸಕ್ತಿಯ ನೇಮಕವೇ ಆಗಿದೆ. ಸಾಹಿತಿಗಳು ಕೂಡ ಪಕ್ಷ ರಾಜಕಾರಣಿಗಳೇ. ಬಾಯಿ ಬಿಟ್ಟು ಹೇಳಿಕೊಳ್ಳುವುದಿಲ್ಲ ಅಷ್ಟೇ. ಅಕಾಡಮಿಗಳ ಸ್ವಾಯತ್ತತೆ ಅಂತಾ ಏನೂ ಇಲ್ಲ. ಎಲ್ಲಾ ಸರಕಾರದ ನೇಮಕಾತಿಗಳೇ. ಹೀಗಾಗಿ ಎಲ್ಲಿ ಬೇಕಾದರೂ ಸಭೆ ಕರೆಯಬಹುದು’’ ಎಂದು ಸ್ಪಷ್ಟ ಪಡಿಸಿದ್ದಾರೆ.
ಮೊದಲನೆಯದಾಗಿ, ಉಪ-ಮುಖ್ಯಮಂತ್ರಿಗಳ ಈ ಉದ್ಧಟತನ ಹಾಗೂ ಅಧಿಕಾರದ ದರ್ಪದಿಂದ ಕೂಡಿದ ಈ ಹೇಳಿಕೆಯನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಉಪಮುಖ್ಯಮಂತ್ರಿಯವರ ಈ ಹೇಳಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಮತ್ತು ಸರಕಾರದ ಇತರ ಸಚಿವರು ಅನುಮೋದಿಸುತ್ತಾರೆಯೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿರುವ ಕೋಮುವಾದಿ ಹಾಗೂ ಸರ್ವಾಧಿಕಾರಿ ಧೋರಣೆಯ ಫ್ಯಾಶಿಸ್ಟ್ ಶಕ್ತಿಗಳನ್ನು ಸೋಲಿಸಲು ಎಲ್ಲಾ ಪ್ರಗತಿಪರ, ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಜೊತೆಗೆ ಕೊಂಡೊಯ್ಯಬೇಕಾದ ಇಂದಿನ ರಾಜಕೀಯ ಸಂದರ್ಭದಲ್ಲಿ ಉಪ-ಮುಖ್ಯಮಂತ್ರಿಗಳ ಈ ಹೇಳಿಕೆ ನಮಗೆ ಆಘಾತವನ್ನುಂಟುಮಾಡಿದೆ.
ನಮ್ಮ ಅಭಿಪ್ರಾಯದಲ್ಲಿ, ಉಪಮುಖ್ಯಮಂತ್ರಿಯವರ ಈ ನಡೆ ಪಾಳೇಗಾರಿಕೆ ಮನೋಧೋರಣೆಯಾಗಿದ್ದು ಸರ್ವಾಧಿಕಾರ ಹಾಗೂ ದರ್ಪದ ನಡೆಯಾಗಿದೆ. ಇದನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ ಮತ್ತು ಬೇಷರತ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸುತ್ತೇವೆ. ನಾವು ಸಂವಿಧಾನಬದ್ಧ ರಾಜಕೀಯದಲ್ಲಿ ನಂಬಿಕೆ ಇಟ್ಟು ಸಂವಿಧಾನದ ಆಶಯದಂತೆ ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಗಣರಾಜ್ಯವನ್ನಾಗಿ ರೂಪಿಸಲು ಕೆಲಸ ನಿರ್ವಹಿಸುತ್ತಿದ್ದೇವೆಯೇ ಹೊರತು ಯಾವುದೇ ಪಕ್ಷದ ಬಾಲಂಗೋಚಿಗಳಲ್ಲ. ಉಪಮುಖ್ಯ ಮಂತ್ರಿಗಳು ಪ್ರಗತಿಪರರು ಅವರ ಹಂಗಿನಲ್ಲಿದ್ದಾರೆ ಎಂದುಕೊಂಡರೆ ಅದು ಅವರ ಮೂರ್ಖತನವೇ ಸರಿ. ಇವರ ಧೋರಣೆಯನ್ನು ಗಮನಿಸಿದರೆ, ಇವರು ಸರ್ವಾಧಿಕಾರಿ ಮೋದಿಯವರಿಗಿಂತ ಭಿನ್ನವಿಲ್ಲವೆನಿಸುತ್ತದೆ. ಹಾಗೆಯೇ, ಕಾಂಗ್ರೆಸ್‌ನ ಬಹುಮುಖಗಳಲ್ಲಿ ಒಂದನ್ನು ಡಿ.ಕೆ.ಶಿವಕುಮಾರ್ ಅನಾವರಣಗೊಳಿಸಿದಂತಿದೆ!
ಕಾಂಗ್ರೆಸ್‌ನ ನಾಯಕರಿಗೆ ಈ ಧೈರ್ಯ ಬರಲು, ಓಲೈಸುವ ಮನೋಧರ್ಮದ ನಮ್ಮ ಸಾಹಿತಿಗಳೂ-ಬರಹಗಾರರು ಕಾರಣ ಎಂಬುದನ್ನು ನಾವು ಮರೆಯಬಾರದು. ಸಾಹಿತಿಗಳು ತಮ್ಮ ಅಂತಃಸಾಕ್ಷಿಗೆ ಓಗೊಟ್ಟು ಇದನ್ನು ಖಂಡಿಸಿ ತಮ್ಮ ಸ್ವಾಯತ್ತ ಮನೋಧರ್ಮವನ್ನು ಸಾರುವ ಕೆಲಸ ಮಾಡಬೇಕಿದೆ.
ಉಪಮುಖ್ಯಮಂತ್ರಿಗಳ ಈ ನಿಲುವು ಅಧಿಕಾರದ ಅಹಂಕಾರದಿಂದ ಕೂಡಿದ್ದು ಅವರ ಸ್ಥಾನಕ್ಕೆ ಕಳಂಕ ತಂದಿದೆ. ಒಕ್ಕೂಟದ ಮೋದಿ ಸರಕಾರವು ಇದೇ ರೀತಿಯ ಅಹಂಕಾರದಿಂದಲೇ ಎಲ್ಲಾ ಸ್ವಾಯತ್ತ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಸರ್ವನಾಶ ಮಾಡಿ, ಸರಕಾರದ ಗುಲಾಮರಾಗಿಸಿಕೊಂಡಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೆ ಈಗ ಕಾಂಗ್ರೆಸ್ ಸರಕಾರವು ಕೂಡ ಸ್ವಾಯತ್ತ ಸಂಸ್ಥೆಗಳ ಬಗ್ಗೆ ಮೋದಿ ಸರಕಾರದ ಸರ್ವಾಧಿಕಾರಿ ನಿಲುವನ್ನೇ ಅನುಸರಿಸಿದರೆ, ನಮ್ಮ ನಿಲುವು ಏನಾಗಬೇಕೆಂದು ಪ್ರಜ್ಞಾವಂತ ಸಮಾಜ ಯೋಚಿಸಬೇಕಿದೆ. ಮೋದಿ ಸರಕಾರದ ಸರ್ವಾಧಿಕಾರಕ್ಕೆ, ದರ್ಪ ಹಾಗೂ ದುರಹಂಕಾರಕ್ಕೆ ತೋರಿದ ವಿರೋಧವನ್ನೇ ಕಾಂಗ್ರೆಸ್ ಸರಕಾರದ ಧೋರಣೆಗೂ ತೋರಬೇಕಾದ ಅನಿವಾರ್ಯತೆಯನ್ನು ಉಪ ಮುಖ್ಯಮಂತ್ರಿಯವರು ಸೃಷ್ಟಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲವೆಂಬುದು ನಮ್ಮ ಒಮ್ಮತದ ಅಭಿಪ್ರಾಯ.
ಅಕಾಡಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ಪ್ರಾಧಿಕಾರಗಳಂತಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡಮಿ ಹಾಗೂ ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರಕಾರವೇ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ. ಅಂತಹ ತಜ್ಞರನ್ನು ನೇಮಿಸುವುದು ವ್ಯಕ್ತಿಯ ಘನತೆಗಿಂತ ಸರಕಾರ ಹಾಗೂ ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ. ನೇಮಕವಾಗುವ ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಜೊತೆಗೆ, ಈ ಸಂಸ್ಥೆಗಳು ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆಗಳು ಹೊರತು ಯಾವುದೇ ಪಕ್ಷ ಹಂಗಿನಲ್ಲಲ್ಲ
ಉಪಮುಖ್ಯಮಂತ್ರಿಗಳ ನಡವಳಿಕೆ ಅಕಾಡಮಿ ಮತ್ತು ಪ್ರಾಧಿಕಾರಗಳಂತಹ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ ಅಧ್ಯಕ್ಷರು, ಸದಸ್ಯರು ಪಕ್ಷರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಹಾಗೂ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ. ಇದು ಪ್ರಗತಿಪರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಕಪ್ಪು ಚುಕ್ಕೆ. ತುಂಬಾ ನೋವಿನ ಬೆಳವಣಿಗೆ.
ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವೀಯ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವ ಇಂತಹ ನಡವಳಿಕೆಗಳನ್ನು, ಪ್ರಸಕ್ತ ಸರಕಾರದಿಂದ ನೇಮಕಗೊಂಡಿರುವ ಸ್ವಾಯತ್ತ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಶೈಕ್ಷಣಿಕ ಸಂಸ್ಥೆ ಹಾಗೂ ಅಕಾಡಮಿಗಳ ಅಧ್ಯಕ್ಷರು ಮತ್ತು ಸದಸ್ಯರೂ ವಿರೋಧಿಸಿ, ಸಂಸ್ಥೆಗಳ ಪ್ರಜಾಪ್ರಭುತ್ವೀಯ ಘನತೆಯನ್ನು ಎತ್ತಿಹಿಡಿಯಬೇಕೆಂದು ನಾವು ಒತ್ತಾಯಿಸುತ್ತೇವೆ.
-ಡಾ. ಎಚ್.ಎಸ್. ಅನುಪಮಾ, ನಿರಂಜನಾರಾಧ್ಯ ವಿ.ಪಿ., ಬಸವರಾಜ ಸೂಳಿಭಾವಿ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಎ. ನಾರಾಯಣ, ಕೆ.ಫಣಿರಾಜ್, ಕೆ.ಪಿ. ಸುರೇಶ, ಬಿ. ಸುರೇಶ, ಕೇಸರಿ ಹರವೂ, ಚಂದ್ರಕಾಂತ ವಡ್ಡು, ಯೋಗಾನಂದ ಬಿ.ಎನ್, ರಹಮತ್ ತರೀಕೆರೆ, ನಾ. ದಿವಾಕರ, ಎಚ್.ಎಸ್. ರಾಘವೇಂದ್ರರಾವ್, ಬಿ. ಶ್ರೀನಿವಾಸ, ಸುನಂದಾ ಕಡಮೆ, ಕೆ. ವೆಂಕಟರಾಜು, ರಂಗನಾಥ ಕಂಟನಕುಂಟೆ, ಅನಿಲ ಹೊಸಮನಿ, ಮುತ್ತು ಬಿಳೆಯಲಿ, ಡಿ.ಎಂ. ಬಡಿಗೇರ.