ಗ್ರಾಮಸಭೆಯ ಕರಡು ನಿಯಮಗಳ ಪರಿಷ್ಕರಣೆ ಆಗಲೇ ಬೇಕು
ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಬಹಿರಂಗ ಪತ್ರ

ಸನ್ಮಾನ್ಯರೇ,
ಕರ್ನಾಟಕ ಸರಕಾರವು ದಿನಾಂಕ 30.01.2025ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಸಭೆ ಕರೆಯುವ ಮತ್ತು ನಡೆಸುವ) ನಿಯಮಗಳು 2024’ನ್ನು ಪ್ರಕಟಿಸಿದ್ದು, ಇದಕ್ಕೆ ಸಂಬಂಧಿಸಿ ಸಾರ್ವಜನಿಕರಿಂದ ಆಕ್ಷೇಪಗಳನ್ನು ಆಹ್ವಾನಿಸಿದೆ. ಆಕ್ಷೇಪಗಳನ್ನು 30 ದಿನಗಳ ಒಳಗೆ ಸಲ್ಲಿಸುವಂತೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಕರ್ನಾಟಕ ಸರಕಾರದ ಸಚಿವಾಲಯದ ಪತ್ರ ಸಂಖ್ಯೆ: ಗ್ರಾಅಪ 714ಜಿಪಿಎ 2024 ಆಗಿದೆ.
ಮೊದಲಿಗೆ ಹಳ್ಳಿಯ ವಿಧಾನ ಸಭೆ, ನೇರ ಪ್ರಜಾಪ್ರಭುತ್ವದ ಸಾಂವಿಧಾನಿಕ ಅವಕಾಶ ಎಂದು ಪರಿಗಣಿಸಲ್ಪಟ್ಟಿರುವ ಗ್ರಾಮಸಭೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅಗತ್ಯವಾಗಿರುವ ನಿಯಮಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯರೂಪಕ್ಕೆ ತರಲು ತೀರ್ಮಾನಿಸಿರುವ ತಮಗೆ ಅಭಿನಂದನೆಗಳು.
ಈ ಕರಡು ನಿಯಮಗಳು ಅಂತಿಮವಾಗಿ ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡ ಕೂಡಲೇ ಕಾಯ್ದೆಯ ಭಾಗವಾಗುತ್ತವೆ ಎನ್ನುವುದು ತಮಗೆ ತಿಳಿದಿರಬಹುದು. ಹೀಗಾಗಿ ಯಾವುದೇ ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ ಅದರ ಸಾಧಕ-ಬಾಧಕಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಯಬೇಕು. ನಿಯಮಾವಳಿಗಳಲ್ಲಿ ಲೋಪಗಳು, ಕೊರತೆಗಳು ನುಸುಳದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಸಭೆಯ ನಿಯಮಾವಳಿಗಳನ್ನು ರೂಪಿಸುವಾಗ ಗ್ರಾಮಸಭೆಗೆ ಸಂಬಂಧಿಸಿದ ಎಲ್ಲ ಪಾಲುದಾರ ಗುಂಪುಗಳ ಪ್ರತಿನಿಧಿಗಳ ಜೊತೆ ವಿಚಾರ ವಿನಿಮಯ ಮಾಡದೆ ಹೋದರೆ ನಾವು ನಿರೀಕ್ಷಿಸುವ ಪರಿಪೂರ್ಣತೆ ಮತ್ತು ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲು ಸಾಧ್ಯವಾಗದು. ತಮ್ಮ ಇಲಾಖೆ ಪ್ರಕಟಿಸಿದ ಗ್ರಾಮಸಭೆಯ ಕರಡು ನಿಯಮಾವಳಿಗಳಲ್ಲಿ ಮೂಲಭೂತವಾದ ಕೆಲವು ಲೋಪಗಳು ಕಂಡು ಬರುತ್ತಿವೆ. ಈ ಲೋಪಗಳನ್ನು ಕೆಳಗೆ ವಿವರಿಸಿದೆ.
1. ಜನ ವಸತಿ ಸಭಾ ಮತ್ತು ವಾರ್ಡ್ ಸಭಾದ ನಿಯಮಗಳನ್ನು ಒಳಗೊಂಡಿಲ್ಲ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಕಾಯ್ದೆ 1993ರ ಅಧ್ಯಾಯ 2ರ ಪ್ರಕರಣ 3ರಲ್ಲಿ ಜನ ವಸತಿ ಸಭಾ(ಪ್ರಕರಣ 3ಎ), ವಾರ್ಡ್ ಸಭಾ( ಪ್ರಕರಣ 3ಬಿ), ಗ್ರಾಮ ಸಭಾ (ಪ್ರಕರಣ 3 ಇ) ಗಳ ಸಂರಚನೆ, ಕರ್ತವ್ಯಗಳು, ಸಭೆಗಳ ನಿರ್ವಹಣೆ, ಹಾಜರಾತಿ ಇತ್ಯಾದಿ ವಿಚಾರಗಳ ಕುರಿತು ಸ್ಪಷ್ಟವಾದ ನಿರ್ದೇಶನಗಳನ್ನು ನೀಡಲಾಗಿದೆ. ವಾರ್ಡ್ ಸಭಾ ಪರಿಕಲ್ಪನೆಯನ್ನು ದಿವಂಗತ ಎಂ.ವೈ. ಘೋರ್ಪಡೆಯವರು ಸಚಿವರಾಗಿದ್ದ ಅವಧಿಯಲ್ಲಿ ಮತ್ತು ಜನ ವಸತಿ ಸಭಾವನ್ನು ಎಚ್.ಕೆ. ಪಾಟೀಲ್ ಅವರು ಸಚಿವರಾಗಿದ್ದ ಅವಧಿಯಲ್ಲಿ ತಿದ್ದುಪಡಿಯ ಮೂಲಕ ಕಾಯ್ದೆಗೆ ಕಡ್ಡಾಯವಾಗಿ ಸೇರ್ಪಡೆ ಮಾಡಲಾಗಿತ್ತು. ಈ ಮೂರು ಸಭೆಗಳನ್ನು ಗ್ರಾಮ ಸ್ವರಾಜ್ ಘಟಕಗಳು ಎಂದು ಉಲ್ಲೇಖಿಸಲಾಗಿದೆ. ಈ ಸಭೆಗಳು ಒಂದಕ್ಕೊಂದು ಪೂರಕವಾಗಿ ನಡೆಯಬೇಕು ಎಂದು ಕಾಯ್ದೆ ಕಡ್ಡಾಯ ಮಾಡಿದೆ. ಹೀಗಿರುವಾಗ ಜನವಸತಿ ಸಭೆ ಮತ್ತು ವಾರ್ಡ್ ಸಭೆಗಳನ್ನು ಹೊರಗಿಟ್ಟು ಕೇವಲ ಗ್ರಾಮ ಸಭೆಗೆ ಸಂಬಂಧಿಸಿ ನಿಯಮಗಳನ್ನು ರಚಿಸುವುದು ಸರಿಯಾದ ಪದ್ಧತಿ ಅಲ್ಲ.
2 ಗ್ರಾಮಸಭೆಯ ವ್ಯಾಪ್ತಿಯ ಕುರಿತ ಗೊಂದಲ
ಪ್ರತೀ ಕಂದಾಯ ಗ್ರಾಮ ಹಾಗೂ ಅದರಡಿಯ ಉಪ ಗ್ರಾಮಗಳ ಗ್ರಾಮ ಸಭೆಯನ್ನು ವರ್ಷದಲ್ಲಿ 4 ಬಾರಿ ಕರೆಯ ತಕ್ಕದ್ದು ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಗ್ರಾಮ ಪಂಚಾಯತ್‌ಗಳ ಕಾರ್ಯ ನಿರ್ವಹಣೆಯಲ್ಲಿ ಅನಗತ್ಯ ಒತ್ತಡಕ್ಕೆ ಕಾರಣವಾಗುತ್ತದೆ.
* ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಕಂದಾಯ ಗ್ರಾಮಗಳು ಇದ್ದಾಗ ಆ ಗ್ರಾಮ ಪಂಚಾಯತ್‌ಗಳು ಪ್ರತೀ ವರ್ಷ 20ಕ್ಕೂ ಹೆಚ್ಚು ಗ್ರಾಮಸಭೆಗಳನ್ನು ಕರೆಯುವ ಮತ್ತು ನಿರ್ವಹಿಸುವ ಒತ್ತಡಕ್ಕೆ ಒಳಗಾಗುತ್ತವೆ.
* ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಬಾರಿಗೆ ಕರೆಯುವ ಒಂದಕ್ಕಿಂತ ಹೆಚ್ಚು ಗ್ರಾಮ ಸಭೆಗಳಲ್ಲಿ ದಾಖಲಾಗುವ ಜನರ ವೈಯಕ್ತಿಕ ಬೇಡಿಕೆಗಳು ಮತ್ತು ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರೋಡೀಕರಿಸಿ ಆದ್ಯತೆಗಳನ್ನು ನಿರ್ಧರಿಸಲು ಯಾವ ವಿಧಾನವನ್ನು ಅನುಸರಿಸಬೇಕು ಎಂದು ನಿಯಮದಲ್ಲಿ ತಿಳಿಸಿರುವುದಿಲ್ಲ.
* ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯಡಿಯಲ್ಲಿ ಬರುವ ಕಂದಾಯ ಗ್ರಾಮಗಳಲ್ಲಿ ವಾಸಿಸುವ ಮನೆಗಳು ಕಡಿಮೆ ಇರುವುದರಿಂದ ಮತ್ತೊಂದು ಕಂದಾಯ ಗ್ರಾಮವನ್ನು ಸೇರಿಸಿ ಗ್ರಾಮಸಭೆಯನ್ನು ನಡೆಸುವುದು ಎನ್ನುವ ನಿಯಮ ಈಗಾಗಲೇ ಇರುವ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2ಕ್ಕಿಂತ ಹೆಚ್ಚು ಕಂದಾಯ ಗ್ರಾಮಗಳು ಇದ್ದಾಗ ಏನು ಮಾಡಬೇಕು..? ಈ ಕುರಿತು ನಿರ್ಧಾರ ಮಾಡಬೇಕಾದ ಅಧಿಕಾರ ಯಾರದು ಎನ್ನುವ ಕುರಿತು ನಿಯಮದಲ್ಲಿ ಯಾವುದೇ ವಿವರಣೆ ಇಲ್ಲ.
3. ಗ್ರಾಮ ಸಭೆಗೆ ಆಹ್ವಾನ ನೀಡುವ ವಿಷಯ
ಈ ಕುರಿತಂತೆ ‘ಗ್ರಾಮಸಭೆಯ ಮಾಹಿತಿಯನ್ನು ಪ್ರಚಾರ ಮಾಡುವ ಬಗ್ಗೆ’ಯ ನಿಯಮ 5ರಲ್ಲಿ ಗ್ರಾಮಸಭೆಯ ಕರಪತ್ರ ನೋಟಿಸ್ ಅನ್ನು ಮನೆ ಮನೆಗೂ ತಲುಪಿಸುವುದು ಹಾಗೂ ಸಹಿ ಪಡೆಯತಕ್ಕದ್ದು ಎಂದು ಬರೆಯಲಾಗಿದೆ. ಮನೆ ಮನೆಗೆ ತಲುಪಿಸಬೇಕು ಎನ್ನುವ ಆಶಯ ಸರಿ ಇದ್ದರೂ ‘ಸಹಿ ಪಡೆಯ ತಕ್ಕದ್ದು’ ಎನ್ನುವ ಅಂಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ 1 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ನೋಟಿಸ್ ತಲುಪಿಸಿ ಸಹಿ ಪಡೆಯುವ ಹೊಣೆಗಾರಿಕೆ ಯಾರದು..? ಒಂದು ವೇಳೆ ಮನೆಗೆ ನೋಟಿಸ್ ತಲುಪಿಸಿ ಸಹಿ ಪಡೆಯದೆ ಹೋದಲ್ಲಿ ಮತದಾರರು ಗ್ರಾಮ ಸಭೆಯ ನಿರ್ವಹಣೆ ಮತ್ತು ಸಿಂಧುತ್ವದ ಕುರಿತು ನ್ಯಾಯಾಲಯದ ಮೊರೆ ಹೋಗುವ ಅವಕಾಶ ಸೃಷ್ಟಿಯಾಗುತ್ತದೆ ಎನ್ನುವುದನ್ನು ತಾವು ಗಮನಿಸಬೇಕು.
4. ವಾರ್ಡ್ ಮತ್ತು ಗ್ರಾಮಸಭೆಗಳ ಹೊಣೆಗಾರಿಕೆ
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಗ್ರಾಮಸಭೆ ಮತ್ತು ವಾರ್ಡ್ ಸಭೆಗಳ ಆಯೋಜನೆಯ ಹೊಣೆಗಾರಿಕೆ ಯಾರದು ಎಂದು ಸ್ಪಷ್ಟವಾಗಿ ಹೇಳಿದೆ. ಗ್ರಾಮ ಸಭೆಯನ್ನು ಕರೆಯಲು ವಿಫಲರಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಒಂದು ಸಾವಿರ ರೂ.ಗಳನ್ನು ಗ್ರಾಮ ಪಂಚಾಯತ್ ನಿಧಿಗೆ ಸಂದಾಯ ಮಾಡಬೇಕು ಮತ್ತು ತಮ್ಮ ವೈಫಲ್ಯದ ಕಾರಣಗಳನ್ನು ಗ್ರಾಮಸಭಾದ ಮುಂದಿನ ಸಭೆಗೆ ತಿಳಿಸಬೇಕು ಎಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ಸ್ಪಷ್ಟಪಡಿಸಿದೆ. ಇದೇ ರೀತಿ ವಾರ್ಡ್ ಸಭೆಗಳ ಆಯೋಜನೆಯ ಹೊಣೆಗಾರಿಕೆಯನ್ನು ಆಯಾ ವಾರ್ಡ್ ಸದಸ್ಯರಿಗೆ ವಹಿಸಲಾಗಿದೆ. ಆದರೆ ಈ ಅಂಶವನ್ನು ನಿಯಮಗಳನ್ನು ರೂಪಿಸುವಾಗ ಪರಿಗಣಿಸದೆ ಇರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ.
ಮೇಲೆ ವಿವರಿಸಿರುವ ಲೋಪಗಳಿಗೆ ಸಂಬಂಧಿಸಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಕುರಿತು ತಮ್ಮ ಗಮನವನ್ನು ಸೆಳೆಯುತ್ತಿದ್ದೇನೆ.
* ವಸತಿ ಸಭಾ, ವಾರ್ಡ್ ಸಭಾ ಮತ್ತು ಗ್ರಾಮ ಸಭಾ ಸಭೆಗಳು ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣದ ಜೀವಾಳವಾಗಿವೆ. ಈ ಮೂರು ಕಾಯ್ದೆ ಬದ್ಧ ವ್ಯವಸ್ಥೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರವಾದ ನಿಯಮಾವಳಿಗಳನ್ನು ರೂಪಿಸಿ ಒಟ್ಟಿಗೆ ಅನುಷ್ಠಾನಕ್ಕೆ ತರಬೇಕು.
* ಜನ ವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಸಂವಿಧಾನದ 73 ನೇ ತಿದ್ದುಪಡಿಯಲ್ಲಿ ಕಡ್ಡಾಯಗೊಳಿಸಿರುವಂತೆ ಒಂದು ಆರ್ಥಿಕ ವರ್ಷದಲ್ಲಿ 2 ಬಾರಿ ಮಾತ್ರ ನಡೆಸಬೇಕು. ಇದರ ಜೊತೆಗೆ ಹೆಚ್ಚುವರಿಯಾಗಿ ವರ್ಷಕ್ಕೊಂದು ಬಾರಿ ಮಹಿಳಾ ಗ್ರಾಮ ಸಭೆ, ಮಕ್ಕಳ ಗ್ರಾಮ ಸಭೆ, ಅನುಸೂಚಿತ ಜಾತಿ ಮತ್ತು ಪಂಗಡಗಳ ಮತದಾರರ ಗ್ರಾಮಸಭೆ, ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಗ್ರಾಮಸಭೆಯನ್ನು ಒಂದೇ ವೇದಿಕೆಯಲ್ಲಿ ನಡೆಸಿ ಅವರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ಮಾಡಬಹುದು. ಕೇರಳ ರಾಜ್ಯದ ಮಾದರಿಯಲ್ಲಿ ಈ ವಿಶೇಷ ಗ್ರಾಮ ಸಭೆಯಲ್ಲಿ ನಾಲ್ಕು ವಿಷಯವಾರು ಕಾರ್ಯತಂಡಗಳನ್ನು ರಚಿಸಿ ಚರ್ಚಿಸುವ ವಿಧಾನವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ
* ಜನ ವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಿಗೆ ಸದಸ್ಯರನ್ನು (ಆಯಾ ಸಭೆಯ ವ್ಯಾಪ್ತಿಯ ಮತದಾರರು) ಆಹ್ವಾನಿಸುವ ಮತ್ತು ಭಾಗವಹಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರಿಗೆ ವಹಿಸಬೇಕು. ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಮತದಾರರ ಮನೆಗಳಿಗೆ ಸಭೆಯ ನೋಟಿಸ್ ತಲುಪುವ ವ್ಯವಸ್ಥೆ ಆಗಬೇಕು. ಸಭೆಯ ನೋಟಿಸ್‌ನ ಸ್ವೀಕೃತಿಗೆ ಸಹಿಯನ್ನು ಕಡ್ಡಾಯಗೊಳಿಸಿದರೆ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಈ ಅಂಶವನ್ನು ಕೈ ಬಿಡುವುದು ಸೂಕ್ತವಾಗಿದೆ.
* ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಲು ಉದ್ದೇಶಿಸಿರುವ ಗ್ರಾಮ ಸಭಾ ಸಭೆಯ ಸಮನ್ವಯ ಸಮಿತಿಗಳ ಅಗತ್ಯ ಇರುವುದಿಲ್ಲ. ಪರ್ಯಾಯವಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಆಯಾ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಒಗಳು ಮತ್ತು ಗ್ರಾಮ ಸಭಾ ನೋಡಲ್ ಅಧಿಕಾರಿಗಳ ಸಭೆ ಕರೆದು ಸಭೆಗಳ ದಿನಾಂಕ ನಿಗದಿ ಸೇರಿದಂತೆ ಇತರ ಕಾಯ್ದೆ ಬದ್ಧ ವಿಚಾರಗಳ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಪದ್ಧತಿಯನ್ನು ಜಾರಿಗೆ ತರಬೇಕು.
* ವಸತಿ ಸಭೆ, ವಾರ್ಡ್ ಸಭೆ ಮತ್ತು ಗ್ರಾಮ ಸಭೆಯಲ್ಲಿ ಅಂತಿಮವಾಗುವ ಅಭಿವೃದ್ಧಿಯ ಬೇಡಿಕೆಗಳನ್ನು ಕ್ರೋಡೀಕರಿಸಿ, ಆದ್ಯತೆಗಳನ್ನು ನಿರ್ಧರಿಸಿ ದೂರದೃಷ್ಟಿ ಯೋಜನೆ ಮತ್ತು ವಾರ್ಷಿಕ ಕ್ರಿಯಾ ಯೋಜನೆಯನ್ನು ಸಮನ್ವಯಗೊಳಿಸುವ ಸಲುವಾಗಿ ಗ್ರಾಮ ಪಂಚಾಯತ್ ಮಟ್ಟದ ಯೋಜನಾ ಸಮಿತಿಗಳನ್ನು ರಚಿಸಿ ಸಕ್ರಿಯಗೊಳಿಸಲು ಅಗತ್ಯವಿರುವ ನಿಯಮವನ್ನು ಸೇರ್ಪಡೆ ಮಾಡಬೇಕು.
* ಮೇಲಿನ ಹಂತಗಳಾದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಾಲೂಕು ಮತ್ತು ಜಿಲ್ಲಾ ಯೋಜನಾ ಸಮಿತಿಗಳನ್ನು ಸಕ್ರಿಯಗೊಳಿಸಲು ಪ್ರತ್ಯೇಕವಾದ ನಿಯಮಗಳನ್ನು ರೂಪಿಸಬೇಕು.
ಮಾನ್ಯ ಸಚಿವರು ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ತಾವು ಈ ಮೇಲೆ ವಿವರಿಸಿರುವ ಅಂಶಗಳ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವಿರಾಗಿ ಆಶಿಸುವೆ. ತಮ್ಮ ಅಧಿಕಾರಾವಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ನಿಜವಾದ ಅರ್ಥದಲ್ಲಿ ಸಬಲೀಕರಣಗೊಂಡು ಗ್ರಾಮ ಸ್ವರಾಜ್ಯದ ಆಶಯಗಳು ಕಾರ್ಯರೂಪಕ್ಕೆ ಬರಲಿ.
Mail ID: wdshejje@gmail.com