ಬರದ ದವಡೆಗೆ ಸಿಲುಕಿ ನಲುಗುತ್ತಿರುವ ಸಕ್ಕರೆ ಜಿಲ್ಲೆಯ ರೈತರು
ಮಂಡ್ಯ: ಭೀಕರ ಬರಗಾಲದ ದವಡೆಗೆ ಸಿಲುಕಿರುವ ಸಕ್ಕರೆ ಜಿಲ್ಲೆಯ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಬರದಲ್ಲಿ ಜೀವನೋಪಾಯಕ್ಕೆ ಆಸರೆಯಾಗಿದ್ದ ತೆಂಗಿನ ಮರಗಳೂ ಬಿಸಿಲಿನ ತಾಪಕ್ಕೆ ಒಣಗಿ ಹೋಗುತ್ತಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಹಿಂದೆ ಹಲವಾರು ಬಾರಿ ಜಿಲ್ಲೆ ಬರಕ್ಕೆ ತುತ್ತಾಗಿದೆ. ಆದರೆ, ಈಗಿನಂತೆ ಆ ವೇಳೆ ತೆಂಗಿನ ಮರಗಳು ಬರಕ್ಕೆ ಬಲಿಯಾಗಿರಲಿಲ್ಲ.
ಜಿಲ್ಲೆಯಲ್ಲಿ ಕಬ್ಬು, ಭತ್ತ, ರಾಗಿ, ಹಿಪ್ಪುನೇರಳೆ ಮುಖ್ಯ ಬೆಳೆಗಳಾದರೂ ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಮರಗಳನ್ನೂ ಹೆಚ್ಚಾಗಿ ರೈತರು ಬೆಳೆಸುತ್ತಿದ್ದಾರೆ. ಪ್ರಸ್ತುತ ಸುಮಾರು 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದೆ. ಇತರ ಬೆಳೆಗಳ ಜತೆ ತೆಂಗನ್ನು ರೈತರು ಬೆಳೆಸಿದ್ದಾರೆ. ಮಳೆಯಾಶ್ರಿತ ಖುಷ್ಕಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ತೆಂಗು ಸಸಿ ನೆಟ್ಟಿದ್ದಾರೆ.
ಹಸು, ಕುರಿ, ಕೋಳಿ ಸಾಕಣೆಯಂತಹ ಉಪಕಸುಬುಗಳು ರೈತರ ದೈನಂದಿನ ಜೀವನೋಪಾಯಕ್ಕೆ ನೆರವಾಗುತ್ತಿದ್ದು, ಈ ಸಾಲಿನಲ್ಲಿ ತೆಂಗು ಕೂಡ ರೈತರಿಗೆ ಆರ್ಥಿಕ ಶಕ್ತಿಯನ್ನು ತಂದುಕೊಟ್ಟಿದೆ. ಜಿಲ್ಲೆಯ ಮದ್ದೂರಿನಲ್ಲಿ ಏಷ್ಯಾಕ್ಕೆ ದೊಡ್ಡದಾದ ಎಳನೀರು ಮಾರುಕಟ್ಟೆ ಇರುವುದರಿಂದ ರೈತರು ಹೆಚ್ಚಾಗಿ ತೆಂಗಿನ ಬೇಸಾಯಕ್ಕೆ ಇಳಿದಿದ್ದಾರೆ. ಈ ಮಾರುಕಟ್ಟೆಯಲ್ಲಿ ಪ್ರತಿದಿನ ಕೋಟ್ಯಂತರ ರೂ.ವಹಿವಾಟು ನಡೆಯುತ್ತಿದ್ದು, ರೈತರ ಜತೆಗೆ ಹಲವು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.
ರಣಬಿಸಿಲಿಗೆ ತೆಂಗು ಮರಗಳ ಸುಳಿಗಳು ಒಣಗುತ್ತಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಐವತ್ತು, ಅರವತ್ತು ವರ್ಷಗಳಿಂದ ಅಲುಗಾಡದೆ ಇದ್ದ ಮರಗಳು ಒಣಗಿ ನೆಲಕಚ್ಚುತ್ತಿವೆ. ಇನ್ನು ಇದೀಗ ಫಲ ನೀಡಲು ಆರಂಭಿಸಿದ್ದ ಮರಗಳ ಹೊಂಬಾಳೆ ಸೊರಗಿ ಹೋಗಿವೆ. ನಾಟಿಮಾಡಿ ಒಂದರಿಂದ ಎರಡು ಮೂರು ವರ್ಷವಾಗಿರುವ ಸಸಿಗಳನ್ನು ಉಳಿಸಿಕೊಳ್ಳಲು ರೈತರು ಪಡಿಪಾಡುಪಡುತ್ತಿದ್ದಾರೆ. ಸಣ್ಣಪುಟ್ಟ ಗುಂಡಿಗಳು ಭತ್ತಿ ಹೋಗಿವೆ. ಸಾವಿರಾರು ರೂ. ಬಾಡಿಗೆ ಕೊಟ್ಟು ಟ್ಯಾಂಕ್ ಮೂಲಕ ನೀರುಣಿಸಿ ಸಸಿ ಉಳಿಸಿಕೊಳ್ಳುವ ಕೊನೆ ಯತ್ನ ನಡೆಸಿದ್ದಾರೆ.
ತೆಂಗಿನ ಬೆಳೆಯ ಗತಿ ಹೀಗಾದರೆ, ಇನ್ನು ಕೆಆರ್‌ಎಸ್ ಜಲಾಶಯದ ನೀರು ಮತ್ತು ಯುಗಾದಿ ವೇಳೆ ಮಳೆಯನ್ನು ನೆಚ್ಚಿಕೊಂಡು ಹಲವು ರೈತರು ನಾಡಿ ಮಾಡಿದ್ದ ಕಬ್ಬು ಸೇರಿದಂತೆ ಕೂಳೆ ಕಬ್ಬು ನೀರಿಲ್ಲದೆ ಸಂಪೂರ್ಣವಾಗಿ ಭಸ್ಮವಾಗಿವೆ. ಇದಲ್ಲದೆ, ಹಿಪ್ಪುನೇರಳೆ ಬೆಳೆಯೂ ಒಣಗಿ ಹೋಗಿದೆ. ಹಸು, ಕುರಿ, ಮೇಕೆಗಾಗಿ ಬೆಳೆಸಿಕೊಂಡಿದ್ದ ಮೇವಿನ ಬೆಳೆಯೂ ಒಣಗಿದ್ದು, ರಾಸುಗಳ ಮೇವಿಗೆ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇವುಗಳಿಗೆ ಆಶ್ರಯವಾಗಿದ್ದ ಗುಂಡಿಗಳೂ ಭತ್ತಿ ಹೋಗಿದ್ದು, ಪಕ್ಷಿಗಳಿಗೂ ನೀರಿಲ್ಲದ ಪರಿಸ್ಥಿತಿ ಬಂದಿದೆ.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಗಾಲ ಪೀಡಿತವೆಂದು ಘೋಷಿಸಲಾಗಿದೆ. ಬರದ ಹಿನ್ನೆಲೆಯಲ್ಲಿ ಬೇಸಗೆ ಬೆಳೆಗೆ ನೀರು ಹರಿಸುವುದಿಲ್ಲ ಎಂದು ಮೊದಲೇ ಪ್ರಕಟನೆ ಹೊರಡಿಸಿದ್ದೆವು. ಅದೂ ಅಲ್ಲದೆ, ನಾಲೆಗಳ ಆಧುನೀಕರಣ ನಡೆಯುತ್ತಿರುವುದರಿಂದ ಜಲಾಶಯದಲ್ಲಿ ನೀರಿದ್ದರೂ ಹರಿಸಲು ಸಾಧ್ಯವಿಲ್ಲ. ನಾಲೆ ಆಧುನೀಕರಣವಾದರೆ ಕೊನೆಭಾಗದ ಮದ್ದೂರು, ಮಳವಳ್ಳಿ ಪ್ರದೇಶಕ್ಕೆ ಹತ್ತುವರ್ಷ ಸಮರ್ಪಕವಾಗಿ ನೀರುಹರಿಸಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ 70 ಅಡಿ ನೀರಿದ್ದಾಗಲೂ ಬೆಳೆಗಳಿಗೆ ನೀರುಹರಿಸಲಾಗಿದೆ. ಆದರೆ, ಈಗ 96 ಅಡಿ ಇದ್ದರೂ ನಾಲೆಗೆ ನೀರುಹರಿಸಲಿಲ್ಲ. ನಾಲೆ ಆಧುನೀಕರಣ, ಬೆಂಗಳೂರು, ಮಂಡ್ಯ, ಮೈಸೂರಿಗೆ ಕುಡಿಯುವ ನೀರು ಸರಬರಾಜು ದೃಷ್ಟಿಯಲ್ಲಿಟ್ಟುಕೊಂಡು ನೀರುಹರಿಸಲಾಗುತ್ತಿಲ್ಲವೆಂದು ಸಚಿವರು ಹೇಳುತ್ತಾರೆ. ಕನಿಷ್ಠ ಎರಡು ಕಟ್ಟಾದರೂ ನೀರುಹರಿಸಿದ್ದರೆ ಸಣ್ಣಪುಟ್ಟ ಕೆರೆ, ಗುಂಡಿಗಳು ತುಂಬಿಕೊಂಡು ಅಂತರ್ಜಲವಾದರೂ ವೃದ್ಧಿಸಿ ಕೊಳವೆಬಾವಿಯಲ್ಲಿ ನೀರು ಸಿಗುತ್ತಿತ್ತು. ಈಗ ಕೊಳವೆಬಾವಿಗಳು ಬತ್ತಿಹೋಗಿವೆ, ಏನು ಮಾಡುವುದು ಎಂದು ರೈತರು ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ನಮ್ಮ ತಾತ, ಮುತ್ತಾತನ ಕಾಲದಿಂದಲೂ ಕಾಪಾಡಿಕೊಂಡು ಬಂದಿದ್ದ ತೆಂಗಿನ ಮರಗಳು ಈ ವರ್ಷದ ಭೀಕರ ಬಿಸಿಲಿಗೆ ಒಣಗಿ ಹೋಗಿವೆ. ನೀರಾವರಿ ಪ್ರದೇಶದ ಮರಗಳೇ ಹೆಚ್ಚು ಹಾನಿಯಾಗಿರುವುದು ವಿಶೇಷ. ಕೆಆರ್‌ಎಸ್ ಜಲಾಶಯದಿಂದ ಎರಡು ಕಟ್ಟಾದರೂ ನೀರುಹರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮಳೆಗಾಲದವರೆಗೆ ಮರಗಳನ್ನು ಕಾಪಾಡಿಕೊಳ್ಳಬಹುದಿತ್ತು. ಈಗಲೂ ಮಳೆ ಬರದಿದ್ದರೆ ಎಲ್ಲಾ ತೆಂಗಿನಮರಗಳೂ ಒಣಗಿ ಹೋಗಲಿವೆ. ಕೃಷಿಯ ಬಗ್ಗೆ ಆಸಕ್ತಿಯೇ ಹೊರಟು ಹೋಗುತ್ತಿದೆ. ಕುರಿ ಮೇಯಿಸಿಕೊಂಡು ಜೀವನ ಸಾಗಿಸೋಣ ಎಂದರೆ, ಅವುಗಳಿಗೂ ಮೇವು ಇಲ್ಲದಂತಾಗಿದೆ.
-ಕೆ.ಎನ್.ರವಿ, ಪ್ರಗತಿಪರ ರೈತ, ಕುಂಟನಹಳ್ಳಿ
ಮಳೆ ಬರಬಹುದೆಂಬ ಭರವಸೆಯಿಂದ ಟ್ಯಾಂಕರ್‌ನಿಂದ ನೀರು ಹಾಕಿ ಒಣಗುತ್ತಿದ್ದ ತೆಂಗಿನ ಸಸಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ನನ್ನಂತೆ ಹಲವು ರೈತರು ಮಾಡುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 600- 800 ರೂ.ವರೆಗೆ ಬಾಡಿಗೆ ಕೊಡಬೇಕಾಗಿದೆ. ಈ ತಿಂಗಳಲ್ಲಿ ಮಳೆ ಬರದಿದ್ದರೆ ಸಂಪೂರ್ಣ ತೆಂಗಿನ ಮರಗಳು ಒಣಗಿ ಹೋಗಲಿವೆ. ಎಳನೀರಿನ ಕ್ಷಾಮ ಉಂಟಾಗಲಿದ್ದು, ರೋಗಿಗಳ ಬಳಕೆಗೂ ಎಳನೀರು ದೊರಕದ ಸ್ಥಿತಿ ನಿರ್ಮಾಣವಾಗಲಿದೆ. ಸರಕಾರ ರೈತರ ನೆರವಿಗೆ ಧಾವಿಸಬೇಕಾಗಿದೆ. ಸೂಕ್ತ ಬೆಳೆಪರಿಹಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಭೆ ನಡೆಸಿದ್ದು, ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಮಸ್ಯೆ ಮನದಟ್ಟು ಮಾಡಲು ತೀರ್ಮಾನಿಸಿದ್ದೇವೆ.
ನ.ಲಿ.ಕೃಷ್ಣ, ರೈತ ಮುಖಂಡ