ಮಾತಿಗೂ ಕೃತಿಗೂ ಇರುವ ಅಂತರ!
ಮಾನ್ಯರೇ,
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ನಾಯಕರಿಗೆ ದಲಿತರು ಮತ್ತು ಮಹಿಳೆಯರ ಮೇಲೆ ಇರುವಂತಹ ಪ್ರೀತಿಯೆಲ್ಲವೂ ಕೇವಲ ತೋರಿಕೆಯದು ಮತ್ತು ಮತಗಳಿಕೆಯ ಉದ್ದೇಶದಿಂದ ಮಾತ್ರವೇ ಆಗಿರುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಹಿಂದೆ ರಾಷ್ಟ್ರಪತಿಗಳಾಗಿದ್ದ ರಾಮನಾಥ್ಕೋವಿಂದ್ರವರನ್ನು ನೂತನ ಸಂಸತ್ ಭವನದ ಶಂಕುಸ್ಥಾಪನೆಯ ಸಮಾರಂಭಕ್ಕೂ ಮತ್ತು ರಾಮಮಂದಿರದ ಶಿಲಾನ್ಯಾಸದ ಸಮಾರಂಭಕ್ಕೂ ಆಹ್ವಾನಿಸಲಿಲ್ಲ. ದೇಶದ ಸಂವಿಧಾನದ ದೇಗುಲವಾಗಿರುವ ಸಂಸತ್ ಭವನದ ಶಂಕುಸ್ಥಾಪನೆ ದೇಶದ ಪ್ರಥಮ ಪ್ರಜೆಗಳಾದ ಮತ್ತು ಸಂವಿಧಾನದ ಅಧಿಪತಿಗಳಾದಂತಹ ರಾಷ್ಟ್ರಪತಿಗಳಿಂದಲೇ ಆಗಬೇಕಿತ್ತು. ಆನಂತರದಲ್ಲಿ ನೂತನ ಸಂಸತ್ ಭವನದ ಉದ್ಘಾಟನೆಯನ್ನೂ ಸಹ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮುರವರನ್ನು ಆಹ್ವಾನಿಸದೆ ನೆರವೇರಿಸಿದರು. ಮೊನ್ನೆ ನೂತನ ಸಂಸತ್ ಭವನದಲ್ಲಿ ರಾಷ್ಟ್ರಪತಿಗಳಿಂದ ಜಂಟಿ ಅಧಿವೇಶನದ ಮಾತುಗಳನ್ನಾಡಿಸಿ ಅವರ ಸಮ್ಮುಖದಲ್ಲಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ನೂತನವಾದ ಸಂಸತ್ ಭವನದ ಪ್ರಥಮ ದಿನದ ಕಲಾಪದಲ್ಲಿಯೇ ರಾಷ್ಟ್ರಪತಿಯವರನ್ನು ಆಹ್ವಾನಿಸದಿರುವ ಕಾರಣ ದೇಶದ ಜನರಿಗೆ ತಿಳಿಯದ್ದೇನಲ್ಲ?
ದೇಶದ ಚಲನಚಿತ್ರ ನಟ, ನಟಿಯರು ಕಲಾಪದಲ್ಲಿ ಭಾಗವಹಿಸುವುದಾದರೆ ರಾಷ್ಟ್ರಪತಿಯವರನ್ನೇಕೆ ಆಹ್ವಾನಿಸಲಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಒಟ್ಟಾರೆಯಾಗಿ ಕೇಂದ್ರದ ಬಿಜೆಪಿ ನಾಯಕರಿಗೆ ಮಾತಿಗೂ ಮತ್ತು ಕೃತಿಗೂ ಇರುವಂತಹ ಅಂತರವನ್ನು ಸೂಚಿಸುತ್ತದೆ. ೨೦೨೯ರ ನಂತರ ಮಹಿಳಾ ಮಸೂದೆ ಅನುಷ್ಠಾನವಾಗುವುದಾದರೆ ಈಗಲೇ ಇದರ ಅನುಮೋದನೆ ಅಗತ್ಯವಿರಲಿಲ್ಲ. ಮಹಿಳಾ ಮೀಸಲಾತಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತು ಸದ್ಯದಲ್ಲಿಯೇ ಬರುವ ವಿಧಾನಸಭಾ ಚುನಾವಣೆಗಳಲ್ಲಿ ಹಾಲಿ ಇರುವ ಸ್ಥಾನಗಳಿಗೆ ಶೇ. ೩೩ರ ಮೀಸಲಾತಿಯನ್ನು ನಿಗದಿಪಡಿಸಬಹುದಲ್ಲವೇ?.
-ಕೆ.ಎಸ್. ನಾಗರಾಜ್, ಹನುಮಂತನಗರ, ಬೆಂಗಳೂರು