ಅಸ್ಮಿತೆ, ಅಸ್ತಿತ್ವ ಮತ್ತು ಒಕ್ಕೂಟದ ಕಲ್ಪನೆ
ಒಳಗೊಳ್ಳುವ ಧೋರಣೆ ಬಿಟ್ಟುಕೊಡುವ ಔದಾರ್ಯ ಇಲ್ಲದೆ ಒಕ್ಕೂಟ ಸಫಲವಾಗದು

ಭಾರತೀಯ ಸಮಾಜದಲ್ಲಿ ಪಾರಂಪರಿಕವಾಗಿ ಹಾಗೂ ಚಾರಿತ್ರಿಕವಾಗಿ ಗುರುತಿಸಬಹುದಾದ ಒಂದು ವೈರುಧ್ಯ ಎಂದರೆ ವ್ಯಷ್ಟಿಯ ನೆಲೆಯಲ್ಲಿ ಅಸ್ತಿತ್ವ-ಅಸ್ಮಿತೆಯ ಹಂಬಲ ಮತ್ತು ಸಮಷ್ಟಿಯ ನೆಲೆಯಲ್ಲಿ ವಿಶಾಲ ವೇದಿಕೆಯನ್ನು ಸೃಷ್ಟಿಸಿಕೊಳ್ಳುವ ಆಶಯಗಳ ನಡುವೆ ಸದಾ ಜೀವಂತವಾಗಿರುವ ಜಿಜ್ಞಾಸೆ. ತಳಮಟ್ಟದಿಂದಲೂ ಕಾಣಬಹುದಾದ ಒಂದು ಲಕ್ಷಣ ಎಂದರೆ ಪ್ರತಿಯೊಂದು ಸಮಾಜ-ಸಮುದಾಯವೂ ತನ್ನದೇ ಆದ ಸ್ವಂತ-ಸ್ವಾಯತ್ತ ರೂಪವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಶ್ರೇಣೀಕೃತ ಸಮಾಜ ಸೃಷ್ಟಿಸಿರುವ ಜಾತಿಯ ಗೋಡೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಲೇ ಇರುತ್ತದೆ. ಈ ಸಮಾಜವನ್ನು ವಿಶಾಲ ನೆಲೆಗಟ್ಟಿನಲ್ಲಿ ಪ್ರತಿನಿಧಿಸುವ ಸಾಮುದಾಯಿಕ ಸಂಸ್ಥೆ-ಸಂಘಗಳೂ ಈ ಗೋಡೆಗಳ ಒಳಗೇ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಗುರುತಿಸಿಕೊಂಡು, ಬಾಹ್ಯ ಸಮಾಜದೊಳಗಿನ ಒಡನಾಟಗಳಿಗೆ ತೆರೆದುಕೊಳ್ಳುತ್ತವೆ.
ಮತ್ತೊಂದೆಡೆ ಈ ಸಮಾಜಗಳ ಒಳಗೇ ಉಗಮಿಸುವ ಉದಾತ್ತ ಚಿಂತನೆಗಳಿಗೆ ತೆರೆದುಕೊಳ್ಳುವ ನಿರ್ದಿಷ್ಟ ಗುಂಪುಗಳು ಸಾಂಘಿಕವಾಗಿ ಅಥವಾ ಸಾಂಸ್ಥಿಕವಾಗಿ ಹೊರ ಸಮಾಜದಲ್ಲಿನ ಸಾಮಾಜಿಕ ಅನ್ಯಾಯಗಳನ್ನು ಗಮನಿಸುತ್ತಲೇ, ನೈತಿಕ ನೆಲೆಗಟ್ಟಿನಲ್ಲಿ ಆ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನದಲ್ಲಿರುತ್ತವೆ. ಭಾರತೀಯ ಸಮಾಜದಲ್ಲಿ ಇತಿಹಾಸ ಕಾಲದಿಂದಲೂ ಇಂತಹ ಪ್ರಯತ್ನಗಳನ್ನು ಗುರುತಿಸಲು ಸಾಧ್ಯ. ಬುದ್ಧ, ಬಸವಾದಿ ಶರಣರು, ಭಕ್ತಿ ಪಂಥದ ವಾಹಕರು ಇಲ್ಲಿ ಎದ್ದು ಕಾಣುತ್ತಾರೆ. ಇಸ್ಲಾಮ್‌ನಂತಹ ಮತಗಳಲ್ಲೂ ಸಹ ಸೂಫಿ ಪರಂಪರೆಯು ಈ ಪ್ರಯತ್ನವನ್ನು ಸಾಂಸ್ಥಿಕವಾಗಿಯೇ ಮಾಡಿ ತೋರಿಸಿದೆ. ಇದರ ಆಧುನಿಕ ಸ್ವರೂಪವನ್ನು ಸುಧಾರಣಾವಾದದ ಪ್ರತಿಪಾದಕರಲ್ಲಿ ಕಾಣಬಹುದು. ಆದರೆ ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ ಗುರುತಿಸಲೇಬೇಕಾದ ವೈರುಧ್ಯ ಎಂದರೆ, ಈ ಸುಧಾರಣೆಯ ವಾಹಿನಿಗಳು ತಮ್ಮ ಮೂಲ ಅಸ್ಮಿತೆ ಮತ್ತು ಅಸ್ತಿತ್ವದಿಂದ ಬೇರ್ಪಟ್ಟಿರುವುದಿಲ್ಲ.
ಚರಿತ್ರೆ-ವರ್ತಮಾನದ ಸಂಘರ್ಷ
ಸಮಕಾಲೀನ ಭಾರತವನ್ನು ಗಮನಿಸುವಾಗ ನಮಗೆ ಈ ಚಾರಿತ್ರಿಕ ಹೆಜ್ಜೆಗಳು ಬಹಳ ಮುಖ್ಯವಾಗುತ್ತವೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಶೋಧನೆಗಳ ಹೊರತಾಗಿಯೂ, 21ನೇ ಶತಮಾನದಲ್ಲಿಯೂ ನಮ್ಮ ಸಮಾಜದಲ್ಲಿ ‘ಸುಧಾರಣೆಗೊಳಗಾಗಬೇಕಾದ’ ಒಂದು ಸಮಾಜ ಇರುವುದೇ ಚಾರಿತ್ರಿಕ ವೈರುಧ್ಯ. ಅಭಿವೃದ್ಧಿ-ಪ್ರಗತಿ-ಸಬಲೀಕರಣ-ವಿಮೋಚನೆ ಮೊದಲಾದ ಗುಣವಿಶೇಷಣಗಳನ್ನು ಮೇಲ್ಪದರದ ದೃಷ್ಟಿಕೋನದಿಂದ (Elite Viewpoint) ನೋಡದೆ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿ ನಿಂತು ನಮ್ಮ ಸಾಮಾಜಿಕ ಅಭ್ಯುದಯದ ಹಾದಿಯನ್ನು ಅವಲೋಕಿಸಿದಾಗ, ಅಲ್ಲಿ ನಮಗೆ ಊಹಿಸಲಾಗದ ಪ್ರಾಚೀನತೆ ಮತ್ತು ಹೀನಾಚರಣೆಗಳ ದರ್ಶನವಾಗುತ್ತದೆ. ಈ ಸಮಾಜಗಳನ್ನು ಪ್ರತಿನಿಧಿಸುವ ಸಮುದಾಯಗಳು ಹೊರ ಸಮಾಜದಲ್ಲಿರುವ ಉದಾತ್ತ ಚಿಂತನಾವಾಹಿನಿಗಳನ್ನು ಸಹಜವಾಗಿಯೇ ಅವಲಂಬಿಸುತ್ತವೆ.
ಬುದ್ಧನಿಂದ ಅಂಬೇಡ್ಕರ್‌ವರೆಗೂ ಭಾರತದ ದಾರ್ಶನಿಕರು ಬಿಟ್ಟುಹೋಗಿರುವ ಈ ಚಿಂತನಾವಾಹಿನಿಗಳನ್ನು ತನ್ನದಾಗಿಸಿಕೊಂಡು, ಈ ಆಲೋಚನಾ ಕ್ರಮಗಳನ್ನು ಒಳಗಿಳಿಸಿಕೊಂಡು, ಸುತ್ತಲಿನ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿಗೆ ಅನ್ವಯಿಸುತ್ತಾ, ಆಧುನಿಕೀಕರಣಗೊಂಡ ಸಮಾಜದೊಳಗಿನ ಸಾಂಸ್ಕೃತಿಕ ವೈರುಧ್ಯ ಹಾಗೂ ಜನಜೀವನದ ವಿರೋಧಾಭಾಸಗಳಿಗೆ ಸ್ಪಂದಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು, ಸಹಜವಾಗಿಯೇ ಒಂದು ಕಲಿತ ಸಮಾಜ ಮತ್ತು ಅದನ್ನು ಪ್ರತಿನಿಧಿಸುವ ಸಾಂಘಿಕ-ಸಾಂಸ್ಥಿಕ ಚೌಕಟ್ಟುಗಳು. ಇದನ್ನು ವಿಂಗಡಿಸಿದಾಗ ನಮಗೆ ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ನೆಲೆಗಳು ಗೋಚರಿಸುತ್ತವೆ. ಮತ್ತೊಂದೆಡೆ ಈ ನೆಲೆಗಳು ಮರುವಿಂಗಡನೆಗೊಳಗಾಗಿ ಜಾತಿ-ಮತ-ಲಿಂಗತ್ವ ಮತ್ತು ಪ್ರಾದೇಶಿಕತೆಯ ಅಸ್ಮಿತೆಗಳಿಗೆ ಒಳಗಾಗಿರುವುದು ಕಂಡುಬರುತ್ತದೆ.
ವರ್ತಮಾನದ ಭಾರತ ಎದುರಿಸುತ್ತಿರುವ ಸಾಮಾಜಿಕ ವೈರುಧ್ಯಗಳು, ಆರ್ಥಿಕ ಅಸಮಾನತೆಗಳು ಹಾಗೂ ಸಾಂಸ್ಕೃತಿಕ ಬಿರುಕುಗಳನ್ನು ಕೋಶೀಕರಿಸಿ (Cellularise) ನೋಡಿದಾಗ, ನಮಗೆ ಈ ಸಂಘ-ಸಂಸ್ಥೆಗಳು ಹೊಸ ವಿಚಾರಗಳ, ನವೀನ ಆಲೋಚನೆಗಳ ವೇದಿಕೆಗಳಾಗಿ ಕಾಣುತ್ತವೆ. ಸ್ವಾಭಾವಿಕವಾಗಿಯೇ ವಿಭಿನ್ನ ತತ್ವ-ಸಿದ್ಧಾಂತಗಳ ಪ್ರಭಾವಕ್ಕೊಳಗಾಗಿ ಸಮಾಜದ ಒಡಲಲ್ಲೇ ರೂಪುಗೊಳ್ಳುವ ಈ ಚೌಕಟ್ಟುಗಳು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ವಿಸ್ತರಿಸುತ್ತಲೇ ಹೋಗುವುದು ವಾಸ್ತವ. ಇವುಗಳ ವಾರಸುದಾರಿಕೆ ವಹಿಸಿಕೊಂಡು, ನಿರ್ದೇಶಿಸುವ-ಮುನ್ನಡೆಸುವ ನೈತಿಕ ಜವಾಬ್ದಾರಿಯನ್ನು ಹೊತ್ತು ಸಮಾಜವನ್ನು ಔನ್ನತ್ಯದೆಡೆಗೆ ಕರೆದೊಯ್ಯುವ ಸಾಂಘಿಕ ನೆಲೆಗಳನ್ನು ಸಾಮಾನ್ಯ ಪರಿಭಾಷೆಯಲ್ಲಿ ‘ಪ್ರಗತಿಪರ-ಪುರೋಗಾಮಿ’ ಎಂದು ಬಣ್ಣಿಸಲಾಗುತ್ತದೆ. ಇದರ ಅತ್ಯುನ್ನತ ಹಂತವನ್ನು ‘ಕ್ರಾಂತಿ’ ಎಂದು ಪರಿಗಣಿಸಲಾಗುತ್ತದೆ.
ಮುನ್ನಡೆವ ಹಾದಿಯ ಸವಾಲುಗಳು
ಇನ್ನೂ ಸುಧಾರಣೆಯನ್ನೇ ಕಾಣದ ಭಾರತೀಯ ಸಮಾಜವನ್ನು ಕ್ರಾಂತಿಯೆಡೆಗೆ ಕೊಂಡೊಯ್ಯುವ ಹಾದಿ ಬಹಳ ದೂರ ಇದೆ ಎನ್ನುವುದೂ ವಾಸ್ತವ. ಈ ಸನ್ನಿವೇಶದಲ್ಲೇ ಭಾರತ ವರ್ತಮಾನದ ಸಂದರ್ಭದಲ್ಲಿ ಎದುರಿಸುತ್ತಿರುವ ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ, ಅಸ್ಪಶ್ಯತೆ, ಆರ್ಥಿಕ ಅಸಮಾನತೆ, ಸಾಂಸ್ಕೃತಿಕ ಪ್ರತ್ಯೇಕತೆ, ರಾಜಕೀಯ ಅಸಹಿಷ್ಣುತೆ ಹಾಗೂ ಅಲ್ಪಸಂಖ್ಯಾತ ದ್ವೇಷ ಈ ಜಟಿಲ ಸಿಕ್ಕುಗಳನ್ನು ಬಿಡಿಸುವ ಬಹುದೊಡ್ಡ ಜವಾಬ್ದಾರಿ ‘ಪ್ರಗತಿಪರ’ ಸಂಘಟನೆಗಳ ಮೇಲಿದೆ. ಸರಿಸುಮಾರು ಶತಮಾನದ ಇತಿಹಾಸ ಇರುವ ಭಾರತದ ಪ್ರಗತಿಪರ ಚಿಂತನಾವಾಹಿನಿಗಳು ತತ್ವ-ಸಿದ್ಧಾಂತಗಳ ಭಾರವನ್ನು ಸಹಿಸಿಕೊಂಡು ಸಮಷ್ಟಿ ಪ್ರಜ್ಞೆಯ ಕೋಶದಂತೆ ರೂಪುಗೊಳ್ಳಬೇಕಿತ್ತು. ಇದಕ್ಕೆ ದೇಶದ ರಾಜಕಾರಣ ಒಂದು ಅಡ್ಡಗೋಡೆಯಾದರೂ, ಈ ಬೇಲಿಯನ್ನು ದಾಟಿ ಹೋಗುವ ಅನಿವಾರ್ಯತೆಯೂ ನಮ್ಮೆದುರು ಇತ್ತು.
ಆದರೆ ವಾಸ್ತವದಲ್ಲಿ ಭಾರತದ ಪ್ರಗತಿಪರ ಚಳವಳಿಗಳು ಇದೇ ತತ್ವ-ಸಿದ್ಧಾಂತಗಳ ಭಾರಕ್ಕೆ ಸಿಲುಕಿ ಇನ್ನೂ ಹೆಚ್ಚು ವಿಘಟನೆಯತ್ತ ಸಾಗುತ್ತಿವೆ. ವೈಚಾರಿಕ ಪ್ರಜ್ಞೆಯ ಮೂಲ ಧಾತು ಇರುವುದು ಯಾವುದೇ ರೀತಿಯ ನಿರ್ದಿಷ್ಟ ಆಲೋಚನಾ ಕ್ರಮದ ಸಂಕೋಲೆಯಿಂದ ಬಿಡಿಸಿಕೊಂಡು ಸ್ವಾಯತ್ತವಾಗಿ ಯೋಚಿಸುವುದರಲ್ಲಿ. ಭಾರತೀಯ ಸಾಮಾಜಿಕ ಸಂದರ್ಭದಲ್ಲಿ ಇದು ಅನಿವಾರ್ಯವೂ ಹೌದು. ಆದರೆ ವಿಪರ್ಯಾಸವೆಂದರೆ ಇದು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವನ್ನು ನಮ್ಮ ಸಮಾಜ ಪಾರಂಪರಿಕವಾಗಿ ಸೃಷ್ಟಿಸಿರುವ ಅಸ್ಮಿತೆ ಮತ್ತು ಅಸ್ತಿತ್ವದ ಸಾಮುದಾಯಿಕ ಪರಿಕಲ್ಪನೆಗಳು. ಡಾ. ಬಿ. ಆರ್. ಅಂಬೇಡ್ಕರ್ ಸರಿಯಾಗಿಯೇ ಗುರುತಿಸಿರುವಂತೆ ಭಾರತೀಯರು ವ್ಯಕ್ತಿಗತವಾಗಿ ತಮ್ಮನ್ನು ಮತ್ತು ಪರರನ್ನು ಗುರುತಿಸುವುದೇ ‘ಜಾತಿ’ಯ ದೃಷ್ಟಿಯಿಂದ. ಇದನ್ನೂ ಆವರಿಸಿಕೊಳ್ಳುವುದು ಹಿಂದೂ-ಮುಸ್ಲಿಮ್-ಕ್ರೈಸ್ತ-ಸಿಖ್ ಮುಂತಾದ ‘ಮತೀಯ’ ಚೌಕಟ್ಟುಗಳು. ಈ ಮನಸ್ಥಿತಿಯೇ ಸಾಂಘಿಕವಾಗಿ ಮತ್ತು ಸಾಂಸ್ಥಿಕವಾಗಿ ಕ್ರಿಯಾಶೀಲವಾದಾಗ, ಸಂಘಟನಾತ್ಮಕ ಅಸ್ಮಿತೆಗಳೂ ಸಹ ಸ್ವಯಂ ನಿರ್ಬಂಧನೆಗಳಿಗೊಳಪಟ್ಟು, ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಕಂಡುಕೊಳ್ಳುತ್ತವೆ.
ಸ್ವಾಯತ್ತ ಚಳವಳಿಗಳು (Autonomous Movements) ಈ ಗಡಿರೇಖೆಯನ್ನು ದಾಟಿರುವುದನ್ನು ಮಹಿಳಾ ಹೋರಾಟಗಳಲ್ಲಿ, ಕಾರ್ಮಿಕ ಚಳವಳಿಗಳಲ್ಲಿ ಸ್ವಲ್ಪ ಮಟ್ಟಿಗೆ ಗುರುತಿಸಬಹುದು. ಭಾರತೀಯ ಸಾಮಾಜಿಕ ಚಿಂತನೆಯ ನೆಲೆಯಲ್ಲಿ ಈ ಸಂಕುಚಿತ ಅಸ್ಮಿತೆಗಳಿಂದಾಚೆಗೆ ಯೋಚಿಸುವುದೂ ಸಹ ಕೆಲವೊಮ್ಮೆ ಸವಾಲಿನ ಪ್ರಶ್ನೆಯಾಗಿಬಿಡುತ್ತದೆ. ಆದರೆ ಸಮಷ್ಟಿ ಪ್ರಜ್ಞೆಯ ಅವಶ್ಯಕತೆಯನ್ನು ಗಮನದಲ್ಲಿಟ್ಟು ನೋಡಿದಾಗ, ಈ ಸವಾಲನ್ನು ಮೀರಿ ಮುಂದೆ ಹೋಗುವ ಅನಿವಾರ್ಯವನ್ನು ನಾವು ಕಾಣಬಹುದು. ಇಲ್ಲಿ ವ್ಯಕ್ತಿಗತ ನೆಲೆಯಲ್ಲಿ ಸಂಘಟನೆಗಳು ತಮ್ಮ ಅಸ್ಮಿತೆ-ಅಸ್ತಿತ್ವವನ್ನು ಕಳಚಿಕೊಳ್ಳಲು ಅಪೇಕ್ಷಿಸುವುದು ದುಬಾರಿ ಎನಿಸಬಹುದು. ಆದರೆ ವಿಶಾಲ ಸಮಾಜ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಿ ಹೋರಾಡಬೇಕಾದರೆ ಇದು ಅತ್ಯವಶ್ಯ ಎನಿಸುತ್ತದೆ. ಇಲ್ಲಿ ನಮಗೆ ಜನಪರ ಹೋರಾಟಗಳ ಒಕ್ಕೂಟಗಳು ಒಂದು ಸದಾಶಯದ ಮಾರ್ಗವಾಗಿ ಕಾಣುತ್ತವೆ.
ವಿಶಾಲ ಸಮಗ್ರತೆಯ ದೃಷ್ಟಿಯಿಂದ ಭಾರತವನ್ನು ಒಂದು ಒಕ್ಕೂಟ ರಾಷ್ಟ್ರ ಎಂದೇ ಪರಿಗಣಿಸಲಾಗುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸುವ, ಎತ್ತಿಹಿಡಿಯುವ ಎಲ್ಲ ಪ್ರಗತಿಪರ ಸಂಘಟನೆಗಳೂ, ಈ ಒಕ್ಕೂಟ ವ್ಯವಸ್ಥೆಯನ್ನು, ಬಹುತ್ವದ ನೆಲೆಯಲ್ಲಿ ಸಂರಕ್ಷಿಸಲು ಹೋರಾಡುತ್ತವೆ. ಕೇಂದ್ರದ ಆಡಳಿತಕ್ಕೆ ಒಳಪಟ್ಟಿದ್ದರೂ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಪ್ರಾದೇಶಿಕ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿ ಬೆಳೆಸಲು ಅಪೇಕ್ಷಿಸುವುದು ಪ್ರಜಾಸತ್ತಾತ್ಮಕ ಲಕ್ಷಣವೂ ಹೌದು. ಇಲ್ಲಿ ಒಕ್ಕೂಟದ ಎಲ್ಲ ರಾಜ್ಯಗಳನ್ನೂ ಒಳಗೊಳ್ಳುವ ನೀತಿಯನ್ನು ಕೇಂದ್ರದಿಂದ ಅಪೇಕ್ಷಿಸಲಾಗುತ್ತದೆ. ರಾಜ್ಯಗಳೂ ತಮ್ಮ ಅಸ್ತಿತ್ವ-ಅಸ್ಮಿತೆಯ ಸಂಕುಚಿತ ಚೌಕಟ್ಟುಗಳನ್ನು ದಾಟಿ, ದೇಶದ ಅಖಂಡತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಆಡಳಿತ ನೀತಿಗಳನ್ನು ಅನುಸರಿಸುತ್ತವೆ. ಇದು ದೇಶದ ಏಕತೆಯ ದೃಷ್ಟಿಯಿಂದ ಅಪೇಕ್ಷಿತ ಮತ್ತು ಸ್ವಾಗತಾರ್ಹ.
ಆದರೆ ತಳಸಮಾಜದ ನೆಲೆಯಲ್ಲಿ ನಿಂತು ನೋಡಿದಾಗ, ಈ ಆಳ್ವಿಕೆಯಿಂದ ಉಂಟಾಗುತ್ತಿರುವ ಅಸಮಾನತೆಗಳು, ಎದುರಾಗುತ್ತಿರುವ ಜೀವನೋಪಾಯದ ಸವಾಲುಗಳು ಹಾಗೂ ಅಧಿಕಾರ ರಾಜಕಾರಣದ ವಾರಸುದಾರ ಪಕ್ಷಗಳ ಕುಟಿಲ ರಾಜಕೀಯ ನೀತಿಗಳಿಂದ, ಜನಸಮುದಾಯಗಳು, ವಿಶೇಷವಾಗಿ ವಂಚಿತ-ಅಂಚಿಗೆ ತಳ್ಳಲ್ಪಟ್ಟ-ಸಮಾಜಗಳು ಎದುರಿಸುತ್ತಿರುವ ಜಟಿಲ ಸಮಸ್ಯೆಗಳು, ಭಾರತೀಯ ಸಮಾಜವನ್ನು ಒಂದು ಹಂತದಲ್ಲಿ ಸಾಂಸ್ಕೃತಿಕವಾಗಿ ಜಡಗಟ್ಟಿಸುತ್ತಿದ್ದರೆ, ಸಾಮಾಜಿಕವಾಗಿ ಶಿಥಿಲವಾಗಿಸುತ್ತಿರುವುದನ್ನು ಗುರುತಿಸಬಹುದು. ವರ್ತಮಾನದ ಸನ್ನಿವೇಶದಲ್ಲಿ ಈ ತಳಸಮಾಜವನ್ನು ವಿಭಿನ್ನ ನೆಲೆಗಳಲ್ಲಿ ಪ್ರತಿನಿಧಿಸುವ-ನಿರ್ದೇಶಿಸುವ ಪ್ರಗತಿಪರ ಸಂಘಟನೆಗಳು ಈ ಸವಾಲುಗಳನ್ನು ಎದುರಿಸಲು ಜನರೊಡನೆ ನಿಲ್ಲಬೇಕಿದೆ. ಅಷ್ಟೇ ಅಲ್ಲದೆ ಈ ಸವಾಲುಗಳನ್ನು ಮೀರಿ ಒಂದು ಪ್ರಜಾಸತ್ತಾತ್ಮಕ ಸಮ ಸಮಾಜವನ್ನು ಕಟ್ಟಲು ಹೆಗಲು ನೀಡಬೇಕಿದೆ. ವಿಘಟಿತ ರೂಪದಲ್ಲಿ ಇದು ಸಾಧ್ಯವಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಎಡಪಂಥೀಯ, ಸಮಾಜವಾದಿ, ಅಂಬೇಡ್ಕರ್‌ವಾದಿ ಜನಾಂದೋಲನಗಳು ದೇಶವ್ಯಾಪಿಯಾಗಿ ಕ್ರಿಯಾಶೀಲವಾಗಿ, ಚಲನಶೀಲತೆಯನ್ನು ಕಾಪಾಡಿಕೊಂಡಿರುವುದನ್ನು ಒಪ್ಪಲೇಬೇಕಿದೆ.
ಆದರೆ ಮೇಲ್ಪದರದ ಸಮಾಜವೊಂದು (Elite society) ಅಧಿಕಾರ ರಾಜಕಾರಣದ ಪ್ರಭಾವಕ್ಕೊಳಗಾಗಿ, ದೇಶದ ಸಂವಹನ ಮಾಧ್ಯಮಗಳನ್ನು, ಬೌದ್ಧಿಕ ವಲಯಗಳನ್ನು ಹಾಗೂ ಸಾಂಸ್ಕೃತಿಕ ನೆಲೆಗಳನ್ನು ಆಕ್ರಮಿಸಿಕೊಂಡಿರುವುದರಿಂದ, ನವ ಉದಾರವಾದ-ಬಂಡವಾಳಶಾಹಿ-ಬಲಪಂಥೀಯ ಚಿಂತನಾ ಧಾರೆಗಳು ಭಾರತದ ಶತಮಾನಗಳ ಬಹುತ್ವದ ನೆಲೆಗಳನ್ನು ಶಿಥಿಲಗೊಳಿಸುವ ಹಾದಿಯಲ್ಲಿ ಆಕ್ರಮಣಕಾರಿಯಾಗಿ ಪ್ರವಹಿಸುತ್ತಿವೆ. ಇದು ತಳಮಟ್ಟದ ಶೋಷಿತ ಸಮಾಜವನ್ನು ಸಹ ತನ್ನ ತೆಕ್ಕೆಯೊಳಗೆ ಸೆಳೆಯುವಲ್ಲಿ ಯಶಸ್ವಿಯಾಗಿರುವುದು ವರ್ತಮಾನದ ವಾಸ್ತವ. ನವ ಉದಾರವಾದ ಸೃಷ್ಟಿಸುವ ಆರ್ಥಿಕ ಭ್ರಮೆ, ಹಿಂದುತ್ವ ಸೃಷ್ಟಿಸುವ ಮತೀಯ ಭ್ರಮೆ ಎರಡೂ ಈ ನಿಟ್ಟಿನಲ್ಲಿ ಒಟ್ಟಾಗಿ ಸಮಾಜದ ಮೇಲೆ ಪಾರಮ್ಯ ಸಾಧಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಈ ಪಾರಮ್ಯವನ್ನು ಬೆೇಧಿಸುವಂತಹ ಒಂದು ಸಮಗ್ರ ನೆಲೆಯ ಜನಪರ ದನಿ ಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಹರಿದು ಹಂಚಿ ಹೋಗಿರುವ ‘ಪ್ರಗತಿಪರ’ ಹೋರಾಟಗಳ ಐಕಮತ್ಯ ಮತ್ತು ಏಕತೆ ಅತ್ಯವಶ್ಯ ಎನ್ನುವುದು ಸ್ಪಷ್ಟ. ಇಲ್ಲಿ ನಮಗೆ ಜನ ಚಳವಳಿಗಳ ‘ಒಕ್ಕೂಟ’ದ ಪರಿಕಲ್ಪನೆ ಮುನ್ನೆಲೆಗೆ ಬರುತ್ತದೆ. ಈಗಾಗಲೇ ಇಂತಹ ಒಕ್ಕೂಟಗಳು ಎಡಪಂಥೀಯರ ನಡುವೆ, ಸಂಸದೀಯ ಎಡಪಕ್ಷಗಳಲ್ಲಿ, ಮಹಿಳಾ ಆಂದೋಲನಗಳಲ್ಲಿ, ದಲಿತ-ಅಲ್ಪಸಂಖ್ಯಾತ-ಆದಿವಾಸಿ ಚಳವಳಿಗಳಲ್ಲಿ ರೂಪುಗೊಂಡಿವೆ. ಆದರೆ ಇದು ಒಂದು ಅಖಂಡ ಸ್ವರೂಪವನ್ನು (Integrated Form) ಸಂಘಟನಾತ್ಮಕವಾಗಿ ಪಡೆದುಕೊಳ್ಳಲು ಆಗುತ್ತಿಲ್ಲ ಎನ್ನುವುದು ಕಟು ವಾಸ್ತವ. ಮೇಲ್ನೋಟಕ್ಕೆ ಕಾಣುವ ಐಕಮತ್ಯ ಮತ್ತು ಏಕತೆ, ಆಂತರಿಕವಾಗಿ ವ್ಯಕ್ತಿಗತ ಸಾಂಘಿಕ ಅಸ್ಮಿತೆ ಮತ್ತು ಅಸ್ತಿತ್ವಗಳ ಸಂಕುಚಿತತೆಯಿಂದ ಬಳಲುತ್ತಿರುವುದನ್ನು ಸಾಮಾನ್ಯವಾಗಿ ಗುರುತಿಸಬಹುದು.
ಒಳಗೊಳ್ಳುವಿಕೆಯ ಅನಿವಾರ್ಯತೆ
ಭಾರತವನ್ನು ಸಮ ಸಮಾಜವಾಗಿ ಕಟ್ಟುವ ಹಾದಿಯಲ್ಲಿ ಪ್ರತಿಯೊಂದು ‘ಪ್ರಗತಿಪರ’ ಸಂಘಟನೆಯೂ ತನ್ನ ಸಂಕುಚಿತತೆಯ ಪೊರೆಯನ್ನು ಕಳಚಿಕೊಂಡು, ಅಸ್ಮಿತೆ-ಅಸ್ತಿತ್ವಗಳ ಭಾರಕ್ಕೆ ಒಳಗಾಗದೆ, ವಿಶಾಲ ನೆಲೆಯ ಸಮಗ್ರತೆಯ ಬಗ್ಗೆ ಯೋಚಿಸುವುದು ವರ್ತಮಾನದ ತುರ್ತು. ಪ್ರತಿಭಟನೆ, ಹೋರಾಟ ಮತ್ತು ಇತರ ಆಂದೋಲನಗಳಲ್ಲಿ ಇದು ಸಾಧ್ಯವಾಗುತ್ತಿದ್ದರೂ, ತಾರ್ಕಿಕ ಅಂತ್ಯ ತಲುಪುವ ಹೊತ್ತಿನಲ್ಲಿ ಮತ್ತೆ ವಿಘಟಿತವಾಗುವ ಅಪಾಯವನ್ನು ಎದುರಿಸುತ್ತಲೇ ಇದ್ದೇವೆ. ಅನುಭವಿಸಿಯೂ ಇದ್ದೇವೆ. ಈ ವಿಘಟನೆಗೆ ಕಾರಣ ಸಾಂಘಿಕ ‘ಅಸ್ಮಿತೆ ಮತ್ತು ಅಸ್ತಿತ್ವ’ ಎಂಬ ಎರಡು ಸ್ತಂಭಗಳು. ಪ್ರತಿಭಟನೆ ಮತ್ತು ಹೋರಾಟದ ನಡುವೆ ಇರುವ ಅಗಾಧ ಅಂತರವನ್ನು ನಾವಿನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಶೋಷಿತ-ವಂಚಿತ ಜನ ಸಮುದಾಯ ಗಳ ತಕ್ಷಣದ ಆಗ್ರಹಗಳಿಗಾಗಿ ನಡೆಯುವ ಪ್ರತಿಭಟನೆಗಳು ತಾರ್ಕಿಕ ಅಂತ್ಯ ತಲುಪುವವರೆಗೂ ಹೋರಾಟ ಎನಿಸಿಕೊಳ್ಳುವುದಿಲ್ಲ ಎನ್ನುವ ಕಟು ಸತ್ಯವನ್ನೂ ನಾವು ಸಮ್ಮಾನಿಸಬೇಕಿದೆ.
ಈ ದೃಷ್ಟಿಯಿಂದ ನೋಡಿದಾಗ ಭಾರತದ ‘ಪ್ರಗತಿಪರ’ ಚಳವಳಿಗಳು ತಮ್ಮೊಳಗಿನ ಕ್ರಿಯಾಶೀಲತೆ ಮತ್ತು ಚಲನಶೀಲತೆಯನ್ನು ಸಮರ್ಪಕವಾಗಿ ಬಳಸಿಕೊಂಡು, ಅಂತರ್ಗತವಾಗಿರಬಹುದಾದ ‘ಅಸ್ಮಿತೆ ಮತ್ತು ಅಸ್ತಿತ್ವದ’ ಸೀಮಿತ ಬಂಧನಗಳನ್ನು ಕಳಚಿಕೊಂಡು, ವಿಶಾಲ ನೆಲೆಯ ಸಮಗ್ರ ಜನಾಂದೋಲನಗಳ ಕಡೆ ಗಮನಹರಿಸಬೇಕಿದೆ. ಜನಾಂದೋಲನ ಗಳ ಒಕ್ಕೂಟಗಳನ್ನು ಬಲಪಡಿಸುವ ನಿಟ್ಟಿನಲ್ಲಿ ವ್ಯಕ್ತಿಗತ ಸಂಘಟನೆಯ ಅಸ್ಮಿತೆ ಮತ್ತು ಅಸ್ತಿತ್ವಗಳನ್ನು ಕಳೆದುಕೊಳ್ಳದೆಯೇ, ಬಿಟ್ಟುಕೊಡುವ ಹಾಗೂ ಒಳಗೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿದೆ. ಇದಕ್ಕೆ ಅಡ್ಡಿಯಾಗಬಹುದಾದ ತತ್ವ ಸಿದ್ಧಾಂತಗಳನ್ನು ಅಂತರ್ಗತವಾಗಿಸಿಕೊಂಡೇ, ವಿಶಾಲ ಸಾಮಾಜಿಕ ಹೋರಾಟಗಳ ಒಂದು ಕ್ರಿಯಾಶೀಲ ಭಾಗವಾಗಿ ತೊಡಗಿಕೊಳ್ಳುವ ಆಲೋಚನೆಯತ್ತ ನಾವು ಸಾಗಬೇಕಿದೆ.
ಇದು ಸಾಧ್ಯವಾಗದಿರುವುದರಿಂದಲೇ ಜನಪರ ಹೋರಾಟಗಳು ದಿನದಿಂದ ದಿನಕ್ಕೆ ವಿಘಟನೆಯ ಹಾದಿ ಹಿಡಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶೋಷಕ ಸಮಾಜ ಸದಾ ಏಕತೆಯಿಂದಿರುವುದು, ಶೋಷಿತ ಸಮಾಜ ವಿಘಟಿತವಾಗುವುದು ಚಾರಿತ್ರಿಕವಾಗಿ ಗುರುತಿಸಬಹುದಾದ ಕಟು ಸತ್ಯ. ಈ ವರ್ತುಲವನ್ನು ಬೇಧಿಸಿ ಹೊಸ ಸಮಾಜವನ್ನು ಕಟ್ಟುವ ಜವಾಬ್ದಾರಿ ಭಾರತದ ಶೋಷಿತ ವರ್ಗಗಳ ಮೇಲಿದೆ. ಏಕತೆ-ಐಕಮತ್ಯಗಳು ಕೇವಲ ಘೋಷಣೆಗಳಾಗದೆ, ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರೊಡನೆ ಒಂದಾಗುವ ಮನಸ್ಥಿತಿಯನ್ನು ಸಾಂಘಿಕ ನೆಲೆಯಲ್ಲಿ ರೂಢಿಸಿಕೊಂಡು, ಪೋಷಿಸಬೇಕಿದೆ. ಆಗ ತಳಸಮಾಜದ ನಿರ್ಲಕ್ಷಿತ ಜನಸಮುದಾಯಗಳನ್ನು ತಲುಪುವುದು ಸುಲಭವಾಗುತ್ತದೆ. ಇದು ಸಾಧ್ಯ ಎನ್ನಲು ನಮ್ಮಲ್ಲಿ ಚಾರಿತ್ರಿಕ ನಿದರ್ಶನಗಳಿವೆ.
ಭವಿಷ್ಯದ ತಲೆಮಾರಿಗಾಗಿ ಇದನ್ನು ಸಾಧ್ಯಗೊಳಿಸುವ ಜವಾಬ್ದಾರಿ ವರ್ತಮಾನದ ಪ್ರಜ್ಞಾವಂತ ನಾಗರಿಕರ ಮೇಲಿದೆ. ‘ಅಸ್ಮಿತೆ ರಾಜಕಾರಣ’(identity politics)ದಿಂದ ಮುಕ್ತರಾಗುವುದು ಈ ದಿಕ್ಕಿನಲ್ಲಿ ಇಡಬಹುದಾದ ಮೊದಲ ಹೆಜ್ಜೆ.