ಭಾರತ ಸಂವಿಧಾನವೆಂಬ ಬೆಳಕಿನ ದಾರಿ
ತನ್ನ ಸಮತೆಯ ಆಶಯದಿಂದ ಜಗತ್ತಿನ ಹೃದಯ ಗೆದ್ದ ಭಾರತ ಸಂವಿಧಾನಕ್ಕೆ ಈಗ 75 ವರ್ಷ. ಶೋಷಿತರ ಮೇಲಿನ ಸಾವಿರಾರು ವರ್ಷಗಳ ಅನ್ಯಾಯವನ್ನು ಕೊನೆಗಾಣಿಸುವ ತಮ್ಮ ಕನಸಿಗೆ ಸಂವಿಧಾನದ ಮೂಲಕ ರೆಕ್ಕೆ ಕಟ್ಟಿದವರು ಬಾಬಾ ಸಾಹೇಬ್ ಅಂಬೇಡ್ಕರ್. ಅದಕ್ಕಾಗಿ ಅವರು ಸವೆಸಿದ ದಾರಿ ಸುಲಭದ್ದಾಗಿರಲಿಲ್ಲ. ಪ್ರಪಂಚದ ಮೂಲೆ ಮೂಲೆಯ ಸಮತೆಯ ಆಶಯಗಳನ್ನು ಹುಡುಕಿ, ಭಾರತ ನೆಲದ ಶೋಷಣೆಯ ಗಾಯಗಳನ್ನು ಮಾಯಿಸುವ ಮುಲಾಮು ಕಂಡು ಹಿಡಿದರು. ಈ ದಾರಿಯಲ್ಲಿ ಅವರು ಇಡೀ ದೇಶವನ್ನೂ, ದೇಶದ ಜನರ ಕಷ್ಟ ಸುಖಗಳನ್ನೂ ಅಧ್ಯಯನ ಮಾಡಿದರು. ಜಾತಿ ತಾರತಮ್ಯದ ಮೂಲ ಬೇರುಗಳನ್ನು ಶೋಧಿಸಿದರು. ಯಾವ ಔಷಧಿ ಈ ತಾರತಮ್ಯದ ರೋಗವನ್ನು ವಾಸಿ ಮಾಡಬಹುದು ಎಂದು ಮನಗಂಡರು. ಇದೆಲ್ಲದರ ಪ್ರತಿಫಲವಾಗಿ ಭಾರತದ ಸಂವಿಧಾನ ಸಿದ್ಧಗೊಂಡಿತು.
ಸಂವಿಧಾನ ಜಾರಿ ಮಾಡುವವರು ಸಮರ್ಥರಾಗಿರಬೇಕು ಎಂದು ಬಾಬಾ ಸಾಹೇಬರು ಕೊನೆಯಲ್ಲಿ ಹೇಳಿ ಹೋದರು. ಅವರು ಹೇಳಿದ್ದು ನಿಜವಾಯಿತು. ಕೊನೆಗೂ ಸಂವಿಧಾನ ದೇಶದ ಜನರ ಬದುಕಿನ ಭಾಗವಾಗದೆ ಆಡಳಿತ ಮಾಡುವವರ ಕಾರ್ಯಕ್ರಮವಾಯಿತು. ಈ ಕಾರಣದಿಂದ ಸಮಾಜಮುಖಿ ಆಲೋಚನೆಯ ಸರಕಾರಗಳು ತಮ್ಮ ಆಶಯದ ಈಡೇರಿಕೆಗೆ ಸಂವಿಧಾನವನ್ನು ಮುನ್ನೆಲೆಗೆ ತರುತ್ತವೆ. ಇದೀಗ ಕರ್ನಾಟಕ ಸರಕಾರ ಸಂವಿಧಾನಕ್ಕೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮನೆಮನೆಗೂ ಸಂವಿಧಾನವೆಂಬ ಆಂದೋಲನವನ್ನೇ ಕೈಗೊಂಡಿದೆ. ಇದು ಭಾರತದ ಮಟ್ಟಿಗೆ ನಿಜಕ್ಕೂ ಮಹತ್ವದ ವಿದ್ಯಮಾನ. ಕೋಮುವಾದ, ಜಾತಿವಾದಗಳು ಹೊಸರೂಪ ಪಡೆಯುತ್ತಿರುವ, ಆ ಮೂಲಕ ಶೋಷಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಸರಕಾರಿ ಇಲಾಖೆಯೊಂದು ಸಂವಿಧಾನವನ್ನು ಹೊತ್ತು ಸಾಗುತ್ತಿರುವುದು ಮಹತ್ತರವಾದುದು. ಇದರಿಂದಾಗಿ ದಶಕಗಳಿಂದ ಸಂವಿಧಾನದ ನೆರಳಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಸಂಘಟನೆಗಳಿಗೆ ಮತ್ತು ಸಂವಿಧಾನವನ್ನು ಹೊಸ ಪರಿ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಲು ಕಾಯುತ್ತಿದ್ದ ಯುವಜನತೆಗೆ ಹೊಸ ಒಂದು ಬೆಳಕಿನ ದಾರಿ ಸಿಕ್ಕಂತಾಗಿದೆ.
ಕಳೆದ ಏಳೂವರೆ ದಶಕದಿಂದ ಭಾರತದಲ್ಲಾದ ಸಾಮಾಜಿಕ ಬದಲಾವಣೆಗಳ ಹಿಂದೆ ಭಾರತ ಸಂವಿಧಾನದ ಪಾಲಿದೆ. ಸಂವಿಧಾನ ರೂಪಿತವಾಗಿ ಅಂಗೀಕಾರ ಗೊಂಡ ಇಪ್ಪತ್ತೈದು ವರ್ಷಗಳ ನಂತರ ಕರ್ನಾಟಕದಲ್ಲಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳು ಜನ್ಮ ತಾಳಿದವು. ಈ ಎರಡೂ ಚಳವಳಿಗಳ ಜೊತೆ ಜೊತೆಗೆ ಕಾರ್ಮಿಕ ಹೋರಾಟಗಳು, ಮಹಿಳಾ ಹೋರಾಟಗಳು ಮತ್ತು ವಿದ್ಯಾರ್ಥಿ ಹೋರಾಟಗಳೂ ನಡೆದು ಕರ್ನಾಟಕ ಮಣ್ಣಿನ ಪ್ರತಿಭಟನಾತ್ಮಕ ವಿವೇಕವನ್ನು ಕಾಪಿಟ್ಟುಕೊಂಡವು. ಈ ಎಲ್ಲಾ ಚಳವಳಿಗಳೂ ಆತ್ಯಂತಿಕವಾಗಿ ಅವಲಂಬಿಸಿದ್ದು ನಮ್ಮ ಸಂವಿಧಾನವನ್ನೇ. ಆಳುವ ಪಕ್ಷಗಳು ಸಂವಿಧಾನದ ಆಶಯಗಳ ವಿರುದ್ಧ ನಡೆದು ಕೊಂಡಾಗ ಎಚ್ಚರಿಸುವ, ಜನರಿಗೆ ಅರಿವು ಮೂಡಿಸುವ ಕೆಲಸಗಳನ್ನು ಈ ಚಳವಳಿಗಳು ಮಾಡುತ್ತಾ ಬಂದಿವೆ. ಈ ಕಾರಣದಿಂದಾಗಿ ಆಳುವವರು ಕೋಮುವಾದಿಗಳು, ಜಾತಿ ವಾದಿಗಳಾಗಿದ್ದರೂ ಸಾಂವಿಧಾನಿಕ ನಡವಳಿಕೆಗಳನ್ನು ಅನಿವಾರ್ಯವಾಗಿ ರೂಢಿಸಿ ಕೊಳ್ಳಬೇಕಾಯಿತು.
ಕಾಲ ಸರಿದಂತೆ ತಾರತಮ್ಯಗಳಾಚೆಗಿನ ಸಮತೆಯ ಸಮಾಜವೊಂದು ರೂಪುಗೊಳ್ಳಬಹುದು ಎಂಬ ಹಿರಿಯರ ಕನಸು ಈಗ ವಿಫಲವಾಗಿದೆ. ಜಾತಿ ಧರ್ಮಗಳ ಹೆಸರಿನಲ್ಲೇ ಅಸಾಂವಿಧಾನಿಕ ಕೃತ್ಯಗಳು ನಡೆಯುತ್ತಿವೆ. ದಲಿತ-ಮಹಿಳೆಯರ- ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹಿಂದೆಂದಿಗಿಂತಲೂ ಹೆಚ್ಚಾಗುತ್ತಿವೆ. ವ್ಯವಸ್ಥಿತವಾಗಿ ಸಂವಿಧಾನವನ್ನು ಜನರ ನಂಬಿಕೆಯಾಚೆಗೆ ತಳ್ಳುವ, ಅದರ ಮೂಲ ಆಶಯಗಳಾದ ಧರ್ಮ ನಿರಪೇಕ್ಷತೆ ಮತ್ತು ಬಂಧುತ್ವವನ್ನು ಧರ್ಮವಿರೋಧ ಎಂಬಂತೆ ಬಿಂಬಿಸುವ ಸಮಾಜ ವಿರೋಧಿಗಳ ಕೆಲಸ ಸ್ವಲ್ಪಮಟ್ಟಿಗೆ ಸಫಲವಾಗುತ್ತಿದೆ. ಈ ಕಾಲದಲ್ಲಿ ಮುನ್ನೆಲೆಗೆ ಬರಬೇಕಿದ್ದ ನಿರುದ್ಯೋಗ, ಜಾತೀಯತೆ, ಲಿಂಗ ತಾರತಮ್ಯ ಮತ್ತು ಶೈಕ್ಷಣಿಕ ಆಶಯಗಳು ಹಿನ್ನೆಲೆಗೆ ಸರಿದು ಧರ್ಮ ಮತ್ತು ಕ್ರೂರ ಜಾತೀಯತೆಗಳು ಮೆರೆಯುತ್ತಿವೆ. ಈ ಸಂದರ್ಭವನ್ನು ಸಂವಿಧಾನದ ಜೊತೆಗೇ ಎದುರಿಸಬೇಕಾಗಿದೆ. ಯಾಕೆಂದರೆ, ಸಂವಿಧಾನದಲ್ಲಿ ಮಾತ್ರವೇ ಸಹಜ- ಸಹಬಾಳ್ವೆಯ ಮಾದರಿಗಳಿವೆ. ಮೈತ್ರಿ-ಕಾರುಣ್ಯದ ಆಶಯಗಳಿವೆ. ಸಹ ಜೀವಿಗಳನ್ನು ತಮ್ಮಂತೆ ಕಾಣುವ, ಎಂತಹ ಸಂದರ್ಭದಲ್ಲೂ ವ್ಯಕ್ತಿ ಘನತೆಯನ್ನು ಕಾಪಾಡಿಕೊಳ್ಳುವ, ಇನ್ನೊಬ್ಬರ ಬದುಕುಗಳನ್ನು ಮುರುಟಿ ಹೋಗದಂತೆ ತಡೆಯುವ ಕ್ರಿಯಾತ್ಮಕ ಪಾಠಗಳಿವೆ ಮತ್ತು ಎದೆಯಾಳದ ಆಶಯಗಳೇ ನಮ್ಮನ್ನು ಕೈಹಿಡಿದು ನಡೆಸುವ ಬದುಕಿನ ಕ್ರಮವಿದೆ. ಈ ಕಾರಣಕ್ಕಾದರೂ ನಮ್ಮ ಸಂವಿಧಾನ ನಮ್ಮೆಲ್ಲರ ಬದುಕಿನ ಮೂಲ ಬಿತ್ತಿಯಾಗಬೇಕಿದೆ.
ಹಾಗಾಗಿ ನಾವು ಬದುಕುತ್ತಿರುವ ಕಾಲ ಮತ್ತು ದೇಶದ ಧರ್ಮ ಸಂವಿಧಾನವಾಗ ಬೇಕಾಗಿದೆ. ಕೊಲ್ಲುವ ಭಾಷೆಗೆ ಉತ್ತರವಾಗಿ, ಹೊಸ ಹತಾರಗಳೊಂದಿಗೆ ನಮ್ಮೆದುರು ನಿಂತಿರುವ ಸಾಮ್ರಾಜ್ಯ ಶಾಹಿ, ಬಂಡವಾಳ ಶಾಹಿ ಶಕ್ತಿಗಳ ವಿರುದ್ಧದ ಒಡಲ ಹಾಡಾಗಿ ನಮ್ಮ ಸಂವಿಧಾನ ಹೊಮ್ಮಬೇಕಿದೆ. ಭೂಮಿ- ವಸತಿ- ಉದ್ಯೋಗ ವಂಚಿತರ, ಜಾತಿಯ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾದವರ, ಜಗತ್ತಿನ ಅರ್ಧದಷ್ಟು ಜನಸಂಖ್ಯೆಯಿದ್ದರೂ ದ್ವಿತೀಯ ದರ್ಜೆಯ ಬದುಕನ್ನು ನಡೆಸುತ್ತಿರುವ ಮಹಿಳೆಯರ ಕಣ್ಣ ದಾರಿಯಾಗಿ ನಮ್ಮ ಸಂವಿಧಾನ ರೂಪು ತಳೆಯಬೇಕಾಗಿದೆ. ಆ ಮೂಲಕ ಭಾರತಕ್ಕೆ ಅಂಟಿರುವ ಅಸಮಾನತೆಯ ಕಳಂಕವನ್ನು ತೊಳೆಯಬೇಕಿದೆ.
ಮನೆಮನೆಗೂ ಸಂವಿಧಾನ ಎಂದರೆ, ಕೇವಲ ಸಂವಿಧಾನದ ಆಶಯಗಳ ಅಕ್ಷರ ರೂಪವಲ್ಲದೆ ಗತಿಯಿಲ್ಲದವರ ಊರುಗೋಲಾಗಬೇಕಿದೆ. ಕರ್ನಾಟಕ ಸರಕಾರ ಸಮಾಜಮುಖಿ ಕಾರ್ಯಕ್ರಮಗಳೊಟ್ಟಿಗೆ ಸಂವಿಧಾನವನ್ನು ಮನೆಮನೆಗೆ ತಲುಪಿಸುತ್ತಿರುವುದು ಮಹತ್ತರವಾರ ಸಂಗತಿ. ಯಾಕೆಂದರೆ ಆಶಯಗಳನ್ನು ಅಕ್ಷರ ರೂಪದಲ್ಲಿ ಮಾತ್ರವೇ ಹೊಂದಿರುವ ಬೃಹತ್ ಜನ ಸಮುದಾಯ ನಮ್ಮದು. ಆಡಿದ ಮಾತುಗಳು ಗಂಟಲಿನಿಂದ ಹೊರಟು ಗಾಳಿಯಲ್ಲಿ ಲಯವಾಗಿ ಬಿಡುವ ಮತ್ತು ಅಸಮಾನತೆಯನ್ನು ಇದ್ದ ಹಾಗೆ ಉಳಿಸಿಕೊಳ್ಳುವ ಪ್ರಕ್ರಿಯೆಗಳು ಇಲ್ಲಿಯವರೆಗೆ ನಮ್ಮನ್ನು ದಿಕ್ಕೆಡಿಸಿವೆ. ಈಗ ಮಾತುಗಳು ದೀಪದ ರೂಪತಾಳುವ ಹೊತ್ತು. ಆ ಬೆಳಕಿನಲ್ಲಿ ನಾವು ಸಂವಿಧಾನವನ್ನೂ, ಆ ಮೂಲಕ ಸಮಾನತೆಯನ್ನೂ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮಹದವಕಾಶ ನಮ್ಮ ಮನೆ ಬಾಗಿಲಲ್ಲಿದೆ.