ಸೋಲದ ಕವಿತೆಯ ಸಾಲುಗಳು...
‘ಅವಳ ಕಾಲು ಸೋಲದಿರಲಿ’ ಫಾತಿಮಾ ರಲಿಯಾ ಅವರ ಮೂರನೇ ಕೃತಿ. ಚೊಚ್ಚಲ ಕವಿತಾ ಸಂಕಲನ. ‘ಕಡಲು ನೋಡಲು ಹೋದವಳು’ ಲಲಿತ ಪ್ರಬಂಧ ಮತ್ತು ‘ಒಡೆಯಲಾರದ ಒಡಪು’ ಎಂಬ ಕಥಾ ಸಂಕಲನದ ಮೂಲಕ ಕನ್ನಡ ಓದುಗರನ್ನು ತಲುಪಿರುವ ಫಾತಿಮಾ ಅವರ 30 ರೊಟ್ಟಿಯಂತಹ ಕವಿತೆಗಳು ಇಲ್ಲಿವೆ. ಕವಿತೆ ಯಾಕೆ ಬರೆಯುತ್ತೇನೆ ಎನ್ನುವ ಬಗ್ಗೆ ಕವಯಿತ್ರಿಯೇ ಮೊದಲ ಪುಟದಲ್ಲಿ ಹಂಚಿಕೊಂಡಿದ್ದಾರೆ ‘‘ಕವಿತೆಗಳನ್ನು ಆತ್ಮದ ತುಣುಕುಗಳು ಎನ್ನುತ್ತಾರೆ. ಆದರೆ ಪದ್ಯಗಳು ನನ್ನ ನಿತ್ಯ ಸಂಗಾತಿಗಳು ಅಂತ ನಾನು ಹೇಳ ಬಯಸುತ್ತೇನೆ. ಕಥೆಗಳನ್ನು, ಲಲಿತ ಪ್ರಬಂಧಗಳನ್ನು ಬರೆದರೂ, ದುಗುಡಗಳನ್ನೆಲ್ಲಾ ಹೊರ ಚೆಲ್ಲಿ ಒಂದು ನಿರಾಳತೆಯನ್ನು ಎದೆಯೊಳಗೆಳೆದುಕೊಳ್ಳ ಬೇಕು, ಕಾಡುವ ಬೇಗುದಿಗಳ ಬೇಲಿ ಬಿಚ್ಚಿ ಹಾರಲು ಬಿಡಬೇಕು, ಹತ್ತಿಯಂತೆ ಹಗೂರಾಗಬೇಕು ಅಂತ ಅನ್ನಿಸುವಾಗೆಲ್ಲ ನನ್ನ ಕೈ ಹಿಡಿದು ನಡೆಸುವುದು ಕವಿತೆಗಳೇ....’’ ಎನ್ನುವುದು ರಲಿಯಾ ಒಳಗಿನ ಮಾತು.
ಈಗಾಗಲೇ ರಮ್ಯ ಪ್ರಬಂಧಗಳಲ್ಲಿ ಬಳಕೆಯಾಗುತ್ತಾ ಬಂದ ಹಲವು ಸವಕಲು ರೂಪಕಗಳ ನಡುವೆಯೂ, ಹೃದಯವನ್ನು ಥಕ್ಕನೆ ಆವರಿಸಿ ಬಿಡುವ ಹಲವು ಸಾಲುಗಳು ಇಲ್ಲಿವೆ. ಬುದ್ಧ, ಮುರಿದ ಕೊಳಲು, ತಂತಿ ಹರಿದ ವೀಣೆ, ಶಕುಂತಳೆ, ಊರ್ಮಿಳೆ, ರಾಧೆ, ಕೃಷ್ಣ ಇವೆಲ್ಲವೂ ಈಗಾಗಲೇ ಕನ್ನಡದಲ್ಲಿ ಬಳಸಿ ಸವಕಲಾಗಿರುವ ರೂಪಕಗಳಾದರೂ ಅವುಗಳ ಮೂಲಕ ಹೊಸತೇನನ್ನೋ ಹೇಳಲು ಕವಯಿತ್ರಿ ನಡೆಸುವ ಶ್ರಮ ಶ್ಲಾಘನೀಯ ವಾಗಿದೆ.
‘ಬುದ್ಧನನ್ನರಸುವ ಪಯಣದಲ್ಲಿ’ ಕವಯಿತ್ರಿಯ ಜೊತೆಗೆ ಆತನ ಪತ್ನಿ ಯಶೋಧರೆಯೂ ಜೊತೆಗಿದ್ದರೆ ಕವಿತೆ ಇನ್ನಷ್ಟು ತೀವ್ರವಾಗಿ ಬಿಡಬಹುದಿತ್ತಲ್ಲ, ಇನ್ನೊಂದು ಸಾಧ್ಯತೆಯನ್ನು ತೆರೆದುಕೊಳ್ಳುತ್ತಿತ್ತಲ್ಲ ಅನ್ನಿಸುವುದಿದೆ. ‘ಕಣ್ಣ ತೇವ’ದಲ್ಲಿ ‘‘ಒಮ್ಮೊಮ್ಮೆ ಅದು ಹೆತ್ತೊಡಲ ಉರಿ/ಒಮ್ಮೆ ಸುಮ್ಮನೆ ಹಾದು ಹೋಗುವ/ಒಂದು ನೆನಪು, ಹಳೆಯ ಬಂಧ/ಮುಗಿಲು ಬಿರಿವ ಮಳೆ ಸುರಿದ/ನಂತರ ಉಳಿದು ಬಿಡುವ ನಿಶಬ್ದ’’ ಎನ್ನುವ ಕವಯಿತ್ರಿ ‘ಮುರಿದ ಗೋಡೆಯ ಸಣ್ಣ ಬಿಕ್ಕಳಿಕೆ’ ಎನ್ನುವಲ್ಲಿಗೆ ತಂದು ನಿಲ್ಲಿಸುತ್ತಾರೆ. ಕಟ್ಟ ಕಡೆಗೆ ತನ್ನೆಲ್ಲ ರೂಪಕಗಳ ನಿರರ್ಥಕತೆಯನ್ನು ಒಪ್ಪಿಕೊಳ್ಳುತ್ತಾ, ಕಣ್ಣ ತೇವಕ್ಕೆ, ಅರ್ಥ ಇರಲೇ ಬೇಕಿಲ್ಲವೇನೋ ಎಂದು ನಿಟ್ಟುಸಿರಾಗುತ್ತಾರೆ.
ಶಕುಂತಳೆಯ ಬಗ್ಗೆ ಬರೆಯುತ್ತಾ, ದುಷ್ಯಂತನ ಪ್ರೀತಿಯನ್ನು ಮರು ಸ್ವೀಕರಿಸಿದ ಬಗೆಯನ್ನು ಕವಯಿತ್ರಿ ಪ್ರಶ್ನಿಸುತ್ತಾರೆ. ತನ್ನ ಸಂಕಟಗಳಿಗೆ ಅಹಲ್ಯೆಯನ್ನು ಕರೆಯುತ್ತಾ ‘‘ಈಗೀಗ ಅಮ್ಮಂದಿರ ಎದೆಯಿಂದಲೂ/ಒಡೆದ ಹಾಲು ಒಸರುತ್ತದೇನೋ/ಅನ್ನಿಸಿ ದಿಗಿಲುಗೊಳ್ಳುತ್ತೇನೆ/ಆಗೆಲ್ಲ ನೀನು ಬೆಂಬಿಡದೆ ಕಾಡುತ್ತಿ ಅಹಲ್ಯೆ’’ ಎನ್ನುತ್ತಾರೆ. ಹೂಮಾರುವ ಹುಡುಗಿಯ ಬಗ್ಗೆ ಬರೆಯುತ್ತಾ ತನ್ನ ಕವಿತೆಯನ್ನೇ ವಿಮರ್ಶೆಗೊಡ್ಡುತ್ತಾರೆ. ಬಚ್ಚಲು ಮನೆಯಲ್ಲಿ ಅಜ್ಜಿಯ ಕಾಲ ಮೇಲೆ ಅಂಗಾತ ಮಲಗಿ ಬಿಡುಗಣ್ಣು ಬಿಟ್ಟು ಉರಿಯುತ್ತಿರುವ ದೀಪವ ದಿಟ್ಟಿಸುತ್ತಾ ನಸು ನಗುವ ಮಗುವಿನ ಕಣ್ಣಿನಲ್ಲಿ ಕವಯಿತ್ರಿ ಅನಿಕೇತನವನ್ನು ಹುಡುಕುತ್ತಾರೆ. ಮಳೆ ಸುರಿಯುವುದೆಂದರೆ ಅವತಾರ ಪುರುಷನಿಗೆಂದು ಕಾದು ನಿಂತ ಶಾಪಗ್ರಸ್ಥ ಕಲ್ಲು ಎನ್ನುತ್ತಾರೆ ಕವಯಿತ್ರಿ. ಬಾಮಿಯಾನದ ಬುದ್ಧನನ್ನೂ, ಫೆಲೆಸ್ತೀನಿನ ಹುಡುಗಿಯನ್ನು ಜೊತೆ ಜೊತೆಯಾಗಿ ಕಟ್ಟಿಕೊಡುವ ಮೂಲಕ ಆಧುನಿಕ ದಿನಗಳಲ್ಲಿ ಬುದ್ಧನ ಆಶಯಗಳಿಗೆ ಒದಗಿರುವ ದುರಂತವನ್ನು ಹೇಳುವ ಪ್ರಯತ್ನ ನಡೆಸುತ್ತಾರೆ. ಕವಯಿತ್ರಿಯ ರೇಶಿಮೆ ಭಾವದ ಸಾಲುಗಳೂ ಕೆಲವೊಮ್ಮೆ ಈ ರೇಶಿಮೆಯ ನವಿರಿಗಾಗಿ ಪ್ರಾಣ ತೆತ್ತ ರೇಷ್ಮೆ ಹುಳಗಳನ್ನು ನೆನಪಿಸುತ್ತವೆ. ತನ್ನೆಲ್ಲ ಒಳ ಸಂಕಟಗಳಿಗೆ ಶಚೀತೀರ್ಥ, ಶಕುಂತಳೆ, ಅಹಲ್ಯೆ, ಊರ್ವಶಿಯ ರನ್ನೇ ಮೊರೆ ಹೋಗುವ ಲೇಖಕಿಗೆ ಮುಸ್ಲಿಮ್ ಜನಪದೀಯ, ಐತಿಹಾಸಿಕ ಮಹಿಳಾ ಪಾತ್ರಗಳು ಯಾಕೆ ನೆರವಿಗೆ ಬರಲಿಲ್ಲ, ಯಾಕೆ ಅದು ತಟ್ಟಿಲ್ಲ ಎನ್ನುವುದು ಒಗಟಾಗಿ ನಮ್ಮನ್ನು ಕಾಡುತ್ತದೆ. ಆದುದರಿಂದಲೇ ಪದೇ ಪದೇ ಕಾಣಸಿಗುವ ಈ ಪುರಾಣ ಪಾತ್ರಗಳು ತೀರಾ ಕ್ಲೀಷೆಯಾಗುವ ಅಪಾಯವಿದೆ. ಕನ್ನಡದ ಕವಯಿತ್ರಿಯರ ಮುಂದುವರಿದ ಅನುಕರಣೆಯಾಗುವ ಅಪಾಯದಿಂದ ಪಾರಾಗುವುದಕ್ಕಾಗಿ ಆಕೆ ತನ್ನದೇ ಪರಿಸರದ ರೂಪಕ ಪಾತ್ರಗಳಿಗೆ ಮುಖಾಮುಖಿ ಯಾಗುವ ಧೈರ್ಯವನ್ನು ತೋರಿಸ ಬೇಕಾಗಿದೆ.
ಬೆನ್ನುಡಿಯಲ್ಲಿ ಅಕ್ಷತಾ ಹುಂಚದ ಕಟ್ಟೆ ಬರೆಯುತ್ತಾರೆ ‘‘ಮನುಷ್ಯತ್ವದ ಬೇರುಗಳು ಅಲುಗಾಡುತ್ತಿರುವ ಸಮಾಜದಲ್ಲಿ ನೋಯುವವರು, ಬೇಯುವವರು, ಅವಮಾನ, ಸಂಕಷ್ಟ ಎದುರಿಸುವವರು ಇಲ್ಲಿನ ಸೂಕ್ಷ್ಮ ಸಂವೇದನೆಯ ಜೀವಗಳು. ಫಾತಿಮಾ ಕವಿತೆಗಳನ್ನು ಕಟ್ಟಿರುವುದು ಈ ಸಂವೇದನೆಯಿಂದಲೇ. ಆದ್ದರಿಂದಲೇ ಇಲ್ಲಿನ ನವಿರು ರೇಷಿಮೆ ಭಾವ ಆಳಕ್ಕಿಳಿಯುತ್ತಾ ಇರಿಯ ತೊಡಗುತ್ತವೆ...’’
ಉಡುಗೊರೆ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. 70 ಪುಟಗಳ ಈ ಕೃತಿಯ ಮುಖಬೆಲೆ 90 ರೂಪಾಯಿ. ಆಸಕ್ತರು 76769 79086 ದೂರವಾಣಿಯನ್ನು ಸಂಪರ್ಕಿಸಬಹುದು.