Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಲೈಂಗಿಕ ದೌರ್ಜನ್ಯವೆಂಬ ರಾಕ್ಷಸೀಯ...

ಲೈಂಗಿಕ ದೌರ್ಜನ್ಯವೆಂಬ ರಾಕ್ಷಸೀಯ ನಡವಳಿಕೆ

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ5 Sept 2024 11:59 AM IST
share
ಲೈಂಗಿಕ ದೌರ್ಜನ್ಯವೆಂಬ ರಾಕ್ಷಸೀಯ ನಡವಳಿಕೆ

ಇಂದಿನ ದಿನಗಳಲ್ಲಿ ಬೆಳಗ್ಗೆ ದಿನಪತ್ರಿಕೆ ಎತ್ತಿಕೊಂಡು ಓದಲು ತೊಡಗುತ್ತಿದ್ದಂತೆ ಮನಸ್ಸು ಅಸ್ವಸ್ಥ ಗೊಳ್ಳುತ್ತಿದೆ. ಸಾಮಾನ್ಯವಾಗಿ ಬೆಳಗ್ಗಿನ ಆಹ್ಲಾದಕರ ವಾತಾವರಣವೇ ಕದಡಿ ಹೋಗಿ ಮನಸ್ಸಿನ ತುಂಬಾ ಬೇಸರ, ನೋವು ಮುತ್ತಿ ಕೊಳ್ಳುವುದೇ ಹೆಚ್ಚು. ಕಳೆದ ಕೆಲವು ದಿನಗಳಿಂದ ಗಂಭೀರವಾದ ಲೈಂಗಿಕ ದೌರ್ಜನ್ಯದ ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಮೊದಲಿಗೆ ಕೋಲ್ಕತಾದ ವೈದ್ಯಕೀಯ ವಿದ್ಯಾರ್ಥಿನಿಯ ಭಯಾನಕ ಅತ್ಯಾಚಾರ-ಹತ್ಯೆ ಘಟನೆ ದೇಶದಾದ್ಯಂತ ತಲ್ಲಣ, ತಳಮಳ ಸೃಸ್ಟಿಸಿತು. ಆನಂತರ ಮುಂಬೈಯ ಬದ್ಲಾಪುರದಲ್ಲಿ ನರ್ಸರಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ತಮಿಳುನಾಡಿನ ನಕಲಿ ಎನ್ನಲಾದ ಎನ್‌ಸಿಸಿ ಶಿಬಿರದಲ್ಲಿ ಬಾಲಕಿಯರನ್ನು ಗುರಿ ಮಾಡಲಾದ ಲೈಂಗಿಕ ಅಪರಾಧ, ಶಿವಮೊಗ್ಗದಲ್ಲಿ ನೃತ್ಯ ಶಿಕ್ಷಕ ನಡೆಸಿದ ಲೈಂಗಿಕ ಅವಾಂತರ, ಅಸ್ಸಾಂನಲ್ಲಿ ಹದಿಹರೆಯದ ಹುಡುಗಿಯ ಮೇಲಿನ ಸಾಮೂಹಿಕ ಅತ್ಯಾಚಾರ ಇತ್ಯಾದಿ ಘಟನೆಗಳು ವರದಿಯಾದವು. ಹೀಗೆ ಒಂದರ ನಂತರ ಒಂದರಂತೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇದರೊಂದಿಗೆ ವೈಯಕ್ತಿಕ ನೆಲೆಯ ಇಂತಹ ಬಿಡಿ ಪ್ರಕರಣಗಳು ಹೇಗೂ ಇದ್ದೇ ಇರುತ್ತವೆ. ಈ ನಡುವೆ ಮಾಲಯಾಳಂ ಚಿತ್ರರಂಗದಲ್ಲಿ ನಡೆದಿದೆ ಎನ್ನಲಾದ ನಟಿಯರ ಲೈಂಗಿಕ ಶೋಷಣೆಯೂ ಬೆಳಕಿಗೆ ಬಂದಿದೆ. ಬಹುಶ: ಇಂತಹ ಅನಪೇಕ್ಷಿತ ಘಟನೆಗಳು ಸದ್ಯಕ್ಕೆ ಕೊನೆಗೊಳ್ಳುವಂತಹದ್ದಲ್ಲ.

2012ರಲ್ಲಿ ದಿಲ್ಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಪೈಶಾಚಿಕ ಹಲ್ಲೆ ಪ್ರಕರಣದ ನಂತರ ಕೂಡ ಇದೇ ರೀತಿ ಲೈಂಗಿಕ ದೌರ್ಜನ್ಯದ ಘಟನೆಗಳು ಪತ್ರಿಕೆಗಳಲ್ಲಿ ಸರದಿಯಂತೆ ವರದಿಯಾಗುತ್ತಲೇ ಇದ್ದವು. ಇದು ಕಾಕತಾಳೀಯವೋ ಏನೋ ಗೊತ್ತಾಗುತ್ತಿಲ್ಲ. ಬಹುಶ: ಈ ರೀತಿಯ ಒಂದು ದೊಡ್ಡ ಮಟ್ಟದ ಪ್ರಕರಣ ವರದಿಯಾಗುತ್ತಿದ್ದಂತೆ ಇಂತಹದ್ದೇ ಸಣ್ಣ ಪುಟ್ಟ ಪ್ರಕರಣಗಳನ್ನೂ ಕಡೆಗಣಿಸಬಾರದೆನ್ನುವ ಪ್ರಜ್ಞೆ ಸುದ್ದಿ ಮಾಧ್ಯಮ ವಲಯದಲ್ಲಿ ಜಾಗೃತವಾಗುತ್ತದ್ದೆಯೋ ಏನೋ ಗೊತ್ತಿಲ್ಲ. ಒಂದಂತು ನಿಜ. ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ಇಂತಹ ಮಾದರಿಯ ಲೈಂಗಿಕ ವಿಕೃತಿಗಳೆಂಬುದು ಸುಪ್ತವಾಗಿ ಹೆಣೆದು ಕೊಂಡು ಬಿಟ್ಟಿದೆ ಎಂದನಿಸುತ್ತದೆ. ಸನ್ನಿವೇಶ, ಸಂದರ್ಭ ಬಂದಾಗ ಅದು ಅಸಹ್ಯಕರವಾದ ರೀತಿಯಲ್ಲಿ ಪ್ರಕಟಗೊಂಡು ಬಿಡುತ್ತದೆ ಎಂದು ಕಾಣುತ್ತದೆ.

ಹಾಗಾದರೆ 2012 ಮತ್ತು 2024ರ ನಡುವಿನ ಅವಧಿಯಲ್ಲಿ ಯಾವುದೇ ಭಯಾನಕ ಎನ್ನಬಹುದಾದ ಲೈಂಗಿಕ ಅಪರಾಧದ ಘಟನೆಗಳು ನಡೆದಿಲ್ಲವೇ ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ. ಖಂಡಿತವಾಗಿಯೂ ನಡೆದಿವೆ. ಇದರ ನಡುವೆ ಉತ್ತರ ಪ್ರದೇಶದಲ್ಲಿ ನಡೆದಂತಹ ಉನ್ನಾವೊ, ಹಾಥರಸ್ ನಂತಹ ಘಟನೆಗಳೇನೂ ಕಡಿಮೆ ಬೀಭತ್ಸವಾಗಿರಲಿಲ್ಲ. ಇಂತಹ ಘಟನೆಗಳನ್ನು ಪಟ್ಟಿ ಮಾಡುತ್ತ ಹೋದರೆ ಅದು ಮುಗಿಯುವಂತಿಲ್ಲ. ಭಾರತದಲ್ಲಿ ನಿಮಿಷಕ್ಕೆ 16ರಂತೆ ಅತ್ಯಾಚಾರಗಳಾಗುತ್ತವೆ ಎಂದು ಕೆಲವು ವರದಿಗಳಿವೆ. ಇನ್ನು ಕೆಲವು ವರದಿಗಳ ಪ್ರಕಾರ ದಿನಕ್ಕೆ 90 ಮತ್ತು ವರ್ಷವೊಂದಕ್ಕೆ ಸರಾಸರಿ 30,000ದಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ ಎನ್ನಲಾಗುತ್ತಿದೆ. ಇಂತಹ ಅಂಕಿ-ಅಂಶಗಳು ಯಾವತ್ತೂ ನಿಖರವಾಗಿರುವುದಿಲ್ಲ. ಹಾಗೆ ನೋಡಿದರೆ ವಾಸ್ತವಾಂಶಗಳನ್ನು ಅರಿಯಲು ನಮಗೆ ವರದಿಗಳು ಬೇಕಾಗಿಲ್ಲ ಎಂದನಿಸುತ್ತದೆ. ಇದಕ್ಕೆ ದಿನ ಪತ್ರಿಕೆಗಳ ನಿತ್ಯದ ಓದು ಸಾಕು. ಜೊತೆಗೆ ಸುತ್ತಲಿನ ಬೆಳವಣಿಗೆಗಳಿಗೆ ತೆರೆದಿಟ್ಟಂತಹ ಮನಸ್ಸು ಸಾಕು. ತೊಟ್ಟಿಲ ಶಿಶುವಿನಿಂದ ಹಿಡಿದು ವಯಸ್ಸಿನ ಭಾರಕ್ಕೆ ಕುಸಿದ ಅತ್ಯಂತ ಹಿರಿಯ ಮಹಿಳೆಯರು ಕೂಡ ಈ ಮೃಗೀಯ ವರ್ತನೆಗೆ ತುತ್ತಾಗುತ್ತಾರೆ. ಇಂತಹ ಕೃತ್ಯಗಳ ಹಿಂದಿರುವವರ ಮಾಹಿತಿಯೂ ಅಷ್ಟೇ ಆಶ್ವರ್ಯ ತರುತ್ತದೆ. ಹದಿಹರೆಯದ ಹುಡುಗರಿಂದ ಹಿಡಿದು ನಡೆದಾಡಲು ಕಷ್ಟ ಪಡುವಂತಹ ಅತಿ ಹಿರಿಯ ಗಂಡಸರು ಅತ್ಯಾಚಾರಿಗಳ ವರ್ಗದಲ್ಲಿರುತ್ತಾರೆ. ಸ್ವತಃ ಜನ್ಮಕ್ಕೆ ಕಾರಣರಾದ ತಂದೆ ಮತ್ತು ಹತ್ತಿರದ ಬಂಧುಗಳಂಥವರು ಅತ್ಯಾಚಾರಿಗಳಾಗಿ ರೂಪಾಂತರ ಹೊಂದುವುದು ನಮ್ಮನ್ನು ಮೂಕರನ್ನಾಗಿಸುತ್ತದೆ.

ವಾಸ್ತವದಲ್ಲಿ ಹಳ್ಳಿ, ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವಂತಹ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುವುದೇ ಕಡಿಮೆ. ಯಾಕೆಂದರೆ ಇಲ್ಲಿ ಬಲಿ ಪಶುಗಳಾಗುವವರು ಸಮಾಜದ ಕೆಳ ವರ್ಗದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಾಗಿರುತ್ತಾರೆ. ಹಾಗೆಯೇ ಅಪರಾಧಿಗಳು ಬಲಾಢ್ಯ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಒಂದು ವೇಳೆ ಯಾರಾದರೂ ಸಾಮಾಜಿಕ ಕಾರ್ಯಕರ್ತರು ಮಧ್ಯೆ ಪ್ರವೇಶಿಸಿದಲ್ಲಿ ಅಥವಾ ಅಲ್ಲಿ ರಾಜಕೀಯ ನುಸುಳಿದರೆ ಮಾತ್ರ ಇಂತಹ ಘಟನೆಗಳು ಸುದ್ದಿಯಾಗುತ್ತವೆ. ಇಲ್ಲದಿದ್ದರೆ ಅದು ಸದ್ದಿಲ್ಲದೆ ಮುಚ್ಚಿ ಹೋಗುತ್ತದೆ. ಕೌಟುಂಬಿಕ ವಲಯದಲ್ಲಿ ಜರುಗುವ ಲೈಂಗಿಕ ಅಪರಾಧಗಳಂತೂ ಮಾನ ಮಾರ್ಯಾದೆಯ ಹೆಸರಿನಲ್ಲಿ ತಣ್ಣಗೆ ಮುಚ್ಚಿ ಹೋಗುವುದೇ ಹೆಚ್ಚು. ಇನ್ನು ನಗರಗಳಲ್ಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿಗೆ ಸುರಕ್ಷಿತ ವಾತಾವರಣವಿದೆಯೇ? ಅಲ್ಲಿಯೂ ಸಾಕಷ್ಟು ಲೈಂಗಿಕ ಶೋಷಣೆಗಳು ನಡೆಯುತ್ತಿರುತ್ತವೆ. ಹೆಚ್ಚಿನ ಮಹಿಳೆಯರು ಹೊಟ್ಟೆಪಾಡಿಗಾಗಿ ಕಾಮುಕ ಮನಸ್ಸುಗಳ ಹಿಂಸೆಯನ್ನು ಅಸಹಾಯಕರಾಗಿ ಸಹಿಸಿಕೊಳ್ಳುತ್ತಾರೆ. ದಿಟ್ಟತನವುಳ್ಳವರು ಪ್ರತಿಭಟಿಸಿ ಹೋರಾಡುತ್ತಾರೆ. ಆದರೆ ನಮ್ಮಲ್ಲಿ ಕಾನೂನು ಹೋರಾಟದ ಕತೆ ಎಲ್ಲರಿಗೂ ಗೊತ್ತು. ಈ ಹೋರಾಟಕ್ಕೆ ಆರ್ಥಿಕ ಶಕ್ತಿಯೂ ಬೇಕು, ವ್ಯವಸ್ಥೆಯ ನೆರವೂ ಬೇಕು. ಭ್ರಷ್ಟತೆಯನ್ನು ಜೀವನ ವಿಧಾನವಾಗಿ ಒಪ್ಪಿಕೊಂಡಿರುವ ನಮ್ಮ ಒಟ್ಟು ವ್ಯವಸ್ಥೆಯಲ್ಲಿ ನ್ಯಾಯ ಎಷ್ಟು ದುಬಾರಿ ಹಾಗೂ ಕಷ್ಟವೆಂದು ಗೊತ್ತಿಲ್ಲದವರಿಲ್ಲ. ಕಾನೂನುಗಳೆಲ್ಲವೂ ಸರಿಯಾಗಿಯೇ ಇದೆ. ನಿರ್ಭಯಾ ಪ್ರಕರಣದ ಬಳಿಕ ಜಸ್ಟಿಸ್ ಜೆ.ಎಸ್. ವರ್ಮಾ ಆಯೋಗದ ಶಿಫಾರಸಿನಂತೆ ರೇಪ್ ಪ್ರಕರಣಗಳ ಆರೋಪಿಗಳನ್ನು ಶಿಕ್ಷಿಸಲು ಕಾನೂನು ಬಿಗಿಗೊಂಡಿದೆ. ಆದರೆ ಈ ಕಾನೂನುಗಳ ಅನುಷ್ಠಾನ ಹಂತದ ಲೋಪ, ವಿಪರೀತ ವಿಳಂಬ ಗತಿ ಇತ್ಯಾದಿಗಳಿಂದ ನ್ಯಾಯ ಕೈಗೆ ಎಟಕುವುದಿಲ್ಲ. ಹೀಗಾಗಿ ಅತ್ಯಾಚಾರಿಗಳು ಮತ್ತು ಕೊಲೆಗಾರರು ಒಂದಷ್ಟು ತಿಂಗಳು ಅಥವಾ ವರ್ಷ ಜೈಲಲ್ಲಿದ್ದು ಬಳಿಕ ಬಿಡುಗಡೆಯಾಗಿ ನಿರಾಳರಾಗುತ್ತಾರೆ. ಇತ್ತ ನೋವು, ಹಿಂಸೆ, ಅನುಭವಿಸಿದಂತಹ ಬಡಪಾಯಿ ಹೆಣ್ಣು ಮಕ್ಕಳು ಅಸಹಾಯಕರಾಗುತ್ತಾರೆ. ಜೊತೆಗೆ ಇಂಥವರು ಸಮಾಜದ ಅನುಮಾನ, ಅಪಮಾನಕ್ಕೂ ಗುರಿಯಾಗಬೇಕಾಗುತ್ತದೆ.

ಯಾಕೆಂದರೆ ನಮ್ಮ ಸಮಾಜದ ಸ್ಥಿತಿ-ಗತಿ ಇರುವುದೇ ಹಾಗೆ. ಅತ್ಯಾಚಾರ ನಡೆದ ಸಂದರ್ಭದಲ್ಲಿ ಜನರು ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಕೆಲವರು ತಕ್ಷಣ ಬೆಂಬಲ, ನೆರವು ಸಹ ನೀಡುತ್ತಾರೆ. ಪ್ರಕರಣದ ಕಾವು ಆರುತ್ತಿದ್ದಂತೆ ಸಂತ್ರಸ್ತರೊಂದಿಗೆ ಗಟ್ಟಿಯಾಗಿ ನಿಲ್ಲುವ ಜನರ ಸಂಖ್ಯೆ ಕೂಡ ನಿಧಾನವಾಗಿ ಕರಗುತ್ತದೆ. ಇಷ್ಟಾಗಿದ್ದರೆ ಪರವಾಗಿರಲಿಲ್ಲ. ಕೆಲವರು ತರುವಾಯ ವಿಮರ್ಶೆ ಶುರು ಮಾಡುತ್ತಾರೆ. ಹೆಣ್ಣು ಮಕ್ಕಳ ಹಾವ-ಭಾವ, ಉಡುಪು-ತೊಡುಪು, ಅವರ ಉದ್ಯೋಗ ಅಥವಾ ಅನ್ಯಕಾರ್ಯದ ಮೇಲೆ ಹೊರಗಡೆ ಇದ್ದ ವೇಳೆ ಇತ್ಯಾದಿಗಳನ್ನು ಇಟ್ಟು ಕೊಂಡು ಅತ್ಯಾಚಾರಕ್ಕೆ ಪರೋಕ್ಷವಾಗಿ ಸ್ವಯಂ ಅವರೇ ಕಾರಣವೆಂಬಂತೆ ಹಿಂದಿನಿಂದ ಮಾತನಾಡುತ್ತಾರೆ. ಈ ವರ್ಗದಲ್ಲಿ ಮಹಿಳೆಯರೂ ಇದ್ದಾರೆ ಎನ್ನುವುದು ನೋವಿನ ವಿಚಾರ. ನಿಜ, ಗಾಂಧೀಜಿ ಬಯಸಿದಂತೆ ಮಧ್ಯರಾತ್ರಿ ವೇಳೆ ಮಹಿಳೆಯರು ನಿರ್ಭೀತರಾಗಿ ಓಡಾಡುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಆದ್ದರಿಂದ ಮಹಿಳೆಯರೂ ಎಚ್ಚರ ವಹಿಸುವುದು ಅಗತ್ಯ. ಆದರೆ ಅದನ್ನು ಪುರುಷರಿಗೆ ಅತ್ಯಾಚಾರ - ಅನಾಚಾರಕ್ಕೆ ಕೊಟ್ಟಂತಹ ಪರವಾನಿಗೆ ಎಂಬ ಅರ್ಥದಲ್ಲಿ ವಾದಿಸುವುದು ಸರಿಯಲ್ಲ. ಸಮಸ್ಯೆಯ ಮೂಲ ಇರುವುದು ಎಲ್ಲಿ ಎಂಬುದನ್ನು ನಾವು ತಿಳಿದುಕೊಳ್ಳುವುದು ಮುಖ್ಯ.

ಲಿಂಗ ಸಮಾನತೆ ಮತ್ತು ಮಹಿಳಾ ಸಂವೇದನೆ ಜಾಗೃತವಿಲ್ಲದಂತಹ ಸಾಮಾಜಿಕ ವ್ಯವಸ್ಥೆಯೇ ಸಮಸ್ಯೆಯ ಮುಖ್ಯ ಕಾರಣವೆಂಬುದರಲ್ಲಿ ಸಂದೇಹವೇ ಇಲ್ಲ. ಹಿಂದಿನ ಪಾಳೆಗಾರಿಕೆ, ಯಾಜಮಾನ್ಯ ಸಂಸ್ಕೃತಿಯ ಮನೋಭಾವ ಇನ್ನೂ ಪೂರ್ತಿಯಾಗಿ ತೊಲಗಿಲ್ಲ ಎಂಬುದು ಕೆಲವು ಮಂದಿಯ ನಡವಳಿಕೆ, ಮಾತುಗಳಲ್ಲಿ ಎದ್ದು ಕಾಣುವಂತಿದೆ. ಇದರೊಂದಿಗೆ ಆಧುನಿಕ ಆವಿಷ್ಕಾರವಾಗಿರುವ ಇಂಟರ್‌ನೆಟ್, ಮೊಬೈಲ್, ಸೋಶಿಯಲ್‌ಮೀಡಿಯಾ ಮುಂತಾದವುಗಳು ಜನರಿಗೆ ಅನುಕೂಲ ಕಲ್ಪಿಸುವಂತೆ ಅಪಾಯವನ್ನೂ ತಂದೊಡ್ಡುತ್ತಿರುವುದು ಕಣ್ಣೆದುರುಗಿನ ಸತ್ಯವಾಗಿದೆ. ನಮಗೆ ಹೆಣ್ಣು ಮಕ್ಕಳನ್ನು ದೈವತ್ವಕ್ಕೆ ಏರಿಸುವುದು ಗೊತ್ತು. ಶ್ಲೋಕಗಳು, ನುಡಿಗಟ್ಟುಗಳು, ಗಾದೆಗಳ ಮೂಲಕ ಹೊಗಳುವುದೂ ತಿಳಿದಿದೆ. ಆದರೆ ಅವರು ಪುರುಷರಿಗೆ ಸಮಾನರು ಎಂದು ಅರ್ಥ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಮುಖ್ಯವಾಗಿ ಮಹಿಳೆ ಅಥವಾ ಪುರುಷ ಯಾರೇ ಇರಲಿ, ಅವರ ಇಚ್ಛೆಗೆ ವಿರುದ್ಧವಾದ ಮಾನಸಿಕ ಹಾಗೂ ದೈಹಿಕ ಸ್ವರೂಪದ ನಡವಳಿಕೆ ಅಮಾನವೀಯ ಮತ್ತು ಅಕ್ಷಮ್ಯ. ನಮ್ಮ ಸಂಸ್ಕೃತಿ, ಶಿಕ್ಷಣ ಮತ್ತು ಪ್ರಜಾತಂತ್ರ ವ್ಯವಸ್ಥೆ ಹೆಚ್ಚು ಕಡಿಮೆ ಇಂತಹ ಅರಿವು ಹಾಗೂ ಪ್ರಜ್ಞೆಯನ್ನು ರೂಪಿಸುವುದರಲ್ಲಿ ಸೋತಿದೆ ಎಂಬ ಅಭಿಪ್ರಾಯ ದಾಖಲಿಸಲು ನಿಜಕ್ಕೂ ನೋವಾಗುತ್ತದೆ.

share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X