ಸೌರಶಕ್ತಿ ಗ್ರಾಮಗಳಲ್ಲಿನ ದುರ್ಗತಿ ಹಾಳುಬಿದ್ದಿರುವ ಸಾವಿರಾರು ಗ್ರಿಡ್‌ಗಳು
ದೇಶದಲ್ಲಿ ಸ್ಥಾಪಿಸಲಾದ 4,000 ಸೌರಶಕ್ತಿ ಮಿನಿ ಗ್ರಿಡ್‌ಗಳಲ್ಲಿ 3,300 ಗ್ರಿಡ್‌ಗಳು ಸರಕಾರಿ ಒಡೆತನದಲ್ಲಿವೆ. ಆದರೆ ಸರಕಾರಿ ಒಡೆತನದ ಗ್ರಿಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶೇ.5ರಷ್ಟು ಮಾತ್ರ.
ಇದು ರಾಕ್‌ಫೆಲ್ಲರ್ ಫೌಂಡೇಶನ್‌ನ ಅಂಗಸಂಸ್ಥೆಯಾಗಿರುವ ಸ್ಮಾರ್ಟ್ ಪವರ್ ಇಂಡಿಯಾ ಕೊಟ್ಟಿರುವ ಅಂಕಿಅಂಶ. ‘ದಿ ವಾಶಿಂಗ್ಟನ್ ಪೋಸ್ಟ್’ ಇದನ್ನು ಪ್ರಕಟಿಸಿದೆ.
ಮೋದಿ ಸರಕಾರದ ರಾಜಕೀಯ ಪ್ರಚಾರದಲ್ಲಿ ಸೌರಶಕ್ತಿ ಮತ್ತು ಭಾರತ ವಿಶ್ವವನ್ನು ಸೋಲಿಸುವ ವಿಷಯ. ಆದರೆ ಹಾಗೆ ಅವರು ಯಾವ ಸೌರಶಕ್ತಿ ವಿದ್ಯುತ್ ಬಗ್ಗೆ ಕೊಚ್ಚಿಕೊಂಡಿದ್ದರೋ ಅದೆಲ್ಲ ವಿಫಲವಾಗಿ ಬಿದ್ದಿದೆ. ಭಾರತದಲ್ಲಿನ ಇದರ ವೈಫಲ್ಯ ಪ್ರಪಂಚದ ಇತರ ದೇಶಗಳಿಗೂ ಎಚ್ಚರಿಕೆಯ ನಿದರ್ಶನವಾಗಿ ಕಾಣಿಸತೊಡಗಿದೆ ಎಂದು ವರದಿ ಹೇಳುತ್ತದೆ.
2022ರ ಅಕ್ಟೋಬರ್‌ನಲ್ಲಿ ತಮ್ಮ ಮನ್ ಕಿ ಬಾತ್‌ನ 94ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಸೌರಶಕ್ತಿಯ ಕುರಿತು ಮಾತನಾಡಿದ್ದರು. ಆಧುನಿಕ ವಿಜ್ಞಾನದೊಂದಿಗೆ ಸಾಂಪ್ರದಾಯಿಕ ಅನುಭವವನ್ನು ಜೋಡಿಸಿ, ಭಾರತ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದಿದ್ದರು. ಸೌರಶಕ್ತಿ ಭಾರತದಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಪರಿವರ್ತಿಸಿದೆ ಎಂದೂ ಹೇಳಿದ್ದರು.
ಕಳೆದ ವರ್ಷ ಗುಜರಾತ್‌ನ ಮೊಧೇರಾ ಗ್ರಾಮವನ್ನು ದೇಶದ ಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ಗ್ರಾಮ ಎಂದು ಮೋದಿ ಘೋಷಿಸಿದ್ದರು. ಮೊಧೇರಾದ ಮನೆಗಳ ಮೇಲೆ 1,000ಕ್ಕೂ ಹೆಚ್ಚು ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಗ್ರಾಮಸ್ಥರಿಗಾಗಿ ಹಗಲಿರುಳೂ ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದು ಗುಜರಾತ್ ಸರಕಾರ ಹೇಳಿತ್ತು. ಪುಕ್ಕಟೆಯಾಗಿ ಗ್ರಾಮಸ್ಥರಿಗೆ ಸೋಲಾರ್ ವಿದ್ಯುತ್ ನೀಡುವುದಾಗಿಯೂ ಹೇಳಲಾಗಿತ್ತು.
ಆದರೆ ಸೌರಗ್ರಾಮಗಳ ದುರ್ಗತಿ ಎಂಥದು ಎಂಬುದನ್ನು ವಾಶಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ಹೇಳುತ್ತದೆ. ಬಿಹಾರ 2014ರಲ್ಲಿ ಘೋಷಿಸಿದ್ದ ಮೊದಲ ಸೌರ ಗ್ರಾಮ, ಏಳು ವರ್ಷಗಳ ಬಳಿಕ ಏನಾಗಿದೆ? ಸೋಲಾರ್ ವಿದ್ಯುತ್ ಕೇಂದ್ರ ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿದೆ ಎಂದು ವರದಿ ಹೇಳುತ್ತದೆ. ಬಿಹಾರದ ಸಂಶೋಧಕರಾದ ಅವಿರಾಮ್ ಶರ್ಮಾ ಹೇಳುವಂತೆ, ಗ್ರಾಮದ ಅರ್ಧದಷ್ಟು ಸೌರ ಸಂಪರ್ಕಗಳು ಎರಡೇ ವರ್ಷಗಳಲ್ಲಿ ನಿಂತುಹೋದವು.
ಈ ಗ್ರಿಡ್‌ಗಳ ಮೇಲೆ ಹಾಕಿದ್ದ ಹಣವೆಲ್ಲ ದಂಡವಾಗಿದೆ. ತಂತ್ರಜ್ಞಾನ ಕೆಲಸ ಮಾಡುತ್ತಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಅವರು ಇದನ್ನು ಸಾರ್ವಜನಿಕ ಹಣದ ವ್ಯರ್ಥ ಖರ್ಚು ಎಂದಿದ್ದಾರೆ ಮಾತ್ರವಲ್ಲ, ತಂತ್ರಜ್ಞಾನವನ್ನು ಸರಿಯಾಗಿ ನಿರ್ವಹಿಸದ ಕಾರಣ ಎಲ್ಲ ಹಾಳಾಗಿದೆ ಎಂದು ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿಯೂ ಗ್ರಾಮಸ್ಥರು ತಮಗೆ ನಿಜವಾದ ವಿದ್ಯುತ್ ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಸುಂದರ್‌ಬನ್ ಅಂಥ ಕಡೆಯೂ ಸೌರಶಕ್ತಿ ಗ್ರಿಡ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಕಾರಣ ಬ್ಯಾಟರಿಗಳನ್ನು ಬದಲಾಯಿಸಬೇಕಾದಾಗ ಉಂಟಾದ ತೊಂದರೆಗಳು ಎಂದು ತಜ್ಞರು ಹೇಳುತ್ತಾರೆ.
ವಾಶಿಂಗ್ಟನ್ ಪೋಸ್ಟ್ ಪ್ರಕಾರ, ಜಾರ್ಖಂಡ್‌ನಲ್ಲಿರುವ 200ಕ್ಕೂ ಹೆಚ್ಚು ಮಿನಿ ಗ್ರಿಡ್‌ಗಳಲ್ಲಿ ಕನಿಷ್ಠ ಶೇ.90ರಷ್ಟು ಕಾರ್ಯನಿರ್ವಹಿಸುತ್ತಿಲ್ಲ.
ಅಲ್ಲಿ ನಿರ್ವಹಣೆಯಲ್ಲಿ ಸಮಸ್ಯೆಗಳಿವೆ. ಇದು ಈ ಗ್ರಿಡ್‌ಗಳ ಬಗೆಗಿನ ಜನರ ನಂಬಿಕೆಯನ್ನು ಮತ್ತಷ್ಟು ಕಡಿಮೆ ಮಾಡಿದೆ. ಪತ್ರಿಕೆಯ ಪ್ರಕಾರ ಸ್ಥಳೀಯರು ಅವರನ್ನು ನಕಲಿ ಗ್ರಿಡ್ ಎಂದು ಕರೆಯಲು ಶುರುಮಾಡಿದ್ದಾರೆ.
ಬ್ಯಾಟರಿಗಳ ವಿಲೇವಾರಿಯದ್ದೇ ದೊಡ್ಡ ಸಮಸ್ಯೆಯೆಂಬ ವರದಿಗಳಿವೆ. ಅವುಗಳ ವಿಲೇವಾರಿ ಅಸುರಕ್ಷಿತ ಎನ್ನಲಾಗುತ್ತದೆ. ಏಕೆಂದರೆ ಅವುಗಳನ್ನು ಎಸೆದುಬಿಡುವುದರಿಂದ ವಿಷಕಾರಿ ವಸ್ತುಗಳು ಭೂಮಿಯೊಳಗೆ ಸೇರಿಕೊಳ್ಳಬಹುದು ಎನ್ನಲಾಗುತ್ತದೆ.
ನೆದರ್‌ಲ್ಯಾಂಡ್ಸ್, ಉಗಾಂಡಾ ಮತ್ತು ನೈಜೀರಿಯಾಗಳು ಸೌರ ಸ್ಥಾವರಗಳ ನಿರ್ವಹಣೆಯಲ್ಲಿ ಈಗಾಗಲೇ ತೊಂದರೆಗೆ ಸಿಲುಕಿವೆ. ಇದರಿಂದಲಾದರೂ ಪಾಠ ಕಲಿಯಬೇಕಿದ್ದ ಸರಕಾರ ಸುಮ್ಮನೆ ಬಡಾಯಿ ಕೊಚ್ಚುತ್ತ ಜನರ ಹಣವನ್ನು ಹಾಳು ಮಾಡುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
(ಆಧಾರ: thewire.in)