ದ್ವೇಷ ರಾಜಕಾರಣವೂ ಸಮಾನತೆಯ ಆಶಯವೂ
ದ್ವೇಷ ರಾಜಕಾರಣವನ್ನು ತಡೆಗಟ್ಟಲು ಭಾರತದ ಸರ್ವೋಚ್ಚ ನ್ಯಾಯಾಲಯವೇ ಆದೇಶ ನೀಡಿದ್ದರೂ, 2024ರ ಚುನಾವಣೆ ಗಳಲ್ಲಿ ದ್ವೇಷಾಸೂಯೆಯ ಛಾಯೆ ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಇದೆ. ಆಡಳಿತ ನಡೆಸಿರುವ ಹಾಗೂ ಆಡಳಿತಾರೂಢ ಸರಕಾರಗಳು ತಮ್ಮ ಅಧಿಕಾರಾವಧಿಯ ಸಾಧನೆಗಳನ್ನು ಮತದಾರರ ಮುಂದಿಡುವು ದಕ್ಕಿಂತಲೂ ಹೆಚ್ಚಾಗಿ, ಸಮಾಜದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವಂತಹ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಸಾಮಗ್ರಿಯಾಗಿ ಬಳಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ರಾಜಕೀಯ ಪಕ್ಷಗಳಿಗೆ ತಮ್ಮ ಆಡಳಿತಾವಧಿಯ ವೈಫಲ್ಯಗಳನ್ನು ಮರೆಮಾಚಲು, ಸೈದ್ಧಾಂತಿಕ ಕೊರತೆಯನ್ನು ಮತ್ತು ಕಳಪೆ ಸಾಧನೆಯನ್ನು ಮರೆಮಾಚಲು ಭಾವನಾತ್ಮಕ ವಿಚಾರಗಳು ಪ್ರಬಲ ರಕ್ಷಾ ಕವಚಗಳಾಗಿ ಕಾಣುತ್ತವೆ. ಅನ್ಯಮತ ದ್ವೇಷ ಮತ್ತು ಮತೀಯ ರಾಜಕಾರಣವನ್ನೇ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿ ಈ ಚುನಾವಣೆಗಳಲ್ಲಿ ಇಂತಹುದೇ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಹತ್ತು ವರ್ಷದ ಆಳ್ವಿಕೆಯಲ್ಲಿ ಜಿಡಿಪಿ ಹೆಚ್ಚಳ, ಕಾರ್ಪೊರೇಟ್‌ಉದ್ಯಮದ ಬೆಳವಣಿಗೆ ಮತ್ತು ಔದ್ಯಮಿಕ ವಲಯದ ಒಟ್ಟಾರೆ ಪ್ರಗತಿಯನ್ನು ಹೊರತುಪಡಿಸಿ ತಳಮಟ್ಟದಲ್ಲಿ ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಯಾವುದೇ ಸಾಧನೆ ತೋರಿಸಲು ವಿಫಲವಾಗಿರುವ ಬಿಜೆಪಿ ತನ್ನ ಜಾಹೀರಾತುಗಳಲ್ಲಿ, ನಾಯಕರ ಭಾಷಣಗಳಲ್ಲಿ ಈ ಹತಾಶ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಮತದಾರರನ್ನು ಆಕರ್ಷಿಸಲು ಜನಕಲ್ಯಾಣ ಯೋಜನೆಗಳು ಮತ್ತು ಗ್ಯಾರಂಟಿಗಳನ್ನು ಘೋಷಿಸಲಾಗಿದ್ದರೂ, ತಮ್ಮ ಜೀವನ ಹಾಗೂ ಜೀವನೋಪಾಯದ ಹಾದಿಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿರುವ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಜನಸಮುದಾಯಗಳು ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಲೇ ಇದ್ದಾರೆ. ಲೋಕಸಭಾ ಚುನಾವಣೆಗಳ ಮೊದಲ ಹಂತದ ಮತದಾನದ ನಂತರ ಉತ್ತರ ಭಾರತದಲ್ಲೂ ಮೋದಿ ಅಲೆ ದುರ್ಬಲವಾಗಿರುವುದನ್ನು ವಿಶ್ಲೇಷಕರು ಗುರುತಿಸುತ್ತಿದ್ದಂತೆ ಬಿಜೆಪಿ ಪುನಃ ತನ್ನ ಭಾವನಾತ್ಮಕ ರಾಜಕಾರಣವನ್ನು ಮುನ್ನೆಲೆಗೆ ತಂದಿದೆ.
ದ್ವೇಷಾಸೂಯೆಗಳ ಚುನಾವಣಾ ಆಯಾಮ
ಜಲೋರ್ ಮತ್ತು ಬನ್ಸ್‌ವಾರಾ ಕ್ಷೇತ್ರದ ಪ್ರಚಾರದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಜನರ ಭೂಮಿ, ಚಿನ್ನ ಮತ್ತಿತರ ಮೌಲ್ಯಯುತ ಸಂಪತ್ತನ್ನು ಮುಸ್ಲಿಮರಿಗೆ ಹಂಚಿಬಿಡುತ್ತದೆ ಎಂದು ಹೇಳಿರುವುದು ಭಾವನಾತ್ಮಕ-ದ್ವೇಷ ರಾಜಕಾರಣದ ಸಂಕೇತವಾಗಿದೆ. ಇತ್ತೀಚಿನ ಒಂದು ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ನಾಯಕ ರಾಹುಲ್ ಗಾಂಧಿ ‘‘ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ನಡೆಸುವುದೇ ಅಲ್ಲದೆ ದೇಶದ ಜನತೆಯಲ್ಲಿ ಸಂಪತ್ತಿನ ವಿತರಣೆಯನ್ನು ಪರಾಮರ್ಶಿಸುವ ಸಲುವಾಗಿ ವ್ಯಕ್ತಿಗತ-ಸಾಂಸ್ಥಿಕ ನೆಲೆಯಲ್ಲಿ ಆರ್ಥಿಕ ಸಮೀಕ್ಷೆ ನಡೆಸುತ್ತೇವೆ ’’ ಎಂದು ಹೇಳಿದ್ದರು. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಈ ದೇಶದ ಸಂಪನ್ಮೂಲಗಳ ಮೇಲೆ ದಲಿತರಿಗೆ, ಆದಿವಾಸಿಗಳಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯದ ಹಕ್ಕಿರುತ್ತದೆ ಎಂದು ಹೇಳಿದ್ದನ್ನು ತಿರುಚಿ, ಕಾಂಗ್ರೆಸ್‌ಜನರ ಆಸ್ತಿಯನ್ನು ಅಲ್ಪಸಂಖ್ಯಾತರಿಗೆ ಹಂಚಿಬಿಡುತ್ತದೆ ಎಂದು ಹೇಳುವುದು ರೋಚಕವಾಗಿ ಕಂಡರೂ, ಸಮರ್ಥನೀಯವಲ್ಲ.
ಈ ಎರಡೂ ಹೇಳಿಕೆಗಳನ್ನು ತಮ್ಮದೇ ಆದ ಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸುವ ಮೂಲಕ ಪ್ರಧಾನಿ ಮೋದಿ ‘‘ದೇಶದ ಆಸ್ತಿ-ಸಂಪತ್ತನ್ನು ಹೆಚ್ಚು ಮಕ್ಕಳು ಹೊಂದಿರುವವರಿಗೆ, ನುಸುಳು ಕೋರರಿಗೆ ವಿತರಿಸಲಾಗುತ್ತದೆ, ನೀವು ಕಷ್ಟಪಟ್ಟು ದುಡಿದ ಹಣವನ್ನು, ಆಸ್ತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ವಿತರಿಸಲಾಗುತ್ತದೆ’’ ಎಂದು ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಳಕೆಯಲ್ಲಿರುವ ‘ಅರ್ಬನ್‌ನಕ್ಸಲ್’, ‘ತುಕುಡೆ ತುಕುಡೆ ಗ್ಯಾಂಗ್’ ಮುಂತಾದ ಪದಗಳಿಗೆ ಸ್ಪಷ್ಟವಾದ ವ್ಯಾಖ್ಯಾನವನ್ನು ಈವರೆಗೂ ನೀಡಿಲ್ಲವಾದರೂ, ಈ ಎರಡೂ ಪದಗಳನ್ನು ಪದೇ ಪದೇ ಬಳಸುವ ಮೂಲಕ ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿಗಳನ್ನು, ಸಾಮಾಜಿಕ ಕಾರ್ಯಕರ್ತರನ್ನು, ಹೋರಾಟಗಾರರನ್ನು ಜನಸಾಮಾನ್ಯರ ನಡುವೆ ವಿಲನ್‌ಗಳಾಗಿ ಬಿಂಬಿಸಲು ಯತ್ನಿಸುತ್ತಲೇ ಇದೆ. ಇದೇ ಪ್ರಯತ್ನವನ್ನು ಮುಂದುವರಿಸುತ್ತಾ, ಮುಸ್ಲಿಮ್ ಸಮುದಾಯದ ಬಗ್ಗೆ ದ್ವೇಷ ಹುಟ್ಟಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ಬಿಜೆಪಿಯ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ.
ಈ ಪ್ರಚಾರ ವೈಖರಿಯ ಮತ್ತೊಂದು ವಿಕೃತ ಆಯಾಮವನ್ನು ಕರ್ನಾಟಕದ ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಗಮನಿಸಬಹುದು. ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಹಿಮ್ಮೆಟ್ಟಿಸುವ ಮಹತ್ವಾಕಾಂಕ್ಷೆ ಸಹಜವಾಗಿಯೇ ಬಿಜೆಪಿ ಮತ್ತು ಅದರ ನಾಯಕರಿಗೆ ಇರುತ್ತದೆ. ಇದು ತಪ್ಪೇನಲ್ಲ ಆದರೆ ಇದಕ್ಕಾಗಿ ಆಡಳಿತಾರೂಢ ಕಾಂಗ್ರೆಸ್‌ಸರಕಾರ ವೈಫಲ್ಯಗಳನ್ನು, ಜನಸಾಮಾನ್ಯರು ಎದುರಿಸುತ್ತಿರುವ ಕೊರತೆಗಳನ್ನು ಜನರ ಮುಂದಿಡುವುದು ವಿವೇಕಯುತ ಕ್ರಮ. ಅಥವಾ ತಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಕೈಗೊಂಡ ಆರ್ಥಿಕ ಕಾರ್ಯಕ್ರಮಗಳು, ಯೋಜನೆಗಳು ಹೇಗೆ ಜನತೆಗೆ ಸಹಕಾರಿಯಾಗಿವೆ, ಫಲಕಾರಿಯಾಗಿವೆ ಎಂದು ಬಿಂಬಿಸುವುದು ಇನ್ನೂ ವಿವೇಕಯುತ ಕ್ರಮ. ಈ ಸಕಾರಾತ್ಮಕ ಅಭಿಪ್ರಾಯ ಜನತೆಯಲ್ಲಿದ್ದಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರಲಿಲ್ಲ. ತನ್ನ ವೈಫಲ್ಯಗಳನ್ನೂ ಒಪ್ಪಿಕೊಳ್ಳದೆ ಹಾಲಿ ಸರಕಾರದ ವೈಫಲ್ಯಗಳನ್ನೂ ಗುರುತಿಸಲಾಗದೆ ರಾಜ್ಯ ಬಿಜೆಪಿ ಮತ್ತೊಮ್ಮೆ ಮುಸ್ಲಿಮ್ ದ್ವೇಷದತ್ತಲೇ ಹೊರಳಿರುವುದು ಪಕ್ಷದ ಬೌದ್ಧಿಕ ದಿವಾಳಿತನವನ್ನು ತೋರುತ್ತದೆ.
ವಿಷಯ ದಾರಿದ್ರ್ಯ ಇರುವ ಒಂದು ಪಕ್ಷ ಮಾತ್ರವೇ ‘ಕಾಂಗ್ರೆಸ್ ಡೇಂಜರ್’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಜಾಹೀರಾತನ್ನು ಸಮರ್ಥಿಸಿಕೊಳ್ಳಲು ಸಾಧ್ಯ. ಕುಕ್ಕರ್ ಬಾಂಬ್‌ಸ್ಫೋಟ, ರಾಮೇಶ್ವರಂ ಕೆಫೆ ಬಾಂಬ್‌ಸ್ಫೋಟ, ಹುಬ್ಬಳ್ಳಿಯ ನೇಹಾ ಹತ್ಯೆ, ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆಗಳು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಇವೇ ಮುಂತಾದ ವಿಚಾರಗಳನ್ನೇ ಪ್ರಧಾನವಾಗಿ ಬಿಂಬಿಸಲಾಗಿರುವ ಈ ಜಾಹೀರಾತು ಜನತೆಯ ಮುಂದೆ ಅರ್ಧಸತ್ಯಗಳನ್ನಷ್ಟೇ ಇಡುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಡಬಲ್ ಇಂಜಿನ್ ಸರಕಾರ ಹೊಂದಿದ್ದರೂ ಕಾವೇರಿ ವಿವಾದದ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ, ಕಾಂಗ್ರೆಸ್ ಪಕ್ಷವೊಂದನ್ನೇ ದೋಷಿಯಾಗಿ ಬಿಂಬಿಸುವುದು ಠಕ್ಕುತನದ ಪರಮಾವಧಿ ಎನ್ನಬಹುದು. ಹುಬ್ಬಳ್ಳಿ ಪ್ರಕರಣವನ್ನು ‘ಲವ್‌ಜಿಹಾದ್’(ಈ ಪದವೂ ಅರ್ಥಹೀನ ಎಂದು ನ್ಯಾಯಾಲಯಗಳೇ ಹೇಳಿದ್ದರೂ ಮುಸ್ಲಿಮ್ ದ್ವೇಷವನ್ನು ಹರಡಲು ಅವ್ಯಾಹತವಾಗಿ ಬಳಸಲಾಗುತ್ತಿದೆ) ಎಂದು ಬಿಂಬಿಸುವ ಬಿಜೆಪಿಗೆ ತನ್ನ ಆಡಳಿತಾವಧಿಯಲ್ಲಿ ನಡೆದ ಹಲವು ಪ್ರಸಂಗಗಳಲ್ಲಿ ಮುಸ್ಲಿಮ್ ಮಹಿಳೆ ಹಿಂದೂ ಯುವಕರ ಹೀನ ಕೃತ್ಯಕ್ಕೆ ಬಲಿಯಾಗಿರುವುದು ನೆನಪಿರಬೇಕಲ್ಲವೇ?
ಸಾಮಾಜಿಕ ವ್ಯಾಧಿಗೆ ರಾಜಕೀಯ ಆಯಾಮ
ಅತ್ಯಾಚಾರ, ಕೊಲೆ, ಗುಂಪು ಥಳಿತ, ಸಾಮೂಹಿಕ ಅತ್ಯಾಚಾರ, ಅಸ್ಪಶ್ಯತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಸಾಮಾಜಿಕ ವಿದ್ಯಮಾನಗಳನ್ನು ಸಾಮಾಜಿಕ ವ್ಯಾಧಿ ಎಂದು ಪರಿಗಣಿಸಿ ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಸೂಚಿಸುವುದು ಯಾವುದೇ ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷದ ನೈತಿಕ ಕರ್ತವ್ಯ. ಈ ಘಟನೆಗಳಂತೆಯೇ, ಭಯೋತ್ಪಾದಕ, ಉಗ್ರಗಾಮಿ ಚಟುವಟಿಕೆಗಳು ಸಹ ಸಾಮಾಜಿಕ ಸ್ಥಿತ್ಯಂತರಗಳ ನಡುವೆಯೇ ಸಂಭವಿಸುತ್ತವೆ. ಇದ್ಯಾವುದೂ ಶೂನ್ಯದಲ್ಲಿ ಸಂಭವಿಸುವ ಅಥವಾ ಸೃಷ್ಟಿಸಬಹುದಾದ ವಿದ್ಯಮಾನಗಳಲ್ಲ. ಇಂತಹ ಸಮಾಜಘಾತುಕತೆಯನ್ನು ಗುರುತಿಸಿ, ನಾಗರಿಕರ ನಡುವೆ ಇರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳ ಮೇಲಿರುತ್ತದೆ. ವಿರೋಧ ಪಕ್ಷವಾಗಿದ್ದ ಮಾತ್ರಕ್ಕೆ ಇಂತಹ ಘಟನೆಗಳಿಗೆ ರಾಜಕೀಯ ಬಣ್ಣ ನೀಡಬೇಕೆಂಬ ನಿಯಮವೇನೂ ಇರುವುದಿಲ್ಲ.
ಆದರೆ ಸಮಾಜವನ್ನು ಧರ್ಮ, ಜಾತಿಗಳ ನೆಲೆಯಲ್ಲಿ ವಿಘಟಿಸುತ್ತಲೇ ತಮ್ಮ ಮತಬ್ಯಾಂಕುಗಳನ್ನು ಕ್ರೋಡೀಕರಿಸುವ ಒಂದು ವಿಕೃತ ರಾಜಕಾರಣಕ್ಕೆ ಮುಕ್ತವಾಗಿ ತೆರೆದುಕೊಂಡಿರುವ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಈ ವಿವೇಕ ಮತ್ತು ವಿವೇಚನೆ ಇಲ್ಲವಾಗಿರುವುದು ಢಾಳಾಗಿ ಕಾಣುತ್ತಲೇ ಇದೆ. ಬಿಜೆಪಿ ನೀಡಿರುವ ‘ಕಾಂಗ್ರೆಸ್ ಡೇಂಜರ್’ ಜಾಹೀರಾತು ಇದನ್ನು ಮತ್ತಷ್ಟು ಖಚಿತಪಡಿಸುವಂತಿದೆ. ಪಕ್ಷ ರಾಜಕಾರಣದಲ್ಲಿ ವಿರೋಧಿ ಬಣ ಅಥವಾ ಪಕ್ಷದ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನವನ್ನು ಹೆಚ್ಚಿಸಲು ಅಗತ್ಯವಾದ ಪ್ರಚಾರ ಸಾಮಗ್ರಿಗಳು ಹೇರಳವಾಗಿ ಸಿಗುತ್ತವೆ. ಇವುಗಳನ್ನು ಬಳಸುವ ಬದಲು, ಒಂದು ಸಮುದಾಯದ ಜನರನ್ನೇ ದುಷ್ಟರನ್ನಾಗಿ ಬಿಂಬಿಸುವ ಪ್ರಚೋದನಕಾರಿ ಸಂದೇಶ ರವಾನಿಸುವುದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುತ್ತದೆ. ಸಮಾಜಘಾತುಕ ಘಟನೆಗಳನ್ನು ಸಮುದಾಯಗಳ ನೆಲೆಯಲ್ಲಿ ಗುರುತಿಸುವ ಅಥವಾ ನಿರ್ದಿಷ್ಟ ಸಮುದಾಯಗಳ ನಡುವೆ ಮಾತ್ರ ವಿಧ್ವಂಸಕ ಘಟನೆಗಳನ್ನು ಗುರುತಿಸುವ ವಿಧಾನವು ಇಡೀ ಸಮಾಜವನ್ನು ಮತ್ತಷ್ಟು ವಿಘಟನೆಗೊಳಪಡಿಸುತ್ತದೆ.
ಈ ಅಪಾಯವನ್ನು ಒಂದು ಜವಾಬ್ದಾರಿಯುತ ಪಕ್ಷವಾಗಿ ಬಿಜೆಪಿ ಅರಿತಿರಬೇಕು. ಅನ್ಯ ಪಕ್ಷಗಳೂ ಇದನ್ನು ಅರಿತಿರುವುದು ಅವಶ್ಯಕ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಅಭಿಪ್ರಾಯವೇ ಅಂತಿಮ, ಸಾಮಾನ್ಯ ಜನತೆಯೇ ಸಾರ್ವಭೌಮರು ಎಂದು ಸ್ವೀಕರಿಸುತ್ತೇವೆ. ಭಾರತದ ಸಂವಿಧಾನವೂ ಇದನ್ನೇ ದೃಢೀಕರಿಸುತ್ತದೆ. ಚುನಾವಣೆಯ ಗೆಲುವಿಗಾಗಿ ಈ ಸಾರ್ವಭೌಮ ಪ್ರಜೆಗಳ ನಡುವೆ ಭೇದಭಾವಗಳನ್ನು ಸೃಷ್ಟಿಸಿ-ಹೆಚ್ಚಿಸಿ, ದ್ವೇಷಾಸೂಯೆಗಳನ್ನು ಹರಡುವುದು ನಾಗರಿಕ ಲಕ್ಷಣವಲ್ಲ. ಚುನಾವಣೆಗಳಲ್ಲಿ ಗೆಲ್ಲಲೇಬೇಕೆಂಬ ಹಠ ಮತ್ತು ಅಧಿಕಾರ ರಾಜಕಾರಣ ಸೃಷ್ಟಿಸುವ ಹತಾಶೆ ಪಕ್ಷಗಳ ವಿವೇಕ ಮತ್ತು ವಿವೇಚನೆಗಳನ್ನು ಕಸಿದುಕೊಳ್ಳುತ್ತವೆ. ಹಾಗಾಗಿಯೇ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಜನಸಾಮಾನ್ಯರನ್ನು ಆಕರ್ಷಿಸಲು ಭಾವನಾತ್ಮಕ, ಪ್ರಚೋದನಕಾರಿ ವಿಷಯಗಳನ್ನು ಮುನ್ನೆಲೆಗೆ ತರಲಾಗುತ್ತದೆ. ತಮಿಳುನಾಡಿನಲ್ಲಿ ಸನಾತನ ಧರ್ಮ, ಉತ್ತರ ಪ್ರದೇಶದಲ್ಲಿ ಯದುವಂಶೀಯರ ಕೃಷ್ಣ ಭಕ್ತಿ, ಕರ್ನಾಟಕದ ಮೈಸೂರಿನಲ್ಲಿ ನಾಲ್ವಡಿ ಒಡೆಯರ್ ಅವರ ಸಾಧನೆಗಳು, ರಾಜಸ್ಥಾನದಲ್ಲಿ ಮಹಿಳೆಯರ ಮಂಗಳ ಸೂತ್ರ ಹೀಗೆ ತಳಮಟ್ಟದ ಸಮಾಜವನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಮತದಾರರನ್ನು ಭ್ರಮಾಧೀನರನ್ನಾಗಿಸುವ ಪ್ರಯತ್ನಗಳು ನಡೆಯುತ್ತವೆ. ಪ್ರಸಕ್ತ ಚುನಾವಣೆಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತಿದೆ.
ಆರ್ಥಿಕ ಅಸಮಾನತೆಯ ಸುತ್ತ
ಈ ನಡುವೆ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಪ್ರಧಾನಮಂತ್ರಿಯ ಸಲಹೆಗಾರರಾಗಿದ್ದ ಸ್ಯಾಮ್‌ಪಿಟ್ರೋಡಾ ವ್ಯಕ್ತಪಡಿಸಿರುವ ವೈಯುಕ್ತಿಕ ಅಭಿಪ್ರಾಯವು ಎಲ್ಲ ಬಂಡವಾಳಿಗ ಪಕ್ಷಗಳ ತಾತ್ವಿಕ ತಳಪಾಯವನ್ನೇ ಅಲುಗಾಡಿಸಿಬಿಟ್ಟಿದೆ. ಅಮೆರಿಕದ ಚಿಕಾಗೋದಲ್ಲಿ ತಮ್ಮ ಉಪನ್ಯಾಸವೊಂದರಲ್ಲಿ ಸ್ಯಾಮ್ ಪಿತ್ರೋಡಾ ಪಿತ್ರಾರ್ಜಿತ ಆಸ್ತಿಯ ಮೇಲೆ ಉತ್ತರಾಧಿಕಾರ ತೆರಿಗೆ ವಿಧಿಸುವ ಪದ್ಧತಿ ಅಮೆರಿಕ, ಯೂರೋಪ್ ದೇಶಗಳಲ್ಲಿದೆ ಎಂದಷ್ಟೇ ಹೇಳಿದ್ದಾರೆ. ಅವರು ಯಾವುದೇ ಸಲಹೆ ಅಥವಾ ನಿರ್ದೇಶನವನ್ನು ನೀಡಿಲ್ಲ.
ಆದರೆ ಬಂಡವಾಳಶಾಹಿ ಕಾರ್ಪೊರೇಟ್ ಹಿತಾಸಕ್ತಿಗೆ ಧಕ್ಕೆ ಉಂಟಾಗುವಂತಹ ಯಾವುದೇ ಕಾರ್ಯಯೋಜನೆಯ ಬಗ್ಗೆ ಕ್ಷಣಮಾತ್ರವೂ ಯೋಚಿಸದ ಭಾರತದ ಮುಖ್ಯವಾಹಿನಿ ಪಕ್ಷಗಳಲ್ಲಿ ಪಿತ್ರೋಡಾ ಅವರ ಅಭಿಪ್ರಾಯ ತಲ್ಲಣ ಸೃಷ್ಟಿಸಿದೆ. ಈಗಾಗಲೇ ಸಂಪತ್ತಿನ ತೆರಿಗೆಯನ್ನು ರದ್ದುಪಡಿಸುವ ಮೂಲಕ ದೇಶದ ಶ್ರೀಮಂತ ವರ್ಗಗಳ ಸಮೃದ್ಧಿಗೆ ಮುಕ್ತ ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಸರಕಾರಕ್ಕೆ ಈ ಅಭಿಪ್ರಾಯ ‘ಜನವಿರೋಧಿ’ಯಾಗಿ ಕಾಣುವುದರಲ್ಲಿ ಅಚ್ಚರಿಯೇನಿಲ್ಲ.
ಕೋಟ್ಯಂತರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯ ವಾರಸುದಾರರಾಗಿ, ಅದರಿಂದ ಉತ್ಪಾದನೆಯಾಗುವ ಸಂಪತ್ತು, ಸಂಪನ್ಮೂಲ ಮತ್ತು ಆದಾಯದ ಫಲಾನುಭವಿಗಳಾಗಿ ತಮ್ಮ ಔದ್ಯಮಿಕ-ಔದ್ಯೋಗಿಕ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಲೇ ಇರುವ ಭಾರತದ ಶ್ರೀಮಂತ ವರ್ಗಕ್ಕೆ, ಈ ವರ್ಗವನ್ನು ಪೋಷಿಸುವ ಆಪ್ತ ಬಂಡವಾಳಶಾಹಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಇಂತಹ ಒಂದು ಆಲೋಚನೆಯೇ ಎದೆ ನಡುಗಿಸುತ್ತದೆ. ಆದರೆ ತಾನು ದುಡಿದು, ಉಳಿತಾಯ ಮಾಡಿ, ಪಡೆದುಕೊಳ್ಳುವ ಸಣ್ಣ ಪ್ರಮಾಣದ ಆಸ್ತಿಯ ಮೇಲೂ ತೆರಿಗೆ ಪಾವತಿಸುವ ಶ್ರೀಸಾಮಾನ್ಯನ ನೆಲೆಯಲ್ಲಿ ನಿಂತು ನೋಡಿದಾಗ ಸ್ಯಾಮ್ ಪಿತ್ರೋಡಾ ಅವರ ಅಭಿಪ್ರಾಯ ಅಪ್ಯಾಯಮಾನವಾಗಿ ಕಾಣುತ್ತದೆ. ಪ್ರತಿವರ್ಷ ತಮ್ಮ ದುಡಿಮೆಯ ಹಣದಿಂದ ಕೂಡಿಟ್ಟ ಚರಾಸ್ತಿ-ಮಾಡಿಟ್ಟ ಸ್ಥಿರಾಸ್ತಿಯ ಮೇಲೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಭಾರತದ ಮಧ್ಯಮ ವರ್ಗಗಳಿಗೂ ಸಂಪತ್ತಿನ ತೆರಿಗೆಯಲ್ಲಿ ವಿನಾಯಿತಿ ನೀಡಿರುವುದು ತಪ್ಪಾಗಿ ಕಾಣುವುದಿಲ್ಲ. ಆದರೆ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಬಹುಸಂಖ್ಯಾತ ಜನತೆಗೆ ಇದು ಗಂಭೀರ ಪ್ರಶ್ನೆಯಾಗಿ ಕಾಡಬೇಕಿದೆ.
ಸ್ಯಾಮ್ ಪಿತ್ರೋಡಾ ಅವರ ಒಂದು ವೈಯುಕ್ತಿಕ ಅಭಿಪ್ರಾಯ ಭಾರತದ ಶ್ರೀಮಂತರ ಭದ್ರಕೋಟೆಯ ಬುನಾದಿಯನ್ನು ಅಲುಗಾಡಿಸಿರುವುದೇ ಅಲ್ಲದೆ, ಬಂಡವಾಳಿಗ ಪಕ್ಷಗಳ ಬೌದ್ಧಿಕ ತಳಹದಿಯೂ ಕಂಪಿಸುವಂತೆ ಮಾಡಿದೆ. ಭಾರತ ಮುಂದಿನ 25 ವರ್ಷಗಳಲ್ಲಿ ಶ್ರೀಮಂತ-ಸಂಪದ್ಭರಿತ ದೇಶ ಆಗುವುದಕ್ಕೂ, ಶ್ರೀಮಂತರ-ಸಂಪತ್ತಿನ ಒಡೆಯರ ದೇಶ ಆಗುವುದಕ್ಕೂ ಇರುವ ವ್ಯತ್ಯಾಸವನ್ನು ಶ್ರೀಸಾಮಾನ್ಯನಿಗೆ ಮನದಟ್ಟು ಮಾಡುವುದು ಎಡಪಕ್ಷಗಳ, ತಳಸಮುದಾಯವನ್ನು ಪ್ರತಿನಿಧಿಸುವ ದಲಿತ ಸಂಘಟನೆಗಳ, ಮಹಿಳಾ ಹೋರಾಟಗಳ ಆದ್ಯತೆಯಾಗಬೇಕಿದೆ. ಇದು ಅಂಬೇಡ್ಕರ್ ಆಶಿಸಿದ ಸಮ ಸಮಾಜ ಮತ್ತು ಸಂವಿಧಾನ ಆಶಿಸುವ ಸಮಾನತೆಯನ್ನು ಸಾಕಾರಗೊಳಿಸಲು ಅಗತ್ಯವಾಗಿ ಅನುಸರಿಸಬೇಕಾದ ಮಾರ್ಗ. ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭೂಮಿಯ ರಾಷ್ಟ್ರೀಕರಣ ಮತ್ತು ಎಲ್ಲ ಸಂಪನ್ಮೂಲಗಳ ರಾಷ್ಟ್ರೀಕರಣಕ್ಕಾಗಿ ಆಗ್ರಹಿಸಿದ್ದನ್ನು ಸ್ಮರಿಸಬೇಕಿದೆ. ಸ್ಯಾಮ್ ಪಿತ್ರೋಡಾ ಅವರ ಪ್ರತಿಪಾದನೆ ಇದೇ ಅಭಿಪ್ರಾಯದ ಮತ್ತೊಂದು ಆಯಾಮವಾಗಿದೆ.
2024ರ ಚುನಾವಣೆಗಳಲ್ಲಿ ಮತದಾರರ ಮುಂದಿರುವ ಪ್ರಶ್ನೆ ದ್ವೇಷ ರಾಜಕಾರಣಕ್ಕೆ ಕೊನೆ ಹಾಡುವುದು, ಅಸಮಾನತೆಯನ್ನು ಹೋಗಲಾಡಿಸುವುದು, ಸಮಾಜದಲ್ಲಿ ಬೇರೂರಿರುವ ಪಿತೃಪ್ರಧಾನತೆಯನ್ನು ತೊಡೆದುಹಾಕುವುದು ಹಾಗೂ ಎಲ್ಲಕ್ಕಿಂತಲೂ ಮುಖ್ಯವಾಗಿ ನವ ಉದಾರವಾದಿ ಬಂಡವಾಳಶಾಹಿಯ ಶೋಷಣೆಯ ವಿರುದ್ಧ ಧ್ವನಿ ಎತ್ತುವುದಾಗಿದೆ.