ಚುನಾವಣೆಗಳ ಹೊತ್ತಿಗಷ್ಟೇ ಮುನ್ನೆಲೆಗೆ ಬರುವ ಜನಸಾಮಾನ್ಯರ ಸಮಸ್ಯೆಗಳು
- ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ
ಐದು ರಾಜ್ಯಗಳಲ್ಲಿ - ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ಮತ್ತು ಮಿಜೋರಾಂ - ವಿಧಾನಸಭೆ ಚುನಾವಣೆಗಳು ನಡೆಯುತ್ತಿದ್ದು, ಮೊದಲ ಹಂತದಲ್ಲಿ ನವೆಂಬರ್ 7ರಂದು ಛತ್ತೀಸ್‌ಗಡದ 90 ಕ್ಷೇತ್ರಗಳಲ್ಲಿ 20ಕ್ಕೆ ಹಾಗೂ ಮಿಜೋರಾಂನಲ್ಲಿ ಚುನಾವಣೆ ನಡೆದಿದೆ.
ಮಿಜೋರಾಂ ನೆರೆಯ ಮಣಿಪುರದಲ್ಲಿ ಮೈತೈ ಮತ್ತು ಕುಕಿ-ಜೋ ಸಂಘರ್ಷದ ನಡುವೆಯೇ ಮಿಜೋರಾಂನಲ್ಲಿ ಚುನಾವಣೆ ನಡೆದಿದ್ದು, ಇದರ ಪರಿಣಾಮವನ್ನು ಮಿಜೋ ಜನರಲ್ಲಿಯೂ ಕಾಣಬಹುದು. ಅವರಲ್ಲಿ ಹಲವರು ಕುಕಿ ಬುಡಕಟ್ಟಿನೊಂದಿಗೆ ನಿಕಟ ಸಂಬಂಧ ಹೊಂದಿದವರಾಗಿದ್ದಾರೆ. ಇನ್ನು ಛತ್ತೀಸ್‌ಗಡದಲ್ಲಿ ಮತದಾನ ನಡೆದಿರುವ 20 ಕ್ಷೇತ್ರಗಳು ಆದಿವಾಸಿ ಪ್ರಾಬಲ್ಯದ ಬಸ್ತಾರ್ ಜಿಲ್ಲೆಗೆ ಸೇರಿದವುಗಳು.
ಮುಖ್ಯವಾಗಿ, ಚುನಾವಣೆ ಹೊತ್ತಿನಲ್ಲಿ ಮುನ್ನೆಲೆಗೆ ಬರುವುದು ಬಡವರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಸಂಬಂಧಿಸಿದ ಸಮಸ್ಯೆಗಳು. ಚುನಾವಣೆ ಬರುವವರೆಗೂ ರಾಜಕೀಯದವರಿಗೆ ಕಾಣಿಸದ ಬಡವರ ಸಮಸ್ಯೆಗಳು, ಚುನಾವಣೆ ಎದುರಾಗುತ್ತಿದ್ದಂತೆ ಕಾಣಿಸತೊಡಗುವುದು, ಪರಿಹರಿಸುವ ಭರವಸೆಗಳನ್ನು ಕೊಡುವುದು ಎಲ್ಲ ಸಾಮಾನ್ಯವಾಗಿ ನಡೆಯುವ ವಿದ್ಯಮಾನ. ಈಗಲೂ ಅಷ್ಟೆ, ಜನಸಾಮಾನ್ಯರ ಸಮಸ್ಯೆಗಳು ಹಿಂದೆಂದಿಗಿಂತಲೂ ಹೆಚ್ಚು ಮುನ್ನೆಲೆಗೆ ಬಂದಿವೆ.
ಎಲ್ಲಾ ಐದು ರಾಜ್ಯಗಳಾದ್ಯಂತ ಕಣದಲ್ಲಿರುವ ರಾಜಕೀಯ ಪಕ್ಷಗಳು, ಬಡವರ ಮತ್ತು ಸಾಮಾಜಿಕವಾಗಿ, ಆರ್ಥಿಕವಾಗಿ ಅಂಚಿನಲ್ಲಿರುವವರ ಮೇಲೆ ನೇರವಾಗಿ ಪರಿಣಾಮ ಬೀರುವ ಸಮಸ್ಯೆಗಳ ಸುತ್ತಲೇ ತಮ್ಮ ಪ್ರಚಾರವನ್ನು ಕೇಂದ್ರೀಕರಿಸಿವೆ.
ಈ ವರ್ಷದ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯು, ಬಡವರು ಹೇಗೆ ಚುನಾವಣಾ ಫಲಿತಾಂಶವನ್ನು ಪ್ರಭಾವಿಸಬಲ್ಲರು ಮತ್ತು ತಮಗೆ ಬೇಡದ ಸರಕಾರವನ್ನು ಕಿತ್ತೊಗೆದು ಬೇರೆಯದನ್ನು ಆರಿಸಿಕೊಳ್ಳಬಲ್ಲರು ಎಂಬುದನ್ನು ತೋರಿಸಿದೆ. ಭ್ರಷ್ಟ ಮತ್ತು ಬಡವರ ವಿರೋಧಿ ಆಡಳಿತ ಎಂದು ಅವರು ಭಾವಿಸಿದ್ದನ್ನು ಓಡಿಸಲು ಅವರು ಕಾಂಗ್ರೆಸನ್ನು ಒಗ್ಗಟ್ಟಿನಿಂದ ಕೈಹಿಡಿದರು. ಬೆಲೆ ಏರಿಕೆ, ವಿಶೇಷವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ, ಏನೇನೂ ಪ್ರಗತಿ ಕಂಡಿರದ ಸಮಾಜ ಕಲ್ಯಾಣ ಕಾರ್ಯಗಳು, ರಾಜ್ಯದಲ್ಲಿ ದುರ್ಬಲಗೊಂಡಿದ್ದ ಸಾರ್ವಜನಿಕ ವಿತರಣಾ ವ್ಯವಸ್ಥೆ ಮುಂತಾದ ವಿಚಾರವಾಗಿ ಗ್ರಾಮೀಣ ಭಾಗಗಳಲ್ಲಿ ರಾಜ್ಯಾದ್ಯಂತ ದೂರುಗಳಿದ್ದವು. ದೊಡ್ಡ ಉದ್ಯಮಗಳಿಗೆ ಮಾತ್ರ ಲಾಭದಾಯಕವಾಗುವ ಅಭಿವೃದ್ಧಿ ಕಾರ್ಯಗಳಲ್ಲಿನ ಗಮನಾರ್ಹ ಹೂಡಿಕೆ, ರಾಜ್ಯದ ಗ್ರಾಮೀಣ ಜನಸಂಖ್ಯೆಯ ಬಡತನದ ಹಿಂದಿನ ಪ್ರಮುಖ ಅಂಶವೆಂಬ ಆರೋಪಗಳಿದ್ದವು. ಇದೆಲ್ಲದರ ಜೊತೆಗೇ, ಪದೇ ಪದೇ ಸುದ್ದಿ ಮಾಡಿದ ಭ್ರಷ್ಟಾಚಾರ ಹಗರಣಗಳ ಸರಣಿ ಎದ್ದು ಕಾಣುವ ಹಾಗಿತ್ತು.
ಅಧಿಕಾರದಲ್ಲಿದ್ದ ಬಿಜೆಪಿ ಸರಕಾರವು ಬೆಲೆ ತೆರಬೇಕಾಯಿತು, ಆದರೆ ಅತಿದೊಡ್ಡ ವಿರೋಧ ಶಕ್ತಿಯಾಗಿ ಹೊರಹೊಮ್ಮಿದ ಕಾಂಗ್ರೆಸ್ ವಿಧಾನಸಭೆಯಲ್ಲಿ ಬಹುತೇಕ ಸಂಪೂರ್ಣ ಬಹುಮತವನ್ನು ದಾಖಲಿಸಿತು, ಜೆಡಿಎಸ್ ಅಂತೂ ಹತಾಶೆಗೊಳಗಾಗುವಂಥ ಸೋಲನ್ನು ಕಂಡಿತು.
ಈಗ ಐದು ವಿಭಿನ್ನ ರಾಜ್ಯಗಳಲ್ಲಿ ಹೊಸ ಸರಕಾರಗಳು ಬರುವುದರೊಂದಿಗೆ ವರ್ಷವು ಕೊನೆಗೊಳ್ಳಲಿದ್ದು, ಫಲಿತಾಂಶಗಳು ಮತ್ತೊಮ್ಮೆ ಬಡವರ ರಾಜಕೀಯ ಇಚ್ಛೆಯನ್ನು ಪ್ರತಿಬಿಂಬಿಸುತ್ತವೆ ಎಂಬುದು ನಿಜ.
ಮುಂದಿನ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸತತ ಮೂರನೇ ಅವಧಿಗೆ ಪ್ರಯತ್ನಿಸಲಿರುವುದರಿಂದ ಈ ಪಂಚರಾಜ್ಯ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ. ವಿಧಾನಸಭೆ ಚುನಾವಣೆಗಳು ರಾಷ್ಟ್ರದ ಮನಃಸ್ಥಿತಿಯನ್ನು ಪ್ರತಿಬಿಂಬಿಸಬೇಕಾಗಿಲ್ಲ ಎಂದು ವಿವಿಧ ಸಮೀಕ್ಷೆಗಳು ಸೂಚಿಸಿವೆ. ಲೋಕಸಭೆ ಚುನಾವಣೆಯ ಸ್ವರೂಪ ಮತ್ತು ಅಲ್ಲಿ ಮುಖ್ಯವಾಗುವ ಚುನಾವಣಾ ವಿಷಯಗಳೇ ಬೇರೆಯಾದರೂ, ವಿಧಾನಸಭೆಯ ಫಲಿತಾಂಶಗಳು ಕೇಸರಿ ಪಾಳಯ ಮತ್ತು ವಿರೋಧ ಶಕ್ತಿಗಳ ನಡುವಿನ ವಿಕಸನಗೊಳ್ಳುತ್ತಿರುವ, ಆದರೆ ಎದ್ದುಕಾಣುವ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ತೀಕ್ಷ್ಣಗೊಳಿಸುವುದರಿಂದ, ಅವು ಲೋಕಸಭೆ ಚುನಾವಣೆಯ ಮೇಲೆ ಈಗ ವಿಶ್ಲೇಷಕರು ಊಹಿಸಿರುವುದಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಬೀರುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಕಳೆದ ದಶಕದಲ್ಲಿ, ಮೋದಿ ನೇತೃತ್ವದ ಬಿಜೆಪಿಯು ಭಾರತದಲ್ಲಿ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಿಂದುತ್ವ-ಚಾಲಿತ ಸಾಂಸ್ಕೃತಿಕ ಪುನರುಜ್ಜೀವನದ ಸಾಂಕೇತಿಕ ಶಕ್ತಿಯಾಗಿ ಹೊರಹೊಮ್ಮಿದೆ. ಬಡವರ ಪರವಾಗಿ ಪ್ರಧಾನಿ ತೆಗೆದುಕೊಂಡ ಎಲ್ಲಾ ನಿರ್ಧಾರಗಳು - ಉಜ್ವಲಾ ಎಲ್‌ಪಿಜಿ ಯೋಜನೆ, ಪಿಎಂ ಆವಾಸ್ ಯೋಜನೆ ಅಥವಾ ಉಚಿತ ಪಡಿತರ ನೀಡುವ ಗರೀಬ್ ಕಲ್ಯಾಣ ಯೋಜನೆ - ಅವರ ಸರಕಾರದ ದೊಡ್ಡ ಮೂಲಸೌಕರ್ಯ ಕೆಲಸದ ಮುಂದೆ ತೆಳುವಾಗಿದೆ. ಸಹಜವಾಗಿ, ಆ ದೊಡ್ಡ ಯೋಜನೆಗಳು ಅಲ್ಪಾವಧಿಯಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಲಾಭ ತಂದುಕೊಟ್ಟಿವೆ ಎಂಬುದೇನೋ ನಿಜ.
ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಮತ್ತು ಬಿಜು ಜನತಾ ದಳ, ಭಾರತ್ ರಾಷ್ಟ್ರ ಸಮಿತಿ ಅಥವಾ ವೈಎಸ್‌ಆರ್ ಕಾಂಗ್ರೆಸ್‌ನಂತಹ ಪಕ್ಷಗಳು ಸಹ ದೀರ್ಘಕಾಲೀನ ಸಾಮಾಜಿಕ ಕಲ್ಯಾಣ ಕಾರ್ಯಸೂಚಿಯನ್ನು ರೂಪಿಸಲು ನಿರ್ಧರಿಸಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಾರವು ಬಡವರಿಗೆ ನೀಡಲಾಗಿದ್ದ ಭರವಸೆಗಳ ಮೇಲೆ ನಿಂತಿತ್ತು. ಈಗ ಜಾತಿ ಗಣತಿಗೆ ಒತ್ತಾಯಿಸುವ ಮೂಲಕ ವಿರೋಧ ಪಕ್ಷಗಳು ತಮ್ಮ ಸಾಮಾಜಿಕ ಕಲ್ಯಾಣ ರಾಜಕೀಯ ದೃಷ್ಟಿಕೋನದ ಭಾಗವಾಗಿ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಮುನ್ನೆಲೆಗೆ ತರುತ್ತಿವೆ.
ಈ ಎರಡು ಅಭಿವೃದ್ಧಿ ಮಾದರಿಗಳ ನಡುವಿನ ಅವಿಭಜಿತ ಸ್ವರೂಪವು ವಿಧಾನಸಭೆ ಚುನಾವಣೆಗಳನ್ನು ಮೀರಿಯೂ ಪ್ರಭಾವ ಬೀರಬಲ್ಲದು ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ನಡುವಿನ ಏಕೈಕ ವ್ಯತ್ಯಾಸವೆಂದು ಗ್ರಹಿಸಬಹುದು. ಹೆಚ್ಚುತ್ತಿರುವ ದ್ವಿಧ್ರುವೀಯ 2024ರ ಲೋಕಸಭೆ ಚುನಾವಣೆಯತ್ತ ಸಾಗುತ್ತಿರುವಂತೆ ತೋರುವ ಮತದಾರರು ತಮ್ಮ ಆಯ್ಕೆಯನ್ನು ನಿರ್ಧರಿಸಲು ಇದು ನೆರವಾಗುತ್ತದೆ.
ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಮತದಾರರು ಈಗ ಈ ಆಯ್ಕೆ ಅವಕಾಶವನ್ನು ಚಲಾಯಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಬಿಜೆಪಿಯ ಪ್ರಚಾರವು ಮೋದಿಯವರ 2014ರ ಪ್ರಚಾರದ್ದೇ ಪ್ರತಿಬಿಂಬವಾಗಿದೆ, ಏಕೆಂದರೆ ಕೇಸರಿ ಪಕ್ಷವು ಜನರ ಈ ಕ್ಷಣದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ. ಈ ಎಲ್ಲಾ ರಾಜ್ಯಗಳಲ್ಲಿನ ಕಾಂಗ್ರೆಸ್ ಪ್ರಚಾರವು ಕೇಂದ್ರದಲ್ಲಿ ಬಿಜೆಪಿಯ ಆಡಳಿತದಲ್ಲಿ ಹಿಂದುತ್ವದ ಮಿತಿಮೀರುವಿಕೆ, ದೊಡ್ಡ ಉದ್ಯಮಗಳ ಅಭಿವೃದ್ಧಿ, ಕ್ರೋನಿಸಂ ವಿಚಾರಗಳನ್ನು ಮುಂದಿಟ್ಟಿದೆ. ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹಣದುಬ್ಬರದಂತಹ ಸಮಸ್ಯೆಗಳನ್ನು ಸರಕಾರ ನಿರ್ಲಕ್ಷಿಸಿರುವ ಬಗ್ಗೆಯೂ, ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯ ಕಳಪೆಯಾಗುತ್ತಿರುವುದರ ಬಗ್ಗೆಯೂ ಅದು ಹೇಳಿದೆ.
ಛತ್ತೀಸ್‌ಗಡ ಮತ್ತು ರಾಜಸ್ಥಾನದಲ್ಲಿ ಭೂಪೇಶ್ ಬಘೇಲ್ ಮತ್ತು ಅಶೋಕ್ ಗೆಹ್ಲೋಟ್ ಮತ್ತೊಂದು ಅವಧಿಗೆ ಪ್ರಯತ್ನಿಸುತ್ತಿದ್ದಾರೆ, ಕಾಂಗ್ರೆಸ್ ರೈತರು ಮತ್ತು ಸಾಮಾಜಿಕ ಭದ್ರತಾ ಕ್ರಮಗಳನ್ನು ಬೆಂಬಲಿಸುವುದರ ಸುತ್ತ ತನ್ನ ಪ್ರಚಾರವನ್ನು ಕೇಂದ್ರೀಕರಿಸಿದೆ. ರೈತರಿಗೆ ಅವರ ಬೆಳೆಗೆ ಅತ್ಯುತ್ತಮ ಕನಿಷ್ಠ ಬೆಂಬಲ ಬೆಲೆ ನೀಡುವ ಸರಕಾರ ಎಂದು ಬಘೇಲ್ ಪ್ರಚಾರ ಮಾಡಿದ್ದರೆ, ಗೆಹ್ಲೋಟ್ ಅವರು 25 ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ರಕ್ಷಣೆ, ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿ ಮತ್ತು ನಿವೃತ್ತ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಅನುಷ್ಠಾನಕ್ಕೆ ಬೆಂಬಲ ನೀಡುವ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಬಘೇಲ್ ಅವರು ಇನ್ನೂ ಉತ್ತಮ ಎಂಎಸ್‌ಪಿ ದರಗಳು, ರೈತರು ಮತ್ತು ಸ್ವ-ಸಹಾಯ ಗುಂಪುಗಳ ಸಾಲ ಮನ್ನಾ ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಗೆಹ್ಲೋಟ್ ಕೂಡ ಇದೇ ರೀತಿಯ ಯೋಜನೆಗಳಾದ ನಿರುದ್ಯೋಗ ಭತ್ತೆ, ಉತ್ತಮ ವೇತನ ದರಗಳು, ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯಗಳ ಭರವಸೆ ನೀಡಿದ್ದಾರೆ.
ಮಧ್ಯಪ್ರದೇಶ ಮತ್ತು ತೆಲಂಗಾಣದ ಕಥೆಗಳೂ ಇದೇ ರೀತಿ ಇವೆ. ಬಡವರಿಗೆ ಹಲವಾರು ಪ್ರಯೋಜನಗಳ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಆಕ್ರಮಣಕಾರಿ ಪ್ರಚಾರವನ್ನು ನಡೆಸಿದೆ ಮತ್ತು ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಆರ್‌ಎಸ್‌ನ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸರಕಾರಗಳ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಹೆಚ್ಚಿಸುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ.
ಈ ನಾಲ್ಕೂ ರಾಜ್ಯಗಳಲ್ಲಿ ಕೃಷಿ ಸಮಸ್ಯೆಗಳು ಮತದಾರರ ಪಾಲಿನ ದೊಡ್ಡ ಕುಂದುಕೊರತೆಯಾಗಿರುವುದು ನಿಜ. ಬೆಳೆಗೆ ಕಳಪೆ ದರಗಳು, ಬರ-ಸಂಬಂಧಿತ ದೂರುಗಳು, ಸಾಕಷ್ಟು ಯೋಜಿತ ನೀರಾವರಿ ಇಲ್ಲದಿದ್ದಲ್ಲಿ ನೀರಿನ ಬಿಕ್ಕಟ್ಟು, ಹೆಚ್ಚಿನ ವಿದ್ಯುತ್ ದರಗಳು, ಆಡಳಿತ ಕಚೇರಿಗಳಲ್ಲಿ ಭ್ರಷ್ಟಾಚಾರ, ರೈತರು ಎದುರಿಸುತ್ತಿರುವ ಹೆಚ್ಚಿನ ಸಾಲದ ಮಟ್ಟ, ಕಡಿಮೆ ಕೂಲಿ ಮತ್ತಿತರ ಅನೇಕ ಸಮಸ್ಯೆಗಳು ಕಾಡುತ್ತಿವೆ.
ಕಾಂಗ್ರೆಸ್ ಈ ಸಮಸ್ಯೆಗಳತ್ತ ಗಮನ ಸೆಳೆದಿದೆ, ಪ್ರಚಾರಕ್ಕೆ ಮೊದಲೇ ಈ ಸಮಸ್ಯೆಗಳನ್ನು ಪರಿಹರಿಸಲು ಅದು ಬಿಜೆಪಿಯನ್ನು ಒತ್ತಾಯಿಸಿಯೂ ಇತ್ತು. ಉದಾಹರಣೆಗೆ, ಕಾಂಗ್ರೆಸ್‌ನ ಸಮಾಜ ಕಲ್ಯಾಣ ಚಾಲಿತ ಪ್ರಚಾರದ ಒತ್ತಡದ ಹಿನ್ನೆಲೆಯಲ್ಲಿ, ನಾಲ್ಕು ಅವಧಿಯ ಮುಖ್ಯಮಂತ್ರಿ ಚೌಹಾಣ್ ಹೊಸ ‘ಲಾಡ್ಲಿ ಬೆಹ್ನಾ’ ಯೋಜನೆಯನ್ನು ಪರಿಚಯಿಸಿದರು, ಇದು ಮಹಿಳಾ ಮತದಾರರನ್ನು ಕ್ರೋಡೀಕರಿಸುವ ಕ್ರಮವಾಗಿ ಮಹಿಳೆಯರಿಗೆ ತಿಂಗಳಿಗೆ 1,250 ರೂ. ನೀಡುವ ಯೋಜನೆ. ಚುನಾವಣೆ ನಡೆಯುವ ಇತರ ರಾಜ್ಯಗಳಲ್ಲೂ ಮಹಿಳೆಯರಿಗೆ ಇದೇ ರೀತಿಯ ಯೋಜನೆಗಳನ್ನು ಬಿಜೆಪಿ ಘೋಷಿಸಿದೆ.
ಕೃಷಿ ಬಿಕ್ಕಟ್ಟು, ಸಾಮಾಜಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದಂತಹ ಹಳೆಯ ಅಭಿವೃದ್ಧಿ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರೂ, ಬಿಜೆಪಿ ರಾಜಕೀಯವಾಗಿ ಬಹಳಷ್ಟು ಅವಲಂಬಿತವಾಗಿರುವ ಹಿಂದೂ-ಮುಸ್ಲಿಮ್ ಧ್ರುವೀಕರಣದ ವಿರುದ್ಧ ಮತದಾರರು ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಚುನಾವಣಾ ಸಂಬಂಧಿತ ಮಾಧ್ಯಮ ವರದಿಗಳು ಇದರ ಬಗ್ಗೆ ಹೇಳುತ್ತಿವೆ.
ಮಣಿಪುರದಲ್ಲಿನ ಮೈತೈಗಳು ಮತ್ತು ಕುಕಿ-ಜೋ ಸಮುದಾಯಗಳ ನಡುವಿನ ಸಂಘರ್ಷದ ಬಗ್ಗೆ ಪ್ರಧಾನಿ ಮೌನವನ್ನು ಮಿಜೋರಾಂನ ಮತದಾರರು ಪ್ರಶ್ನಿಸುತ್ತಿದ್ದಾರೆ. ಇತರ ಹೃದಯಭಾಗದ ರಾಜ್ಯಗಳಲ್ಲಿ ಅವರ ಭಾಷಣಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿಯೂ ಅವರ ಪ್ರಚಾರ ಫಲ ಕೊಟ್ಟಿರಲಿಲ್ಲ.
ಧಾರ್ಮಿಕ ಧ್ರುವೀಕರಣದಂತಹ ಅಂಶಗಳು ಇಲ್ಲಿಯವರೆಗೆ ಸದ್ದು ಮಾಡಿಲ್ಲ. ಏಕೆಂದರೆ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್, ಬಘೇಲ್ ಮತ್ತು ಗೆಹ್ಲೋಟ್ ಅವರು ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿನ ದೌರ್ಬಲ್ಯಗಳನ್ನು ಎತ್ತಿ ಹೇಳುವತ್ತ ತಮ್ಮ ಗಮನವನ್ನು ವ್ಯವಸ್ಥಿತವಾಗಿ ಹರಿಸಿದ್ದಾರೆ.
ಚುನಾವಣೆಗೆ ಮುನ್ನ ತಮ್ಮ ನಾಯಕರ ಮೇಲೆ ಆಗಾಗ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಮತ್ತೊಂದೆಡೆ, ಬಿಜೆಪಿಯು ಅಂತಹ ಹೇಳಿಕೆಗಳನ್ನು ತಳ್ಳಿಹಾಕಿದೆ ಮತ್ತು ಕಾಂಗ್ರೆಸ್ ವಿರುದ್ಧ ವಂಶಾಡಳಿತದ ರಾಜಕೀಯ ಮೊದಲಾದ ತನ್ನ ಸಾಮಾನ್ಯ ಟೀಕೆಗಳ ಮೂಲಕ ದಾಳಿ ಮಾಡಿದೆ.
ಇತ್ತೀಚಿನ ವಿದ್ಯಮಾನಗಳು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣದ ಸಮಸ್ಯೆಗಳು, ವಿಶೇಷವಾಗಿ ಕೃಷಿ ಆರ್ಥಿಕತೆಯ ಸುತ್ತಲಿನ ವಿಷಯಗಳು ಲೋಕಸಭೆ ಚುನಾವಣೆಯಲ್ಲೂ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ ಎಂದು ಸೂಚಿಸುತ್ತವೆ. ಕೇಸರಿ ಪಕ್ಷದ ಅತ್ಯಂತ ಪರಿಣಾಮಕಾರಿ ಸಾಧನವಾದ ಚುನಾವಣಾ ಅಂಶವಾಗಿ ಧಾರ್ಮಿಕ ಧ್ರುವೀಕರಣವು ಮೊದಲಿಗಿಂತ ದುರ್ಬಲವಾಗುತ್ತಿರುವಂತೆ ತೋರುತ್ತಿರುವುದರಿಂದ ಬಿಜೆಪಿಯ ಎದುರು ಸವಾಲುಗಳಿವೆ. ರಾಜ್ಯ ಚುನಾವಣೆಯಲ್ಲಿ ಮತದಾರರು ಬಹುತೇಕ ಒಂದು ತೀರ್ಮಾನಕ್ಕೆ ಬಂದಿರುವ ಈ ಹೊತ್ತಿನಲ್ಲಿ ಬಿಜೆಪಿ ಈಗ 2024ರ ರಾಜಕೀಯ ಯುದ್ಧಕ್ಕೆ ವೇದಿಕೆಯನ್ನು ಸಿದ್ಧಪಡಿಸುವತ್ತ ಗಮನ ಹರಿಸಿದಂತಿದೆ.
(ಕೃಪೆ:thewire.in)