ಸ್ವಾಯತ್ತತೆಯ ಭರವಸೆಯೂ ಕೇಂದ್ರೀಕರಣದ ಅಪಾಯವೂ

ಮೈಸೂರಿನಲ್ಲಿರುವ, ಪ್ರತಿಷ್ಠಿತ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನಲ್ಲಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ (ಶಾಸ್ತ್ರೀಯ ಕನ್ನಡ ಕೇಂದ್ರ) ತನ್ನ ಬೌದ್ಧಿಕ-ಶೈಕ್ಷಣಿಕ ಪಯಣದ 15 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಸಂಸ್ಥೆಗೆ ಸ್ವಾಯತ್ತತೆ ನೀಡುವ ಭರವಸೆ ಕೇಂದ್ರ ಸಚಿವರಿಂದ ದೊರೆತಿರುವುದು ಸ್ವಾಗತಾರ್ಹ. ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೂಲ ಸಂಸ್ಥೆ ಸಿಐಐಎಲ್‌ನಿಂದ ಪ್ರತ್ಯೇಕಿಸುವುದಷ್ಟೇ ಅಲ್ಲದೆ, ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕು ಎನ್ನುವುದು ಮೈಸೂರಿನ ಸಾಹಿತಿ ಕಲಾವಿದರ, ಕನ್ನಡ ಮನಸ್ಸುಗಳ ಆಶಯವೂ, ಕನಸೂ ಆಗಿತ್ತು. 2008ರಲ್ಲಿ ಯುಪಿಎ ಸರಕಾರದ ಒಂದು ಮಹತ್ತರ ಯೋಜನೆಯ ಫಲಶ್ರುತಿಯಾಗಿ ಸ್ಥಾಪನೆಯಾದ ಈ ಸಂಸ್ಥೆ ತಡವಾಗಿಯಾದರೂ ಸ್ವಾಯತ್ತವಾಗುವ ಸಾಧ್ಯತೆಗಳು ನಿಚ್ಚಳವಾಗಿರುವುದು ಮೈಸೂರಿನ ಸಮಾನ ಮನಸ್ಕ ಹೋರಾಟಗಳಿಗೆ ಸಮಾಧಾನ ತರುವಂತಹ ವಿಷಯ.
ಆದರೆ ಕೇಂದ್ರ ಸರಕಾರದ ಈ ತೀರ್ಮಾನದ ಹಿಂದೆ ಹೋರಾಟಗಾರರ ಪರಿಶ್ರಮವಷ್ಟೇ ಅಲ್ಲದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಾಲಿ ಅಧ್ಯಕ್ಷರ ವೈಯಕ್ತಿಕ ಆಸಕ್ತಿ, ಕಾಳಜಿ ಮತ್ತು ಸ್ವಪ್ರಯತ್ನಗಳೂ ಇರುವುದನ್ನು ಅಭಿಮಾನಪೂರ್ವಕವಾಗಿ ನೆನೆಯಬೇಕಿದೆ. ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಬಿಳಿಮಲೆ ಅವರ ಸತತ ಪ್ರಯತ್ನಗಳ ಫಲವಾಗಿ, ಮೈಸೂರಿನ ಹೋರಾಟಗಾರರ ಆಶಯಗಳಿಗೆ ಪೂರಕವಾಗಿ ಒಂದು ಅಂತಿಮ ಘಟ್ಟ ತಲುಪಿದೆ. ಆದರೆ ಸ್ವಾಯತ್ತತೆಯನ್ನು ನೀಡುವ ಭರವಸೆ ನೀಡುತ್ತಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸ್ಥೆಯನ್ನು ಬೆಂಗಳೂರಿಗೆ ವರ್ಗಾಯಿಸುವ ಇಂಗಿತ ವ್ಯಕ್ತಪಡಿಸಿರುವುದು ಆತಂಕಕಾರಿಯಾಗಿ ಕಾಣುತ್ತದೆ. ಹಾಗೆಯೇ ಸ್ವಾಯತ್ತತೆ ಪಡೆದ ನಂತರ ಸಂಸ್ಥೆಯನ್ನು ರಾಜ್ಯ ಸರಕಾರದ ಸುಪರ್ದಿಗೆ ಒಪ್ಪಿಸಲು ಕೇಂದ್ರ ಸಚಿವರು ನಿರಾಕರಿಸಿರುವುದೂ ಸಹ ಒಪ್ಪುವಂತಹುದಲ್ಲ. ಶಾಸ್ತ್ರೀಯ ಕನ್ನಡ ಕೇಂದ್ರದ ಅಂತರ್‌ರಾಷ್ಟ್ರೀಯ ಬೆಳವಣಿಗೆಯ ದೃಷ್ಟಿಯಿಂದ ಬೆಂಗಳೂರಿಗೆ ವರ್ಗಾಯಿಸುವ ಆಲೋಚನೆಯೇ ಅಪ್ರಬುದ್ಧವಾಗಿದ್ದು, ಭಾಷಾ ಬೆಳವಣಿಗೆಗೆ ಸಾಂಸ್ಥಿಕ ನೆಲೆಗಿಂತಲೂ ಬೌದ್ಧಿಕ ವ್ಯಾಪ್ತಿ, ಹರವು ಮತ್ತು ಅವಕಾಶಗಳು ಮುಖ್ಯ ಎನ್ನುವುದನ್ನು ಇಲ್ಲಿ ಗಮನಿಸಬೇಕಿದೆ.
ಹೋರಾಟಗಳ ಫಲಶ್ರುತಿ
ಪ್ರಾಚೀನ ಕನ್ನಡ ಶಾಸ್ತ್ರೀಯ ಸಾಹಿತ್ಯದ ಮೂಲ ಬೇರುಗಳನ್ನು ಶೋಧಿಸಿ, ಮರುಶೋಧಿಸಿ, ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ, ಹೊಸ ಪೀಳಿಗೆಯಲ್ಲಿ ಸಾಹಿತ್ಯಾಧ್ಯಯನ ಮತ್ತು ಸಾಹಿತ್ಯ ಸಂಶೋಧನೆಯನ್ನು ಉತ್ತೇಜಿಸುವ ಮಹತ್ತರ ಆಶಯದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮಕಾಲೀನ ಸಾಹಿತ್ಯದಲ್ಲೇ ಆಸಕ್ತಿ ತೋರದ ಒಂದು ಬೃಹತ್ ಯುವ ಪೀಳಿಗೆಯ ನಡುವೆ, ಶಾಸ್ತ್ರೀಯ ಸಾಹಿತ್ಯವನ್ನು ಕೊಂಡೊಯ್ಯಲು ಹೊಸ ಮಾದರಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳುವ ಆವಶ್ಯಕತೆಯೂ ಇದೆ. ಈ ಪ್ರಯತ್ನಗಳಿಗೆ ಒಂದು ಸಾಂಸ್ಥಿಕ ಸ್ವರೂಪ ನೀಡುವುದು ಶಾಸ್ತ್ರೀಯ ಅಧ್ಯಯನ ಕೇಂದ್ರದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಕಳೆದ ಹದಿನೈದು ವರ್ಷಗಳಲ್ಲಿ ಈ ಹಾದಿಯ ಸಾಫಲ್ಯ, ವೈಫಲ್ಯಗಳನ್ನು ಗಮನಿಸಿದಾಗ ಹಲವು ಕೊರತೆಗಳು ಕಂಡುಬರುತ್ತವೆ. ಅದರಲ್ಲಿ ಸ್ವಾಯತ್ತತೆ ಇಲ್ಲದಿರುವುದೂ ಒಂದು ಎನ್ನುವುದನ್ನು ಗಮನಿಸಬೇಕಿದೆ. ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆ ಪಡೆಯುವಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಒಗ್ಗೂಡಿ, ಕೇಂದ್ರದ ಮೇಲೆ ಒತ್ತಡವೂ ಇತ್ತು. ಆ ರೀತಿಯ ಸಾಹಿತ್ಯಕ ಸ್ಪಂದನೆ ಕರ್ನಾಟಕದ ರಾಜಕಾರಣಿಗಳಿಂದ ಅಥವಾ ಸರಕಾರಗಳಿಂದ ಈವರೆಗೂ ಕಂಡುಬಂದಿಲ್ಲ. ಇದು ಯೋಚಿಸಬೇಕಾದ ವಿಚಾರ.
ಆದರೂ ಕರ್ನಾಟಕದ ಜನತೆಯ, ವಿಶೇಷವಾಗಿ ಮೈಸೂರಿನ ಸಾಹಿತ್ಯ ಬಳಗದ ಒತ್ತಾಸೆ ಮತ್ತು ಹಲವು ವರ್ಷಗಳ ಪರಿಶ್ರಮ ಹಾಗೂ ನಿರಂತರ ಹೋರಾಟದ ಫಲವಾಗಿ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಒದಗಿತ್ತು. 1990ರಿಂದಲೇ ಮೈಸೂರಿನಲ್ಲಿ ಈ ಆಗ್ರಹ ಕೇಳಿಬಂದಿತ್ತು. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೂ ಈ ಸಮ್ಮಾನ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡದ ಹಿರಿಯ ಸಾಹಿತಿ-ಕಲಾವಿದರು, ಕನ್ನಡ ಪರ ಹೋರಾಟಗಾರರು ಹಾಗೂ ಸಮಾನ ಮನಸ್ಕರು ವರ್ಷಗಟ್ಟಲೆ ನಡೆಸಿದ ಹೋರಾಟದ ಪರಿಣಾಮ ಈ ಬೇಡಿಕೆ ಈಡೇರಿತ್ತು. 2008ರಲ್ಲಿ ಮೈಸೂರಿನಲ್ಲಿ ಸಿಐಐಎಲ್ ಆವರಣದಲ್ಲಿ ಮತ್ತು ಆಡಳಿತಾತ್ಮಕವಾಗಿ ಆ ಸಂಸ್ಥೆಯ ಒಂದು ಭಾಗವಾಗಿ ಸ್ಥಾಪಿಸಲಾದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಈವರೆಗೆ ಹೇಳಿಕೊಳ್ಳುವಂತಹ ಸಾಧನೆಯನ್ನಾಗಲೀ, ಸಂಶೋಧನೆಗಳನ್ನಾಗಲೀ ಕೈಗೊಂಡಿಲ್ಲ ಎನ್ನುವುದಾದರೆ ಅದರ ಕಾರಣಗಳನ್ನು ಸಾಂಸ್ಥಿಕ ಕೇಂದ್ರೀಕರಣ ನೀತಿಯಲ್ಲೇ ಗುರುತಿಸಬೇಕಿದೆ.
ಸಿಐಐಎಲ್ ಆಶ್ರಯದಲ್ಲೇ ತೆಲುಗು, ಮಲಯಾಳಿ, ತಮಿಳು ಮತ್ತು ಒಡಿಯಾ ಶಾಸ್ತ್ರೀಯ ಸಾಹಿತ್ಯ ಅಧ್ಯಯನ ಕೇಂದ್ರಗಳನ್ನೂ ಸ್ಥಾಪಿಸಲಾಗಿತ್ತು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಸಾಕಾರಗೊಳಿಸಲು ಪ್ರತ್ಯೇಕ ಸಾಂಸ್ಥಿಕ ಅಸ್ತಿತ್ವ ಮತ್ತು ಸ್ವಾಯತ್ತತೆ ಅತ್ಯವಶ್ಯ ಎನ್ನುವುದನ್ನು ಮನಗಂಡು, ಇದೇ ಕೇಂದ್ರೀಯ ಸಂಸ್ಥೆಯ ಆಶ್ರಯದಲ್ಲಿದ್ದ ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರ ತನ್ನ ಬಂಧನವನ್ನು ಬಿಡಿಸಿಕೊಂಡು ಚೆನ್ನೈಗೆ ವರ್ಗಾವಣೆಯಾಗಿತ್ತು. ತಮಿಳು ಶಾಸ್ತ್ರೀಯ ಕೇಂದ್ರವನ್ನು ವರ್ಗಾಯಿಸಿದ ಒಂದೇ ವರ್ಷದಲ್ಲಿ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಪಕ್ಷಭೇದವನ್ನು ಮರೆತು, ದಿಲ್ಲಿಗೆ ನಿಯೋಗಗಳನ್ನು ಕಳುಹಿಸುವ ಮೂಲಕ, ಒಕ್ಕೊರಲಿನಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ತಮಿಳು ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದ್ದರು. ಎರಡು ವರ್ಷಗಳ ಮುನ್ನ ಈ ಕೇಂದ್ರವು ತನ್ನದೇ ಆದ ಸ್ವಂತ ಕಟ್ಟಡವನ್ನೂ ನಿರ್ಮಿಸಿ, ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ಪಡೆದಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು, ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಕೂಡಲೇ, ಅಲ್ಪಾವಧಿಯಲ್ಲೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ಸಂಶೋಧಕರೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಭಾಷೆ, ಸಾಹಿತ್ಯ ಮತ್ತು ಭಾಷಾ ಬೆಳವಣಿಗೆಯ ನಡುವೆ ಇರುವ ಸೂಕ್ಷ್ಮ ಸಂಬಂಧಗಳನ್ನು ಗ್ರಹಿಸುವುದರಲ್ಲಿ ಕರ್ನಾಟಕದ ಜನಪ್ರತಿನಿಧಿಗಳು ತಮಿಳುನಾಡಿನಿಂದ ಪಾಠ ಕಲಿಯುವುದಿದೆ.
ರಾಜಧಾನಿ ಕೇಂದ್ರಿತ ರಾಜಕಾರಣ
ಇಷ್ಟರ ನಡುವೆ ರಾಜಧಾನಿ ಬೆಂಗಳೂರು ಕೇಂದ್ರಿತ ಆಳ್ವಿಕೆಯ ಒಂದು ಭಾಗವಾಗಿ 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದಾಗ ಈ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಈ ಪ್ರಯತ್ನಗಳ ಹಿಂದೆ ಕನ್ನಡ ಸಾಹಿತ್ಯ ವಲಯದ ಒಂದು ವರ್ಗ ಇದ್ದುದು ದುರದೃಷ್ಟಕರವಾದರೂ ವಾಸ್ತವ. ಇದನ್ನು ಸಾಹಿತ್ಯ ಲೋಕದಲ್ಲಿರುವ ಪ್ರಾದೇಶಿಕ ಸೂಕ್ಷ್ಮತೆಯ ಕೊರತೆಯ ಒಂದು ಲಕ್ಷಣವಾಗಿ ನೋಡಬೇಕಾಗುತ್ತದೆ. ಆಗಿನ ಕಾಂಗ್ರೆಸ್ ಸರಕಾರದಲ್ಲಿ, ಉಮಾಶ್ರೀ ಅವರು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ ಈ ಪ್ರಸ್ತಾವದೊಂದಿಗೆ ರಾಜ್ಯ ಸರಕಾರದ ನಿಯೋಗವು ಸಂಸ್ಥೆಗೆ ಭೇಟಿ ನೀಡಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಜನಪ್ರತಿನಿಧಿಗಳಿಗಿಂತಲೂ, ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೇ ಉಳಿಸಿಕೊಳ್ಳಲು ಸರಕಾರದ ಮೇಲೆ ಒತ್ತಡ ಹೇರಿದ್ದು ಮೈಸೂರಿನ ಸಾಹಿತಿ-ಕಲಾವಿದರು ಮತ್ತು ಕನ್ನಡ ಪರ ಹೋರಾಟಗಾರರು ಎನ್ನುವುದನ್ನು ಸ್ಮರಿಸಬೇಕಿದೆ. ಈ ಒತ್ತಡಕ್ಕೆ ಮಣಿದು ಸರಕಾರ ಸಂಸ್ಥೆಯನ್ನು ಮೈಸೂರಿನಲ್ಲೇ ಉಳಿಸಲು ಒಪ್ಪಿತ್ತು.
ಆನಂತರ ಕಳೆದ ನಾಲ್ಕೈದು ವರ್ಷಗಳಿಂದ ಮೈಸೂರಿನ ಸಾಹಿತ್ಯ ವಲಯದ ಆಸಕ್ತ ಮನಸ್ಸುಗಳು ಒಂದಾಗಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಾಯತ್ತತೆಗಾಗಿ ಹೋರಾಟಗಳಲ್ಲಿ ತೊಡಗಿದ್ದವು. ಹತ್ತಾರು ಬಾರಿ ಸಿಐಐಎಲ್ ಸಂಸ್ಥೆಯ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಾಲ್ಕೂವರೆ ಎಕರೆ ಭೂಮಿಯನ್ನು ನೀಡುವು ದಾಗಿ ಮೈಸೂರು ವಿಶ್ವವಿದ್ಯಾನಿಲಯವೂ ತಾತ್ವಿಕ ಒಪ್ಪಿಗೆ ನೀಡಿದೆ. ಒಡಂಬಡಿಕೆಗೆ ಸಹಿ ಮಾಡಲೂ ಸಿದ್ಧವಾಗಿತ್ತು. ಆದರೆ ಆ ಕಡತ ಬಹುಶಃ ಯಾವುದೋ ಕಪಾಟಿನಲ್ಲಿ ಧೂಳು ತಿನ್ನುತ್ತಾ ಕುಳಿತಿದ್ದಂತೆ ಕಾಣುತ್ತದೆ. ಶಾಸ್ತ್ರೀಯ ಕನ್ನಡ ಕೇಂದ್ರವನ್ನು ನಿರ್ವಹಿಸುವ ಆಡಳಿತ ವರ್ಗದ ನಿಧಾನಗತಿಯ ನಡೆ ಮತ್ತು ನಿರ್ಲಿಪ್ತತೆಯೂ ಈ ವಿಳಂಬಕ್ಕೆ ಕಾರಣವಾಗಿದೆ.
ಕನ್ನಡದ ಶಾಸ್ತ್ರೀಯ ಸಾಹಿತ್ಯದಲ್ಲಿನ ಅಮೂಲ್ಯ ಕೃತಿಗಳನ್ನು ಮುಂದಿನ ಪೀಳಿಗೆಗಾಗಿ ಕಾಪಿಟ್ಟುಕೊಳ್ಳುವ ಉದ್ದೇಶದಿಂದ, ಸಂಶೋಧನೆ, ಅಧ್ಯಯನ ಮತ್ತು ಸಾಹಿತ್ಯಕ ಉತ್ಖನನದ ಪ್ರಕ್ರಿಯೆಯ ಮೂಲಕ, ಕನ್ನಡ ಭಾಷೆಯ ಶ್ರೀಮಂತಿಕೆಯನ್ನೂ, ಚಾರಿತ್ರಿಕ ಹೆಜ್ಜೆಗಳನ್ನೂ ಗುರುತಿಸುವ ಒಂದು ಬೌದ್ಧಿಕ ಕೇಂದ್ರವಾಗಿ ಪೂರ್ಣ ಸ್ವಾಯತ್ತತೆಯೊಂದಿಗೆ ಈ ಕೇಂದ್ರ ರೂಪುಗೊಳ್ಳುವುದು ವರ್ತಮಾನದ ತುರ್ತು. ಈ ಸಂಸ್ಥೆಯನ್ನು ಒಂದು ಅಧ್ಯಯನ ಪೀಠದಂತೆ ಅಥವಾ ಸಂಶೋಧನಾ ಕೇಂದ್ರದಂತೆ ಪರಿಗಣಿಸುವುದೇ ಅಕ್ಷಮ್ಯ. ಶಾಸ್ತ್ರೀಯ ಸಾಹಿತ್ಯ ಸಂಶೋಧನೆಯ ಮೂಲಕ ವಿಚಾರ ಸಂಕಿರಣಗಳು, ಅಧ್ಯಯನ ಶಿಬಿರಗಳು ಮತ್ತು ಕಾರ್ಯಾಗಾರಗಳ ಮೂಲಕ ಶಾಸ್ತ್ರೀಯ ಸಾಹಿತ್ಯದ ವಿಭಿನ್ನ ಮಜಲುಗಳನ್ನು ಮುಕ್ತ ಸಂವಾದದ ಮೂಲಕ ಚರ್ಚೆಗೊಳಪಡಿಸುವ ನಿಟ್ಟಿನಲ್ಲಿ ಒಂದು ಕ್ರಿಯಾಶೀಲ ಸಂಸ್ಥೆಯಾಗಿ ಈ ಕೇಂದ್ರವನ್ನು ಬೆಳೆಸುವುದು ನಮ್ಮ ಆದ್ಯತೆಯಾಗಬೇಕಿದೆ. ಸ್ವಾಯತ್ತತೆ ನೀಡುವ ನಿರ್ಧಾರ ಈ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆಯಾಗಲಿದೆ.
ಸ್ವಾಯತ್ತತೆಯ ಆಶಯ ಮತ್ತು ಉದ್ದೇಶ
ಈಗ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಇತರ ಭಾಷಿಕ ಶಾಸ್ತ್ರೀಯ ಕೇಂದ್ರಗಳಂತೆಯೇ ಸಿಐಐಎಲ್‌ನಿಂದ ಪ್ರತ್ಯೇಕಿಸುವ ಭರವಸೆ ದೊರಕಿರುವುದು ಸ್ವಾಗತಾರ್ಹವೇ ಆದರೂ, ಯಾವ ಕೇಂದ್ರವನ್ನೂ ರಾಜ್ಯ ಸರಕಾರಕ್ಕೆ ಒಪ್ಪಿಸದಿರುವ ಕೇಂದ್ರ ಸಚಿವರ ನಿರ್ಧಾರವನ್ನು ವಿರೋಧಿಸಬೇಕಿದೆ. ಸರಕಾರದ ಅನುದಾನದ ಮೂಲಕವೇ ನಿರ್ವಹಿಸಬೇಕಾಗುವ ಒಂದು ಸಾಹಿತ್ಯಕ ಸಂಸ್ಥೆಗೆ ಸ್ವಾಯತ್ತತೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗುವುದು, ಆ ಭಾಷಾ ಸಂಸ್ಥೆಯು ಪ್ರತಿನಿಧಿಸುವ ಪ್ರದೇಶದ ಅಸ್ಮಿತೆ ಮತ್ತು ಅಸ್ತಿತ್ವ.
ಈ ಕಾರಣದಿಂದಲೇ ತಮಿಳುನಾಡು ಸರಕಾರ ತನ್ನ ಶಾಸ್ತ್ರೀಯ ಕೇಂದ್ರದ ಸ್ವಾಯತ್ತತೆಯೊಂದಿಗೇ ಅದರ ನಿರ್ವಹಣೆಯನ್ನೂ ರಾಜ್ಯ ಸರಕಾರದ ವ್ಯಾಪ್ತಿಗೇ ಪಡೆದುಕೊಂಡಿದೆ. ಸ್ವಾಯತ್ತ ಶೈಕ್ಷಣಿಕ ಹಾಗೂ ಸಂಶೋಧಕ ಸಂಸ್ಥೆಗಳು ಆಯಾ ರಾಜ್ಯದ ನಿರ್ವಹಣೆಗೆ ಒಳಪಡುವುದು ಪ್ರಜಾಸತ್ತಾತ್ಮಕ ಲಕ್ಷಣವಾಗಿ ಕಾಣಬೇಕಿದೆ. ಹಾಗಾದಲ್ಲಿ ಮಾತ್ರ ಅದರ ಸಾಂಸ್ಥಿಕ ಅಗತ್ಯಗಳು ಹಾಗೂ ಬೌದ್ಧಿಕ ಪ್ರಕ್ರಿಯೆಗಳನ್ನು ಕ್ರಿಯಾಶೀಲ ವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ. ಕೇಂದ್ರ ಎನ್‌ಡಿಎ ಸರಕಾರ ಇತ್ತೀಚಿನ ಯುಜಿಸಿ ಕಾಯ್ದೆ ತಿದ್ದುಪಡಿಯ ಮೂಲಕ ಈ ನಿಟ್ಟಿನಲ್ಲಿ ವಿಭಿನ್ನ ಮಾರ್ಗ ಅನುಸರಿಸುತ್ತಿದ್ದು, ಶಿಕ್ಷಣವನ್ನೂ ಕೇಂದ್ರೀಕರಣ ಗೊಳಿಸುವ ಪ್ರಯತ್ನದಲ್ಲಿದೆ. ಇದೇ ಸೂತ್ರದಡಿಯೇ ಶಾಸ್ತ್ರೀಯ ಭಾಷಾ ಕೇಂದ್ರಗಳನ್ನೂ ತನ್ನ ನಿಯಂತ್ರಣದಲ್ಲೇ ಉಳಿಸಿಕೊಳ್ಳಲು ಯೋಚಿಸುತ್ತಿದೆ.
ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಹೀಗೆ ಕೇಂದ್ರಾಡಳಿತದ ಸುಪರ್ದಿಗೆ ಒಳಪಡಿಸುವುದು ವಿಕೇಂದ್ರೀಕರಣ ನೀತಿಗೆ ವಿರುದ್ಧವಾಗಿದೆ. ಈಗ ಮೈಸೂರಿನಲ್ಲಿರುವ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಆಲೋಚನೆಯೂ ಇದರ ಮತ್ತೊಂದು ಸ್ವರೂಪವಾಗಿ ಕಾಣುತ್ತದೆ. ಈಗಾಗಲೇ ರಾಜಧಾನಿ ಬೆಂಗಳೂರು ಕನ್ನಡದ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳನ್ನೂ, ಅಕಾಡಮಿ, ಪ್ರಾಧಿಕಾರಗಳನ್ನೂ ತನ್ನೊಳಗೆ ಸೇರಿಸಿಕೊಂಡಿದ್ದು, ಬೌದ್ಧಿಕವಾಗಿ ಪ್ರಾದೇಶಿಕ ಅಸಮತೋಲನ ಮತ್ತು ತಾರತಮ್ಯಗಳಿಗೆ ಕಾರಣವಾಗಿದೆ. ಶಾಸ್ತ್ರೀಯ ಕನ್ನಡದ ಅಂತರ್‌ರಾಷ್ಟ್ರೀಯ ಬೆಳವಣಿಗೆಗೆ ಸಾಂಸ್ಥಿಕ ನೆಲೆ ಮುಖ್ಯವಾಗುವುದಿಲ್ಲ. ಅದರ ಕ್ರಿಯಾಶೀಲ ಕಾರ್ಯವ್ಯಾಪ್ತಿ ಮತ್ತು ಸೃಜನಶೀಲ ಕಾರ್ಯವೈಖರಿ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಭೌತಿಕವಾಗಿ ರಾಜ್ಯ ರಾಜಧಾನಿ, ಬೌದ್ಧಿಕವಾಗಿ ದೇಶದ ರಾಜಧಾನಿಯನ್ನು ಅವಲಂಬಿಸುವುದು, ಸ್ವಾಯತ್ತತೆಯನ್ನು ಅರ್ಥಹೀನಗೊಳಿಸುತ್ತದೆ.
ಈ ದೃಷ್ಟಿಯಿಂದ ಕೇಂದ್ರ ಸರಕಾರವು ಕನ್ನಡ ಶಾಸ್ತ್ರೀಯ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವ ಮತ್ತು ಅದರ ನಿರ್ವಹಣೆಯನ್ನು ರಾಜ್ಯಕ್ಕೆ ವಹಿಸದಿರುವ ನಿರ್ಧಾರದಿಂದ ಹಿಂದೆ ಸರಿಯಬೇಕಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳ ನೆಲೆಯಲ್ಲಿ ಅಪ್ಯಾಯಮಾನವೆನಿಸುತ್ತದೆ. ಸಾಂಸ್ಥಿಕ ಸ್ವಾಯತ್ತತೆ ಮೌಲಿಕವಾಗಿ ಪ್ರಜಾಸತ್ತಾತ್ಮಕ ಲಕ್ಷಣ. ಆದರೆ ಸಾಂಸ್ಥಿಕ ನಿರ್ವಹಣೆಯ ಕೇಂದ್ರೀಕರಣ ಈ ಮೌಲ್ಯಗಳಿಗೆ ತದ್ವಿರುದ್ಧವಾದುದು. ಕರ್ನಾಟಕ ಸರಕಾರ ಸ್ವಾಯತ್ತತೆ ಪಡೆಯುವ ಶಾಸ್ತ್ರೀಯ ಕನ್ನಡ ಕೇಂದ್ರವನ್ನು ಮೈಸೂರಿನಲ್ಲೇ ಉಳಿಸಿ, ಅದರ ನಿರ್ವಹಣೆಯನ್ನು ತಮಿಳುನಾಡು ಮಾದರಿಯಲ್ಲಿ ತಾನೇ ವಹಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಇದು ಕಾಂಗ್ರೆಸ್ ಸರಕಾರದ ನೈತಿಕತೆ ಮತ್ತು ಭಾಷಾ ಬದ್ಧತೆಯ ಪ್ರಶ್ನೆ ಎನ್ನುವುದನ್ನು ಸಿದ್ದರಾಮಯ್ಯ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮನಗಾಣಬೇಕಿದೆ.