ಮತ್ತೆ ಮತ್ತೆ ನೆನಪಾಗುವ ಸಿರಿಯಜ್ಜಿ

‘‘ಕಾಲು ಒದ್ದೆಯಾಗದೆ ಕಡಲನ್ನಾದರೂ ದಾಟಬಹುದು, ಕಣ್ಣು ಒದ್ದೆಯಾಗದೆ ಬದುಕನ್ನು ದಾಟಲು ಸಾಧ್ಯವಿಲ್ಲ’’- ನಮ್ಮನೆಯ ‘ಅಜ್ಜನ ಜಗಲಿ’ಯ ಗೋಡೆಯ ಮೇಲೆ ಈ ಶಕ್ತಿಪದವನ್ನು ದಪ್ಪನೇ ಬರೆದಿಟ್ಟುಕೊಂಡಿದ್ದೇನೆ. ನನ್ನ ಪಾಲಿನ ಜನಪದ ಭಗವದ್ಗೀತೆಯೇ ಇದು, ಓದಿಯೇ ಪ್ರತಿದಿನ ನಮ್ಮನೆಯಲ್ಲಿ ಬೆಳಗಾಗುವ ಸುಖ.
ಮೇಲಿನ ಮಾತು ಸಿರಿಯಜ್ಜಿಯದ್ದು. ಈಕೆ ಶಾಲೆಗೆ ಹೋಗಿ ಅಕ್ಷರ ಕಲಿತವಳಲ್ಲ, ಈಕೆಯ ಪೂರ್ವಪರಂಪರೆಯಲ್ಲೂ ಅಕ್ಷರದ ಅರಿವು, ಪುಸ್ತಕದ ಓದು ಇಲ್ಲವೇ ಇಲ್ಲ. ಸಾವಿರಾರು ಪದಗಳಲ್ಲಿ ವಿವರಿಸಬಹುದಾದ ಈ ಜಾನಪದ ಧ್ಯಾನನಿಧಿ ನಮ್ಮ ಮೌಖಿಕ ಪರಂಪರೆಯ ಸಮೃದ್ಧ ಸಿರಿವಂತಿಗೆಗೂ ಒಂದು ಸಾಕ್ಷಿ.
ಕಳೆದ ವಾರ ನಮ್ಮನೆಗೆ ಬಂದ ಕನ್ನಡದ ಹಿರಿಯ ಲೇಖಕ, ವಿಶ್ರಾಂತ ಪ್ರಾಧ್ಯಾಪಕ ಕಾಳೇಗೌಡ ನಾಗವಾರರ ಜೊತೆಗಿದ್ದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ರಾಮಣ್ಣ ನಮ್ಮನೆಯ ಗೋಡೆಯ ಮೇಲಿನ ಈ ಪದ ಪಂಕ್ತಿಯನ್ನು ಮೊಬೈಲಲ್ಲಿ ಸೆರೆಹಿಡಿಯುತ್ತಿದ್ದರು. ಅಷ್ಟೇ ಅಲ್ಲ, ಚಕಿತವಾಗಿ ಒಮ್ಮೆ ನನ್ನನ್ನು ಮತ್ತೊಮ್ಮೆ ಆ ಸಾಲನ್ನು ಗಮನಿಸುತ್ತಿದ್ದರು. ನಾನು ಅವರನ್ನು ಅಷ್ಟೇ ಕುತೂಹಲದಿಂದ ಗಮನಿಸುತ್ತಿದ್ದೆ. ಅವರು, ‘‘ಸರ್ ಈ ಸಿರಿಯಜ್ಜಿ ಯಾರು ಗೊತ್ತಾ?’’ ನನ್ನ ಅಜ್ಜಿ ಎನ್ನಬೇಕೇ?
ಎಲ್ಲಿಯ ದೇರ್ಲ? ಇನ್ನೆಲ್ಲಿಯ ಚಿತ್ರದುರ್ಗದ ಗೊಲ್ಲರಹಟ್ಟಿ? ಜನಪದದ ಶಕ್ತಿಯೇ ಹೀಗೆ. ಯಾವುದೋ ಬಿಂದುವಿನಿಂದ ಚಲಿಸಿ, ಬಯಲಲ್ಲೇ ಸಾಗಿ ದೂರ ಬಹುದೂರ ಇನ್ನೆಲ್ಲಿಯೋ ಕಡಲ ಬದಿಗೆ ಮುಟ್ಟುತ್ತದೆ. ಕಾಲ ದೇಶ ಊರು ಮೀರಿಹರಿಯುತ್ತದೆ. ಅಜ್ಜನ ಮೀಸೆಯ ಹಾಗೆಯೇ. ಗಾಳಿಗೆ ಅಡರಿ ಎಲ್ಲೋ ನಿಂತು ಮತ್ತೆ ಎದ್ದುಬಿದ್ದು ಹಾರಿ ಹಾರಿ ನೂರಾರು ಮೈಲು ಸಾಗುತ್ತದೆ. ಬೀಜವನ್ನು ಅಲ್ಲಲ್ಲೇ ಉಳಿಸಿ ಮೊಳೆಸುತ್ತದೆ.
ಈ ಸಿರಿಯಜ್ಜಿ ಈಗ ನಮ್ಮೊಂದಿಗೆ ಇಲ್ಲ. 2009ರಲ್ಲಿ ಕಾಲವಾದರು. ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿಯ ಬುಡಕಟ್ಟು ಸಮುದಾಯದ ಈ ಅಜ್ಜಿ ಮದುವೆಯಾದದ್ದು ಅಲ್ಲೇ ಒಂದು ಮೈಲು ದೂರದ ಹೊಸ ಗೊಲ್ಲರಹಟ್ಟಿಯ ವರನನ್ನು. ತಾಯಿ ಕಾಡಮ್ಮ, ತಂದೆ ವೀರಪ್ಪ. ಹನ್ನೆರಡರ ಹರೆಯಕ್ಕೇ ಮದುವೆಯಾಯಿತು. ಬರಗಾಲದ ಪರಿಣಾಮವೋ ಏನೋ ಗಂಡ ಮದುವೆಯಾಗಿ ಸ್ವಲ್ಪದರಲ್ಲೇ ತೀರಿ ಹೋದರು. ತಾಯಿಮನೆಯಿಂದ ಗಂಡನ ಮನೆಗೆ ಬರುವಾಗಲೇ ಜಾನಪದವನ್ನು ರೂಢಿಸಿಕೊಂಡಿದ್ದ ಸಿರಿಯಜ್ಜಿ ಅತ್ತೆ ಮನೆಯಲ್ಲಿ ಮತ್ತೊಂದಿಷ್ಟು ಮೌಖಿಕ ಹಾಡು ಶಕ್ತಿಯನ್ನು ಬೆಳೆಸಿಕೊಂಡರು.
ಮೊದಮೊದಲು ದೇವರು ದೈವಕೇಂದ್ರಿತ ಇವರ ಹಾಡುಗಳು ನಿಧಾನವಾಗಿ ಸಮಾಜಮೂಲ ಆಚಾರ ವಿಚಾರ ಸಂಸ್ಕಾರವನ್ನು ಸೇರಿಸಿಕೊಂಡು ಪ್ರತಿಬಿಂಬಿಸತೊಡಗಿತು. ಉತ್ಸವಕ್ಕಾಗಿ ದೇವರು ಹೊರಗಡೆ ಬರುವುದು, ಅಲಂಕಾರಗೊಳ್ಳುವುದು, ಜಲಧಿಗೆ ಹೋಗುವುದು ಇಷ್ಟಕ್ಕೆ ಸೀಮಿತವಾಗಿದ್ದ ಹಾಡುಗಳು ಮುಂದೆ ಜುಂಜಪ್ಪ, ಗೊಲ್ಲರ ಲಗ್ನದ ಹಾಡುಗಳು ಸೇರಿಕೊಂಡವು.ತನ್ನ ಕೂಡುಸಮಾಜ ಬಂಧುಗಳ ಮದುವೆ ಸಂದರ್ಭದಲ್ಲಿ ಈ ಸಿರಿಯಜ್ಜಿ ಆರಂಭದಿಂದ ಕೊನೆಯವರೆಗೆ ಹಾಡುತ್ತಿದ್ದ ತ್ರಿಪದಿಗಳ ಸಂಖ್ಯೆಯೇ ಅಂದಾಜು ಒಂದು ಸಾವಿರಕ್ಕಿಂತ ಹೆಚ್ಚು. ಬರೀ ಮಸ್ತಕದಲ್ಲಿ ನೆನಪಿಟ್ಟುಕೊಂಡು ರಾತ್ರಿ ಹಗಲು ಹಾಡುತ್ತಿದ್ದ ಅಜ್ಜಿ ಆರಂಭದಲ್ಲಿ ಊರಿಗೆ, ನಿಧಾನವಾಗಿ ರಾಜ್ಯಕ್ಕೆ, ದೇಶಕ್ಕೆ ಬೆರಗಿನ ನಿಧಿಯಾಗಿ ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗೂ ಭಾಜನರಾದರು.
ಸಿರಿಯಜ್ಜಿ ಯಾವತ್ತೂ ಸೇರಿದ್ದ ಜನರನ್ನು ಕೇವಲ ನಗಿಸಲು, ರಂಜಿಸಲು, ಕುಣಿಸಲು ಇಂತಹ ಹಾಡುಗಳನ್ನು ಹಾಡೇ ಇಲ್ಲ. ಕಾಲ ಬದಲಾದಂತೆ ಜನಪದವು ರಂಗಿನೊಂದಿಗೆ ಬೆರೆತದ್ದು ಎಲ್ಲರಿಗೂ ಗೊತ್ತೇ ಇದೆ. ಅವರು ಹಾಡುತ್ತಿದ್ದ ಪ್ರತೀ ಹಾಡು ಹಿಮ್ಮೇಳವಾದ್ಯ ರಾಗವೈವಿಧ್ಯತೆ, ಗೆಜ್ಜೆ ಹೆಜ್ಜೆ ಮೇಳ ಇಲ್ಲದಿದ್ದರೂ ಆ ತ್ರಿಪದಿ ತನ್ನೊಳಗಡೆಯ ತಿರುಳು ಆಶಯ ತುಂಬಿ ಕೇಳುಗರನ್ನು ಸೆಳೆಯುತ್ತಿತ್ತು. ಅಜ್ಜಿ ಅತ್ಯಂತ ತಾಳ್ಮೆಯಿಂದ ಸಹನೆಯಿಂದ ಸಾಲು ಕಡಿಯದೆ ನೆನಪಿಸಿಕೊಂಡು ಮದುವೆ ಮನೆ ಉತ್ಸವಾದಿ ಚಪ್ಪರದೆಡೆಯಲ್ಲಿ ಕೂತು ಹಾಡಿದರೆ, ಬೇಡ ಮಾತನಾಡಿದರೆ ಸಾಕು ತಾಳ್ಮೆಯಿಂದ ಕೇಳುವ ಸಂಖ್ಯೆ ಬಹಳ ದೊಡ್ಡದಿತ್ತು.
ಈ ಸಿರಿಯಜ್ಜಿ ಹಾಡಿದಷ್ಟು ಶೋಭಾನೆ ಹಾಡುಗಳನ್ನು ಕರ್ನಾಟಕದ ಬೇರೆ ಯಾವ ಕಲಾವಿದರು, ಹಾಡುಗಾರರು ಹಾಡಿರಲಾರರು ಎನ್ನುತ್ತಾರೆ ಸಂಶೋಧಕರು. ಬುಡಕಟ್ಟು ಜನಾಂಗದ ಮನೆ ಮಕ್ಕಳ ಕಲ್ಯಾಣವೆಂದರೆ ವೈದಿಕರಿಲ್ಲದ ಚಪ್ಪರ, ವೈಭವ ಅಲಂಕಾರಗಳಿಲ್ಲದ ಅತ್ಯಂತ ಸರಳ ಕೂಡುಕಟ್ಟುಗಳು. ಚಪ್ಪರದ ಮಧ್ಯೆ ಸಿರಿಯಜ್ಜಿ ಕೂತು ಹಾಡುವುದೇ ಆ ಸಮಾರಂಭಕ್ಕೆ ಒಂದು ಅಲಂಕಾರ, ಭೂಷಣ.
ಆ ಸಮುದಾಯವೇ ಹಾಗೆ, ಎಲ್ಲೂ ಶ್ರೀಮಂತಿಕೆಯ ಪ್ರದರ್ಶನವಿಲ್ಲ. ಎದೆಯೊಳಗೆ ಬರೀ ಸಿರಿವಂತಿಕೆಯನ್ನು ತುಂಬಿ ಪ್ರಕೃತಿಯನ್ನು ನಿರಂತರ ಆರಾಧಿಸುವ ಕಾಡುಗೊಲ್ಲ ಸಮುದಾಯ ಯಾವತ್ತೂ ಆಧುನಿಕ ಮನೆಯನ್ನು ನಿರ್ಮಿಸಿದ್ದಿಲ್ಲ. ಅದು ಅವರಿಗೆ ನಿಷೇಧ. ಏನಿದ್ದರೂ ವೃತ್ತಾಕಾರದ ಒಂದೇ ಅಳತೆಯ ತಲೆ ತಗ್ಗಿಸಿಕೊಂಡು ಒಳ ಹೋಗುವ ಚಿಕ್ಕ ಬಾಗಿಲಿರುವ ಪುಟ್ಟಮನೆ. ಇವತ್ತಿಗೂ ಹೆಚ್ಚು ಶಾಲೆ ಓದದ ಈ ಜನಾಂಗ ಶಿಷ್ಟ, ಆಧುನಿಕ ಪರಂಪರೆಯನ್ನು ಹೆಚ್ಚು ಒಪ್ಪಿಕೊಳ್ಳದೆ ತಮ್ಮದೇ ಸಂಪ್ರದಾಯವನ್ನು ನಿಯತ್ತಿನಿಂದ ಪಾಲಿಸುತ್ತದೆ. ಮದುವೆಯಲ್ಲಿ ಹಸೆಚಿತ್ರ ಬರೆಯುವ ಕ್ರಮವಿದೆ. ಹಳ್ಳಿಯ ಮುಖ್ಯಸ್ಥರು ನಡುವೆ ನಿಂತು, ನಿರ್ದೇಶನ ಕೊಟ್ಟು ಮದುವೆ ಮಾಡಿಸುತ್ತಾರೆ. ಪ್ರಕೃತಿಯೇ ದೇವರಾಗಿ, ಕಲೆ ಸಾಹಿತ್ಯ ಪರಂಪರೆಯನ್ನು ಕಟ್ಟುನಿಟ್ಟಾಗಿ ಉಳಿಸಿಕೊಂಡು ಬಂದ ಈ ಇಡೀ ಸಮುದಾಯಕ್ಕೇ ಅಸ್ಮಿತೆಯಾಗಿರುವ ಒಂದು ದೊಡ್ಡ ಜನಪದ ಪ್ರಜ್ಞೆ -ಪ್ರತಿಭೆಯೇ ಈ ಸಿರಿಯಜ್ಜಿ.
ನನಗಿನ್ನೂ ನೆನಪಿದೆ, ತಾಯಿಯ ಹೊಟ್ಟೆಯಿಂದ ನನ್ನನ್ನು ಹೆರಿಗೆ ಮಾಡಿಸಿದ ನಮ್ಮೂರ ಲಕ್ಷ್ಮಿಯಜ್ಜಿ ಥೇಟ್ ಈ ಸಿರಿಯಜ್ಜಿಯ ಹಾಗೆಯೇ. ನಮ್ಮ ಊರಲ್ಲಿ ಆಗ ಆಕೆ ಬಿತ್ತುತ್ತಿದ್ದ ಜಾನಪದ ಕಥೆಗಳು, ಪಾಡ್ದಣ, ಸಿರಿಸಂಧಿಗಳು ಇವತ್ತಿಗೂ ನನ್ನ ತಲೆಮಾರಿನವರಲ್ಲಿ ನೆನಪಾಗಿ ಉಳಿದಿದೆ. ಆಗಿನ ಸೂಲಗಿತ್ತಿಯರೆಂದರೆ ಕಡಿಮೆ ಬೆಲೆಯ ಒಂದು ಸೀರೆ, ನಾಲ್ಕು ಸೇರು ಅಕ್ಕಿ, ಅಷ್ಟೇ ತೆಂಗಿನಕಾಯಿಗೆ ಎರಡು ಮೂರು ತಿಂಗಳು ಮನೆಯಲ್ಲಿದ್ದು ಸೇವೆ ಮಾಡುತ್ತಿದ್ದವರು. ಮನೆಯಲ್ಲಿ ಹೆರಿಗೆಗಾಗಿ ಲಕ್ಷ್ಮಿಯಜ್ಜಿ ಬಂದರೆ ಸಾಕು ಇಡೀ ಮನೆಯಲ್ಲಿ ಬೇರೆಯೇ ಹವೆ. ನಡೆಯುವಾಗ ಕೂರುವಾಗ ಮಾತನಾಡುವಾಗ ತಿನ್ನುವಾಗ, ಮಗುವನ್ನು ಮೀಯಿಸುವಾಗ, ಬಾಣಂತಿಯನ್ನು ಪೋಷಿಸುವಾಗ ಎಲ್ಲಾ ಕಡೆ ಅಜ್ಜಿ ಏನಾದರೂ ಒಂದು ಅಮೂಲ್ಯವಾದುದನ್ನೇ ಮೌಖಿಕವಾಗಿ ಬಿತ್ತುತ್ತಿದ್ದರು. ಆಗ ನಾವು ನಮ್ಮ ನಮ್ಮ ಅಜ್ಜಿ ಅಮ್ಮಂದಿರನ್ನು ಮರೆತು ಲಕ್ಷ್ಮಿಯಜ್ಜಿಯ ಸೆರಗು ಹಿಡಿದು ಹಿಂಬಾಲಿಸುತ್ತಿದ್ದೆವು. ಆನಂತರ ನಾವೆಲ್ಲಾ ಎಷ್ಟೋ ಶಾಲೆ ಕಲಿತಿರಬಹುದು, ಪುಸ್ತಕ ಓದಿರಬಹುದು, ನಾವೇ ಬರೆದಿರಬಹುದು. ಆದರೆ ಆ ಜಾನಪದ ಅಜ್ಜಿ, ಆ ಪರಂಪರೆ ಬಿತ್ತಿದ ಅನುಭವದ ಬೀಜಗಳು ಇವತ್ತೂ ನಮ್ಮೆಲ್ಲರ ಬುನಾದಿಯಲ್ಲಿ ಗಟ್ಟಿಯಾಗಿವೆ.
ಇಂಥ ಹಿರಿಯರ ಜನಪದ ಲೋಕಾನುಭವ, ಸಾಮೂಹಿಕ ಜ್ಞಾನ, ಸಂಸ್ಕೃತಿ, ಮೌಲ್ಯ ಮತ್ತು ಜೀವನ ಪಾಠಗಳನ್ನು ಒಳಗೊಂಡು ಪೀಳಿಗೆಯಿಂದ ಪೀಳಿಗೆಗೆ ರವಾನೆಯಾಗುತ್ತದೆ. ಸಿರಿಯಜ್ಜಿ, ಲಕ್ಷ್ಮಿಯಜ್ಜಿಯಂತಹವರ ಜನಪದ ಲೋಕಾನುಭವವು ಒಂದು ಸಾಂಸ್ಕೃತಿಕ ಹೆಗ್ಗುರುತೂ ಹೌದು. ಇವು ನಮ್ಮ ಸ್ಥಳೀಯ ಸಂಸ್ಕೃತಿ, ಜನಪದ ಸಂಪ್ರದಾಯ, ಜೀವನ ಶೈಲಿ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುತ್ತವೆ. ನಮ್ಮ ಸಾಂಸ್ಕೃತಿಕ ಗುರುತನ್ನು ಬಲಪಡಿಸುತ್ತವೆ ಮತ್ತು ನಮ್ಮ ಮೂಲಗಳೊಂದಿಗೆ ಸಂಪರ್ಕವನ್ನು ಗಟ್ಟಿಗೊಳಿಸುತ್ತವೆ. ನೈತಿಕ ಮಾರ್ಗದರ್ಶನ ನೀಡುತ್ತವೆ. ಧೈರ್ಯ, ಸತ್ಯ, ನ್ಯಾಯ, ತಾಳ್ಮೆ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನು ಕಲಿಸುತ್ತವೆ.
ನೈತಿಕ ಸಂದಿಗ್ಧತೆಗಳನ್ನು ಎದುರಿಸಲು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತವೆ. ಒಂದು ಅರ್ಥದಲ್ಲಿ ಇವು ಪ್ರಾಯೋಗಿಕ ಜ್ಞಾನ ಮತ್ತು ಬದುಕಿನ ಕೌಶಲ್ಯವೂ ಹೌದು. ಹಿರಿಯರ ಇಂಥ ಲೋಕಾನುಭವವು ಕೇವಲ ಹಾಡು, ಕಥೆಗಳಿಗೆ ಸೀಮಿತವಾಗಿರುವುದಿಲ್ಲ; ಬಹಳಷ್ಟು ಸಲ ಇವು ಸ್ಥಳೀಯ ಕೃಷಿ, ಗೃಹ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಸಂಘರ್ಷ ನಿವಾರಣೆ ಮತ್ತು ಪರಿಸರ ಸಂರಕ್ಷಣೆಯಂತಹ ಪ್ರಾಯೋಗಿಕ ಜ್ಞಾನವನ್ನೂ ಒಳಗೊಂಡಿದೆ.
ಇನ್ನೊಂದು ನಾವು ಗಮನಿಸಲೇಬೇಕಾದದ್ದು ಜನಪದರ ಕಾಲದ ಅಪಾರ ಕಲ್ಪನಾಶಕ್ತಿ ಮತ್ತು ಸೃಜನಶೀಲತೆ. ಸಿರಿಯಜ್ಜಿ, ಲಕ್ಷ್ಮಿಯಜ್ಜಿಯಂತಹವರ ಜನಪದರ ಕಥೆಗಳು ಇವತ್ತಿಗೂ ನಮ್ಮ ಕಲ್ಪನಾಶಕ್ತಿಯನ್ನು ಉತ್ತೇಜಿಸುತ್ತವೆ. ಹಿರಿಯರಿಂದ ಕೇಳಿದ ಕಥೆಗಳು, ಹಾಡುಗಳು, ಗಾದೆಗಳು ಸೃಜನಶೀಲ ಚಿಂತನೆಯನ್ನು ಬೆಳೆಸುತ್ತವೆ.ಎಲ್ಲವೂ ಶಿಥಿಲಗೊಳ್ಳುತ್ತಿರುವ ಕಾಲದಲ್ಲಿ ಸಾಮಾಜಿಕ ಸಂಬಂಧದ ಬಲವರ್ಧನೆಗೆ ಇವು ಕಾರಣವಾಗಬಹುದು. ಕೇಳುವ ಮತ್ತು ಹಂಚಿಕೊಳ್ಳುವ ಸ್ವಭಾವ ಶಕ್ತಿ ನಿರಂತರ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತದೆ.
ಜನಪದ ಕಥೆಗಳು ಸಾಮಾನ್ಯವಾಗಿ ಗುಂಪಿನಲ್ಲಿ ಹೇಳಲ್ಪಡುತ್ತವೆ, ಇದು ಸಾಮೂಹಿಕ ಒಗ್ಗಟ್ಟನ್ನು ಉತ್ತೇಜಿಸುತ್ತವೆ. ಇಂಥ ಜನಪದ ಲೋಕಾನುಭವವು ಕನ್ನಡ ಅಥವಾ ಇನ್ನಿತರ ಪ್ರಾದೇಶಿಕ ಭಾಷೆಯ ಸಂಪತ್ತನ್ನು ಕಾಪಾಡುತ್ತದೆ. ಅಜ್ಜಿಯರ ಕಥನಗಾರಿಕೆ, ಗಾದೆ-ಮಾತುಗಳು, ಜನಪದ ಗೀತೆಗಳು ಕನ್ನಡ ತುಳುವಿನ ಸೊಗಸಾದ ರೂಪವನ್ನು ಒಳಗೊಂಡಿವೆ. ಇದು ಭಾಷೆಯ ಕಲಿಕೆಗೆ ಮತ್ತು ಸ್ಥಳೀಯ ಭಾಷೆಯ ಸಂರಕ್ಷಣೆಗೆ ಸಹಾಯ ಮಾಡುತ್ತವೆ.
ಇಂಥ ಮೌಕಿಕ ಸಂರಚನೆಗಳು ಮನರಂಜನೆಯ ಗುಣವನ್ನು ಹೊಂದಿದ್ದೂ ಆಧುನಿಕ ಜೀವನದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸಿರಿಯಜ್ಜಿಯ ಕಥೆಯನ್ನು ಕೇಳುವುದು ಅಥವಾ ಚರ್ಚಿಸುವುದು ಮನಸ್ಸಿಗೆ ಆನಂದ ಮತ್ತು ವಿಶ್ರಾಂತಿಯನ್ನು ಒದಗಿಸುತ್ತದೆ. ಜನಪದ ಲೋಕಾನುಭವದಲ್ಲಿ ಕಂಡುಬರುವ ಸಾಮಾಜಿಕ, ಪರಿಸರೀಯ ಮತ್ತು ಆರ್ಥಿಕ ಜ್ಞಾನವು ಆಧುನಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಬಹುದು. ಉದಾಹರಣೆಗೆ, ಜನಪದ ಕಥೆಗಳಲ್ಲಿ ಕಂಡುಬರುವ ಸಮುದಾಯ ಕೇಂದ್ರಿತ ಜೀವನ ಶೈಲಿಯು ಇಂದಿನ ವೈಯಕ್ತಿಕತೆಯ ಯುಗದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸ್ಫೂರ್ತಿಯಾಗಬಹುದು.
ಈ ಲೋಕಾನುಭವವು ನಮ್ಮ ವಿಚಾರಧಾರೆಯನ್ನು ವಿಸ್ತರಿಸುತ್ತದೆ, ಜತೆಗೆ ಜೀವನದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮನ್ನು ನಮ್ಮ ಸಮುದಾಯದೊಂದಿಗೆ ಹೆಚ್ಚು ಸಂವಾದಿಸುತ್ತ ಇರುವಂತೆ ಮಾಡುತ್ತದೆ. ನಾವು ಈ ಲೋಕಾನುಭವವನ್ನು ಕಲಿತು, ಹಂಚಿಕೊಂಡರೆ ಜನಪದ ಸಂಪ್ರದಾಯವನ್ನು ಜೀವಂತವಾಗಿಡಲು ಸಹಕಾರಿಯಾಗುತ್ತದೆ. ಪ್ರಾಯೋಗಿಕ ಜೀವನಕ್ಕೆ ಇದು ಸರಳ ಮತ್ತು ಅಷ್ಟೇ ಪರಿಣಾಮಕಾರಿಯಾದ ಜೀವನ ಕೌಶಲ್ಯಗಳನ್ನು ಕಲಿಸುತ್ತದೆ.
ಹೀಗೆ ಈ ಹಿರಿಯ ಜನಪದರ ಲೋಕಾನುಭವವು ಕೇವಲ ಕಥೆಯೋ, ಗಾದೆಯೋ ಅಥವಾ ಹಾಡೋ ಅಲ್ಲವೇ ಅಲ್ಲ. ಅದು ಜೀವನದ ಒಂದು ಸಂಪೂರ್ಣ ದರ್ಶನ, ಇವುಗಳ ಮೂಲಕ ನಾವು ಸಾಂಸ್ಕೃತಿಕವಾಗಿ ಶ್ರೀಮಂತರಾಗುವುದಷ್ಟೇ ಅಲ್ಲ, ಜೀವನದ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥರಾಗುತ್ತೇವೆ. ಇದು ನಮ್ಮ ವೈಯಕ್ತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಒಟ್ಟಾರೆಯಾಗಿ ಸಮೃದ್ಧಗೊಳಿಸುತ್ತದೆ.