ಗಮನ ಸೆಳೆಯುತ್ತಿರುವ ‘ಬೆಂಗಳೂರು ಹುಡುಗರ’ ಸಮಾಜಮುಖಿ ಕಾರ್ಯಕ್ರಮಗಳು
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಮುಖಿ ಅಭಿಯಾನಗಳು, ಮರಗಳ ಸಂರಕ್ಷಣೆ, ರಸ್ತೆ ಸುರಕ್ಷತೆ, ದುಶ್ಚಟಗಳ ಅರಿವು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜ ಸೇವೆಯಲ್ಲಿ ತೊಡಗಿರುವ ‘ಬೆಂಗಳೂರು ಹುಡುಗರು’ ಎಂಬ ಯುವಜನರ ತಂಡವೊಂದು ತಮಗಾದಷ್ಟು ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.
ಸಾಮಾನ್ಯವಾಗಿ ಕೆಲ ಯುವಕರು ಮೋಜು-ಮಸ್ತಿ, ಪ್ರೀತಿ-ಪ್ರೇಮ ಎಂಬಿತ್ಯಾದಿಗಳಲ್ಲಿ ತೊಡಗಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಾರೆ, ಸಮಾಜದ ಬಗ್ಗೆ ಒಂದಿಷ್ಟು ಕಾಳಜಿ ಇರುವುದಿಲ್ಲ ಎಂಬ ಅಪವಾದವಿದೆ. ಇನ್ನೂ ಕೆಲವರು ದುಡಿಯಬೇಕು, ಹಣ ಮಾಡಬೇಕು ಅನ್ನುವ ಹಂಬಲದಲ್ಲಿಯೂ ಇದ್ದಾರೆ. ಇದರ ನಡುವೆಯೇ ‘ಬೆಂಗಳೂರು ಹುಡುಗರು’ ಎನ್ನುವ ತಂಡ ಮಾತ್ರ ನಗರಾದ್ಯಂತ ಸಾಮಾಜಿಕ ಕೆಲಸಗಳಲ್ಲಿ ತೊಡಗಿ ಇತರರಿಗೂ ಸ್ಫೂರ್ತಿಯಾಗಿ ಹೊರಹೊಮ್ಮಿದೆ.
ತಂಡ ಹುಟ್ಟಿದ್ದೇಗೆ?:
ಮನೆಯ ಹತ್ತಿರ ಮರವೊಂದಕ್ಕೆ ಒರಗಿ ನಿಂತಾಗ ಮರದಲ್ಲಿದ್ದ ಮೊಳೆಯೊಂದು ನನ್ನ ತಲೆಗೆ ತಾಕಿತು. ತಕ್ಷಣ ಈ ಮರಗಳಿಗೆ ಮೊಳೆ ಹೊಡೆಯುವುದೇತಕ್ಕೆ?, ಅವು ನಮ್ಮಂತೆ ಜೀವಿಯಲ್ಲವೇ ಎಂಬ ಯೋಚನೆ ಬಂದು ಸ್ನೇಹಿತರೆಲ್ಲ ಒಗ್ಗೂಡಿ ನಮ್ಮ ಮನೆಗಳ ಸುತ್ತಮುತ್ತ ಇರುವ ಮರಗಳಲ್ಲಿ ಹೊಡೆದ ಮೊಳೆ, ಪಿನ್, ಪೋಸ್ಟರ್ಸ್‌ಗಳನ್ನು ತೆಗೆಯುವ ಕೆಲಸ ಮಾಡಿದೆವು. ನಂತರದಲ್ಲಿ 2020ರಲ್ಲಿ ‘ಬೆಂಗಳೂರು ಹುಡುಗರು’ ಎನ್ನುವ ಹೆಸರನ್ನಿಟ್ಟು ತಂಡ ಕಟ್ಟಿ ನಗರಾದ್ಯಂತ ‘ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನ’ ಆರಂಭಿಸಲಾಯಿತು ಎನ್ನುತ್ತಾರೆ ತಂಡದ ಸಂಸ್ಥಾಪಕ ವಿನೋದ್ ಕರ್ತವ್ಯ.
ಮೊದಲಿಗೆ ಐದಾರು ಮಂದಿ ಯುವಕರಿಂದ ಆರಂಭಗೊಂಡ ‘ಬೆಂಗಳೂರು ಹುಡುಗರು’ ತಂಡದಲ್ಲಿ ಈಗ 45ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರಿದ್ದಾರೆ. ವಿದ್ಯಾರ್ಥಿಗಳು, ನೌಕರರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರು ನಮ್ಮೊಂದಿಗೆ ಇದ್ದುಕೊಂಡು ಸಾಮಾಜಿಕ ಕೆಲಸಗಳಿಗೆ ಕೈಜೋಡಿಸಿರುವುದು ನಮ್ಮ ತಂಡಕ್ಕೆ ಸಿಕ್ಕ ದೊಡ್ಡ ಗೆಲುವು ಎನ್ನುತ್ತಾರೆ ವಿನೋದ್ ಕರ್ತವ್ಯ.
ಫಲಾಪೇಕ್ಷೆಯಿಲ್ಲ, ಕರ್ತವ್ಯವಷ್ಟೇ:
ಈವರೆಗೆ 12ಕ್ಕೂ ಹೆಚ್ಚು ಅಭಿಯಾನಗಳನ್ನು ನಡೆಸಿದ್ದು, ಆರು ತಿಂಗಳಿಗೊಂದರಂತೆ ವರ್ಷಕ್ಕೆ ಎರಡು ಅಭಿಯಾನಗಳನ್ನು ಹಮ್ಮಿಕೊಳ್ಳುತ್ತೇವೆ. ಎಲ್ಲ ಅಭಿಯಾನಗಳಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ನಮ್ಮ ಅಭಿಯಾನಗಳಿಗೆ ತಗುಲುವ ಖರ್ಚು-ವೆಚ್ಚಗಳನ್ನು ಲೆಕ್ಕ ಹಾಕಿ ತಂಡದ ಸದಸ್ಯರೆಲ್ಲ ಇಂತಿಷ್ಟು ಎಂಬಂತೆ ಹಣ ಹಾಕುತ್ತೇವೆ. ದೊಡ್ಡ ಪ್ರಮಾಣದಲ್ಲಿ ಹಣದ ಖರ್ಚು ಇದ್ದರೂ, ನಾವೇ ಭರಿಸುತ್ತೇವೆ. ಯಾವುದೇ ಆರ್ಥಿಕ ನೆರವು, ಧನಸಂಗ್ರಹ ಮಾಡುವುದಿಲ್ಲ. ನಮ್ಮ ಸೇವೆ ಯಾವುದೇ ಫಲಾಪೇಕ್ಷೆಯಿಂದಲ್ಲ, ಬದಲಾಗಿ ಇದು ನಮ್ಮ ಕರ್ತವ್ಯ ಎನ್ನುತ್ತಾರೆ ವಿನೋದ್ ಕರ್ತವ್ಯ.
‘ಮೊಳೆ ಮುಕ್ತ ಮರ ಬೆಂಗಳೂರು’ ಅಭಿಯಾನದಿಂದ ನಗರದಲ್ಲಿ ಮರಗಳ ಮೇಲೆ ಹೊಡೆದಿರುವ ಮೊಳೆ, ಸ್ಟೇಪಲ್ ಪಿನ್, ಪೋಸ್ಟರ್ಸ್‌ಗಳನ್ನು ತೆಗೆಯುವುದು, ಹಾಗೂ ಆ ರೀತಿ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಕೆಲಸವನ್ನು ಮಾಡಿದೆವು. ಇದರಿಂದ ನಗರಾದ್ಯಂತ ಮೊಳೆ, ಪೋಸ್ಟರ‌್ಗಳಿಂದ ಕೂಡಿದ್ದ ನೂರಾರು ಮರಗಳನ್ನು ರಕ್ಷಿಸಲಾಯಿತು. ಮೊದಲ ಅಭಿಯಾನಕ್ಕೆ ಸಾರ್ವಜನಿಕರಿಂದ ಬಹಳಷ್ಟು ಸಹಕಾರವೂ ಸಿಕ್ಕಿತು ಎಂದು ಹೇಳುತ್ತಾರೆ ವಿನೋದ್.
ನಂತರದಲ್ಲಿ ‘ತಂಬಾಕು ಮುಕ್ತ ಯುವಜನತೆ’ ವಿಷಯದ ಕುರಿತು ಅಭಿಯಾನ ನಡೆಸಿ 18 ವರ್ಷ ಹರೆಯದ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ನೀಡುವುದು ತಪ್ಪು ಎಂದು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದು. ಶಾಲೆಗಳಲ್ಲಿ ಕಾರ್ಯಕ್ರಮ ರೂಪಿಸಿ ಅರಿವು ಮೂಡಿಸಿದ್ದು ಎರಡನೇ ಕಾರ್ಯಕ್ರಮ ಎಂದರು ವಿನೋದ್ ಕರ್ತವ್ಯ.
ಕೊರೋನ ವೇಳೆಯಲ್ಲಿ ಸಾರ್ಥಕತೆ:
2020ರ ಕೊರೋನ ವೇಳೆಯಲ್ಲಿ ಮನೆಯಲ್ಲಿ ಕ್ವಾರಂಟೈನ್ ಆದಂತವರಿಗೆ ಉಚಿತ ಊಟವನ್ನು ಅವರವರ ಮನೆಗೆ ವಿತರಿಸಿದ್ದು. ನಂತರದಲ್ಲಿ ಕೊರೋನ ಬಂದವರಿಗೆ oxymeter, termometer, vitamin tablets, steamer ಹಾಗೂ electrol powderಗಳ ಸಹಿತ ಉಚಿತ ಮೆಡಿಕಲ್ ಕಿಟ್‌ಗಳನ್ನು ಕೊಟ್ಟಿದ್ದು, ಇದೇ ಸಮಯದಲ್ಲಿ ರೈಲ್ವೆ ಪೊಲೀಸ್ ಹಾಸ್ಪಿಟಲ್‌ಗೆ ಮೂರು ‘oxygen concentrator’ಗಳನ್ನು ನೀಡಿದ್ದು, ನಂತರದಲ್ಲಿ ಕೆಲವು ಆಯ್ದ ಸರಕಾರಿ ಶಾಲೆಯ ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷೆಯ ಸಮಯದಲ್ಲಿ ಉಚಿತ ‘Immunity Booster’ ಕಿಟ್‌ಗಳನ್ನು ವಿತರಿಸಿದ್ದು.. ಹೀಗೆ ನಗರಾದ್ಯಂತ ತಂಡದ ಸದಸ್ಯರೆಲ್ಲರೂ ಕೋರೋನ ಸಮಯದಲ್ಲಿ ವಾರಿಯರ್‌ಗಳಂತೆ ಹೋರಾಡಿದೆವು ಎನ್ನುತ್ತಾ ಸಾರ್ಥಕ ಕ್ಷಣಗಳನ್ನು ಬಿಚ್ಚಿಡುತ್ತಾರೆ ವಿನೋದ್ ಕರ್ತವ್ಯ.
ಅಪಘಾತ ತಪ್ಪಿಸಲು ಪಣ: ‘ಗುಂಡಿ ಮುಕ್ತ ರಸ್ತೆ ಬೆಂಗಳೂರು’ ಎಂಬ ಅಭಿಯಾನವನ್ನು ಆರಂಭಿಸಿ ನಗರದ ಅನೇಕ ರಸ್ತೆಗಳಲ್ಲಿ ಕಂಡು ಬಂದಂತಹ ಗುಂಡಿಗಳ ಉದ್ದ, ಅಗಲ ಮತ್ತು ಆಳವನ್ನು ಅಳತೆ ಮಾಡಿ ಬಿ.ಬಿ.ಎಂ.ಪಿ ಯವರಿಗೆ ಆ ಜಾಗದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಅವರಿಗೆ ಇದರ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆವು. ಇದರಿಂದ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಹತ್ತಾರು ರಸ್ತೆ ಗುಂಡಿಗಳನ್ನು ಮುಚ್ಚಿಸಿ ವಾಹನಗಳ ಅಪಘಾತಗಳನ್ನು ತಪ್ಪಿಸಲು ಸಹಕಾರಿಯಾಯ್ತು ಎನ್ನುತ್ತಾರೆ ತಂಡ ಸಹ ಸಂಸ್ಥಾಪಕ ಮನೋಜ್ ನಂದೀಶಪ್ಪ.
ಬೆಂದಕಾಳೂರಿನ ಮರಗಳ ರಕ್ಷಣೆಗೆ ‘ಕೂಲ್ ಟ್ರೀ’ ಕ್ಯಾಂಪೇನ್
ಬೆಂಗಳೂರಿನ ಯಲಹಂಕ, ಇಂದಿರಾನಗರ, ನಾಗರಭಾವಿ, ಶಾಂತಲನಗರ, ಎಚ್‌ಎಸ್‌ಆರ್ ಲೇಔಟ್, ಡಾಲರ್ಸ್ ಕಾಲನಿ ಸೇರಿದಂತೆ ವಿವಿಧೆಡೆಗಳಲ್ಲಿ ಮರಗಳಿಗೆ ಬಿಬಿಎಂಪಿ ಅರಣ್ಯ ತಜ್ಞರ ಮಾರ್ಗದರ್ಶನದೊಟ್ಟಿಗೆ ನಾವೇ ತಯಾರಿಸಿದ ಬಿಸಿಲು ನಿರೋಧಕ ಲೋಷನ್ ಅಚ್ಚುವ ಮೂಲಕ ಮರಗಳ ರಕ್ಷಣೆ ಹಾಗು ಅದರ ಆರೋಗ್ಯ ಸುಧಾರಣೆಗಾಗಿ ಕಾರ್ಯಕ್ರಮ ನಡೆಸಿದೆವು. ಈವರೆಗೆ 500ಕ್ಕೂ ಹೆಚ್ಚುಗಳಿಗೆ ಲೋಷನ್ ಹಚ್ಚುವ ಮೂಲಕ ಮರದ ಸ್ಕಿನ್ ಟ್ಯಾನ್ ತಡೆಯಲು ‘ಕೂಲ್ ಟ್ರೀ’ ಕ್ಯಾಂಪೇನ್ ನಡೆಸಿದ್ದೇವೆ ಎಂದು ಹೇಳುತ್ತಾರೆ ವಿನೋದ್ ಕರ್ತವ್ಯ.
‘ವೃಷಭಾವತಿಗಾಗಿ ನಡಿಗೆ’ ಅಭಿಯಾನಕೆ್ಕ ಭಾರೀ ಮೆಚ್ಚುಗೆ
ರಿವೈವಲ್ ಹೆರಿಟೇಜ್ ಹಬ್ ತಂಡದ ಸಹಯೋಗದೊಂದಿಗೆ ಬೆಂಗಳೂರಿನ ಜೀವನದಿ ವೃಷಭಾವತಿ ಉಳಿವಿಗಾಗಿ ನದಿ ಹರಿಯುವ ಮತ್ತು ಉಗಮಗೊಳ್ಳುವ ಸ್ಥಳಗಳಿಗೆ ತೆರಳಿ ಆ ಸ್ಥಳದ ಮಹತ್ವವನ್ನು ಬೆಂಗಳೂರಿನ ಜನತೆಗೆ ಅರಿವು ಮೂಡಲಾಯಿತು. ಅನೇಕ ಬೆಂಗಳೂರಿಗರು, ಸಮಾಜಮುಖಿ ಸಂಘಟನೆಗಳು ‘ವೃಷಭಾವತಿಗಾಗಿ ನಡಿಗೆ’ ಅಭಿಯಾನಕ್ಕೆ ಬೆಂಬಲಿಸಿದವು. ನಮ್ಮ ನಡಿಗೆ ನಗರದಲ್ಲಿ ದೊಡ್ಡ ಸುದ್ದಿಯಾಯ್ತು, ಯಶಸ್ವಿಯನ್ನೂ ಕಂಡಿತು ಎನ್ನುತ್ತಾರೆ ತಂಡದ ಸಹ ಸಂಸ್ಥಾಪಕ ಮನೋಜ್ ನಂದೀಶಪ್ಪ.
‘ಭಿಕ್ಷಾಟನೆ ಮುಕ್ತ ಭಾರತ ಚಳುವಳಿ’ ಎಂಬ ಬೃಹತ್ ಅಭಿಯಾನವನ್ನು ಬೆಂಗಳೂರಿನಾದ್ಯಂತ ಎಲ್ಲಾ ಸಿಗ್ನಲ್‌ಗಳಲ್ಲಿ ಸಾರ್ವಜನಿಕರಿಗೆ ಅದರ ಬಗ್ಗೆ ಅರಿವನ್ನು ಮೂಡಿಸಲಾಯಿತು. ಸಿಗ್ನಲ್, ಪಾರ್ಕ್, ಮಂದಿರ, ಮಸೀದಿಗಳಲ್ಲಿರುವ ಭಿಕ್ಷುಕರಿಗೆ ಹಣ ಅಥವಾ ಇನ್ನಿತರೆ ವಸ್ತುಗಳನ್ನು ಕೊಡುವ ಬದಲು ಆಹಾರವನ್ನು ನೀಡಿ ಎಂದು ಅಭಿಯಾನ ಕೈಗೊಂಡಿದ್ದೆವು ಎನ್ನುತ್ತಾರೆ ಮನೋಜ್ ನಂದೀಶಪ್ಪ.
ಬೆಂಗಳೂರು ಹುಡುಗರು’ ತಂಡದ ಸದಸ್ಯರು ತಮ್ಮ ವೈಯಕ್ತಿಕ ಕೆಲಸಗಳ ನಡುವೆಯೂ ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯಾನನಗರಿ ಬೆಂಗಳೂರನ್ನು ಸಮೃದ್ಧಿ ಹಾಗೂ ಮಾದರಿ ನಗರವನ್ನಾಗಿಸುವ ನಿಟ್ಟಿನಲ್ಲಿ ನಮ್ಮದೊಂದು ಚಿಕ್ಕ ಅಳಿಲು ಸೇವೆಯಷ್ಟೇ. ಈವರೆಗೆ ನಡೆಸಿದ ಎಲ್ಲ ಅಭಿಯಾನಗಳಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ.
-ವಿನೋದ್ ಕರ್ತವ್ಯ, ʼಬೆಂಗಳೂರು ಹುಡುಗರುʼ ತಂಡದ ಸಂಸ್ಥಾಪಕ