ಸಿರಗುಪ್ಪ ಮೂಲದ ನಂದಿನಿ ಅಗಸರ ಏಶ್ಯನ್ ಗೇಮ್ಸ್‌ನಲ್ಲಿ ಕಂಚನ್ನು ಗೆದ್ದ ಕತೆ
ಚೀನಾದ ಹ್ಯಾಂಗ್‌ಝೌನಲ್ಲಿ 2023ರ ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ತನಕ 2022ರ 19ನೇ ಏಶ್ಯನ್ ಗೇಮ್ಸ್ ನಡೆದವು. ಭಾರತ 28 ಚಿನ್ನ, 38 ಬೆಳ್ಳಿ, 41 ಕಂಚು ಒಳಗೊಂಡಂತೆ 107 ಪದಕಗಳನ್ನು ಪಡೆದು ಭಾಗವಹಿಸಿದ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಅತ್ಲೆಟಿಕ್ಸ್ ನ ಹೆಪ್ಟಾತ್ಲಾನ್ ವಿಭಾಗದಲ್ಲಿ ತೆಲಂಗಾಣದ ನಂದಿನಿ ಅಗಸರ ಕಂಚಿನ ಪದಕ ಎತ್ತಿ ಹಿಡಿದರು. ಆಗ ಭಾರತದ ಮೀಡಿಯಾದಲ್ಲಿ ನಂದಿನಿ ಅಗಸರ ಎನ್ನುವ ಹೆಸರು ದೊಡ್ಡದಾಗಿ ಕೇಳಿ ಬಂತು. ಆಗ ಹೈದರಾಬಾದಿನಲ್ಲಿ ರಸ್ತೆ ಪಕ್ಕ ಟೀ ಶಾಪ್ ನಡೆಸುವ ಯಲ್ಲಪ್ಪನವರ ಮಗಳು ನಂದಿನಿ ಎನ್ನುವುದು ಮುನ್ನೆಲೆಗೆ ಬರುತ್ತದೆ. ಟೀವಿ, ಪತ್ರಿಕೆಗಳಲ್ಲಿ ಸಂದರ್ಶನ ಬರುತ್ತದೆ. ಇಂತಹ ನಂದಿನಿಯವರ ಮನೆಮಾತು ಕನ್ನಡ. ಅರೆ ನಂದಿನಿಗೂ ಕನ್ನಡಕ್ಕೂ ಎಲ್ಲಿಯ ಸಂಬಂಧ ಎಂದು ಹುಡುಕಾಟ ನಡೆಸಿದಾಗ, ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪಿನ ಅಗಸರ ಯಲ್ಲಪ್ಪ ಮತ್ತು ಐಯಮ್ಮ ದಂಪತಿಗೆ 2003 ಆಗಸ್ಟ್ 7ರಂದು ಒಂದು ಹೆಣ್ಣು ಮಗು ಹುಟ್ಟುತ್ತದೆ. ಹೊಟ್ಟೆಪಾಡಿಗಾಗಿ ಮೂರು ತಿಂಗಳ ಹೆಣ್ಣು ಮಗುವನ್ನು ಎತ್ತಿಕೊಂಡು ಹೈದರಾಬಾದಿಗೆ ವಲಸೆ ಹೋಗುತ್ತಾರೆ. ಆ ಹೆಣ್ಣು ಮಗುವೇ ಚೀನಾದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಪಡೆದ ನಂದಿನಿ ಅಗಸರ.
ನಂದಿನಿಯ ಸಿರಗುಪ್ಪ ಮೂಲದ ಬಗ್ಗೆ ತಂದೆ ಯಲ್ಲಪ್ಪರನ್ನು ಕೇಳಿದರೆ ಕಣ್ಣಿಗೆ ಕಟ್ಟುವಂತೆ ಬದುಕಿನ ತಿರುವುಗಳ ಕಥೆಯನ್ನು ಬಿಚ್ಚಿಡುತ್ತಾರೆ. ಸಿರಗುಪ್ಪದಿಂದ 15 ಕಿ.ಮೀ. ದೂರದಲ್ಲಿ ಶ್ರೀಮನ್ನಾರಾಯಣ ಕ್ಯಾಂಪ್ ಎನ್ನುವ ಮೂವತ್ತು ಮನೆಗಳ ಪುಟ್ಟ ಕ್ಯಾಂಪ್ ಇತ್ತು. ಇದು ಹೈದರಾಬಾದ್ ಮತ್ತು ವಿಜಯವಾಡದಿಂದ ಬಂದ ಜಮೀನ್ದಾರರು ಈ ಭಾಗದಲ್ಲಿ ಐವತ್ತೋ ನೂರೋ ಎಕರೆ ಜಮೀನು ಲೀಸ್ ಪಡೆದೋ, ಕೊಂಡುಕೊಂಡೋ ಕೃಷಿ ಮಾಡುತ್ತಿದ್ದವರದು. ರಾರಾವಿಯಲ್ಲಿ ಇಸ್ತ್ರಿ ಮಾಡಿಕೊಂಡಿದ್ದ ಈರಣ್ಣ ಮತ್ತು ಆತನ ಹೆಂಡತಿ ಶ್ರೀಮನ್ನಾರಾಯಣ ಕ್ಯಾಂಪ್‌ಗೆ ಬಂದು ಬಟ್ಟೆತೊಳೆದು, ಇಸ್ತ್ರಿ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಾರೆ. ಒಬ್ಬರಿಗೆ ಎರಡು ಚೀಲದಂತೆ ನೆಲ್ಲು ಕೊಡುತ್ತಾರೆ. ಗುಡಿಸಲೊಂದರಲ್ಲಿ ಬದುಕು ಸವೆಸುತ್ತಾರೆ. ಕಾಲಾನಂತರ ಐದು ಮಕ್ಕಳಾಗುತ್ತವೆ. ಮನೆ ಖರ್ಚು ಹೆಚ್ಚಾದಂತೆ ಜಮೀನ್ದಾರರಲ್ಲಿ ಒಂದು ಚೀಲ ಭತ್ತ ಹೆಚ್ಚು ಕೊಡಲು ಕೇಳುತ್ತಾರೆ. ಜಮೀನ್ದಾರರು ಇದಕ್ಕೆ ಸೊಪ್ಪು ಹಾಕುವುದಿಲ್ಲ. ಐದು ಜನ ಮಕ್ಕಳು ದೊಡ್ಡವರಾಗುತ್ತಾರೆ. ಇದೇ ಹೊತ್ತಿಗೆ ಈ ಕ್ಯಾಂಪಿಗೆ ಸ್ವಲ್ಪ ದೂರದಲ್ಲಿ ಶ್ರೀನಗರ ಕ್ಯಾಂಪಿನಲ್ಲಿ ಈರಣ್ಣನಿಗೆ ಜನತಾ ಮನೆ ಮುಂಜೂರಾಗುತ್ತದೆ. ಹಾಗಾಗಿ ಈತನ ಕುಟುಂಬ ಶ್ರೀನಗರ ಕ್ಯಾಂಪಿನಲ್ಲಿ ನೆಲೆಗೊಳ್ಳುತ್ತದೆ. ಮದುವೆ ವಯಸ್ಸಿಗೆ ಬಂದ ಮಗ ಯಲ್ಲಪ್ಪ ಮತ್ತು ಮತ್ತೊಬ್ಬ ಮಗಳಿಗೆ ಮದುವೆ ಮಾಡುತ್ತಾರೆ. ಹೊಸ ಮನೆ ಕಟ್ಟಿಕೊಳ್ಳುತ್ತಾರೆ. ಪರಿಣಾಮ ಒಂದೂವರೆ ಲಕ್ಷ ರೂ. ಸಾಲವಾಗುತ್ತದೆ. ಈ ಸಾಲ ತೀರಿಸಲು ಯಲ್ಲಪ್ಪನವರ ದುಡಿಮೆ ಸಾಕಾಗುವುದಿಲ್ಲ. ಈ ಮಧ್ಯೆ ಚೊಚ್ಚಲ ಮಗಳು ಹುಟ್ಟುತ್ತಾಳೆ. ಸಾಲ ತೀರಿಸಲು ದುಡಿಯಲೆಂದು ಮೂರು ತಿಂಗಳ ಮಗುವನ್ನು ಎತ್ತಿಕೊಂಡು 2004ರಲ್ಲಿ ಹೈದರಾಬಾದಿಗೆ ದುಡಿಯಲು ಹೋಗುತ್ತಾರೆ. ಆ ಮಗು ನಂದಿನಿ ಅಗಸರ.
ಹೈದರಾಬಾದಿನ ಕುಕ್ಕಟ್ಟಪಲ್ಲೆಯಲ್ಲಿಯ ಅಣ್ಣರ ಮನೆಯಲ್ಲಿ ಇಸ್ತ್ರಿ ಮಾಡುತ್ತಿದ್ದ ಯಲ್ಲಪ್ಪ ಮುಂದೆ ಬುಜ್ಜಮ್ಮ ಎನ್ನುವವರ ಸಹಾಯದಿಂದ ಹೈದರಾಬಾದಿನ ಹೈಟೆಕ್ ಸಿಟಿಯಲ್ಲಿ ಮನೆ ಮಾಡುತ್ತಾರೆ. ರಸ್ತೆಯಲ್ಲಿ ಒಂದು ಟೇಬಲ್ ಹಾಕಿಕೊಂಡು ಯಲ್ಲಪ್ಪ ಇಸ್ತ್ರಿ ಮಾಡಲು ನಿಲ್ಲುತ್ತಾರೆ. ಮೂರು ದಿನವಾದರೂ ಒಂದು ಜೊತೆ ಬಟ್ಟೆಯೂ ಬರುವುದಿಲ್ಲ. ಅಲ್ಲಿನ ಅಗಸರ ಯೂನಿಯನ್‌ನವರು ಹೊಸಬರಿಗೆ ಅವಕಾಶ ಕೊಡುವಂತಿರಲಿಲ್ಲ. ಮುಂದೇನು ಎನ್ನುವ ಚಿಂತೆ ಶುರುವಾಯಿತು. ಊಟಕ್ಕೂ ಕಷ್ಟವಾಯ್ತು. ಮುಂದೆ ಕೌನ್ಸಿಲರ್ ವರಲಕ್ಷ್ಮೀ ಅವರ ಸಹಾಯದಿಂದ ಚಂದ್ರಪುರಿ ಕಾಲನಿಯಲ್ಲಿ ಯಲ್ಲಪ್ಪನವರಿಗೆ ವಾಚ್‌ಮನ್ ಕೆಲಸ ಸಿಗುತ್ತದೆ. ರಾತ್ರಿ ವಾಚ್‌ಮನ್ ಕೆಲಸ ಮಾಡುತ್ತಾ ಹಗಲು ಇಸ್ತ್ರಿ ಮಾಡುವ ಕೆಲಸ ಶುರುಮಾಡುತ್ತಾರೆ. ವಾಸ ಹೈಟೆಕ್ ಸಿಟಿಯಿಂದ ಚಂದ್ರಾಪುರ ಕಾಲನಿಗೆ ಬದಲಾಗುತ್ತದೆ.
ಮುಂದೆ ಯಲ್ಲಪ್ಪ ಟೀಶಾಪ್ ತೆರೆಯುತ್ತಾರೆ. ನಂದಿನಿ ನಂತರ ಮತ್ತಿಬ್ಬರು ಗಂಡು ಮಕ್ಕಳಾಗುತ್ತವೆ. ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎನ್ನುವ ಕನಸು ಕಟ್ಟುತ್ತಾರೆ. ನಂದಿನಿಯನ್ನು ಚಂದ್ರಾಪುರ ಕಾಲನಿಯ ಕಾಪರದ (ಸೈನಿಕಪುರಿ) ವೀವಿಲ್ಲಿ ವಿಂಕಿ ಎನ್ನುವ ಸ್ಕೂಲಿಗೆ ಎಲ್‌ಕೆಜಿಗೆ ಸೇರಿಸುತ್ತಾರೆ. ಮುಂದೆ ವಿಜಯ ಸಾಯಿ ಸ್ಕೂಲಿನಲ್ಲಿ ಒಂದರಿಂದ ನಾಲ್ಕನೇ ತರಗತಿ ಓದುತ್ತಾಳೆ. ಎಡಕೈಯಲ್ಲಿ ಬರೆಯುವ ನಂದಿನಿ ಶಾಲೆಯಲ್ಲಿ ಎಲ್ಲದರಲ್ಲೂ ಮೊದಲಸ್ಥಾನ ಪಡೆವ ಜಾಣೆ. ನಂತರ ಕಮಲಮ್ಮ ಎನ್ನುವ ಟೀಚರ್ ಸಹಾಯದಿಂದ ಸೈನಿಕ ಕೇಂದ್ರೀಯ ವಿದ್ಯಾನಿಲಯದಲ್ಲಿ ನಂದಿನಿಗೆ ಸೀಟು ಸಿಗುತ್ತದೆ. ಕೇಂದ್ರೀಯ ವಿದ್ಯಾನಿಲಯದ ಪಿಟಿ ಟೀಚರ್ ಮುತ್ತಯ್ಯ ಎನ್ನುವವರು ನಂದಿನಿಯನ್ನು ಫುಟ್ಬಾಲ್‌ಗೆ ಸೇರಿಸಿಕೊಂಡು ತರಬೇತಿ ಕೊಡುತ್ತಾರೆ. ಫುಟ್ಬಾಲ್ ಟೀಮಲ್ಲಿ ದಿಲ್ಲಿ ತನಕ ಹೋಗುತ್ತಾಳೆ. ಒಮ್ಮೆ ಹೈದರಾಬಾದಿನ ಜಿಮ್ಖಾನ ಮೈದಾನದಲ್ಲಿ ಫುಟ್ಬಾಲ್ ಪಂದ್ಯದಲ್ಲಿ ನಂದಿನಿ ಎಷ್ಟೇ ಚೆನ್ನಾಗಿ ಆಡಿದರೂ ಪಂದ್ಯವನ್ನು ಗೆಲ್ಲಿಸಲಾಗುವುದಿಲ್ಲ. ಈ ಪಂದ್ಯ ವೀಕ್ಷಿಸಿದ ಯಲ್ಲಪ್ಪ ಮಗಳಿಗೆ ಇನ್ನುಮುಂದೆ ಒಬ್ಬಳೇ ಆಡುವ ಗೇಮ್‌ಗಳಲ್ಲಿ ಭಾಗವಹಿಸು ಎಂದು ಮಾರ್ಗದರ್ಶನ ಮಾಡುತ್ತಾರೆ. ಅಲ್ಲಿಂದ ನಂದಿನಿ ಅತ್ಲೀಟ್ ಆಟಗಳಲ್ಲಿ ತೊಡಗುತ್ತಾಳೆ. ಗಚ್ಚಿಬೌಲಿ ಸ್ಟೇಡಿಯಂನಲ್ಲಿ ಹೈಜಂಪ್‌ನಲ್ಲಿ ಗೆಲ್ಲುತ್ತಾಳೆ. ಅರ್ಜುನ ಪ್ರಶಸ್ತಿ ಪಡೆದ ನಾಗಪುರಿ ರಮೇಶ್ ಅವರ ಸಂಪರ್ಕ ಸಿಕ್ಕಮೇಲೆ ನಂದಿನಿಯ ಕ್ರೀಡಾ ಬದುಕಿನಲ್ಲಿ ಯಶಸ್ಸಿನ ಓಟ ಶುರುವಾಗುತ್ತದೆ.
ನಂದಿನಿ ಪೂರ್ಣ ಪ್ರಮಾಣದಲ್ಲಿ ಕೋಚಿಂಗ್‌ನಲ್ಲಿ ತೊಡಗಿಕೊಂಡಾಗ ಗೈರುಹಾಜರಿ ಸಮಸ್ಯೆಯಿಂದ ಕೇಂದ್ರೀಯ ವಿದ್ಯಾನಿಲಯವನ್ನು ತೊರೆಯುತ್ತಾಳೆ. ಹತ್ತನೇ ತರಗತಿಗೆ ತೆಲಂಗಾಣ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಗೋವ್ಲಿದೊಡ್ಡಿಯ ‘ಗುರುಕುಲ’ ಎನ್ನುವ ವಸತಿ ಶಾಲೆಯಲ್ಲಿ ಪ್ರವೇಶ ಪಡೆಯುತ್ತಾಳೆ. ಆರ್.ಎಸ್. ಪ್ರವೀಣ್ ಕುಮಾರ್ ಸಹಾಯ ಮಾಡುತ್ತಾರೆ. ‘‘ಸ್ಪೋರ್ಟ್ಸ್ ಎನ್ನುವ ಪದವನ್ನೇ ತಿಳಿಯದ ಕುಟುಂಬದಿಂದ ಬಂದ ನಾನು, ಭೂಪಟದಲ್ಲಿ ಮಾತ್ರ ನೋಡಿದ ಚೈನಾ, ಅಮೆರಿಕ, ಕೀನ್ಯಾದಂತಹ ದೇಶಗಳಿಗೆ ವಿಮಾನದಲ್ಲಿ ಪ್ರಯಾಣಿಸಿ ಭಾರತವನ್ನು ಪ್ರತಿನಿಧಿಸುತ್ತೇನೆ ಎಂದರೆ ಬಹಳ ಹೆಮ್ಮೆ ಅನ್ನಿಸುತ್ತದೆ’’ ಎಂದು ನಂದಿನಿ ಯಶಸ್ಸಿನ ಹಾದಿಯನ್ನು ನೆನೆಯುತ್ತಾರೆ. ಇದೀಗ ಈನಾಡು ಲಕ್ಷ್ಯ ಸ್ಪೋರ್ಟ್ಸ್ ಸಂಸ್ಥೆಯು ನಂದಿನಿಯವರ ಜವಾಬ್ದಾರಿಯನ್ನು ತೆಗೆದುಕೊಂಡಿದೆ.
2022 ಆಗಸ್ಟ್‌ನಲ್ಲಿ, ವಿಶ್ವ ಅತ್ಲೆೆಟಿಕ್ಸ್ ಯು20 ಚಾಂಪಿಯನ್‌ಶಿಪ್‌ನಲ್ಲಿ 100ಮೀ. ಹರ್ಡಲ್ಸ್ ನಲ್ಲಿ ಏಳನೇ ಸ್ಥಾನ ಪಡೆಯುತ್ತಾರೆ. 2022 ಅಕ್ಟೋಬರ್‌ನಲ್ಲಿ, ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಗೆಲ್ಲುತ್ತಾರೆೆ. 2021ರ ಜೂನ್‌ನಲ್ಲಿ, ಪಟಿಯಾಲದ ರಾಷ್ಟ್ರೀಯ ಅಂತರ್-ರಾಜ್ಯ ಹಿರಿಯ ಅತ್ಲೆೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆಯುತ್ತಾರೆೆ. ಹೀಗೆ ಶುರುವಾದ ನಂದಿನಿಯವರ ಗೆಲುವಿನ ಪಯಣದಲ್ಲಿ ಈತನಕ 24 ಬಂಗಾರ, 10 ಬೆಳ್ಳಿ, 5 ಕಂಚಿನ ಪದಕಗಳನ್ನು ಒಳಗೊಂಡಂತೆ ರಾಜ್ಯ, ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದ ಒಟ್ಟು 70ರಷ್ಟು ಪದಕಗಳನ್ನು ಗೆದ್ದಿದ್ದಾರೆ. ಪ್ಯಾಸ್ಕುವಲ್ ಗೆರೆರೋ ಸ್ಟೇಡಿಯಂ, ಕ್ಯಾಲಿ, ಕೊಲಂಬಿಯಾ ಮೊದಲಾದ ಕಡೆ ರಾಷ್ಟ್ರೀಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿಹಿಡಿದಿದ್ದಾರೆ.
ಮಗಳ ಸಾಧನೆಯ ಬಗ್ಗೆ ಯಲ್ಲಪ್ಪ ಮನದುಂಬಿ, ‘‘ಇದೀಗ ಮುಂದೆ ಬರುವ ಕಾಮನ್ ವೆಲ್ತ್ ಗೇಮ್ಸ್‌ಗೆ ತಯಾರಿ ಮಾಡುತ್ತಿದ್ದಾಳೆ. 2028ರಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ನನ್ನ ಮಗಳು ನೂರಕ್ಕೆ ನೂರರಷ್ಟು ಆಯ್ಕೆಯಾಗುತ್ತಾಳೆ. ಭಾರತಕ್ಕೆ ಚಿನ್ನದ ಪದಕ ತಂದೇ ತರುತ್ತಾಳೆ’’ ಎಂದು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ. ನಂದಿನಿಯವರ ಈ ಯಶಸ್ಸಿನ ಹಾದಿ ಸುಲಭದ್ದಲ್ಲ, ಹಗಲು-ರಾತ್ರಿಯೆನ್ನದೆ ಕನಸು ಮನಸ್ಸಲ್ಲಿ ತಾನು ಆಡುವ ಆಟಗಳನ್ನೇ ಧ್ಯಾನಿಸುತ್ತಾ ನಿರಂತರ ತರಬೇತಿ, ಕಠಿಣ ಪರಿಶ್ರಮದಿಂದಾಗಿ ಈ ಮಟ್ಟಕ್ಕೆ ತಲುಪಿದ್ದಾರೆ. ಇಸ್ತ್ರಿ ಮಾಡಿಯೂ, ಟೀ ಶಾಪ್ ನಡೆಸಿಯೂ ಕುಟುಂಬ ನಡೆಸಿ ಕಷ್ಟಪಟ್ಟು ಓದಿಸಿದ ತಂದೆ ತಾಯಿ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕೆನ್ನುವುದು ನಂದಿನಿಯ ಕನಸು. ಇದೀಗ ಅಪ್ಪ ತನಗಾಗಿ ಮಾಡಿದ ಸಾಲವನ್ನೆಲ್ಲಾ ತೀರಿಸಿದ್ದಾರೆ. ಅಪ್ಪನಿಗೆ ಮೆನ್ಸ್ ವೇರ್ ಬಟ್ಟೆಅಂಗಡಿ ಇಟ್ಟುಕೊಟ್ಟಿದ್ದಾರೆ. ಸಿರಗುಪ್ಪ ಸಮೀಪದ ಶ್ರೀನಗರ ಕ್ಯಾಂಪಿನಿಂದ ಚೀನಾದ ತನಕ ಪಯಣಿಸಿದ ನಂದಿನಿ ಅಗಸರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.