ದೇಶದ ಹಿತ ಕಾಯುವಲ್ಲಿ ಅಂದು ವಾಜಪೇಯಿ ವೈಫಲ್ಯ, ಇಂದು ಮೋದಿ ವೈಫಲ್ಯ!
ಭಾರತದ ನೆಲದೊಳಕ್ಕೆ ಚೀನಾ ಸೇನೆ ಪ್ರವೇಶಿಸಿ ಕಾರುಬಾರು ನಡೆಸುತ್ತಿದೆಯೆಂಬುದು ಹಳೆಯ ಆರೋಪವಾಗಿದೆ. ಆದರೆ ಮೊನ್ನೆಮೊನ್ನೆಯೂ ಚೀನಾ ಸೇನೆ ಅದನ್ನೇ ಮಾಡಿಕೊಂಡಿದೆ ಎಂಬ ಸುದ್ದಿಯೊಂದು ಬಂದಿದೆ.
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಕಪಾಪು ಪ್ರದೇಶದಲ್ಲಿ ಚೀನಾ ಸೇನೆ 60 ಕಿ.ಮೀ. ವ್ಯಾಪ್ತಿಯಷ್ಟು ಒಳಗಡೆ ಬಂದು ಬೀಡುಬಿಟ್ಟಿರುವುದಾಗಿ ವರದಿಯಾಗಿದೆ.
ಬಂಡೆಗಳ ಮೇಲೆಲ್ಲ ಚೀನಿ ಅಕ್ಷರಗಳಲ್ಲಿ ಬರೆದಿರುವುದು, ಚೀನಾ ಆಹಾರ ಸಾಮಗ್ರಿಗಳ ಚಿತ್ರಗಳು ವೈರಲ್ ಆಗುತ್ತಿದ್ದು, ಸುಮಾರು ಒಂದು ವಾರದ ಹಿಂದೆ ಚೀನಾ ಸೇನೆ ಭಾರತೀಯ ಭೂಪ್ರದೇಶದ ಒಳಕ್ಕೆ ಬಂದಿರಬೇಕು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ಮೆಕ್ ಮಹೊನ್ ಲೈನ್‌ನಲ್ಲಿನ ಹಾದಿಗ್ರಾ ಪಾಸ್ ಬಳಿಯ ಕೊನೆಯ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಶಿಬಿರ ಕಪಾಪುದಲ್ಲಿದೆ. ಆದರೆ ಅದು ಈಗ ಸೇನೆ ಪ್ರವೇಶಿಸಿರುವ ಅಂಜಾವ್ ಜಿಲ್ಲೆಯ ಹತ್ತಿರದ ಆಡಳಿತ ವಲಯವಾದ ಚಗ್ಲಗಮ್ ಮೆಕ್ ಮಹೋನ್ ಲೈನ್‌ನಿಂದ ಸುಮಾರು 90 ಕಿ.ಮೀ.ದೂರದಲ್ಲಿದೆ.
ಗ್ಲೈಟಕ್ರು ಪಾಸ್ ಹೆಸರಿನ ಮತ್ತೊಂದು ಮೌಂಟೇನ್ ಪಾಸ್, ಚಗ್ಲಗಮ್ ನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ.
2022ರ ಆಗಸ್ಟ್‌ನಲ್ಲಿ ಕೂಡ ಹೀಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಇಂಥದೇ ಚಿತ್ರಗಳು ವ್ಯಾಪಕವಾಗಿ ಹರಡಿದ್ದವು. ಚೀನಾ ಸೇನೆ ಹಡಿಗ್ರಾ ಸರೋವರದ ಬಳಿ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿದೆ ಎಂಬ ಸೂಚನೆಗಳು ಆ ಚಿತ್ರಗಳಿಂದ ಸಿಕ್ಕಿದ್ದವು. ಆ ಪ್ರದೇಶದಲ್ಲಿ ಮೂರು ಅಗೆಯುವ ಯಂತ್ರಗಳು ಕೂಡ ಕಂಡಿದ್ದವು.
ಚಗ್ಲಗಮ್‌ನಿಂದ 30 ಕಿ.ಮೀ.ಗಿಂತ ಕಡಿಮೆ ದೂರದಲ್ಲಿರುವ ಈ ಸ್ಥಳದಲ್ಲಿ 2022ರ ಆಗಸ್ಟ್ 11ರಂದು ಭಾರತೀಯ ಸೇನೆಯ ಗುಪ್ತಚರ ವಿಭಾಗದ ತಂಡ ಮೇಲ್ವಿಚಾರಣೆ ಮಾಡಿದಾಗ, ಚೀನಾ ಸೇನೆಯ ಶಿಬಿರ ಇದ್ದುದು ಖಚಿತವಾಗಿತ್ತು.
2021ರಲ್ಲಿ ಎನ್‌ಡಿಟಿವಿ ಪ್ರಸಾರ ಮಾಡಿದ್ದ ಉಪಗ್ರಹ ಚಿತ್ರಗಳು ಕೂಡ ಅರುಣಾಚಲ ಪ್ರದೇಶದಲ್ಲಿ ಭಾರತೀಯ ನೆಲದೊಳಗೆ ಕನಿಷ್ಠ 60 ಕಟ್ಟಡಗಳ ಎರಡನೇ ಕ್ಲಸ್ಟರ್ ನಿರ್ಮಾಣವಾಗಿರುವುದನ್ನು ತೋರಿಸಿದ್ದವು.
2020ರಲ್ಲಿ ಚೀನಾ ಸೇನೆ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ ಭಾರತೀಯ ಭೂಪ್ರದೇಶದೊಳಕ್ಕೆ ಬಂದಿದ್ದುದು, 2019ರಲ್ಲಿ ಅಮಾಕೊ ಕ್ಯಾಂಪ್‌ನಲ್ಲಿ ಭಾರತದ ಭೂಪ್ರದೇಶದೊಳಗೆ ಸುಮಾರು 40 ಕಿ.ಮೀ. ವ್ಯಾಪ್ತಿಯಲ್ಲಿನ ಡೊಯಿಮ್ರು ನಾಲಾ ಮೇಲೆ ಮರದ ಸೇತುವೆ ನಿರ್ಮಿಸಿದ್ದುದು ಈ ಹಿಂದಿನ ಘಟನೆಗಳಾಗಿವೆ.
ಹೀಗೆ ಕಳೆದ ಕೆಲವು ವರ್ಷಗಳಿಂದ ಚೀನಾ ಸೇನೆ ಭಾರತದ ಭೂಪ್ರದೇಶದೊಳಕ್ಕೆ ನುಗ್ಗಿಕೊಂಡಿದ್ದರೂ ಮೋದಿ ಮತ್ತವರ ಸರಕಾರ ‘ಇಲ್ಲವೇ ಇಲ್ಲ’ ಎಂದು ಬಾಯಿಪಾಠ ಮಾಡಿಕೊಂಡ ಮಾತುಗಳನ್ನೇ ಒಪ್ಪಿಸುತ್ತ ಬಂದಿರುವುದು ವಿಪರ್ಯಾಸ. ಚೀನಾ ವಿರುದ್ಧವಾಗಿ ಒಂದೇ ಒಂದು ಮಾತಾಡುವ ಧೈರ್ಯವನ್ನೂ ಮೋದಿ ಮಾಡುತ್ತಿಲ್ಲ. ಅಷ್ಟು ಮಾತ್ರವಲ್ಲದೆ, ಸೇನೆಯಿಂದಲೂ ಪ್ರಾಯಶಃ ಅಂಥದೇ ಮಾತುಗಳನ್ನು ಹೇಳಿಸಲಾಗುತ್ತಿದೆ.
ಈಗಲೂ ಭಾರತದ ಭೂಪ್ರದೇಶದೊಳಗೆ ಚೀನಾ ಸೇನೆಯ ನುಗ್ಗುವಿಕೆ ಕುರಿತ ಮಾಧ್ಯಮ ವರದಿಗಳನ್ನು ಭಾರತದ ಸೇನೆ ಅಲ್ಲಗಳೆದಿದೆ. ಯಾವುದೇ ಆಕ್ರಮಣ ನಡೆದಿಲ್ಲ ಎಂದು ಸೇನೆ ಹೇಳಿದೆ.
ಆ ಪ್ರದೇಶದಲ್ಲಿ ನಿಯೋಜಿಸಲಾದ ನಮ್ಮ ಪಡೆಗಳು ಪರಿಶೀಲನೆ ನಡೆಸಿವೆ. ಆದರೆ ಚೀನಾ ಸೇನೆ ಭಾರತದ ಭೂಪ್ರದೇಶದೊಳಕ್ಕೆ ಬಂದಿದೆಯೆಂಬುದು ಸುಳ್ಳು. ಅಂಜಾವ್ ಜಿಲ್ಲೆಯಲ್ಲಿ ಅಂತಹ ಯಾವುದೇ ಆಕ್ರಮಣ ನಡೆದಿಲ್ಲ ಎಂದು ರಕ್ಷಣಾ ಮೂಲಗಳು ಹೇಳಿರುವುದಾಗಿ, ಆ ಕುರಿತು ವರದಿ ಪ್ರಕಟಿಸಿದ್ದ ಮಾಧ್ಯಮಗಳು ಸ್ಪಷ್ಟನೆ ನೀಡಿವೆ.
ಆದರೆ, ಸತ್ಯ ಬೇರೆಯೇ ಇದೆಯೆಂಬುದನ್ನು ಮುಚ್ಚಿಹಾಕಲು ಸಾಧ್ಯವಾಗಲಾರದು.
ಅರುಣಾಚಲ ಪ್ರದೇಶದಲ್ಲಿ ಭಾರತದ ನೆಲದೊಳಕ್ಕೆ ಚೀನಾ ಸೇನೆಯ ಇರುವಿಕೆ ಸಾಬೀತುಪಡಿಸುವ ಚಿತ್ರಗಳನ್ನು ಉಲ್ಲೇಖಿಸುವ ವರದಿಯನ್ನು ಸ್ವತಃ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಕೂಡ ಹಂಚಿಕೊಂಡಿದ್ದಾರೆ ಮತ್ತು ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೋದಿಗೆ ಚೀನಾ ವಿರುದ್ಧ ಮಾತಾಡಲು ಧೈರ್ಯವಿಲ್ಲ ಎಂದೂ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
2005ರಿಂದ 2019ರವರೆಗೆ ಚೀನಾಕ್ಕೆ ಹಲವಾರು ಬಾರಿ ಭೇಟಿ ನೀಡಿರುವ ಮೋದಿ, ಚೀನಾದ ಆತಿಥ್ಯದಿಂದ ರಾಜಿಯಾಗಿದ್ದಾರೆ ಮತ್ತು ವಿರುದ್ಧವಾಗಿ ಮಾತನಾಡಲು ಹೆದರುತ್ತಾರೆ ಎಂಬುದು ಸುಬ್ರಮಣಿಯನ್ ಸ್ವಾಮಿ ಮಾಡಿರುವ ಗಂಭೀರ ಆರೋಪ.
ಯಾರೂ ಬಂದಿಲ್ಲ ಎಂದು ಮೋದಿ ಕುರಿಯ ಹಾಗೆ ಹೇಳುತ್ತಾರೆ. ಲಡಾಖ್ ಮತ್ತು ಅರುಣಾಚಲಕ್ಕೆ ಭೇಟಿ ನೀಡಲು ಅವರು ತಯಾರಿಲ್ಲ ಎಂದಿರುವ ಸ್ವಾಮಿ, ಗಡಿಭಾಗಕ್ಕೆ ಮೋದಿ ಭೇಟಿ ನೀಡಬೇಕೆಂಬುದು ಜನರ ಒತ್ತಾಯವಾಗಿದೆ ಎಂದಿದ್ದಾರೆ.
ಹೀಗೆ ಅವರದೇ ಪಕ್ಷದ ನಾಯಕರೇ ದಿಟ್ಟತನದಿಂದ ಮೋದಿ ಹುಳುಕುಗಳನ್ನು, ಮೋದಿಗಿರುವ ಭಯವನ್ನು, ಮೋದಿ ಮರೆಮಾಚುತ್ತಿರುವ ಸತ್ಯಗಳನ್ನು ಬಯಲಿಗೆ ತರುತ್ತಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ, ಇದೇ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಾಗ ಮಾಡುತ್ತಿದ್ದುದು, ಯಾವಾಗಲೂ ಯುದ್ಧ ಮತ್ತು ಪ್ರತೀಕಾರದ ಬಗ್ಗೆ ಪ್ರಚೋದನಕಾರಿಯಾಗಿ ಬೊಬ್ಬೆ ಹೊಡೆಯುವ ಕೆಲಸ. ಆದರೆ ಯಾವಾಗ ಅಧಿಕಾರಕ್ಕೆ ಬಂತೋ ಅದರ ಅಬ್ಬರ, ಆವೇಶಗಳೆಲ್ಲ ಎಲ್ಲಿ ಜಾರಿತೋ ಗೊತ್ತಿಲ್ಲ.
ನೇಪಥ್ಯದಲ್ಲಿ ಹೂಂಕರಿಸುತ್ತಿದ್ದವರು ತಾವೇ ಎದುರಿಸಬೇಕಾಗಿ ಬಂದಾಗ ಧೈರ್ಯ ಉಡುಗಿದವರ ಹಾಗೆ ತೆಪ್ಪಗಾಗಿದ್ದಾರೆ.
ಬಿಜೆಪಿಯ ಬಣ್ಣ ಅದರ ಮೌನದಲ್ಲಿ, ಅದರ ಗೊಂದಲಗಳಲ್ಲಿ, ತಾನೇ ಅಚ್ಚರಿಯಲ್ಲಿ ಮುಳುಗಿಹೋಗುವ ಅದರ ರೀತಿಯಲ್ಲಿ ಬಯಲಾಗಿ ಹೋಗುತ್ತಿದೆ.
ಈ ಬಗ್ಗೆ ಪತ್ರಕರ್ತೆ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ‘ದಿ ಪ್ರಿಂಟ್’ ವೆಬ್ ಸೈಟ್‌ಗೆ ಬರೆದಿದ್ದಾರೆ.
ಅವರ ಕೆಲವು ವಿಚಾರಗಳನ್ನು ಇಲ್ಲಿ ಗಮನಿಸೋಣ.
ಕಂದಹಾರ್ ವಿಮಾನ ಅಪಹರಣ ಕುರಿತಾದ ನೆಟ್‌ಫ್ಲಿಕ್ಸ್ ವೆಬ್‌ಸಿರೀಸ್ ವಿಚಾರವಾಗಿ ಇತ್ತೀಚೆಗೆ ಬಿಜೆಪಿ ಎಬ್ಬಿಸಿದ ವಿವಾದದ ಬಗ್ಗೆ ಪ್ರಸ್ತಾಪಿಸುವ ಘೋಷ್, ವೆಬ್ ಸೀರೀಸ್‌ನಲ್ಲಿ ಪಾತ್ರಗಳ ಹೆಸರುಗಳ ಬಗ್ಗೆ ಬಿಜೆಪಿ ಎತ್ತಿದ್ದ ತಕರಾರಿನ ಹಿಂದಿರುವ ಬೇರೆಯದೇ ಮರ್ಮದ ಬಗ್ಗೆ ಹೇಳುತ್ತಾರೆ.
ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಐವರು ಅಪಹರಣಕಾರರಲ್ಲಿ ಇಬ್ಬರದು ಹಿಂದೂ ಹೆಸರುಗಳಾದ ಶಂಕರ್ ಮತ್ತು ಭೋಲಾ ಎಂದಿರುವುದರ ಕುರಿತ ತಕರಾರು, ಬಿಜೆಪಿಯ ಆಕ್ರೋಶಕ್ಕೆ ಬರೀ ತೋರಿಕೆಯ ಕಾರಣ ಎನ್ನುತ್ತಾರೆ ಘೋಷ್.
ಅಷ್ಟಕ್ಕೂ ಅಪಹರಣಕಾರರು ತಮ್ಮ ಗುರುತನ್ನು ಮರೆಮಾಚಲು ನಿಕ್‌ನೇಮ್ ಇಟ್ಟುಕೊಂಡದ್ದನ್ನು ಮತ್ತು ಹೈಜಾಕ್ ವೇಳೆ ಉದ್ದಕ್ಕೂ ಅವರು ಆ ಹೆಸರುಗಳನ್ನೇ ಬಳಸಿದ್ದರು ಎಂಬುದನ್ನು ಹೈಜಾಕ್ ಪ್ರಕರಣಕ್ಕೆ ಸಾಕ್ಷಿಯಾಗಿದ್ದವರು ಹೇಳಿರುವುದು ದಾಖಲಾಗಿದೆ.
ಹೈಜಾಕ್ ಪ್ರಕರಣದ ಕೆಲ ದಿನಗಳ ನಂತರವಷ್ಟೇ ಅಪಹರಣಕಾರರ ನಿಜವಾದ ಹೆಸರುಗಳು ಬಯಲಾಗಿದ್ದವು.
ವೆಬ್ ಸಿರೀಸ್ ಪಾಕಿಸ್ತಾನದ ಐಎಸ್‌ಐ ಪಾತ್ರದ ಬಗ್ಗೆ ಸಾಕಷ್ಟು ಹೇಳುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದ್ದರೂ, ನೆಟ್‌ಫ್ಲಿಕ್ಸ್ ಬಹಿಷ್ಕಾರಕ್ಕೆ ಬಿಜೆಪಿ ಬೆಂಬಲಿಗರು ಒತ್ತಾಯಿಸಿದ್ದರೂ, ಬಿಜೆಪಿಯ ಸಿಟ್ಟಿಗೆ ನಿಜವಾದ ಕಾರಣ ಅದು ಅಲ್ಲವೇ ಅಲ್ಲ ಎಂಬುದು ಸಾಗರಿಕಾ ಅವರ ಅಭಿಪ್ರಾಯ. ಅವರ ಪ್ರಕಾರ, ಬಿಜೆಪಿಯ ಅಸಲೀ ಸಿಟ್ಟು ಇರುವುದೇ IC 814 ಅಪಹರಣ ಪ್ರಕರಣದ ಬಗ್ಗೆ.
IC 814 ಅಪಹರಣದಿಂದಾಗಿ ಅವತ್ತಿನ ಬಿಜೆಪಿ ನೇತೃತ್ವದ ಸರಕಾರದ ದೌರ್ಬಲ್ಯ, ಗೊಂದಲ, ನಿರ್ಣಾಯಕ ನಾಯಕತ್ವದ ಕೊರತೆ ಮತ್ತು ಭಯೋತ್ಪಾದಕರೊಂದಿಗೆ ರಾಜಿ ಮಾಡಿಕೊಂಡ ಅದರ ಪುಕ್ಕಲುತನ ಎಲ್ಲವೂ ಬಯಲಾಗಿರುವುದು ಇವತ್ತಿನ ಬಿಜೆಪಿಗೆ ಚುಚ್ಚುತ್ತಿದೆ.
ಬಿಜೆಪಿಯ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒತ್ತಡಕ್ಕೆ ಮಣಿದು ನಿರ್ಧಾರ ತೆಗೆದುಕೊಂಡರು ಮತ್ತು ಅವರ ಸರಕಾರ ತಪ್ಪು ಉದ್ದೇಶಗಳಿಗಾಗಿ ಕೆಲಸ ಮಾಡಿತು ಎಂಬುದರ ದಾಖಲೆಯಾಗಿ ಆ ಘಟನೆ ಬಿಜೆಪಿಯನ್ನು ಕಾಡುತ್ತಿದೆ.
IC 814 ಘಟನೆ ಒಂದು ವೈಫಲ್ಯ, ನಾಚಿಕೆಗೇಡು, ಅವಮಾನ. ಅದಕ್ಕಾಗಿಯೇ, ರಾಷ್ಟ್ರೀಯತೆ ಬಗ್ಗೆ ದೊಡ್ಡ ದೊಡ್ಡ ಮಾತಾಡುವ ಇವತ್ತಿನ ಬಿಜೆಪಿಗೆ 1999ರ ಹೈಜಾಕ್ ಪ್ರಕರಣ ನೆನಪಿಸಿಕೊಳ್ಳಲು ಇಷ್ಟವಿಲ್ಲ.
IC 814 ಅಪಹರಣದ ವೇಳೆ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್ ಸಿಂಗ್, ಆಗಿನ ಖಂW ಮುಖ್ಯಸ್ಥ ಎ.ಎಸ್. ದುಲಾತ್ ಹಾಗೂ ವಾಜಪೇಯಿ ಆಪ್ತರಾಗಿದ್ದ ನಾರಾಯಣ್ ಮಾಧವ್ ಘಾಟಾಟೆ ಅವರನ್ನು ಸ್ವತಃ ಮಾತನಾಡಿಸಿದ್ದ ಘೋಷ್, ಅಪಹರಣ ನೋವಿನ ನೆನಪಾಗಿಯೇ ಉಳಿದದ್ದನ್ನು ಆ ಮೂವರು ಹೇಳಿದ್ದಾಗಿ ದಾಖಲಿಸುತ್ತಾರೆ.
ಹೈಜಾಕ್ ಆಗಿದ್ದ ವಿಮಾನ ಇಂಧನ ತುಂಬಿಸಲು ಅಮೃತಸರದಲ್ಲಿ ಇಳಿದ ಬಳಿಕ ಪೂರ್ತಿ 50 ನಿಮಿಷಗಳ ಕಾಲ ಅಲ್ಲಿತ್ತು. ಆದರೂ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾರದೆ ವಾಜಪೇಯಿ ಸರಕಾರ ಸಂಪೂರ್ಣವಾಗಿ ವಿಫಲವಾಗಿತ್ತು.
ವಿಮಾನ ಅಪಹರಣದ ಬಗ್ಗೆ ತಿಳಿದಾಗ ವಾಜಪೇಯಿ ಸಂಪೂರ್ಣ ಆಘಾತಗೊಂಡಿದ್ದರು ಎಂದು ಘಾಟಾಟೆ ನೆನಪಿಸಿಕೊಂಡದ್ದರ ಬಗ್ಗೆ ಸಾಗರಿಕಾ ಉಲ್ಲೇಖಿಸಿದ್ದಾರೆ.
ಅಮೃತಸರದ ರಾಜಾ ಸಾನ್ಸಿ ವಿಮಾನ ನಿಲ್ದಾಣದಲ್ಲಿ ನಿಂತಿದ್ದಾಗಲೂ IC 814 ಅನ್ನು ನಿಶ್ಚಲಗೊಳಿಸಲು ವಾಜಪೇಯಿ ಸರಕಾರ ವಿಫಲವಾಯಿತು.
ಅಪಹರಣಕಾರರು ವಿಮಾನಕ್ಕೆ ತುರ್ತಾಗಿ ಇಂಧನ ತುಂಬಿಸಬೇಕೆಂದು ಒತ್ತಾಯಿಸಿದಾಗ ಉದ್ವಿಗ್ನ ಸ್ಥಿತಿ ಕಂಡಿತ್ತು. ಅಪಹರಣಕಾರರು ಪ್ರಯಾಣಿಕರನ್ನು ಕೊಲ್ಲಬಹುದೆಂಬ ಆತಂಕವಿತ್ತು. ವಾಜಪೇಯಿ ಸರಕಾರ ರಚಿಸಿದ್ದ ಬಿಕ್ಕಟ್ಟು ನಿರ್ವಹಣಾ ತಂಡ ತನ್ನೆದುರಿನ ಆಯ್ಕೆಗಳ ಬಗ್ಗೆ ಚಿಂತಿಸುತ್ತಲೇ ಇತ್ತು.
ಸ್ಥಳಕ್ಕೆ ಬರಬೇಕಿದ್ದ ಎನ್‌ಎಸ್‌ಜಿ ಪಡೆ ಮನೇಸರ್ ಮತ್ತು ದಿಲ್ಲಿ ವಿಮಾನ ನಿಲ್ದಾಣದ ನಡುವಿನ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮವಾಗಿ ಸಮಯಕ್ಕೆ ಸರಿಯಾಗಿ ಅಮೃತಸರ ವಿಮಾನ ನಿಲ್ದಾಣ ಮುಟ್ಟಲು ಆಗಲಿಲ್ಲ ಎಂದು ಆನಂತರ ವರದಿಯಾಗಿತ್ತು.
ಈ ನಡುವೆ, ಅಪಹರಣಕಾರರು ಭಾರತದ ಕಮಾಂಡೋ ಕಾರ್ಯಾಚರಣೆ ಸಾಧ್ಯತೆಯ ಭಯದಿಂದಾಗಿ ಉದ್ವೇಗಕ್ಕೆ ಒಳಗಾಗತೊಡಗಿದ್ದರು. ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುವ ಬೆದರಿಕೆ ಅವರಿಂದ ಬರತೊಡಗಿತ್ತು.
25 ವರ್ಷದ ರೂಪಿನ್ ಕತ್ಯಾಲ್ ಎಂಬ ಪ್ರಯಾಣಿಕನನ್ನು ಪದೇ ಪದೇ ಇರಿದಿದ್ದರು. ತೀವ್ರವಾಗಿ ರಕ್ತಸ್ರಾವವಾಗಲು ಶುರುವಾಗಿ ಕಡೆಗೆ ಕತ್ಯಾಲ್ ಸಾವನ್ನಪ್ಪಿದರು.
ವಿಮಾನ ಟೇಕ್‌ಆಫ್ ಮಾಡಲು ಅಪಹರಣಕಾರರು ಕೂಗಾಡತೊಡಗಿದಾಗ, ಕಡೆಗೂ ಇಂಧನ ತುಂಬಿಸಿಕೊಳ್ಳದೆ ವಿಮಾನ ಲಾಹೋರ್ ಕಡೆಗೆ ಹಾರಿತ್ತು. ಲಾಹೋರ್‌ನಲ್ಲಿ ಇಳಿದು ಇಂಧನ ತುಂಬಿಸಿಕೊಂಡು ದುಬೈ ಹೊರಗಿನ ವಾಯುನೆಲೆಯಲ್ಲಿ ಇಳಿದಿತ್ತು.
ದಿಲ್ಲಿಯಲ್ಲಿ ಪ್ರಯಾಣಿಕರ ಆತಂಕಗೊಂಡ ಸಂಬಂಧಿಗಳ ದುಃಖ ಮತ್ತು ಉದ್ವೇಗ ಹೆಚ್ಚತೊಡಗಿತ್ತು. ವಾಜಪೇಯಿ ಸರಕಾರ ಒತ್ತಡಕ್ಕೆ ಸಿಲುಕಿತ್ತು. ಅಪಹರಣಕಾರರು ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದ ಕಂದಹಾರ್‌ಗೆ ವಿಮಾನವನ್ನು ಕೊಂಡೊಯ್ದಿದ್ದರು.
ಅಂತಿಮವಾಗಿ ಭಾರತ ಸರಕಾರ ಮಸೂದ್ ಅಝರ್ ಸೇರಿದಂತೆ ಮೂವರು ಮೋಸ್ಟ್ ವಾಂಟೆಡ್ ಉಗ್ರರನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರಕರಣ ಬಗೆಹರಿದಿತ್ತು.
ಅಝರ್ ಆನಂತರ 2001ರಲ್ಲಿ ಸಂಸತ್ತಿನ ಮೇಲಿನ ದಾಳಿ ಯೋಜನೆ ಮತ್ತು 2019ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಎಂಬ ಆರೋಪಗಳಿವೆ.
ಎಲ್ಲಕ್ಕಿಂತ ಅವಮಾನಕರ ಸಂಗತಿಯೆಂದರೆ, ತಾಲಿಬಾನ್‌ಗೆ ಹಸ್ತಾಂತರಿಸಲು ಭಯೋತ್ಪಾದಕರನ್ನು ಕಂದಹಾರ್‌ಗೆ ಕರೆದೊಯ್ದದ್ದು ಬೇರಾರೂ ಅಲ್ಲ, ಅವರು ಸ್ವತಃ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಆಗಿದ್ದರು ಎಂದು ಸಾಗರಿಕಾ ಘೋಷ್ ಬರೆಯುತ್ತಾರೆ.
ಸಿಂಗ್ ಕಂದಹಾರ್‌ಗೆ ತೆರಳಿದ ನಂತರ, ಅವರು ಹೋಗಿದ್ದಾರೆಯೇ? ಎಂದು ಅಸಹಾಯಕ ವಾಜಪೇಯಿ ದಿಗ್ಭ್ರಮೆಯಿಂದ ಕೇಳಿದ್ದರಂತೆ. ಬಲಿಷ್ಠ, ರಾಷ್ಟ್ರೀಯವಾದಿ ಎಂದುಕೊಳ್ಳುತ್ತಿದ್ದ ಸರಕಾರದ ಮಂತ್ರಿಯೊಬ್ಬರು ಉಗ್ರರ ಬೆಂಗಾವಲಾಗಿ ಹೋಗಿದ್ದ ಆ ಸಂದರ್ಭ ಉಗ್ರರ ಬೇಡಿಕೆಗಳಿಗೆ ಭಾರತ ಸಂಪೂರ್ಣ ಶರಣಾಗಿದ್ದನ್ನು ತೋರಿಸಿತ್ತು.
ವಾಜಪೇಯಿ ಸರಕಾರದ ಎಲ್ಲ ಉನ್ನತ ಅಧಿಕಾರಿಗಳೂ ಮಾಧ್ಯಮಗಳಿಂದ ಕಟು ಟೀಕೆಗೆ ಒಳಗಾಗಿದ್ದರು.
ಆ ಸಮಯದಲ್ಲಿ ವಾಜಪೇಯಿ ಅವರ ಅಗ್ರ ತಂಡದಲ್ಲಿದ್ದದ್ದು ಮತ್ತಾರೂ ಅಲ್ಲ, ಈಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಎಂದು ಸಾಗರಿಕಾ ಉಲ್ಲೇಖಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಈ ಹೊಸ ಬಿಜೆಪಿ, ವಾಜಪೇಯಿ ನೇತೃತ್ವದ ಹಳೆಯ ಬಿಜೆಪಿಯನ್ನು ಮರೆಯಲು ಬಯಸುವುದರಲ್ಲಿ ಆಶ್ಚರ್ಯವಿಲ್ಲ. ಹಳೆಯ ಬಿಜೆಪಿ ಹಿಂದುತ್ವದ ಸೈದ್ಧಾಂತಿಕ ಅಜೆಂಡಾ ಬಗ್ಗೆ ತೀವ್ರವಾಗಿರಲಿಲ್ಲ.
IC 814 ಹೈಜಾಕ್ ಮತ್ತು ಕಾರ್ಗಿಲ್ ಯುದ್ಧದಂತಹ ವಿಪತ್ತುಗಳನ್ನು ತಂದುಕೊಂಡಿತು. ಆ ದಿನಗಳಲ್ಲಿ ಪ್ರಮುಖ ಭಯೋ ತ್ಪಾದಕ ದಾಳಿಗಳು ನಡೆದವು ಎಂದು ಘೋಷ್ ಬರೆದಿದ್ದಾರೆ.
1999ರಲ್ಲಿ ಕಾರ್ಗಿಲ್‌ನಲ್ಲಿ ಪಾಕಿಸ್ತಾನಿ ಪಡೆಗಳು ಭಾರತದೊಳಕ್ಕೆ ಬಂದವು. ಅದೇ ವರ್ಷವೇ IC 814 ಹೈಜಾಕ್ ಮಾಡಲಾಯಿತು.
2001ರಲ್ಲಿ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆಯಿತು.
ಜಮ್ಮು-ಕಾಶ್ಮೀರ ವಿಧಾನಸಭೆಯ ಮೇಲೆಯೂ ದೊಡ್ಡ ದಾಳಿಯಾಗಿತ್ತು.
ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದ ಹೊತ್ತಲ್ಲಿ ಅಬ್ಬರದ ಮಾತಾಡುತ್ತಿದ್ದ ವಾಜಪೇಯಿ, 1993ರ ಮುಂಬೈ ದಾಳಿಗಾಗಿ ದಾವೂದ್ ಇಬ್ರಾಹೀಂನನ್ನು ತಕ್ಷಣವೇ ಸೆರೆಹಿಡಿಯಲು ಒತ್ತಾಯಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ನಂತರ, ಅಂಥ ಸಂದರ್ಭದಲ್ಲಿನ ಭೌಗೋಳಿಕ ರಾಜಕಾರಣದ ಕಠೋರ ವಾಸ್ತವಗಳನ್ನು ಎದುರಿಸಿತು ಮತ್ತು ತನ್ನದೇ ದುರಹಂಕಾರದ ಮಿತಿಗಳನ್ನು ಕೂಡ ಅದು ಎದುರಿಸಬೇಕಾಯಿತು.
ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಯಾವಾಗಲೂ ಯುದ್ಧ ಮತ್ತು ಪ್ರತೀಕಾರದ ಬಗ್ಗೆ ಆವೇಶದ ಮಾತಾಡುತ್ತಿತ್ತು. ಆದರೆ 1990ರ ದಶಕದ ಕಡೆಯಲ್ಲಿ ತಾನೇ ಅಧಿಕಾರಕ್ಕೆ ಬಂದ ಹೊತ್ತಲ್ಲಿ ಅಬ್ಬರಿಸುವುದೇ ಮರೆತುಹೋಗಿತ್ತು ಮತ್ತು ಅದರ ನಿಜವಾದ ಬಣ್ಣ ಬಯಲಿಗೆ ಬಿದ್ದಿತ್ತು.
2001ರ ಸಂಸತ್ ದಾಳಿ ನಂತರ ವಾಜಪೇಯಿ ಸರಕಾರ ‘ಆಪರೇಷನ್ ಪರಾಕ್ರಮ್’ಗೆ ಆದೇಶ ನೀಡಿತ್ತು. ಆದರೆ ಅದು ವ್ಯೆಹಾತ್ಮಕ ವೈಫಲ್ಯ ಎಂಬ ಟೀಕೆಗೆ ತುತ್ತಾಗಿತ್ತು.
10 ತಿಂಗಳ ಕಾಲ ವಾಜಪೇಯಿ ಅವರ ಯಾವುದೇ ಸ್ಪಷ್ಟ ಸೂಚನೆಯಿಲ್ಲದೆ ಸೇನೆ ಪಾಕಿಸ್ತಾನದ ಗಡಿಯಲ್ಲಿ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿತ್ತು.
800 ಸೈನಿಕರು ಬಲಿಯಾಗಿದ್ದರು ಮತ್ತು ಕೋಟಿಗಟ್ಟಲೆ ರೂ. ಮೌಲ್ಯದ ಮದ್ದುಗುಂಡುಗಳು ವ್ಯರ್ಥವಾಗಿದ್ದವು.
ಈಗ ಮೋದಿ ನೇತೃತ್ವದ ಹೊಸ ಬಿಜೆಪಿ, 56 ಇಂಚಿನ ಎದೆ, ತೋಳ್ಬಲ, ರಾಷ್ಟ್ರೀಯತೆ ಎಂದೆಲ್ಲ ಬೀಗುತ್ತ, ವಾಜಪೇಯಿ ಕಾಲದ ವೈಫಲ್ಯಗಳನ್ನು ಅಳಿಸಲು ಬಯಸುತ್ತಿದೆ. ಹಿಂದಿನ ಮನಮೋಹನ್ ಸಿಂಗ್ ಸರಕಾರ ದುರ್ಬಲವಾಗಿತ್ತು ಮತ್ತು ಮೋದಿ ಅವಧಿ ಸಶಕ್ತ ಎಂದು ಬಿಂಬಿಸುವುದಕ್ಕೂ ಮೋದಿ ಸರಕಾರ ಬಯಸಿದೆ ಎನ್ನುತ್ತಾರೆ ಘೋಷ್.
ಪಾಕಿಸ್ತಾನದೊಂದಿಗಿನ ಮಾತುಕತೆ ಸ್ಥಗಿತಗೊಳಿಸಲಾಗಿದೆ ಮತ್ತು 2019ರಲ್ಲಿ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಲಾಯಿತು. ಆದರೆ, ಅವರ ನೆಲದಲ್ಲೇ ಹೊಡೆದುಹಾಕುತ್ತೇವೆ ಎಂಬ ತೋಳ್ಬಲದ ರಾಜತಾಂತ್ರಿಕತೆಯಲ್ಲಿ ಮೋದಿ ಸರಕಾರ ನಿಜವಾಗಿಯೂ ಗೆದ್ದಿದೆಯೆ? ಎಂಬ ಪ್ರಶ್ನೆಯನ್ನು ಸಾಗರಿಕಾ ಘೋಷ್ ಎತ್ತಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಚೀನಾ 2,000 ಚದರ ಕಿ.ಮೀ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದೆ.
ಭಾರತ ಮತ್ತು ಚೀನಾ ಕಾರ್ಪ್ಸ್ ಕಮಾಂಡರ್‌ಗಳ ನಡುವೆ ಇಪ್ಪತ್ತೊಂದು ಸುತ್ತಿನ ಮಾತುಕತೆಗಳು ನಡೆದಿವೆ. ಗಡಿ ವಿವಾದವೇ ಇಲ್ಲವೆಂದಾದರೆ, ಕಾರ್ಪ್ಸ್ ಕಮಾಂಡರ್‌ಗಳು ಚರ್ಚಿಸುವುದು ಏನಿರುತ್ತದೆ?
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗಿನ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಪ್ರಾಣ ಕಳೆದುಕೊಂಡರು. ಆದರೆ ಮೋದಿ ಮಾತ್ರ, ‘‘ನಾ ಕೋಯಿ ಘುಸಾ ಹೈ, ನಾ ಕೋಯಿ ಘುಸಾ ಹುವಾ ಹೈ’’ (ನಮ್ಮ ದೇಶಕ್ಕೆ ಯಾರೂ ಬಂದಿಲ್ಲ) ಎಂದು ಹೇಳುತ್ತಲೇ ಇರುವುದು ಲಜ್ಜಾ ಹೀನವಾಗಿದೆ.
ಇಲ್ಲಿಯವರೆಗೆ, ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾವನ್ನು ನೇರವಾಗಿ ಹೆಸರಿಸುವ ಧೈರ್ಯವನ್ನು ಪ್ರಧಾನಿ ಮೋದಿ ಒಮ್ಮೆಯೂ ತೋರಿಸಿಲ್ಲ.
2014ರಲ್ಲಿ ಮೋದಿ ಸಬರಮತಿ ದಡದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಉಯ್ಯಾಲೆಯಲ್ಲಿ ಕುಳಿತಿದ್ದರು, ಆದರೆ ಇಂದು ಭಾರತ ಚೀನಾವನ್ನು ತನ್ನ ನೆಲದಿಂದ ಹೊರಹಾಕಲು ಹೆಣಗಾಡುತ್ತಿದೆ.
ಕಡೆಯದಾಗಿ ಒಂದು ಮಾತು.
ಅವತ್ತು ವಾಜಪೇಯಿ C 814 ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲಾರದೆ ವಿಫಲರಾಗಿದ್ದರು.
ಇವತ್ತು ಮೋದಿ ಮೌನದ ಹಿಂದೆ ತನ್ನ ಭಯವನ್ನು, ವೈಫಲ್ಯವನ್ನು ಅಡಗಿಸಲು ನೋಡುತ್ತಾರೆ.
ಆದರೆ ಅವರ ಮೌನ ಈ ಹಿಂದಿನಂತೆ ಅವರ ಜಾಣತನವಾಗಿ ಉಳಿಯದೆ, ಅವರನ್ನು ಕಾಯುವ ಕವಚವೂ ಆಗದೆ, ಅವರನ್ನು ಇನ್ನಷ್ಟು ಬಣ್ಣಗೇಡು ಮಾಡುತ್ತಿದೆ ಎಂಬುದಂತೂ ಸತ್ಯ.