ಇದು ದಲಿತ, ದಮನಿತರ ಗೆಲುವು
ತೀವ್ರ ವಿರೋಧದ ಬೆನ್ನಲ್ಲೇ ಹಿಂಬಾಗಿಲ ಪ್ರವೇಶದ ನೇಮಕಾತಿ ರದ್ದತಿಗೆ ಕೇಂದ್ರ ಸರಕಾರ ನಿರ್ಧಾರ
ನಮ್ಮ ಸಂವಿಧಾನ ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ.
ಇಂಥ ಸಂವಿಧಾನವನ್ನು ಬದಲಿಸಲು ಹೊರಟಿದ್ದವರಿಗೆ, ಸಂವಿಧಾನವನ್ನು ಉಲ್ಲಂಘಿಸುವ ವಿಚಾರದಲ್ಲಿ ಹಿಂದೆಮುಂದೆ ನೋಡದೇ ಇದ್ದವರಿಗೆ, ಸಂವಿಧಾನ ವಿರೋಧಿ ನಿಲುವನ್ನೇ ತಲೆತುಂಬ ತುಂಬಿಕೊಂಡಿದ್ದವರಿಗೆ ಈಗ ದಿಢೀರನೇ ಸಂವಿಧಾನ ನೆನಪಾಗಿದೆ.
ಜೊತೆಗೆ ಮೀಸಲಾತಿ ಅದೆಷ್ಟು ಮುಖ್ಯ ಅನ್ನುವುದು ಮನವರಿಕೆಯಾಗಿದೆ.
ಹಿಂಬಾಗಿಲ ಪ್ರವೇಶದ ಮೂಲಕ ಸರಕಾರದ 45 ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದ ಮೋದಿ ಸರಕಾರ, ಅಂಥ ನಿರ್ಧಾರ ಪ್ರಕಟಿಸಿದ 48 ಗಂಟೆಗಳಲ್ಲೇ ಯೂ ಟರ್ನ್ ಹೊಡೆದಿದೆ. ಅರ್ಜಿ ಆಹ್ವಾನಿಸಿದ್ದ ಯುಪಿಎಸ್‌ಸಿ ತನ್ನ ಜಾಹೀರಾತನ್ನು ಹಿಂಪಡೆದಿದೆ. ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ಯುಪಿಎಸ್‌ಸಿ ಈ ತೀರ್ಮಾನ ತೆಗೆದುಕೊಂಡಿದೆ.
ಶನಿವಾರವಷ್ಟೇ ಯುಪಿಎಸ್‌ಸಿ ಅಂದರೆ ಕೇಂದ್ರ ಲೋಕಸೇವಾ ಆಯೋಗದ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ನಿರ್ದೇಶಕ ಶ್ರೇಣಿಯ 45 ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿಗಾಗಿ ಅರ್ಜಿ ಆಹ್ವಾನಿಸಿತ್ತು. ಗುತ್ತಿಗೆ ಆಧಾರದ ಮೇಲೆ ಇವುಗಳನ್ನು ಸೆಪ್ಟಂಬರ್ 17ರೊಳಗೆ ಭರ್ತಿ ಮಾಡಲು ಮುಂದಾಗಿತ್ತು.
ಲ್ಯಾಟರಲ್ ಎಂಟ್ರಿ ಅಂದರೆ ಯುಪಿಎಸ್‌ಸಿ ನಡೆಸುವ ಐಎಎಸ್ ಪರೀಕ್ಷೆ ಪಾಸಾಗದ ಖಾಸಗಿ ವಲಯದವರನ್ನು ಹಿಂಬಾಗಿಲ ಮೂಲಕ ಕೇಂದ್ರ ಸರಕಾರದ ಪ್ರಮುಖ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವುದು.
ಕೇಂದ್ರ ಸರಕಾರದ ಈ ಕ್ರಮಕ್ಕೆ ಪ್ರತಿಪಕ್ಷಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂಬಾಗಿಲ ಪ್ರವೇಶದ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರದ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಟೀಕಾ ಪ್ರಹಾರ ನಡೆಸಿದ್ದರು. ಬಿಜೆಪಿ ತನ್ನ ಸೈದ್ಧಾಂತಿಕ ಪೋಷಕ ಸಂಸ್ಥೆಯಾದ ಆರೆಸ್ಸೆಸ್‌ನ ನಿಷ್ಠಾವಂತರನ್ನು ಹಿಂಬಾಗಿಲಿನಿಂದ ನೇಮಿಸಿಕೊಳ್ಳಲು ಬಳಸುತ್ತಿರುವ ದಾರಿ ಇದು ಎಂದೇ ರಾಹುಲ್ ಆರೋಪಿಸಿದ್ದರು.
ಆಡಳಿತಾರೂಢ ಎನ್‌ಡಿಎ ಮೈತ್ರಿ ಪಕ್ಷಗಳೂ ಬಿಜೆಪಿ ನೇತೃತ್ವದ ಸರಕಾರದ ನಿರ್ಧಾರಕ್ಕೆ ಅಪಸ್ವರ ತೆಗೆದಿದ್ದವು.
ಈ ತೀವ್ರ ವಿರೋಧದ ಬೆನ್ನಲ್ಲೇ ಕೇಂದ್ರ ಸರಕಾರ ಯೂ ಟರ್ನ್ ತೆಗೆದುಕೊಂಡಿದೆ. ಹಿಂಬಾಗಿಲ ಪ್ರವೇಶದ ನೇಮಕಾತಿಯ ರದ್ದತಿಗೆ ನಿರ್ಧರಿಸಿದೆ.
ಗಮನಿಸಬೇಕಿರುವ ಒಂದು ವಿಚಾರವೆಂದರೆ ಈ ಹಿಂಬಾಗಿಲ ಪ್ರವೇಶದ ನೇಮಕಾತಿಯನ್ನು ಮೋದಿ ಸರಕಾರ 2018ರಿಂದಲೂ ಮಾಡಿಕೊಂಡು ಬಂದಿತ್ತು. ಬಹುಮತವಿದ್ದ ಮೋದಿ ಸರಕಾರ ವಿಪಕ್ಷಗಳನ್ನು ಲೆಕ್ಕಕ್ಕೆ ತೆಗೆದುಕೊಂಡ ನಿದರ್ಶನವೇ ಇರಲಿಲ್ಲ. ವಿಪಕ್ಷಗಳು ಮಾತ್ರವಲ್ಲ, ತನ್ನ ಮಿತ್ರಪಕ್ಷಗಳನ್ನು ಆಗ ಲೆಕ್ಕಕ್ಕೆ ಇಟ್ಟಿರಲಿಲ್ಲ. ತನಗೆ ಬೇಕೆನ್ನಿಸಿದ ಎಲ್ಲವನ್ನೂ ತನ್ನ ಮನಸ್ಸಿಗೆ ತೋಚಿದಂತೆಯೇ ಮಾಡಿಕೊಂಡು ಬಂದಿತ್ತು.
ಅವತ್ತಿನಿಂದ ತನ್ನ ಮನಬಂದಂತೆ ನಡೆದುಕೊಳ್ಳುತ್ತಿದ್ದ ಮೋದಿ ಸರಕಾರಕ್ಕೂ ಇವತ್ತು ವಿಪಕ್ಷಗಳ ವಿರೋಧದ ಬೆನ್ನಲ್ಲೆ ತನ್ನ ಒಂದೊಂದೇ ತೀರ್ಮಾನಗಳಿಂದ ಹಿಂದೆ ಸರಿಯುತ್ತಿರುವ ಮೋದಿ ಸರಕಾರಕ್ಕೂ ಅಜಗಜಾಂತರ. ಯಾಕೆಂದರೆ ಇವತ್ತಿನ ಮೋದಿ ಸರಕಾರ ಬಹುಮತವಿರುವ ಸರಕಾರವಲ್ಲ. ಏನೇ ನಿರ್ಧಾರ ತೆಗೆದುಕೊಳ್ಳಬೇಕೆಂದರೂ ಎರಡೂ ಪಾರ್ಶ್ವಗಳಲ್ಲಿ ಸರಕಾರಕ್ಕೆ ಆಧಾರವಾಗಿ ನಿಂತಿರುವ ಮೈತ್ರಿ ಪಕ್ಷಗಳ ಸಮ್ಮತಿ ಬೇಕಿದೆ. ಅವುಗಳಿಗೆ ಒಪ್ಪಿಗೆಯಿಲ್ಲವೆಂದಾದರೆ ತೀರ್ಮಾನ ಬದಲಿಸುವುದು ಮೋದಿ ತಂಡಕ್ಕೆ ಈಗ ಅನಿವಾರ್ಯವಾಗಿಬಿಟ್ಟಿದೆ.
ಇದೇ ವೇಳೆ ವಿಪಕ್ಷಗಳ ಬಲ ಹೆಚ್ಚಿದೆ. ಅವು ದೃಢವಾಗಿವೆ.
ರಾಹುಲ್ ಗಾಂಧಿಯವರ ರಾಜಕೀಯ ಶಕ್ತಿ, ಅವರ ಮಾತಿಗಿರುವ ಶಕ್ತಿ ಈಗ ಇನ್ನೂ ಬಲವಾಗಿದೆೆ. ಸಂವಿಧಾನ ಹಿಡಿದು ದೇಶಾದ್ಯಂತ ಅವರು ಮೂಡಿಸಿದ್ದ ಹೊಸ ಸಂಚಲನದ ಪರಿಣಾಮಗಳೂ ಕಾಣಿಸತೊಡಗಿವೆ.
ಲೋಕಸಭೆ ಚುನಾವಣೆ ನಂತರ ಕಾಣಿಸುತ್ತಿರುವ ಅಂಶಗಳನ್ನು ಗಮನಿಸಿದರೆ,
ಅಯೋಧ್ಯೆಯಂಥಲ್ಲೇ ಬಿಜೆಪಿಗೆ ಆದ ಮುಖಭಂಗ, ಇಡೀ ಉತ್ತರ ಪ್ರದೇಶದಲ್ಲಿ ಅದರ ನೆಲೆ ಛಿದ್ರವಾದದ್ದು ಮಹತ್ವದ ಬೆಳವಣಿಗೆ.
ಹಾಗೆಯೇ ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರ ಮತಗಳನ್ನು ಬಿಜೆಪಿ ಬಹಳ ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದೆ ಎಂಬುದು ಮತ್ತೊಂದು ಮಹತ್ವದ ವಿಚಾರ. ಆ ಎಲ್ಲ ಮತಗಳೂ ಇಂಡಿಯಾ ಮೈತ್ರಿಕೂಟದ ಪಾಲಾಗಿರುವುದು ಒಟ್ಟಾರೆ ರಾಜಕೀಯ ಸಮೀಕರಣವನ್ನೇ ಬದಲಿಸಿದೆ.
ಚಿರಾಗ್ ಪಾಸ್ವಾನ್ ಆಗಲಿ, ನಿತೀಶ್ ಕುಮಾರ್ ಆಗಲಿ ಬಿಜೆಪಿಯ ಮಿತ್ರರೇ ಆಗಿದ್ದರೂ, ದೇಶದ ಸಾಮಾಜಿಕ, ಆರ್ಥಿಕ ಸಮಾನತೆ ಮತ್ತು ನ್ಯಾಯದ ಸಮರ್ಥನೆಗಾಗಿ ಮೋದಿ ವಿರುದ್ಧ ನಿಲ್ಲುವುದಕ್ಕೆ ಹಿಂಜರಿಯುವವರಲ್ಲ. ಅದು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆಯೂ ಹೌದು.
ಹಿಂಬಾಗಿಲ ಪ್ರವೇಶದ ನೇಮಕಾತಿ ರದ್ದತಿಗಾಗಿ ಯುಪಿಎಸ್‌ಸಿಗೆ ಕೇಂದ್ರ ಸರಕಾರ ಬರೆದ ಪತ್ರದಲ್ಲಿ, ಸರಕಾರಿ ನೇಮಕಾತಿಯಲ್ಲಿ ಮೀಸಲಾತಿಯ ನೀತಿಗಳನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖ ಎಂದು ಪ್ರಧಾನಿ ಪರಿಗಣಿಸುತ್ತಾರೆ. ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸಲು ಹಾಗೂ ಎಲ್ಲರ ಪಾಲುದಾರಿಕೆ ಖಾತರಿಪಡಿಸಲು ಇದು ಅನಿವಾರ್ಯ ಎಂಬುದು ಪ್ರಧಾನಿಯ ಪ್ರಬಲ ಪ್ರತಿಪಾದನೆ. ಅಂಚಿನಲ್ಲಿರುವ ಸಮುದಾಯಗಳ ಅರ್ಹ ಅಭ್ಯರ್ಥಿಗಳಿಗೆ ಸರಕಾರಿ ಹುದ್ದೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುವ ಹಾಗೆ ಸಾಮಾಜಿಕ ನ್ಯಾಯ ಕಾಪಾಡುವ ಸಂವಿಧಾನದ ಆಶಯಗಳನ್ನು ಪಾಲಿಸುವುದು ಬಹಳ ಮುಖ್ಯ ಎಂಬುದು ಪ್ರಧಾನಿ ಆಶಯ ಎಂದು ಹೇಳಲಾಗಿದೆ.
ಆದರೆ 2018ರಿಂದ ಮೊನ್ನೆ ಲೋಕಸಭೆ ಚುನಾವಣೆಗೆ ಮುಂಚಿನವರೆಗೂ ಮೋದಿ ಸರಕಾರಕ್ಕೆ ಈ ಸಮಾನತೆ, ಸಾಮಾಜಿಕ ನ್ಯಾಯ ಕಾಣಿಸಿರಲೇ ಇಲ್ಲ. ಹಿಂಬಾಗಿಲ ಪ್ರವೇಶದ ಮೂಲಕ ಈವರೆಗೆ 63 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.
ಕಳೆದ ಲೋಕಸಭೆ ಚುನಾವಣೆಗೂ ಮೊದಲು 2024ರ ಮಾರ್ಚ್‌ನಲ್ಲಿ ಕೂಡ ಮೂವರು ಜಂಟಿ ನಿರ್ದೇಶಕರು ಹಾಗೂ 22 ನಿರ್ದೇಶಕರು, ಉಪ ಕಾರ್ಯದರ್ಶಿಗಳನ್ನು ನೇಮಿಸಲಾಗಿತ್ತು.
ಕಳೆದ ಹತ್ತು ವರ್ಷಗಳಲ್ಲಿ ದೇಶದ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕದಲ್ಲೂ ಮೋದಿ ಸರಕಾರ ಇದೇ ನೀತಿ ಅನುಸರಿಸುತ್ತಾ ಬಂದಿದೆ. ಬ್ಯಾಂಕುಗಳಿಗೆ ನಡೆಯುತ್ತಿರುವ ನೇಮಕಾತಿಗಳಲ್ಲೂ ಇದೇ ನಡೆಯುತ್ತಾ ಬಂದಿದೆ. ಅಲ್ಲೆಲ್ಲೂ ಮೀಸಲಾತಿ, ಸಾಮಾಜಿಕ ನ್ಯಾಯದ ಮಾತಾಡುವ ಅವಕಾಶವೂ ಇರಲಿಲ್ಲ. ಆದರೆ ಚುನಾವಣೆ ನಂತರ ಬಂದ ಜನಾದೇಶ ಸರಕಾರವನ್ನು ಭಯಕ್ಕೆ ತಳ್ಳಿದೆ.
ರಾಹುಲ್ ಗಾಂಧಿ ದೇಶಾದ್ಯಂತ ಮಹತ್ವದ ವಿಷಯಗಳನ್ನು ಪ್ರಸ್ತಾವಿಸುತ್ತ ಮೋದಿ ಸರಕಾರವನ್ನು ಒತ್ತಡಕ್ಕೆ ಸಿಲುಕಿಸಿದ್ದರೆಂಬುದನ್ನು ಕೂಡ ಗಮನಿಸಬೇಕು.
ಇದೆಲ್ಲದರ ಪರಿಣಾಮವಾಗಿ, ಮಹತ್ವದ ತೀರ್ಮಾನವೊಂದನ್ನು 48 ಗಂಟೆಗಳಲ್ಲೇ ವಾಪಸ್ ಪಡೆಯುವ ಅನಿವಾರ್ಯತೆಗೆ ಮೋದಿ ಮೈತ್ರಿ ಸರಕಾರ ಬಂದು ನಿಂತಿದೆ.
ಮೋದಿ ಮೂರನೇ ಅವಧಿಯ ಸರಕಾರ ಹೀಗೆ ಹಿಂದಕ್ಕೆ ಹೆಜ್ಜೆಯಿಡುತ್ತಿರುವುದು ಇದೇ ಮೊದಲಲ್ಲ.
ಹೊಸ ಪ್ರಸಾರ ಮಸೂದೆ ತರುವ ವಿಚಾರದಲ್ಲಿಯೂ ಅದಕ್ಕೆ ದೊಡ್ಡ ಹಿನ್ನಡೆಯಾಯಿತು. ಡಿಜಿಟಲ್ ಮಾಧ್ಯಮಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಉದ್ದೇಶದ ಪ್ರಸಾರ ಮಸೂದೆಯ ಕರಡನ್ನು ತೀವ್ರ ವಿರೋಧ ಮತ್ತು ವ್ಯಾಪಕ ಟೀಕೆಗಳ ಬಳಿಕ ವಾಪಸ್ ಪಡೆಯಬೇಕಾಯಿತು.
ಹಾಗೆಯೇ, ವಕ್ಫ್ ತಿದ್ದುಪಡಿ ಮಸೂದೆಯ ವಿಚಾರದಲ್ಲಿಯೂ ಮೋದಿ ಸರಕಾರ ವಿಪಕ್ಷಗಳ ವಿರೋಧವನ್ನು ಮಾತ್ರವಲ್ಲ, ತನ್ನದೇ ಮಿತ್ರಪಕ್ಷಗಳ ವಿರೋಧವನ್ನೂ ಎದುರಿಸಬೇಕಾಯಿತು. ಕಡೆಗೆ ಆ ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಕಳಿಸಲು ಅದು ಒಪ್ಪಿಕೊಳ್ಳಬೇಕಾಯಿತು.
ಒಂದು ವೇಳೆ ಮೋದಿ ಅಂದುಕೊಂಡಿದ್ದ ‘ಚಾರ್ ಸೌ ಪಾರ್’ ಗೆಲುವು ಬಿಜೆಪಿಯದ್ದಾಗಿಬಿಟ್ಟಿದ್ದರೆ ಇಂಥ ಯಾವುದೂ ಸಾಧ್ಯವಾಗುತ್ತಿರಲಿಲ್ಲ.
ಈಚೆಗೆ, ಯುಪಿಎಸ್‌ಸಿ ಅಧ್ಯಕ್ಷರಾಗಿದ್ದ ಮೋದಿ ಅತ್ಯಾಪ್ತ ಮನೋಜ್ ಸೋನಿ ರಾಜೀನಾಮೆ ನೀಡಬೇಕಾಗಿ ಬಂತು. ಐದು ವರ್ಷಗಳ ಅಧಿಕಾರಾವಧಿ ಬಾಕಿ ಇರುವಾಗಲೇ ಯಾಕಾಗಿ ಅವರು ರಾಜೀನಾಮೆ ಕೊಡಬೇಕಾಯಿತು ಎಂಬ ಪ್ರಶ್ನೆಗೆ ಕಾರಣಗಳು ತೀರಾ ಅಸ್ಪಷ್ಟವಲ್ಲ. ಅಂಥ ಪ್ರಭಾವಿಯೊಬ್ಬ ಅಂಥದೊಂದು ಹುದ್ದೆ ಬಿಡುವುದು ಸರಕಾರದ ಸೂಚನೆಯಿಲ್ಲದೆ ಸಾಧ್ಯವಿರುತ್ತಿರಲಿಲ್ಲ ಎಂಬುದು ಕೂಡ ಊಹಿಸಬಹುದಾದ ವಿಚಾರ.
ಒಂದು ಅಂಶವನ್ನು ಗಮನಿಸಬೇಕಿದೆ.
2013-14ರ ಹೊತ್ತಿಗೆ ಸರಕಾರಿ ವಲಯದಲ್ಲಿನ ಅಧಿಕಾರಿಗಳು, ಉದ್ಯೋಗಿಗಳ ಸಂಖ್ಯೆ 70,30,000 ಇತ್ತು. ಅದು ಕುಸಿಯುತ್ತ ಕುಸಿಯುತ್ತ ಕಡೆಗೆ 13,00,000ಕ್ಕೆ ಬಂದು ನಿಂತಿದೆ.
ಇಲ್ಲಿಯೂ ಖಾಯಂ ಉದ್ಯೋಗಿಗಳ ಪ್ರಮಾಣವೂ ತಗ್ಗಿದೆ. ಗುತ್ತಿಗೆ ಆಧಾರದಲ್ಲಿ ನೇಮಿಸುವುದನ್ನು ಸರಕಾರ ಶುರು ಮಾಡಿಬಿಟ್ಟಿತ್ತು.
ಹಿಂಬಾಗಿಲ ಪ್ರವೇಶದ ನೇಮಕವಂತೂ ತಮಗೆ ಬೇಕಾದವರನ್ನು ತಂದು ತಮಗೆ ಬೇಕಿರುವಲ್ಲಿ ಕೂರಿಸಿಕೊಳ್ಳುವ ತಂತ್ರವೇ ಆಗಿತ್ತು. ಹಿಂಬಾಗಿಲ ಪ್ರವೇಶದ ಮೂಲಕ ಮೂರು ವರ್ಷಗಳ ಗುತ್ತಿಗೆ ಆಧಾರದಲ್ಲಿ ನೇಮಕವಾಗುತ್ತಿದ್ದವರಲ್ಲಿ ಅನೇಕರ ಸೇವಾ ಅವಧಿ ವಿಸ್ತರಣೆಯೂ ನಡೆಯುತ್ತಿತ್ತು ಎಂಬ ವರದಿಗಳೂ ಇವೆ.
ಈ ವ್ಯವಸ್ಥೆಯ ಮೂಲಕ ಆರೆಸ್ಸೆಸ್ ಸಿದ್ಧಾಂತಿಗಳು ಸರಕಾರದ ಭಾಗವಾಗಿರುತ್ತಿದ್ದರು. ಅರ್ಹರಿಗೆ ಸಿಗಬೇಕಿದ್ದ ಹುದ್ದೆಗಳು ಆರೆಸ್ಸೆಸ್ ಮಂದಿಯ ಪಾಲಾಗುತ್ತಿದ್ದವು.
ಇವತ್ತು ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ನೆನಪು ಮಾಡಿಕೊಳ್ಳುತ್ತಿರುವ ಇದೇ ಜನ ಅರ್ಹರ ಹಕ್ಕುಗಳನ್ನು ಕಸಿಯುತ್ತ ಬಂದಿದ್ದರು.
ಚುನಾವಣಾ ಆಯುಕ್ತರ ನೇಮಕದ ಅಧಿಕಾರವನ್ನು ಕೈಗೆ ತೆಗೆದುಕೊಳ್ಳುವಲ್ಲಿ, ದಿಲ್ಲಿಯಲ್ಲಿನ ಚುನಾಯಿತ ಸರಕಾರದ ಅಧಿಕಾರ ಕಸಿದುಕೊಳ್ಳುವಲ್ಲಿ, ಕೃಷಿ ಕಾಯ್ದೆಗಳ ವಿಚಾರದಲ್ಲಿನ ಕೇಂದ್ರದ ಧೋರಣೆಯಲ್ಲಿ ಸಂವಿಧಾನ ವಿರೋಧಿ ನಡೆಯೇ ಇದ್ದುದು ಸ್ಪಷ್ಟವಿತ್ತಲ್ಲವೆ? ಮಾಧ್ಯಮಗಳನ್ನೂ ಸರಕಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿತು ಅಥವಾ ಮಾಧ್ಯಮಗಳು ಮೋದಿ ನಿಲುವಿಗೆ ಸಾಥ್ ಕೊಟ್ಟಿದ್ದವು.
ಸಿಬಿಐನಂಥ ಸಂಸ್ಥೆಗಳಲ್ಲಿ ತನಗೆ ಬೇಕಾದವರನ್ನು ನೇಮಿಸಿಕೊಳ್ಳುವ ಮೋದಿ ಸರಕಾರ ವಿಪಕ್ಷಗಳ ವಿರುದ್ಧ ತನಿಖಾ ಏಜನ್ಸಿಗಳನ್ನು ಅವುಗಳ ಘನತೆಯೇ ನಾಶವಾಗುವ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡಿದೆ, ಮಾಡಿಕೊಳ್ಳುತ್ತಿದೆ. ಇದೂ ಸೇರಿದಂತೆ ಹಲವಾರು ಸತ್ಯಗಳು ಮಡಿಲ ಮೀಡಿಯಾಗಳ 24 ಗಂಟೆಗಳ ಸುಳ್ಳುಗಳನ್ನೂ ಮೀರಿ ಇತ್ತೀಚೆಗೆ ಬಯಲಾಗಿದ್ದವು. ಸ್ವಾಯತ್ತ ಸಂಸ್ಥೆಗಳನ್ನೆಲ್ಲ ಸರಕಾರ ಹೀಗೆ ತನ್ನ ಹಂಗಿನಲ್ಲಿ ಬೀಳಿಸಿಕೊಂಡು ಪ್ರಜಾಸತ್ತೆಯ ತತ್ವಗಳನ್ನೇ ಗಾಳಿಗೆ ತೂರುತ್ತಿದ್ದುದು ಸ್ಪಷ್ಟವಾಗಿತ್ತು.
ಹತ್ತು ವರ್ಷಗಳಿಂದ ಬೇಡವಾದದ್ದನ್ನೇ ಮಾಡಿಕೊಂಡು ಬಂದಿದ್ದ, ಸಂವಿಧಾನವನ್ನೇ ದ್ವೇಷಿಸುತ್ತಿದ್ದ, ಪ್ರಜಾಸತ್ತೆಯ ತತ್ವಗಳನ್ನು ಗಾಳಿಗೆ ತೂರಿದ್ದ ಸರಕಾರವೊಂದು ಮೊದಲ ಬಾರಿಗೆ ಸಂವಿಧಾನದ ಮುಂದೆ ಮಂಡಿಯೂರಿದೆ, ಮಣಿದಿದೆ.
ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ ಬಲವನ್ನು ಸೂಚಿಸುತ್ತಿರುವ ಈ ವಿದ್ಯಮಾನ ನಿಜವಾದ ಅರ್ಥದಲ್ಲಿ ಈ ದೇಶದ ಜನರ ಗೆಲುವು.
ಅದರಲ್ಲೂ ಈ ದೇಶದ ದಲಿತ, ದಮನಿತರ, ದುರ್ಬಲರ ಗೆಲುವು ಇದು.