ತೋಳ್ಪಾಡಿ ಎಂಬ ವೈ-ಚಿತ್ರ
‘ಮಹಾಭಾರತ ಅನುಸಂಧಾನ ಭಾರತ ಯಾತ್ರೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಪಡೆದ ಲಕ್ಷ್ಮೀಶ ತೋಳ್ಪಾಡಿ, ಹಲಬಗೆಯ ಬಲು ಬಗೆತ ಮತ್ತು ಹೀಗೆಂದು ಹೇಳಲಾಗದ ಒಂದು ನೆರೇಟಿವ್.
ಶಾಂತಿಗೋಡಿನ ಕೃಷ್ಣಮೂರ್ತಿ-ರತ್ನಮ್ಮರ ಪುತ್ರ ತೋಳ್ಪಾಡಿ, ಕಾಲೇಜು ಕಲಿಕೆ, ಮಠವಾಸ, ಪತ್ರಿಕಾ ವ್ಯವಸಾಯ ಎಲ್ಲ ಗೈದು ಕೃಷಿಕರಾಗಿ ನೆಲೆಗೊಂಡ ಶಾಸ್ತ್ರಕರ್ಷಕ. ಪೇಜಾವರ ವಿಶ್ವೇಶ ತೀರ್ಥರ, ವಿದ್ಯಮಾನ್ಯರ ಆಪ್ತ ಶಿಷ್ಯ. ಕವಿ ಬೇಂದ್ರೆ, ಕುವೆಂಪು, ಲಂಕೇಶರ ಆಚೆಗೂ ಉತ್ತಮ ವ್ಯಾಖ್ಯಾತೃ. ವೇದ ವೇದಾಂತ ವಚನ ಬೌದ್ಧಾಗಮಗಳಲ್ಲಿ ಈಸಿ ಸೀಳಿದ ಹಂಸ ಪ್ರತಿಭೆ. ಜೊತೆಗೆ ಪುತ್ತೂರಜ್ಜನ ಮುಗ್ಧ ವೇದಾಂತದ ಭಕ್ತ!. ಭಾರತೀಯ ಪರಂಪರೆಯನ್ನೂ ಆರ್ಷ ವೈದಿಕಾದಿ ಆಳವನ್ನೂ ಹೀಗೆ ಖನನ ಮಾಡಿ ಚಿನ್ನದ ಗೆರೆ ಕಾಣಿಸಿದವರು ಬಹಳ ಮಂದಿ ಇಲ್ಲ. ಯಕ್ಷಗಾನದಲ್ಲೂ ಅಪಾರ ಪ್ರೀತಿ. ಶೇಣಿ, ದೇರಾಜೆ ಅಚ್ಚುಮೆಚ್ಚು. ಕಾವ್ಯ ಇವರಿಗೆ ಸ್ವಾಧೀನ. ಪ್ರೀತಿ ಇವರ ಶ್ರುತಿ.
ಕಾವ್ಯದೊಳಗಿನ ಜೀವನದ ಮತ್ತು ಅನ್ಯರ ದುಃಖವನ್ನು ಅವರಂತೆ ಅರಿತವರು ಕಡಿಮೆ. ಅಗ್ನಿ ಎಂಬ ವೈದಿಕ ತತ್ವ ಮಾತು ಅನ್ನುವಾಗ, ಅವನು ಪ್ರಾಚೀನ ನಿತ್ಯ ನೂತನ ಎಂಬುದಕ್ಕೆ ವೇದದ ಅರ್ಥ ಕೊಡುವಾಗ, ‘ಜಯೋಯಂ ಅಜಯಃ’ ಎಂಬ ಧರ್ಮಜನ ದುಃಖವನ್ನು ಬಗೆಯುವಾಗ ಇವರು ಪುತ್ತೂರು ಪುರಂದರ ಭಟ್ಟರ ಮಾತಿನಲ್ಲಿ ‘ಆಯೆ ಮಿತ್ತುಗು ರಿಲೇಟ್ ಆತೆ’!
ಆದರೂ ತೋಳ್ಪಾಡಿ ಮಾತು, ನಿಲುವುಗಳು ಕೆಲವೊಮ್ಮೆ ಅರ್ಥ ಆಗುವುದಿಲ್ಲ ಎಂಬುದೂ ಸತ್ಯ. ಅ-ನರ್ಥವೂ ಸ್ವಾರಸ್ಯಕರ. ನಿಗೂಢತ್ವವು ಆರ್ಷದ ಒಂದು ಲಕ್ಷಣವಲ್ಲವೇ?
ಜಯತು ಲಕ್ಷ್ಮೀಶಃ