ದ್ವೇಷ ತುಂಬಿದ ಧಾರ್ಮಿಕ ಉನ್ಮಾದದ ಕಿಚ್ಚಿಗೆ ತುಪ್ಪ ಸುರಿಯುವವರು

ಸಂವಿಧಾನದ 25ನೇ ವಿಧಿ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಗೆ ತೊಂದರೆಯಾಗದಂತೆ ಪ್ರತಿಯೊಬ್ಬನೂ ಯಾವುದೇ ಧರ್ಮವನ್ನು ಪಾಲಿಸುವ, ಆಚರಿಸುವ ಹಕ್ಕನ್ನು ಹೊಂದಿದ್ದಾನೆ.
ಆದರೆ ಮುಸ್ಲಿಮರು ತಮ್ಮ ಮನೆಗಳ ಮೇಲ್ಛಾವಣಿಯ ಮೇಲೆ ನಮಾಝ್ ಮಾಡುವುದು ಕೂಡ ಕೆಲವರಿಗೆ ಸಮಸ್ಯೆಯಾಗುತ್ತದೆ.
ಆದರೆ ಹಿಂದುತ್ವ ಅಂಧ ಭಕ್ತರು ತಮ್ಮ ಹಬ್ಬಗಳ ಸಮಯದಲ್ಲಿ ಮಸೀದಿಗಳು, ದರ್ಗಾಗಳು ಅಥವಾ ಮುಸ್ಲಿಮರ ಮನೆಗಳಿಗೆ ಪ್ರವೇಶಿಸಿದರೆ ಅದು ತಪ್ಪೆನಿಸುವುದಿಲ್ಲವೆ? ಅಲ್ಲಿ ಅವರು ನಿಂದಿಸುವ ಕೀಳು ಮಟ್ಟದ ಘೋಷಣೆಗಳನ್ನು ಕೂಗಿದರೆ, ಹಾಡುಗಳನ್ನು ಹಾಡಿದರೆ ಮತ್ತು ಧಾರ್ಮಿಕ ಧ್ವಜಗಳನ್ನು ಹಾರಿಸಿದರೆ ಅದು ಸರಿಯೆನಿಸುತ್ತದೆಯೇ?
ಒಂದೆಡೆ ಸರಕಾರ ಮುಸ್ಲಿಮರಿಗೆ ಮೋದಿಯ ಉಡುಗೊರೆಯನ್ನು ನೀಡುತ್ತಿದ್ದರೆ, ಮತ್ತೊಂದೆಡೆ, ಮುಸ್ಲಿಮರನ್ನು ಹೆದರಿಸಿ, ಅವರನ್ನು ದೇಶದ ದ್ವಿತೀಯ ದರ್ಜೆಯ ಪ್ರಜೆಗಳು ಎಂಬ ಭಾವನೆ ಮೂಡಿಸಲು ಸಮಾಜದಲ್ಲಿ ವಿಷ ಹರಡಲಾಗುತ್ತಿದೆ. ಮುಸ್ಲಿಮರನ್ನು ಕೆಟ್ಟವರೆಂದು ಬಿಂಬಿಸುವ ಯತ್ನ ಸತತವಾಗಿ ನಡೆದಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ತಂದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಬಡ ಮತ್ತು ದುರ್ಬಲ ಮುಸ್ಲಿಮರ ಕಲ್ಯಾಣಕ್ಕಾಗಿ ಈ ಮಸೂದೆ ತರಲಾಗಿದೆ ಎಂದು ಹೇಳಿಕೊಳ್ಳುತ್ತಿವೆ.
ಮತ್ತೊಂದೆಡೆ, ಬಿಜೆಪಿ, ಆರೆಸ್ಸೆಸ್ ಅಥವಾ ವಿಎಚ್‌ಪಿ ಮಂದಿ ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಮಸೀದಿಗಳು, ಮದ್ರಸಗಳು ಮತ್ತು ದರ್ಗಾಗಳ ಮೇಲೆ ದಾಳಿ ಮಾಡುತ್ತಿದ್ದಾರೆ.
ಈಗ ಹೋಳಿ, ದೀಪಾವಳಿ, ಈದ್, ರಾಮನವಮಿ ಅಥವಾ ಯಾವುದೇ ಇತರ ಹಬ್ಬವಾಗಿರಲಿ, ಮುಸ್ಲಿಮರನ್ನು ಹೆದರಿಸುವುದು ಅಥವಾ ದಾಳಿ ಮಾಡುವುದು ನಡೆಯುತ್ತಿದೆ.
ರಮಝಾನ್ ಅಥವಾ ಈದ್‌ನಂತಹ ಸಂದರ್ಭಗಳಲ್ಲಿ, ಮುಸ್ಲಿಮರು ತೆರೆದ ಸ್ಥಳಗಳಲ್ಲಿ, ಉದ್ಯಾನವನಗಳಲ್ಲಿ ಮತ್ತು ಅವರದೇ ಮನೆಗಳ ಛಾವಣಿಗಳ ಮೇಲೆಯೂ ನಮಾಝ್ ಮಾಡುವುದನ್ನು ತಡೆಯಲಾಗುತ್ತಿದೆ.
ರಾಮನವಮಿಯ ಸಂದರ್ಭದಲ್ಲಿ, ಅಲಹಾಬಾದ್ ಅಥವಾ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಹಿಂದೂ ಯುವಕರ ಗುಂಪು ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಉಗ್ರ ಘೋಷಣೆಗಳನ್ನು ಕೂಗುತ್ತಾ ದರ್ಗಾವನ್ನು ಹತ್ತುತ್ತದೆ. ಆದರೆ ಸರಕಾರ ಇದರ ಬಗ್ಗೆ ಮಾತಾಡುವುದೇ ಇಲ್ಲ.
ರವಿವಾರದ ರಾಮ ನವಮಿ ಸಂದರ್ಭ ಕೂಡ ದೇಶಾದ್ಯಂತ ಇಂತಹ ಕೋಮು ಗಲಭೆಗಳಿಗೆ ಸಾಕ್ಷಿಯಾಯಿತು.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕೆಲ ಹಿಂದುತ್ವ ಅಂಧ ಭಕ್ತ ಯುವಕರು ರಾಮ ನವಮಿಯ ದಿನದಂದು ದರ್ಗಾ ಬಳಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾರೆ. ನಂತರ ಕೈಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಅದರ ಮೇಲೆ ಹತ್ತುತ್ತಾರೆ.
ಆದರೆ ಮುಸ್ಲಿಮರ ವಿರುದ್ಧ ಹಿಂದುತ್ವ ಸಂಘಟನೆಗಳಿಂದ ಇಂತಹ ಅತಿರೇಕಗಳು ನಡೆದಾಗಲೂ, ಉತ್ತರ ಪ್ರದೇಶ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾತ್ರ ಹೇಳಿ ಸುಮ್ಮನಾಗುತ್ತಾರೆ.
ಆದರೆ ಒಬ್ಬ ಮುಸ್ಲಿಮ್ ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಧರ್ಮದ ವಿರುದ್ಧ ಏನಾದರೂ ಹೇಳಿದ್ದರೆ ಅವನು ಬಹುಶಃ ಜೈಲಿನಲ್ಲಿ ಥರ್ಡ್ ಡಿಗ್ರಿ ಚಿತ್ರಹಿಂಸೆಗೆ ತುತ್ತಾಗಬೇಕಾಗುತ್ತಿತ್ತು ಅಥವಾ ಅಂಥವರ ಮನೆಯನ್ನೇ ಬುಲ್ಡೋಜರ್ ಹರಿಸಿ ಕೆಡವಲಾಗುತ್ತಿತ್ತು.
ಮೋದಿ, ಶಾ ಮತ್ತು ಆದಿತ್ಯನಾಥ್ ಅವರ ಈ ನವಭಾರತದಲ್ಲಿ, ಕೇಸರಿ ಧ್ವಜವನ್ನು ಕೈಯಲ್ಲಿ ಹಿಡಿದು ಜೈ ಶ್ರೀ ರಾಮ್ ಎಂದು ಕೂಗುವ ಮೂಲಕ ಯಾವುದೇ ರೀತಿಯ ಅಪರಾಧ ಮಾಡಲು ಮುಕ್ತ ಪರವಾನಿಗೆ ಇದ್ದಂತಿದೆ.
ಬಹುಸಂಖ್ಯಾತರಲ್ಲಿ ಹೆಚ್ಚಿನವರು ರಾತ್ರೋರಾತ್ರಿ ಇದ್ದಕ್ಕಿದ್ದಂತೆ ದ್ವೇಷ ತುಂಬಿದ ಧಾರ್ಮಿಕ ಉನ್ಮಾದಕ್ಕೆ ಬಲಿಯಾದವರಲ್ಲ. ಬದಲಾಗಿ ಅವರನ್ನು ದೀರ್ಘ ಸಮಯದಲ್ಲಿ ಹಾಗೆ ಪ್ರಚೋದಿಸಲಾಗಿದೆ. ಈ ಪ್ರಕ್ರಿಯೆ 2014ರಿಂದ ತೀರಾ ಹೆಚ್ಚುತ್ತಿದೆ ಎಂಬುದು ಸ್ಪಷ್ಟ.
ಆಹಾರ ಪದ್ಧತಿಯಿಂದ ಹಿಡಿದು ಎಲ್ಲದರಲ್ಲೂ ಮುಸ್ಲಿಮರ ವಿರುದ್ಧ ಸಾಮೂಹಿಕ ಆಂದೋಲನವನ್ನು ಸೃಷ್ಟಿಸುವುದನ್ನು ಕಾಣುತ್ತೇವೆ. ಗೋಮಾಂಸದ ಅನುಮಾನದಲ್ಲಿ ಮುಸ್ಲಿಮರನ್ನು ಕೊಲ್ಲಲಾಗುತ್ತದೆ.
ಧಾರ್ಮಿಕ ಘೋಷಣೆಗಳನ್ನು ಬಲವಂತವಾಗಿ ಕೂಗುವಂತೆ ಮಾಡಲಾಗುತ್ತದೆ. ಘೋಷಣೆಗಳನ್ನು ಕೂಗದಿದ್ದರೆ ಮುಸ್ಲಿಮರನ್ನು ಥಳಿಸಲಾಗುತ್ತದೆ.
ಸಾಮಾನ್ಯ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ನಡೆಯುತ್ತವೆ. ಗೋದಿ ಮಿಡಿಯಾಗಳು ಈ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಅಧಿಕಾರದಲ್ಲಿರುವವರು ‘ಬಟೇಂಗೆ ತೊ ಕಟೇಂಗೆ’, ‘ಏಕ್ ಹೈ ತೊ ಸೇಫ್ ಹೈ’ ಎಂಬ ಘೋಷಣೆಗಳನ್ನು ನೀಡುವಾಗ, ಈ ಮೀಡಿಯಾಗಳು ಅವನ್ನು ಮನೆಮನೆಗೂ ಮುಟ್ಟಿಸುತ್ತವೆ.
ಈದ್, ಹೋಳಿ, ದೀಪಾವಳಿ, ದಸರಾ, ಬಕ್ರೀದ್, ಕ್ರಿಸ್‌ಮಸ್ ಈ ಹಬ್ಬಗಳು ಒಂದು ಕಾಲದಲ್ಲಿ ಸಡಗರದ ಸಂದರ್ಭಗಳಾಗಿರುತ್ತಿದ್ದವು.
ಆದರೆ ಈಗ ಹೆಚ್ಚುತ್ತಿರುವ ಧಾರ್ಮಿಕ ಉನ್ಮಾದದ ಸಂಕೇತವಾಗುತ್ತಿವೆ.
ಬಟೇಂಗೆ ತೊ ಕಟೇಂಗೆ, ಏಕ್ ಹೈ ತೊ ಸೇಫ್ ಹೈ ಈ ಎರಡೂ ಘೋಷಣೆಗಳ ಮೂಲಕ, ಭಾರತದ ಬಹುಸಂಖ್ಯಾತ ಹಿಂದೂ ಸಮುದಾಯದ ಮನಸ್ಸಿನಲ್ಲಿ ಮುಸ್ಲಿಮರ ವಿರುದ್ಧ ಭಯ ಮತ್ತು ದ್ವೇಷವನ್ನು ಹರಡಲಾಗಿದೆ. ಇದು ಮುಸ್ಲಿಮರ ವಿರುದ್ಧ ಹಿಂದೂ ಸಮುದಾಯವನ್ನು ಸಜ್ಜುಗೊಳಿಸುವ ಪ್ರಯತ್ನಗಳ ಭಾಗವಾಗಿದೆ. ಚುನಾವಣೆಗಳಲ್ಲಿ ದ್ವೇಷದ ಆಧಾರದ ಮೇಲೆ ಮತಗಳನ್ನು ಗಳಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
ಹರ್ಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆ ಕೋಮು ಹಿಂಸಾಚಾರದ ಬೆಂಕಿಗೆ ತುತ್ತಾಗಿತ್ತು. ಬಹರಾಯಿಚ್‌ನಲ್ಲಿ ಜನರ ನಡುವೆ ಒಡಕು ಸೃಷ್ಟಿಯಾಗಿತ್ತು.
ಈ ಕೋಮು ಹಿಂಸಾಚಾರದ ಬೆಂಕಿ ಬಹರಾಯಿಚ್‌ಗೆ ಕೊನೆಯಾಗುವುದಿಲ್ಲ. ಸಂಭಲ್, ನಾಗಪುರ, ಪ್ರಯಾಗ್‌ರಾಜ್ ಮತ್ತು ದೇಶಾದ್ಯಂತದ ಅನೇಕ ನಗರಗಳಿಗೂ ಹರಡುತ್ತದೆ.
ಸಂಭಲ್‌ನಲ್ಲಿ ಐತಿಹಾಸಿಕ ಶಾಹಿ ಜಾಮಾ ಮಸೀದಿಯ ಬಗ್ಗೆ, ಅದು ಮೊದಲು ದೇವಸ್ಥಾನವಾಗಿತ್ತು ಎಂದು ವರ್ಷಗಳಿಂದ ಹೇಳಿಕೊಳ್ಳಲಾಗುತ್ತಿದೆ. ಆದರೆ 2024ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು ಮತ್ತು ಸಮೀಕ್ಷೆಗೆ ಅನುಮತಿಯೂ ಸಿಕ್ಕಿತು.
ಮೊದಲ ಹಂತದ ಸಮೀಕ್ಷೆ ಶಾಂತಿಯುತವಾಗಿ ಪೂರ್ಣಗೊಂಡರೂ, ಎರಡನೇ ಹಂತದ ಸಮೀಕ್ಷೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಆ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದರು.
ಹೋಳಿ ಸಮಯದಲ್ಲಿ ಸಂಭಲ್‌ನಲ್ಲಿ ಮತ್ತೊಂದು ಸುತ್ತಿನ ಕೋಮು ಉದ್ವಿಗ್ನತೆ ಸಂಭವಿಸಿತು.
ಹೋಳಿ ಹಬ್ಬಕ್ಕೆ ಸ್ವಲ್ಪ ಮೊದಲು, ಸಂಭಲ್‌ನ 10 ದೊಡ್ಡ ಮಸೀದಿಗಳನ್ನು ಮುಚ್ಚುವ ಕೆಲಸ ಪ್ರಾರಂಭಿಸಲಾಯಿತು.
ಈ ಬಾರಿ ಹೋಳಿ ಮತ್ತು ರಮಝಾನ್ ಒಂದೇ ದಿನ ಬಂದವು.
‘‘ಶುಕ್ರವಾರ ವರ್ಷದಲ್ಲಿ 52 ಬಾರಿ ಬರುತ್ತದೆ ಆದರೆ ಹೋಳಿ ಒಮ್ಮೆ ಮಾತ್ರ ಬರುತ್ತದೆ, ಹೋಳಿ ಅಥವಾ ಬಣ್ಣಗಳ ಸಮಸ್ಯೆ ಇರುವವರು ತಮ್ಮ ಮನೆಗಳಿಂದ ಹೊರಬರಬಾರದು’’ ಎಂದು ಅನುಜ್ ಚೌಧರಿ ಎಂಬ ಅಧಿಕಾರಿ ಅಸಹಿಷ್ಣುತೆ ತೋರಿಸಿದ್ದೂ ಆಯಿತು.
ಒಂದು ಕಾಲದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೇರಿಯೇ ಹೋಳಿ ಆಡುತ್ತಿದ್ದ ಸಂದರ್ಭ ಈಗ ಇತಿಹಾಸದ ಪುಟ ಸೇರಿಹೋಗಿದೆ.ಈಗ ಮುಸ್ಲಿಮರು ಮನೆಯೊಳಗಿರಲಿ ಎಂದು ಧಮ್ಕಿ ಹಾಕಲಾಗುತ್ತದೆ.
ಸಂಭಲ್‌ನಲ್ಲಿ ಮುಸ್ಲಿಮರು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಕೂಡ ನಮಾಝ್‌ಮಾಡದಂತೆ ನೋಡಿಕೊಳ್ಳಲು ಸರಕಾರ ಡ್ರೋನ್‌ಗಳನ್ನು ನಿಯೋಜಿಸಿತು. ಅಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ, ಮುಸ್ಲಿಮರು ರಸ್ತೆಗಳಲ್ಲಿ ಮತ್ತು ಮೇಲ್ಛಾವಣಿಗಳ ಮೇಲೆ ನಮಾಝ್ ಮಾಡುವುದನ್ನು ತಡೆಯಲಾಯಿತು.
ವಿಶ್ವಕಪ್ ಗೆದ್ದ ನಂತರ ರಸ್ತೆಗಳಲ್ಲಿ ಮೆರವಣಿಗೆಗಳು ನಡೆಯುತ್ತವೆ. ಕಾವಡಿ ಯಾತ್ರೆ, ಗುಡಿ ಪರ್ವ, ನವರಾತ್ರಿ, ಮಹಾಶಿವರಾತ್ರಿ ಅಂತಹ ಕಾರ್ಯಕ್ರಮಗಳನ್ನು ರಸ್ತೆಗಳಲ್ಲಿಯೇ ಆಚರಿಸಲಾಗುತ್ತದೆ. ಅದರಿಂದಾಗಿ ಸಾಮಾನ್ಯ ಜನರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಗುತ್ತದೆ. ಅಂತಹ ವೇಳೆಯಲ್ಲಿ ಜನರು ಆಂಬುಲೆನ್ಸ್‌ಗಳಿಗೂ ದಾರಿ ಮಾಡಿಕೊಡದ ಸ್ಥಿತಿಯಿದೆ. ಅದಾವುದೂ ಇವರಿಗೆ ಸಮಸ್ಯೆಯಾಗುವುದೇ ಇಲ್ಲ.
ಆದರೆ ಈದ್ ಪ್ರಾರ್ಥನೆಯ ಸಮಯದಲ್ಲಿ ಮಾತ್ರ ರಸ್ತೆಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಅಂತಹ ಸಮಸ್ಯೆಗಳು ಇದ್ದಕ್ಕಿದ್ದಂತೆ ನೆನಪಿಗೆ ಬರುತ್ತವೆ.
ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದುತ್ವವನ್ನು ದಾಳವಾಗಿ ಬಳಸುತ್ತಿದೆ ಎಂಬುದಂತೂ ಸ್ಪಷ್ಟ. ಬಿಜೆಪಿ ದೃಷ್ಟಿಯಲ್ಲಿ ಮುಸ್ಲಿಮರೆಂದರೆ, ಕೇವಲ ಮೊಗಲರ ವಂಶಸ್ಥರು. ಈ ನಿರೂಪಣೆ ಬಿಜೆಪಿ ಬೆಂಬಲಿತ ಪ್ರತಿಯೊಂದು ಐಟಿ ಸೆಲ್‌ನ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದೆ.
ಮೊಗಲರು ಅಥವಾ ಔರಂಗಜೇಬ್ ಅಂಥ ವಿಚಾರ ಕೆದಕಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತದೆ. ಮಹಾರಾಷ್ಟ್ರದ ನಾಗಪುರದಲ್ಲಿ ಔರಂಗಜೇಬ್ ಸಮಾಧಿ ವಿಚಾರವಾಗಿ ನಡೆದ ಹಿಂಸಾಚಾರದಲ್ಲಿ ಅನೇಕ ಜನರ ಮನೆಗಳು ಮತ್ತು ಜೀವನಗಳು ನಾಶವಾಗಿವೆ.
ದೇಶದಲ್ಲಿ ಇಂದು ದೊಡ್ಡ ಆರ್ಥಿಕ ಬಿಕ್ಕಟ್ಟಿನ ಸೂಚನೆಗಳು ಕಾಣಿಸುತ್ತಿವೆ. ಆದರೆ, ಇವರು ಮಾತ್ರ ಮಸೀದಿಯ ಅಡಿ ಮಂದಿರ ಇತ್ತು ಎಂದು ಗದ್ದಲ ಮಾಡುತ್ತಾರೆ. ಔರಂಗಜೇಬ್ ಸಮಾಧಿ ವಿಚಾರವಾಗಿ ತಗಾದೆ ತೆಗೆಯುತ್ತಾರೆ.
ಅಂತೂ ಮುಸ್ಲಿಮರ ವಿರುದ್ಧ ಬೆದರಿಕೆಗಳನ್ನು ನಿರಂತರವಾಗಿ ಇಡುವ ಅಜೆಂಡಾಕ್ಕಾಗಿ ಬಿಜೆಪಿ ಒಂದಲ್ಲ ಒಂದು ನೆಪಗಳನ್ನು ಹುಡುಕುತ್ತಲೇ ಇರುತ್ತದೆ ಮತ್ತು ಅದೇ ವೇಳೆಯಲ್ಲಿ ಪ್ರಜಾಪ್ರಭುತ್ವದ ಆತ್ಮದ ಬಗ್ಗೆ ದೊಡ್ಡ ದೊಡ್ಡ ಮಾತಾಡುವ ವ್ಯಂಗ್ಯವೂ ಸಂಭವಿಸುತ್ತದೆ.