ಕನ್ನಡ ನೆಲ-ಜಲ-ಜನ ಪೋಷಕ ಟಿಪ್ಪುಸುಲ್ತಾನ್
ಇಂದು ಟಿಪ್ಪುಜಯಂತಿ
ಟಿಪ್ಪುಸುಲ್ತಾನ್
ದೇಶೀಯ ಅರಸೊತ್ತಿಗೆಗಳನ್ನು ಬ್ರಿಟಿಷರ ವಿರುದ್ಧ ಒಗ್ಗೂಡಿಸುವ ತಾಕತ್ತು ಇದ್ದದ್ದು ಟಿಪ್ಪುವಿಗೆ ಮಾತ್ರವೇ ಎನ್ನುವುದು ಅವರಿಗೆ ಮನವರಿಕೆಯಾಗಿತ್ತು. ಅವನನ್ನು ಸೋಲಿಸಲು ಅವರು ತಮ್ಮ ಎಲ್ಲ ಸಂಪನ್ಮೂಲಗಳನ್ನು ವಿನಿಯೋಗಿಸಿದರು. ಮೇ 4, 1799ರಂದು ಅವನನ್ನು ಹತ್ಯೆ ಮಾಡಿದ ಮರುದಿನ, ಬ್ರಿಟನ್ನಲ್ಲಿ ಬಹು ದೊಡ್ಡ ಸಂಭ್ರಮಾಚರಣೆ ನಡೆಯಿತು. ಅವರ ಅಧಿಕೃತ ವರದಿಗಾರ ಥಾಮಸ್ ಮುನ್ರೋನ ಪ್ರಕಾರವೇ, ಭಾರತದಲ್ಲಿ ಬ್ರಿಟಿಷರಿಗಿದ್ದ ಏಕೈಕ ವಿರೋಧವು ಕೊನೆಗೊಂಡಿತ್ತು. ಬ್ರಿಟಿಷರ ಜೊತೆ ಯುದ್ಧ ಒಪ್ಪಂದಗಳು ನಡೆದಾಗ, ತನ್ನ ಹುಕುಮಿಗೆ ತಕ್ಕ ಹಾಗೆ ಬ್ರಿಟಿಷರನ್ನು ಒಪ್ಪಂದಕ್ಕೆ ಮಣಿಸಿದ ಅರಸ ಮತ್ತೊಬ್ಬನಿಲ್ಲ ಎಂದು ಮುನ್ರೋ ಬರೆದಿರುವನು. ಟಿಪ್ಪುವಿನ ಸಾವಿನ ಸುದ್ದಿ ತಲುಪಿದಾಗ ಮರಾಠ ದೊರೆ ನಾನಾಜಿ ಹೇಳಿದ್ದು ‘‘ಮುಂದಿನ ಸರದಿ ನಮ್ಮದು!’’. ಒಂದೇ ವರ್ಷದಲ್ಲಿ ಆ ಮಾತು ನಿಜವಾಯಿತು!
ಜಗತ್ತಿನಾದ್ಯಂತ ಗತ ಇತಿಹಾಸದ ವ್ಯಕ್ತಿ, ವಿದ್ಯಮಾನಗಳನ್ನು ಜನ ತಮ್ಮ ಸ್ಮೃತಿಯ ಭಾಗವಾಗಿಟ್ಟುಕೊಳ್ಳುವುದು ಸಾಮಾನ್ಯ ವಾಗಿದೆ. ಅದಕ್ಕೆ ಕಾರಣಾನುಸಾರ ಎರಡು ಮಾರ್ಗಗಳನ್ನು ಜನ ಸೃಷ್ಟಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ:
1. ಜನಪದರ ಮಾರ್ಗ: ಒಂದು ಕಾಲದಲ್ಲಿ ಆಗಿ ಹೋದ ವ್ಯಕ್ತಿ ಅಥವಾ ವಿದ್ಯಮಾನಗಳು, ಆ ಕಾಲದ ದಮನಿತ ಜನರ ಬದುಕನ್ನು ಸುಧಾರಿಸಲು ದುಡಿದದ್ದನ್ನು ಜನ ಋಣಾರ್ಥಕವಾಗಿ ಹಾಡು, ಲಾವಣಿ, ಜನಪದ ಕಥನಗಳ ಮೂಲಕ ಸ್ಮರಣೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ.
2. ಪುರಾಣ ಮಾರ್ಗ: ಒಂದು ಕಾಲದ ವ್ಯಕ್ತಿ ಅಥವಾ ವಿದ್ಯಮಾನಗಳಿಂದ ತಮ್ಮ ಪಟ್ಟಭದ್ರ ಅಧಿಕಾರವನ್ನು ಕಳೆದುಕೊಂಡ ಜನವರ್ಗವು, ವ್ಯಕ್ತಿವಿದ್ಯಮಾನಗಳನ್ನು ಕೇಡಿನ ಸಂಕೇತವಾಗಿಸಿ, ತಮ್ಮ ಪಟ್ಟಭದ್ರ ಅಧಿಕಾರವನ್ನು ಮರಳಿ ಪಡೆಯುವುದಕ್ಕೋಸ್ಕರ ಕಾಲ ಕಾಲಕ್ಕೆ ತಕ್ಕ ಕಥನಗಳನ್ನು ಕಟ್ಟುತ್ತಾ, ‘ಕೇಡನ್ನು’ ಮಣಿಸಿ, ತಮ್ಮ ಅಧಿಕಾರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುವ ಸಲುವಾಗಿ ಪುರಾಣಗಳನ್ನು ರೂಢಿಸಲು ಯತ್ನಿಸುತ್ತಾರೆ.
ಇವುಗಳಿಗೆ ಜಗತ್ತಿನಾದ್ಯಂತ ಸಾಕಷ್ಟು ಉದಾಹರಣೆಗಳಿವೆ. ಭಾರತದಲ್ಲಿ ವಸಾಹತು ಆಳ್ವಿಕೆ ನಡೆಸಿದ ಬ್ರಿಟಿಷರು ತಮ್ಮ ಅಧಿಕಾರಾರ್ಥ ಸೃಜಿಸಿದ ಪುನರುಜ್ಜೀವನಗೊಳಿಸಿದ ಹಲವಾರು ಪುರಾಣ ಪಠ್ಯಗಳು, ತಮ್ಮ ಪ್ರಮುಖ ವೈರಿಗಳ ಕುರಿತು ಕಟ್ಟಿದ ಇತಿಹಾಸದ ಹೆಸರಿನ ಪುರಾಣಗಳೂ ಒಂದು ಕಡೆಗಿದ್ದರೆ, ಬ್ರಿಟಿಷರು ಹಾಗೂ ಅವರ ಅಡಿಯಾಳಾಗಿದ್ದ ದೇಶಿಯ ದೊರೆಗಳ ದಬ್ಬಾಳಿಕೆಯ ಎದುರು ಸೆಣಸಿದ, ಜನ ಕಲ್ಯಾಣ ಕಾರ್ಯಗಳನ್ನು ಕೈಗೊಂಡ ವ್ಯಕ್ತಿ ವಿದ್ಯಮಾನಗಳ ಬಗ್ಗೆ ಜನ ಹಾಡು, ಲಾವಣಿ, ನಾಟಕ ಪ್ರಸಂಗಗಳನ್ನು ಕಟ್ಟಿದ್ದನ್ನೂ ನಾವು ಕಾಣಬಹುದಾಗಿದೆ.
ಟಿಪ್ಪು ಸುಲ್ತಾನ್ ಹಾಗೂ ಅವನ ತಂದೆ ಹೈದರಲಿಯ ಆಡಳಿತ ಕಾಲದ ಕುರಿತಾಗಿ ಇರುವ ವಾಸ್ತವಿಕತೆಯನ್ನು ಜನಪದರ ನುಡಿ ಹಾಗೂ ಬ್ರಿಟಿಷ್ ಪ್ರಣೀತ ಪುರಾಣಗಳ ಭಂಜನೆಯ ಮೂಲಕವಷ್ಟೇ ಕಂಡುಕೊಳ್ಳಬಹುದಾಗಿದೆ.
► ಹೈದರಲಿ ಹಾಗೂ ಟಿಪ್ಪುವಿನ ಆಡಳಿತವನ್ನು ಜನಪದರು ಏಕಾಗಿ ನೆನೆಯುತ್ತಾರೆ?
ಹೈದರಲಿ ಹಾಗೂ ಟಿಪ್ಪುಸುಲ್ತಾನರು ಮೈಸೂರು ಸಂಸ್ಥಾನವನ್ನು ಆಳಿದ್ದು 37 ವರ್ಷಗಳು ಮಾತ್ರವೇ (1762-99). ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ರಣರಂಗದಲ್ಲಿ ಕಾದಾಡುತ್ತಲೇ ಮಡಿದು ಎರಡು ಶತಮಾನಗಳೇ ಕಳೆದರೂ, ಆತ ಕನ್ನಡ ಜನಮಾನಸವನ್ನು ಇಂದಿಗೂ ಕಾಡುತ್ತಿದ್ದಾನೆ. ಮೈಸೂರು, ಮಂಡ್ಯ ಕಡೆಗಳ ಜನರು ಟಿಪ್ಪುವಿನ ಕುರಿತು ಕಟ್ಟಿ ಹಾಡುವ ಲಾವಣಿಗಳು ಇಂದಿಗೂ ಜನಜನಿತವಾಗಿವೆ. ಆಧುನಿಕ ಕನ್ನಡದ ಮೂವರು ಪ್ರಮುಖ ಲೇಖಕರು ಲಂಕೇಶ್, ಎಚ್.ಎಸ್.ಶಿವಪ್ರಕಾಶ್ ಹಾಗೂ ಗಿರೀಶ್ ಕಾರ್ನಾಡ್ ತಮ್ಮ ಸಾಹಿತ್ಯದ ಮೂಲಕ ಟಿಪ್ಪುಸುಲ್ತಾನ್ ಬದುಕಿನ ಸ್ಮತಿಯ ಪ್ರಸ್ತುತತೆಯನ್ನು ಓದುಗರಿಗೆ ಮನಗಾಣಿಸಲು ಯತ್ನಿಸಿದ್ದಾರೆ.
ಕೆ.ಡಿ.ಕಾಮತರು ರಚಿಸಿದ ‘ಮೈಸೂರ ಹುಲಿ ಟಿಪ್ಪು’ ನಾಟಕವಂತೂ, ಕಂಪೆನಿ ನಾಟಕಗಳ ಸುವರ್ಣಯುಗದಲ್ಲಿ, ಅತ್ಯಂತ ಜನಪ್ರಿಯ ಪ್ರದರ್ಶನವಾಗಿತ್ತು. ಆ ನಾಟಕ ಪ್ರದರ್ಶನಗಳು ಕಟ್ಟಿಕೊಟ್ಟ (ಇಂಗ್ಲಿಷ್ ಶೈಲಿಯಲ್ಲಿ ಕನ್ನಡ ಮಾತನಾಡುವ) ಬ್ರಿಟಿಷ್ ಪಾತ್ರಗಳ ವರಸೆ ಕನ್ನಡ ಸಿನೆಮಾಗಳಲ್ಲೂ ಮುಂದುವರಿಯಿತು; ‘ಉಂಡ ಮನೆಗೆ ಕೇಡು ಬಗೆಯುವ ಮಂದಿ’ಯನ್ನು ‘ಮೀರ್ ಸಾದಿಕ್‘ ಎಂದು ಗುರುತಿಸುವಷ್ಟು ಜನಪ್ರಿಯತೆಯನ್ನು ಈ ನಾಟಕವು ಪಡೆಯಿತು. ಈ ಬಗೆಯಲ್ಲಿ ಟಿಪ್ಪುವನ್ನು ಜನ ನೆನೆಯಲಿಕ್ಕೆ ಇರುವ ಕೆಲವು ಕಾರಣಗಳು:
1. ಕನ್ನಡದ ಮೊದಲ ಕೃತಿ ಎಂದು ಖ್ಯಾತಿ ಪಡೆದಿರುವ ‘ಕವಿರಾಜ ಮಾರ್ಗ’ವು ಕನ್ನಡ ನಾಡ ಸೀಮೆಯನ್ನು ‘ಕಾವೇರಿಯಿಂದ ಗೋದಾವರಿವರೆಗಿರ್ಪ ಭಾವಿಸಿದ ಜನಪದಂ’ ಎಂದು ಬಣ್ಣಿಸುತ್ತದೆ. ಕನ್ನಡ ನುಡಿಯಾಡುವ ಜನರು ಈ ಭೂಭಾಗದಲ್ಲಿ ಹರಡಿರುವುದರಿಂದ, ಕನ್ನಡ ನಾಡ ಸೀಮೆಯನ್ನು ಈ ಬಗೆಯಲ್ಲಿ ‘ಭಾವಿಸುವುದು’ ಸೂಕ್ತವೆಂದು ಆ ಕೃತಿಕಾರನ ಅಭಿಪ್ರಾಯವಾಗಿತ್ತು. ಆನಂತರದಲ್ಲಿ ಈ ಸೀಮೆಯಲ್ಲಿ ಆಳ್ವಿಕೆ ನಡೆಸಿದ, ‘ಕನ್ನಡ ಕುಲ ತಿಲಕ’ರೆಂದು ಬಣ್ಣಿಸಲ್ಪಡುವ ಯಾವ ಅರಸರು ಇಷ್ಟು ವ್ಯಾಪ್ತಿಯ ಭೂಪ್ರದೇಶವನ್ನು ಏಕತ್ರ ರಾಜ್ಯವಾಗಿ ಕಟ್ಟಿದ್ದಿಲ್ಲ. ಆದರೆ, 1762-85ರ ವರೆಗಿನ ಹೈದರಲಿ, ಟಿಪ್ಪುವಿನ ಮೈಸೂರು ಸಂಸ್ಥಾನ ಮಾತ್ರವೇ ಈ ‘ಭಾವಿಸಿದ ಜನಪದ’ವನ್ನು ಒಂದು ನಾಡಾಗಿ ಕಟ್ಟಿದ್ದು. ಸ್ವಾತಂತ್ರ್ಯೋತ್ತರ ಕರ್ನಾಟಕ ಏಕೀಕರಣಕ್ಕೆ ಒಂದು ವಾಸ್ತವಿಕ ಬೆನ್ನೆಲುಬು ಒದಗಿಸಿದ್ದು ಹೈದರಲಿ, ಟಿಪ್ಪು ಕಟ್ಟಿ ಕಾದಿಟ್ಟುಕೊಂಡಿದ್ದ ಮೈಸೂರು ರಾಜ್ಯ.
2. ಇವರ ಆಳ್ವಿಕೆಯ ಕಾಲದಲ್ಲಿ, ಪಾಳೇಗಾರಿ ಪದ್ಧತಿಯ ಜಮೀನ್ದಾರಿ ಜಾಗೀರ್ದಾರಿ ಭೂಮಾಲಕತ್ವಗಳನ್ನು ರದ್ದುಗೊಳಿಸಿ, ಗೇಣಿದಾರರಿಗೆ ಭೂ ಹಂಚಿಕೆ ಮಾಡಲಾಯಿತು. ಬಡ ಗೇಣಿದಾರರ ಕೃಷಿ ಬಂಡವಾಳಕ್ಕಾಗಿ ಸುಲಭ ಸಾಲವ್ಯವಸ್ಥೆ ಸ್ಥಾಪಿಸಲಾಯಿತು. ಕೃಷಿ ಕಸುಬನ್ನು ಲಾಭದಾಯಕಗೊಳಿಸುವ ಸಲುವಾಗಿ, ಕೆರೆಕಟ್ಟೆಗಳನ್ನು ನಿರ್ಮಿಸಿ, ನಾಡಿನಲ್ಲಿ ಆಧುನಿಕ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಈ ಕ್ರಮಗಳಿಂದಾಗಿ ಲಕ್ಷಾಂತರ ಬಡ ಗೇಣಿದಾರರು ಸ್ವತಂತ್ರ ಸ್ವಾವಲಂಬಿ ಕೃಷಿಕರಾದರು. ಕನ್ನಂಬಾಡಿ ಅಣೆಕಟ್ಟಿನ ಯೋಜನೆ ಶುರುವಾದದ್ದು ಟಿಪ್ಪುವಿನ ಕೊನೆಗಾಲದಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅದನ್ನು ಸಾಕಾರಗೊಳಿಸಿದರು.
3. ಫ್ರೆಂಚರ ಸಖ್ಯ ಬೆಳೆಸಿ, ಅವರಿಂದ ಯಂತ್ರ ಕೈಗಾರಿಕೆ ಜ್ಞಾನ ಪಡೆದು, ಮೈಸೂರು ರಾಜ್ಯದಲ್ಲಿ ಆಧುನಿಕ ಕೈಗಾರಿಕೋತ್ಪನ್ನಗಳ ಯುಗವನ್ನು ಪ್ರಾರಂಭಿಸುವುದು ಟಿಪ್ಪುವಿನ ಮಹಾ ಯೋಜನೆಯಾಗಿತ್ತು. ಫ್ರೆಂಚರಿಂದ ಕ್ಷಿಪಣಿ ತಂತ್ರಜ್ಞಾನ ಕಲಿತು, ಆಧುನಿಕ ಉಕ್ಕಿನ ಕ್ಷಿಪಣಿಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಹೈದರಲಿ, ಟಿಪ್ಪು ನಿರ್ಮಿಸಿದರು. ಇದಕ್ಕಾಗಿ ಅಗತ್ಯವಿರುವ ಬಂಡವಾಳವನ್ನು ಸಂಚಯಿಸಲು, ನಾಡಿನ ಸಂಪನ್ಮೂಲಗಳ ಸ್ವಾಮ್ಯ ಹಾಗೂ ವ್ಯಾಪಾರವನ್ನು ಪ್ರಭುತ್ವ ವಹಿಸಿಕೊಂಡಿತು.
4. ಹೈದರಲಿ ಅನಕ್ಷರಸ್ಥನಾಗಿದ್ದರೂ, ಲೆಕ್ಕಾಚಾರದಲ್ಲಿ ತೀಕ್ಷ್ಣಮತಿಯಾಗಿದ್ದ. ಅವನ ಲೆಕ್ಕ ಕೌಶಲದ ಫಲವಾಗಿ ಭ್ರಷ್ಟತೆಗೆ ಕಡಿವಾಣ ಹಾಕುವ ಒಂದು ಲೆಕ್ಕಖಾತೆ ವ್ಯವಸ್ಥೆಯನ್ನು ಜಾರಿಗೆ ತಂದು ಸಂಪನ್ಮೂಲ ಸೋರಿಕೆಗೆ ಕಡಿವಾಣ ಹಾಕಿದ. ಟಿಪ್ಪು, ವೈಜ್ಞಾನಿಕ ತೂಕ ಮತ್ತು ಅಳತೆ ಪದ್ಧತಿಯನ್ನು ಜಾರಿಗೆ ತಂದು, ರಾಜ್ಯದ ಉಗ್ರಾಣ ಹಾಗೂ ಬೊಕ್ಕಸ ವ್ಯವಸ್ಥೆಯನ್ನು ಸದೃಢಗೊಳಿಸಿದ.
5. ಈ ಬಗೆಯಲ್ಲಿ ಬಂಡವಾಳ ಸಂಚಯಿಸಿ, ಚೀನಾ ಹಾಗೂ ಮಧ್ಯ ಪ್ರಾಚ್ಯಗಳಿಂದ ರೇಷ್ಮೆ ಉತ್ಪಾದನೆಯ ಜ್ಞಾನವನ್ನು ಆಮದು ಮಾಡಿಕೊಂಡು, ಮೈಸೂರು ರಾಜ್ಯವನ್ನು ರೇಷ್ಮೆ ಉದ್ಯಮದ ಅಗ್ರ ರಾಜ್ಯವನ್ನಾಗಿಸಲಾಯಿತು.
5. ಮೈಸೂರು ಸೀಮೆಯ ಶ್ರೀಗಂಧದ ಕಟ್ಟಿಗೆಗಳನ್ನು ಬಳಸಿ, ಕರಕುಶಲ ವಸ್ತುಗಳನ್ನು ನಿರ್ಮಿಸುವ ಕಾರ್ಯಾಗಾರಗಳನ್ನು ಸಹಾಯಧನ ನೀಡಿ ಪೋಷಿಸಲಾಯಿತು. ಈ ಮೂಲಕ ಚನ್ನಪಟ್ಟಣದ ಕರಕುಶಲ ವಸ್ತುಗಳು ಜಗತ್ಪ್ರಸಿದ್ಧಿ ಪಡೆದವು. ಕರಕುಶಲಕರ್ಮಿಗಳ ಬದುಕು ಏಳ್ಗೆಯಾದದ್ದು ಮಾತ್ರವಲ್ಲ ರಾಜ್ಯದ ಬೊಕ್ಕಸವೂ ಸುಸ್ಥಿತಿಗೆ ಬಂತು.
7. ಹೈದರಲಿ, ಟಿಪ್ಪುವಿನ 37 ವರ್ಷಗಳ ಆಳ್ವಿಕೆಯು, ಪ್ರಭುತ್ವ ಬೆಂಬಲಿತ ಆಧುನಿಕ ಬಂಡವಾಳಶಾಹಿ ಉತ್ಪಾದನೆಯ ಕರಡು ನೀಲನಕ್ಷೆಯನ್ನು ರೂಪಿಸಿತು. ಮೈಸೂರು ರಾಜ್ಯದ ಪ್ರಜೆಗಳ ತಲಾವಾರು ವರಮಾನವು ಅಂದಿನ ಭಾರತವನ್ನು ಬಿಡಿ, ಬ್ರಿಟನ್ ಸೇರಿದಂತೆ, ಯುರೋಪಿನ ಕೆಲವು ದೇಶಗಳಿಗಿಂತ ಹೆಚ್ಚಾಗಿತ್ತು!
8. ಟಿಪ್ಪು ತಾನು ಆಕ್ರಮಣ ಮಾಡಿದ ಇಂದಿನ ಕೇರಳ ರಾಜ್ಯದಲ್ಲಿ, ಅಧಿಕಾರಸ್ಥ ಜಾತಿಯವರು, ಕೆಳಗಿನ ಜಾತಿಯವರ ಮೇಲೆ ನಡೆಸುತ್ತಿದ್ದ ಸಾಮಾಜಿಕ ಅನಾಚಾರಗಳನ್ನು ಕೊನೆಗೊಳಿಸಿದ.
9. ಅಮೆರಿಕ ಹಾಗೂ ಫ್ರೆಂಚ್ ಕ್ರಾಂತಿಗಳ ವಿವರಗಳನ್ನು ಗಮನಿಸುತ್ತಿದ್ದ ಟಿಪ್ಪು, ಅವುಗಳಿಂದ ತೀವ್ರವಾಗಿ ಪ್ರಭಾವಿತನಾಗಿದ್ದ. ಆ ಕ್ರಾಂತಿಗಳ ಮಾದರಿಯಲ್ಲಿ ರಾಜ್ಯಾಡಳಿತ ವ್ಯವಸ್ಥೆಯನ್ನು ಸ್ಥಾಪಿಸುವ ಆಲೋಚನೆಯಲ್ಲಿ, ಆತ ‘ಜಕೋಬಿಯ್ ಕ್ಲಬ್’ ಸ್ಥಾಪಿಸಿ ತನ್ನನ್ನು ತಾನು ‘ಸಿಟಿಜನ್ ಟಿಪ್ಪು’ ಎಂದು ಘೋಷಿಸಿಕೊಂಡ.
ತನ್ನ 49 ವರ್ಷಗಳ ಕಾಲದ ಬದುಕಿನಲ್ಲಿ ಟಿಪ್ಪು, ಅನವರತವೂ ಬ್ರಿಟಿಷರು ಹಾಗೂ ಅವರಿಗೆ ತಮ್ಮ ಸ್ವಹಿತಾಸಕ್ತಿಗಾಗಿ ನೆರವಾಗುತ್ತಿದ್ದ ಮರಾಠರು ಹಾಗೂ ನಿಝಾಮರ ವಿರುದ್ಧ ಹೋರಾಡುತ್ತಲೇ, ಇಷ್ಟನ್ನೆಲ್ಲಾ ಸಾಧಿಸಿದ್ದು ಬ್ರಿಟಿಷರಿಗೆ ಭಯ ಹುಟ್ಟಿಸುವ ಹಾಗಿತ್ತು. ಅವರ ಸಂಪನ್ಮೂಲದ ಎದುರು ಮೈಸೂರು ಸಂಸ್ಥಾನದ ಸಂಪನ್ಮೂಲ ಸಮವಲ್ಲದಿದ್ದರೂ, ಆತನ ವಾಣಿಜ್ಯ ರಾಜಕೀಯ ದೂರದರ್ಶಿತ್ವಗಳು ಬ್ರಿಟಿಷರಲ್ಲಿ ನಡುಕ ಹುಟ್ಟಿಸುವಷ್ಟಿದ್ದವು. ದೇಶೀಯ ಅರಸೊತ್ತಿಗೆಗಳನ್ನು ಬ್ರಿಟಿಷರ ವಿರುದ್ಧ ಒಗ್ಗೂಡಿಸುವ ತಾಕತ್ತು ಇದ್ದದ್ದು ಟಿಪ್ಪುವಿಗೆ ಮಾತ್ರವೇ ಎನ್ನುವುದು ಅವರಿಗೆ ಮನವರಿಕೆಯಾಗಿತ್ತು. ಅವನನ್ನು ಸೋಲಿಸಲು ಅವರು ತಮ್ಮ ಎಲ್ಲ ಸಂಪನ್ಮೂಲಗಳನ್ನು ವಿನಿಯೋಗಿಸಿದರು. ಮೇ 4, 1799ರಂದು ಅವನನ್ನು ಹತ್ಯೆ ಮಾಡಿದ ಮರುದಿನ, ಬ್ರಿಟನ್ನಲ್ಲಿ ಬಹು ದೊಡ್ಡ ಸಂಭ್ರಮಾಚರಣೆ ನಡೆಯಿತು. ಅವರ ಅಧಿಕೃತ ವರದಿಗಾರ ಥಾಮಸ್ ಮುನ್ರೋನ ಪ್ರಕಾರವೇ, ಭಾರತದಲ್ಲಿ ಬ್ರಿಟಿಷರಿಗಿದ್ದ ಏಕೈಕ ವಿರೋಧವು ಕೊನೆಗೊಂಡಿತ್ತು. ಬ್ರಿಟಿಷರ ಜೊತೆ ಯುದ್ಧ ಒಪ್ಪಂದಗಳು ನಡೆದಾಗ, ತನ್ನ ಹುಕುಮಿಗೆ ತಕ್ಕ ಹಾಗೆ ಬ್ರಿಟಿಷರನ್ನು ಒಪ್ಪಂದಕ್ಕೆ ಮಣಿಸಿದ ಅರಸ ಮತ್ತೊಬ್ಬನಿಲ್ಲ ಎಂದು ಮುನ್ರೋ ಬರೆದಿರುವನು. ಟಿಪ್ಪುವಿನ ಸಾವಿನ ಸುದ್ದಿ ತಲುಪಿದಾಗ ಮರಾಠ ದೊರೆ ನಾನಾಜಿ ಹೇಳಿದ್ದು ‘‘ಮುಂದಿನ ಸರದಿ ನಮ್ಮದು!’’. ಒಂದೇ ವರ್ಷದಲ್ಲಿ ಆ ಮಾತು ನಿಜವಾಯಿತು!
ತನ್ನ ವಿರುದ್ಧ ಬ್ರಿಟಿಷರ ಜೊತೆ ಶಾಮೀಲಾದವರಿಂದ, ಸ್ವತಃ ಬ್ರಿಟಿಷರ ವರದಿಗಾರರಿಂದ ಈ ಬಗೆಯಲ್ಲಿ ವರ್ಣಿತನಾದವನನ್ನು, ನಾವು ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಹೋರಾಡಿ ಮಡಿದ ಪ್ರಥಮ ಹೋರಾಟಗಾರ ಎನ್ನು ವುದನ್ನು ಕನ್ನಡದ ಜನಪದ ಜೀವಂತವಾಗಿಟ್ಟುಕೊಂಡಿರುವಾಗ, ನಮಗೆ ಒಪ್ಪಲು ಇರುವ ಅಡ್ಡಿಯಾದರೂ ಏನು?
ಟಿಪ್ಪು ದೇವಾಲಯ ಭಂಜಕನೇ? ಪರಮತ ದ್ವೇಷಿಯೇ? ಮತಾಂತರಿಯೇ?
ಟಿಪ್ಪು ತನ್ನ ಜೈತ್ರ ಯಾತ್ರೆಗಳಲ್ಲಿ ದೇವಾಲಯ, ಚರ್ಚುಗಳ ಮೇಲೆ ದಾಳಿ ಮಾಡಿದ್ದನ್ನು ಯಾರೂ ಅಲ್ಲಗಳೆದದ್ದಿಲ್ಲ. ಹಾಗೆಯೇ ಆತ ಮುಸ್ಲಿಮೇತರರನ್ನು ಮತಾಂತರಗೊಳಿಸಿದ್ದೂ ಹೌದು. ತಕರಾರುಗಳಿರುವುದು ಅವನ ಈ ಕೃತ್ಯಗಳ ಹಿಂದಿರುವ ಕಾರಣ ಹಾಗೂ ಅಂಕೆ ಸಂಖ್ಯೆಗಳಲ್ಲಿ. ಬ್ರಿಟಿಷ್ ನಿರೂಪಕರು ತಮ್ಮ ಬದ್ಧಶತ್ರುವನ್ನು ಕೇಡಿ ಎಂದು ಬಣ್ಣಿಸಲು ಕಾರಣ ಹಾಗೂ ಅಂಕೆ ಸಂಖ್ಯೆಗಳ ಮಿಥ್ಯೆಯನ್ನು ಬಿತ್ತಿರುವುದು ಅವರ ವೈರುಧ್ಯಮಯ ದಾಖಲೆಗಳಿಂದಲೇ ವಿಧಿತವಾಗಿದೆ.
ಟಿಪ್ಪು ಮತಾಂತರವನ್ನು ಬ್ರಿಟಿಷರ ಜೊತೆ ಕೈ ಜೋಡಿಸಿದವರನ್ನು ದಂಡಿಸುವ ಒಂದು ‘ರಾಜಕೀಯ ಅಸ್ತ್ರ’ವಾಗಿಸಿಕೊಂಡಿದ್ದು ದಾಖಲೆ ಸಮೇತವಾಗಿದೆ. ‘‘ನನ್ನ ಎಚ್ಚರಿಕೆಯನ್ನು ಗಮನಿಸದೆ, ಸ್ವೇಚ್ಛೆಯಿಂದಾಡಿದರೆ ಪವಿತ್ರ ಇಸ್ಲಾಮ್ ಮತಕ್ಕೆ ಸೇರುವ ಗೌರವಕ್ಕೆ ನೀವು ಪಾತ್ರರಾಗುತ್ತೀರಿ! ಹುಷಾರ್’’ ಎನ್ನುವುದು ಅವನ ಎಚ್ಚರಿಕೆ ಪತ್ರಗಳ ಸಾಮಾನ್ಯ ಒಕ್ಕಣೆಯಾಗಿತ್ತು. ಆ ಬಗೆಯಲ್ಲಿ ದಂಡ ರೂಪದಲ್ಲಿ ಅವನು ಮತಾಂತರಿಸಿದವರ ಸಂಖ್ಯೆಯನ್ನು ಬ್ರಿಟಿಷರ ನಿರೂಪಣೆಗಳು ಉತ್ಪ್ರೇಕ್ಷಿಸಿರುವುದು ವಿಧಿತವಾಗೇ ಇದೆ. ಹಾಗೆಯೇ, ಅಂದಿನ ಜಾತಿವಂತ ಸಮಾಜದಲ್ಲಿ ಕನಿಷ್ಠರಾಗಿದ್ದ ದಲಿತರು, ವೇಶ್ಯಾವಾಟಿಕೆಯ ಸಂತಾನಗಳೂ ಹಾಗೂ ಯುದ್ಧ ಕೈದಿಗಳನ್ನು ಇಸ್ಲಾಮಿಗೆ ಕರೆ ತರುವ ಮೂಲಕ ಆತ ತನಗೆ ಬದ್ಧರಾಗಿರುವ ಒಂದು ನಂಬಿಗಸ್ಥ ಸೇನಾಪಡೆ ಕಟ್ಟಿದ. ಅದರ ಹೆಸರು ‘ಚೇಲಾ ರೆಜಿಮೆಂಟ್! ಈ ಅರ್ಥದಲ್ಲಿ ಟಿಪ್ಪುವಿಗೆ ಇದ್ದದ್ದು ರಾಜಕೀಯ ದೃಷ್ಟಿಕೋನವೇ ಹೊರತಾಗಿ ಮತೀಯ ಅತಿವಾದವಾಗಿರಲಿಲ್ಲ. ಅಂದಿನ ಕಾಲದ ಜನಸಂಖ್ಯೆಯಲ್ಲಿ ಈ ಬಗೆಯಲ್ಲಿ ಮತಾಂತರವಾದವರ ಪ್ರಮಾಣ ನಗಣ್ಯವಾಗಿತ್ತು. 1783ರ ಹೊತ್ತಿಗೆ ಟಿಪ್ಪು ಹೊಂದಿದ ರಾಜಕೀಯ ಪ್ರಾಬಲ್ಯವನ್ನು ಗಮನಿಸಿದರೆ, ಅವನು ನಿಜಕ್ಕೂ ಮತಾಂಧನೇ ಆಗಿದ್ದರೆ, ಬಹು ವಿಪರೀತ ಸಂಖ್ಯೆಯ ಒತ್ತಾಯದ ಮತಾಂತರಗಳನ್ನು ಮಾಡುವ ಸಾಮರ್ಥ್ಯವು ಅವನಿಗಿತ್ತು ಮತ್ತು ಅದನ್ನು ತಡೆಯುವವರು ಯಾರೂ ಇರಲಿಲ್ಲ. ಅದು ಹಾಗಾಗಲಿಲ್ಲವೆಂಬುದು ವಾಸ್ತವ.
ಟಿಪ್ಪು ಚರ್ಚು, ದೇವಸ್ಥಾನಗಳನ್ನು ಗುರಿ ಮಾಡಿಕೊಳ್ಳುವಾಗ, ಅಂದಿನ ಕಾಲದ ಎಲ್ಲ ಮತಗಳ ಅರಸರು ಪಾಲಿಸುತ್ತಿದ್ದ ನಿಯಮವನ್ನು ಪಾಲಿಸಿದನಷ್ಟೆ. ಅಂದಿನ ಕಾಲದಲ್ಲಿ, ಆಕ್ರಮಣಶೀಲರಾದ ಅರಸರು ಯಾವ ಮತದವರೇ ಆಗಿರಲೀ, ಅವರು ತಾವು ಆಕ್ರಮಣ ಮಾಡುತ್ತಿರುವ ಶತ್ರುಗಳ ಅಧಿಕಾರ ಸಂಕೇತಗಳಾದ ದೇವಸ್ಥಾನ, ಚರ್ಚು, ಮಸೀದಿಗಳ ಮೇಲೆ ದಾಳಿ ಮಾಡಿ, ಶತ್ರುವಿನ ಅಧಿಕಾರವನ್ನು ನಿರ್ವೀಣ್ಯಗೊಳಿಸುವ ತಂತ್ರ ಅನುಸರಿಸುತ್ತಿದ್ದರು. ಮರಾಠ ಪರಶುರಾಮ್ ಭಾವೆ, ಮೈಸೂರು ಸಂಸ್ಥಾನದ ನಗರ, ಶೃಂಗೇರಿ ದೇವಸ್ಥಾನಗಳ ಮೇಲೆ ನಡೆಸಿದ ದಾಳಿಯೂ ಇದೇ ಬಗೆಯದ್ದಾಗಿತ್ತು.
ಟಿಪ್ಪುವಿಗೆ ಇಸ್ಲಾಂ ಧರ್ಮದ ಶ್ರದ್ಧೆ ಇತ್ತು. ಆದರೆ, ಆ ಶ್ರದ್ಧೆಯು ಅವನ ‘ರಾಜಧರ್ಮ’ದ ದಾರಿ ತಪ್ಪಿಸಲಿಲ್ಲ. ಬಹು ಸಂಖ್ಯಾತ ಹಿಂದೂ ಪ್ರಜೆಗಳ ಶ್ರದ್ಧಾ ಕೇಂದ್ರಗಳಿಗೆ, ಮಂಗಳೂರಿನ ಚರ್ಚುಗಳಿಗೆ ಅವನು, ‘ರಾಜಧರ್ಮ’ದನುಸಾರವಾಗಿಯೇ ದಾನ ದೇಣಿಗೆಗಳನ್ನು ಕೊಟ್ಟು ಸಲಹಿದ್ದು, ಅಂದಿನ ‘ಯುಗ ಧರ್ಮಕ್ಕೆ’ ತಕ್ಕುದಾಗಿತ್ತು.
ಮುಸ್ಲಿಮರಾಗಿದ್ದ ನಿಝಾಮರು ಹಾಗೂ ತನ್ನ ಆಸ್ಥಾನದೊಳಗಿದ್ದು ತನಗೆ ಕೇಡು ಬಗೆದ ಮುಸಲ್ಮಾನರ ಕುರಿತಾಗಿ ಅವನ ಕಠಿಣ ನಡವಳಿಕೆ, ಹಿಂದೂ ಹಾಗೂ ಕ್ರಿಶ್ಚಿಯನ್ ವಿರೋಧಿಗಳ ಜೊತೆ ನಡೆದುಕೊಂಡದ್ದಕ್ಕಿಂತ ಭಿನ್ನವಾಗಿರಲಿಲ್ಲ.
ಆತ ಮುಸ್ಲಿಮನಾಗಿದ್ದನೆನ್ನುವ ಒಂದೇ ಕಾರಣಕ್ಕೆ ಇಂದು ಗಲಭೆ ಎಬ್ಬಿಸಲಾಗುತ್ತಿದೆ! ಕೆ.ಡಿ.ಕಾಮತರ ಜನಪ್ರಿಯ ನಾಟಕದ, ಬಹುಜನಪ್ರಿಯ ದೃಶ್ಯ, ಮೂರನೇ ಮೈಸೂರು ಯುದ್ಧದಲ್ಲಿನ ಸೋಲಿನ ಶರಣಾಗತಿಯ ಒಪ್ಪಂದವಾಗಿ ಟಿಪ್ಪು ತನ್ನ ಇಬ್ಬರು ಹತ್ತು ವರ್ಷ ದಾಟದ ಮಕ್ಕಳನ್ನು ಒತ್ತೆಯಾಗಿಡುವುದು. ಕಂಪೆನಿ ನಾಟಕದ ಭಾವೋದ್ವೇಗ ಶೈಲಿಯಿಂದಾಗಿ ಪ್ರೇಕ್ಷಕರು ಕಣ್ಣೀರು ಸುರಿಸಿ, ಬ್ರಿಟಿಷರಿಗೆ ಹಿಡಿ ಶಾಪ ಹಾಕುತ್ತಿದ್ದದ್ದು ಮಾಮೂಲಾಗಿತ್ತು. ಅದರ ಹೊರತಾಗಿಯೂ, ವಾಸ್ತವವನ್ನು ಗಮನಿಸಿ: ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಹತನಾದ ಆನಂತರದಲ್ಲಿ, ಅವನ ಸಂತಾನವನ್ನು ಬ್ರಿಟಿಷರು ಕೋಲ್ಕತಾಕ್ಕೆ ಸೆರೆಯಾಗಿ ಕೊಂಡೊಯ್ದರು! ಅವನ ಸಕಲ ವಂಶಸ್ಥರು ಕೋಲ್ಕತಾ ಹಾಗೂ ಮೈಸೂರು ಪ್ರಾಂತಗಳ ಕೊಳೆಗೇರಿಗಳಲ್ಲಿ ಬಡತನ ಜೀವನ ಅನುಭವಿಸಿದರು. ಸ್ವಾತಂತ್ರೋತ್ತರ ಕಾಲದಲ್ಲಿ ಬ್ರಿಟಿಷರಿಗೆ ಅಡಿಯಾಳಾಗಿದ್ದ ಅರಸರು ‘ರಾಜಸ್ವ ಸಹಾಯಧನ’ ಪಡೆದು ಸುಖ ಬದುಕು ಬದುಕುತ್ತಿದ್ದಾಗ ಟಿಪ್ಪುವಿನ ವಂಶಸ್ಥರು ನಿರ್ಗತಿಕ ಸ್ಥಿತಿಯಲ್ಲಿ ಬದುಕುತ್ತಿದ್ದರು!