ಚೇತರಿಸಿಕೊಳ್ಳುತ್ತಿದೆ ಕೊಡಗಿನ ಪ್ರವಾಸೋದ್ಯಮ
2023ರಲ್ಲಿ ಇತಿಹಾಸ ಸೃಷ್ಟಿಸಿದ ಪ್ರವಾಸಿಗರ ಸ್ವರ್ಗದ ಬೀಡು
ಮಡಿಕೇರಿ: ಪ್ರವಾಸಿಗರ ಸ್ವರ್ಗದ ಬೀಡು, ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್‌ಲ್ಯಾಂಡ್ ಎಂಬಿತ್ಯಾದಿ ಹೆಸರುಗಳಿಂದ ಕೊಡಗನ್ನು ಪ್ರವಾಸಿಗರು ಕರೆಯುತ್ತಾರೆ. 2023ರಲ್ಲಿ ಜಿಲ್ಲೆ ಇತಿಹಾಸ ಸೃಷ್ಟಿಸಿದೆ.
ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣಗಳು ಕೊಡಗಿನಲ್ಲಿವೆ. ಆದರೆ 2018ರಿಂದ ಸತತ ಎರಡು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ,ಜಲಪ್ರಳಯ,ಅತಿವೃಷ್ಟಿ ನಂತರ ಸತತ ಕೋವಿಡ್ ಹೊಡೆತಕ್ಕೆ ಬಲಿಯಾದ ಕೊಡಗಿನ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು.
ಪ್ರವಾಸೋದ್ಯಮಿಗಳು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದರು. ಆದರೆ ಕೊಡಗಿನ ಪ್ರವಾಸೋದ್ಯಮಕ್ಕೆ 2023 ಜೀವ ತುಂಬಿದ ವರ್ಷ ಎಂದರೆ ತಪ್ಪಾಗಲಾರದು.
2023ರಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ, 43,69,507 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಪ್ರವಾಸೋದ್ಯಮ ಇಲಾಖೆ ನೀಡಿದೆ. 2022ಕ್ಕೆ ಹೋಲಿಸಿದರೆ 2023ರಲ್ಲಿ ಕೊಡಗಿನಲ್ಲಿ 16 ಲಕ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.
ಕೊಡಗು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 2023ರಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಪ್ರಕೃತಿ ವಿಕೋಪ, ಕೋವಿಡ್ ಬಳಿಕ ಕೊಡಗಿನ ಪ್ರವಾಸೋದ್ಯಮ ಚೇತರಿಕೆ ಕಂಡುಕೊಂಡಿದ್ದು, ತನ್ನ ಹಳೆಯ ಗತವೈಭವಕ್ಕೆ ಮರಳುತ್ತಿದೆ.
ವರ್ಷಾರಂಭ-ಅಂತ್ಯದಲ್ಲಿ 11 ಲಕ್ಷ ಪ್ರವಾಸಿಗರು!: ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. 2023 ಡಿಸೆಂಬರ್‌ನಲ್ಲಿ ಜಿಲ್ಲೆಯ ಪ್ರವಾಸಿತಾಣಗಳಿಗೆ 5,82,906 ಪ್ರವಾಸಿಗರು ಭೇಟಿ ನೀಡಿದ್ದಾರೆ. ಹಾಗೂ 2023 ಜನವರಿ ತಿಂಗಳ ಆರಂಭದಲ್ಲಿ 6,20,808 ಪ್ರವಾಸಿಗರು ಕೊಡಗಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿ ದಾಖಲೆ ಸೃಷ್ಟಿಸಿದ್ದಾರೆ.
ಇತ್ತೀಚೆಗೆ ನಡೆದ ಗೂಗಲ್ ಸರ್ವೇಯಲ್ಲಿ, ಕೊಡಗು ಅತೀ ಹೆಚ್ಚು ಹುಡುಕಲಾದ ಪ್ರವಾಸಿತಾಣಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
2023ರಲ್ಲಿ ಜುಲೈ,ಆಗಸ್ಟ್ ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಿದ್ದ ಕಾರಣ ಮೊದಲ ಬಾರಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ರಾಜಾಸೀಟ್ ಪ್ರವಾಸಿಗರ ಪ್ರಸಿದ್ಧ ತಾಣ: ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ನಗರದ ಹೃದಯಭಾಗದಲ್ಲಿರುವ ರಾಜಾಸೀಟ್ ಪ್ರವಾಸಿಗರ ಫೇವರಿಟ್ ಟೂರಿಸ್ಟ್ ಹಾಟ್ ಸ್ಪಾಟ್ ಆಗಿದೆ.
ಕಳೆದ ವರ್ಷ ಫಲಪುಷ್ಪ ಪ್ರದರ್ಶನ ಹಾಗೂ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ರಾಜಾಸೀಟ್‌ಗೆ ಭೇಟಿ ನೀಡಿ ಕೊಡಗಿನ ಸೊಬಗನ್ನು ಆನಂದಿಸಿದ್ದಾರೆ. ಭಾಗಮಂಡಲ ಹಾಗೂ ತಲಕಾವೇರಿ ಪ್ರವಾಸಿಗರು ಭೇಟಿ ನೀಡಿದ ಸ್ಥಳಗಳಲ್ಲಿ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನದಲ್ಲಿ ಕುಶಾಲನಗರದ ನಿಸರ್ಗಧಾಮ ಸ್ಥಾನ ಪಡೆದಿದೆ. ಹಾಗೂ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ, ಮಡಿಕೇರಿ ನಗರದ ಹೊರವಲಯದಲ್ಲಿರುವ ಅಬ್ಬಿಫಾಲ್ಸ್‌ಗೆ ಕಳೆದ ವರ್ಷ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.
ಜೀಪ್ ಗೊಂದಲದಿಂದ ಪ್ರವಾಸಿಗರಿಗೆ ದೂರವಾದ ಮುಗಿಲುಪೇಟೆ: ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪ್ರಕೃತಿ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುವ ಮಾಂದಲ್ ಪಟ್ಟಿ(ಮುಗಿಲುಪೇಟೆ) ಜೀಪ್ ಗೊಂದಲದಿಂದ 2023ರಲ್ಲಿ ಪ್ರವಾಸಿಗರಿಂದ ದೂರವಾಗಿದೆ. 2023 ಜನವರಿಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದ ಮಾಂದಲ್ ಪಟ್ಟಿಗೆ, 2023ರ ವರ್ಷಾಂತ್ಯದಲ್ಲಿ ಕೇವಲ 5,500 ಪ್ರವಾಸಿಗರು ಭೇಟಿ ನೀಡಿದ್ದಾರೆ.
ಪ್ರತೀ ವರ್ಷ 3 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ಸೆಳೆಯುತ್ತಿದ್ದ ಮಾಂದಲ್ ಪಟ್ಟಿಗೆ, ಜೀಪ್ ನಿಷೇಧದಿಂದ ಉಂಟಾಗಿರುವ ಸಮಸ್ಯೆಯಿಂದ ಇದೀಗ 10 ಸಾವಿರ ಮಂದಿ ಭೇಟಿ ನೀಡದಂತಾಗಿದೆ.
5 ವರ್ಷಗಳಲ್ಲಿ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ
2023: 43,69,507
2022: 27,29,711
2021: 10,15,490
2020: 8,43,666
2019: 22,69,988
ಬೇಕಿದೆ ವಿಶೇಷ ಯೋಜನೆ
ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವರ್ಷದಲ್ಲಿ ಮಡಿಕೇರಿಯ ರಾಜಾಸೀಟ್‌ನಲ್ಲಿ ‘ಫ್ಲವರ್ ಶೋ’ ಆಯೋಜಿಸಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಉಳಿದ ಪ್ರವಾಸಿತಾಣಗಳಲ್ಲಿ ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿಲ್ಲ.ಕೇವಲ ಮಡಿಕೇರಿಯಲ್ಲಿ ಫ್ಲವರ್ ಶೋಗೆ ಸೀಮಿತವಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕೊಡಗು ಜಿಲ್ಲೆಯ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಿ, ಟೂರಿಸ್ಟ್‌ಗಳನ್ನು ಸೆಳೆಯುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ ಎಂದು ಜನರ ಒತ್ತಾಯವಾಗಿದೆ.