ಪ್ರವಾಸ ಉದ್ಯಮ ಬಂಡವಾಳ ಮತ್ತು ಪ್ರಕೃತಿ
ಸಿರಿವಂತರಿಗೆ ಹೊರೆಯಾಗದಂತೆ ತಳಸಮಾಜವನ್ನು ಅಸ್ಥಿರಗೊಳಿಸುವ ಬಂಡವಾಳಶಾಹಿ ಆರ್ಥಿಕತೆ
ಬಂಡವಾಳಶಾಹಿ ಅರ್ಥವ್ಯವಸ್ಥೆಯು ಎರಡು ಪ್ರಮುಖ ಸ್ತಂಭಗಳನ್ನು ಆಧರಿಸಿ ತನ್ನ ಪ್ರಗತಿಯತ್ತ ಸಾಗುತ್ತದೆ. ಮೊದಲನೆಯದು ದೇಶಿ/ವಿದೇಶಿ ಬಂಡವಾಳದ ಒಳಹರಿವು ಮತ್ತು ಅದರಿಂದ ಉತ್ಪಾದನೆಯಾಗುವ ಸರಕು-ಸೇವೆಗಳು. ಎರಡನೆಯದು ಈ ಬಂಡವಾಳ ಹೂಡಿಕೆಯ ಪರಿಣಾಮವಾಗಿ ತಳಮಟ್ಟದಿಂದಲೂ ಸೃಷ್ಟಿಯಾಗುವ ಉತ್ಪಾದಕ ವಲಯಗಳು ಮತ್ತು ಅದರಿಂದ ಬೆಳೆಯುವ ಉದ್ಯೋಗ ಮಾರುಕಟ್ಟೆ. ಕೃಷಿ, ಕೈಗಾರಿಕೆ, ಹಣಕಾಸು, ಸಂಚಾರ, ಸಂವಹನ ಹಾಗೂ ಸೇವಾ ಕ್ಷೇತ್ರದ ಎಲ್ಲ ಉತ್ಪಾದನೆಯ ಮೂಲಗಳನ್ನೂ ಈ ಬಂಡವಾಳದ ಕೈಗೊಪ್ಪಿಸಿ, ಉತ್ಪಾದನಾ ಸಾಧನಗಳ ಮೇಲೆ ಬಂಡವಾಳ-ಮಾರುಕಟ್ಟೆಯ ಹಿಡಿತವನ್ನು ಸಾಧಿಸುವ ಮೂಲಕ ಮರುಉತ್ಪಾದನೆಯಾಗುವ ಬಂಡವಾಳವು ಲಾಭದಾಯಕವಾಗುವಂತೆ ಆರ್ಥಿಕ ನೀತಿಗಳನ್ನು ರೂಪಿಸಲಾಗುತ್ತದೆ. ಇಲ್ಲಿ ಸೃಷ್ಟಿಯಾಗುವ ಒಟ್ಟು ಉತ್ಪಾದನೆ ಅಥವಾ ಜಿಡಿಪಿ ದೇಶದ ಆರ್ಥಿಕ ಪ್ರಗತಿಯನ್ನು ಅಳೆಯುವ ಮಾಪಕವೂ ಆಗುತ್ತದೆ.
ಭಾರತ ಅನುಸರಿಸುತ್ತಿರುವ ಡಿಜಿಟಲ್ ಆರ್ಥಿಕತೆಯ ನವ ಉದಾರವಾದಿ ಆರ್ಥಿಕ ನೀತಿ ಇದೇ ಹಾದಿಯಲ್ಲಿ ಸಾಗುತ್ತಿದೆ. ಮೂಲತಃ ತಳಸಮಾಜದಲ್ಲಿನ ಅಸಮಾನತೆಗಳನ್ನು ಯಥಾಸ್ಥಿತಿಯಲ್ಲಿರಿಸಿ, ಜಿಡಿಪಿ ಕೇಂದ್ರಿತ ಅಭಿವೃದ್ಧಿ ಮಾದರಿಯ, ಫಲಾನುಭವಿ ಸಮಾಜವನ್ನು ಹಿತವಲಯದಲ್ಲಿರಿಸುವ, ನವ ಉದಾರವಾದಿ ನೀತಿಗಳು ಒಂದು ಹಂತದಲ್ಲಿ ಬಂಡವಾಳ ಹೂಡಿಕೆದಾರರನ್ನು ರಕ್ಷಿಸಲು ತೆರಿಗೆ ವಿನಾಯಿತಿ/ರಿಯಾಯಿತಿಗಳನ್ನು ಶಾಶ್ವತಗೊಳಿಸುತ್ತದೆ. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 2016ರಲ್ಲಿ ಸಂಪತ್ತಿನ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ರದ್ದುಪಡಿಸಿರುವುದು, 2019ರಲ್ಲಿ ಸ್ಥಳೀಯ ಬಂಡವಾಳಿಗರ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಿರುವುದು ಈ ಮಾದರಿಯ ಒಂದು ಆಯಾಮ. ವಿದೇಶಿ ಬಂಡವಾಳ ಹರಿವನ್ನು ಉತ್ತೇಜಿಸುವ ಸಲುವಾಗಿ ನೇರ ವಿದೇಶಿ ಕಾರ್ಪೊರೇಟ್ ತೆರಿಗೆ ದರವನ್ನು 2024-25ರ ಬಜೆಟ್‌ನಲ್ಲಿ ಶೇ.40ರಿಂದ ಶೇ.35ಕ್ಕೆ ಇಳಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಬಂಡವಾಳ
ಯಾವುದೇ ದೇಶದ ಅರ್ಥವ್ಯವಸ್ಥೆಯಲ್ಲಾದರೂ ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯವನ್ನು ಸೃಷ್ಟಿಸುವ ಉತ್ಪಾದಕ-ಸೇವಾ-ಅನುತ್ಪಾದಕ ಕ್ಷೇತ್ರಗಳನ್ನು ಉತ್ತೇಜಿಸಲಾಗುತ್ತದೆ. ಔದ್ಯೋಗಿಕ ಕ್ರಾಂತಿಯ ನಾಲ್ಕನೇ ಹಂತದಲ್ಲಿರುವ ಭಾರತ ಡಿಜಿಟಲ್ ಯುಗದ ಮುಂಚೂಣಿ ರಾಷ್ಟ್ರವಾಗಿರುವ ಹೊತ್ತಿನಲ್ಲೇ ಅರ್ಥವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಕ್ಷೇತ್ರಗಳನ್ನೂ ಕಾರ್ಪೊರೇಟೀಕರಣಕ್ಕೆ (Corporatisation) ತೆರೆದಿಡಲಾಗುತ್ತಿದೆ. ಅಭಿವೃದ್ಧಿ ಶೀಲ ದೇಶಗಳಲ್ಲಿ ಪ್ರಧಾನವಾಗಿ ಪ್ರವಾಸೋದ್ಯಮವು
ಹೆಚ್ಚಿನ ಆದ್ಯತೆ ಪಡೆಯುತ್ತದೆ. ಏಕೆಂದರೆ ಇಲ್ಲಿ ಬಂಡವಾಳದ ಒಳಹರಿವು, ಆದಾಯ, ಉದ್ಯೋಗ ಮತ್ತು ವಿದೇಶಿ ವಿನಿಯಮದ ಗಳಿಕೆ ಎಲ್ಲವೂ ಹೆಚ್ಚಾಗುತ್ತವೆ. ಭಾರತದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಅತಿ ದೊಡ್ಡ ಕ್ಷೇತ್ರವಷ್ಟೇ ಅಲ್ಲದೆ, ಅತಿ ಹೆಚ್ಚಿನ ಬಂಡವಾಳ ಉತ್ಪಾದನೆ ಮತ್ತು ಆದಾಯವನ್ನು ತರುವ ಕ್ಷೇತ್ರವೂ ಆಗಿದೆ.
ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ದೇಶದ ಒಟ್ಟು ಜಿಡಿಪಿಯ ಶೇ.6.23ರಷ್ಟು ಪಾಲನ್ನು ಹೊಂದಿದ್ದು ಶೇ.8.78ರಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿದೆ. ಅಧಿಕೃತ ಅಂದಾಜಿನ ಪ್ರಕಾರ ಭಾರತಕ್ಕೆ ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆ 50 ಲಕ್ಷದಷ್ಟಿದ್ದು, ಆಂತರಿಕವಾಗಿ 56 ದಶಲಕ್ಷ ಪ್ರವಾಸಿಗರು ದಾಖಲಾಗಿದ್ದಾರೆ. 2022ರ ವಾರ್ಷಿಕ ಅವಧಿಯಲ್ಲಿ ಭಾರತದ ಆರ್ಥಿಕತೆಗೆ ಪ್ರವಾಸೋದ್ಯಮವು 15.7 ಶತಕೋಟಿ ರೂ.ಗಳ ಆದಾಯವನ್ನು ಒದಗಿಸಿದೆ ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಲಿ (WTTC) ವರದಿ ಮಾಡಿದೆ. ಮುಂದಿನ ಹತ್ತು ವರ್ಷಗಳಲ್ಲಿ, ಅಂದರೆ 2030ರ ವೇಳೆಗೆ ಅದು 37 ಶತಕೋಟಿ ರೂ.ಗಳ ಗುರಿ ತಲುಪುವ ಉದ್ದೇಶವೂ ಇದೆ. ಈ ಗುರಿಸಾಧನೆಗಾಗಿ ಆರ್ಥಿಕ ನೀತಿಗಳನ್ನು ರೂಪಿಸುವುದು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಒಂದು ಭಾಗವಾಗಿದ್ದು, ಇದನ್ನು ಉಪೇಕ್ಷಿಸಲೂ ಆಗುವುದಿಲ್ಲ.
ಏಕೆಂದರೆ ಬಂಡವಾಳ ಹೂಡಿಕೆ, ಉತ್ಪಾದನೆಯ ವಿಸ್ತರಣೆ ಹಾಗೂ ಸೇವಾ ವಲಯದ ವ್ಯಾಪಕ ಪ್ರಸರಣದಿಂದ ಪ್ರವಾಸೋದ್ಯಮ ವಲಯದಲ್ಲಿ ಸೃಷ್ಟಿಯಾಗುವ ಉದ್ಯೋಗಾವಕಾಶಗಳು ಸಮಾಜದ ಎಲ್ಲ ಸ್ತರಗಳನ್ನೂ ಪ್ರಭಾವಿಸುತ್ತದೆ. ಕೆಳಸ್ತರದ ಸಮಾಜದಲ್ಲಿ ಅತ್ಯವಶ್ಯವಾದ ಜೀವನೋಪಾಯದ ಮಾರ್ಗಗಳನ್ನು ಸೃಷ್ಟಿಸುವ ಪ್ರವಾಸೋದ್ಯಮವು ಮಧ್ಯಮ ಸ್ತರದಲ್ಲಿ ಸಣ್ಣ ವ್ಯಾಪಾರ ಮತ್ತು ಉದ್ದಿಮೆಗಳಿಗೂ ಅವಕಾಶಗಳನ್ನು ತೆರೆದಿಡುತ್ತದೆ. ಈ ಸ್ಥಳೀಯ ಉತ್ಪಾದನೆಯೊಂದಿಗೇ ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶಗಳನ್ನೂ ತೆರೆದಿಡುತ್ತದೆ. 2023ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 43 ದಶಲಕ್ಷ ಜನರಿಗೆ ಪ್ರವಾಸೋದ್ಯಮದಿಂದ ಉದ್ಯೋಗ ಲಭ್ಯವಾಗುತ್ತಿದೆ. 2033ರ ವೇಳೆಗೆ ಇದು 58 ದಶಲಕ್ಷ ತಲುಪುವ ಸಾಧ್ಯತೆಗಳಿವೆ. ಆದರೆ ಈ ಉದ್ಯೋಗಾವಕಾಶಗಳು ತಳಸಮಾಜದಲ್ಲಿ ಎಷ್ಟರ ಮಟ್ಟಿಗೆ ಸುಸ್ಥಿರ ಬದುಕನ್ನು ರೂಪಿಸುತ್ತವೆ ಎನ್ನುವುದು ಚರ್ಚೆಗೀಡಾಗಬೇಕಾದ ವಿಚಾರ.
ಅಭಿವೃದ್ಧಿ ಮಾದರಿಯ ಔಚಿತ್ಯ
ಅಭಿವೃದ್ಧಿ ಶೀಲ ದೇಶದ ಆರ್ಥಿಕ ಪ್ರಗತಿಗೆ ಬಂಡವಾಳ ಅತ್ಯವಶ್ಯ ಹೌದು. ಆದರೆ ಸಮಸ್ಯೆ ಇರುವುದು ಬಂಡವಾಳದಲ್ಲಿ ಅಲ್ಲ. ಅದರ ಹೂಡಿಕೆಯ ಕೇಂದ್ರ ಯಾವುದು? ಅದರಿಂದ ಮರುಉತ್ಪಾದನೆಯಾಗುವ ಬಂಡವಾಳ ಪುನಃ ಎತ್ತ ಹರಿಯುತ್ತದೆ? ಬಂಡವಾಳ ಹೂಡಿಕೆಯಿಂದ ಸೃಷ್ಟಿಯಾಗುವ ಲಾಭ ಯಾರಿಗೆ ತಲುಪುತ್ತದೆ? ಹೂಡಿಕೆಯ ವಾರಸುದಾರ ಕಂಪೆನಿಗಳು-ಬಹುಮಟ್ಟಿಗೆ ದೊಡ್ಡ ಕಾರ್ಪೊರೇಟ್ ಸಮೂಹಗಳು-ಮರುಉತ್ಪಾದಿತ ಬಂಡವಾಳವನ್ನು ನಮ್ಮ ದೇಶದಲ್ಲೇ ಹೂಡುವ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಸುತ್ತಾರೆಯೇ? ಶಾಶ್ವತವಾಗಿ ಹೂಡಲಾಗುವ ಬಂಡವಾಳವು ಕೆಳಸ್ತರದ ಶ್ರಮಿಕರಿಗೆ ಶಾಶ್ವತ-ಸುಸ್ಥಿರ ಬದುಕನ್ನು ಕಲ್ಪಿಸಿಕೊಡುತ್ತವೆಯೇ? ಸರಕಾರಗಳು ತೆರಿಗೆಯಲ್ಲಿ ನೀಡುವ ವಿನಾಯಿತಿಯನ್ನು ಜನಸಾಮಾನ್ಯರ ಆರ್ಥಿಕ ಏಳಿಗೆಗಾಗಿ ಎಷ್ಟು ಪ್ರಮಾಣದಲ್ಲಿ ಬಳಸುತ್ತವೆ? ಈ ಪ್ರಶ್ನೆಗಳಲ್ಲೇ ಇಡೀ ಬಂಡವಾಳಶಾಹಿಯ ಅಂತರಾಳ ಅಡಗಿದೆ. ಇನ್ನೂ ಮುಖ್ಯವಾದ ಪ್ರಶ್ನೆ ಎಂದರೆ ಉತ್ಪಾದನೆಯ ಮೂಲಗಳ ಮೇಲಿನ ಒಡೆತನ.
ಈ ಪ್ರಶ್ನೆಗಳು ಉತ್ಪಾದಕ-ಕೈಗಾರಿಕಾ ವಲಯಕ್ಕಿಂತಲೂ ಸೂಕ್ಷ್ಮತೆ ಪಡೆದುಕೊಳ್ಳುವುದು ಪ್ರವಾಸೋದ್ಯಮ ವಲಯದಲ್ಲಿ. ಏಕೆಂದರೆ ಗಿರಿಧಾಮಗಳು, ವನ್ಯಜೀವಿ ತಾಣಗಳು, ದಟ್ಟಾರಣ್ಯಗಳು, ಹಿಮಚ್ಚಾದಿತ ಪರ್ವತಗಳು, ಹಚ್ಚಹಸಿರಿನ ಬೆಟ್ಟಗುಡ್ಡಗಳು, ಪಶ್ಚಿಮ ಘಟ್ಟದಂತಹ ಜೀವವೈವಿಧ್ಯತೆಯ ತಾಣಗಳು ಹಾಗೂ ನದಿ-ಸಮುದ್ರ ತೀರದ ಭೂ ಪ್ರದೇಶಗಳು ಈ ಕಾರ್ಪೊರೇಟ್ ಬಂಡವಾಳ ಹೂಡಿಕೆಗೆ ಪ್ರಶಸ್ತವಾಗಿ ಕಾಣುವುದು ಪ್ರವಾಸೋದ್ಯಮದ ಮೂಲಕ. ಇಲ್ಲಿ ಬಂಡವಾಳ ಹೂಡಿಕೆ ಮಾಡುವ ಔದ್ಯಮಿಕ ಜಗತ್ತಿಗೆ, ಈ ನಿಸರ್ಗದತ್ತ ಜಗತ್ತಿನ ಪರಿಸರ ಸೂಕ್ಷ್ಮತೆಯಾಗಲೀ, ಅಲ್ಲಿ ಶತಮಾನಗಳಿಂದ ಇರಬಹುದಾದ ಜೀವ ವೈವಿಧ್ಯತೆಯಾಗಲೀ ಅಥವಾ ಹೊರ ಜಗತ್ತಿನ ವರ್ತಮಾನದ ಸುಸ್ಥಿರತೆಗೆ ಮತ್ತು ಭವಿಷ್ಯದ ಉಳಿವಿಗೆ ಅತ್ಯವಶ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಲೀ ಹಾಗೂ ಬಹುಮುಖ್ಯವಾಗಿ ಅಲ್ಲಿ ಪಾರಂಪರಿಕವಾಗಿ ಬದುಕು ಕಟ್ಟಿಕೊಂಡಿರುವ ಬುಡಕಟ್ಟು ಸಮುದಾಯಗಳಾಗಲೀ, ಯಾವುದೂ ಗಣನೆಗೆ ಬರುವುದೇ ಇಲ್ಲ. ತಮ್ಮ ಮೂಲ ನೆಲೆಯಿಂದ ಉಚ್ಚಾಟಿತರಾದ ಬುಡಕಟ್ಟು ಜನರು ಹೊರ ಜಗತ್ತಿಗೆ ಹೊಂದಿಕೊಳ್ಳಲಾಗದೆ ಪರದಾಡುತ್ತಿರುವಂತೆಯೇ, ಕಾರ್ಪೊರೇಟ್ ಔದ್ಯಮಿಕ ಹಿತಾಸಕ್ತಿಗಳು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಮ್ಮ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಳ್ಳುವ ಒಂದು ಅಭಿವೃದ್ಧಿ ಮಾದರಿಗೆ ಭಾರತ ಸಾಕ್ಷಿಯಾಗಿದೆ.
ಪ್ರವಾಸೋದ್ಯಮ ಇಲ್ಲಿ ಹಲವು ಜಟಿಲ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ, ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಈಗಲೂ ಸಂಭವಿಸುತ್ತಿರುವ, ಚಾರ್‌ಧಾಮ್ ಎಂದೇ ಹೆಸರಾದ ಬದರಿ-ಕೇದಾರ ಮಾರ್ಗದಲ್ಲಿ ನಿರಂತರವಾಗಿ ಕಾಣಲಾಗುತ್ತಿರುವ ದುರಂತಗಳು ಈ ಲಾಭ ಕೇಂದ್ರಿತ-ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕ ಅಭಿವೃದ್ಧಿಯ ಮತ್ತೊಂದು ಅಪಾಯಕಾರಿ ಆಯಾಮವಾಗಿ ಕಾಣುತ್ತದೆ. ಹಾಗೆಂದ ಮಾತ್ರಕ್ಕೆ ಈ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಮಾನವ ಸಮಾಜದಿಂದ ಸಂಪೂರ್ಣವಾಗಿ ಹೊರತಾಗಿಸುವುದು ಸಾಧ್ಯವೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಭಾರತದ ಸಂದರ್ಭದಲ್ಲಿ ಹಲವಾರು ತೀರ್ಥಕ್ಷೇತ್ರಗಳು, ಯಾತ್ರಾಸ್ಥಳಗಳು, ದೇವಾಲಯಗಳು ಇಂತಹ ನಿಸರ್ಗದ ಒಡಲಲ್ಲೇ ಇರುವುದರಿಂದ, ಜನಸಾಮಾನ್ಯರ ವ್ಯಕ್ತಿಗತ ಭಕ್ತಿಭಾವವನ್ನು ಗೌರವಿಸುವುದೂ ಅತ್ಯವಶ್ಯ.
ಪ್ರವಾಸ ಮತ್ತು ಉದ್ಯಮದ ಅಂತರ
ಭಕ್ತಿ-ಶ್ರದ್ಧೆಯ ಹೆಸರಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಔದ್ಯಮಿಕ ಜಗತ್ತು ಕೈಗೊಳ್ಳುವ ಮಾನವ ಚಟುವಟಿಕೆಗಳು, ಅತ್ಯಾಧುನಿಕ ಸಂಚಾರ ಸಾಧನಗಳು, ಹೋಟೆಲ್, ರೆಸಾರ್ಟ್ ಮೊದಲಾದ ಸೌಕರ್ಯಗಳು ಇವೆಲ್ಲವೂ ಒಂದು ಗರಿಷ್ಠ ಹಂತ ತಲುಪಿದ ನಂತರ ಅಪಾಯಕಾರಿಯಾಗಿ ಪರಿಣಿಸುತ್ತವೆ. ಚಾರ್‌ಧಾಮ್ ಮಾರ್ಗದ ಜೋಷಿ ಮಠ ಇಂತಹ ಒಂದು ಅಪಾಯವನ್ನು ಎದುರಿಸುತ್ತಲೇ ಇದೆ. ಆರ್ಥಿಕ ಪ್ರಗತಿ ಅಥವಾ ಅಭಿವೃದ್ಧಿಯನ್ನು ಮೂಲ ಸೌಕರ್ಯಗಳ ನಿರ್ಮಾಣದ ಚೌಕಟ್ಟಿನೊಳಗೇ ವ್ಯಾಖ್ಯಾನಿಸುವ ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಮಾನವ ಚಟುವಟಿಕೆಗಳೇ ಪ್ರಕೃತಿಯನ್ನು ನಾಶಪಡಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ಯಾತ್ರಾರ್ಥಿಗಳಿಗಾಗಿ ನಿರ್ಮಿಸಲಾಗುವ ಸೌಕರ್ಯತಾಣಗಳು ಕ್ರಮೇಣ ಮಾನವ ವಸತಿ ನೆಲೆಗಳಾಗಿ ಪರಿವರ್ತನೆಯಾಗುವುದರಿಂದ, ಸಮತಟ್ಟಿನ ಭೂ ಪ್ರದೇಶದಲ್ಲಿ ಅನುಸರಿಸುವಂತಹ ನಗರೀಕರಣದ ಮಾದರಿಯನ್ನೇ ಈ ನಿಸರ್ಗ ತಾಣಗಳಲ್ಲೂ ಅನುಸರಿಸುವುದು ಬಂಡವಾಳಶಾಹಿಯ ಔದ್ಯಮಿಕ ಲಕ್ಷಣ.
ಈ ನಗರೀಕರಣಕ್ಕೆ ಪೂರಕವಾಗಿ ನಿರ್ಮಾಣವಾಗುವ ಅತ್ಯಾಧುನಿಕ ಸಂಪರ್ಕ ಸಾಧನಗಳು ರಸ್ತೆ, ಹೆದ್ದಾರಿ, ಸೇತುವೆ, ಸುರಂಗ ಮೊದಲಾದ ಬೃಹತ್ ಯೋಜನೆಗಳಿಗೆ ಎಡೆಮಾಡಿಕೊಡುವುದರಿಂದ, ಪ್ರಕೃತಿಯು ತಡೆದುಕೊಳ್ಳಲಾಗದ ಕಾಂಕ್ರಿಟೀಕರಣಕ್ಕೆ (Concretisation) ಸಹಜವಾಗಿಯೇ ಉತ್ತೇಜನ ನೀಡಲಾಗುತ್ತದೆ. ಮಾನವ ಸಮಾಜ ತನ್ನ ನೆಲೆ ಕಂಡುಕೊಳ್ಳುವ ಜಾಗದಲ್ಲೆಲ್ಲಾ ಸುತ್ತಲಿನ ಮೇಲ್ಪದರದ ಸಂಪನ್ಮೂಲಗಳನ್ನಷ್ಟೇ ಅಲ್ಲದೆ, ಭೂತಳದಲ್ಲಿರುವ ಸಂಪನ್ಮೂಲಗಳನ್ನೂ ತನ್ನ ಏಳಿಗೆಗಾಗಿ ಬಳಸಿಕೊಳ್ಳುವುದು ಚಾರಿತ್ರಿಕ ವಾಸ್ತವ. ಆದರೆ ಈ ಸೂತ್ರವನ್ನು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲೂ ಅನುಸರಿಸಿದಾಗ ಅಲ್ಲಿ ಧರೆಯ ಧಾರಣಾ ಶಕ್ತಿ ಕುಸಿಯುತ್ತದೆ. ಪರಿಸರ ತಜ್ಞರು, ಇಕಾಲಜಿ ತಜ್ಞರು, ಭೂ ವಿಜ್ಞಾನಿಗಳು ಈ ಅಂಶವನ್ನೇ ಪದೇ ಪದೇ ನೆನಪಿಸುತ್ತಿರುತ್ತಾರೆ. ಆದರೆ ಜನಸಾಮಾನ್ಯರ ಪಾಲಿನ ಪ್ರವಾಸ ಆರ್ಥಿಕತೆಯ ದೃಷ್ಟಿಯಲ್ಲಿ ಉದ್ಯಮವಾಗುವುದರಿಂದ ಅಲ್ಲಿ ಬಂಡವಾಳ ಹೂಡುವವರಿಗೆ ನಿಸರ್ಗ ಒದಗಿಸುವ ಪ್ರತಿಯೊಂದು ವಸ್ತುವೂ ಮಾರು ಕಟ್ಟೆ ಸರಕಿನಂತೆ (Marketable Commodity) ಕಾಣುತ್ತದೆ.
ಸಹಜವಾಗಿಯೇ ಈ ಸಂಕುಚಿತ ಆರ್ಥಿಕತೆಯ ಪರಿಣಾಮವಾಗಿ ಭೂತಳದ ಎಲ್ಲ ಅಮೂಲ್ಯ ವಸ್ತುಗಳೂ ಸಹ ಸರಕೀಕರಣಕ್ಕೊಳಗಾಗುತ್ತವೆ (Commodification). ನಿರಂತರವಾದ ಜನದಟ್ಟಣೆ ಮತ್ತು ಪ್ರವಾಸಿಗರ ಭೇಟಿಯಿಂದ ಉತ್ತೇಜಿತವಾಗುವ ಔದ್ಯಮಿಕ ವಲಯ ನೈಸರ್ಗಿಕ ಸಂಪನ್ಮೂಲಗಳನ್ನು ಸರಕೀಕರಣಗೊಳಿಸುತ್ತಲೇ, ಇಡೀ ಪ್ರಕೃತಿಯನ್ನೇ ವಿನಿಮಯ ಮಾಡಬಹುದಾದ ಸರಕಿನಂತೆ ಕಾಣ ತೊಡಗುತ್ತದೆ. ಈ ಸರಕೀಕರಣ (Commodification) ಪ್ರಕ್ರಿಯೆ ವಿಸ್ತರಿಸಿದಂತೆಲ್ಲಾ ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಜಲವಿದ್ಯುತ್ ಘಟಕಗಳು ಮೊದಲಾದ ಔದ್ಯೋಗಿಕ ಸ್ಥಾವರಗಳು ನೆಲೆ ಕಾಣತೊಡಗುತ್ತವೆ. ಸಾಮಾನ್ಯ ಜನಜೀವನ-ನಗರೀಕರಣ ಆಧುನಿಕ ಸೌಕರ್ಯಗಳು ಇವುಗಳಿಗೆ ಪೂರಕವಾಗಿ ತಲೆಎತ್ತುವುದು ಪ್ರವಾಸೋದ್ಯಮದ ಜೀವಾಳ ಎನ್ನಬಹುದಾದ ರೆಸಾರ್ಟ್‌ಗಳು, ಐಷಾರಾಮಿ ಸ್ಟಾರ್ ಹೋಟೆಲುಗಳು, ಹೋಮ್ ಸ್ಟೇಗಳು ಹಾಗೂ ವಸತಿ ಬಡಾವಣೆಗಳು.
ತನ್ನ ಸುತ್ತಲಿನ ವಾತಾವರಣದಲ್ಲಿ ಲಭ್ಯವಾಗುವ ಎಲ್ಲ ಅನುಕೂಲತೆಗಳನ್ನು, ಸಂಪನ್ಮೂಲಗಳನ್ನು ತನ್ನ ಏಳಿಗೆಗಾಗಿ ಬಳಸಿಕೊಳ್ಳುವ ಆಧುನಿಕ ನಾಗರಿಕತೆಗೆ ಪೂರಕವಾಗಿ ಔದ್ಯಮಿಕ ವಲಯವೂ ಸಹ ಪ್ರವಾಸೋದ್ಯಮದ ಹೆಸರಿನಲ್ಲಿ ಈ ಮೇಲ್ಪದರದ ಜನತೆಗೆ ಅವಶ್ಯವಾದ ಐಷಾರಾಮಿ ಅನುಕೂಲತೆಗಳನ್ನು ಒದಗಿಸಲು ಮುಂದಾಗುತ್ತವೆ. ಇದರ ಪರಿಣಾಮವೇ ವಯನಾಡಿನ ರೆಸಾರ್ಟ್‌ಗಳು, ಕೊಡಗಿನ ಹೋಮ್ ಸ್ಟೇಗಳು, ಪಶ್ಚಿಮ ಘಟ್ಟಗಳ ಜಂಗಲ್ ರೆಸಾರ್ಟ್‌ಗಳು ಮತ್ತು ಇಲ್ಲಿ ಸೃಷ್ಟಿಯಾಗುವ ಬಾಹ್ಯ ಸಮಾಜದ ಮೋಜು-ಮಸ್ತಿಯ ಜೀವನಶೈಲಿ. ಸಮತಟ್ಟು ಪ್ರದೇಶದ ನಗರೀಕರಣ ಮಾದರಿಯನ್ನೇ ಘಟ್ಟಗಳಲ್ಲೂ ಅಳವಡಿಸುವ ಮೂಲಕ ಕಾಂಕ್ರಿಟೀಕರಣ (Concretisation) ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಇಲ್ಲಿ ನಿರ್ಮಿಸಲಾಗುವ ಹೆದ್ದಾರಿಗಳು, ಮೇಲ್ಸೇತುವೆಗಳು, ಸುರಂಗಗಳು, ಎಕ್ಸ್‌ಪ್ರೆಸ್ ಹೆದ್ದಾರಿಗಳು ಧರೆಯ ತಳಪಾಯವನ್ನೇ ದುರ್ಬಲಗೊಳಿಸುತ್ತಾ ಹೋಗುತ್ತವೆ.
ವರ್ಗ ಹಿತಾಸಕ್ತಿಯ ನೆಲೆಯಲ್ಲಿ
ಯಾವುದೇ ತೀರ್ಥಕ್ಷೇತ್ರವಾಗಲೀ, ಯಾತ್ರಾಸ್ಥಳವಾಗಲೀ ಅಲ್ಲಿನ ಪರಿಸರ ವೈವಿಧ್ಯತೆ ಮತ್ತು ನಿಸರ್ಗ ಸೂಕ್ಷ್ಮತೆಗಳು, ನೈಜ ಶ್ರದ್ಧಾಭಕ್ತಿಯಿಂದ ಅಥವಾ ಆಹ್ಲಾದಕ್ಕಾಗಿ ಅಲ್ಲಿಗೆ ಭೇಟಿ ನೀಡುವ ಭಕ್ತಾದಿಗಳಿಂದ- ಸಾಮಾನ್ಯರ ಕುಟುಂಬಗಳಿಂದ ನಾಶವಾಗುವುದೂ ಇಲ್ಲ. ಇವರಲ್ಲಿ ಬಹುತೇಕರು ಕೆಳಸ್ತರದ ಅಥವಾ ಮಧ್ಯಮ ವರ್ಗದ ಸಮಾಜಕ್ಕೆ ಸೇರಿದವ ರಾಗಿರುತ್ತಾರೆ. ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆಯು ಸೃಷ್ಟಿಸುತ್ತಿರುವ ಮೇಲ್ ಸ್ತರದ ಮಧ್ಯಮ ವರ್ಗ, ಐಷಾರಾಮಿ ಸಿರಿವಂತ ವರ್ಗ ಹಾಗೂ ಇವುಗಳನ್ನು ಔದ್ಯಮಿಕ ನೆಲೆಯಲ್ಲಿ ಪ್ರತಿನಿಧಿಸುವ ಒಂದು ಮಾರುಕಟ್ಟೆ ಜಗತ್ತು ಪರಿಸರ ಸೂಕ್ಷ್ಮತೆಗೆ ವಿನಾಶಕಾರಿಯಾಗಿ ಪರಿಣಮಿಸುತ್ತದೆ. ಅತಿಯಾದ ಖಾಸಗಿ ವಾಹನ ಸಂಚಾರ, ಅವುಗಳಿಗೆ ಅವಶ್ಯವಾಗುವ ಪಾರ್ಕಿಂಗ್ ಸೌಲಭ್ಯಗಳು ಮತ್ತು ಈ ವರ್ಗದ ಜನತೆಯ ಮನತಣಿಸಲೆಂದೇ ನಿರ್ಮಾಣವಾಗುವ ಸ್ಟಾರ್ ಹೋಟೆಲ್-ರೆಸಾರ್ಟ್ ಗಳು ಯಾತ್ರಾಸ್ಥಳಗಳನ್ನೂ ಸಹ ಕಲುಷಿತಗೊಳಿಸುತ್ತವೆ. ಸಮಕಾಲೀನ ಭಾರತದ ಪ್ರವಾಸೋದ್ಯಮ ಎದುರಿಸುತ್ತಿರುವ ಸವಾಲು ಇದು.
ಈ ಮೇಲ್ಪದರದ ಹಿತವಲಯವನ್ನೇ ಕೇಂದ್ರೀಕರಿಸಿ ಪ್ರವಾಸೋದ್ಯಮ ನೀತಿಯನ್ನು ರೂಪುಗೊಳಿಸುವ ಸರಕಾರಗಳು ಒಂದು ಸಮತೋಲನದ ಯೋಜನಾ ಬದ್ಧ ಪ್ರವಾಸ ನೀತಿಯನ್ನು ಹೊಂದಿರದಿದ್ದರೆ ಅಲ್ಲಿ ಉದ್ಯಮವೇ ಪ್ರಧಾನವಾಗಿಬಿಡುತ್ತದೆ. ಘಟ್ಟ ಪ್ರದೇಶ, ಗುಡ್ಡಗಾಡುಗಳು, ಪರ್ವತಶ್ರೇಣಿಗಳು ಹಾಗೂ ದಟ್ಟಾರಣ್ಯಗಳ ಮೂಲಕ ಹಾದು ಹೋಗುವ ಪ್ರವಾಸ ಕ್ಷೇತ್ರಗಳಲ್ಲಿ ನಿಸರ್ಗದತ್ತವಾಗಿ ಶತಮಾನಗಳಿಂದ ಇರುವ ಜೀವ ವೈವಿಧ್ಯತೆಗಳನ್ನು, ಸಸ್ಯ ವರ್ಗಗಳನ್ನು ಹಾಗೂ ಅಲ್ಲಿನ ಬುಡಕಟ್ಟು ಜನಜೀವನವನ್ನು ಕಾಪಾಡುವುದು ಸರಕಾರಗಳ ಪ್ರಥಮ ಆದ್ಯತೆಯಾಗಬೇಕಾಗಿದೆ. ಪರಿಸರ ಮಾಲಿನ್ಯ ಮಾಡುವಂತಹ ಔದ್ಯೋಗಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು, ನಿಸರ್ಗದ ಒಡಲನ್ನು ಬಗೆದು ಬರಿದು ಮಾಡುವ ಅಥವಾ ಸಸ್ಯ ಸಂಪತ್ತನ್ನು ನಿರ್ನಾಮ ಮಾಡುವ ಔದ್ಯಮಿಕ ಚಟುವಟಿಕೆಗಳನ್ನು ನಿಷೇಧಿಸುವುದು, ಹೊರಜಗತ್ತಿನ ಆಧುನಿಕ ಜೀವನಶೈಲಿಯನ್ನು ನಿರ್ಬಂಧಿಸುವುದು ಪರಿಸರ ರಕ್ಷಣೆಯ ದೃಷ್ಟಿಯಿಂದ ಅತ್ಯವಶ್ಯವಾಗುತ್ತದೆ.
ಬಂಡವಾಳ ಮತ್ತು ಔದ್ಯಮಿಕ ಮೂಲ ಸೌಕರ್ಯಗಳನ್ನು ಬೆನ್ನತ್ತಿ ಹೋಗುವ ನವ ಉದಾರವಾದಿ ಆರ್ಥಿಕತೆಯ ಆಳ್ವಿಕೆಗೆ ಈ ಸೂಕ್ಷ್ಮಗಳ ಅರಿವು ಇರಬೇಕು. ಭಾರತದ ನಿಸರ್ಗದೊಡಲಿನ ಅನೇಕ ಭಕ್ತಿ ಕೇಂದ್ರಗಳು, ರಮ್ಯ ತಾಣಗಳು, ವಿಹಂಗಮ ಘಟ್ಟ ಪ್ರದೇಶಗಳು ವರ್ತ ಮಾನದ ಸಮಾಜಕ್ಕೆ ಸುಲಭವಾಗಿ ದೊರೆಯುವಂತಾಗಿರುವುದಕ್ಕೆ ಕಾರಣ, ನಮ್ಮ ಪೂರ್ವಸೂರಿಗಳು ಇವುಗಳನ್ನು ಕಾಪಾಡಿಕೊಂಡು ಬಂದಿರುವುದು. ಇದೇ ಪರಿವೆ, ಪರಿಜ್ಞಾನ ವರ್ತಮಾನದ ಸಮಾಜಕ್ಕೂ ಇದ್ದರೆ ಭವಿಷ್ಯದ ಪೀಳಿಗೆಗೆ ಇವುಗಳನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಸಾಧ್ಯ. ಇಲ್ಲವಾದರೆ ಭಾರತದ ಮೆಟ್ರೊಪಾಲಿಟನ್ ನಗರದ ಮಕ್ಕಳಿಗೆ ಗುಬ್ಬಚ್ಚಿ ಎಂಬ ಹಕ್ಕಿಯನ್ನು ಪುಸ್ತಕದಲ್ಲಿ ತೋರಿಸುವಂತೆ ಮುಂದಿನ ಪೀಳಿಗೆಗೆ ಈ ರಮ್ಯ-ಭಕ್ತಿ ತಾಣಗಳನ್ನೂ ಹಾಳೆಗಳ ಮೇಲೆ ತೋರಿಸಬೇಕಾಗುತ್ತದೆ.
ಪ್ರಕೃತಿಯು ಮನುಕುಲಕ್ಕೆ ನೀಡಿರುವ ಅಗಾಧ ಸಂಪನ್ಮೂಲ ಮತ್ತು ಅಪಾರ ಪ್ರಮಾಣದ ಸಂಪತ್ತು ಈವತ್ತಿನ ಸಮಾಜದ ಆಸ್ತಿಯಲ್ಲ ಅಥವಾ ಈ ಸಮಾಜವನ್ನು ಪೋಷಿಸುವ ಮಾರುಕಟ್ಟೆಯ ಸ್ವತ್ತೂ ಅಲ್ಲ. ಇದರ ವಾರಸುದಾರಿಕೆ ಮನುಕುಲಕ್ಕೆ ಸೇರಿದ್ದು. ಈ ಅರಿವು ಆಡಳಿತ ನೀತಿ ನಿರೂಪಕರಲ್ಲೂ ಇರಬೇಕು. ಪ್ರವಾಸೋದ್ಯಮ ಎನ್ನುವುದು ಕೇವಲ ಐಹಿಕ ಸುಖಲೋಲುಪತೆಯ ಹಾದಿಯಲ್ಲ, ಮನುಷ್ಯ ಸಮಾಜಕ್ಕೆ ನಿತ್ಯ ಜೀವನದ ಜಂಜಾಟದ ನಡುವೆ ಸಾಂತ್ವನ ನೀಡುವ ಒಂದು ಹಾದಿ ಎಂದೇ ಭಾವಿಸಬೇಕಿದೆ. ಇಲ್ಲಿ ನಾಗರಿಕರ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯೂ ಮುಖ್ಯವಾಗುತ್ತದೆ. ನಿಸರ್ಗವನ್ನು ಮತ್ತು ಪ್ರಾಕೃತಿಕ ಸಂಪತ್ತನ್ನು ಮನುಷ್ಯ ಸಮಾಜಕ್ಕೆ ಬಳಕೆಯಾಗಬಹುದಾದ ಕಚ್ಚಾವಸ್ತುವಾಗಿ ಪರಿಗಣಿಸುವುದರ ಬದಲಾಗಿ, ಮನುಕುಲದ ಉನ್ನತಿಗಾಗಿ ಕಾಪಾಡಬಹುದಾದ ಒಂದು ಅಮೂಲ್ಯ ಭಂಡಾರ ಎಂದು ಪರಿಗಣಿಸುವುದು ವಿವೇಕಯುತ ಧೋರಣೆ. ಆಧುನಿಕ ಮಾನವ ಸಮಾಜ ಮತ್ತು ಅದನ್ನು ನಿರ್ದೇಶಿಸುವ ಬಂಡವಾಳಶಾಹಿ ಆರ್ಥಿಕ ಮಾದರಿ ಈ ವಿವೇಕ-ವಿವೇಚನೆಯನ್ನು ಕಳೆದುಕೊಂಡಾಗ ವಯನಾಡ್, ಕೊಡಗು, ಕೇದಾರ, ಜೋಷಿಮಠ ಸಂಭವಿಸುತ್ತದೆ.