ಹಳ್ಳಿ ಬದುಕಿನ ಸ್ಥಿತ್ಯಂತರಗಳು ಮತ್ತು ಬಿಕ್ಕಟ್ಟುಗಳು
ಭಾಗ- 2
ಯೋಜನೆಗಳು ಇ-ಆಡಳಿತ ಪ್ರಕ್ರಿಯೆಗೆ ಒಳಪಡುವುದರಿಂದ ಅನೇಕ ಹಂತದ ಆಡಳಿತ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಉದ್ಯೋಗಗಳು ಮತ್ತು ಹುದ್ದೆ ಇಲ್ಲವಾಗಿದೆ. ಗ್ರಾಮಪಂಚಾಯತ್ ಮೂಲಕ ನಡೆಯುವ ಅಭಿವೃದ್ಧಿ ಕಾರ್ಯಚಟುವಟಿಕೆಗಳು ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಎಂ.ನರೇಗಾ ಕಾಮಗಾರಿಗಳ ಪ್ರತಿ ಹಂತದ ಪ್ರಗತಿಯನ್ನು GPS ಮೂಲಕ ಫೋಟೊ ತೆಗೆದು ಅಪ್ಲೋಡ್ ಮಾಡಬೇಕು. ಆ ಮೂಲಕ ಕಾಮಗಾರಿಯ ಗುಣಮಟ್ಟ, ಪ್ರತಿಹಂತದ ಪ್ರಗತಿ, ಆಯಾ ಹಂತಕ್ಕೆ ತಗಲುವ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ ಅಭಿವೃದ್ಧಿ ಕಾಮಗಾರಿಗಳ ದಾಖಲಾತಿಗಳನ್ನು ಡಿಜಿಟಲ್ ಆಡಳಿತ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ. ವಿವಿಧ ವಸತಿ ಯೊಜನೆಯ ಫಲಾನುಭವಿ ತಮ್ಮ ನಿವೇಶನದ ಸಂಖ್ಯೆಯಲ್ಲಿ ನಿಂತು GPS ಮೂಲಕ ಫೋಟೊ ತೆಗೆದು ಕಳುಹಿಸಿದಾಗ ಮಾತ್ರ ಆಯಾ ಹಂತಕ್ಕೆ ಹಣ ಬಿಡುಗಡೆಯಾಗುತ್ತದೆ. ಇಲ್ಲವಾದರೆ ಹಣ ಬಿಡುಗಡೆ ಮಾಡದಂತೆ ನಿಯಮಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಹೀಗೆ ಡಿಜಿಟಲ್ ತಂತ್ರಜ್ಞಾನವನ್ನು ಪಾರದರ್ಶಕತೆ, ಸಮಯದ ಉಳಿತಾಯ ಇನ್ನೂ ಮುಂತಾದ ವಿಷಯಗಳ ದೃಷ್ಟಿಯಿಂದ ತ್ವರಿತಗತಿಯಲ್ಲಿ ಜಾರಿಗೆ ತಂದು ಮಾನವ ಶ್ರಮವನ್ನು ಸಂಪೂರ್ಣವಾಗಿ ಕುಗ್ಗಿಸಲಾಯಿತು. ಇದರ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಕೈಗಾರಿಕಾ ಸ್ವರೂಪ ಪಡೆಯಿತು. ಯಾಂತ್ರಿಕತೆ ಹೆಚ್ಚಾಯಿತು. ಕೃಷಿ ಸಮಾಜದ ದುಡಿಮೆಯ ಸ್ವರೂಪ ಬದಲಾಯಿತು. ಕೃಷಿ ಸಮಾಜದಲ್ಲಿ ಬದುಕಿದ ಮಧ್ಯಮ, ಸಣ್ಣ, ಅತಿ ಸಣ್ಣ ರೈತರು ಹಾಗೂ ಭೂರಹಿತ ದುಡಿಮೆಗಾರರು, ಕೃಷಿ ಚಟುವಟಿಕೆಯ ಜೊತೆಗೆ ಇತರ ಶ್ರಮ ಆಧಾರಿತ ದುಡಿಮೆಯ ಮೂಲಕ ತಮ್ಮ ಜೀವನ ಮತ್ತು ಜೀವನೋಪಾಯವನ್ನು ಕಟ್ಟಿಕೊಂಡವರು ದೊಡ್ಡ ಮಟ್ಟದ ಗಂಡಾಂತರಗಳಿಗೆ ಒಳಗಾದರು.
ಈ ಪರಿಸ್ಥಿತಿಯಲ್ಲಿ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳ ಸದಸ್ಯರು, ಭೂರಹಿತ ಬಡಜನರು ಜೀವವನ್ನು ಉಳಿಸಿಕೊಳ್ಳಲು ದುಡಿಮೆಯನ್ನು ಅರಸಿ ನಗರ ಪ್ರದೇಶಗಳಿಗೆ ವಲಸೆ ಬಂದು ದುಡಿವೆ ಬೇಟೆ ಪ್ರಾರಂಭಿಸಿದರು. ಬಡವರು ಜೀವನೋಪಾಯಕ್ಕೆ ದುಡಿಮೆಯನ್ನು ಅರಸಿ ಊರಿಂದ ಊರಿಗೆ ವಲಸೆ ಹೋಗತೊಡಗಿದರು. ಇದನ್ನು ಜಾನ್ ಬ್ರೆಮನ್ ಅವರು ‘ವೃತ್ತಾಕಾರದ ವಲಸೆ’(circular migration) ಎಂದು ಗುರುತಿಸಿದರು. ವಲಸೆ ಹೋಗಿ ಅನೌಪಚಾರಿಕ ಕಾರ್ಮಿಕ ವಲಯದಲ್ಲಿ ದುಡಿಯುತ್ತಿರುವವರಿಗೆ ತಮ್ಮ ದುಡಿಮೆಯ ವಲಯ ಸ್ಥಗಿತಗೊಂಡಾಗ ‘ಮನೆ’ಗೆ ಹಿಂದಿರುಗುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ. ಏಕೆಂದರೆ ಯಾವುದೇ ಗಳಿಕೆ ಇಲ್ಲದೆ ನಗರದಲ್ಲಿ ಉಳಿಯುವುದು/ಬದುಕುವುದು ಅಸಾಧ್ಯ. ಆದರೆ ಹುಟ್ಟಿ ಬೆಳದ ಊರಿಗೆ ಹಿಂದಿರುಗುವುದು ಅವರ ಪ್ರಾಮಾಣಿಕವಾದ ಆಯ್ಕೆಯಾಗಿರಲಿಲ್ಲ. ಇದಕ್ಕೆ ಕಾರಣ ಗ್ರಾಮೀಣ ಆರ್ಥಿಕತೆಯಲ್ಲಿ ದುಡಿಯುವ ಅವಕಾಶಗಳ ಕೊರತೆ ಇರುವುದು. ತಳಮಟ್ಟದ ದುಡಿಯುವ ವರ್ಗಗಳ ದೃಷ್ಟಿಕೋನದಿಂದ ನೋಡುವುದಾದರೆ, ಈ ಸಂಯೋಜಕ ಬಿಕ್ಕಟ್ಟು ವಾಸ್ತವವಾಗಿ ರಚನಾತ್ಮಕವಾಗಿದೆ. ನಿಯಮಿತ ಮತ್ತು ಘನತೆಯಿಂದ ದುಡಿಯುವ ಉದ್ಯೋಗದ ಕೊರತೆ ಹೆಚ್ಚುತ್ತಿರುವುದು ಎದ್ದು ಕಾಣುತ್ತಿದೆ. ಅನೌಪಚಾರಿಕ ಆರ್ಥಿಕತೆಯ ಕೆಳಭಾಗದಲ್ಲಿರುವ ಬೃಹತ್ ಕಾರ್ಮಿಕರ ಪಡೆ ಶಾಶ್ವತವಾಗಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಇದು ಅಸಮಾನತೆಯ ತತ್ವ ಮತ್ತು ಅಭ್ಯಾಸಗಳು ಅತ್ಯಂತ ಗಟ್ಟಿಯಾಗಿದ್ದ ಹತ್ತೊಂಬತ್ತನೇ ಶತಮಾನದ ನಂಬಿಕೆಗಳಿಗೆ ಮರಳುವುದನ್ನು ಸೂಚಿಸುತ್ತದೆ ಎಂದು ಬ್ರೆಮನ್ ಹೇಳುತ್ತಾರೆ.
ವೃತ್ತಾಕಾರದ ವಲಸೆ ಎಷ್ಟು ಗಂಭೀರವಾಗಿದೆ ಎನ್ನುವುದು ಹೆಚ್ಚು ಬೆಳಕಿಗೆ ಬಂದಿದ್ದು ಕೋವಿಡ್-19 ಲಾಕ್‌ಡೌನ್ ಭಾರತದಲ್ಲಿ. ಈ ಕುರಿತು ನಡೆದಿರುವ ಅಧ್ಯಯನಗಳು ಎಪ್ರಿಲ್ 2020 ಒಂದು ತಿಂಗಳಲ್ಲಿ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕರ ಸಂಖ್ಯೆ 12 ಕೋಟಿಗೂ ಹೆಚ್ಚು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ಅಂದಾಜಿಸಿದೆ. ಕೋವಿಡ್-19 ಲಾಕ್‌ಡೌನ್ ‘ವೃತ್ತಾಕಾರದ ವಲಸೆ’ಯ ವಾಸ್ತವ ಮತ್ತು ಗಂಭೀರತೆಯನ್ನು ಗೋಚರಿಸುವಂತೆ ಮಾಡಿತು. ರೈಲ್ವೆ ಮಂಡಳಿಯ ಪ್ರಕಾರವೇ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಭಾರತದಲ್ಲಿ 8,733ಕ್ಕೂ ಹೆಚ್ಚು ಜನರು ರೈಲ್ವೆ ಹಳಿಯಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸ್ ಇಲಾಖೆ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಜನವರಿ 2020 ಮತ್ತು ಡಿಸೆಂಬರ್ 2020ರ ನಡುವೆ 5,195ಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ, 1,198ಕ್ಕೂ ಹೆಚ್ಚು ಜನರು ರಸ್ತೆ ಅಪಘಾತದಲ್ಲಿ ಅಥವಾ ರಸ್ತೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಈ ಸಂಖ್ಯೆ ಇನ್ನೂ ಹೆಚ್ಚು ಎಂದು ಕೆಲವು ಸಮಾಜ ವಿಜ್ಞಾನಿಗಳು ಹೇಳುತ್ತಿದ್ದಾರೆ.
2011-12 ಮತ್ತು 2017-18ರ ನಡುವೆ ಗ್ರಾಮೀಣ ಬಡತನವು ಸುಮಾರು ಶೇ.4ರಷ್ಟು ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಶೇ.49ರಷ್ಟು ಕುಟುಂಬಗಳು ಬಡತನದಲ್ಲಿವೆ. ಶೇ.51ರಷ್ಟು ಕುಟುಂಬಗಳು ಬದುಕಿಗೆ ಪ್ರತಿದಿನವೂ ಕೂಲಿ ಕೆಲಸವನ್ನು ಅವಲಂಬಿಸಿವೆ. ಗ್ರಾಮೀಣ ಪ್ರದೇಶದಲ್ಲಿ ಇರುವ ಶೇ.30 ಕುಟುಂಬಗಳು ಭೂಮಾಲಕತ್ವವನ್ನು ಹೊಂದಿಲ್ಲ. ಇಂತಹ ಆಘಾತಕಾರಿ ಮಾಹಿತಿಗಳನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಐಸಿಸಿ)ಯು ನಮ್ಮ ಮುಂದಿಟ್ಟಿದೆ. ಭಾರತದಲ್ಲಿ 2001 ಮತ್ತು 2011ರ ಅವಧಿಯಲ್ಲಿ ಸಾಗುವಳಿದಾರ ಸಂಖ್ಯೆ 127.3 ಮಿಲಿಯನ್‌ನಿಂದ 118.6 ಮಿಲಿಯನ್‌ಗೆ ಇಳಿದಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.59ರಷ್ಟು ಪುರುಷರು ಮತ್ತು ಶೇ.75ರಷ್ಟು ಮಹಿಳೆಯರು ಜೀವನೋಪಾಯಕ್ಕೆ ಕೃಷಿಯನ್ನು ನೇರವಾಗಿ ಅವಲಂಬಿಸಿದ್ದಾರೆ. ಕಳೆದ ಮೂರು ಜನಗಣತಿ ಅವಧಿಯಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ 74.6 ಮಿಲಿಯನ್(1991)ನಿಂದ 106.8 ಮಿಲಿಯನ್‌ಗೆ(2001) ಮತ್ತು 144 ಮಿಲಿಯನ್‌ಗೆ(2011) ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಶೇ.26ರಿಂದ ಶೇ.30ಕ್ಕೆ ಹೆಚ್ಚಳವಾಗಿದೆ. ಹಳ್ಳಿಗಳಲ್ಲಿ ಇರುವ ಶೇ.77ರಷ್ಟು ಕುಟುಂಬಗಳು ಪ್ರತಿದಿನ ದುಡಿಮೆಗಾಗಿ ಕನಿಷ್ಠ ಐದು ಕಿ.ಮೀ. ಪ್ರಯಾಣ ಮಾಡಲೇಬೇಕಾದ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರು ಬದುಕುತ್ತಿದ್ದಾರೆ. ಇದಕ್ಕೆ ನಾವು 2011ರ ಜನಗಣತಿಯನ್ನು ಆಧರಿಸಿದ್ದೇವೆ. ಒಂದು ಪಕ್ಷ 2021ರ ಜನಗಣತಿ ನಡೆದಿದ್ದರೆ ಈ ಪ್ರಮಾಣ ಯಾವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಅಥವಾ ಕಡಿಮೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತಿತ್ತು.
ನಮ್ಮ ಒಟ್ಟು ಕೃಷಿ ಭೂಮಿಯಲ್ಲಿ ಶೇ.17ರಷ್ಟು ಕೃಷಿಭೂಮಿಯನ್ನು ಶೇ.80ರಷ್ಟು ಕೃಷಿಕರು ಹೊಂದಿದ್ದಾರೆ. ಇದರ ಅರ್ಥವಿಷ್ಟೆ, ನಮ್ಮ ಅಭಿವೃದ್ಧಿ ಯೋಜನೆಗಳು ನಮ್ಮ ರೈತರನ್ನು ಸ್ವಲ್ಪ-ಹೆಚ್ಚು ಕಡಿಮೆ ಭೂ-ರಹಿತ ಕೃಷಿಕರನ್ನಾಗಿಸುತ್ತಿವೆ. ಇವರು ಅತಿ ಸಣ್ಣ ಪ್ರಮಾಣದಲ್ಲಿ ಭೂಮಿ ಹೊಂದಿಗಿರುವ ಕೃಷಿಕರಾಗಿದ್ದು ಯಾವುದೇ ಕೃಷಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆ 10ನೇ ಕೃಷಿ ಗಣತಿಯ ಮಾಹಿತಿ ಪ್ರಕಾರ ಶೇ.84 ರಷ್ಟು. 2010-11 ಮತ್ತು 2014-15ರ ನಡುವೆ ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿಯಲ್ಲಿ ಬಿತ್ತನೆ ಮಾಡುತ್ತಿರುವ ಕೃಷಿ ಕುಟುಂಬಗಳ ಸಂಖ್ಯೆ 90 ಲಕ್ಷ ಹೆಚ್ಚಾಗಿದೆ. ಆಹಾರ ಉತ್ಪಾದನೆಯಲ್ಲಿ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ರೈತರ ಪಾಲು ದೊಡ್ಡದು. ಆಹಾರ ಧಾನ್ಯಗಳ ಒಟ್ಟು ಉತ್ಪಾದನೆಯಲ್ಲಿ ಇವರ ಕೊಡುಗೆ ಶೇ.89.4ರಷ್ಟು ಇದ್ದದ್ದು 2010-11 ಮತ್ತು 2014-15ರ ನಡುವೆ ಶೇ.60ಕ್ಕೆ ಇಳಿದಿದೆ. ಇದನ್ನು ಆಹಾರ ಧಾನ್ಯವಾರು ವಿಂಗಡಿಸಿದ್ದರೆ, ಶೇ.49ರಷ್ಟು ಭತ್ತ, ಶೇ.40ರಷ್ಟು ಗೋಧಿ, ಶೇ.27ರಷ್ಟು ಏಕದಳ ಧಾನ್ಯಗಳು, ಶೇ.27 ರಷ್ಟು ದ್ವಿದಳ ಧಾನ್ಯಗಳು ಸೇರಿವೆ. ದೇಶದ ಅರ್ಧಕ್ಕಿಂತಲೂ ಹೆಚ್ಚು ತರಕಾರಿಗಳು ಮತ್ತು ಹಣ್ಣುಗಳ ಉತ್ಪಾದನೆಯಲ್ಲಿ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ರೈತರ ಕೊಡುಗೆ ಬಹಳ ದೊಡ್ಡದು (ಕೃಷಿ ಜನಗಣತಿ, 2014).
ಆದರೆ ಈ ಬೆಳೆಗಳಿಂದ ಬರುವ ಆದಾಯವು ಮನೆಯ ಮಾಸಿಕ ವೆಚ್ಚವನ್ನು ಪೂರೈಸಲು/ಭರಿಸಲು ಸಾಕಾಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸರಾಸರಿ ಮಾಸಿಕ ತಲಾ ಅನುಭೋಗ ವೆಚ್ಚ ರೂ.1,281.45ರಷ್ಟಿದೆ. ಹಳ್ಳಿಗಳಲ್ಲಿ ಇರುವ ಅರ್ಧದಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.1,030ಕ್ಕಿಂತಲೂ ಕಡಿಮೆ(ಮಧ್ಯಮ ಸ್ಥಿತಿ ಮೌಲ್ಯ) ಇದ್ದರೆ, ಸ್ವಲ್ಪಹೆಚ್ಚು ಕಡಿಮೆ ಶೇ.40ರಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.922ಕ್ಕಿಂತಲೂ ಕಡಿಮೆ. ಕೇವಲ ಶೇ.10ರಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.2,054ಕ್ಕಿಂತಲೂ ಸ್ವಲ್ಪಹೆಚ್ಚಾಗಿದೆ ಎಂದು ಎನ್‌ಎಸ್‌ಎಸ್‌ಒ ಸಮೀಕ್ಷೆಗಳು ತಿಳಿಸುತ್ತವೆ. ಇತ್ತೀಚೆಗೆ ನೀತಿ ಆಯೋಗವು ಮಾಸಿಕ ತಲಾ ಅನುಭೋಗ ವೆಚ್ಚವು ಸರಾಸರಿ ಶೇ.9.5ರಷ್ಟು ಪ್ರಮಾಣದಲ್ಲಿ ಹೆಚ್ಚಳ ಎಂದು ಅಂದಾಜಿಸಿದೆ.
(ಮುಂದುವರಿಯುವುದು)