ಹಳ್ಳಿ ಬದುಕಿನ ಸ್ಥಿತ್ಯಂತರಗಳು ಮತ್ತು ಬಿಕ್ಕಟ್ಟುಗಳು
ಭಾಗ- 3
ಕಳೆದ 20 ವರ್ಷಗಳಿಂದ ಭಾರತದಲ್ಲಿ ಸರಾಸರಿ ಪ್ರತಿದಿನ 2,035 ಪ್ರಮುಖ ಕೃಷಿ ಕುಟುಂಬಗಳು(Main cultivator) ವ್ಯವಸಾಯದಿಂದ ಮುಕ್ತಿ ಪಡೆಯುತ್ತಿವೆ/ಹೊರಹೋಗುತ್ತಿವೆೆ. ಆರ್ಥಿಕ ಸುಧಾರಣೆಯ ನಂತರದ ವರ್ಷಗಳಲ್ಲಿ ಕೃಷಿ ಕೂಲಿಯು 1980ರಲ್ಲಿ ಶೇ.5 ಪ್ರಮಾಣದಲ್ಲಿ ಹೆಚ್ಚಳ ಕಂಡಿದ್ದರೆ, 1990ರಲ್ಲಿ ಅದು ಶೇ.2ರಷ್ಟು ಬೆಳವಣಿಗೆ ಕಂಡುಕೊಂಡು, 2000ದ ಮೊದಲ ಅರ್ಧದಲ್ಲಿ ಶೂನ್ಯವಾಗಿದೆ. ಇದರ ಪರಿಣಾಮವಾಗಿ ಕೃಷಿ ಆಧಾರಿತ ಉದ್ಯೋಗಗಳಿಂದ ಕೃಷಿಯೇತರ ಉದ್ಯೋಗಗಳಿಗೆ ಗ್ರಾಮೀಣ ಜನರು ಬದಲಾಗುತ್ತಿದ್ದಾರೆ. ಎಂಜಿಎನ್‌ಆರ್‌ಇಜಿಎ, ಗ್ರಾಮೀಣ ಕೂಲಿಯ ಹೆಚ್ಚಳಕ್ಕೆ ಪೂರಕವಾಗಿದ್ದರೂ, ಹೊಸ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಅದರ ಪ್ರಭಾವವು ಹೆಚ್ಚು ಸೀಮಿತವಾಗಿದೆ. ಈ ಸಂದರ್ಭ ಕೇಂದ್ರ ಸರಕಾರವು ಉದ್ಯೋಗ ಖಾತರಿ ಯೋಜನೆಯ ಕೂಲಿಯನ್ನು ಕೋವಿಡ್-19 ಸಮಯದಲ್ಲಿ ರೂ.20ಗಳನ್ನು ಹೆಚ್ಚು ಮಾಡಿದೆ. ಆದರೆ ಈ ಯೋಜನೆಯ ಅನುಷ್ಠಾನವು ಬಹುತೇಕ ಪ್ರಕರಣದಲ್ಲಿ ಪ್ರಜಾಸತ್ತಾತ್ಮಕ ಮತ್ತು ಪಾರದರ್ಶಕ ಮೌಲ್ಯವನ್ನು ಒಳಗೊಂಡಿಲ್ಲ. ಸಾಂಕ್ರಾಮಿಕ ಅವಧಿಯಲ್ಲಿ (ಮಾರ್ಚ್ 2020ರಿಂದ ನವೆಂಬರ್ 30, 2021ರವರೆಗೆ) ಭಾರತದಲ್ಲಿ, ಬಿಲಿಯನೇರ್‌ಗಳ ಸಂಪತ್ತು ಭಾರತದ ರೂ. ಮೌಲ್ಯದಲ್ಲಿ ರೂ.23.14 ಲಕ್ಷ ಕೋಟಿಯಿಂದ (USD 313 ಶತಕೋಟಿ) ಭಾರತದ ರೂ. ಮೌಲ್ಯದಲ್ಲಿ ರೂ.53.16 ಲಕ್ಷ ಕೋಟಿಗೆ (USD 719 ಶತಕೋಟಿ) ಹೆಚ್ಚಾಗಿದೆ. ಇದೇ ಸಮಯದಲ್ಲಿ ಅಂದರೆ 2020ರಲ್ಲಿ 4.6 ಕೋಟಿಗೂ ಹೆಚ್ಚು ಭಾರತೀಯರು ತೀವ್ರ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ಪ್ರಮಾಣವು ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಜಾಗತಿಕ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು ಭಾರತದಲ್ಲಿನ ಸಂಪೂರ್ಣ ಸಂಪತ್ತಿನ ಅಸಮಾನತೆಯು ಬಡವರು ಮತ್ತು ಅಂಚಿನಲ್ಲಿರುವವರ ವಿರುದ್ಧವಾಗಿ, ಅತಿ ಶ್ರೀಮಂತರ ಅಥವಾ ಸೂಪರ್ ರಿಚ್((Super-rich) ಪರವಾಗಿ ಸಜ್ಜುಗೊಂಡಿರುವ ಆರ್ಥಿಕ ನೀತಿಗಳ ರೂಪುರೇಷಗಳ ಪರಿಣಾಮವಾಗಿದೆ. ಅಂದರೆ ದೇಶದ ಆರ್ಥಿಕ ಬೆಳವಣಿಗೆಯ ರೀತಿಯಾಗಲಿ, ದೇಶದ ಅತಿ ಶ್ರೀಮಂತರ ಸಂಪತ್ತಿನಲ್ಲಿ ಉಂಟಾದ ಹೆಚ್ಚಳದಂತೆ ಬಡವರ, ದುಡಿಯುವ ಜನರ ಆದಾಯದಲ್ಲಿ ಮಹತ್ವದ ಹೆಚ್ಚಳ ಉಂಟಾಗಿಲ್ಲ. ಇಂತಹ ಅಭಿವೃದ್ಧಿ ಬಿಕ್ಕಟ್ಟುಗಳನ್ನು ಮಾರ್ಕ್ಸಿಸ್ಟ್ ಭೂಗೋಳಶಾಸ್ತ್ರಜ್ಞ ಡೆವಿಡ್ ಹಾರ್ವೆ ‘ಅಕ್ಯೂಮ್ಯುಲೇಷನ್ ಬೈ ಡಿಸ್ಪೋಸೆಷನ್’ ಎಂದು ಕರೆಯುತ್ತಾರೆ.
ಆದರೆ, ಆಹಾರ, ಆರೋಗ್ಯ, ಶಿಕ್ಷಣದ ಮೇಲೆ ಜನರು ತಮ್ಮ ಜೇಬಿನಿಂದ ಮಾಡುತ್ತಿರುವ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ತಮ್ಮ ಮಕ್ಕಳ ಶಿಕ್ಷಣದ ಮೇಲೆ ಜನರು ತಮ್ಮ ಜೇಬಿನಿಂದ ಮಾಡುವ ವೆಚ್ಚದ ಪ್ರಮಾಣ ಶೇ.176ರಷ್ಟು ಹೆಚ್ಚಳವಾಗಿರುವುದು ಶಿಕ್ಷಣ ಮೂಲಭೂತ ಹಕ್ಕಲ್ಲ ಎನ್ನುವುದನ್ನು ತಿಳಿಸುತ್ತಿದೆ. ಪಡಿತರ ವ್ಯವಸ್ಥೆಯ ಮೂಲಕ ಆಹಾರವನ್ನು ಎಲ್ಲಾ ಜನರಿಗೂ ತಲುಪಿಸುತ್ತಿದ್ದೇವೆ ಎಂದು ಪುಟಗಟ್ಟಲೆ, ದಿನವಿಡೀ ನಮ್ಮ ನಾಯಕರು ಮಾತಾಡುತ್ತಿದ್ದಾರೆ(ಎಲ್ಲಾ ಪಕ್ಷಗಳಿಗೆ ಸೇರಿದ). ಆದರೆ ಬಡತನ, ಹಸಿವು ಮತ್ತು ಅಪೌಷ್ಟಿಕತೆಯು ನಿರಂತರವಾಗಿ ಹೆಚ್ಚಾಗುತ್ತಿವೆ. ಆದರೂ ಅಭಿವೃದ್ಧಿಯ ಅಬ್ಬರದ ಪ್ರಚಾರಗಳು ಮಾತ್ರ ನಿಂತಿಲ್ಲ.
ಉದ್ಯೋಗ ಅವಕಾಶದ ಸೃಷ್ಟಿಯಲ್ಲಿ ನೆಲಕಚ್ಚಿರುವ ನಮ್ಮ ಅಭಿವೃದ್ಧಿ ಮಾದರಿಯೂ; ಕೃಷಿಯಿಂದ ವಿಮುಕ್ತಿ ಪಡೆದವರು ಜೀವನ ನಿರ್ವಹಣೆಗೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಅತ್ಯಂತ ಕನಿಷ್ಠ ವೇತನಕ್ಕೆ, ಹೆಚ್ಚು ಸಮಯ ಮತ್ತು ಶ್ರಮ ಆಧಾರಿತ ದುಡಿಮೆಯನ್ನು ಅಸಂಘಟಿತ ವಲಯದಲ್ಲಿ ಮಾಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಡ್ರೈವರ್, ಹೋಟೆಲ್, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕೆಲಸ, ವಾಚ್‌ಮನ್, ಮಾರುಕಟ್ಟೆಗಳಲ್ಲಿ ಕೂಲಿ, ಕಟ್ಟಡ ಕೆಲಸ, ಇಟ್ಟಿಗೆ ಭಟ್ಟಿಗಳಲ್ಲಿ ದುಡಿಮೆ, ಗಾರ್ಮೆಂಟ್ಸ್ ಕೆಲಸ, ಕಬ್ಬು ಕಟಾವು, ರಸ್ತೆ ನಿರ್ಮಾಣ, ಇಟ್ಟಿಗೆ ಗೂಡುಗಳು, ಕಲ್ಲಿನ ಕ್ವಾರಿಗಳು, ರೈಲ್ವೆ ಗ್ಯಾಂಗ್‌ಮನ್ ಕೆಲಸ, ಬಂದರುಗಳಲ್ಲಿ ಹಮಾಲಿ ಕೆಲಸ, ಯಾಂತ್ರೀಕೃತ ಮೀನುಗಾರಿಕೆಯಲ್ಲಿ ಶ್ರಮ ಆಧಾರಿತ ದುಡಿಮೆ, ಮನೆಗೆಲಸ ಇನ್ನೂ ಮುಂತಾದ ದುಡಿಮೆಗೆ ಹತ್ತಿರದ ಪಟ್ಟಣ, ದೂರದ ನಗರಗಳನ್ನು ಅವಲಂಬಿಸುವಂತಾಗಿದೆ. ಇಂತಹ ದುಡಿಮೆಯನ್ನು ಅವಲಂಬಿಸಿರುವ ಬಹುತೇಕರು ಸಣ್ಣ ಮತ್ತು ಅತಿ ಸಣ್ಣ ಭೂಹಿಡುವಳಿ ಕುಟುಂಬಗಳಿಗೆ, ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿ-ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು.
ಇವರು ಹಳ್ಳಿಯಿಂದ ದುಡಿಮೆಯ ಬೇಟೆಯ ಮೇಲೆ ಊರಿಂದ ಊರಿಗೆ ಅಲೆಯುತ್ತಿದ್ದಾರೆ. ದುಡಿಯುವ ಸ್ಥಳದಲ್ಲಿ ಇವರಿಗೆ ಯಾವುದೇ ಕಾರ್ಮಿಕ ಕಾನೂನುಗಳಾಗಲಿ, ಕನಿಷ್ಠ ವೇತನವಾಗಲಿ, ಸಾಮಾಜಿಕ ಭದ್ರತೆಗಳು ಇರುವುದಿಲ್ಲ. ಗ್ರಾಮ ಸಮಾಜದ ಬಡವರು ಬದುಕಿಗೆ ಅತ್ಯಂತ ಅಪಾಯಕಾರಿ ಪರಿಸರದಲ್ಲಿ ದುಡಿಯಲೇಬೇಕಾದ ವಿಷವರ್ತುಲಕ್ಕೆ ತಳ್ಳಲ್ಪಡುತ್ತಿದ್ದಾರೆ. ಆಗಾಗ ಹಿಂದುಳಿದ ಪ್ರದೇಶಗಳಿಂದ ಹಿಂದುಳಿದ ಸಮುದಾಯಗಳ ಅದರಲ್ಲಿಯೂ ಅಭಿವೃದ್ಧಿಯಲ್ಲಿ ಹೆಚ್ಚು ದುಸ್ಥಿತಿಯಲ್ಲಿ ಇರುವ ಕುಟುಂಬಗಳ ಬಡ ಹೆಣ್ಣು ಮಕ್ಕಳು ದುಡಿಮೆಯನ್ನು ಅರಸಿ ನಗರ ಪ್ರದೇಶಗಳಿಗೆ ಪ್ರತಿದಿನ ಬಂದುಹೋಗುತ್ತಿದ್ದಾರೆ. ಇವರಿಗೆ ದೊರಕುವ ವೇತನ ಮತ್ತು ದುಡಿಮೆಯ ಪರಿಸ್ಥಿತಿಗಳು ಅತ್ಯಂತ ಕಳಪೆಯಾಗಿರುತ್ತವೆ. ಇವರ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳಿಗೆ ಲೆಕ್ಕವಿಲ್ಲ. ‘ಉದ್ಯೋಗವಿಲ್ಲದ-ಬೆಳವಣಿಗೆ’ಯು ಬಡವರು ತಮ್ಮ ದುಡಿಮೆಯನ್ನು/ಶ್ರಮವನ್ನು ಯಾವುದೇ ರೀತಿಯ ಚೌಕಾಶಿ ಮಾಡದೆ ಮುಕ್ತವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಲೇ ಬೇಕಾದ ನವ-ಬಂಧನವನ್ನು ನಾವು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಮತ್ತು ಅದರ ಕಾರ್ಯತಂತ್ರಗಳು ಸೃಷ್ಟಿಸಿವೆ.
ಈ ಪರಿಸ್ಥಿತಿಯು ಉದ್ಯೋಗ ನೀಡುವವರು ಮತ್ತು ದುಡಿಯುವವರ ನಡುವಿನ ಸಂಬಂಧವು ಹೆಚ್ಚು ಅನಿಶ್ಚಿತ, ಅಲ್ಪಾವಧಿ, ಕಡಿಮೆಗಳಿಕೆಯ ಒಪ್ಪಂದಗಳ ಪರಿಸ್ಥಿತಿಯ ವಿಷವರ್ತುಲವನ್ನು ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವಾಗಲೂ ಬಂಡವಾಳಸ್ಥರು ಹಾಗೂ ದುಡಿಸಿಕೊಳ್ಳುವವರ ಸಂಪತ್ತು ಮತ್ತು ಆಸ್ತಿ ನಿರಂತರವಾಗಿ ಹೆಚ್ಚುತ್ತಲಿರುತ್ತದೆ. ಪರಿಣಾಮವಾಗಿ ಭೂರಹಿತ ಬಡವರು ಮತ್ತು ದುಡಿಯುವ ಜನರು ನಿಂತ ನೆಲವೇ ಕುಸಿಯುತ್ತವೆ.
ಈ ಎಲ್ಲಾ ವಿದ್ಯಮಾನಗಳು ಕೃಷಿ ಸಮಾಜದ ಬಡವರು ಜೀವನೋಪಾಯಕ್ಕೆ ಕೃಷಿಯೇತರ ಉದ್ಯೋಗಕ್ಕೆ ರೂಪಾಂತರವಾಗುತ್ತಿರುವುದನ್ನು ತಿಳಿಸುತ್ತವೆ. ಇದಕ್ಕೆ ನಾವು ಕಳೆದ 30 ವರ್ಷಗಳಿಂದ ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಮತ್ತು ಅದರ ಕಾರ್ಯ ತಂತ್ರಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಜಾಗತಿಕ ಮಾರುಕಟ್ಟೆ ನೀತಿಗಳಿಗೆ ಪರ್ಯಾಯವಾಗಿ ಸ್ಥಳೀಯ ಅಭಿವೃದ್ಧಿ ಮಾದರಿಗಳನ್ನು ರೂಪಿಸಲು ಸಾಧ್ಯವಾಗದಿರುವುದು ಕಾರಣವಾಗಿವೆ. ಅಂದರೆ ವಸಾಹತುಶಾಹಿ ಪೂರ್ವ ಮತ್ತು ವಸಾಹತುಶಾಹಿ ನಂತರದ(ಸ್ವಾತಂತ್ರ್ಯಾನಂತರ) ಅವಧಿಯಲ್ಲಿ ಗ್ರಾಮೀಣ ಕೃಷಿ ಸಮಾಜದಲ್ಲಿ ಇದ್ದ ಗುಲಾಮಗಿರಿಯ ಅಭ್ಯಾಸಗಳು ದೊಡ್ಡ ಮಟ್ಟದ ಬದಲಾವಣೆಗೆ ಒಳಗಾಗಿಲ್ಲ. ಭೂರಹಿತ ಕಾರ್ಮಿಕರು ನಾಮಮಾತ್ರಕ್ಕೆ ಮಾತ್ರ ಜೀತದಿಂದ ಮುಕ್ತರಾಗಿದ್ದಾರೆ. ಹೊಸ ರೂಪದ ಅಭಿವೃದ್ಧಿ ಕಾರ್ಯತಂತ್ರಗಳು ದುಡಿಯುವ ಜನರನ್ನು ‘ನವ-ಬಂಧನ’ಕ್ಕೆ ತಳ್ಳುತ್ತಿದೆ. ಹೇಗೆ ದುಡಿಯುವ ಜನರು ಶೋಷಣೆಗೆ, ಅಸುರಕ್ಷಿತ ಕೆಲಸದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಜಯಂತಿ ಘೋಷ್, ವಾಸವಿ, ಬ್ರೆಮನ್, ಹರ್ಷಮಂದರ್, ಅಭಿಜಿತ್ ಬ್ಯಾನರ್ಜಿ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ವರದಿಗಳು, ಜನಸಂಘಟನೆಗಳ ವರದಿಗಳು ಹಾಗೂ ಕನ್ನಡ ವಿಶ್ವವಿದ್ಯಾನಿಲಯ ನಡೆಸಿದ ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಒಟ್ಟಾರೆ ಭೂಸುಧಾರಣೆಗಳು ಸೇರಿದಂತೆ ‘ಅಭಿವೃದ್ಧಿ’ಯ ಜೊತೆ ಉಲ್ಲೇಖಿಸಲಾಗುವ ಮತ್ತು ಹೆಚ್ಚು ಬಳಸಲಾಗುವ ಪರಿಕಲ್ಪನೆಗಳು ಭೂರಹಿತ ಬಡವರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಮ್ನವರ್ಗಕ್ಕೆ ಸೇರಿದವರು, ಅದರಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರನ್ನು ಜೀವನೋಪಾಯಕ್ಕೆ ಯಾವುದೇ ಕೆಲಸವನ್ನು ಮಾಡುವಂತೆ ಒತ್ತಾಯಿಸುತ್ತಿದೆ. ಇದನ್ನು ಅನೌಪಚಾರಿಕ ವಲಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿ ದುಡಿಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿರುವುದು ಎತ್ತಿತೋರಿಸುತ್ತದೆ.