ನಿಜ ವಚನ ದರ್ಶನ
‘‘ಬಸವಣ್ಣ ಸಾಂಸ್ಕೃತಿಕ ನಾಯಕ’’ ಎಂದು ಕರ್ನಾಟಕ ಸರಕಾರ ಘೋಷಿಸಿದ ನಂತರ ಅಯೋಧ್ಯಾ ಪ್ರಕಾಶನದ ‘ವಚನ ದರ್ಶನ’ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದೆ. ಇದರ ಮೂಲ ಉದ್ದೇಶ ಶರಣರನ್ನು ಹೊಗಳುತ್ತಲೇ, ಅವರ ಪರ್ಯಾಯ ಸಮಾಜ ಚಳವಳಿಯ ಮಹತ್ವವನ್ನು ಗೌಣ ಮಾಡುವುದಾಗಿದೆ.
ಈ ಪುಸ್ತಕದಲ್ಲಿ 20 ಲೇಖನಗಳಿವೆ. ಎಲ್ಲ ಲೇಖಕರು ಈ ಗೌಣ ಉದ್ದೇಶದಿಂದಲೇ ದಿಶಾಭೂಲ್ ಲೇಖನಗಳನ್ನು ಬರೆದಿದ್ದಾರೆ ಎಂಬುದು ಮೇಲ್ನೋಟಕ್ಕೇ ಅರಿವಾಗುತ್ತದೆ.
ವಚನಗಳಲ್ಲಿ ಇರುವುದೆಲ್ಲ ಜ್ಞಾನಕಾಂಡದಲ್ಲಿ, ಅಂದರೆ ವೇದಾಂತದಲ್ಲಿ, ಅಂದರೆ ಉಪನಿಷತ್ತಿನಲ್ಲಿ, ಅಂದರೆ ಅದ್ವೈತದಲ್ಲಿ, ಅಂದರೆ ವೈದಿಕ ಸಂಸ್ಕೃತಿಯಲ್ಲಿ ಇದೆ ಎಂಬುದು ಈ ಪುಸ್ತಕದ ಪ್ರಕಟಣೆಯ ಮೂಲ ಉದ್ದೇಶವಾಗಿದೆ. ಈ ಪುಸ್ತಕದ ಮುಖಪುಟ ಕೂಡ ಅದನ್ನೇ ಸೂಚಿಸುತ್ತದೆ.
ಅಲ್ಲದೆ ಪುಸ್ತಕದಲ್ಲಿ ಸಾಧ್ಯವಾದ ಕಡೆಗಳಲ್ಲೆಲ್ಲ ‘ಭಾರತೀಯ ಸಮಾಜದ ಅನಿಷ್ಟಗಳನ್ನು ತೊಡೆದು ಮಾನವ ಸಮುದಾಯಗಳ ಸುಖವನ್ನು ಸಾಧಿಸುವ ಹೋರಾಟವನ್ನು ಶರಣರು ಮಾಡಿದ್ದರು ಎಂಬುದು ಆಧುನಿಕ ವಚನ ಚಿಂತಕರ ಪ್ರತಿಪಾದನೆಯಾಗಿದೆ’ ಎಂದು ಅನೇಕ ಲೇಖಕರು ಬೇಸರ ವ್ಯಕ್ತಪಡಿಸಿದ್ದಾರೆ.
ಆಧುನಿಕ ವಚನಕಾರರು ಮನುಕುಲದ ಒಳಿತಿನ ಕಲ್ಪನೆಗೆ ಪಾಶ್ಚಾತ್ಯ ಚಿಂತನಾ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
‘‘ಬಹಳ ಮಹತ್ವದ ಸಂಗತಿ ಎಂದರೆ ವಚನಗಳು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಅಲ್ಲಿನ ದಾರ್ಶನಿಕ ಮತ್ತು ಸಾಮಾಜಿಕ ಅಂಶಗಳು ಅದರ ಭಾಗಗಳೇ ಆಗಿವೆ. ಭಾರತೀಯ ಅಧ್ಯಾತ್ಮ ವಿದ್ಯೆಯ ಅಧಿಕೃತ ದಾಖಲೆಗಳಾಗಿವೆ. ... .. ಭಾರತವನ್ನು ಆಕ್ರಮಿಸಿದ ಅನ್ಯ ಸಂಸ್ಕೃತಿಯ ಆಳರಸರು ನಮ್ಮ ಭವ್ಯ ಸಂಸ್ಕೃತಿಯನ್ನೇ ಹಾಳು ಮಾಡಲು ನಿರಂತರ ಪ್ರಯತ್ನ ನಡೆಸಿದರು. ಅದು ಇವತ್ತಿಗೂ ಕೆಲ ಎಡಪಂಥೀಯ ವಿಚಾರವಾದಿಗಳಿಂದ ನಡೆಯುತ್ತಿದೆ’’ ಎಂದು ವೀರಶೈವ ವಿದ್ವಾಂಸರಾದ ಡಾ. ಸಂಗಮೇಶ ಸವದತ್ತಿಮಠ ಅವರು ಈ ಪುಸ್ತಕದಲ್ಲಿನ ತಮ್ಮ ‘ಶಿವಶರಣರ ವಚನ ದರ್ಶನ’ ಲೇಖನದಲ್ಲಿ ನೋವು ವ್ಯಕ್ತಪಡಿಸಿದ್ದಾರೆ.
ಇದು ಒಂದಿಲ್ಲೊಂದು ರೀತಿಯಲ್ಲಿ ಈ ಪುಸ್ತಕದಲ್ಲಿನ ಎಲ್ಲ ಲೇಖಕರ ಅಳಲು ಆಗಿದೆ. ಭಾರತದಲ್ಲಿ ನಿರೀಶ್ವರವಾದಿ ಲೋಕಾಯತರು, ತೀರ್ಥಂಕರರನ್ನೇ ದೇವಸ್ವರೂಪದಲ್ಲಿ ನೋಡುವ ಜೈನರು, ಅಜ್ಞೇಯವಾದಿ ಬೌದ್ಧರು, ನಿರಾಕಾರ ಶಿವನನ್ನು ನಂಬುವ ಏಕದೇವೋಪಾಸನೆಯ ಲಿಂಗಾಯತರು, ನಿರಾಕಾರ ದೇವನನ್ನು ನಂಬುವ ಸಿಖ್ಖರು ಭಾರತದಲ್ಲೇ ಜನ್ಮತಾಳಿದ ಚಿಂತನೆ ಮತ್ತು ಧರ್ಮಗಳನ್ನು ಪಾಲಿಸುವವರಾಗಿದ್ದು ಇವರೆಲ್ಲ ವೈದಿಕ ಚಿಂತನಾ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ. ಅಂದಮೇಲೆ ಭಾರತೀಯ ಸಂಸ್ಕೃತಿ ಎಂಬುದು ಬಹುತ್ವ ಸಂಸ್ಕೃತಿಯಾಗಿದೆ ಎಂಬುದರ ಕುರಿತು ಯಾವೊಬ್ಬ ಲೇಖಕನೂ ತಿಳಿಸಿಲ್ಲ.
‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ಆಗಮದ ಮೂಗ ಕೊಯಿವೆ’’ ಎಂದು ಹೇಳಿದ ಬಸವಣ್ಣನವರು ಹೊರಗಿನ ಸಂಸ್ಕೃತಿಯವರೆ?
ಶರಣರು, ವರ್ಣಾಶ್ರಮ ವ್ಯವಸ್ಥೆಯಿಂದ ಕೂಡಿದ ವೈದಿಕರ ಚಿಂತನಾ ಕ್ರಮವನ್ನು ವಿರೋಧಿಸಿದ್ದಾರೆ. ‘‘ವಿಪ್ರರು ಕೀಳು ನೋಡಾ ಜಗವೆಲ್ಲ ಅರಿಯಲು’’ ಎಂದು ಸಾರಿದ್ದಾರೆ. ಆ ಮೂಲಕ ಭರತಖಂಡದ ಶೇ. 90ರಷ್ಟಿರುವ ತುಳಿತಕ್ಕೊಳಗಾದ ಶೂದ್ರರನ್ನು ಎತ್ತಿ ಹಿಡಿದಿದ್ದಾರೆ.
ಶರಣರು ಉಪನಿಷತ್ತು ಮುಂತಾದ ಅದ್ವೈತ ಚಿಂತನೆಯನ್ನು ವಾಗದ್ವೈತ (ಮಾತಿನ ಮಂಟಪ) ಎಂದು ಕರೆದಿದ್ದಾರೆ.
ಲಿಂಗಾಯತವು ಪರಿಪೂರ್ಣವಾದ ಸ್ವತಂತ್ರ ಧರ್ಮವಾಗಿದೆ. ಅನುಭಾವ ಲಿಂಗಾಯತರ ದರ್ಶನ. ಇಷ್ಟಲಿಂಗ ಅವರ ಪೂಜಾ ಸಾಧನ. ವಚನಗಳು ಅವರ ಧರ್ಮಗ್ರಂಥ. ಬಸವಣ್ಣ ಧರ್ಮಗುರು. ಅವರದು ಸೈದ್ಧಾಂತಿಕವಾಗಿ ಲಿಂಗಭೇದ, ಜಾತಿಭೇದ, ವರ್ಣಭೇದ ಮತ್ತು ವರ್ಗಭೇದಗಳಿಲ್ಲದ ಸಮಾಜ.
‘‘ಕುಲವನರಸುವರೆ ಶರಣರಲ್ಲಿ ಜಾತಿ ಸಂಕರವಾದ ಬಳಿಕ’’ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಸಮಗಾರ ಮೂಲದ ಲಿಂಗವಂತ ಹರಳಯ್ಯನವರ ಮಗನ ಜೊತೆ ಬ್ರಾಹ್ಮಣ ಮೂಲದ ಲಿಂಗವಂತ ಮಧುವರಸರ ಮಗಳ ಮದುವೆಯನ್ನು ಬಸವಾದಿ ಶರಣರು ಮಾಡಿಸಿದ್ದಕ್ಕಾಗಿ ಪಟ್ಟಭದ್ರರು ಕಲ್ಯಾಣದಲ್ಲಿ ಶರಣ ಜನಾಂಗದ ಹತ್ಯೆ ಮಾಡಿದರು. ಅವರ ವಚನಕಟ್ಟುಗಳಿಗೆ ಮತ್ತು ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದರು. ಲಕ್ಷದ ಮೇಲೆ ತೊಂಭತ್ತಾರು ಶರಣರು ಸಾವುನೋವಿಗೆ ಈಡಾಗಿ ಚೆಲ್ಲಾಪಿಲ್ಲಿಯಾದರು. ವಚನಗಳು ಉಪನಿಷತ್ತುಗಳ ಹಾಗೆ ವಾಗದ್ವೈತವಾಗಿದ್ದರೆ ಈ ಅನಾಹುತ ನಡೆಯುತ್ತಿತ್ತೆ? ಈ ಸತ್ಯದ ಮೂಲಕ ವರ್ತಮಾನದ ಸಮಾಜವನ್ನು ಅರ್ಥೈಸಿಕೊಳ್ಳಲು ಪಾಶ್ಚಾತ್ಯ ವಿದ್ವಾಂಸರ ದೃಷ್ಟಿಕೋನವೇ ಬೇಕೆ?
ಶರಣರು ಮನುವಾದಿ ಸಮಾಜಕ್ಕೆ ಪರ್ಯಾಯವಾಗಿ ಹೊಸ ಸರ್ವಸಮತ್ವದ ಸಮಾಜ ನಿರ್ಮಾಣಕ್ಕೆ ಯತ್ನಿಸಿದ್ದಕ್ಕಾಗಿಯೇ ಅವರ ಚಳವಳಿಯನ್ನು ದಮನಗೊಳಿಸಲಾಯಿತು. ಅವರ ಚಿಂತನಾ ಕ್ರಮ ಪಾಶ್ಚಾತ್ಯರ ಚಿಂತನಾ ಕ್ರಮಕ್ಕಿಂತ ಬಹುಪಾಲು ಮುಂದಿತ್ತು ಎಂಬುದನ್ನು ಈ ಪುಸ್ತಕದ ಲೇಖಕರಿಗೆ ಅರ್ಥ ಆಗಲೇ ಇಲ್ಲ ಎಂಬುದು ಅವರ ಲೇಖನಗಳ ಮೂಲಕ ಅರ್ಥವಾಗುತ್ತದೆ.
‘‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ?
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ.
ಇನ್ನು ಜಂಗಮವೆ ಲಿಂಗವೆಂದು ನಂಬಿದೆ
ಕೂಡಲಸಂಗಮದೇವಾ’’ ಎಂದು ಬಸವಣ್ಣನವರು ಹೇಳುವ ಮೂಲಕ ಸಮಾಜವೇ (ಜಂಗಮವೇ) ದೇವರು ಎಂದು ಸೂಚಿಸಿದ್ದಾರೆ. ‘‘ಲಿಂಗಸಂಬಂಧಿಯಾದಡೆ ಜಂಗಮ ಪ್ರೇಮಿ ನೀನಾಗು’’ ಎಂದು ತಿಳಿಸಿದ್ದಾರೆ. ‘‘ಶಿವಭಕ್ತರೆ ಅಧಿಕ ನೋಡಯ್ಯಾ. ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ. ಈ ದ್ವಿವಿಧವನು ಒಂದೇ ಎಂದು ನಂಬಿದೆ’’ ಎಂದು ಹೇಳುವ ಮೂಲಕ ಅವರ ಧರ್ಮ ಇಡೀ ಮಾನವಕುಲಕ್ಕೆ ಸಂಬಂಧಿಸಿದುದು ಎಂದು ಸಾರಿದ್ದಾರೆ.
‘‘ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ’’ ಎಂದು ಇಡೀ ಕರ್ಮಸಿದ್ಧಾಂತವನ್ನು ಅಲ್ಲಗಳೆದಿದ್ದಾರೆ. ಆ ಮೂಲಕ ಪುನರ್ಜನ್ಮ, ಮೋಕ್ಷ, ಪುಣ್ಯ, ಪಾಪ, ಸ್ವರ್ಗ, ನರಕ ಮುಂತಾದವುಗಳನ್ನು ತಿರಸ್ಕರಿಸಿದ್ದಾರೆ. ‘‘ದಯೆಯೆ ಧರ್ಮದ ಮೂಲ’’ ಎಂದು ಸಾರಿದ್ದಾರೆ.
ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ ಎಂದು ಹೇಳುವ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.
‘‘ಭಕ್ತಿ ಇಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ.
ಚೆನ್ನಯ್ಯನ ಮನೆಯಲ್ಲೂ ಬೇಡಿದೆ.
ದಾಸಯ್ಯನ ಮನೆಯಲ್ಲೂ ಬೇಡಿದೆ.
ಎಲ್ಲ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ’’ ಎಂದು ಹೇಳುತ್ತ ಜನಸಮುದಾಯದ ಅನುಭವಗಳ ಮೂಲಕ ಅನುಭಾವ ದರ್ಶನ ಪಡೆಯಲು ಸಾಧ್ಯವಾಯಿತು ಎಂದು ಸೂಚಿಸಿದ್ದಾರೆ.
‘‘ವೇದಶಾಸ್ತ್ರ ಆಗಮಗಳನೋದಿದವರು ಹಿರಿಯರೆ?
ಕವಿ, ಗಮಕಿ, ವಾದಿ ವಾಗ್ಮಿಗಳು ಹಿರಿಯರಿಗೆ?
ನಟಿನಿ ಬಾಣ ವಿಲಾಸಿ ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?’’ ಎಂದು ಜನಸಾಮಾನ್ಯರ ಪ್ರತಿಭೆಯನ್ನು ಎತ್ತಿ ಹಿಡಿದಿದ್ದಾರೆ.
‘‘ಭೇರುಂಡ ಪಕ್ಷಿಗೆ ದೇಹ ಒಂದೆ
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲೆರೆದು
ಒಂದು ತಲೆಯಲಿ ವಿಷವನೆರೆದಡೆ
ದೇಹವೊಂದೇ ವಿಷ ಬಿಡುವುದೆ ಅಯ್ಯಾ.
ಲಿಂಗದಲ್ಲಿ ಪೂಜೆಯ ಮಾಡಿ
ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾ ಬೆಂದೆ ಕಾಣಾ ಕೂಡಲಸಂಗಮದೇವಾ’’ ಎಂಬ ವಚನದಲ್ಲಿ ಧರ್ಮ ಮತ್ತು ಸಮಾಜವನ್ನು ಸಮಾನವಾಗಿ ಕಂಡಿದ್ದಾರೆ.
‘‘ಅದ್ವೈತಿಗಳೆಲ್ಲ ಲಿಂಗಾರಾಧನೆ ಹುಸಿಯೆಂದು ಬುದ್ಧಿ ತಪ್ಪಿ ಕ್ರಮಗೆಟ್ಟು ಹೋದರು. ಹಮ್ಮಿಲ್ಲದ ಕಾರಣ ಕೂಡಲಸಂಗನ ಶರಣರು ಜಂಗಮವಂದ್ಯರಾದರು’’ ಎಂದು ಬಸವಣ್ಣನವರು ತಿಳಿಸಿದ್ದಾರೆ.
‘‘ವಾಗದ್ವೈತಿಗಳ ಅದ್ವೈತ ಸ್ವಯವ ಮುಟ್ಟಬಲ್ಲುದೆ?’’ ಎಂದು ಅಲ್ಲಮಪ್ರಭುಗಳು ಪ್ರಶ್ನಿಸಿದ್ದಾರೆ. ಮಾತಿನ ಮಲ್ಲರಿಂದ ಲಿಂಗಾಂಗಸಾಮರಸ್ಯದ ನೈಜ ಅದ್ವೈತ ಸಾಧ್ಯವಿಲ್ಲವೆಂದಿದ್ದಾರೆ. ‘‘ಅದ್ವೈತವ ನುಡಿದು ನಾನು ಅಹಂಕಾರಿಯಾದೆನಯ್ಯಾ.... ಗುಹೇಶ್ವರಾ ನಿಮ್ಮ ಶರಣ ಸಂಗನಬಸವಣ್ಣನ ಪ್ರಸಾದವ ಕೊಂಡು ಬದುಕಿದೆನಯ್ಯಾ’’ ಎಂದು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
‘‘ಹಸಿವು ತೃಷೆ ನಿದ್ರೆ ಆಲಸ್ಯವುಳ್ಳನ್ನಕ್ಕರ ಅದ್ವೈತ ಉಂಟೆ? ಜಗದೊಳಗೆ’’ ಎಂದು ಚೆನ್ನಬಸವಣ್ಣನವರು ಹೇಳಿದ್ದಾರೆ.
‘‘ನಾಲ್ಕು ವೇದ ಹದಿನಾರು ಶಾಸ್ತ್ರ ಹದಿನೆಂಟು ಪುರಾಣ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪನರಿಯದೆ ನಿಂತವು’’ ಎಂದು ಆದಯ್ಯನವರು ತಿಳಿಸಿದ್ದಾರೆ.
‘‘ವೇದಗಳ ಹಿಂದೆ ಹರಿಯದಿರು
ಶಾಸ್ತ್ರಂಗಳ ಹಿಂದೆ ಸುಳಿಯದಿರು, ಸುಳಿಯದಿರು.
ಪುರಾಣಗಳ ಹಿಂದೆ ಬಳಲದಿರು ಬಳಲದಿರು.
ಆಗಮಗಳ ಹಿಂದೆ ತೊಳಲದಿರು ತೊಳಲದಿರು.
ಸೌರಾಷ್ಟ್ರ ಸೋಮೇಶ್ವರನ ಕೈಹಿಡಿದು
ಶಬ್ದಜಾಲಂಗಳಿಗೆ ಬಳಲದಿರು ಬಳಲದಿರು’’
ಎಂದು ಸೊಡ್ಡಳ ಬಾಚರಸರು ಎಚ್ಚರಿಸಿದ್ದಾರೆ.
‘‘ಪ್ರಭುವಿನ ಕರುಣವುಳ್ಳ ಲಿಂಗಾಂಗಿಗಳಿಗಲ್ಲದೆ
ವಾಗದ್ವೈತದಿಂದ ಒಡಲ ಹೊರೆವ ಬಹುಭಾಷಿಗಳಿಗೆಂತು ಸಾಧ್ಯವಪ್ಪುದೊ?’’ ಎಂದು ಕೆಂಭಾವಿ ಭೋಗಣ್ಣ ಪ್ರಶ್ನಿಸಿದ್ದಾರೆ.
‘‘ಬಹುಭಾಷಿಗಳೆಂದರೆ ಹೇಳೋದೊಂದು ಮಾಡೋದೊಂದು ಅಭ್ಯಾಸವುಳ್ಳವರು.
ಮನಮಂದಿರದಲ್ಲಿ ಕೂಡುವ ಸುಖವ ವಾಗದ್ವೈತರೇನು ಬಲ್ಲರು?’’ ಎಂದು ದೇಶಿಕೇಂದ್ರ ಸಂಗನಬಸವಯ್ಯ ಕೇಳಿದ್ದಾರೆ.
‘‘ವಾಗದ್ವೈತದ ಮಾತಿನ ಮಾಲೆ ಸ್ವಯಾದ್ವೈತವ ಮುಟ್ಟಬಲ್ಲುದೆ?’’ ಎಂದು ಮೋಳಿಗೆ ಮಾರಯ್ಯನವರು ಅಂದಿದ್ದಾರೆ. ‘‘ಲಿಂಗಾಂಗಸಾಮರಸ್ಯವೇ ನಿಜವಾದ ಅದ್ವೈತ. ವೈದಿಕರದು ಮಾತಿನ ಅದ್ವೈತ’’ ಎಂದು ಸೂಚಿಸಿದ್ದಾರೆ.
‘‘ವಾಗದ್ವೈತದ ಮಾತಿನ ಮಾಲೆ ಸ್ವಯಾದ್ವೈತವ ಮುಟ್ಟಬಲ್ಲುದೆ?
ಬ್ರಹ್ಮವಾನೆಂಬ ಬರಿಯ ವಾಗದ್ವೈತದಲ್ಲಿ ಫಲವಿಲ್ಲ’’ ಎಂದಿದ್ದಾರೆ ಉರಿಲಿಂಗಪೆದ್ದಿ.
‘‘ದ್ವೈತಿ ಅಲ್ಲ ಅದ್ವೈತಿ ಮುನ್ನವೆ ಅಲ್ಲ’’ ಎಂದಿದ್ದಾಳೆ ಅಕ್ಕ!
‘‘ವಾಗದ್ವೈತದಲ್ಲಿ ನುಡಿದು
ಸ್ವಯಾದ್ವೈತದಲ್ಲಿ ನಡೆದು ತೋರಬೇಕು.
ಊರೊಳಗೆ ಪಂಥ ರಣದೊಳಗೆ ಓಟವೆ?
ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ?
ಈ ಘಾತುಕರ ಶಾಸ್ತ್ರ ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು ಉಭಯದ ಇರವು.
ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು ಸದಾಶಿವಮೂರ್ತಿ ಲಿಂಗವನರಿವುದಕ್ಕೆ’’ ಎಂದು ಅರಿವಿನ ಮಾರಿತಂದೆ ನಿಜದ ನಿಲವನ್ನು ತೋರಿದ್ದಾರೆ
‘‘ಕಲ್ಲಿಯ ಹಾಕಿ ನೆಲ್ಲವ ತಳಿದು ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ ವಾಗದ್ವೈತವ ಕಲಿತು ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ ಅದೇತರ ನುಡಿ? ಮಾತಿನ ಮರೆ. ಆತುರ ವೈರಿ ಮಾರೇಶ್ವರ’’ ಎಂದು ನಗೆಯ ಮಾರಿತಂದೆ ಅಂದೆ ವಾಗದ್ವೈತಿಗಳ ಗೋಮುಖವ್ಯಾಘ್ರತನವನ್ನು ಬಯಲಿಗೆಳೆದಿದ್ದಾರೆ. ಅಕ್ಕಿ ಹಾಕಿ ಬಲೆ ಬೀಸಿ ಪಕ್ಷಿಗಳ ಹಿಡಿಯುವ ಹಾಗೆ ಮತ್ತು ಗಾಳ ಹಾಕಿ ಮೀನು ಹಿಡಿಯುವ ಹಾಗೆ ಸಂಸ್ಕೃತ ಮಾತಿನ ಮೂಲಕ ನಮ್ಮನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ ಎಂದು ನಗೆಯ ಮಾರಿತಂದೆ ಹೇಳುತ್ತಾರೆ.
‘‘ಸರ್ವಾಗಮ ಶ್ರುತಿ ಸ್ಮತಿ ಪುರಾಣ ಪಾಠಕನಾದಡೇನು,
ಸರ್ವ ಮಂತ್ರ ತಂತ್ರ ಸಿದ್ಧಿ ಮರ್ಮವರಿತಡೇನು?
ನಿತ್ಯ ಶಿವಾರ್ಚನೆ ತ್ರಿಕಾಲವಿಲ್ಲ
ನಿತ್ಯ ಪಾದೋದಕ ಪ್ರಸಾದ ಸೇವನೆಯಿಲ್ಲ.
ಇದೇತರ ವೀರಶೈವ ವ್ರತ?
ಇದೇತರ ಜನ್ಮ ಸಾಫಲ್ಯ
ಅಮುಗೇಶ್ವರಲಿಂಗವೆ?’’
ಎಂದು ಅಮುಗೆ ರಾಯಮ್ಮ, ‘ವೀರಶೈವ ಎಂಬುದು ವ್ರತವೇ ಹೊರತು ಧರ್ಮ ಅಲ್ಲ’ ಎಂದು ಸಾರಿದ್ದಾಳೆ.
ಹೀಗೆ ಶರಣರು ವೀರಶೈವವನ್ನೂ ವೈದಿಕರ ವೇದಾಂತವನ್ನೂ ತಿರಸ್ಕರಿಸುತ್ತಾ ವೈಚಾರಿಕವಾಗಿ ಅವೈದಿಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡಿದ್ದಾರೆ.