ಅಮೆರಿಕ ಶ್ರೇಷ್ಠವಾಗಿಸುವ ಗುಂಗಿನಲ್ಲಿರುವ ಟ್ರಂಪ್ ಅಲ್ಲಿನ ಸಂವಿಧಾನವನ್ನೇ ಇಲ್ಲವಾಗಿಸಿಯಾರೇ?

ಅಮೆರಿಕವನ್ನು ಶ್ರೇಷ್ಠವಾಗಿಸ ಹೊರಟಿರುವುದೇನೋ ಸರಿ. ಆದರೆ ಸಂವಿಧಾನವೇ ಅಮೆರಿಕದ ಆತ್ಮ. ಟ್ರಂಪ್ ಅವರ ಈ ಅಧಿಕಾರಾವಧಿಯಲ್ಲಿ ಅಮೆರಿಕದ ಸಂವಿಧಾನ ಹೊಸ ರೂಪ ಪಡೆಯುತ್ತದೆಯೇ ಅಥವಾ ಅದು ಇಲ್ಲವಾಗುತ್ತದೆಯೇ? ಅಮೆರಿಕದ ಬಹುಪಾಲು ಜನರು ಇದರ ಬಗ್ಗೆಯೇ ಭಯಭೀತರಾಗಿದ್ದಾರೆ.
ಟ್ರಂಪ್ ಅವರ ಆಡಳಿತ ಅಮೆರಿಕ ಸಂವಿಧಾನವನ್ನು ಆಧರಿಸಿ ನಡೆಯುತ್ತದೆಯೇ ಅಥವಾ ಅವರ ತೀರ್ಪುಗಳಿಂದ ನಡೆಯಲಿದೆಯೆ?
ಚುನಾವಣೆಗಳ ನಂತರ ಇದರ ಬಗ್ಗೆ ದೊಡ್ಡ ಪ್ರಶ್ನೆ ಇದೆ.
ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿದ್ದಾರೆ
ಹೆಲ್ದಿ ಅಮೆರಿಕ, ವೆಲ್ದಿ ಅಮೆರಿಕ, ಸೇಫ್ ಅಮೆರಿಕ, ಸ್ಟ್ರಾಂಗ್ ಅಮೆರಿಕ, ಪ್ರೌಡ್ ಅಮೆರಿಕ ಮತ್ತು ಕಡೆಯದಾಗಿ ಗ್ರೇಟ್ ಅಮೆರಿಕ....
ತಮ್ಮ ಭಾಷಣದ ಒಂದೂವರೆ ನಿಮಿಷದ ಕ್ಲಿಪ್‌ನಲ್ಲಿಯೇ ಟ್ರಂಪ್ ಏಳು ರೀತಿಯ ಅಮೆರಿಕವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದಾರೆ.
ಒಂದೇ ಉಸಿರಿನಲ್ಲಿ ಮೂರು ಬಾರಿ ‘ಫೈಟ್ ಫೈಟ್ ಫೈಟ್’ ಎಂದಿದ್ದಾರೆ. ‘ವಿನ್ ವಿನ್ ವಿನ್’ ಎಂದಿದ್ದಾರೆ.ಎಂದಿಗೂ ಮತ್ತು ಎಂದೆಂದಿಗೂ ಶರಣಾಗುವ ಮಾತೇ ಇಲ್ಲ ಎಂದಿದ್ದಾರೆ.
ಟ್ರಂಪ್ ಆಗಮನದಿಂದ ಏನಾದರೂ ಬದಲಾಗುವುದೇ ಎಂದು ಕೇಳಿಕೊಂಡರೆ ಅಂಥದೇನೂ ಆಗದೇನೊ ಎಂದೇ ತೋರುತ್ತದೆ.
ಅವರ ಭಾಷಣ ಕೇಳುತ್ತಿದ್ದರೆ, ಹಿಂದಿ ಸಿನೆಮಾ ಸಂಭಾಷಣೆಗಳನ್ನು ಇಂಗ್ಲಿಷ್‌ನಲ್ಲಿ ಬರೆದು ಹೇಳಿದಂತೆ ಅನ್ನಿಸುತ್ತದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ರವೀಶ್ ಕುಮಾರ್.
ಟ್ರಂಪ್‌ರ ಈ ಶೈಲಿಯಿಂದಾಗಿ ಅಮೆರಿಕದಲ್ಲಿ ಮಾತ್ರವಲ್ಲ, ಈ ಬಾರಿ ಭಾರತದಲ್ಲಿಯೂ ಜನರ ಎದೆಬಡಿತ ಜೋರಾಗತೊಡಗಿದೆ.
ಟ್ರಂಪ್ ಅವರು ಮನೆಯ ಎಲ್ಲಾ ಬಲ್ಬ್‌ಗಳನ್ನು ಬದಲಾಯಿಸುವ ಶೈಲಿಯಲ್ಲಿ ಅಮೆರಿಕವನ್ನು ಬದಲಾಯಿಸುವ ಬಗ್ಗೆ ಮಾತನಾಡಿದ್ದಾರೆ.
ಈವರೆಗಿನ ಅಮೆರಿಕವನ್ನು ನೋಡಲು ಟ್ರಂಪ್ ಪ್ರಮಾಣ ವಚನದ ದಿನವೇ ಕೊನೆಯ ದಿನವೆನ್ನಿಸಿತು. ಇದರ ನಂತರ ನಾವು ನೋಡುವ ಯಾವುದೇ ಅಮೆರಿಕ, ಟ್ರಂಪ್ ಶೈಲಿಯಲ್ಲೇ ಹೇಳುವುದಾದರೆ, ‘‘ಶ್ರೇಷ್ಠವಾಗಿರುತ್ತದೆ ಮತ್ತು ಮೊದಲಿಗಿಂತಲೂ ಶ್ರೇಷ್ಠವಾಗಿರುತ್ತದೆ’’.
ಯಾವುದೇ ನಿಲುವಿಗೂ ಬದ್ಧರಾಗುವ ಜಾಯಮಾನದವರಲ್ಲದ ಟ್ರಂಪ್ ಈ ಮೊದಲಿನ ಎಲ್ಲ ನೀತಿಗಳನ್ನೂ ಮುರಿಯುವ ಸುಳಿವು ತೋರಿಸಿದ್ದಾರೆ. ಯುದ್ಧವನ್ನು ನಿಲ್ಲಿಸಿ ದೊಡ್ಡ ಮನುಷ್ಯನಂತೆಯೂ ಕಾಣಿಸಿಕೊಂಡಿದ್ದಾರೆ.
ಟ್ರಂಪ್ ಬಲದಿಂದಲೇ ಎಲಾನ್ ಮಸ್ಕ್ ಕೂಡ ಇತರ ದೇಶಗಳಿಗೆ ಪದೇ ಪದೇ ಬೆದರಿಕೆ ಹಾಕುತ್ತಿರುವ ಹಾಗಿದೆ.
ಹಾಗಾದರೆ ಟ್ರಂಪ್ ಅವರ ಈ ಅಧಿಕಾರಾವಧಿಯಲ್ಲಿ ಜಾಗತಿಕವಾಗಿ ಅಮೆರಿಕದ ಹಸ್ತಕ್ಷೇಪವಿರುವುದಿಲ್ಲ ಎಂದು ಹೇಗೆ ನಂಬಬಹುದು? ಪ್ರಪಂಚವನ್ನು ಬೆದರಿಸದೆ ಅಮೆರಿಕ ಹೇಗೆ ದೊಡ್ಡಣ್ಣನಾಗಲು ಸಾಧ್ಯವಿದೆ?
ಅಮೆರಿಕ ಶ್ರೇಷ್ಠವೆಂದುಕೊಳ್ಳಬಹುದು. ಆದರೆ ಹಾಗೆ ಆಗಲು ಸಾಧ್ಯವಿಲ್ಲ. ಅಮೆರಿಕ ಶ್ರೇಷ್ಠ ಎಂಬ ಪರಿಕಲ್ಪನೆಯೇ ಬೆದರಿಕೆಯದ್ದಾಗಿದೆ.
‘‘ಈಗ ಎಲ್ಲರೂ ನಮ್ಮ ಮಾತನ್ನು ಕೇಳುತ್ತಾರೆ. ನಮ್ಮೊಂದಿಗೆ ಘರ್ಷಣೆ ಮಾಡುವ ತಪ್ಪನ್ನು ಯಾರೂ ಮಾಡುವುದಿಲ್ಲ. ಏಕೆಂದರೆ ಹಾಗೆ ಘರ್ಷಣೆ ಮಾಡುವುದು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಘರ್ಷಣೆ ಎಂದು ಅವರಿಗೆ ತಿಳಿದಿದೆ’’ ಎಂದು ಸ್ವತಃ ಕೊಚ್ಚಿಕೊಂಡಿದ್ದಾರೆ ಟ್ರಂಪ್.
ಟ್ರಂಪ್ ಆಗಮನದೊಂದಿಗೆ ಅಮೆರಿಕ ಮತ್ತೆ ಬಲಿಷ್ಠವಾಗಿದೆ ಎನ್ನುತ್ತಾರೆ. ಟ್ರಂಪ್ ಅವರ ಭಾಷಣದಲ್ಲಿ ಬರೀ ಉತ್ಪ್ರೇಕ್ಷೆಗಳು ತುಂಬಿದ್ದವು. ‘ಗ್ರೇಟೆಸ್ಟ್, ಸೇಫೆಸ್ಟ್, ಫೈನೆಸ್ಟ್’ ಹೀಗೆ.
‘‘ಮೇಕಿಂಗ್ ಅಮೆರಿಕ ಗ್ರೇಟ್ ಅಗೈನ್’’ ಎಂದು ಟ್ರಂಪ್ ಹೇಳಿದರು.
ಅಮೆರಿಕವನ್ನು ಶ್ರೇಷ್ಠವಾಗಿಸ ಹೊರಟಿರುವುದೇನೋ ಸರಿ. ಆದರೆ ಸಂವಿಧಾನವೇ ಅಮೆರಿಕದ ಆತ್ಮ. ಟ್ರಂಪ್ ಅವರ ಈ ಅಧಿಕಾರಾವಧಿಯಲ್ಲಿ ಅಮೆರಿಕದ ಸಂವಿಧಾನ ಹೊಸ ರೂಪ ಪಡೆಯುತ್ತದೆಯೇ ಅಥವಾ ಅದು ಇಲ್ಲವಾಗುತ್ತದೆಯೇ? ಅಮೆರಿಕದ ಬಹುಪಾಲು ಜನರು ಇದರ ಬಗ್ಗೆಯೇ ಭಯಭೀತರಾಗಿದ್ದಾರೆ.
ಟ್ರಂಪ್ ಅವರ ಆಡಳಿತ ಅಮೆರಿಕ ಸಂವಿಧಾನವನ್ನು ಆಧರಿಸಿ ನಡೆಯುತ್ತದೆಯೇ ಅಥವಾ ಅವರ ತೀರ್ಪುಗಳಿಂದ ನಡೆಯಲಿದೆಯೆ?
ಚುನಾವಣೆಗಳ ನಂತರ ಇದರ ಬಗ್ಗೆ ದೊಡ್ಡ ಪ್ರಶ್ನೆ ಇದೆ.
ಈ ಸಮಯದಲ್ಲಿ ಫಾಕ್ಸ್ ನ್ಯೂಸ್ ಪತ್ರಕರ್ತರೊಬ್ಬರು ಟ್ರಂಪ್ ಅವರನ್ನು ‘‘ನೀವು ಸರ್ವಾಧಿಕಾರಿಯಾಗಲಿದ್ದೀರಾ?’’ ಎಂದು ಕೇಳಿದರು,
ಅದಕ್ಕೆ ಅವರು ‘‘ಮೊದಲ ದಿನವನ್ನು ಹೊರತುಪಡಿಸಿ ಸರ್ವಾಧಿಕಾರಿಯಾಗುವುದಿಲ್ಲ, ಒಂದು ದಿನಕ್ಕೆ ರಾಜನಾಗುತ್ತೇನೆ’’ ಎಂದು ಉತ್ತರಿಸಿದರು. ಟ್ರಂಪ್ ಏನು ಮತ್ತು ಇನ್ನು ಮುಂದೆ ಹೇಗಿರಲಿದ್ದಾರೆ ಎಂಬುದರ ಸುಳಿವುಗಳು ಆ ಮಾತಲ್ಲಿವೆಯೆ?
ಮೀಡಿಯಾಗಳು ಅವರನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಮತದಾರರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.
ಹಾಗಾದರೆ, ಟ್ರಂಪ್ ಹೇಳುತ್ತಿರುವುದು ನಿಜವೇ?
ಅಮೆರಿಕಕ್ಕೆ ನಿಜವಾಗಿಯೂ ಒಳ್ಳೆಯ ದಿನಗಳು ಬರುತ್ತವೆ ಎಂದು ಅಕ್ಷರಶಃ ತೆಗೆದುಕೊಳ್ಳಬಾರದು. ಆದರೆ ಅವರು ಒಳ್ಳೆಯ ದಿನಗಳನ್ನು ತರಲು ಪ್ರಯತ್ನಿಸುತ್ತಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.
ಅಮೆರಿಕ ಎಷ್ಟು ಬಯಸುತ್ತದೋ ಅಷ್ಟು ಶ್ರೇಷ್ಠವಾಗಲಿ. ಆದರೆ ಒಂದು ವಿಷಯವನ್ನು ಟ್ರಂಪ್ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಯಾರು ಶ್ರೇಷ್ಠರಾಗಲು ಬಯಸುತ್ತಾರೋ ಅವರು ಮೊದಲು ಒಳ್ಳೆಯವರಾಗಬೇಕು.
ಇಲ್ಲಿ ನಮ್ಮ ‘ವಿಶ್ವಗುರು’ 2047ರ ವಿಕಸಿತ ಭಾರತದ ಬಗ್ಗೆ ಮಾತಾಡುತ್ತಿದ್ದಾರೆ. ಹೀಗಿರುವಾಗ ಟ್ರಂಪ್ ನಾಲ್ಕೇ ವರ್ಷಗಳಲ್ಲಿ ಅಮೆರಿಕವನ್ನು ಗ್ರೇಟೆಸ್ಟ್ ಆಗಿಸುತ್ತಾರೆಯೆ?
ತಮ್ಮ ಭಾಷಣಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕುವ ನಾಯಕರ ಉತ್ಸಾಹ ಭಾಷಣಗಳ ಮಟ್ಟಕ್ಕೇ ಸೀಮಿತವಾಗಿರುತ್ತದೆ. ತುಂಬಾ ಚಪ್ಪಾಳೆಗಳು ಬರುತ್ತವೆ ಮತ್ತು ಅದರ ನಡುವೆ, ಮಾಡಬೇಕಾದ ಕೆಲಸವೂ ಇದೆ ಎಂಬುದನ್ನು ಅವರು ಮರೆತುಬಿಡುತ್ತಾರೆ.
ಈ ಬಾರಿ ಟ್ರಂಪ್ ಇದನ್ನು ಆಗಲು ಬಿಡುವುದಿಲ್ಲ ಎಂದು ಜನರು ಆಶಿಸುತ್ತಿರಬಹುದು. ಆದರೆ ಅವರು ಮಾತ್ರವೇ ಸರಕಾರವನ್ನು ನಡೆಸುತ್ತಾರೆಯೋ, ಅವರ ಜೊತೆಗೇ ಎಲಾನ್ ಮಸ್ಕ್ ಕೂಡ ಸರಕಾರ ನಡೆಸುವಲ್ಲಿ ಮುಂದಿರುತ್ತಾರೋ ಎಂಬ ಪ್ರಶ್ನೆಯೂ ಬರುತ್ತದೆ.
ಪ್ರಮಾಣವಚನ ಸಮಾರಂಭದಲ್ಲಿ ಎಲಾನ್ ಮಸ್ಕ್ ಅವರನ್ನು ಟ್ರಂಪ್ ವೇದಿಕೆಗೆ ಕರೆದಾಗ ಅವರು ತಮ್ಮ ಪುಟ್ಟ ಮಗನೊಂದಿಗೆ ವೇದಿಕೆಗೆ ಬಂದಿದ್ದರು.
ಅದೇ ಒಂದು ಶೋ ಆಯಿತು.
ಈ ಉದ್ಘಾಟನೆ ಕಾರ್ಯಕ್ರಮದಲ್ಲಿ, ಅಮೆರಿಕನ್ ಡಾಲರ್ ಎಷ್ಟು ಮಾದಕತೆಯನ್ನು ಹೊಂದಿದೆ, ಅದಕ್ಕೆ ಶಕ್ತಿ ಇದೆ, ಅದಕ್ಕೆ ಬಲವಿದೆ ಎಂಬುದು ಸ್ಪಷ್ಟವಾಗುತ್ತದೆ.
ರಾಜ್ ಕಪೂರ್ ಅವರ ಚಿತ್ರವೊಂದಿದೆ.
‘ಮೇರಾ ನಾಮ್ ಜೋಕರ್’.
ಅದರಲ್ಲಿ, ರಾಜ್ ಕಪೂರ್ ಒಂದು ದೃಶ್ಯದಲ್ಲಿ, ‘‘ಇದು ಒಂದು ಸರ್ಕಸ್ ಮತ್ತು ಇದು ಮೂರು ಗಂಟೆಗಳ ಸರ್ಕಸ್’’ ಎನ್ನುತ್ತಾರೆ.
‘‘ಮೊದಲ ಗಂಟೆ ಬಾಲ್ಯ, ಎರಡನೆಯದು ಯೌವನ ಮತ್ತು ಮೂರನೆಯದು ವೃದ್ಧಾಪ್ಯ. ಅದಾದ ಮೇಲೆ ಅಪ್ಪನೂ ಇಲ್ಲ, ಅಮ್ಮನೂ ಇಲ್ಲ, ಮಗನೂ ಇಲ್ಲ, ಮಗಳೂ ಇಲ್ಲ, ನೀವೂ ಇಲ್ಲ, ನಾನೂ ಇಲ್ಲ, ಅಲ್ಲಿ ಕಡೆಗೆ ಏನೂ ಉಳಿದಿಲ್ಲ; ಉಳಿದಿರುವುದು ಖಾಲಿ ಕುರ್ಚಿಗಳು, ಖಾಲಿ ಡೇರೆಗಳು, ಖಾಲಿ ವೃತ್ತಗಳು.’’
ಅಧಿಕಾರದ ಸರ್ಕಸ್‌ನಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು? ಈಗ ಅಮೆರಿಕದ ಜನರು ಈ ಹೊರೆಯನ್ನು ನಿಭಾಯಿಸಬೇಕಿದೆ.
ಮಸ್ಕ್ ಈಗ ಬರೀ ಒಬ್ಬ ಉದ್ಯಮಿಯಲ್ಲ, ಅವರು ಅಮೆರಿಕ ಸರಕಾರದ ಭಾಗವಾಗಿದ್ದಾರೆ. ಟ್ವಿಟರ್‌ನಲ್ಲಿ ಅವರು ಟ್ರಂಪ್ ವಿರುದ್ಧದ ಎಲ್ಲವನ್ನೂ ಅಳಿಸಿ, ಟ್ರಂಪ್ ಮಾತ್ರ ಕಾಣುವಂತೆ ಮಾಡಿದ್ದವರು.
ಒಂದು ರೀತಿಯಲ್ಲಿ ಮಸ್ಕ್ ಅಮೆರಿಕ ಮತ್ತು ಯುರೋಪ್ ಅನ್ನು ಶ್ರೇಷ್ಠಗೊಳಿಸುವ ಗುತ್ತಿಗೆ ತೆಗೆದುಕೊಂಡವರ ಹಾಗೆ ಆಡುತ್ತಿದ್ದಾರೆಯೆ? ಅದನ್ನು ಅವರು ಟ್ರಂಪ್‌ಗೆ ನೇರವಾಗಿ ಹೇಳುತ್ತಿರುವ ಹಾಗಿದೆಯೇ?
ವೇದಿಕೆಯಲ್ಲಿ ಮಸ್ಕ್ ಕಾಣಿಸಿಕೊಂಡ ರೀತಿ ಅಮೆರಿಕದ ಭವಿಷ್ಯದ ಅಧ್ಯಕ್ಷರನ್ನು ಸಹ ಕಾಣಿಸುತ್ತಿದೆಯೇ?
ಮಸ್ಕ್ ಈಗಾಗಲೇ ಬಾಸ್ ತಾನೇ ಎನ್ನುವಂತೆ ಜಗತ್ತನ್ನು ಬೆದರಿಸಲು ಪ್ರಾರಂಭಿಸಿದ್ದಾರೆ. ಇನ್ನು 4 ವರ್ಷಗಳಲ್ಲಿ ಅವರು ಏನೇನು ಮಾಡುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ಆದರೆ ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುತ್ತೇವೆ ಎಂಬ ಘೋಷಣೆಯೇ ಗಾಬರಿ ಹುಟ್ಟಿಸುವ ಹಾಗಿದೆ.
ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲಿರುವ ಟ್ರಂಪ್, ಚೀನಾದ ಟಿಕ್‌ಟಾಕ್‌ನಲ್ಲಿ ಪಾಲನ್ನು ಕೇಳುತ್ತಿದ್ದಾರೆ.ಹಾಗಾದರೆ ಇದು ಅಮೆರಿಕವನ್ನು ಶ್ರೇಷ್ಠವನ್ನಾಗಿಸುವ ಯೋಜನೆಯೇ?
‘‘ಕೆನಡಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರ ಹತ್ಯೆ ಪ್ರಕರಣಗಳ ಫೈಲ್‌ಗಳು ರಹಸ್ಯ ವರ್ಗೀಕರಣದಿಂದ ಮುಕ್ತಗೊಳಿಸಲಾಗಿದೆ’’ ಎಂದು ಟ್ರಂಪ್ ಹೇಳಿದ್ದಾರೆ. ‘ವರ್ಗೀಕರಣದಿಂದ ಮುಕ್ತಗೊಳಿಸಲಾಗಿದೆ’ ಅಂದರೆ ಅವುಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲಾಗುತ್ತದೆ.
ಭಾರತದಲ್ಲಿಯೂ ಸಹ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕಡತವನ್ನು ವರ್ಗೀಕರಣದಿಂದ ಮುಕ್ತಗೊಳಿಸುವ ಪ್ರಹಸನ ತಿಂಗಳುಗಳ ಕಾಲ ನಡೆಯಿತು ಎಂಬುದು ನಿಮಗೆ ನೆನಪಿರಬೇಕು.
ಮಡಿಲ ಮೀಡಿಯಾಗಳಲ್ಲಿ ಹಲವು ಮುಖ್ಯಾಂಶಗಳು ಪ್ರಸಾರವಾದವು. ಹಲವು ರೀತಿಯ ಪಿತೂರಿ ಸಿದ್ಧಾಂತಗಳನ್ನು ಮಾಡಲಾಯಿತು. ಚರ್ಚೆಗಳು ನಡೆದವು.
ಆದರೆ ಆ ಕಡತದಿಂದ ಹೊರಬಂದದ್ದಾರೂ ಏನು?
ಮೊದಲ ದಿನದಿಂದಲೇ 100ಕ್ಕೂ ಹೆಚ್ಚು ನಿರ್ಧಾರಗಳಿಗೆ ಸಹಿ ಹಾಕುವುದಾಗಿಯೂ, ಬೈಡನ್ ಸರಕಾರದ ಅನೇಕ ಆದೇಶಗಳನ್ನು ರದ್ದುಗೊಳಿಸುವುದಾಗಿಯೂ ಟ್ರಂಪ್ ಹೇಳಿದ್ದಾರೆ.
ಅಕ್ರಮ ವಲಸಿಗರನ್ನು ಸಾಮೂಹಿಕವಾಗಿ ಗಡಿಪಾರು ಮಾಡಲು ಟ್ರಂಪ್ ಆದೇಶ ಹೊರಡಿಸಿದರೆ, ಅದನ್ನು ಜಾರಿಗೆ ತರಲಾಗುತ್ತದೆ. ಅದು ಭಾರತದ ಹಲವು ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ.
ವೀಸಾ ವಿಚಾರವಾಗಿ ಟ್ರಂಪ್ ಯಾವುದೇ ಹಾನಿಕಾರಕ ನಿರ್ಧಾರ ತೆಗೆದುಕೊಂಡರೆ ಅದು ಭಾರತಕ್ಕೆ ಒಳ್ಳೆಯದಲ್ಲ.
ಭಾರತವನ್ನು ಶ್ರೇಷ್ಠವನ್ನಾಗಿ ಮಾಡುವ ಯೋಜನೆ ಇಲ್ಲೂ ನಡೆಯುತ್ತಿದೆ, ಆದರೆ ಇಲ್ಲಿನ ಪೌರತ್ವ ಬಿಟ್ಟು ಲಕ್ಷಾಂತರ ಜನರು ಅಮೆರಿಕಕ್ಕೆ ಹೋಗುತ್ತಲೇ ಇದ್ದಾರೆ.
ಯಾರೂ ಅಮೆರಿಕಕ್ಕೆ ಹೋಗದೆ, ಎಲ್ಲರೂ ತಮ್ಮ ಸ್ವಂತ ದೇಶದಲ್ಲಿಯೇ ಇದ್ದು ತಮ್ಮ ಸ್ವಂತ ದೇಶವನ್ನು ಶ್ರೇಷ್ಠವನ್ನಾಗಿ ಮಾಡುತ್ತಾರೆಯೇ?
ಅಂಥ ವಾತಾವರಣ ಇಲ್ಲಿ ನಿರ್ಮಾಣವಾಗುವುದೆ?
60 ತಿಂಗಳು ಕೊಡಿ ಸಾಕು, ನಮಗೆ ‘ಅಚ್ಛೇದಿನ್’ ಬರುತ್ತದೆ ಎಂದು ಹತ್ತು ವರ್ಷಗಳ ಹಿಂದೆ ಹೇಳಿದವರು
ಈಗ ಅದು 2047ರಲ್ಲಿ ಬರಬಹುದು ಎಂದು ವರಸೆ ಬದಲಾಯಿಸಿದ್ದಾರೆ.
ಆದರೆ ನಾವೀಗ ವಿಶ್ವಗುರು ಆಗಿದ್ದೇವೆ ಎಂದು ಜನರನ್ನು ಮರುಳು ಮಾಡುತ್ತಿದ್ದಾರೆ.
ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸುವುದಾಗಿ ಟ್ರಂಪ್ ಕೊಚ್ಚಿಕೊಳ್ಳುತ್ತಿರುವಾಗ, ತಾವೇನು ಯೋಚಿಸಬೇಕಾಗಿದೆ, ಮಾಡಬೇಕಾಗಿದೆ ಎಂಬುದು ಭಾರತವನ್ನು ಆಳುತ್ತಿರುವವರಿಗೆ ಸ್ಪಷ್ಟವಾಗಬೇಕಿದೆ.