ತುಮಕೂರು: ಅಭ್ಯರ್ಥಿ ಆಯ್ಕೆಯ ಗೊಂದಲದಲ್ಲಿ ಬಿಜೆಪಿ-ಕಾಂಗ್ರೆಸ್
ಸರಣಿ- 23
ತುಮಕೂರು ಲೋಕಸಭಾ ಕ್ಷೇತ್ರದ ಪ್ರಾಥಮಿಕ ಮಾಹಿತಿಗಳು
ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.67.69. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳು 8.
ಅವೆಂದರೆ, ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೆಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಹಾಗೂ ಮಧುಗಿರಿ.
4 ಕ್ಷೇತ್ರಗಳಲ್ಲಿ ಕಾಂಗ್ರೆಸ್, 2ರಲ್ಲಿ ಬಿಜೆಪಿ ಹಾಗೂ 2ರಲ್ಲಿ ಜೆಡಿಎಸ್ ಶಾಸಕರಿದ್ದಾರೆ.
ಕ್ಷೇತ್ರದ ಒಟ್ಟು ಮತದಾರರು 16,17,221
ಪುರುಷರು -8,03,625
ಮಹಿಳೆಯರು -8,13,586
ಇತರರು -10
ಹಿಂದಿನ ಚುನಾವಣೆಗಳ ಫಲಿತಾಂಶ:
2014ರಲ್ಲಿ ಕಾಂಗ್ರೆಸ್‌ನ ಎಸ್.ಪಿ. ಮುದ್ದಹನುಮೇಗೌಡ ಗೆಲುವು ಸಾಧಿಸಿದ್ದರೆ, 2019ರಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜ್ ಗೆಲುವು ಕಂಡಿದ್ದರು.
ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:
2014 ಕಾಂಗ್ರೆಸ್‌ಗೆ ಶೇ.39.03, ಬಿಜೆಪಿಗೆ ಶೇ.32.30
2019 ಬಿಜೆಪಿಗೆ ಶೇ.47.89, ಜೆಡಿಎಸ್‌ಗೆ ಶೇ.46.82
2 ಉಪಚುನಾವಣೆಗಳೂ ಸೇರಿ 1952ರಿಂದ 19 ಚುನಾವಣೆಗಳು ನಡೆದಿವೆ. ಒಟ್ಟು 12 ಬಾರಿ ಕಾಂಗ್ರೆಸ್ ಗೆಲುವು. ಉಳಿದಂತೆ ಬಿಜೆಪಿ 5 ಬಾರಿ, ಪ್ರಜಾ ಸೋಷಲಿಸ್ಟ್ ಪಾರ್ಟಿ, ಜನತಾ ದಳ ಒಂದೊಂದು ಬಾರಿ ಗೆದ್ದಿವೆ.
ಕೆ. ಲಕ್ಕಪ್ಪ ಸತತ 4 ಬಾರಿ ಈ ಕ್ಷೇತ್ರದಿಂದ ಸಂಸದರಾಗಿದ್ದರು.
ಈ ಸಲದ ಆಕಾಂಕ್ಷಿಗಳು:
ಪ್ರಸಕ್ತ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ ಜಿ.ಎಸ್.ಬಸವರಾಜು ಅವರಿಗೆ 76 ವರ್ಷ ವಯಸ್ಸು. ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಅವರೇ ಹೇಳಿದ್ದಾರೆ.
ಹಾಗಾಗಿ ಅವರು ವಿ.ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಪಕ್ಷದ ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.
ಇವರಲ್ಲದೆ ಬಿಜೆಪಿ ಒಬಿಸಿ ಕಾರ್ಯಕಾರಿಣಿ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಎಸ್.ಪಿ. ಚಿದಾನಂದ್, ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ವಿನಯ ಬಿದರೆ, ಡಾ. ಎಂ.ಆರ್. ಹುಲಿನಾಯ್ಕರ್ ಅವರ ಹೆಸರುಗಳೂ ಕೇಳಿಬರುತ್ತಿವೆ.
ಬಿಜೆಪಿ, ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ, ಜೆಡಿಎಸ್ ಆಕಾಂಕ್ಷಿಗಳು ಕಂಡುಬರುತ್ತಿಲ್ಲ. ಒಂದು ವೇಳೆ ಕ್ಷೇತ್ರ ಹಂಚಿಕೆಯಲ್ಲಿ ಕೊನೆ ಕ್ಷಣದಲ್ಲಿ ಜೆಡಿಎಸ್‌ಗೆ ತುಮಕೂರು ಲೋಕಸಭಾ ಕ್ಷೇತ್ರ ನೀಡಿದರೆ ದೇವೇಗೌಡರ ಕುಟುಂಬದವರು ಸ್ಪರ್ಧೆ ಮಾಡಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ಜೆಡಿಎಸ್ ಸೇರಿದ ಲಿಂಗಾಯತ ಸಮುದಾಯದ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರೂ ಸ್ಪರ್ಧಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಿಂದ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಕಾಂಗ್ರೆಸ್ ವಕ್ತಾರ ನಿಕೇತರಾಜ್ ಮೌರ್ಯ ಅವರುಗಳು ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲೆಯಿಂದ ಸಚಿವರಾಗಿರುವ ಕೆ.ಎನ್. ರಾಜಣ್ಣ ಅವರು ನನ್ನನ್ನೂ ಟಿಕೆಟ್‌ಗೆ ಪರಿಗಣಿಸಿ ಎಂದು ಹೇಳುತ್ತಿದ್ದಾರೆ.
ಬಿಜೆಪಿಯಿಂದ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದರ ಮೇಲೆ ಕಾಂಗ್ರೆಸ್ ಅಭ್ಯರ್ಥಿ, ಇಲ್ಲವೇ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದರ ಮೇಲೆ ಬಿಜೆಪಿ ಅಭ್ಯರ್ಥಿ ನಿರ್ಧಾರವಾಗುವ ಸಾಧ್ಯತೆ ಇದೆ.
ಒಂದು ವೇಳೆ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ, ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಸೇರಿದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುವ ಸಾಧ್ಯತೆ ಹೆಚ್ಚಿದೆ.
ಆದರೆ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡುವುದಕ್ಕೆ ಡಿ.ಕೆ. ಶಿವಕುಮಾರ್ ಅವರ ಬೆಂಬಲವಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಅವರು ಕಾಂಗ್ರೆಸ್‌ಗೆ ಬಂದರೆ, ಬಿಜೆಪಿ ಲೆಕ್ಕಾಚಾರ ಬೇರೆಯೇ ಇದೆ. ಬಿಜೆಪಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಒಕ್ಕಲಿಗರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ತುಮಕೂರಿನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ಜವಾಬ್ದಾರಿ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮೇಲಿದೆ. ಆದರೆ 2014 ರಲ್ಲಿ ಮುದ್ದಹನುಮೇಗೌಡರನ್ನು ಜೆಡಿಎಸ್‌ನಿಂದ ಕರೆದುಕೊಂಡು ಬಂದು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಪರಮೇಶ್ವರ್ ಶ್ರಮಿಸಿದ್ದರು. ಆದರೆ 2019ರಲ್ಲಿ ಮುದ್ದಹನುಮೇ ಗೌಡ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಗೆ ಹೋದರು. ಹೋಗುವಾಗ ಪರಮೇಶ್ವರ್‌ರನ್ನೇ ದೂರಿದರು. ಈ ಅಸಮಾಧಾನ ಪರಮೇಶ್ವರ್ ಅವರಿಗಿದೆ.
ಹಾಗಾಗಿ ಈಗ ಮುದ್ದಹನುಮೇಗೌಡರನ್ನು ಮತ್ತೆ ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿರುವ ಕೆ.ಎನ್. ರಾಜಣ್ಣ ಅವರೇ ಗೆಲ್ಲಿಸಲಿ, ನಾವು ನಮ್ಮಿಂದಾಗುವ ಸಹಕಾರ ನೀಡುತ್ತೇವೆ ಎಂಬ ಧೋರಣೆ ಪರಮೇಶ್ವರ್ ಅವರದ್ದು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತರಾದ, ಕ್ಷೇತ್ರದಲ್ಲೂ ಪ್ರಭಾವಿಯಾಗಿರುವ ಸಚಿವ ರಾಜಣ್ಣ ಈಗಾಗಲೇ ಮುದ್ದಹನುಮೇಗೌಡರ ಪರ ಪ್ರಚಾರವನ್ನೂ ಪ್ರಾರಂಭಿಸಿದ್ದಾರೆ.
ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು
ನೀರಾವರಿ ಯೋಜನೆಗಳಿಲ್ಲದೆ ಮಳೆಯ ಕೊರತೆಯಿಂದ ಬರ ಎದುರಿಸುತ್ತಿದೆ. ಕೊಬ್ಬರಿ ಬೆಲೆ ಕುಸಿತದಿಂದ ಕೊಬ್ಬರಿ ಬೆಳೆಗಾರರು ತತ್ತರಿಸಿ ಹೋಗಿದ್ದು, ಸಕಾಲದಲ್ಲಿ ಸರಕಾರಗಳು ಕೃಷಿಕರ ನೆರವಿಗೆ ಬರಲಿಲ್ಲವೆಂಬ ಆಕ್ರೋಶ ಮತದಾರರಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡರ ಮೇಲೆಯೂ ಬೇಸರವಿದೆ. ಆದರೆ ಪರ್ಯಾಯ ಆಯ್ಕೆಗಳಿಲ್ಲ ಎಂಬಂತಹ ಸ್ಥಿತಿ ಜಿಲ್ಲೆಯ ಮತದಾರರದ್ದಾಗಿದೆ.
ಜಾತಿ ಲೆಕ್ಕಾಚಾರ
2019ರ ಲೋಕಸಭಾ ಚುನಾವಣೆಗೆ ಹೊಲಿಕೆ ಮಾಡಿದರೆ ಜಿಲ್ಲೆಯಲ್ಲಿ ಪ್ರಸಕ್ತ ಬಿಜೆಪಿ ಮುಂದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ, ಅಭ್ಯರ್ಥಿಗಳ ಮೇಲೆ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಕಾಣಬಹುದು.
2014ರ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಮತ್ತು ಕಾಂಗ್ರೆಸ್ ಮತಗಳು ಒಗ್ಗೂಡಿದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಗೆಲುವು ಸಾಧಿಸಿದ್ದರು.
ಆದರೆ 2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆಯಿಂದ ದೇವೇಗೌಡರು ಕಣಕ್ಕೆ ಇಳಿದರು. ದೇವೇಗೌಡರು ತುಮಕೂರು ಜಿಲ್ಲೆಗೆ ನೀರು ನೀಡುವುದಕ್ಕೆ ವಿರೋಧಿ ಎಂಬ ಹಣೆಪಟ್ಟಿಯ ಜೊತೆಗೆ, ದೇವೇಗೌಡರ ಕುಟುಂಬ ತುಮಕೂರಿಗೆ ಬಂದರೆ ನಮಗೆ ಜಾಗವಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ನ ಕೆಲ ಒಕ್ಕಲಿಗರು ತಟಸ್ಥರಾಗಿದ್ದು ಸಹ ಅವರ ಸೋಲಿಗೆ, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು.
ಈ ಬಾರಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಕೂಡ ಸೋಲು, ಗೆಲುವಿನ ಪ್ರಮುಖ ಅಂಶವಾಗಲಿದೆ.