ಉಡುಪಿ: 203 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
1,427 ಪ್ರದೇಶಗಳಲ್ಲಿ ನೀರಿನ ಅಭಾವದ ಭೀತಿ ► ಜಲ ಮೂಲಗಳು, ಟ್ಯಾಂಕರ್ ಸಜ್ಜು
ಉಡುಪಿ, ಮಾ.26: ಬಿಸಿಲ ದಗೆಗೆ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುತ್ತಿದ್ದು, ಇದರಿಂದ ಹಲವು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಭೀತಿ ಎದುರಾಗಿದೆ. ಈ ಸಮಸ್ಯೆ ಎದುರಿಸಲು ಉಡುಪಿ ಜಿಲ್ಲಾ ಪಂಚಾಯತ್ ಈಗಾಗಲೇ ಸನ್ನದ್ಧ ವಾಗಿದ್ದು, ಹಲವು ಕ್ರಮಗಳನ್ನು ಕೈಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ 150 ಗ್ರಾಪಂಗಳ ವ್ಯಾಪ್ತಿಯಲ್ಲಿ ಒಟ್ಟು 247 ಗ್ರಾಮ ಗಳಿದ್ದು, ಇವುಗಳ ಪೈಕಿ 129 ಗ್ರಾಪಂಗಳ 203 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ ಅಂತಹ 1,427 ಪ್ರದೇಶಗಳನ್ನು ಗುರುತಿಸಲಾಗಿದೆ. ಅದೇ ರೀತಿ ಕರಾವಳಿ ಭಾಗದ ಕುಂದಾಪುರ, ಕಾಪು ಮತ್ತು ಬೈಂದೂರು ತಾಲೂಕುಗಳ ಕೆಲವು ಗ್ರಾಪಂಗಳಲ್ಲಿ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತಿದೆ
ಬ್ರಹ್ಮಾವರ, ಹೆಬ್ರಿ, ಕಾರ್ಕಳ ತಾಲೂಕುಗಳನ್ನು ರಾಜ್ಯ ಸರಕಾರ ಈಗಾಗಲೇ ಬರಪೀಡಿತ ತಾಲೂಕು ಎಂಬುದಾಗಿ ಘೋಷಿಸಿದ್ದು, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರ 1.40ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರತಿ ತಾಲೂಕುಗಳಿಗೆ 25ಲಕ್ಷ ರೂ.ನಂತೆ ಒಟ್ಟು 75ಲಕ್ಷ ರೂ. ಹಂಚಲಾಗಿದೆ.
98 ಬೋರ್‌ವೆಲ್‌ಗಳು ಗುರುತು: ಕುಡಿಯುವ ನೀರಿನ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಗ್ರಾಪಂಗಳಲ್ಲಿ ಈಗಾಗಲೇ ಒಟ್ಟು 28 ಸರಕಾರಿ ಬೋರ್‌ವೆಲ್‌ಗಳನ್ನು ಗುರುತಿಸಿ ಸುಸ್ಥಿತಿಯಲ್ಲಿ ಇಡಲಾಗಿದೆ. ಇದರಲ್ಲಿ 12 ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ. 10 ಕಡೆಗಳಲ್ಲಿ ಪೈಪ್ ಲೈನ್ ಕಾರ್ಯ ನಡೆಸಲಾಗುತ್ತಿದ್ದು, ಮೂರು ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ನಡೆಯುತ್ತಿದೆ.
ಜಿಲ್ಲೆಯಲ್ಲಿ ಎಂಟು ತೆರೆದ ಬಾವಿಗಳನ್ನು ಗುರುತಿಸಿ, ಹೂಳು ತೆಗೆದು ನೀರಿನ ಪ್ರಮಾಣ ಹೆಚ್ಚಿಸಲಾಗಿದೆ. ಅದೇ ರೀತಿ ಜಿಲ್ಲೆಯಾದ್ಯಂತ 70 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ. ಇದರಲ್ಲಿ 13 ಬೋರ್‌ವೆಲ್‌ಗಳ ಮಾಲಕರಿಗೆ ಮುಂಗಡ ಹಣ ಪಾವತಿಸಲಾಗಿದೆ. ಅಲ್ಲದೆ 25 ಖಾಸಗಿ ತೆರೆದ ಬಾವಿಗಳನ್ನು ಗುರುತಿಸಿ ಸ್ಥಳೀಯ ಗ್ರಾಪಂ ಮೂಲಕ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ.
ಅಗತ್ಯ ಬಿದ್ದರೆ ನೀರು ಪೂರೈಕೆಗೆ ಎಸ್‌ಎಲ್‌ಆರ್‌ಎಂ ಘಟಕಗಳ ವಾಹನಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ನೀರಿನ ಕೊರತೆ ಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಟ್ಯಾಂಕರ್ ಗಳನ್ನು ಸಿದ್ಧ ಪಡಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ಟೆಂಡರ್ ಕರೆದು ದರ ನಿಗದಿ ಪಡಿಸಲಾಗಿದೆ. ಇದರ ಜವಾಬ್ದಾರಿಯನ್ನು ಆಯಾ ತಾಲೂಕುಗಳ ತಹಶೀಲ್ದಾರ್ ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಹಿಸಿಕೊಡಲಾಗಿದೆ ಎಂದು ಜಿಪಂ ಸಿಇಒ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.
ಟೋಲ್ ಫ್ರೀ ಹೆಲ್ಪ್‌ಲೈನ್: ಗ್ರಾಪಂ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಜಿಪಂ ವತಿಯಿಂದ ಟೋಲ್ ಫ್ರೀ ಹೆಲ್ಪ್‌ಲೈನ್(1800457049) ಆರಂಭಿಸಲಾಗಿದೆ.
ಇಲ್ಲಿ 24 ಗಂಟೆಗಳ ಕಾಲ ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುತ್ತಾರೆ. ನೀರಿನ ಸಮಸ್ಯೆಗೆ ಸಂಬಂಧಿಸಿದ ಕರೆಗೆ ತಕ್ಷಣ ಸಂಬಂಧಿಸಿ ಸಂಬಂಧಪಟ್ಟ ಇಂಜಿನಿಯರ್, ಗ್ರಾಪಂ ಪಿಡಿಒಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ಅವರು ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಹೆಲ್ಪ್‌ಲೈನ್‌ಗೆ ಈವರೆಗೆ ಒಟ್ಟು 15 ದೂರುಗಳು ಬಂದಿದ್ದು, ಇದಕ್ಕೆ ತಕ್ಷಣ ಸ್ಪಂದಿಸಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಮಾಹಿತಿ ನೀಡಿದರು.
ಜಿಲ್ಲೆಯ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಕಿ ನಿಟ್ಟೆ, ಹೆಬ್ರಿ, ನಾಡ ಯೋಜನೆ ಈಗಾಗಲೇ ಪೂರ್ಣಗೊಂಡಿದೆ. 524 ಏಕಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಕಿ 413 ಕಡೆಗಳಲ್ಲಿ ಕಾಮಗಾರಿ ಪೂರ್ಣವಾಗಿದೆ. ನರೇಗಾದ ಮೂಲಕ ಮಳೆ ನೀರು ಕೊಯ್ಲು ಮಾಡಲು ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೂಡ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನೀರು ಶುದ್ಧೀಕರಣ ಘಟಕ
ಬೈಂದೂರು, ಕುಂದಾಪುರ, ಉಡುಪಿ ಹಾಗೂ ಕಾಪು ತಾಲೂಕಿನ ಕರಾವಳಿ ಪ್ರದೇಶದಲ್ಲಿರುವ ಗ್ರಾಪಂಗಳಲ್ಲಿ ಉಪ್ಪು ನೀರಿನ ಸಮಸ್ಯೆ ಇದ್ದು, ಇವುಗಳನ್ನು ಶುದ್ಧೀಕರಿಸಿ ಕುಡಿಯಲು ಯೋಗ್ಯವನ್ನಾಗಿಸುವ ಯೋಜನೆ ಇದೆ ಎಂದು ಜಿಪಂ ಸಿಇಒ ಪ್ರತೀಕ್ ಬಾಯಲ್ ತಿಳಿಸಿದ್ದಾರೆ.
ಇಲ್ಲಿನ ಕೆಲವು ಗ್ರಾಪಂಗಳ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲಿ ಬೇಸಿಗೆ ಯಲ್ಲಿ ಉಪ್ಪು ನೀರಿನ ಅಂಶಗಳು ಪತ್ತೆಯಾಗುತ್ತಿವೆ. ಇದರಿಂದ ಆ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪ್ಪು ನೀರಿನಲ್ಲಿರುವ ಉಪ್ಪಿನಾಂಶವನ್ನು ಕಡಿಮೆ ಮಾಡಿ ಕುಡಿಯುವ ನೀರನ್ನಾಗಿ ಮಾಡುವ ಶುದ್ಧೀಕರಣ ಘಟಕವನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದನ್ನು ಒಂದು ಕಡೆ ಪೈಲಟ್ ಯೋಜನೆಯಾಗಿ ಕೈಗೆತ್ತಿಕೊಳ್ಳಲು ಚಿಂತನೆ ಮಾಡಲಾಗಿದೆ. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಕುಡಿಯುವ ನೀರಿಗೆ ಸಂಬಂಧಿಸಿ ನಮ್ಮಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ಚುನಾವಣೆ ಸಂದರ್ಭದಲ್ಲೂ ಕುಡಿಯುವ ನೀರಿಗೆ ಆದ್ಯತೆ ನೀಡಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅದರಂತೆ ಪ್ರತೀ ಮನೆಮನೆಗೆ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರಾಣಿಗಳಿಗೆ ನೀರಿನ ಕೊರತೆ ಆಗದಂತೆ ಸಾಮಾಜಿಕ ಅರಣ್ಯ ಇಲಾಖೆಯವರೊಂದಿಗೆ ಸೇರಿ ಕಾರ್ಯಕ್ರಮ ರೂಪಿಸಲಾಗಿದೆ.
- ಪ್ರತೀಕ್ ಬಾಯಲ್, ಸಿಇಒ, ಜಿಪಂ ಉಡುಪಿ
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿ ಸಭೆ ಕರೆದು ಚರ್ಚಿಸಲಾಗುತ್ತಿದೆ. ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಪಂ ಪಿಡಿಒಗಳಿಗೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಟ್ಯಾಂಕರ್ ಹಾಗೂ ಬೋರ್‌ವೆಲ್‌ಗಳನ್ನು ಸಿದ್ಧಪಡಿಸಿ ಇಡಲಾಗಿದೆ. ಈವರೆಗೆ ಟ್ಯಾಂಕರ್ ನೀರು ಪೂರೈಸುವ ಅನಿವಾರ್ಯತೆ ಎದುರಾಗಿಲ್ಲ. ಉಡುಪಿ ನಗರದಲ್ಲಿ ಎಪ್ರಿಲ್ ಮಧ್ಯದವರೆಗೆ ನೀರಿನ ತೊಂದರೆ ಇಲ್ಲ ಎಂದು ಮಾಹಿತಿ ಬಂದಿದೆ. ಬರ ಪೀಡಿತ ತಾಲೂಕುಗಳಿಗೆ 4.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
- ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ