ಉಡುಪಿಯಲ್ಲಿ ಆರೋಗ್ಯ ಕ್ಷೇತ್ರ ಸಿಬ್ಬಂದಿ ಹುದ್ದೆ ಖಾಲಿ!
ಪಿಎಚ್ಸಿಒ, ಎಚ್ಐಒಗಳ ಕೊರತೆ: ಮಲೇರಿಯಾ, ಡೆಂಗಿ ನಿಯಂತ್ರಣಕ್ಕೆ ತೊಡಕು
Photo: freepik
ಉಡುಪಿ, ಮಾ.1: ಜಿಲ್ಲೆಯಲ್ಲಿ ಮಲೇರಿಯಾ, ಡೆಂಗಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಇವುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದರೆ ಕ್ಷೇತ್ರ ಸಿಬ್ಬಂದಿ(ಫೀಲ್ಡ್ ಸ್ಟಾಫ್)ಗಳ ಪಾತ್ರ ಬಹಳ ಮುಖ್ಯ. ಆದರೆ ಉಡುಪಿ ಜಿಲ್ಲೆಯಲ್ಲಿ ಶೇ.80ರಷ್ಟು ಕ್ಷೇತ್ರ ಸಿಬ್ಬಂದಿ ಹುದ್ದೆಗಳು ಖಾಲಿ ಬಿದ್ದಿರುವುದರಿಂದ ಈ ರೋಗಗಳನ್ನು ನಿಯಂತ್ರಿಸಲು ದೊಡ್ಡ ತೊಡಕಾಗಿದೆ.
ಆರೋಗ್ಯ ಇಲಾಖೆಯಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇರಿದಂತೆ ಒಟ್ಟು ಪ್ರತೀ ವರ್ಷ 53 ಕಾರ್ಯಕ್ರಮಗಳು ಇರುತ್ತವೆ. ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಕ್ಷೇತ್ರ ಸಿಬ್ಬಂದಿಯ ಪಾತ್ರ ಬಹಳ ಮುಖ್ಯವಾಗಿದೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸಿಬ್ಬಂದಿ ಕ್ಷೇತ್ರಕ್ಕೆ ತೆರಳಿ ಮನೆಮನೆ ಭೇಟಿ ನೀಡಿ ಆರೋಗ್ಯ ಕಾರ್ಯಕ್ರಮಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತಾರೆ.
ರಾಜ್ಯದಲ್ಲಿ ಮಲೇರಿಯಾ ಪ್ರಕರಣದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹೆಚ್ಚು. ಇಡೀ ದೇಶದಲ್ಲಿ 2030ರೊಳಗೆ ಮಲೇರಿಯಾವನ್ನು ಶೂನ್ಯಕ್ಕೆ ತರಬೇಕು ಎಂಬ ಗುರಿಯನ್ನು ಇಲಾಖೆ ಇಟ್ಟುಕೊಂಡಿದೆ. ಆ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲೂ ಮಲೇರಿಯಾ ಪ್ರಕರಣಗಳು ಇಳಿಮುಖ ಆಗಬೇಕಾಗಿದೆ. ಈ ಮಧ್ಯೆ ಕಳೆದ ಐದು ವರ್ಷಗಳಿಂದ ಡೆಂಗಿ ಪ್ರಕರಣಗಳು ವರ್ಷದಿಂದ ಜಾಸ್ತಿ ಆಗುತ್ತಲೇ ಇದೆ. ಅದೇ ರೀತಿ ಇತರ ಸಾಂಕ್ರಾಮಿಕ ರೋಗಳು, ನೀರಿನಿಂದ ಹರಡುವ ಕಾಯಿಲೆಗಳು ಜಿಲ್ಲೆಯಲ್ಲಿ ಕಂಡುಬರುತ್ತಲೇ ಇರುತ್ತದೆ.
ಖಾಲಿ ಇರುವ ಹುದ್ದೆಗಳು: ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕ್ಷೇತ್ರ ಸಿಬ್ಬಂದಿಯಾದ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿ(ಪಿಎಚ್ಸಿಒ) ಒಟ್ಟು 363 ಮಂಜೂರಾದ ಹುದ್ದೆಗಳಾದರೆ ಅವುಗಳಲ್ಲಿ 181 ಭರ್ತಿಯಾಗಿದ್ದು, 182 ಖಾಲಿ ಇವೆ. ಅದೇ ರೀತಿ ಆರೋಗ್ಯ ಪರಿವೀಕ್ಷಣಾ ಅಧಿಕಾರಿ (ಎಚ್ಐಒ) ಒಟ್ಟು ಮಂಜೂರಾದ 240 ಹುದ್ದೆಗಳ ಪೈಕಿ 28 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 212 ಹುದ್ದೆಗಳು ಖಾಲಿ ಬಿದ್ದಿವೆ. 1,028 ಆಶಾ ಕಾರ್ಯಕರ್ತೆರ ಹುದ್ದೆಗಳಲ್ಲಿ 980 ಭರ್ತಿಯಾಗಿದ್ದು, 48 ಹುದ್ದೆಗಳು ಖಾಲಿ ಇವೆ.
ಎಚ್ಐಒ ಹುದ್ದೆಗಳು ಶೇ.91 ಹುದ್ದೆಗಳು ಖಾಲಿ ಇವೆ. ಅದೇ ರೀತಿ ಜಿಲ್ಲೆಯಲ್ಲಿ ಸೀನಿಯರ್ ಎಚ್ಐಒ ಮತ್ತು ಸೀನಿಯರ್ ಪಿಎಚ್ಸಿಒ ಸುಮಾರು ಶೇ.80 ಹುದ್ದೆಗಳು ಖಾಲಿ ಇವೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳು ಶುಚಿಯಾಗಿ ಇರಬೇಕಾದರೆ ಗ್ರೂಪ್ ಡಿ ನೌಕರರು ಅಗತ್ಯವಾಗಿ ಇರಬೇಕು. ಆದರೆ ಜಿಲ್ಲೆಯಲ್ಲಿ ಮಂಜೂರಾದ 275 ಗ್ರೂ ಡಿ ಹುದ್ದೆಯಲ್ಲಿ 60 ಭರ್ತಿಯಾಗಿದ್ದು, 215 ಖಾಲಿ ಇವೆ. ಇದರಲ್ಲಿ 174 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ.
ಹುದ್ದೆಗಳ ಭರ್ತಿಗೆ ಮನವಿ: ಈ ಹುದ್ದೆಗಳು ಭರ್ತಿಯಾದರೆ ಜಿಲ್ಲೆಯಲ್ಲಿ ಮಲೇರಿಯಾ ಡೆಂಗಿವನ್ನು ಇನ್ನಷ್ಟು ಪರಿಣಾಮಕಾರಿ ಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈಗ ಇರುವ ಬೆರಳೆಣಿಕೆಯ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಅವರೇ ಮಾನಸಿಕ ರೋಗಗಳಿಗೆ ಗುರಿಯಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೆಲವರು ಕೆಲಸದ ಒತ್ತಡ ಹೆಚ್ಚಾಗಿ ಈ ಕರ್ತವ್ಯದಿಂದ ದೂರ ಹೋಗುವ ಸಾಧ್ಯತೆ ಕೂಡ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಡುಪಿಗೆ ಭೇಟಿ ನೀಡಿ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಂತಹಂತವಾಗಿ ಈ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದರು. ಅದೇ ರೀತಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದಲೂ ಸರಕಾರಕ್ಕೆ ಈ ಎಲ್ಲ ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ಮನವಿ ಕೂಡ ಮಾಡಲಾಗಿದೆ.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಹೊರಗುತ್ತಿಗೆ ಸಹಿತ ವಿವಿಧ ವಿಭಾಗಗಳಲ್ಲಿ ವೈದ್ಯರ ಕೊರತೆಯನ್ನು ನೀಗಿಸುವ ಬಗ್ಗೆ ಸಚಿವರ ಗಮನಕ್ಕೂ ತರಲಾಗಿದ್ದು, ಹಂತ-ಹಂತವಾಗಿ ನೇಮಕ ಮಾಡುವಂತೆ ಸೂಚನೆ ನೀಡಿದ್ದಾರೆ.
- ಡಾ.ಪಿ.ಐ.ಗಡಾದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಇಲಾಖೆಯಲ್ಲಿ ಒಟ್ಟಾರೆ 825 ಹುದ್ದೆಗಳು ಖಾಲಿ!
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 2,390 ಮಂಜೂರಾದ ಹುದ್ದೆಗಳ ಪೈಕಿ ಕರ್ತವ್ಯ ನಿರ್ವಹಿಸುವವರು 1,570 ಮಂದಿ ಮಾತ್ರ. ಉಳಿದ 825 ಹುದ್ದೆಗಳು ಖಾಲಿ ಬಿದ್ದಿವೆ.
ಜಿಲ್ಲೆಗೆ 38 ನುರಿತ ವೈದ್ಯಾಧಿಕಾರಿಗಳ ಹುದ್ದೆ ಇದ್ದು, ಈ ಪೈಕಿ 26 ಮಂದಿ ಕರ್ತವ್ಯ ನಿರ್ವಹಿಸಿಕೊಂಡಿದ್ದರೆ, 12 ಹುದ್ದೆಗಳು ಖಾಲಿ ಇವೆ. ಕ್ಯಾಶುವಲ್ಟಿ ಮೆಡಿಕಲ್ ಆಫೀಸರ್ಗಳ 8 ಹುದ್ದೆಯಲ್ಲಿ 6 ಹುದ್ದೆಗಳು ಭರ್ತಿಯಾಗಿದ್ದು, 2 ಖಾಲಿಯಿವೆ. 60 ಮಂದಿ ಎಂಬಿಬಿಎಸ್ ವೈದ್ಯರು ಕರ್ತವ್ಯ ನಿರ್ವಹಿಸಿ ಕೊಂಡಿದ್ದು, 1 ಹುದ್ದೆಯಷ್ಟೇ ಖಾಲಿ ಇದೆ. ಜಿಲ್ಲೆಯಲ್ಲಿ 7 ಮಂದಿ ಹೆರಿಗೆ ತಜ್ಞರಿಗೆ ಬೇಡಿಕೆಯಿದ್ದು, 3 ಮಂದಿ ಮಾತ್ರ ಕರ್ತವ್ಯ ನಿರ್ವಹಿಸಿಕೊಂಡಿದ್ದಾರೆ.
ಪಿಎಚ್ಸಿಒ, ಎಚ್ಐಒಗಳ ಕೆಲಸ ಏನು?
ಪಿಎಚ್ಎಸ್ಒಗಳು ಕ್ಷೇತ್ರದಲ್ಲಿ ಮನೆ ಮನೆಗಳಿಗೆ ತೆರಳಿ ತಾಯಿ ಮತ್ತು ಮಕ್ಕಳ ಆರೋಗ್ಯ, ಸಾಂಕ್ರಾಮಿಕ ರೋಗದ ಬಗ್ಗೆ ವಿಚಾರಿಸಿ, ಜನರಿಗೆ ಇಲಾಖೆಯ ಯೋಜನೆ, ಮಾಹಿತಿಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ. ಅದೇ ರೀತಿ ಆರೋಗ್ಯಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಕೂಡ ಸಂಗ್ರಹಿಸುವ ಕಾರ್ಯ ಮಾಡುತ್ತಾರೆ.
ಎಚ್ಐಒಗಳು ಕ್ಷೇತ್ರದಲ್ಲಿ ಸಾಂಕ್ರಾಮಿಕ ರೋಗಳಾದ ಮಲೇರಿಯಾ, ಡೆಂಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅದೇ ರೀತಿ ಡೆಂಗಿ ಹೆಚ್ಚು ಕಂಡು ಬರುವ ಪ್ರದೇಶಗಳಲ್ಲಿ ಕಾರ್ಯಯೋಜನೆ ತಯಾರಿಸಿ ಅದನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳುತ್ತಾರೆ. ಅದೇ ರೀತಿ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆ ಅಂಕಿ ಅಂಶಗಳನ್ನು ಕೂಡ ಸಂಗ್ರಹಿಸುತ್ತಾರೆ.