ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಮತ್ತು ಭಾರತ
ಡಿಸೆಂಬರ್ 10, 1948ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯು ಸ್ವಾತಂತ್ರ್ಯ, ಸಮಾನತೆ, ಬಂಧುತ್ವ ಮತ್ತು ಘನತೆಯ ಜೀವನದ ಕಡೆಗೆ ಒಂದು ಹೊಸ ಭಾಷ್ಯವನ್ನು ಸೂಚಿಸಿತ್ತು. ಈ 75 ವರ್ಷಗಳ ಪ್ರಯಾಣದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. 1920 ರಲ್ಲಿ ಲೀಗ್ ಆಫ್ ನೇಷನ್ಸ್ ಹುಟ್ಟುವುದರೊಂದಿಗೆ ಪ್ರಾರಂಭವಾದ ಈ ಜಾಗತಿಕ ಪ್ರಯತ್ನಗಳು,1945ರಲ್ಲಿ ಜಾಗತಿಕವಾಗಿ ವಿಶ್ವಸಂಸ್ಥೆ ಹುಟ್ಟಿಗೆ ಕಾರಣವಾದವು. ಈ ಬೆಳವಣಿಗೆ 1948ರಲ್ಲಿ ಮೊತ್ತ ಮೊದಲ ಬಾರಿಗೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (ಮಾಹಸಾಘೋ) ಅಧಿಕೃತವಾಗಿ ಅಂಗೀಕರಿಸುವಲ್ಲಿ ಯಶಸ್ವಿಯಾಯಿತು. ಮಾಹಸಾಘೋ ವಿಶ್ವದ ಮಾನವ ಹಕ್ಕುಗಳ ಶ್ರೇಷ್ಠ ಜೀವಂತ ದಾಖಲೆಗಳಲ್ಲಿ ಒಂದಾಗಿದ್ದು, ಅದು ಮಾನವೀಯತೆಯ ಸಾಮಾನ್ಯ ಭಾಷೆ ಹಾಗೂ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ವಿಶ್ವದ ಆತ್ಮಸಾಕ್ಷಿಯ ಸಂಕೇತವಾಗಿದೆ.
ನಾವು ಇಂದು ಮಾಹಸಾಘೋಯ 76ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಮಾಹಸಾಘೋಯನ್ನು ರೂಪಿಸುವಲ್ಲಿ ಭಾರತವೂ ಕೂಡ ಗಮನಾರ್ಹ ಕೊಡುಗೆ ನೀಡಿದೆ ಎಂಬುದನ್ನು ನಾವು ಹೆಮ್ಮೆಯಿಂದ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ನಮ್ಮ ಕೊಡುಗೆ ವಿಶ್ವಸಂಸ್ಥೆಯ ರಚನೆಗೆ, ಅದರಲ್ಲೂ ವಿಶೇಷವಾಗಿ ಅದು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಸಮಾನವಾಗಿ ನ್ಯಾಯ ಒದಗಿಸುವ ಜಾಗತಿಕ ಸಂಸ್ಥೆಯಾಗಬೇಕೆಂಬ ಆಶಯದೊಂದಿಗೆ ಪ್ರಭಾವ ಬೀರುವ ವಿಶಾಲ ಕಾರ್ಯತಂತ್ರದ ಭಾಗವೂ ಆಗಿತ್ತು.
ಲೀಗ್ ಆಫ್ ನೇಷನ್ಸ್ ರಚನೆಯ ನಂತರ ಹಾಗೂ 1948ರಲ್ಲಿ ಮಾಹಸಾಘೋಯನ್ನು ಅಳವಡಿಸಿಕೊಳ್ಳುವವರೆಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಸುವ ಭಾರತೀಯ ನಾಯಕತ್ವವು ಸ್ವಾತಂತ್ರ್ಯ ಹೋರಾಟದಿಂದ ಹೊರಹೊಮ್ಮಿದ ಮಾನವ ಹಕ್ಕುಗಳ ಕಾಳಜಿಯನ್ನು ಹಲವು ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿತು. ವಸಾಹತುಶಾಹಿ ಜನರ ಪರವಾಗಿ ಸ್ವರಾಜ್ಯದ ಹಕ್ಕನ್ನು ಚಲಾಯಿಸುವ ಮೂಲಕ ವಸಾಹತುಶಾಹಿಯನ್ನು ಕೊನೆಗೊಳಿಸಲು ಶ್ರಮಿಸುವ ಒಂದು ಜಾಗತಿಕ ಸಂಸ್ಥೆಯ ಸ್ಥಾಪನೆಗೆ ಅದು ಕರೆ ನೀಡಿತು. ಭಾರತೀಯ ಸ್ವಾತಂತ್ರ್ಯ ಚಳವಳಿಯ ವಿವಿಧ ಹಂತಗಳಲ್ಲಿ ಹೊರಹೊಮ್ಮಿದ ಮಾನವೀಯತೆಯ ಪರ ಆಲೋಚನೆಗಳ ಮೂಲಕ ವಿಶ್ವ ಸಂಘಟನೆಯ ನಿರ್ಮಾಣದ ಕಡೆಗೆ ಭಾರತದ ಪ್ರಯತ್ನ ನಿರ್ಣಾಯಕವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಹೀಗಾಗಿ, ವಿಶ್ವಸಂಸ್ಥೆ ಹಾಗೂ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ರೂಪಿಸುವತ್ತ ಭಾರತದ ವಿಚಾರಗಳು ಮತ್ತು ದೃಷ್ಟಿಕೋನಗಳ ಸಂಯೋಜನೆ ಕೇವಲ ಕಾಕತಾಳೀಯವಾಗದೆ ಮಹಾತ್ಮಾ ಗಾಂಧಿ ಹಾಗೂ ಇತರ ರಾಷ್ಟ್ರೀಯ ನಾಯಕರ ಮಾರ್ಗದರ್ಶನದಲ್ಲಿ ಜವಾಹರಲಾಲ್ ನೆಹರೂರವರು ಬಳಸಿದ ಯೋಜಿತ ಕಾರ್ಯತಂತ್ರವಾಗಿತ್ತು ಎಂಬುದು ಗಮನಾರ್ಹ ಅಂಶ.
1945ರ ಜೂನ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಅಂಗೀಕರಿಸುವ ಸಂದರ್ಭದಲ್ಲಿ, ಜಾಗತಿಕ ಸಂಸ್ಥೆಯಲ್ಲಿ ಭಾರತದ ಪಾತ್ರ ಹಾಗೂ ಅಂತಹ ಸಂಸ್ಥೆಯ ಕಲ್ಪನೆ ಮತ್ತು ಸ್ವರೂಪದ ಬಗ್ಗೆ ಭಾರತದ ನಾಯಕತ್ವ ತನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿತ್ತು. ಜೊತೆಗೆ, 1942ರ ಆಗಸ್ಟ್ 8ರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ಣಯವನ್ನು ಉಲ್ಲೇಖಿಸಿ ಮಹಾತ್ಮಾ ಗಾಂಧಿಯವರು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು. ಅದರಂತೆ, ‘‘ಭವಿಷ್ಯದ ಶಾಂತಿ, ಭದ್ರತೆ ಮತ್ತು ವಿಶ್ವದ ಕ್ರಮಬದ್ಧ ಪ್ರಗತಿಗೆ ಮುಕ್ತ ರಾಷ್ಟ್ರಗಳ ವಿಶ್ವ ಒಕ್ಕೂಟವನ್ನು ಬಯಸುತ್ತದೆ. ಸ್ವತಂತ್ರ ಭಾರತವು ಸಂತೋಷದಿಂದ ಅಂತಹ ವಿಶ್ವ ಒಕ್ಕೂಟಕ್ಕೆ ಸೇರುತ್ತದೆ ಮತ್ತು ಅಂತರ್‌ರಾಷ್ಟ್ರೀಯ ಸಮಸ್ಯೆಗಳ ಪರಿಹಾರದಲ್ಲಿ ಇತರ ದೇಶಗಳೊಂದಿಗೆ ಸಮಾನ ಆಧಾರದ ಮೇಲೆ ಸಹಕರಿಸುತ್ತದೆ. ಹೀಗಾಗಿ, ಭಾರತದ ಸ್ವಾತಂತ್ರ್ಯದ ಬೇಡಿಕೆಯಲ್ಲಿ ಯಾವುದೇ ರೀತಿಯಲ್ಲಿಯೂ ಸ್ವಾರ್ಥವಿಲ್ಲ. ಅದರ ರಾಷ್ಟ್ರೀಯತೆಯು ಅಂತರ್‌ರಾಷ್ಟ್ರೀಯತೆಯನ್ನು ಸೂಚಿಸುತ್ತದೆ’ ಎಂಬುದಾಗಿತ್ತು. ಇಂದು, ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತವನ್ನು ಒಂದು ಧರ್ಮ ಅಥವಾ ಜನಾಂಗದ ರಾಷ್ಟ್ರವನ್ನಾಗಿಸಲು ಹೊರಟಿರುವ ಶಕ್ತಿಗಳು ಭಾರತದ ಈ ಇತಿಹಾಸವನ್ನು ತಿಳಿಯುವ ಅಗತ್ಯವಿದೆ.
1947ರ ಡಿಸೆಂಬರ್‌ನಲ್ಲಿ ಮೊದಲ ‘ಜಿನೀವಾ’ ಕರಡು ಸಿದ್ಧವಾಗುವ ಹೊತ್ತಿಗೆ, ಭಾರತದ ಸಂವಿಧಾನ ಸಭೆಯು ಮೂಲಭೂತ ಹಕ್ಕುಗಳ ಚರ್ಚೆಗಳು ಸೇರಿದಂತೆ ತನ್ನ ಸಂವಿಧಾನದಲ್ಲಿ ಸೇರ್ಪಡೆಯಾಗಬೇಕಾದ ಅನೇಕ ವಿಷಯಗಳ ಬಗ್ಗೆ ಚರ್ಚಿಸಿತ್ತು. ಸಂವಿಧಾನ ಸಭೆಯ ಶ್ರೀಮಂತ ಚರ್ಚೆಗಳ ಮೂಲಕ ಹಲವು ವಿಷಯಗಳ ಮೇಲೆ ಪಡೆದ ಒಳನೋಟಗಳನ್ನು ಮಾಹಸಾಘೋಯ ಕರಡು ಹಂತಗಳಿಗೆ ಕೊಂಡೊಯ್ಯಲು ಭಾರತೀಯ ಪ್ರತಿನಿಧಿಗಳಿಗೆ ಸಾಧ್ಯವಾಯಿತು ಎಂಬುದು ಗಮನಾರ್ಹ ಅಂಶ. ಈ ಪ್ರಕ್ರಿಯೆಯಲಿ, ವಿವಿಧ ವಿಷಯಗಳ ಮೇಲೆ ಮಾಹಸಾಘೋಯ ರಚನೆಗೆ ಲಿಖಿತ ಮತ್ತು ಮೌಖಿಕ ಕೊಡುಗೆಗಳನ್ನು ಭಾರತ ನೀಡಿತು.
ಈ ಕೊಡುಗೆಯ ಕೆಲವು ಮುಖ್ಯಾಂಶಗಳೆಂದರೆ, ಮಹಿಳಾ ಹಕ್ಕುಗಳ ಚರ್ಚೆಯ ಭಾಗವಾಗಿ ಭಾರತವು ‘ಪುರುಷರು’ ಎಂಬ ಪದದ ಬದಲು ‘ಮಾನವರು’ ಎಂಬ ಬದಲಾವಣೆ; ತಾರತಮ್ಯರಹಿತದ ಚರ್ಚೆಯ ಭಾಗವಾಗಿ ಹಲವು ಮಾನದಂಡಗಳ ಜೊತೆಗೆ ‘ಬಣ್ಣ’ ಮತ್ತು ‘ರಾಜಕೀಯ ಅಭಿಪ್ರಾಯ’ ಎಂಬ ಪದಗಳ ಸೇರ್ಪಡೆ; ಚಲನೆಯ ಸ್ವಾತಂತ್ರ್ಯ ಕುರಿತಂತೆ ಭಾರತವು ‘ದೇಶದೊಳಗೆ ಚಲನೆಯ ಸ್ವಾತಂತ್ರ್ಯ’ಕ್ಕೆ ಕರೆ ನೀಡುವ ಅನುಚ್ಛೇದ; ಕೆಲಸದ ಹಕ್ಕಿನ ಭಾಗವಾಗಿ ‘ನ್ಯಾಯಯುತ ಮತ್ತು ಅನುಕೂಲಕರ ಕೆಲಸದ ಪರಿಸ್ಥಿತಿಗಳು’ ಎಂಬ ತತ್ವ ಮತ್ತು ಜಾತ್ಯತೀತತೆ, ಬಹುಸಾಂಸ್ಕೃತಿಕತೆ, ವಿಶ್ವಬಂಧುತ್ವ, ಅವಿಭಾಜ್ಯತೆ ಮತ್ತು ಎಲ್ಲಾ ಮಾನವ ಹಕ್ಕುಗಳ ಸಾರ್ವತ್ರಿಕತೆಯ ಬಗ್ಗೆ ಭಾರತ ಬಲವಾಗಿ ಪ್ರತಿಪಾದಿಸಿದ್ದಲ್ಲದೆ ಅವುಗಳು ಸಾರ್ವತ್ರಿಕ ಘೋಷಣೆಯಲ್ಲಿ ಸೇರುವಂತೆ ಗಣನೀಯ ಪಾತ್ರ ವಹಿಸಿತ್ತು.
ಒಟ್ಟಾರೆ, ಮಾಹಸಾಘೋಯ ಕರಡು ರಚನೆಯ ಸಮಯದಲ್ಲಿ ಭಾರತದ ನಾಯಕತ್ವವು ತನ್ನ ಹಲವು ದಶಕಗಳ ಸ್ವಾತಂತ್ರ್ಯ ಹೋರಾಟ ಮತ್ತು ಭಾರತೀಯ ಸಂವಿಧಾನ ರಚನಾ ಪ್ರಕ್ರಿಯೆಯಿಂದ ಸಾರ್ವತ್ರಿಕ ಘೋಷಣೆಯಿಂದ ಕಲಿತ ಹಲವು ಪಾಠಗಳನ್ನು ಮೌಖಿಕವಾಗಿ ಮತ್ತು ಲಿಖಿತವಾಗಿ ವರ್ಗಾಯಿಸಲು ಸಮರ್ಥವಾಗಿ ಕಾರ್ಯ ನಿರ್ವಹಿಸಿತು. ತುಳಿತಕ್ಕೊಳಗಾದ ಎಲ್ಲ ಜನರ ವಿಮೋಚನೆಯ ಬೇಡಿಕೆಗಳನ್ನು ಭಾರತ ಸಮರ್ಥವಾಗಿ ಮಂಡಿಸಿತು. ಅಂತಿಮವಾಗಿ, 10 ಡಿಸೆಂಬರ್ 1948ರಂದು ಪ್ಯಾರಿಸ್‌ನಲ್ಲಿ ನಡೆದ ತನ್ನ 3ನೇ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೂಲಕ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಲಾಯಿತು.
ಮಾಹಸಾಘೋಯನ್ನು ಅಂಗೀಕರಿಸಿದ ನಂತರದ ದಶಕಗಳಲ್ಲಿ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುವ ಜಾಗತಿಕ ಆಡಳಿತ ವ್ಯವಸ್ಥೆಯನ್ನು ರಚಿಸಲು ಭಾರತೀಯ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮೂಲಕ ತಮ್ಮ ಸಕ್ರಿಯ ಕೊಡುಗೆಯನ್ನು ಮುಂದುವರಿಸಿದರು. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯ ಕುರಿತು ಬಹಿರಂಗ ವಿರೋಧದ ಸಂದರ್ಭದಲ್ಲಿ ಭಾರತವು ವಿಶ್ವಸಂಸ್ಥೆಯ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರೀಕ್ಷಿಸಿತು. 1960ರ ದಶಕದಲ್ಲಿ ರಚಿಸಲಾದ ಎರಡು ಪ್ರಮುಖ ಒಡಂಬಡಿಕೆಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮತ್ತು ಸ್ವಯಂನಿರ್ಧಾರಾಧಿಕಾರದ ನಿರ್ಣಯವನ್ನು ಒತ್ತಾಯಿಸಲು ಭಾರತವು ‘ಜಾಗತಿಕ ದಕ್ಷಿಣ’ದ ಇತರ ದೇಶಗಳೊಂದಿಗೆ ಸೇರಿಕೊಂಡಿತ್ತು.
ವಿಶ್ವದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ರೂಪಿಸುವಲ್ಲಿ ಅಂದು ನಿರ್ಣಾಯಕ ಪಾತ್ರ ವಹಿಸಿದ ಭಾರತ, ಇಂದು ಮಾನವ ಹಕ್ಕುಗಳ ದಮನಕಾರಿ ಕಾಲಘಟ್ಟದಲ್ಲಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿ. ಜಾತಿ, ಧರ್ಮ ಹಾಗೂ ಜನಾಂಗೀಯ ನೆಲೆಯ ವಿನಾಶಕಾರಿ ಸಂಘರ್ಷಗಳು, ಬಗೆಹರಿಸಲಾಗದ ಸಾಮಾಜಿಕ -ಆರ್ಥಿಕ ಅಸಮಾನತೆಗಳು ಮತ್ತು ಈವರೆಗೆ ಪೂರ್ಣವಾಗಿ ಊಹೆಗೆ ನಿಲುಕದಿರುವ ಹೊಸ ಶಕ್ತಿಯುತ ತಂತ್ರಜ್ಞಾನಗಳ ಸವಾಲುಗಳು ಮಾನವನ ಬದುಕನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಒಂದು ಬಗೆಯ ಜನಾಂಗೀಯ ಶುದ್ಧೀಕರಣ ಹಾಗೂ ಮಣಿಪುರದಲ್ಲಿನ ಹಿಂಸಾಚಾರ ಮತ್ತು ವರ್ಣಭೇದ ನೀತಿಯಂತಹ ಸನ್ನಿವೇಶಕ್ಕೆ ಭಾರತವನ್ನು ಜವಾಬ್ದಾರಿಯನ್ನಾಗಿಸಬೇಕು. ಮುಂದುವರಿದು, ಕಾಶ್ಮೀರ ಮತ್ತು ಛತ್ತೀಸ್‌ಗಡದಲ್ಲಿ ಆಡಳಿತದ ಮಿಲಿಟರೀಕರಣ, ಭೂಕಬಳಿಕೆ ಹಾಗೂ ಏಕಪಕ್ಷೀಯ ಬಂಧನಗಳು ಮತ್ತು ಎನ್‌ಕೌಂಟರ್ ಹತ್ಯೆಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿವೆ.
ಸಮಸ್ಯೆಗಳು ಏನೇ ಇರಲಿ, ಎಷ್ಟೇ ಇರಲಿ ಮತ್ತು ಸಂದರ್ಭ ಯಾವುದೇ ಆಗಿರಲಿ, ಮಾನವ ಹಕ್ಕುಗಳನ್ನು ಗೌರವಿಸುವ ಮೂಲಕ ಮತ್ತು ಅವುಗಳನ್ನು ಎತ್ತಿ ಹಿಡಿಯುವ ಮೂಲಕ ನಾವು ನಮ್ಮ ಜಗತ್ತಿನ ಮಾನವ ಕುಟುಂಬಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ದೃಢನಿಶ್ಚಯವನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಮಾನವ ಹಕ್ಕು ಸಂಘಟನೆಗಳ ಚಳವಳಿಗಳು ಮತ್ತು ನಾಗರಿಕ ಸಮಾಜದ ಹೋರಾಟಗಳು ನಿರಂಕುಶ ಸರಕಾರಗಳಿಂದ ರಾಜಕೀಯ ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಒತ್ತಾಯಿಸುತ್ತಲೇ ಬಂದಿವೆ. ಅದೇ ನಾಗರಿಕ ಸಮಾಜಗಳು ಇಂದು ಮತ್ತೊಮ್ಮೆ ಎದ್ದು ನಿಲ್ಲುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕಿದೆ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಪ್ರಸ್ತಾವದಲ್ಲಿ ತಿಳಿಸಿದಂತೆ, ವಿಶ್ವ ಮಾನವ ಕುಟುಂಬದ ಎಲ್ಲಾ ಸದಸ್ಯರ ಅಂತರ್ಗತ ಘನತೆ ಮತ್ತು ಸಮಾನತೆ ಹಾಗೂ ವರ್ಗಾಯಿಸಲಾಗದ ಮಾನವ ಹಕ್ಕುಗಳನ್ನು ಗುರುತಿಸುವುದು ವಿಶ್ವದ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯ ಅಡಿಪಾಯವಾಗಿದೆ. ಆದರೆ, ಮಾನವ ಹಕ್ಕುಗಳ ನಿರ್ಲಕ್ಷ್ಯ ಮತ್ತು ತಿರಸ್ಕಾರವು ಮಾನವನ ಆತ್ಮಸಾಕ್ಷಿಯನ್ನು ಕೆರಳಿಸುವ ಅನಾಗರಿಕ ಕೃತ್ಯಗಳಿಗೆ ಕಾರಣವಾಗಿದೆ. ಜಗತ್ತಿನ ಮನುಕುಲ ಅಭಿವ್ಯಕ್ತಿ ಮತ್ತು ನಂಬಿಕೆಯ ಸ್ವಾತಂತ್ರ್ಯವನ್ನು ಆನಂದಿಸುವ ಮತ್ತು ಭಯಮುಕ್ತ ಸ್ವಾತಂತ್ರ್ಯದ ಬಯಕೆಯನ್ನು ಅತ್ಯುನ್ನತ ಆಶಯ ಎಂದು ಘೋಷಿಸಲಾಗಿದೆ.
ಮಾನವ ಹಕ್ಕುಗಳ ಒಪ್ಪಂದಗಳ ಅನುಮೋದನೆ, ಕಾನೂನು ಸುಧಾರಣೆ, ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಬಲವರ್ಧನೆಯಿಂದ ಹಿಡಿದು ಮಹಿಳೆಯರಿಗೆ ಅಥವಾ ವ್ಯವಹಾರ ಮತ್ತು ಮಾನವ ಹಕ್ಕುಗಳ ಸಮಾನತೆಯ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ಹಲವು ಕ್ಷೇತ್ರಗಳನ್ನು ಒಳಗೊಂಡಿವೆ. ಇದು ಮಾನವ ಹಕ್ಕುಗಳ ಚೌಕಟ್ಟಿನ ಸಾರ್ವತ್ರಿಕತೆ, ಪರಸ್ಪರ ಅವಲಂಬನೆ ಮತ್ತು ಅವಿಭಾಜ್ಯತೆಯ ಸ್ಪಷ್ಟ ಉದಾಹರಣೆಯಾಗಿದೆ. ಮಾನವ ಹಕ್ಕುಗಳನ್ನು ಕಸಿಯುವ ಅಥವಾ ಕಳಂಕತರುವ ಕೆಲವು ಪ್ರಯತ್ನಗಳ ಹೊರತಾಗಿಯೂ, ವಿಶ್ವಾದ್ಯಂತ ಮಾನವ ಹಕ್ಕುಗಳಿಗೆ ಗಮನಾರ್ಹ ಬೆಂಬಲವನ್ನು ಇಂದು ನಾವು ನೋಡಬಹುದಾಗಿದೆ. ಉದಾಹರಣೆಗೆ, ಜಾಗತಿಕ ಸಮೀಕ್ಷೆಯೊಂದಕ್ಕೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಮಾನವ ಹಕ್ಕುಗಳನ್ನು ಒಳ್ಳೆಯದಕ್ಕಾಗಿ ಶಕ್ತಿ ಎಂದು ಪರಿಗಣಿಸುವುದಲ್ಲದೆ ಅವುಗಳನ್ನು ವೈಯಕ್ತಿಕ ಮೌಲ್ಯಗಳೊಂದಿಗೆ ಸಮೀಕರಿಸುತ್ತಾರೆ. ಮಾನವೀಯತೆಯಾಗಿ ನಾವು ಎದುರಿಸಬೇಕಾದ ಸವಾಲುಗಳನ್ನು ಎದುರಿಸಲು ಒಗ್ಗೂಡಬೇಕಾದ ಸಮಯದಲ್ಲಿ ಮಾನವ ಹಕ್ಕುಗಳು ನಮ್ಮನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿವೆ.
ಭಾರತದಲ್ಲಿ ಮಾನವ ಹಕ್ಕುಗಳು ತೀವ್ರ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಮರಳಿ ಪಡೆಯಲು ನಾವು ಒಗ್ಗೂಡಬೇಕಿದೆ. ಒಂದು ಸಂಕುಚಿತ ರಾಜಕೀಯ ಉದ್ದೇಶಕ್ಕಾಗಿ ಮಾನವ ಹಕ್ಕುಗಳನ್ನು ಅಗೌರವಿಸುವ ಅಥವಾ ಅವುಗಳನ್ನು ಸಿನಿಕತನದಿಂದ ನಿರ್ಲಕ್ಷಿಸುವ ರಾಜಕೀಯ ಶಕ್ತಿಗಳ ವಿರುದ್ಧ ನಾವು ಸಂಘಟಿತರಾಗಿ ಹೋರಾಡಬೇಕಿದೆ. ಮಾನವ ಹಕ್ಕುಗಳನ್ನು ಕಡೆಗಣಿಸುವ ನಡೆ ಸಾಮಾಜಿಕ ಏಕತೆಗೆ ಬೆದರಿಕೆ ಒಡ್ಡುವುದಲ್ಲದೆ ಸಾಮರಸ್ಯವನ್ನು ಹಾಳುಮಾಡಿ ಅರಾಜಕತೆಯನ್ನುಂಟುಮಾಡುತ್ತದೆ. ಈ ಬಗೆಯ ಧೋರಣೆ ಅಂತರ್‌ರಾಷ್ಟ್ರೀಯ ಸಹಕಾರವನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದ, ಭಾರತದ ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಮತ್ತು ಮಾನವ ಹಕ್ಕುಗಳ ಪರಿಣಾಮಕಾರಿ ಜಾರಿಯ ಹೊಣೆ ಹೊತ್ತಿರುವ ಆಯೋಗಗಳು ಒಂದು ನಿರ್ದಿಷ್ಟ ಕಾರ್ಯಸೂಚಿ ರೂಪಿಸಬೇಕಿದೆ. ಈ ಕಾರ್ಯಸೂಚಿ ಕೆಳಗಿನ ರಾಜಿಯಿಲ್ಲದ ಅಂಶಗಳನ್ನು ಒಳಗೊಂಡಿರಬೇಕು.
ಮೊದಲನೆಯದಾಗಿ, ಮಾನವನ ಅಭಿವೃದ್ಧಿಗಾಗಿ ಮಾನವ ಹಕ್ಕುಗಳ ನಮ್ಮ ದಾರಿಯ ಆಯ್ಕೆ ಸ್ಪಷ್ಟವಾಗಿರಬೇಕು. ನಾವು ಬಯಸುವ ಭಾರತ ಮಾನವ ಹಕ್ಕುಗಳನ್ನು ಪೂರ್ಣವಾಗಿ ಸ್ವೀಕರಿಸಿ ಎತ್ತಿ ಹಿಡಿಯುವ ಮೂಲಕ ಶಾಂತಿಯುತ, ಸಮಾನ ಮತ್ತು ಸುಸ್ಥಿರ ಭಾರತವನ್ನು ಕಟ್ಟಲು ಬುನಾದಿಯಾಗಬೇಕು. ಮಾನವ ಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸುವ ಮೂಲಕ ಯಾವುದೇ ಬಗೆಯ ಉಲ್ಲಂಘನೆ ಅಥವಾ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಕಠಿಣ ಕ್ರಮವಹಿಸಬೇಕು. ಇಂದಿನ ಶಿಕ್ಷಣ, ಆರೋಗ್ಯ, ಉದ್ಯೋಗ, ಅಸಮಾನತೆ ಮತ್ತು ಘನತೆಯಿಂದ ಜೀವಿಸಲು ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಾನವ ಹಕ್ಕುಗಳ ಚೌಕಟ್ಟನ್ನು ಪ್ರೇರಕ ಶಕ್ತಿಯಾಗಿ ಬಳಸಬೇಕು.
ಎರಡನೆಯದಾಗಿ, ಮಾನವ ಹಕ್ಕು ಆಧಾರಿತ ದೃಷ್ಟಿಕೋನವು ಸಮಸ್ಯೆಗಳಿಗೆ ಒಂದು ಸಮಗ್ರ ಹಾಗೂ ದೀರ್ಘಕಾಲೀನ ಪರಿಹಾರ ಸೂತ್ರವನ್ನು ರೂಪಿಸಲು ಸರಕಾರಗಳಿಗೆ ವಿಪುಲ ಅವಕಾಶಗಳನ್ನು ನೀಡುತ್ತದೆ. ಸಂಕುಚಿತ ರಾಜಕೀಯ ಸಿದ್ಧಾಂತ ಅಥವಾ ಜನವಿರೋಧಿ ರಾಜಕೀಯ ಉದ್ದೇಶಗಳನ್ನು ಮೀರಿದ ಮಾನವ ಹಕ್ಕುಗಳ ದೃಷ್ಟಿಕೋನ ಮಾನವನ ಅಭಿವೃದ್ಧಿ ಮತ್ತು ಶಾಂತಿಯುತ ಸಹಬಾಳ್ವೆಗೆ ಹೊಸ ಅವಕಾಶಗಳನ್ನು ಕಲ್ಪಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಗೂ ಘನತೆ ಮತ್ತು ನ್ಯಾಯಯುತ ಜೀವನಕ್ಕಾಗಿ ನೈತಿಕ ಮತ್ತು ಕಾನೂನು ಚೌಕಟ್ಟಿನ ಬಲವನ್ನು ನೀಡುತ್ತದೆ.
ಮೂರನೆಯದಾಗಿ, ಮಾನವ ಹಕ್ಕುಗಳನ್ನು ನಾವು ಇಡಿಯಾಗಿ ನೋಡಬೇಕಿದೆ. ಅಂದರೆ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಎಲ್ಲಾ ಮಾನವ ಹಕ್ಕುಗಳನ್ನು ಸಂಪೂರ್ಣವಾಗಿ ಸ್ವೀಕರಿಸಬೇಕಿದೆ. ಜೊತೆಗೆ ಅಭಿವೃದ್ಧಿಯ ಹಕ್ಕು, ಆರೋಗ್ಯಕರ ಪರಿಸರದ ಹಕ್ಕು ಮತ್ತು ಶಾಂತಿಯುತ ಸಹಬಾಳ್ವೆಯ ಹಕ್ಕನ್ನು ಯಾವುದೇ ಕೃತಕ ವಿಭಜನೆಗಳಿಲ್ಲದೆ ಎಲ್ಲರಿಗೂ ಸಮಾನವಾಗಿ ಕಲ್ಪಿಸಬೇಕಿದೆ. ಮಾನವ ಹಕ್ಕುಗಳು ನಮ್ಮ ಆರ್ಥಿಕತೆಯನ್ನು ಮರುಸಮತೋಲನಗೊಳಿಸುವ ಕೇಂದ್ರ ಬಿಂದುವಾಗುವ ಮೂಲಕ ರಾಜಕೀಯ ಮತ್ತು ಸಾಮಾಜಿಕ ಅಸಮತೋಲನಗಳನ್ನು ತೊಡೆದು ಹಾಕುವ ಸಾಧನವಾಗಬೇಕು.
ನಾಲ್ಕನೆಯದಾಗಿ, ಮಾನವ ಹಕ್ಕುಗಳ ಜಾರಿಗಾಗಿ ನಾವು ಒಂದು ಬಲವಾದ ಜನಾಂದೋಲನಗಳ ಸಮನ್ವಯ ರೂಪಿಸಬೇಕಿದೆ. ಈ ಬಗೆಯ ಚಳವಳಿಗಳ ಚೈತನ್ಯ, ಚಲನಶೀಲತೆ ಮತ್ತು ವೈವಿಧ್ಯವು ಮಾನವ ಹಕ್ಕುಗಳ ನಿರಂತರ ನ್ಯಾಯಸಮ್ಮತತೆ ಮತ್ತು ಅವುಗಳ ಸಾರ್ವತ್ರಿಕ ಸ್ವರೂಪ ಮತ್ತು ಮುಂದಿನ ಭವಿಷ್ಯಕ್ಕಾಗಿ ಮಾನವ ಹಕ್ಕುಗಳ ಸ್ಥಿತಿಸ್ಥಾಪಕತ್ವವನ್ನು ಒತ್ತಿಹೇಳುತ್ತವೆ. ಈ ಬಗೆಯ ಜನಾಂದೋಲನಗಳು, ಮಾನವ ಹಕ್ಕುಗಳ ಜಾರಿಗಾಗಿ ತೊಡಗಿಕೊಂಡಿರುವ ನಾಗರಿಕ ಸಮಾಜದ ಸಂಘ-ಸಂಸ್ಥೆ, ರೈತ-ಕಾರ್ಮಿಕ-ಮಹಿಳಾ ಸಂಘಟನೆಗಳು, ಪರಿಸರವಾದಿಗಳು, ಅರ್ಥಶಾಸ್ತ್ರಜ್ಞರು, ತಂತ್ರಜ್ಞಾನ ತಜ್ಞರು, ವಿಜ್ಞಾನಿಗಳು, ಶಿಕ್ಷಣ ತಜ್ಞರು, ಕಲಾವಿದರು, ತತ್ವಜ್ಞಾನಿಗಳು, ಧಾರ್ಮಿಕ ಮುಖಂಡರು, ಅಧಿಕಾರಿಗಳು, ನೀತಿ ನಿರೂಪಕರು, ಲೋಕೋಪಕಾರಿ ಮುಂತಾದ ಸಂಘಟನೆಗಳು ಮಾನವ ಹಕ್ಕುಗಳ ಜಾರಿಗೆ ನಾಗರಿಕ ಸಮಾಜ ಮತ್ತು ರಾಜ್ಯಗಳ ನಡುವೆ ಉತ್ತಮ ಮೈತ್ರಿಗಳನ್ನು ನಿರ್ಮಿಸುವ ಅವಕಾಶವನ್ನು ಒದಗಿಸುತ್ತವೆ.
ಕೊನೆಯದಾಗಿ, ಜನರು ತಮ್ಮ ಹಕ್ಕುಗಳ ಬಗ್ಗೆ ಸೂಕ್ತ ತಿಳುವಳಿಕೆ ಪಡೆಯಲು ಮಾನವ ಹಕ್ಕುಗಳ ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸುವುದು ನಿರ್ಣಾಯಕವಾಗುತ್ತದೆ. ಇದು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದರ ಜೊತೆಗೆ ಇಡೀ ಸಮಾಜವು ಮಾನವ ಹಕ್ಕುಗಳ ಬಗ್ಗೆ ಸಂವಾದದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನವ ಹಕ್ಕುಗಳನ್ನು ಬೆಂಬಲಿಸುವ ಬಹುಸಂಖ್ಯಾತರ ತಂಡಗಳನ್ನು ಕಟ್ಟಿಕೊಳ್ಳಬೇಕು. ಈ ತಂಡಗಳು ಮಾನವ ಹಕ್ಕುಗಳ ಸಾರ್ವತ್ರಿಕತೆ ಅಥವಾ ಪ್ರಸ್ತುತತೆಯನ್ನು ಪ್ರಶ್ನಿಸುವವರನ್ನು ತಲುಪುವ ಮೂಲಕ ನಾವು ಮಾನವ ಹಕ್ಕುಗಳ ಅರಿವಿನ ಕಾರ್ಯಕ್ರಮಗಳನ್ನು ವಿಸ್ತರಿಸಬೇಕು. ಮಾನವ ಹಕ್ಕುಗಳ ಆಂದೋಲನವು ಪ್ರವರ್ಧಮಾನಕ್ಕೆ ಬರಬೇಕಾದರೆ, ಪ್ರತೀ ಪ್ರದೇಶದಲ್ಲಿ ನಾಗರಿಕ ಸ್ಥಳವು ಕ್ಷೀಣಿಸುತ್ತಿರುವ ಸ್ವೀಕಾರಾರ್ಹವಲ್ಲದ ಪ್ರವೃತ್ತಿಯನ್ನು ನಾವು ಎದುರಿಸಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ ಮತ್ತು ಸಭೆ ಸೇರುವ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರತಿಗಾಮಿ ಮತ್ತು ದಮನಕಾರಿ ನಡವಳಿಕೆಗಳನ್ನು ಸರಕಾರಗಳು ಕೊನೆಗೊಳಿಸಬೇಕು. ಮಾನವ ಹಕ್ಕುಗಳ ಪ್ರತಿಪಾದಿಸುವ ಕಾರ್ಯಕರ್ತರನ್ನು ಎಲ್ಲಾ ರೀತಿಯ ಬೆದರಿಕೆ ಮತ್ತು ದಾಳಿಯಿಂದ ರಕ್ಷಿಸಬೇಕಿದೆ. ಒಟ್ಟಾರೆ, ಯಾವುದೇ ಸರಕಾರಗಳಿರಲಿ ಮಾನವ ಹಕ್ಕುಗಳನ್ನು ಗುರುತಿಸುವ, ಗೌರವಿಸುವ ಮತ್ತು ಪರಿಣಾಮಕಾರಿ ಜಾರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಮೂಲಕ ಮಾನವ ಹಕ್ಕುಗಳ ಜಾರಿಗೆ ಕಟಿಬದ್ಧವಾಗಬೇಕಿದೆ.