Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿವಿಗಳೆಂದರೆ ಕೌಶಲ ತರಬೇತಿ ಕೇಂದ್ರಗಳಲ್ಲ

ವಿವಿಗಳೆಂದರೆ ಕೌಶಲ ತರಬೇತಿ ಕೇಂದ್ರಗಳಲ್ಲ

ನಿರಂಜನಾರಾಧ್ಯ ವಿ.ಪಿ.ನಿರಂಜನಾರಾಧ್ಯ ವಿ.ಪಿ.7 March 2025 3:39 PM IST
share
ವಿವಿಗಳೆಂದರೆ ಕೌಶಲ ತರಬೇತಿ ಕೇಂದ್ರಗಳಲ್ಲ
ಎನ್‌ಇಪಿಯ ಭಾಗವಾಗಿರುವ ಈ ವೃತ್ತಿ ತರಬೇತಿ ಕೇಂದ್ರಗಳನ್ನು ವಿನೂತನ ಮಾದರಿ ವಿಶ್ವವಿದ್ಯಾನಿಲಯಗಳೆಂದು ಮುಗ್ಧ ಜನರನ್ನು ನಂಬಿಸಿ ಮುಂದುವರಿಸಬೇಕಾದ ಅಗತ್ಯ ಖಂಡಿತ ಇರಲಿಲ್ಲ. ಇದು ಜನತೆಗೆ ಎಸಗಿದ ದ್ರೋಹ. ಈಗಿನ ಸರಕಾರ, ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾನಿಲಯಗಳನ್ನು ಮುಂದುವರಿಸದಿರುವ ಬಗ್ಗೆ ಚಿಂತಿಸುತ್ತಿರುವುದು ಸರಿಯಾದ ನಿರ್ಧಾರವಾಗಿದೆ. ಆದರೆ, ಸರಕಾರ ಇದನ್ನು ಕೇವಲ ಒಂದು ರಾಜಕೀಯ ಪ್ರತಿಕ್ರಿಯೆಯಾಗಿ ನೋಡದೆ, ಹಿಂದುಳಿದ ಜಿಲ್ಲೆಗಳ ಅವಕಾಶವಂಚಿತ ಬಡ ಮಕ್ಕಳಿಗೆ ನಿಜವಾದ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಹಿಂದಿನ ಬಿಜೆಪಿ ಸರಕಾರ 2022-23ರ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗಿದ್ದ ಏಳು ವಿಶ್ವವಿದ್ಯಾನಿಲಯಗಳನ್ನು ಈಗಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ ಮುಚ್ಚುತ್ತಿದೆ ಎಂಬ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ಅತ್ಯುನ್ನತ ಜ್ಞಾನ ಕೇಂದ್ರಗಳೆಂದೇ ಪರಿಭಾವಿಸುವ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಮೂಲ ಉದ್ದೇಶ, ಸ್ವರೂಪ ಮತ್ತು ಕ್ರಮದಲ್ಲಿಯೇ ದೋಷವಿದ್ದಾಗ, ಈ ವಿಶ್ವವಿದ್ಯಾನಿಲಯಗಳು ಅದರಲ್ಲೂ ವಿಶೇಷವಾಗಿ ಶೈಕ್ಷಣಿಕ ಹಿಂದುಳಿದ ಜಿಲ್ಲೆಗಳಿಗೆ ಏನು ಕೊಡುಗೆ ನೀಡುತ್ತವೆಯೆಂದು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಅಗತ್ಯವಿದೆ. ಈ ಸಂಬಂಧ, ಹಿಂದಿನ ಬಿಜೆಪಿ ಸರಕಾರ ಈ ಏಳು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಹೊರಡಿಸಿದ ಸರಕಾರದ ನಡವಳಿ, ಪ್ರಸ್ತಾವನೆ ಮತ್ತು ಸರಕಾರಿ ಆದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಹಿಂದಿನ ಸರಕಾರ ಹೇಗೆ ಜನರನ್ನು ಮೂರ್ಖರನ್ನಾಗಿಸುವ ಕೆಲಸವನ್ನು ಸೊಗಸಾಗಿ ಮಾಡಿತ್ತು ಎಂಬುದು ತಿಳಿಯುತ್ತದೆ. ಈಗಿನ ಸರಕಾರದ ತೀರ್ಮಾನವನ್ನು ಪ್ರಶ್ನಿಸುವವರು, ಹಿಂದಿನ ಸರಕಾರದ ಕಾಟಾಚಾರದ ಮತ್ತು ನೆಪ ಮಾತ್ರಕ್ಕೆ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಹಿಂದಿರುವ ಅನಾಲೋಚಿತ ಸೋಗಿನ ರಾಜಕಾರಣ ಅರ್ಥವಾಗುತ್ತದೆ.

ಯಾವುದೇ ಬಗೆಯ ಪೂರ್ವ ಸಿದ್ಧತೆಯಿಲ್ಲದೆ, ದೇಶದಲ್ಲಿ ಎನ್‌ಇಪಿ ಜಾರಿಗೊಳಿಸಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಯ ಮೂಲಕ ಕೇಂದ್ರದ ಮನಗೆಲ್ಲುವ ಕಾರ್ಯತಂತ್ರವಾಗಿ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 2022-23ರ ಆಯವ್ಯಯದಲ್ಲಿ ವಿನೂತನ ಮಾದರಿ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸುವ ಪ್ರಸ್ತಾವ ಮಾಡಿದ್ದರು. ಆಯವ್ಯಯ ಭಾಷಣದ ಕಂಡಿಕೆ 103ರಲ್ಲಿ ‘‘ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾನಿಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು’’ ಎಂದು ಘೋಷಿಸಿದ್ದರು. ‘‘ಈ ವಿಶ್ವವಿದ್ಯಾನಿಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚು ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯನಿರ್ವಹಿಸಲಿವೆ’’ ಎಂದು ಘೋಷಿಸಿದ್ದರು.

ಬಜೆಟ್‌ನ ಈ ಅಂಶವನ್ನು ಜಾರಿಗೊಳಿಸುವ ಭಾಗವಾಗಿ ಪ್ರಾರಂಭವಾದ ಈ ಏಳು ವಿಶ್ವವಿದ್ಯಾನಿಲಯಗಳು ಮೂಲದಲ್ಲಿಯೇ ವಿಶ್ವವಿದ್ಯಾನಿಲಯದ ಪರಿಕಲ್ಪನೆ ಮತ್ತು ಉದ್ದೇಶಕ್ಕೆ ತದ್ವಿರುದ್ಧವಾಗಿದ್ದವು ಎಂಬುದು ಗಮನಾರ್ಹ ಸಂಗತಿ. ಉದಾಹರಣೆಗೆ, ಮೇಲೆ ಹೇಳಿದಂತೆ ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ಒಂದು ವಿಶ್ವವಿದ್ಯಾನಿಲಯದ ಅವಶ್ಯಕತೆಯಿಲ್ಲ. ವಿಶ್ವವಿದ್ಯಾನಿಲಯವೊಂದರ ಮೂಲ ಉದ್ದೇಶ ಬಹು ಶಿಸ್ತೀಯ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಜ್ಞಾನದ ಹುಡುಕಾಟ ಹಾಗೂ ಹೊಸ ಜ್ಞಾನದ ಸೃಷ್ಟಿ. ಸಂಯೋಜಿತ ಕಾಲೇಜುಗಳಿಗೆ ಅಗತ್ಯ ಶೈಕ್ಷಣಿಕ ಬೆಂಬಲ ಒಂದು ಸಣ್ಣ ಭಾಗವಷ್ಟೆ. ಕಾಲೇಜುಗಳ ಮೇಲ್ವಿಚಾರಣೆಗೆ ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಪರಿಷತ್ತುಗಳಿರುವಾಗ, ಮೇಲ್ವಿಚಾರಣೆಗೆ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಅಗತ್ಯವಿತ್ತೇ ಎಂಬುದು ಮೂಲಭೂತ ಪ್ರಶ್ನೆಯಾಗುತ್ತದೆ.

2022-23ರ ಬಜೆಟ್ ಮತ್ತು ನವೆಂಬರ್ 2022ರ ಸರಕಾರಿ ಆದೇಶ ಈ ವಿಶ್ವವಿದ್ಯಾನಿಲಯಗಳು ವಿನೂತನ ಮಾದರಿಯ ವಿಶ್ವವಿದ್ಯಾನಿಲಯಗಳು ಎನ್ನುತ್ತವೆ. ಈ ‘ವಿನೂತನ ಮಾದರಿ’ ಗಂಟನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಒಂದು ವಿಶ್ವವಿದ್ಯಾನಿಲಯಕ್ಕೆ ಬೇಕಾದ ಯಾವ ಕನಿಷ್ಠ ಅಗತ್ಯಗಳು ಇಲ್ಲದಿರುವುದು ಬಯಲಾಗುತ್ತದೆ. ಉದಾಹರಣೆಗೆ, ನವೆಂಬರ್ 2022ರ ಆದೇಶ ಈ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಎರಡು ಪ್ರಮುಖ ಷರತ್ತುಗಳನ್ನು ಹಾಕಿದೆ. ಒಂದು, ಈ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಯಾವುದೇ ಜಮೀನನ್ನಾಗಲಿ, ವಾಹನವನ್ನಾಗಲಿ ಖರೀದಿಸುವಂತಿಲ್ಲ. ಹೊಸ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ, ಮಾತೃ ವಿಶ್ವವಿದ್ಯಾನಿಲಯಗಳಿಗೆ ಮುಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಮಾತ್ರ ಬಳಸಿಕೊಂಡು ಹೊಸದನ್ನು ಸ್ಥಾಪಿಸಬೇಕೇ ಹೊರತು ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ. ಹೊಸ ಹುದ್ದೆಗೆ ಪ್ರಸ್ತಾವನೆಯನ್ನೂ ಸಲ್ಲಿಸುವಂತಿಲ್ಲ. ಹೀಗಿದ್ದಲ್ಲಿ, ಜಮೀನು, ಕಟ್ಟಡ, ವಾಹನ ಹಾಗೂ ಅಗತ್ಯ ಬೋಧಕ ಸಿಬ್ಬಂದಿಯೇ ಇಲ್ಲದ ಈ ವಿಶ್ವವಿದ್ಯಾನಿಲಯಗಳು ಯಾವ ಬಗೆಯ ವಿನೂತನ ಮಾದರಿ ಎಂಬುದನ್ನು ಆ ದೇವರೇ ಬಲ್ಲ.

ಎರಡನೆಯ ಷರತ್ತೆಂದರೆ, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಸ್ಥಾಪಿಸಲ್ಪಟ್ಟ ಈ ವಿಶ್ವವಿದ್ಯಾನಿಲಯಗಳು, ಸಂಪೂರ್ಣವಾಗಿ ಡಿಜಿಟಲ್ ಮತ್ತು ಕಲಿಯುವಾಗಲೇ ದುಡಿಯುವ ಕೌಶಲಾಧಾರಿತ ಮಾದರಿಯ ವಿಶ್ವವಿದ್ಯಾನಿಲಯಗಳಂತೆ ಸ್ಥಾಪಿಸಲು ಕ್ರಮವಹಿಸಬೇಕೆಂಬುದು. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಈ ಜಿಲ್ಲೆಗಳಲ್ಲಿ ಜನರು ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಆಸ್ಪತ್ರೆ, ಶಾಲೆ ಇತ್ಯಾದಿ ಕನಿಷ್ಠ ಸೌಲಭ್ಯಗಳಿಗೆ ಪರದಾಡುತ್ತಿರುವಾಗ, ಸಂಪೂರ್ಣ ಡಿಜಿಟಲ್ ಮಾದರಿ ವಿಶ್ವವಿದ್ಯಾನಿಲಯಗಳ ಸ್ಥಾಪನೆ ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಜುಟ್ಟಿಗೆ ಮಲ್ಲಿಗೆ ಹೂ ಎಂದಂತಲ್ಲವೆ? ಸಂಪೂರ್ಣ ಡಿಜಿಟಲ್ ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ ಝೇಂಕಾರ ಮೊರೆತವಷ್ಟೆ.

ಗಮನಿಸಬೇಕಾದ ಮತ್ತೊಂದು ಮುಖ್ಯಾಂಶವೆಂದರೆ, ಈ ವಿನೂತನ ವಿಶ್ವವಿದ್ಯಾನಿಲಯಗಳಿಗೆ ಯಾವುದೇ ಸ್ವಾಯತ್ತತೆ ಅಥವಾ ತಮ್ಮದೇ ಆದ ಅಸ್ಮಿತೆ ಇಲ್ಲದಿರುವುದು. ಇವುಗಳ ಕಾರ್ಯ ನಿರ್ವಹಣೆಗೆ ನವೆಂಬರ್ 2022ರ ಆದೇಶದಲ್ಲಿನ ಷರತ್ತುಗಳು ಎಷ್ಟು ಬಾಲಿಷವಾಗಿವೆಯೆಂದರೆ, ಈ ವಿನೂತನ ವಿಶ್ವವಿದ್ಯಾನಿಲಯಗಳು ಸಂಯೋಜನೆಗೊಂಡಿರುವ ಮಾತೃ ವಿಶ್ವವಿದ್ಯಾನಿಲಯಗಳ ಅಡಿಯಾಳು ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸಬೇಕು. ಆದೇಶದಲ್ಲಿನ ಷರತ್ತುಗಳೆಂದರೆ, ನೂತನ ಏಳು ವಿಶ್ವವಿದ್ಯಾನಿಲಯಗಳು ಪ್ರಸಕ್ತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ಕಾರ್ಯ ನಿರ್ವಹಿಸತಕ್ಕದ್ದು; ನೂತನ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಯಾವುದೇ ಜಮೀನು ಖರೀದಿಸುವಂತಿಲ್ಲ ಹಾಗೂ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ; ಮಾತೃ ವಿಶ್ವವಿದ್ಯಾನಿಲಯಗಳಿಗೆ ಮುಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಈ ನೂತನ ವಿಶ್ವವಿದ್ಯಾನಿಲಯಗಳಿಗೆ ಬಳಸಿಕೊಳ್ಳಬೇಕು ಹಾಗೂ ಯಾವುದೇ ಹೊಸ ಹುದ್ದೆ ಸೃಜಿಸುವಂತಿಲ್ಲ; ಯಾವುದೇ ಹೊಸ ಹುದ್ದೆ ಸೃಜಿಸಲು ಪ್ರಸ್ತಾವನೆ ಸಲ್ಲಿಸುವಂತಿಲ್ಲ ಮತ್ತು ಸಂಪೂರ್ಣವಾಗಿ ಡಿಜಿಟಲ್ ಹಾಗೂ ಕೌಶಲಾಧಾರಿತ (entrepreneurial-earn while you learn) ಮಾದರಿಯಂತೆ ಕಾರ್ಯನಿರ್ವಹಿಸಬೇಕು. ವಿಶೇಷವೆಂದರೆ, ಈ ಬಗೆಯ ಚಿಂತನೆಗಳು ಹಾಗೂ ಷರತ್ತುಗಳು ಕೇವಲ ಕೆಳಸ್ತರದ ಮತ್ತು ಅವಕಾಶವಂಚಿತ ಗುಂಪುಗಳಿಗೆ ಸೇರಿದ ಸಾರ್ವಜನಿಕ ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ಹಂಬಲ ಹೊಂದಿರುವ ಮೊದಲ ಪೀಳಿಗೆಯ ವಿದ್ಯಾರ್ಥಿಗಳಿಗೆ. ಶ್ರೀಮಂತರ ಅಥವಾ ಮೇಲ್ವರ್ಗದ ವಿದ್ಯಾರ್ಥಿಗಳು ಕಲಿಯುವ ಖಾಸಗಿ ಅಥವಾ ಡೀಮ್ಡ್ ವಿಶ್ವ ವಿದ್ಯಾನಿಲಯಗಳಿಗೆ earn while you learn ತತ್ವ ಅನ್ವಯಿಸುವುದಿಲ್ಲ. ಇದು ಮುಂದುವರಿಯುತ್ತಿರುವ ಶಿಕ್ಷಣ ನಿರಾಕರಣೆಯ ಮತ್ತೊಂದು ಹೊಸ ಮುಖ.

ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹಿಂದಿನ ಬಿಜೆಪಿ ಸರಕಾರ ವಿಶ್ವವಿದ್ಯಾನಿಲಯಗಳನ್ನು ಉನ್ನತ ಶಿಕ್ಷಣದ ಜ್ಞಾನ ಮತ್ತು ಸಂಶೋಧನಾ ಕೇಂದ್ರಗಳನ್ನಾಗಿಸುವ ಬದಲು ಕೂಲಿ ಕಾರ್ಮಿಕರನ್ನು ತರಬೇತುಗೊಳಿಸುವ ವಿನೂತನ ಮಾದರಿ ವೃತ್ತಿ ತರಬೇತಿಯ ಅಪ್ರೆಂಟಿಸ್ ಕೇಂದ್ರಗಳನ್ನಾಗಿಸಲು ಪ್ರಯತ್ನಿಸಿತ್ತು. ಹಿಂದುಳಿದ ಶೈಕ್ಷಣಿಕ ಜಿಲ್ಲೆಗಳಿಗೆ, ಜಮೀನಿಲ್ಲದ, ಕಟ್ಟಡವಿಲ್ಲದ, ಬೋಧನಾ ಸಿಬ್ಬಂದಿಯಿಲ್ಲದ ಮತ್ತು ಯಾವುದೇ ಮೂಲಭೂತ ಸೌಕರ್ಯವಿಲ್ಲದ ವಿಶ್ವವಿದ್ಯಾನಿಲಯದ ಸ್ಥಿತಿ ಹೇಗಿರಬಹುದೆಂದು ಊಹಿಸಬಹುದು. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯುಚ್ಛಕ್ತಿ ಮತ್ತು ಇಂಟರ್‌ನೆಟ್ ಸೌಲಭ್ಯವೇ ಇಲ್ಲದ ಈ ಹಿಂದುಳಿದ ಜಿಲ್ಲೆಗಳಲ್ಲಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಮಾನವ ಸಂಪನ್ಮೂಲವಿಲ್ಲದೆ ಕಾರ್ಯನಿರ್ವಹಿಸುವ ವಿನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದು ಉನ್ನತ ಶಿಕ್ಷಣದ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳನ್ನು ಅಣಕಿಸುವಂತಿತ್ತು ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ.

ಈ ಹಿನ್ನೆಲೆಯಲ್ಲಿ, ಎನ್‌ಇಪಿಯ ಭಾಗವಾಗಿರುವ ಈ ವೃತ್ತಿ ತರಬೇತಿ ಕೇಂದ್ರಗಳನ್ನು ವಿನೂತನ ಮಾದರಿ ವಿಶ್ವವಿದ್ಯಾನಿಲಯಗಳೆಂದು ಮುಗ್ಧ ಜನರನ್ನು ನಂಬಿಸಿ ಮುಂದುವರಿಸಬೇಕಾದ ಅಗತ್ಯ ಖಂಡಿತ ಇರಲಿಲ್ಲ. ಇದು ಜನತೆಗೆ ಎಸಗಿದ ದ್ರೋಹ. ಈಗಿನ ಸರಕಾರ, ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾನಿಲಯಗಳನ್ನು ಮುಂದುವರಿಸದಿರುವ ಬಗ್ಗೆ ಚಿಂತಿಸುತ್ತಿರುವುದು ಸರಿಯಾದ ನಿರ್ಧಾರವಾಗಿದೆ. ಆದರೆ, ಸರಕಾರ ಇದನ್ನು ಕೇವಲ ಒಂದು ರಾಜಕೀಯ ಪ್ರತಿಕ್ರಿಯೆಯಾಗಿ ನೋಡದೆ, ಹಿಂದುಳಿದ ಜಿಲ್ಲೆಗಳ ಅವಕಾಶವಂಚಿತ ಬಡ ಮಕ್ಕಳಿಗೆ ನಿಜವಾದ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಈ ನಿಟ್ಟಿನಲ್ಲಿ ಸರಕಾರ ಪ್ರತೀ ಜಿಲ್ಲೆಯ ನೆರೆಹೊರೆಯ ವಿಶ್ವವಿದ್ಯಾನಿಲಯವನ್ನು ಗುರುತಿಸಿ ಅಧಿಸೂಚಿಸಬೇಕು. ಸರಕಾರ ಅಧಿಸೂಚಿಸುವ ನೆರೆಹೊರೆಯ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸುವ ಆಯಾ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು. ಈ ನೆರೆಹೊರೆಯ ವಿಶ್ವವಿದ್ಯಾನಿಲಯದಲ್ಲಿ ಖಾಯಂ ಬೋಧಕ ಸಿಬ್ಬಂದಿಯೂ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸರಕಾರ ಸಮಾನವಾಗಿ ಕಲ್ಪಿಸಬೇಕು. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಆಯಾ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಶಿಕ್ಷಣವನ್ನು ನಿರಾತಂಕವಾಗಿ ಮುಂದುವರಿಸಲು ಅಗತ್ಯ ಹಾಸ್ಟೆಲ್ ಸೌಲಭ್ಯ ಮತ್ತು ಶಿಷ್ಯವೇತನದ ಅವಕಾಶ ಕಲ್ಪಿಸಬೇಕು. ಮುಖ್ಯವಾಗಿ, ಈ ವಿಶ್ವವಿದ್ಯಾನಿಲಯಗಳು ಬಹುಶಿಸ್ತೀಯ ಜ್ಞಾನ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುವ ಎಲ್ಲಾ ಸೌಲಭ್ಯಗಳನ್ನು ಸರಕಾರ ಆದ್ಯತೆಯ ಮೇಲೆ ಒದಗಿಸುವ ಮೂಲಕ ಪ್ರಾಮಾಣಿಕವಾಗಿ ಹಿಂದುಳಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಲು ಮುಂದಾದಾಗ ಮಾತ್ರ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಇದು ಸಾಧ್ಯವಾಗಬೇಕಾದರೆ, ಮುಖ್ಯಮಂತ್ರಿಗಳು ಇಂದು ಮಂಡಿಸಲಿರುವ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವನ್ನು ಆದ್ಯತಾ ವಲಯವನ್ನಾಗಿ ಗುರುತಿಸಿ ಹೆಚ್ಚಿನ ಹಣ ಮೀಸಲಿಡಬೇಕು.

share
ನಿರಂಜನಾರಾಧ್ಯ ವಿ.ಪಿ.
ನಿರಂಜನಾರಾಧ್ಯ ವಿ.ಪಿ.
Next Story
X