ವಿಷಯಕ್ಕೊಂದು ವಿಶ್ವವಿದ್ಯಾನಿಲಯ ಬೇಕಿತ್ತೇ?

ವಿಶೇಷ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವುದು, ಅಂತರ್ ಶಿಸ್ತಿನ ಸಂಶೋಧನೆಯನ್ನು ಪ್ರೋತ್ಸಾಹಿಸುವುದು, ಕೈಗಾರಿಕಾ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವುದು, ವಿಶೇಷ ವಿಶ್ವವಿದ್ಯಾನಿಲಯಗಳಿಗೆ ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ ಜಾರಿಗೊಳಿಸುವುದು, ಭವಿಷ್ಯದ ಉದ್ಯೋಗ ಮಾರುಕಟ್ಟೆಯನ್ನು ಗಮನದಲ್ಲಿಟ್ಟು ಪಠ್ಯಕ್ರಮ ರೂಪಿಸುವಿಕೆ ಇಂದಿನ ತುರ್ತು ಅಗತ್ಯ. ಹೊಸ ವಿವಿಗಳ ಬದಲಾಗಿ ಇರುವ ವಿಶ್ವವಿದ್ಯಾನಿಲಯಗಳ ಬಲವರ್ಧನೆ, ಪ್ರಾಯೋಗಿಕ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ, ಗುಣಮಟ್ಟಕ್ಕೆ ಮೊದಲ ಆದ್ಯತೆ, ಶೈಕ್ಷಣಿಕ ಸಂಸ್ಥೆಗಳಿಗೆ ಹೆಚ್ಚು ಸ್ವಾಯತ್ತತೆ, ವಿದ್ಯಾರ್ಥಿಗಳಿಗೆ ಕಲಿಕೆಯ ಸ್ವಾತಂತ್ರ್ಯ ಇವುಗಳಿಗೆ ಗಮನ ನೀಡಬೇಕು.
ಭಾರತದ ಉನ್ನತ ಶಿಕ್ಷಣದ ನೀತಿಗಳು ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಹೆಚ್ಚು ಒಲವು ತೋರಿಸುತ್ತಿವೆ. ಆದರೆ ಅವುಗಳ ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನ ಸಂಪೂರ್ಣ ಶೂನ್ಯ. ವಿಷಯಕ್ಕೊಂದು ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದೇ ಮೊದಲ ತಪ್ಪು ಎಂದು ಈಗ ನಮಗೆ ಅನಿಸುತ್ತಿದೆ. ಗದಗದ ಗ್ರಾಮೀಣ ಅಭಿವೃದ್ಧಿ ವಿಶ್ವವಿದ್ಯಾನಿಲಯ, ಜಾನಪದ ವಿಶ್ವವಿದ್ಯಾನಿಲಯ, ಮಹಿಳಾ ವಿವಿ ಇತ್ಯಾದಿಗಳು ಮೂಲ ಗುರಿಯನ್ನು ಮರೆತು ಇತರ ವಿವಿಗಳಂತೆ ಇಂದು ಕೋರ್ಸ್‌ಗಳನ್ನು ನಡೆಸುತ್ತಿವೆ. ಇದರಿಂದ ಹಣ ಪೋಲಾಗುವುದಲ್ಲದೆ ಇನ್ನೇನೂ ಪ್ರಯೋಜನವಿಲ್ಲ. ಇದರೊಂದಿಗೆ ಎಲ್ಲವೂ ಪುನರಾವೃತ್ತಿ/ಡೂಪ್ಲಿಕೇಟ್ ಆಗುವ ಸಾಧ್ಯತೆಗಳಿವೆ. ಇವುಗಳು ಹೆಸರಿಗೆ ಮಾತ್ರ ವಿಶೇಷ ವಿವಿಗಳು. ಒಳ ಹೊಕ್ಕಿ ನೋಡಿದರೆ ಇವುಗಳಿಗೂ ಇತರ ಸಾಮಾನ್ಯ ವಿವಿಗಳಿಗೂ ಯಾವುದೇ ವ್ಯತ್ಯಾಸವೇ ಇಲ್ಲ. ವಿಶೇಷ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲು ಮೂಲಸೌಕರ್ಯ, ಅಧ್ಯಾಪಕರ ನೇಮಕಾತಿ, ಸಂಶೋಧನಾ ಸೌಲಭ್ಯ ಮತ್ತು ಆಡಳಿತಕ್ಕೆ ಹೆಚ್ಚಿನ ಹೂಡಿಕೆ ಅಗತ್ಯವಿದೆ. ಸರಕಾರದ ಸೀಮಿತ ಸಂಪತ್ತು ಅನೇಕ ಸಂಸ್ಥೆಗಳ ನಡುವೆ ಹಂಚಿಕೆ ಆಗಿರುವುದರಿಂದ ವಿವಿಗಳ ಮಧ್ಯೆ ಹಣಕಾಸಿನ ಹಂಚಿಕೆ ಪರಿಣಾಮಕಾರಿಯಾಗುವುದಿಲ್ಲ. ಇದು ಸರಕಾರಕ್ಕೆ ಅತಿಯಾದ ಆರ್ಥಿಕ ಹೊರೆಯಾಗುತ್ತಿದೆ. ಪ್ರತೀ ವಿಶ್ವವಿದ್ಯಾನಿಲಯಕ್ಕೆ ಪ್ರತ್ಯೇಕ ಅನುದಾನವನ್ನು ಸರಕಾರ ವಿನಿಯೋಗಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಯೋಜನೆಯಲ್ಲಿ ಅಸಮರ್ಪಕತೆ ಉಂಟಾಗಬಹುದು. ಬೇರೆ ಸಾಮಾನ್ಯ ವಿವಿಗಳಿಗೆ ಹಣ ಸಾಲದೆ ಹೋಗಬಹುದು. ಈ ಮಧ್ಯ ವಚನ ವಿವಿ, ಬುಡಕಟ್ಟು ವಿವಿ ಆರಂಭಕ್ಕೆ ಹೋರಾಟ ಬೇರೆ ನಡೆಯುತ್ತಿದೆ.
ವಿವಿಗಳ ಮೂಲಸೌಕರ್ಯ ಹಾಗೂ ಅಧ್ಯಾಪಕರ ಕೊರತೆ ಇನ್ನೊಂದು ಸಮಸ್ಯೆ. ಬಹುತೇಕ ವಿಶೇಷ ವಿಶ್ವವಿದ್ಯಾನಿಲಯಗಳು ಅಗತ್ಯ ಮೂಲಸೌಕರ್ಯವಿಲ್ಲದೆ ಇಂದು ಕಾರ್ಯನಿರ್ವಹಿಸುತ್ತಿವೆ (ಉದಾ: ಪ್ರಯೋಗಶಾಲೆಗಳು, ಗ್ರಂಥಾಲಯಗಳು, ಸಂಶೋಧನಾ ಕೇಂದ್ರಗಳು). ತ್ವರಿತಗತಿಯ ವಿಶ್ವವಿದ್ಯಾನಿಲಯಗಳ ಸ್ಥಾಪನೆಯು ಅರ್ಹ ಅಧ್ಯಾಪಕರ ಕೊರತೆಯನ್ನು ಉಂಟುಮಾಡಿದೆ. ಗುಣಾತ್ಮಕತೆ ಕುಸಿಯುವ ಪರಿಸ್ಥಿತಿಯನ್ನು ತಂದಿಟ್ಟಿದೆ. ವಿಶೇಷ ವಿವಿಗಳು ಮತ್ತು ಇತರ ವಿಶ್ವವಿದ್ಯಾನಿಲಯಗಳು ಒಂದೇ ತರಹದ ಪಠ್ಯಕ್ರಮಗಳನ್ನು ಒದಗಿಸುತ್ತಿವೆ. ಇದರಿಂದ ಪ್ರತಿಫಲವಿಲ್ಲದ ಪುನರಾವೃತ್ತಿ ಉಂಟಾಗುತ್ತಿದೆ. ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಬದಲಾಗಿ, ಈಗಿರುವ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ವಿಭಾಗಗಳನ್ನು ಬಲಪಡಿಸಬಹುದಿತ್ತು. ಆದರೆ ರಾಜಕೀಯ/ ಜಾತಿ ಹೋರಾಟ ಅದಕ್ಕೆ ಅವಕಾಶ ನೀಡುತ್ತಿಲ್ಲ. ವಿಶೇಷ ವಿಶ್ವವಿದ್ಯಾನಿಲಯಗಳು ಒಂದು ನಿರ್ದಿಷ್ಟ ವಿಷಯದ ಕಡೆ ಮಾತ್ರ ಗಮನ ಹರಿಸುತ್ತವೆ. ಇದರಿಂದ ಜಗತ್ತಿನ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಅಂತರ್‌ಶಾಸ್ತ್ರೀಯ ದೃಷ್ಟಿಕೋನ ಕಡಿಮೆಯಾಗುತ್ತ್ತಿದೆ. ಸೀಮಿತ ಶೈಕ್ಷಣಿಕ ಅನುಭವ ವಿದ್ಯಾರ್ಥಿಗಳಿಗೆ ಇದರಿಂದ ಸಿಗುತ್ತಿದೆ. ಕಾನೂನು ವಿಶ್ವವಿದ್ಯಾನಿಲಯ ಕೇವಲ ಕಾನೂನು ಅಧ್ಯಯನ ಮಾಡಬಹುದು, ಆದರೆ ಸಾರ್ವಜನಿಕ ಆಡಳಿತ ಅಥವಾ ಸಮಾಜಶಾಸ್ತ್ರದ ಅನುಭವವನ್ನು ಕಳೆದುಕೊಳ್ಳಬಹುದು. ಕೃಷಿ ವಿಶ್ವವಿದ್ಯಾನಿಲಯಗಳು ವ್ಯಾಪಾರ ನಿರ್ವಹಣೆ ಅಥವಾ ಪರಿಸರ ವಿಜ್ಞಾನದಲ್ಲಿ ಪ್ರವೇಶ ನೀಡದೆ, ವಿದ್ಯಾರ್ಥಿಗಳ ದೃಷ್ಟಿಕೋನವನ್ನು ಸೀಮಿತಗೊಳಿಸಬಹುದು. ಅಂತರ್ ಶಿಸ್ತಿನ ಕಲಿಕೆ ಸಾಮಾನ್ಯವಾಗಿ ವಿಭಿನ್ನ ವಿಷಯಗಳ ಸಂಯೋಜನೆಯಿಂದ ಆಗುತ್ತದೆ (ಉದಾ: ಆರೋಗ್ಯದಲ್ಲಿ ಕೃತಕ ಬುದ್ಧಿಮತ್ತೆ, ಕೃಷಿಯಲ್ಲಿ ಜೈವಿಕ ತಂತ್ರಜ್ಞಾನ). ಆದರೆ, ವಿಶಿಷ್ಟ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳನ್ನು ಇತರ ವಿಷಯಗಳನ್ನು ಕಲಿಯುವುದರಿಂದ ನಿರ್ಬಂಧಿಸುತ್ತವೆ. ಉದಾಹರಣೆ: ಕೃತಕ ಬುದ್ಧಿಮತ್ತೆಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ನೈತಿಕತೆ, ಮಾನವಜೀವಶಾಸ್ತ್ರ ಅಥವಾ ಅರ್ಥಶಾಸ್ತ್ರದ ಬಗ್ಗೆ ಸಾಕಷ್ಟು ತಿಳಿದಿಲ್ಲದೆ ಇರಬಹುದು. ಇದು ಕಲಿಕೆಯ ಸರಿಯಾದ ಬಳಕೆಯಾಗುವುದಿಲ್ಲ. ವಿಶೇಷ ವಿವಿಗಳ ಇನ್ನೊಂದು ಸಮಸ್ಯೆಗಳೆಂದರೆ ಪ್ರಮಾಣಪತ್ರ ಮತ್ತು ಗುಣಮಟ್ಟ ನಿಯಂತ್ರಣದ ಸಮಸ್ಯೆಗಳು. ಹೊಸ ವಿಶ್ವವಿದ್ಯಾನಿಲಯಗಳು ಮತ್ತು ಸಮಾಜದಲ್ಲಿ ಮಾರುಕಟ್ಟೆಯಲ್ಲಿ ಮಾನ್ಯತೆ ಪಡೆಯಲು ಹೋರಾಟ ಮಾಡುತ್ತವೆ. ಇವುಗಳ ಪ್ರಮಾಣ ಪತ್ರಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವುದೇ ಸಂದೇಹವಾಗಿದೆ. ಗುಣಮಟ್ಟದ ದೃಢೀಕರಣಗಳಿಲ್ಲದಿದ್ದರೆ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಪದವಿಗಳು ಉದ್ಯೋಗಕ್ಕೆ ಅಶಕ್ತವಾಗಬಹುದು.
ಇನ್ನೊಂದಡೆ ಆಂತರ್‌ರಾಷ್ಟ್ರೀಯ ಶ್ರೇಣಿಯಲ್ಲಿ ಭಾರತದ ವಿವಿಗಳು ಸದಾ ಹಿನ್ನಡೆ ಕಾಣುತ್ತಿವೆ. ಭಾರತದ ವಿಶ್ವವಿದ್ಯಾ ನಿಲಯಗಳು ಟಾಪ್ 100 ಜಾಗತಿಕ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಹರಸಾಹಸ ಮಾಡುತ್ತವೆ. ವಿಶೇಷ ವಿಶ್ವವಿದ್ಯಾನಿಲಯಗಳಿಗೆ ಪ್ರಖ್ಯಾತ ಸಂಶೋಧನಾ ಅನುದಾನ, ಶ್ರೇಷ್ಠ ಅಧ್ಯಾಪಕರು ಮತ್ತು ಸ್ಪರ್ಧಾತ್ಮಕ ಪಠ್ಯಕ್ರಮಗಳ ಕೊರತೆ ದೇಶದಲ್ಲಿ ಇದೆ. ಉದ್ಯೋಗಾರ್ಹತೆ ಮತ್ತು ಉದ್ಯೋಗ ಮಾರುಕಟ್ಟೆ ಸಂಬಂಧಿತ ಸಮಸ್ಯೆಗಳು ಆಳವಾದ ವಿಶೇಷೀಕರಣವು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ವೃತ್ತಿ ಅವಕಾಶಗಳನ್ನು ನೀಡುವುದು ಕಡಿಮೆ. ಉದ್ಯೋಗ ಮಾರುಕಟ್ಟೆ ಮತ್ತು ಶಿಕ್ಷಣದ ಅಸಮತೋಲನ ಇನ್ನೊಂದು ಸಮಸ್ಯೆ. ವಿಶೇಷ ವಿವಿಗಳ ಪದವಿಗಳು ಕೈಗಾರಿಕೆಗಳ ಅಗತ್ಯಗಳಿಗೆ ಹೊಂದಿಕೆಯಾಗದೆ ಇದ್ದರೆ, ವಿದ್ಯಾರ್ಥಿಗಳು ಉದ್ಯೋಗಾರ್ಹರಾಗುವುದಿಲ್ಲ. ಒಬ್ಬ ವಿದ್ಯಾರ್ಥಿಯು ಬದಲಾವಣೆಗೆ ಅವಕಾಶವಿಲ್ಲದ ಪಠ್ಯಕ್ರಮವನ್ನು ಅಭ್ಯಾಸ ಮಾಡಿದರೆ, ಮುಂದೆ ವಿವಿಧ ಉದ್ಯೋಗಾವಕಾಶಗಳು ಕಡಿಮೆಯಾಗಬಹುದು. ಉದಾಹರಣೆಗೆ ಕೇವಲ ಹವಾಮಾನ ಅಧ್ಯಯನಗಳ ವಿಶ್ವವಿದ್ಯಾನಿಲಯವು ಆಡಳಿತ ಅಥವಾ ಸಂವಹನ ಕೌಶಲ್ಯಗಳನ್ನು ಕಲಿಸದೇ ಇದ್ದರೆ, ವಿದ್ಯಾರ್ಥಿಗಳಿಗೆ ನಾಯಕತ್ವದ ಅವಕಾಶಗಳು ಕಡಿಮೆಯಾಗಬಹುದು. ಹೆಚ್ಚಿನ ಉತ್ಸಾಹದಿಂದ ಪ್ರಾರಂಭವಾಗುವ ಇಂತಹ ಸಂಸ್ಥೆಗಳು ಕೆಲವು ವರ್ಷಗಳ ನಂತರ ವಿದ್ಯಾರ್ಥಿ ದಾಖಲಾತಿ ಕೊರತೆ, ಕೈಗಾರಿಕಾ ಸಹಯೋಗದ ಅಭಾವ, ಹಾಗೂ ಹಣಕಾಸಿನ ತೊಂದರೆಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಉದಾಹರಣೆಗಳು ವಿದೇಶಗಳಲ್ಲಿ ಕಂಡುಬಂದಿದೆ.
ಇತ್ತೀಚೆಗೆ ವಿಶಿಷ್ಟ ವಿಷಯಗಳ ವಿಶ್ವವಿದ್ಯಾನಿಲಯಗಳು ಸಾಕಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಫಲಗೊಳ್ಳುತ್ತಿವೆ. ವಿರಳ ಕ್ಷೇತ್ರಗಳ ತಜ್ಞರ ಸಂಶೋಧನಾ ಅವಕಾಶಗಳ ಕೊರತೆಯಿಂದ ಇಂತಹ ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಹಿಂಜರಿಯುತ್ತಾರೆ. ವಿಶ್ವವಿದ್ಯಾನಿಲಯಗಳ ಮುಚ್ಚುವಿಕೆ ಅಥವಾ ವಿಲೀನಗೊಳ್ಳುವ ಸಂಭವ ಇಂತಹ ವಿವಿಗಳಿಗೆ ಹೆಚ್ಚಾಗಿರುತ್ತವೆ. ಇಂತಹ ಸಂಸ್ಥೆಗಳು ವೈಫಲ್ಯ ಕಂಡರೆ, ದೊಡ್ಡ ವಿಶ್ವವಿದ್ಯಾನಿಲಯಗಳೊಂದಿಗೆ ವಿಲೀನಗೊಳ್ಳಬಹುದು. ಇದರಿಂದ ಆಡಳಿತಾತ್ಮಕ ಗೊಂದಲ ಉಂಟಾಗಬಹುದು. ಇಂತಹ ವಿಶೇಷ ವಿವಿಗಳ ಶೈಕ್ಷಣಿಕ ಗುಣಮಟ್ಟ ನಿರ್ವಹಿಸುವಲ್ಲಿ ಹೆಚ್ಚುವರಿ ಬಾಧ್ಯತೆಗಳನ್ನು ಸರಕಾರ ಹೊಂದಬೇಕಾಗುತ್ತದೆ. ಹೆಚ್ಚುವರಿ ವಿಶ್ವವಿದ್ಯಾನಿಲಯಗಳ ನಿರ್ವಹಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೆಚ್ಚುವರಿ ಹಣ ಮತ್ತು ಹೊಣೆಗಾರಿಕೆ ಇರುತ್ತದೆ. ಕೆಲವು ವಿಶೇಷ ವಿಶ್ವವಿದ್ಯಾನಿಲಯಗಳು ಸರಿಯಾದ ಮಾನ್ಯತೆ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ ಎನ್ನುವ ಆರೋಪವಿದೆ.
ಇಂದು ಅನೇಕ ಹೊಸ ವಿಶ್ವವಿದ್ಯಾನಿಲಯಗಳು ಅಸಮರ್ಪಕ ಹಣಕಾಸಿನ ಸಮಸ್ಯೆ ಅನುಭವಿಸುತ್ತಿವೆ. ಇದು ಮೂಲಸೌಕರ್ಯ, ಅಧ್ಯಾಪಕರ ನೇಮಕಾತಿ ಮತ್ತು ಸಂಶೋಧನಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಸೀಮಿತ ಸಂಶೋಧನೆಯು ಸಾಮಾನ್ಯವಾಗಿ ಸೈದ್ಧಾಂತಿಕವಾಗಿ ಉಳಿಯುತ್ತದೆ ಮತ್ತು ಸಂಶೋಧನಾ ಫಲಗಳು ತಳಮಟ್ಟದ ಅನುಷ್ಠಾನಕ್ಕೆ ಯೋಗ್ಯವಾಗುವುದಿಲ್ಲ. ಅಧ್ಯಾಪಕರು ಮತ್ತು ಸಂಶೋಧಕರು ಹೆಚ್ಚಾಗಿ ಅಂತರ್ ಶಿಸ್ತಿನ ಸಂಶೋಧನೆಗೆ ಗಮನ ನೀಡುತ್ತಾರೆ. ಈ ಕಾರಣದಿಂದ ಇಂತಹ ವಿಶೇಷ ವಿವಿಗಳು ಉದ್ಯೋಗದಾತರು, ಕೈಗಾರಿಕೆಗಳು ಮತ್ತು ಸರಕಾರಿ ಸಂಸ್ಥೆಗಳೊಂದಿಗೆ ಬಲವಾದ ಸಹಯೋಗವನ್ನು ನಿರ್ಮಿಸಲು ಕಷ್ಟ ಪಡಬೇಕಾಗುತ್ತದೆ. ಇಂತಹ ವಿವಿಗಳಲ್ಲಿ ಡಿಜಿಟಲ್ ಸಂಪನ್ಮೂಲಗಳು ಮತ್ತು ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳು ಸೀಮಿತವಾಗಿರಬಹುದು. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಪರಿಣಾಮ ಬೀರುತ್ತದೆ. ಇದು ಆಗಾಗ ಖಾಲಿ ಹುದ್ದೆಗಳು ಮತ್ತು ಪರಿಣತಿಯ ಕೊರತೆಗೆ ಸಹ ಕಾರಣವಾಗುತ್ತದೆ.
ಸಮಸ್ಯೆಯ ಇನ್ನೊಂದು ಮುಖವೆಂದರೆ ರಾಜಕೀಯ ಮತ್ತು ಜಾತಿ ವ್ಯವಸ್ಥೆಯು ವಿವಿಗಳನ್ನು ಅಷ್ಟದಿಕ್ಕುಗಳಿಂದ ಮುತ್ತಿಕ್ಕಿರುವುದು. ನಮ್ಮ ದೇಶದ ವಿವಿಗಳು ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಪ್ರಮುಖ ಜಾತಿ/ಧರ್ಮ ತಾರತಮ್ಯವನ್ನು ಎದುರಿಸುತ್ತಿವೆ. ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ, ವಿಶಿಷ್ಟವಾಗಿ ಕೆಳವರ್ಗದ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿವಿಗಳಲ್ಲಿ ಶೈಕ್ಷಣಿಕ ಅವಕಾಶಗಳು ಕಡಿಮೆಯಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ. ಜಾತಿ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳಿಂದಾಗಿ, ಈ ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಕಟ ಅನುಭವಿಸುತ್ತಿದ್ದಾರೆ. ಅವರಿಗಾಗಿ ಸಮಾನ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ಬದಲು, ಉದ್ದೇಶ ಪೂರ್ವಕವಾಗಿ ವ್ಯವಸ್ಥೆಯಿಂದ ಹೊರಗಿಡಲಾಗುತ್ತಿದೆ. ಜಾತಿ ಮತ್ತು ಇತರ ಸಾಮಾಜಿಕ ಅಡೆತಡೆಗಳಿಂದಾಗಿ, ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರೊಂದಿಗೆ ಸಮಾನತೆಯ ಭಾವನೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಐಐಟಿ ಮುಂತಾದ ಉನ್ನತ ವಿದ್ಯಾಸಂಸ್ಥೆಗಳಲ್ಲಿಯೇ ಈ ಸ್ಥಿತಿ ಗಂಭೀರವಾಗಿ ವ್ಯಕ್ತವಾಗುತ್ತಿದ್ದು ವಿದ್ಯಾರ್ಥಿಗಳ ಕಲಿಕೆ ಹಾಗೂ ವೈಯಕ್ತಿಕ ಬೆಳವಣಿಗೆಯ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ.
ಇತ್ತೀಚಿನ ದಿನಗಳಲ್ಲಿ, ಭಾರತದ ವಿಶ್ವವಿದ್ಯಾನಿಲಯಗಳು ಹಲವಾರು ಸಾಂಸ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಅನೇಕ ಸರಕಾರಿ ವಿಶ್ವವಿದ್ಯಾನಿಲಯಗಳು ಆಡಳಿತ ವೈಫಲ್ಯ, ನಿರ್ವಹಣಾ ಅವ್ಯವಸ್ಥೆ ಹಾಗೂ ನೈತಿಕ ನಿರ್ಲಕ್ಷ್ಯ ಇತ್ಯಾದಿ ಸಮಸ್ಯೆಗಳಿವೆ. ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ಸಂಕುಚಿತತೆ ಮತ್ತು ತಂತ್ರಜ್ಞಾನವನ್ನು ಶೀಘ್ರವಾಗಿ ಅಳವಡಿಸಿಕೊಳ್ಳಲು ವಿಳಂಬ ಈ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಕುಂದಿಸುತ್ತಿದೆ. ವಿಶ್ವವಿದ್ಯಾನಿಲಯಗಳು ಸ್ವಾಯತ್ತವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಸ್ವಾತಂತ್ರ್ಯದ ಕೊರತೆ ಇದಕ್ಕೆ ಮತ್ತೊಂದು ಕಾರಣವಾಗಿದೆ. ಸರಕಾರದ ಅತಿಯಾದ ನಿಯಂತ್ರಣದಿಂದ ಈ ಶೈಕ್ಷಣಿಕ ಕೇಂದ್ರಗಳು ತಮ್ಮದೇ ಆದ ದೀರ್ಘಕಾಲೀನ ದೃಷ್ಟಿಕೋನ ಮತ್ತು ಕಾರ್ಯಪದ್ಧತಿಗಳನ್ನು ರೂಪಿಸುವಲ್ಲಿ ತೊಂದರೆಗೆ ಸಿಲುಕುತ್ತಿವೆ. ಪ್ರಪಂಚದಾದ್ಯಂತ, ಜರ್ಮನಿ, ಅಮೆರಿಕ ಮತ್ತು ಯುಕೆ ಮುಂತಾದ ದೇಶಗಳಲ್ಲಿ ವಿವಿಗಳಿಗೆ ಹೆಚ್ಚು ಸ್ವಾಯತ್ತತೆ, ಸಂಶೋಧನಾ ಪ್ರೋತ್ಸಾಹ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯವನ್ನು ಒದಗಿಸಲಾಗುತ್ತದೆ. ಈ ರಾಷ್ಟ್ರಗಳಲ್ಲಿ ಸರಕಾರಗಳ ಪಾತ್ರ ಮಿತವಾಗಿದ್ದು, ವಿವಿಗಳು ಹಣಕಾಸು ಸಹಾಯಕ್ಕಾಗಿ ಸಂಪೂರ್ಣವಾಗಿ ಸರಕಾರದ ಮೇಲೆ ಅವಲಂಬಿತವಾಗಿಲ್ಲ. ಆದರೆ ಭಾರತದಲ್ಲಿ, ವಿಶ್ವವಿದ್ಯಾನಿಲಯಗಳು ಪ್ರತಿಯೊಂದು ಪೈಸೆಗಾಗಿ ಸರಕಾರದ ಮಂಜೂರಾತಿಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ವಿವಿಗಳ ಶಿಕ್ಷಣದ ಗುಣಮಟ್ಟ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ಅಡ್ಡಿಯಾದಂತಾಗಿದೆ.
ವಿಶೇಷ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವುದು, ಅಂತರ್ ಶಿಸ್ತಿನ ಸಂಶೋಧನೆಯನ್ನು ಪ್ರೋತ್ಸಾಹಿಸುವುದು, ಕೈಗಾರಿಕಾ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವುದು, ವಿಶೇಷ ವಿಶ್ವವಿದ್ಯಾನಿಲಯಗಳಿಗೆ ಕಟ್ಟುನಿಟ್ಟಾದ ಗುಣಮಟ್ಟ ನಿಯಂತ್ರಣ ಜಾರಿಗೊಳಿಸುವುದು, ಭವಿಷ್ಯದ ಉದ್ಯೋಗ ಮಾರುಕಟ್ಟೆಯನ್ನು ಗಮನದಲ್ಲಿಟ್ಟು ಪಠ್ಯಕ್ರಮ ರೂಪಿಸುವಿಕೆ ಇಂದಿನ ತುರ್ತು ಅಗತ್ಯ. ಹೊಸ ವಿವಿಗಳ ಬದಲಾಗಿ ಇರುವ ವಿಶ್ವವಿದ್ಯಾನಿಲಯಗಳ ಬಲವರ್ಧನೆ, ಪ್ರಾಯೋಗಿಕ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ, ಗುಣಮಟ್ಟಕ್ಕೆ ಮೊದಲ ಆದ್ಯತೆ, ಶೈಕ್ಷಣಿಕ ಸಂಸ್ಥೆಗಳಿಗೆ ಹೆಚ್ಚು ಸ್ವಾಯತ್ತತೆ, ವಿದ್ಯಾರ್ಥಿಗಳಿಗೆ ಕಲಿಕೆಯ ಸ್ವಾತಂತ್ರ್ಯ ಇವುಗಳಿಗೆ ಗಮನ ನೀಡಬೇಕು. ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸಲು, ಹೊಸ ತಂತ್ರಜ್ಞಾನಗಳ ಅಳವಡಿಕೆ, ಉತ್ತಮ ಆಡಳಿತ ವ್ಯವಸ್ಥೆ ಮತ್ತು ಸಮಾನ ಶಿಕ್ಷಣದ ಅವಕಾಶಗಳ ಬಳಕೆ ಕಡ್ಡಾಯವಾಗಿ ನಿರ್ವಹಿಸಬೇಕು. ಭಾರತದ ವಿವಿಗಳ ಪ್ರಗತಿಗಾಗಿ ಸರಕಾರ, ಸಮುದಾಯ ಮತ್ತು ಶೈಕ್ಷಣಿಕ ವೃತ್ತಿಪರರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಇದರಿಂದ ಮಾತ್ರ ಭಾರತದ ವಿಶೇಷ ವಿಶ್ವವಿದ್ಯಾನಿಲಯಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಲು ಸಾಧ್ಯ.