ಜನಧ್ವನಿಯಾಗಿ ‘ವಾರ್ತಾಭಾರತಿ’
ಕಳೆದ ಕೆಲವು ವರ್ಷಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಯ ಕುರಿತು ಪ್ರಜ್ಞಾವಂತ ಜನರ ಮಧ್ಯೆ ಚರ್ಚೆಗಳು ನಡೆಯುತ್ತಿವೆ. ಯಾವುದೇ ಮಾಧ್ಯಮವೆಂಬುದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗಿದೆ. ಹೀಗಾಗಿ ಕಾರ್ಯಾಂಗ, ಶಾಸಕಾಂಗಗಳು ಜನವಿರೋಧಿ ನಿಲುವನ್ನು ಹೊರಹಾಕಿದಾಗಲೆಲ್ಲ ಮಾಧ್ಯಮಗಳು ಅವುಗಳನ್ನು ಸರಿದಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತವೆ ಎಂಬ ವಿಶ್ವಾಸ ಜನರಲ್ಲಿತ್ತು. ಹಾಗೆಯೇ ಮಾಧ್ಯಮಗಳು ನಿಷ್ಠುರವಾಗಿ ಜನಧ್ವನಿಯಾಗಿ ಕಾರ್ಯ ಮಾಡಿದ ಹಲವು ಪ್ರಸಂಗಗಳು ಇಂದಿಗೂ ಜನಮಾನಸದಲ್ಲುಳಿದಿವೆ. ಯಾಂತ್ರೀಕರಣದ ಬೆಳವಣಿಗೆಯಿಂದಾಗಿ ಮಾಧ್ಯಮಗಳು ಕಾಲಕ್ಕೆ ತಕ್ಕ ಹಾಗೆ ತನ್ನ ಬಾಹ್ಯ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಹಜ ಸಂಗತಿ. ಅದನ್ನು ಸಮಾಜವು ಒಪ್ಪಿದೆ. ಆದರೆ ಪ್ರಶ್ನೆಗಳಿರುವುದು ಅವುಗಳ ಧೋರಣೆಯ ಬಗ್ಗೆ. ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳು ಮಾಧ್ಯಮದ ಮೂಲ ಅಶಯ, ಆದರ್ಶಗಳಿಂದ ದೂರವಾಗಿರುವುದು ಅವು ತೆಗೆದುಕೊಳ್ಳುವ ನಿಲುವುಗಳಿಂದ ಅರ್ಥವಾಗುತ್ತದೆ. ಪತ್ರಿಕಾಧರ್ಮ, ಮಾಧ್ಯಮ ಧರ್ಮವೆಂಬುದು ಇಂದು ಕಣ್ಮರೆಯಾಗಿದೆ. ಮಾಧ್ಯಮಗಳು ಸಾಮಾಜಿಕ ಹೊಣೆಗಾರಿಕೆಯಿಂದ ಹೊರತಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಜ್ಞಾವಂತರು ಮಾಧ್ಯಮಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವರು. ಇಂತಹ ಹೊತ್ತಿನಲ್ಲಿ ಕರ್ನಾಟಕದಲ್ಲಿ ಬೆರಳೆಣಿಕೆಯ ಪತ್ರಿಕೆಗಳು ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ ಇನ್ನೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿವೆ ಎಂಬುದಕ್ಕಾಗಿ ವಾರ್ತಾಭಾರತಿ ಪತ್ರಿಕೆಯನ್ನು ಗೌರವಿಸುತ್ತಿರುವರು ಮತ್ತು ನಂಬಿಕೆಯಿಂದ ಓದುತ್ತಿರುವರು.
ನಾನು ಗಮನಿಸಿದಂತೆ ಕರ್ನಾಟಕದ ದಿನಪತ್ರಿಕೆಗಳಾಗಲಿ, ವಾರಪತ್ರಿಕೆಗಳಾಗಲಿ (ಆನ್‌ಲೈನ್, ಆಫ್‌ಲೈನ್) ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಧರ್ಮವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿವೆ ಎಂದು ನೋಡಿದರೆ ಖಂಡಿತವಾಗಿಯೂ ನಿರಾಶೆಯಾಗುತ್ತದೆ. ಅದರ ಮಧ್ಯದಲ್ಲಿಯೂ ಒಂದಿಷ್ಟು ಭರವಸೆಯನ್ನು ಉಳಿಸಿಕೊಂಡು ಅಚ್ಛೇ ದಿನಕ್ಕಾಗಿ ಕಾಯುವ ಆಸೆಯನ್ನು ‘ವಾರ್ತಾಭಾರತಿ’ಯಂತಹ ಪತ್ರಿಕೆ ಮೂಡಿಸುತ್ತಿದೆ. ಪ್ರಾರಂಭದಲ್ಲಿ ಸುತ್ತಮುತ್ತಲಿಗೆ ಸೀಮಿತವಾಗಿದ್ದ ಪತ್ರಿಕೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದುದ್ದಕ್ಕೂ ಕಾಣಿಸಿಕೊಂಡು ಓದುಗ ವರ್ಗದ ನಂಬಿಕೆಯನ್ನು ಉಳಿಸಿಕೊಂಡಿದೆ.
ಪತ್ರಿಕಾ ರಂಗವೂ ಉದ್ಯಮವಾಗಿ ಪರಿವರ್ತನೆಗೊಂಡಿರುವ ಹೊತ್ತಿನಲ್ಲಿ ‘ವಾರ್ತಾಭಾರತಿ’ ಸೈದ್ಧಾಂತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಧಾನವಾಗಿಟ್ಟುಕೊಂಡು ಪ್ರಕಟವಾಗುತ್ತಿರುವುದರಿಂದ ಪಟ್ಟಭದ್ರರಿಗೆ ನುಂಗಲಾರದ ತುತ್ತಾಗಿಯೂ ಪರಿಣಮಿಸಿದೆ. ಇಂದು ಎಲ್ಲ ಕ್ಷೇತ್ರಗಳು ಧರ್ಮ, ಜಾತಿ, ಸಂಪತ್ತಿನಾಧಾರದಲ್ಲಿ ವರ್ತಿಸುತ್ತಿರುವ ರೀತಿ ಆತಂಕಕಾರಿ ಬೆಳವಣಿಗೆಯೆನ್ನಬಹುದು. ಧರ್ಮ ನಿರಪೇಕ್ಷಿತ, ಜಾತ್ಯತೀತ, ವರ್ಗಹಿತಾಸಕ್ತಿಯನ್ನು ಮೀರಿ ಪತ್ರಿಕೆಯೊಂದನ್ನು ನಡೆಸುವುದು ಅತ್ಯಂತ ಪ್ರಯಾಸದ ಕೆಲಸ. ಅಂತಹ ಪ್ರಯಾಸದ ಕೆಲಸವನ್ನು ‘ವಾರ್ತಾಭಾರತಿ’ ಮಾಡುತ್ತಿದೆ. ಪತ್ರಿಕೆಯ ಹೆಸರಿನಲ್ಲಿಯೇ ಭಾರತಿ ಇರುವುದರಿಂದ ಆಕೆಯ ರಕ್ಷಣೆಯ ಹೊಣೆಗಾರಿಕೆ ವಾರ್ತೆಗಳ ಮೇಲಿರುತ್ತದೆ. ಶಾಂತಿಯ ತೋಟದಂತಿದ್ದ ಕರ್ನಾಟಕ, ಭಾರತದೊಳಗೆ ಇತ್ತೀಚಿನ ದಿನಗಳಲ್ಲಿ ಪ್ರಭುತ್ವದ ಸರ್ವಾಧಿಕಾರಿತನದ ಹಟಮಾರಿತನ ಮತ್ತು ಮತೀಯ ಶಕ್ತಿಗಳ ವಿಜೃಂಭಣೆಯಿಂದ ನಡೆದಿರುವ ಅನಾಹುತಗಳನ್ನು ಪತ್ರಿಕೆ ನಿರ್ಭಿಡೆಯಿಂದ ಪ್ರಕಟಿಸಿ ಸಾಮಾನ್ಯರಿಗೆ ಅರಿವು ಮೂಡಿಸಿದ್ದರ ಬಗ್ಗೆ ಹೆಮ್ಮೆಯಿದೆ.
ಮಾಧ್ಯಮ ಇಂದು ಎಡಬಲದಲ್ಲಿ ನಿಂತುಕೊಂಡು ಪ್ರಭುತ್ವವನ್ನು ಮುಖಾಮುಖಿಯಾಗುವ ಮಾರ್ಗದ ಮೇಲಿಂದ ಅದರ ಜನಪರತೆಯನ್ನು ಅಳೆಯಬಹುದಾಗಿದೆ. ಎಡದಲ್ಲಿರುವ ಬಲ, ಬಲದಲ್ಲಿರುವ ಎಡಗಳು, ಇದರಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ಹಲವು ಪ್ರಸಂಗಗಳು, ಘಟನೆಗಳನ್ನು ಪ್ರಕಟಿಸುವ ಪತ್ರಿಕೆಯ ಸಂಕಷ್ಟ ಎಂತಹದ್ದು ಎಂಬುದು ಕೂಡ ಗಮನಿಸಬೇಕಾದ ಸಂಗತಿಯೇ. ಪರಸ್ಪರ ಸ್ವಾರ್ಥಕ್ಕಾಗಿ ಪ್ರಭುತ್ವದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡದ್ದು ಅತ್ಯಂತ ಅಪಾಯಕಾರಿಯಾದ ಸಂಗತಿ. ಪತ್ರಿಕೆಯ ಸಂಪಾದಕ, ಮಾಲಕ ಎಡಬಲಗಳಾಚೆಗೆ ನಿಂತು ಸಮಾಜ, ರಾಜಕೀಯ, ದೇಶ ಭಾಷೆಗಳನ್ನು ಗಮನಿಸುವ ಜೀವಪರಧರ್ಮ ಮಾರ್ಗದಲ್ಲಿದ್ದರೆ ಮಾತ್ರ ಎಲ್ಲ ಮಿತಿಗಳ ಮಧ್ಯದಲ್ಲಿಯೂ ಜನಪರ ಧ್ವನಿಯಾಗಿ ಕಾರ್ಯ ಮಾಡಲು ಸಾಧ್ಯವೆಂಬುದನ್ನು ‘ವಾರ್ತಾಭಾರತಿ’ಯ ನೇತೃತ್ವ ವಹಿಸಿಕೊಂಡಿರುವ ಪ್ರಧಾನ ಸಂಪಾದಕರು ತೋರಿಸಿಕೊಟ್ಟಿರುವರು. ಕಳೆದ ಹತ್ತು ವರ್ಷದ ರಾಜಕೀಯ ವಿದ್ಯಮಾನಗಳು ದೇಶದೊಳಗೆ ಎಂತಹ ಭಯಾನಕತೆಯನ್ನು ಹುಟ್ಟುಹಾಕಿದ್ದವು ಎಂಬುದನ್ನು ಸವಿಸ್ತಾರವಾಗಿ ಜನರಿಗೆ ತಲುಪಿಸುವಲ್ಲಿ ‘ವಾರ್ತಾಭಾರತಿ’ ಮುಂಚೂಣಿಯಲ್ಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರೈತರ, ಮಹಿಳೆಯರ, ಕಾರ್ಮಿಕರ, ದಲಿತರ ಕುರಿತಂತೆ ರಾಜ್ಯ, ಕೇಂದ್ರ ಸರಕಾರಗಳು ತೆಗೆದುಕೊಂಡ ದಮನಕಾರಿ ಯೋಜನೆಗಳ ಕುರಿತು ಪತ್ರಿಕೆ ವಿರೋಧ ಪಕ್ಷದ ಧ್ವನಿಯಾಗಿ ಕೆಲಸ ಮಾಡಿರುವುದಕ್ಕಾಗಿ ಪತ್ರಿಕೆಯನ್ನು ಅಭಿನಂದಿಸುವೆ.
ಪತ್ರಿಕೆಯೊಳಗೆ ಜಾಗೃತ ಭಾರತದ ಹಲವು ಸ್ವರಗಳು ಮೇಳೈಸಿರುವ ಕಾರಣ ಪತ್ರಿಕೆ ಜಾತಿ ಧರ್ಮದ ಗಡಿ ಮೀರಿನಿಂತು ಕಾರ್ಯ ಮಾಡಲು ಸಾಧ್ಯವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ದೇಶ ಮತ್ತು ನಾಡಿನ ರಾಜಕೀಯ ವಿಷಯಗಳೊಂದಿಗೆ ಸಾಹಿತ್ಯಕ, ಸಾಂಸ್ಕೃತಿಕ ಸಂಗತಿಗಳಿಗೂ ಸ್ಥಳ ಮೀಸಲಿರುವುದರಿಂದ ಪತ್ರಿಕೆ ಎಲ್ಲ ವಲಯದ ಓದುಗರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿದೆ. ಪತ್ರಿಕೆಯ ಅತಿಮುಖ್ಯ ಸಂಗತಿ ಸಂಪಾದಕೀಯ ಮತ್ತು ಅಂಕಣ ಬರಹಗಳು. ಹಿರಿ-ಕಿರಿಯರು ಬರೆಯುವ ಅಂಕಣಗಳು ಸಾಮಾಜಿಕ ಮತ್ತು ರಾಜಕೀಯ ನಾಯಕರುಗಳು ಗಂಭೀರವಾಗಿ ಪರಿಗಣಿಸುವ ಹಲವಾರು ಸಂಗತಿಗಳನ್ನೂ ಒಳಗೊಂಡಿರುತ್ತವೆ. ಗುಹಾ, ಸನತ್‌ಕುಮಾರ್ ಬೆಳಗಲಿ, ರಾಜಶೇಖರ ಹತಗುಂದಿ, ನಿರಂಜನಾರಾಧ್ಯ, ನೆಲ್ಲುಕುಂಟೆ ವೆಂಕಟೇಶ ಮುಂತಾದವರು ಬರೆಯುವ ಅಂಕಣಗಳು ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಲೋಕದ ಮೇಲೆ ಬೆಳಕು ಚೆಲ್ಲುವಂತಿರುತ್ತದೆ. ಇಂದಿನ ದುರಿತ ಕಾಲದ ಕರ್ನಾಟಕದಲ್ಲಿಯ ರಾಜಕೀಯ ತಲ್ಲಣಗಳಿಗೆ ಸಾಂತ್ವನ ಮತ್ತು ಸಲಹೆ, ನೈತಿಕ ಬೆಂಬಲವನ್ನು ನೀಡುವ ಹಾಗೆ ಪತ್ರಿಕೆ ಹೊರಬರುತ್ತಿದೆ. ಕರ್ನಾಟಕದಲ್ಲಿ ಜನಬೆಂಬಲದೊಂದಿಗೆ ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ, ಅದರ ನಾಯಕರೊಂದಿಗೆ ಕೇಂದ್ರ ಸರಕಾರ ಮತ್ತು ರಾಜ್ಯದ ವಿರೋಧ ಪಕ್ಷದೊಳಗಿನವರೊಂದಿಗೆ ಆಳುವ ಪಕ್ಷದ ಜಾತಿವಾದಿ ಸ್ವಾರ್ಥಿಗಳು ಅಸಾಂವಿಧಾನಿಕ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಯಾವ ಪತ್ರಿಕೆಯಾಗಲಿ, ಚಾನೆಲ್‌ಗಳಾಗಲಿ ನಿಷ್ಠುರವಾಗಿ ವಾಸ್ತವತೆಯ ಕುರಿತು ಬರೆಯುತ್ತಿಲ್ಲ. ಆದರೆ ‘ವಾರ್ತಾಭಾರತಿ’ ಪ್ರಾರಂಭವಾದಾಗಿನಿಂದ ತನ್ನ ರಾಜಕೀಯ, ಸಾಮಾಜಿಕ ಬದ್ಧತೆಯನ್ನು ಸೈದ್ಧಾಂತಿಕವಾಗಿ ಪ್ರತಿಪಾದಿಸುತ್ತಿರುವ ಕಾರಣದಿಂದ ಪತ್ರಿಕೆ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾಗಿ ನಿಂತಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಕುರಿತು ಅತ್ಯಂತ ವೈಚಾರಿಕವಾಗಿ ಪತ್ರಿಕೆ ಸಮರ್ಥಿಸಿಕೊಂಡಿತ್ತು.
ಧಾರ್ಮಿಕ ತಳಹದಿಯ ಮೇಲೆ ದೇಶವೊಂದು ಸುಭದ್ರವಾಗಿ ನಿಂತ ಉದಾಹರಣೆ ಜಗತ್ತಿನಲ್ಲಿಯೇ ಇಲ್ಲವೆಂಬ ಸಂಗತಿಯನ್ನು ಸನಾತನವಾದಿಗಳಿಗೆ ಮನವರಿಕೆ ಮಾಡಿಕೊಡುವ ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಎಷ್ಟೋ ವಿಷಯಗಳು ಸಾಮಾಜಿಕ ಅರಿವನ್ನು ಮೂಡಿಸಿ ಘಟಿಸಬಹುದಾಗಿದ್ದ ಅನಾಹುತ ಗಳನ್ನು ತಪ್ಪಿಸಿವೆ. ಹಲಾಲ್ ಕಟ್, ಹಿಜಾಬ್‌ನಂತಹ ಸಂಗತಿಗಳ ಕುರಿತು ಪತ್ರಿಕೆ ನಡೆದುಕೊಂಡ ರೀತಿಯ ಸೂಕ್ಷ್ಮತೆಯನ್ನು ನೆನಪಿಸಿಕೊಳ್ಳುತ್ತಾ, ಜನಧ್ವನಿಯಾಗಿ ಪತ್ರಿಕೆ ಓದುಗರೊಂದಿಗಿರುವ ಕಾರಣಕ್ಕಾಗಿ ಪತ್ರಿಕೆ, ಅದರ ಎಲ್ಲ ಬರಹಗಾರರು, ಶಕ್ತಿದಾತ ರನ್ನು ಅಭಿನಂದಿಸುತ್ತೇನೆ. ಪ್ರಜಾಪ್ರಭುತ್ವದ ಶಕ್ತಿ ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಟ್ಟುವುದರ ಮೂಲಕ ದೇಶವನ್ನು ಮುನ್ನಡೆಸುವುದು. ಇಂತಹ ಮುನ್ನಡಿಗೆಯಲ್ಲಿ ಪತ್ರಿಕೆಯು ಹೆಜ್ಜೆ ಹಾಕಲಿ.