ಶೋಷಿತರ, ದಮನಿತರ ಧ್ವನಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿರುವ ವಾರ್ತಾಭಾರತಿ
ಸುಮಾರು 20 ವರ್ಷಗಳಿಂದ ಹವ್ಯಾಸಿ ಪತ್ರಕರ್ತನಾಗಿ, ಮಾಧ್ಯಮ ಪ್ರತಿನಿಧಿಗಳ ಒಡನಾಡಿಯಾಗಿರುವ ನಾನು ವಾರ್ತಾಭಾರತಿಯ ದೈನಂದಿನ ಓದುಗರಲ್ಲಿ ಒಬ್ಬ. ನಾನು ವಾರ್ತಾ ಭಾರತಿ ಬಿಡುಗಡೆಗೂ ಮುನ್ನ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಇದೀಗ ವಾರ್ತಾಭಾರತಿ 21 ವರ್ಷಗಳಿಂದ ಕನ್ನಡಿಗರ ದಿನಪತ್ರಿಕೆಯಾಗಿ ಹೆಮ್ಮರವಾಗಿ ಬೆಳೆದು ನೈಜ ಪತ್ರಿಕಾ ಧರ್ಮವನ್ನು ಪಾಲಿಸಿ ಸಮಾಜದ ಶೋಷಿತರ, ದಮನಿತರ ಧ್ವನಿಯಾಗಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎನ್ನಲು ನನಗೆ ಅತೀವ ಹೆಮ್ಮೆಯಿದೆ.
ವಾರ್ತಾಭಾರತಿ ಆರಂಭದ ದಿನಗಳಿಂದ ಇಂದಿನ ಯಶಸ್ವಿ ಪಯಣದಲ್ಲಿ ಪ್ರತೀ ದಿನ ಹೋರಾಟ ಮಾಡಿದೆ. ದೇಶದ ಬಹುತೇಕ ಮಾಧ್ಯಮ ಬಂಡವಾಳಶಾಹಿಗಳ ಹಿಡಿತದಲ್ಲಿರುವ ದಿನಗಳಲ್ಲಿ ಕೇವಲ ಜನಸಾಮಾನ್ಯರ ಬೆಂಬಲದಿಂದ ಎರಡು ದಶಕಗಳಿಂದ ನಿರ್ಭೀತಿಯಿಂದ ಪತ್ರಿಕೋದ್ಯಮ ನಡೆಸುತ್ತಿರುವ ವಾರ್ತಾಭಾರತಿ ಈ ಎತ್ತರಕ್ಕೆ ಬೆಳೆಯಲು ಕಾರಣಕರ್ತರಾದ ಎಲ್ಲಾ ಸಿಬ್ಬಂದಿ ವರ್ಗದ ಕಾರ್ಯವೈಖರಿಯನ್ನು ಮರೆಯುವಂತಿಲ್ಲ.
ಉತ್ತಮ ಸಮಾಜವನ್ನು ರೂಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹು ಮುಖ್ಯ. ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಿ, ಪ್ರಜೆಗಳು ಮತ್ತು ಸರಕಾರದ ಮಧ್ಯೆ ಕೊಂಡಿಯಾಗಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಾಗಿದೆ. ಸಾರ್ವಜನಿಕರು ಮಾಧ್ಯಮಗಳ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಗೊಳ್ಳುವ ರೀತಿಯಲ್ಲಿ ಮಾಧ್ಯಮಗಳು ಕಾರ್ಯನಿರ್ವಹಿಸಬೇಕಾದ ಆವಶ್ಯಕತೆಯಿದೆ. ಪ್ರಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಮಾಧ್ಯಮ ಸದಾ ಹದ್ದಿನ ಕಣ್ಣಿಟ್ಟಿರಬೇಕು. ಸಂವಿಂಧಾನದ ಕಾವಲು ನಾಯಿಯಂತೆ ಅತ್ಯಂತ ವಿಶ್ವಾಸದಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು. ಅದು ಮಾಧ್ಯಮದ ಜವಾಬ್ದಾರಿಯೂ ಆಗಿದೆ. ಈ ಕೆಲಸವನ್ನು ಕಳೆದ 21 ವರ್ಷಗಳಿಂದ ಅಚ್ಚುಕಟ್ಟಾಗಿ, ನಿರಂತರವಾಗಿ ಮಾಡುತ್ತಾ ಬಂದಿರುವ ವಾರ್ತಾಭಾರತಿ ಶತವರ್ಷಗಳನ್ನು ದಾಟಲಿ ಎಂದು ಹಾರೈಸುವೆ.
ಜೊತೆಗೆ ಜನರು ಈ ಪತ್ರಿಕೆಯ ಮೇಲೆ ಅತ್ಯಂತ ಹೆಚ್ಚಿನ ವಿಶ್ವಾಸವನ್ನಿಟ್ಟಿದ್ದಾರೆ. ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ವಾರ್ತಭಾರತಿ ಮುಂದುವರಿದು ಇನ್ನಷ್ಟು ಎತ್ತರಕ್ಕೆ ಬಳೆಯಲಿ ಎಂದು ಆಶಿಸುತ್ತೇನೆ.
-ಮನ್ಸೂರ್ ಅಹ್ಮದ್ ಸಾಮಣಿಗೆ
ಹವ್ಯಾಸಿ ಪತ್ರಕರ್ತ