ವಾರ್ತಾಭಾರತಿ 21ನೇ ವರ್ಷದ ಸಂಭ್ರಮ
ಪತ್ರಿಕೆಯ ಓದುಗಳೆನ್ನುವುದೇ ಹೆಮ್ಮೆ
ನಜ್ಮಾ ನಜೀರ್, ಚಿಕ್ಕನೇರಳೆ
ಕನ್ನಡದ ಜಾಣ ಜಾಣೆಯರ ನೆಚ್ಚಿನ ಲಂಕೇಶರ ‘ಲಂಕೇಶ್ ಪತ್ರಿಕೆ’ಯನ್ನಾಗಲಿ, ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ವನ್ನಾಗಲಿ ಕಾಣದ ನಾವು ಬರೀ ಹಳೆ ಪ್ರತಿಗಳನ್ನು ಅಲ್ಲಲ್ಲಿ ಇಂಟರ್‌ನೆಟ್‌ನಲ್ಲಿ ಓದಿಕೊಂಡೋ, ಹಿರಿಯರು ಹೇಳಿದ್ದನ್ನು ಕೇಳಿಕೊಂಡೋ ಯುವಾವಸ್ಥೆಯನ್ನು ಕಳೆಯುತ್ತಿರುವ ನಮಗೆ ಕನ್ನಡ ಪತ್ರಿಕೋದ್ಯಮ ಇನ್ನು ಪರಿಪೂರ್ಣವಾಗಿ ಕುಲಗೆಟ್ಟುಹೋಗಿಲ್ಲ ಎಂಬ ಸಮಾಧಾನವೊಂದಕ್ಕೆ ಕಾರಣ ‘ವಾರ್ತಾಭಾರತಿ’.
ಹಿಂಸೆ, ಪ್ರಚೋದನೆಗಳಿಗೆ ಪತ್ರಿಕೆಗಳನ್ನು ಸರಕಾಗಿ ಬಳಸಿಕೊಳ್ಳುವ ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಸಮುದಾಯವನ್ನು ಗುರಿಪಡಿಸಲೆಂದೇ ಪತ್ರಿಕೆಯನ್ನು ನಡೆಸುವ ಪತ್ರಿಕೋದ್ಯಮಿಗಳ ನಡುವೆ ಈ ನೆಲದ ಜನರ ನಿಜವಾದ ಭಾವನೆಗಳನ್ನು ಬಿತ್ತರಿಸುವ ಈ ನೆಲದ ಕಸುವು ಹಾಳಾಗದಂತೆ ಅರೆ ಕ್ಷಣವು ಎಚ್ಚರ ತಪ್ಪದೆ ನಿಷ್ಪಕ್ಷಪಾತ ವರದಿಗಾರಿಕೆ ಮಾಡುತ್ತಿರುವ ‘ವಾರ್ತಾಭಾರತಿ’ ಪತ್ರಿಕೆಯ ಓದುಗಳು ನಾನು ಎನ್ನುವುದೇ ನನ್ನ ಪಾಲಿಗೊಂದು ಹೆಮ್ಮೆಯ ವಿಚಾರ.
ಮೊನ್ನೆ ಮೊನ್ನೆಯಷ್ಟೆ ಎಪ್ಪತ್ತೇಳನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿರುವ ನಮ್ಮ ಭಾರತ ದೇಶದ ಸಮಗ್ರತೆ, ಸಹಿಷ್ಣುತೆ, ಭ್ರಾತೃತ್ವ, ವೈವಿಧ್ಯತೆಗಳಿಗೆ ಧಕ್ಕೆಯಾಗದಂತೆ ಸಂವಿಧಾನದ ನಾಲ್ಕನೇ ಅಂಗದ ಕರ್ತವ್ಯವನ್ನು ಶಿರಸಾವಹಿಸಿ ಪಾಲಿಸುತ್ತಿರುವ ಈ ದೇಶದ ಕೆಲವೇ ಕೆಲವು ಬೆರಳೆಣಿಕೆಯ ದಿನ ಪತ್ರಿಕೆಗಳಲ್ಲಿ ‘ವಾರ್ತಾಭಾರತಿ’ ಅಗ್ರಸ್ಥಾನದಲ್ಲಿದೆ. ಕನ್ನಡದ ನಿಜವಾದ ದೇಶಪ್ರೇಮಿ ಪತ್ರಿಕೆಯೆಂದರೆ ಅದು ‘ವಾರ್ತಾಭಾರತಿ’ ಮಾತ್ರ.
ಸಂಪಾದಕೀಯ, ಸಮಕಾಲೀನ ಸೇರಿದಂತೆ ಮಹತ್ತರವಾದ ಅಂಕಣಗಳು, ವೆಬ್ ಮೀಡಿಯಾದ ಮೂಲಕ ನಡೆಸುತ್ತಿರುವ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಹಿತ್ಯ, ಕಲೆಗಳ ಸಂಬಂಧಿತ ವಿಶ್ಲೇಷಣೆಗಳ, ಚರ್ಚೆಗಳು ಜ್ಞಾನದ ಕಣಜವನ್ನೇ ಹೊತ್ತು ಹೊಸ ಚಿಂತನೆಯ ಸಿಂಚನವನ್ನು ಎಳೆಯರಿಂದ ಹಿರಿಯರವರೆಗೂ ನೀಡುತ್ತಿರುವ ‘ವಾರ್ತಾಭಾರತಿ’ ತನ್ನ ಇಪ್ಪತ್ತೊಂದನೆಯ ಹರೆಯಕ್ಕೆ ಕಾಲಿಡುತ್ತಿರುವ ಈ ಹೊತ್ತಲ್ಲಿ ಮತ್ತಷ್ಟು ಮಾನವೀಯಗೊಳ್ಳುತ್ತ ಮುಂದೆ ಸಾಗಲಿ ಕನ್ನಡ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿರಿಸಲು ಅಪಾರ ಕೊಡುಗೆ ನೀಡಲಿ ಎಂದು ಶುಭ ಹಾರೈಸುತ್ತೇನೆ.
--------------------------------------------
ನಿರ್ಬೀತ ಪತ್ರಕೋದ್ಯಮ
ಡಾ. ಎಂ. ವೆಂಕಟಸ್ವಾಮಿ, ರಾಷ್ಟ್ರೀಯ ಕಾರ್ಯಾಧ್ಯಕ್ಷ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಾಳೆ)
21ನೇ ವಾರ್ಷಿಕ ಸಂಭ್ರಮದಲ್ಲಿರುವ ‘ವಾರ್ತಾಭಾರತಿ’ಗೆ ನಮ್ಮ ಪಕ್ಷದ ಅಭಿನಂದನೆಗಳು.
ಆಗಸ್ಟ್ 29ರಂದು ತಾವು ಬರೆದಿರುವ ವಿಶೇಷ ಸಂಪಾದಕೀಯ ಲೇಖನವನ್ನು ನಾನು ಓದಿದ್ದೇನೆ. ಇಡೀ ಲೇಖನವು ತಮ್ಮ ಸಂಪಾದಕತ್ವದ ಧೈರ್ಯದ ನುಡಿಯಾಗಿದೆ. ಇಂದಿನ ದಿನಮಾನಗಳಲ್ಲಿ ಅನ್ಯ ಮಾಧ್ಯಮಗಳ ಧೋರಣೆ, ನಡೆೆಗಳ ಕುರಿತು ತೀಕ್ಷ್ಣವಾಗಿ ಬರೆಯಬೇಕಾದರೆ ಅದಕ್ಕೊಂದು ನೈತಿಕ ಎದೆಗಾರಿಕೆ ಬೇಕೆಂಬುದನ್ನು ಲೇಖನದುದ್ದಕ್ಕೂ ಸಾಬೀತು ಪಡಿಸಿದ್ದೀರಿ. ಆಳುವವರು ಶ್ರೀಮಂತಿಕೆಯ ಮಡಿಲ ಆಶ್ರಯ ಪಡೆದಂತೆ ಈ ದಿನದ ಬಹುತೇಕ ಮಾಧ್ಯಮಗಳು ಆಳುವವರ ಅಡಿಯಾಳಾಗಿರುವುದನ್ನು ತಾವು ವಿಶ್ಲೇಷಿಸಿರುವುದು ಸಂದರ್ಭೋಚಿತವಾಗಿದೆ. ಹೀಗೆ ನಿರ್ಭೀತವಾಗಿ ಬರೆಯುವುದು ಮಾಧ್ಯಮ ನೈತಿಕತೆಯ ಆದ್ಯತೆಯೂ ಹೌದು. ಅಸ್ಪಶ್ಯತೆ, ಜಾತೀಯತೆ, ಮತಾಂಧತೆಗಳ ವಿರುದ್ಧ ದಿಟ್ಟ ಧ್ವನಿಯಾಗಿ ಜೀವಪರ ಸಂದೇಶಗಳನ್ನು ಹೊತ್ತು ಜನರ ಬಾಗಿಲಿಗೆ ಮುಟ್ಟಿಸುವ ಶಾಂತಿದೂತ ಪಾರಿವಾಳವಾಗಿ ‘ವಾರ್ತಾಭಾರತಿ’ ಪತ್ರಿಕೆ ಸಂಚರಿಸುತ್ತಿದೆ. ಇದೀಗ ಪ್ರಸರಣ ಸಂಖ್ಯೆ ಕಡಿಮೆ ಇದ್ದರೂ ಮುಂದೊಂದು ದಿನದಲ್ಲಿ ‘ವಾರ್ತಾಭಾರತಿ’ ನಾಡಿನ ನಂಬರ್ ಒನ್ ಜನದನಿಯಾಗಿ ಮೂಡಿಬರಲಿದೆ ಎಂಬ ಭಾವನೆ ನನಗಿದೆ.
ನಿಮ್ಮ ಬಳಗವು ಸಕ್ರಿಯವಾಗಿರುವುದರಿಂದ ನನಗೆ ಈ ಅಭಿಪ್ರಾಯ ಮೂಡಿದೆ. ನಿಮ್ಮ ಪತ್ರಿಕೆಯ ಕೆಲವು ವರದಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳಂತೆ ಪ್ರಕಟವಾಗುತ್ತಿದೆ. ವಿಶೇಷ ಲೇಖನಗಳು, ವಿಶ್ಲೇಷಣಾ ಲೇಖನಗಳು, ಸಂವಿಧಾನ ಕುರಿತು ಜಿಜ್ಞಾಸೆಯ ಲೇಖನಗಳೆಲ್ಲವೂ ಅತ್ಯವಶ್ಯಕವಾಗಿ ಓದುಗರನ್ನು ಹಿಡಿದಿಡುತ್ತವೆ. ಅವು ಹಾಗೆಯೇ ಮುಂದುವರಿದರೆ ತಮ್ಮ ಪತ್ರಿಕೆಯ ಆಶಯಗಳು ಸಾಕಾರಗೊಳ್ಳುತ್ತವೆ ಎಂದು ಆಶಿಸುತ್ತೇನೆ.
--------------------------------
ದಮನಿತರ ಧ್ವನಿ
ಡಾ. ಗಣನಾಥ ಎಕ್ಕಾರು, ಚಿಂತಕರು
ಕರ್ನಾಟಕದ ಪತ್ರಿಕೋದ್ಯಮದಲ್ಲಿ ಭಿನ್ನ ಧ್ವನಿಯಾಗಿ ದಲಿತ- ಹಿಂದುಳಿದವರ, ಅಲ್ಪಸಂಖ್ಯಾತರ ಸಾಕ್ಷಿ ಪ್ರಜ್ಞೆಯಾಗಿ ಕಳೆದ 20 ವರ್ಷಗಳಿಂದ ‘ವಾರ್ತಾಭಾರತಿ’ ಕಾರ್ಯ ನಿರ್ವಹಿಸುತ್ತಿದೆ. ಕರಾವಳಿ ಕರ್ನಾಟಕದ ಪತ್ರಿಕಾರಂಗವು ಏಕಮುಖವಾಗಿದ್ದಾಗ ವಡ್ಡರ್ಸೆ ರಘುರಾಮ ಶೆಟ್ಟರ ಸಂಪಾದಕತ್ವದ ‘ಮುಂಗಾರು ಪತ್ರಿಕೆ’ಯು ಆ ಶೂನ್ಯವನ್ನು ತುಂಬುವ ಪ್ರಯತ್ನ ಮಾಡಿತು. ಪ್ರಗತಿಪರ ವಿಚಾರಗಳನ್ನು ಮುಕ್ತವಾಗಿ ಅಭಿವ್ಯಕ್ತಿಸಿತು. ಎಷ್ಟೋ ಹೊಸ ಲೇಖಕರು, ಪತ್ರಕರ್ತರು ಹುಟ್ಟುವುದಕ್ಕೆ ಕಾರಣವಾಯಿತು. ಆದರೆ, ಅನಿವಾರ್ಯ ಕಾರಣಗಳಿಂದ ಮುಂಗಾರು ಪತ್ರಿಕೆ ನಿಂತು ಹೋಯಿತು. ಮತ್ತೆ ಕಾಡತೊಡಗಿದ ಶೂನ್ಯತೆಯನ್ನು ತನ್ನ ಸೈದ್ಧಾಂತಿಕ ಬದ್ಧತೆಯ ಮೂಲಕ ‘ವಾರ್ತಾಭಾರತಿ’ ತುಂಬಿದೆ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮವನ್ನು ಪರಿಗಣಿಸಲಾಗುತ್ತದೆ. ಆದರೆ ಅದು ನಿಜವಾದ ನಾಲ್ಕನೇ ಅಂಗವಾಗುವುದು ನಿರ್ಭೀತಿಯಿಂದ ಪ್ರಜಾಪ್ರಭುತ್ವದ ತತ್ವಗಳಿಗೆ ಅಪಾಯ ಎದುರಾದಾಗ ಮುಕ್ತವಾಗಿ ಅಭಿವ್ಯಕ್ತಿಸುವುದರ ಮೂಲಕ. ‘ವಾರ್ತಾಭಾರತಿ’ಯ ಶಕ್ತಿಯೇ ಅದು. ಇಂದು ಜಾಗತೀಕರಣದ ಪರಿಣಾಮವು ಪತ್ರಿಕಾ ರಂಗದ ಮೇಲೂ ಆಗಿದೆ. ಪತ್ರಿಕಾ ರಂಗವು ಒಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಲಾಭಬಡುಕತನವೇ ಪ್ರಧಾನವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದಮನಿತರ ಧ್ವನಿಯಾಗಿ ನಿಲ್ಲುವ ಕಾರ್ಯವನ್ನು ‘ವಾರ್ತಾಭಾರತಿ’ ಮಾಡುತ್ತಿದೆ. ಪತ್ರಿಕೆಯಲ್ಲಿ ಬರುವ ಸುದ್ದಿ ಮತ್ತು ಲೇಖನಗಳು ನೈಜ ಪ್ರಜಾಪ್ರಭುತ್ವ ಮತ್ತು ಪ್ರಗತಿಪರತೆಯನ್ನು ಪರಿಚಯಿಸುತ್ತದೆ. ಎಷ್ಟೋ ಪತ್ರಿಕೆಗಳು ಪ್ರಕಟಿಸಲು ಹಿಂಜರಿಯುವ ನೈಜ ಸುದ್ದಿಗಳನ್ನು ‘ವಾರ್ತಾಭಾರತಿ’ ನಿರ್ಭೀತಿಯಿಂದ ಪ್ರಕಟಿಸುತ್ತಿದೆ. ಇಂತಹ ಎಷ್ಟೋ ಸುದ್ದಿಗಳು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿದೆ. ಕರ್ನಾಟಕದ ಪ್ರಜಾಪ್ರಭುತ್ವ ಮತ್ತು ಪುರೋಗಾಮಿ ಚಿಂತಕರ ಆಶಾಕಿರಣವಾಗಿದೆ. ಈ ದೃಷ್ಟಿಯಿಂದ ‘ವಾರ್ತಾಭಾರತಿ’ಗೆ ಎಲ್ಲಾ ರೀತಿಯ ಪ್ರೋತ್ಸಾಹ ಅಗತ್ಯವಾಗಿದೆ. 2 ದಶಕಗಳ ಕಾಲ ದಮನಿತರ ಧ್ವನಿಯಾಗಿ ಅವರಲ್ಲಿ ಧೈರ್ಯ ತುಂಬಿದ ‘ವಾರ್ತಾಭಾರತಿ’ಗೆ ಅಭಿನಂದನೆಗಳು.
--------------------------------
ಸಾಮಾಜಿಕ ನ್ಯಾಯ ಎತ್ತಿ ಹಿಡಿದ ಪತ್ರಿಕೆ
ಪುನೀತ್ ಎ.ಆರ್. ಪತ್ರಿಕೋದ್ಯಮ ವಿದ್ಯಾರ್ಥಿ, ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ
ಆಗಸ್ಟ್ 29ನೇ ತಾರೀಕಿಗೆ ಎರಡು ದಶಕಗಳ ಸೇವೆಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ ಕರ್ನಾಟಕದ ಮುಂಚೂಣಿಯಲ್ಲಿರುವ ಪತ್ರಿಕೆಗಳಲ್ಲೊಂದಾದ ‘ವಾರ್ತಾ ಭಾರತಿ’ಗೆ ಅಭಿನಂದನೆಗಳು. ಸಂಪೂರ್ಣವಾಗಿ ರಾಜಕೀಯದ ವರದಿಗಳು, ವ್ಯಕ್ತಿಗಳ ಉತ್ಪ್ರೇಕ್ಷೆಯಲ್ಲಿ ಸಿಲುಕಿ ಪತ್ರಿಕೋದ್ಯಮದ ಮೂಲ ಆಶಯಗಳನ್ನು ಹಾಗೂ ಆದ್ಯ ಕರ್ತವ್ಯವನ್ನು ಮರೆತಂತೆ ವರ್ತಿಸುತ್ತಿರುವ ಈ ಕಾಲಘಟ್ಟದಲ್ಲಿ ‘ವಾರ್ತಾಭಾರತಿ’ಯಂತಹ ಸಮಪ್ರಜ್ಞೆಯ ಪತ್ರಿಕೆಯು ಅಪರೂಪವೇ ಸರಿ. ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ನನ್ನ ಮೆಚ್ಚುಗೆಯ ಪುಟ ಸಂಪಾದಕೀಯ. ಸಂಪಾದಕೀಯವನ್ನು ಪತ್ರಿಕೆಯ ಹೃದಯ ಎಂದು ಕರೆಯುತ್ತಾರೆ. ಇದು ಪತ್ರಿಕೆಗಳ ನಿಲುವನ್ನು ಸೂಚಿಸುತ್ತದೆ.
ಅದರಂತೆ ಪತ್ರಿಕೆಯ ಸಂಪಾದಕೀಯವು ಬಡವರ ಒಡಲಿನ ಧ್ವನಿಯಾಗಿದೆ ಹಾಗೂ ಪತ್ರಿಕೆಯು ಬಡವರು ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ ಹಾಗೂ ಯಾವುದೇ ರೀತಿಯಲ್ಲೂ ಪೂರ್ವಗ್ರಹ ಪೀಡಿತರಾಗದೆ ಸಮಾಜದ ಒಳಿತಿಗೆ ಅಗತ್ಯವಿರುವ ಅಂಕಣಗಳನ್ನು ಶಿವಸುಂದರ್, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಾಧವ ಐತಾಳ್, ಡಾ.ಚಂದ್ರಶೇಖರ ಹತಗುಂದಿ ಮುಂತಾದವರಿಂದ ಸತತವಾಗಿ ಬರೆಸಿ ಓದುಗರ ಸಮಕಾಲೀನ ಜ್ಞಾನ, ಅರಿವು, ವಿಮರ್ಶೆಗಳನ್ನು ವಿಸ್ತರಿಸುವ ಕೆಲಸವನ್ನು ಯಶಸ್ವಿಯಾಗಿ ಪತ್ರಿಕೆ ಮಾಡುತ್ತಿದೆ.
ಮೂಲದಿಂದಲೂ ತಾರತಮ್ಯವಿರುವ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯಾತ್ಮಕವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವ ಜನರ ಧ್ವನಿಯಾಗಿ ‘ವಾರ್ತಾ ಭಾರತಿ’ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ತಂತ್ರಜ್ಞಾನವು ಶರವೇಗವನ್ನು ಕಂಡುಕೊಂಡಿರುವ ಇಂದಿನ ಕಾಲಘಟ್ಟದಲ್ಲಿ ‘ವಾರ್ತಾಭಾರತಿ’ ಪತ್ರಿಕೆಯು ಯೂಟ್ಯೂಬ್ ಹಾಗೂ ವೆಬ್ ಮಾದರಿಯಲ್ಲಿ ವಸ್ತುನಿಷ್ಠ ಸುದ್ದಿಗಳನ್ನು ನಿರಂತರವಾಗಿ ನೀಡುವ ಮೂಲಕ ಯುವಕರನ್ನು ಯಥೇಚ್ಛವಾಗಿ ತಲುಪುತ್ತಿರುವುದು ಸಮಾಜದಲ್ಲಿನ ಧನಾತ್ಮಕ ಬದಲಾವಣೆಗೆ ಬುನಾದಿಯಾದಂತಿದೆ. ಪತ್ರಿಕೋದ್ಯಮದ ಆಶಯಗಳನ್ನು ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ವಾರ್ತಾ ಭಾರತಿ ಪತ್ರಿಕೆಯು ಅತೀವ ಯಶಸ್ಸನ್ನು ಕಂಡಿದೆ ಎಂಬುದಕ್ಕೆ ಪತ್ರಿಕೆಯು ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸುತ್ತಿರುವುದು ದೊಡ್ಡ ನಿದರ್ಶನವಾಗಿದೆ.
--------------------------------
ಇನ್ನಷ್ಟು ಎತ್ತರಕ್ಕೇರಲಿ
ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹಿರಿಯ ಲೇಖಕರು
‘ವಾರ್ತಾಭಾರತಿ’ ಎರಡು ದಶಕಗಳನ್ನು ಪೂರೈಸಿ ಮುನ್ನಡಿ ಇಡುತ್ತಿರುವುದು ನನ್ನಂತಹ ತಳಸಮುದಾಯದ ಅನೇಕರನ್ನು ಪುಳಕಿತಗೊಳಿಸಿದೆ. ವೃತ್ತಿ ನಿಷ್ಠ ಪ್ರಾಮಾಣಿಕತೆಯನ್ನು, ಪಾರದರ್ಶಕತೆಯನ್ನು ಮೈದುಂಬಿಕೊಂಡು ನಿರ್ಭಯವಾಗಿ ನೈಜ ಭಾರತವನ್ನು ಬಿತ್ತರಿಸುತ್ತಿರುವ, ಮಾನವೀಯ ಮೌಲ್ಯಗಳನ್ನು ಎತ್ತರಿಸುತ್ತಿರುವ ಪತ್ರಿಕೆ ಇನ್ನಷ್ಟು ದಶಕಗಳನ್ನು ಪೂರೈಸಲಿ ಎಂದು ಮನದುಂಬಿ ಹಾರೈಸುತ್ತೇನೆ. ಸಂಪಾದಕರು ಮತ್ತು ಅವರ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
--------------------------------
ಜವಾಬ್ದಾರಿಯುತ ಸೇವೆ
ಸಿ.ಎಂ. ನರಸಿಂಹ ಮೂರ್ತಿ ಅಂತರ್‌ರಾಷ್ಟ್ರೀಯ ಜಾನಪದ ಗಾಯಕ, ಚಾಮರಾಜನಗರ
ಇಂದಿನ ದಿನಗಳಲ್ಲಿ ಪತ್ರಿಕಾ ಮೌಲ್ಯಗಳನ್ನು ಕಾಪಾಡಿಕೊಂಡು ಎರಡು ದಶಕ ಕಳೆದಿರುವ ‘ವಾರ್ತಾಭಾರತಿ’ ದಿನಪತ್ರಿಕೆಗೆ ಅಭಿನಂದನೆಗಳು. ಪತ್ರಿಕೆಯಲ್ಲಿ ಮೂಡಿ ಬರುವ ಸುದ್ದಿ ವಿಶ್ಲೇಷಣೆ ಹಾಗೂ ವರದಿಗಳು ಓದುಗರ ಮನಗೆಲ್ಲುತ್ತಿದೆ. ಕರ್ನಾಟಕದಲ್ಲಿ ಕನ್ನಡ ದಿನ ಪತ್ರಿಕೆಯಾಗಿ ಜವಾಬ್ದಾರಿಯುತವಾಗಿ ಜನರ ಮನ ಗೆಲ್ಲುತ್ತಿದೆ. ಕರ್ನಾಟಕದ ಉದ್ದಗಲಕ್ಕೂ ‘ವಾರ್ತಾಭಾರತಿ’ ವ್ಯಾಪಿಸಿಕೊಂಡು, ಮುದ್ರಣ ಮಾಧ್ಯಮದಲ್ಲಿ ದಾಖಲೆಯ ದಾಪುಗಾಲು ಮುಂದುವರಿಸಲಿ ಎಂದು ಹಾರೈಸುವೆ.
--------------------------------
ಮಹತ್ವಪೂರ್ಣವಾದ ಬೆಳವಣಿಗೆ
ಶೂದ್ರ ಶ್ರೀನಿವಾಸ್ ಹಿರಿಯ ಚಿಂತಕರು
‘ವಾರ್ತಾಭಾರತಿ’ ಎರಡು ದಶಕಗಳ ಕಾಲ ಅತ್ಯಂತ ಸೂಕ್ಷ್ಮ ಸನ್ನಿವೇಶಗಳನ್ನು ದಾಟಿ ಬೆಳೆಯುತ್ತಾ ಬಂದಿರುವುದು ಮಹತ್ವಪೂರ್ಣವಾದದ್ದು. ಜೊತೆಗೆ ಪತ್ರಿಕೋದ್ಯಮ ಬಯಸುವ ಮೂಲಭೂತ ಸಂವೇದನೆಗಳನ್ನು ಶ್ರೀಮಂತಗೊಳಿಸುತ್ತ ಬಂದಿರುವುದು ಸಾರ್ವಕಾಲಿಕವಾಗಿ ಶ್ಲಾಘನೀಯವಾದದ್ದು. ಅದರಲ್ಲೂ ಕಳೆದ ಐದಾರು ವರ್ಷಗಳಲ್ಲಿ ಕರ್ನಾಟಕ ಮತೀಯ ವೈಪರೀತ್ಯಗಳನ್ನು ಎದುರಿಸುವ ಸಂದರ್ಭದಲ್ಲಿ ‘ವಾರ್ತಾಭಾರತಿ’ಯು ನೂರಾರು ಮಂದಿಗೆ ಧ್ವನಿಯನ್ನು ಕೊಡುತ್ತ ಬಂದಿದೆ. ಕೆಲವು ಪತ್ರಿಕೆಗಳು ಆಂತರಿಕವಾಗಿ ತಲೆತಗ್ಗಿಸುವಂತೆ ವಸ್ತುನಿಷ್ಠತೆಯ ಮಾದರಿಗಳನ್ನು ಮುಂದಿಟ್ಟಿದೆ. ಹಾಗೆಯೇ ಬಹಳಷ್ಟು ಮಂದಿ ನಿರ್ದಾಕ್ಷಿಣ್ಯವಾಗಿ ಬರೆಯಲು, ಚಿಂತಿಸಲು ವೇದಿಕೆ ನಿರ್ಮಾಣ ಮಾಡಿಕೊಟ್ಟಿದೆ. ಇತಿಹಾಸದ ಏಳುಬೀಳುಗಳನ್ನು ಸಮರ್ಥವಾಗಿ ಪರಿಚಯಿಸುತ್ತಾ ಬಂದಿರುವುದು ಸದಾ ಮೆಚ್ಚುವಂಥದ್ದು.
ಹೀಗೆಯೇ ದಶಕಗಳನ್ನು ದಾಟಿ ಮುಂದೆ ಹೋಗಲಿ ಎಂದು ಆಶಿಸುವೆ.
--------------------------------
ಸಮಾಜಕ್ಕೆ ದಾರಿದೀಪ
ಧನ್ಯಾ ರಾಜೇಂದ್ರನ್, ಪ್ರಧಾನ ಸಂಪಾದಕರು TheNewsMinute
ಕಳೆದೆರಡು ದಶಕಗಳಲ್ಲಿ ಕರ್ನಾಟಕದ ಮಾಧ್ಯಮ ಕ್ಷೇತ್ರಕ್ಕೆ ‘ವಾರ್ತಾಭಾರತಿ’ ಅಪಾರ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ದಿಟ್ಟ ಮಾಧ್ಯಮ ಸಂಸ್ಥೆ ಧ್ವನಿ ಇಲ್ಲದ ಶೋಷಿತರ ಧ್ವನಿಯಾಗಿ ಪರಿಣಾಮಕಾರಿ ಕೆಲಸ ಮಾಡಿದೆ. ಯಶಸ್ವೀ 20ವರ್ಷಗಳನ್ನು ಪೂರ್ಣ ಗೊಳಿಸಿರುವ ಈ ಶುಭ ಸಂದರ್ಭದಲ್ಲಿ ‘ವಾರ್ತಾಭಾರತಿ’ಗೆ ಹಾರ್ದಿಕ ಅಭಿನಂದನೆಗಳು. ಸಮಾಜಕ್ಕೆ ದಾರಿ ದೀಪವಾಗುವಂತಹ ನಿಮ್ಮ ಕೆಲಸ ಹೀಗೇ ಮುಂದುವರಿಯಲಿ.
--------------------------------
ಸಕಾರಾತ್ಮಕ ಬೆಳವಣಿಗೆಗೆ ಬೆಂಬಲ ನೀಡಿದ ‘ವಾರ್ತಾಭಾರತಿ’
ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು
ಬಂಟರ ಯಾನೆ ನಾಡವರ ಮಾತೃ ಸಂಘ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಸಂಘಟನೆ.ಅಂದಿನಿಂದ ಇಂದಿನವರೆಗೂ ನಮ್ಮ ಸಂಘಟನೆ ಸಮುದಾಯದ ಬೆಳವಣಿಗೆಗೆ ಶ್ರಮಿಸುತ್ತಾ ಬಂದಿದೆ. ನಮ್ಮ ಸಂಘಟನೆಯ ಬೆಳವಣಿಗೆಯಲ್ಲಿ ಮಾಧ್ಯಮದ ನೆಲೆಯಲ್ಲಿ ‘ವಾರ್ತಾಭಾರತಿ’ಯ ಗಮನಾರ್ಹ ಪಾತ್ರವಿದೆ. ನಾನು ಸಂಘದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿಯೂ ನನಗೆ ಮಾಧ್ಯಮಗಳ ಬೆಂಬಲ ದೊರೆತಿದೆ. ‘ವಾರ್ತಾಭಾರತಿ’ ನಮ್ಮ ಸಂಘಟನೆಯ ಸಕಾರಾತ್ಮಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ. ನಮ್ಮ ಸಂಘಟನೆಯ ಉತ್ತಮ ಕೆಲಸ ಕಾರ್ಯ ಗಳನ್ನು ಇತರರಿಗೆ ತಿಳಿಸುವ ನಿಟ್ಟಿನಲ್ಲಿ ‘ವಾರ್ತಾಭಾರತಿ’ ನೀಡಿರುವ ಸಹಕಾರವನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ ಮತ್ತು ಈಗಲೂ ಅದೇ ರೀತಿಯ ಸಹಕಾರ ನೀಡುತ್ತಿವೆ. ಈ ಸಹಕಾರ ಇನ್ನೂ ಮುಂದೆಯೂ ಇರಲಿ ಎಂದು ಆಶಿಸುತ್ತೇನೆ. ‘ವಾರ್ತಾಭಾರತಿ’ 20 ವರ್ಷ ಪೂರ್ಣಗೊಳಿಸಿ 21ನೇ ವರ್ಷಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲಿ ‘ವಾರ್ತಾಭಾರತಿ’ ಬಳಗಕ್ಕೆ ಶುಭಾಶಯಗಳು.
--------------------------------
ಪ್ರಾಮಾಣಿಕತೆಯೇ ‘ವಾರ್ತಾಭಾರತಿ’ಯ ಯಶಸ್ಸಿನ ಮೆಟ್ಟಿಲು
ಕೆ.ಎ.ಅಬ್ದುಲ್ ಅಝೀಝ್ ಪುಣಚ ಸಂಪಾದಕರು, ಮದರಂಗಿ ಪತ್ರಿಕೆ ಮಂಗಳೂರು
ವರ್ತಮಾನ ಸನ್ನಿವೇಶದಲ್ಲಿ ಮಾಧ್ಯಮ ಕ್ಷೇತ್ರವು ನಾಗರಿಕರ ಭಾವನೆಗಳನ್ನು ಘಾಸಿಗೊಳಿಸುವ, ಒಂದು ವರ್ಗವನ್ನು ತಪ್ಪಿತಸ್ಥರೆಂಬ ಭಾವನೆ ಬರುವಂತೆ ಸತ್ಯಕ್ಕೆ ದೂರವಾದ ವರದಿಗಳ ಮೂಲಕ ಸಮಾಜವನ್ನು ಛಿದ್ರಗೊಳಿಸುತ್ತಿರುವಾಗ ಸತ್ಯ ಮತ್ತು ವಸ್ತುನಿಷ್ಠ ವರದಿಗಳ ಮೂಲಕ ‘ವಾರ್ತಾಭಾರತಿ’ ಆರಂಭದಿಂದ ಈತನಕ ಸಂವಿಧಾನದ ೪ನೇ ಅಂಗವೆಂಬಂತೆ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯಾಚರಿಸಿದೆ ಎನ್ನುವುದು ನಿತ್ಯ ಓದುಗರಾದ ನನ್ನಂತಹವರಿಗೆ ಸಂತೋಷದ ಸಂಗತಿ. ಕೆಡುಕುಗಳ ವಿರುದ್ಧ ಅಕ್ಷರ ಸಮರ ಸಾರುವಲ್ಲಿ ‘ವಾರ್ತಾಭಾರತಿ’ಯು ಸಂಪೂರ್ಣ ಯಶಸ್ಸು ಕಂಡಿದೆ ಎನ್ನಬಹುದು. ವರ್ತಮಾನ ಸನ್ನಿವೇಶಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ವಿವರಿಸಿ ಮಾಧ್ಯಮವು ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಚಾಚೂ ತಪ್ಪದೆ ಅನುಸರಿಸುವ ‘ವಾರ್ತಾಭಾರತಿ’ಯು ಮುಂದೆಯೂ ತನ್ನ ಜವಾಬ್ದಾರಿ ನಿಭಾಯಿಸಲಿದೆ ಎಂಬ ವಿಶ್ವಾಸವಿದೆ. ಸಮಾಜದ ಎಲ್ಲಾ ವರ್ಗದ ಜನರ ಮನಸ್ಸನ್ನು ಒಂದಾಗಿಸಿ ಭಾವೈಕ್ಯ ಭಾರತವನ್ನು ಕಟ್ಟುವಲ್ಲಿ ‘ವಾರ್ತಾಭಾರತಿ’ಯು ಸಂಪೂರ್ಣ ಯಶಸ್ಸು ಕಾಣಲಿ ಎಂದು ಆಶಿಸುತ್ತಿದ್ದೇನೆ.