ವಿಷಾದ-ನಿರೀಕ್ಷೆಗಳ ನಡುವಿನ ‘ವಾಸ್ತು ಶಿಲ್ಪಿ’
ಅನುಭವಿ ವಾಸ್ತುಶಿಲ್ಪಿ ಕೃಷ್ಣಾನಂದ ಬಾಂದೇಕರ ಅವರ ಚೊಚ್ಚಲ ಕವನ ಸಂಕಲನ ‘ವಾಸ್ತು ಶಿಲ್ಪಿ ಮತ್ತು ಕಾವ್ಯ’.
ವಿಷಾದ ಇದು ಬಾಂದೇಕರ ಅವರ ಬಹುತೇಕ ಕವನಗಳ ಸ್ಥಾಯೀಭಾವ ವಾಗಿದೆ. ತಮ್ಮ ಜಿಲ್ಲೆಯ ನಿಸರ್ಗ, ಅಲ್ಲಿಯ ಗುಡ್ಡ-ಬೆಟ್ಟಗಳು, ಗ್ರಾಮೀಣ ಬದುಕು ಅವರಿಗೆ ಪ್ರಿಯವಾದುದು. ಗುಡ್ಡಳ್ಳಿಯ ಗುಡ್ಡವೊಂದು ಹಳ್ಳಿಯಾಗಿ ಬದುಕು ಕಟ್ಟುವ ಚೆಲುವಿಗೆ ಮಾರುಹೋದ ಈ ಕವಿಗೆ ‘ನಗರವೊಂದು ಹದ್ದು ಮೀರಿ ತನ್ನ ಸೆರಗನ್ನು ಸುತ್ತಿದೆ’ ಎಂಬ ಆತಂಕ. ಗುಡ್ಡಳ್ಳಿಯಲ್ಲಿ ಇಂಧನ ಉರಿಯುವ ದಾರಿಯಿದೆ. ದಾರಿಯಲ್ಲಿ ಉರುಟುರುಟು ಕಲ್ಲುಗಳಿವೆ. ಅವುಗಳ ಸಂಚಾರಿಭಾವದಲ್ಲಿ ‘ನಳನಳಿಸುವ ಹಸಿರಲಿ ತರಗೆಲೆಗಳು’ ಕೂಡ ಸ್ವಚ್ಛಂದ ವಿಹಾರಿಯಾಗಿವೆ. ನದಿ, ಕಡಲು, ಜಲ, ಮಳೆ, ಹೊಂಯ್ಗೆ , ಮತ್ಸ್ಯಗಂಧ ಇವೆಲ್ಲವುಗಳೊಡನೆ ಈ ಕವಿಗೆ ಮತ್ತು ಕವಿತೆಗಳಿಗೆ ಅವಿನಾಸಂಬಂಧ. ‘ಹರಿವ ನದಿಯ ಅಲೆಯ ರಂಗು | ತೊರೆಯದಂತೆ ಶರಧಿ ರಂಗು’ ಎಂದು ಪ್ರಾಸಬದ್ಧವಾಗಿ ಬರೆಯಬಲ್ಲ ಈ ಕವಿ ‘ಕಣ್ಣು ಭಾಷೆಯ ಮೀರಿ | ಕಿವಿಯಾಗಲಿ ಆಗಸ | ಸೃಷ್ಟಿಯ ಶಬ್ದ ಭಂಡಾರಕೆ’ ಎಂದು ಹಾರೈಸುತ್ತಾರೆ (‘ಪ್ರಜ್ಞೆ’). ಸೃಷಿಯಲ್ಲಿ ಕಟ್ಟುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಗೆದ್ದಲು ಹುತ್ತವನ್ನು ಕಟ್ಟುತ್ತದೆ. ಕಾಗೆ ಗೂಡು ಕಟ್ಟುತ್ತದೆ. ಅಂದಹಾಗೆ ಬಾಂದೇಕರರದು ಕೂಡ ಕಟ್ಟುವ ಉದ್ಯೋಗ! ಹುತ್ತ ಇಲ್ಲದಿದ್ದರೆ ವಾಲ್ಮೀಕಿ ಹುಟ್ಟುವನೇ ಕಾಗೆ ಇಲ್ಲದಿದ್ದರೆ ಕೋಗಿಲೆ ಹುಟ್ಟುವುದೇ ಎಂದು ಪ್ರಶ್ನಿಸುವ ಈ ಕವಿ ಮನೆಯನ್ನು ಕಟ್ಟುವುದರ ಮೂಲಕ ‘ನನ್ನದು ಕಟ್ಟುವ ಹೆಮ್ಮೆ’ ಎಂದು ಉದ್ಗರಿಸುತ್ತಾರೆ.
ಇಡೀ ಸಂಕಲನಕ್ಕೆ ಕಲಶಪ್ರಾಯವಾಗಿರುವ - ಸಂಕಲನದ ಶೀರ್ಷಿಕೆಯನ್ನು ಕೂಡ ಹೊತ್ತಿರುವ - ಕವಿತೆ ‘ವಾಸ್ತುಶಿಲ್ಪಿ ಮತ್ತು ಕಾವ್ಯ’ ಕೂಡ ಇದೇ ಆಶಯವನ್ನು ಮತ್ತಷ್ಟು ಗಟ್ಟಿಯಾದ ನೆಲೆಯಲ್ಲಿ ಅಭಿವ್ಯಕ್ತಿಸುತ್ತದೆ. ಶಿಲ್ಪದ ದೃಷ್ಟಿಯಿಂದ ಈ ಕವನ ಅನನ್ಯವಾಗಿದೆ. ಇಲ್ಲಿ ‘ಆಲಯ’ ಮತ್ತು ‘ಆಲ’ ಮುಖಾಮುಖಿಯಾಗಿ ಕಾವ್ಯಶಿಲ್ಪವನ್ನು ಕಟ್ಟಿಕೊಡುತ್ತವೆ. ಈ ಕವನದಲ್ಲಿ ವಾಸ್ತುಶಿಲ್ಪಿಗೆ ಆಲ ವಸ್ತು ಪ್ರತಿರೂಪವಾಗಿ ಒದಗಿ ಬಂದಿದೆ. ಕಾವ್ಯ ಆಲದ ಮರದಲ್ಲಿ ಕುಳಿತಿದೆ-ಹಕ್ಕಿಯಂತೆ. ‘ಚಳಿ ನಡುಗಿಸದ ಪರ್ಣರಾಶಿ | ಮಳೆ ನೆನೆಸದ ಕಾಂಡ | ಬಿಸಿಲ ಕಾಯಿಸದ ಪೊಟರೆಯಲ್ಲಿ | ಮೊಟ್ಟೆಯೊಂದು ಮರಿಯಾಗುವ ಖುಶಿ ಆಲಕ್ಕೆ’. ಕಾವ್ಯ ಕೂಡ ಖುಶಿಯಿಂದ ಎಂಬ ಆಶಯವನ್ನು ಕವಿ ರೂಪಕದ ಭಾಷೆಯಲ್ಲಿ ಅಭಿವ್ಯಕ್ತಿಸುತ್ತಾನೆ. ಆಲದ ಬೀಳಲು ಬಿಟ್ಟು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡುವಂತೆ ವಾಸ್ತುಶಿಲ್ಪಿ ಮನೆಗಳನ್ನು ಕಟ್ಟಿ ಮನುಷ್ಯಕುಲಕ್ಕೆ ಆಶ್ರಯತಾಣಗಳನ್ನು ನಿರ್ಮಿಸುತ್ತಾನೆ ಎಂಬ ಪರೋಕ್ಷ ಚಿಂತನೆ ಕೂಡ ಈ ಕವನದಲ್ಲಿದೆ. ಮತ್ತೆಮತ್ತೆ ಅನುರಣಿಸುವ ಕವನದ ಮೊದಲ ಎರಡು ಸಾಲುಗಳು ಮತ್ತೆಮತ್ತೆ ಅನುರಣಿಸುತ್ತ ಕವನಕ್ಕೆ ಬಿಗಿಯಾದ ಬಂಧವನ್ನು ಕಟ್ಟಿಕೊಟ್ಟಿವೆ.
‘ಪ್ರೀತಿ ಪದ-ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ’ ಈ ಕೃತಿಯನ್ನು ಹೊರತಂದಿದೆ. ಒಟ್ಟು 76 ಪುಟಗಳ ಈ ಸಂಕಲನದ ಮುಖಬೆಲೆ 120 ರೂ.