ವಿಜಯಪುರ ಲೋಕಸಭಾ ಕ್ಷೇತ್ರ: ವಿಜಯಪುರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ತಂದುಕೊಳ್ಳಲಿದೆಯೇ?
ಸರಣಿ - 26
ಪ್ರಾಥಮಿಕ ಮಾಹಿತಿ
ಎಸ್ಸಿ ಮೀಸಲು ಕ್ಷೇತ್ರವಾದ ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಾಕ್ಷರತೆ ಪ್ರಮಾಣ ಶೇ.57.33. ಈ ಕ್ಷೇತ್ರ ವ್ಯಾಪ್ತಿಯಲ್ಲಿನ ಒಟ್ಟು ವಿಧಾನಸಭೆ ಕ್ಷೇತ್ರಗಳು 8. ಅವೆಂದರೆ, ಮುದ್ದೇಬಿಹಾಳ, ದೇವರಹಿಪ್ಪರಗಿ, ಬಸವನ ಬಾಗೇವಾಡಿ, ಬಬಲೇಶ್ವರ, ವಿಜಯಪುರ ನಗರ, ನಾಗಠಾಣ, ಇಂಡಿ ಹಾಗೂ ಸಿಂಧಗಿ.
ಅವುಗಳಲ್ಲಿ 6 ಕ್ಷೇತ್ರಗಳು ಕಾಂಗ್ರೆಸ್ ಹಿಡಿತದಲ್ಲಿದ್ದರೆ, ಒಂದರಲ್ಲಿ ಬಿಜೆಪಿ, ಇನ್ನೊಂದರಲ್ಲಿ ಜೆಡಿಎಸ್ ಇದೆ.
ಈ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರರು 19,19,048. ಅವರಲ್ಲಿ 9,76,073 ಪುರುಷ ಮತದಾರರು, 9,42,757 ಮಹಿಳಾ ಮತದಾರರು ಮತ್ತು 218 ಇತರ ಮತದಾರರು.
ಈ ಹಿಂದಿನ ಚುನಾವಣೆಗಳಲ್ಲಿನ ಫಲಿತಾಂಶಗಳು:
2009, 2014, 2019 ಈ ಮೂರೂ ಚುನಾವಣೆಗಳಲ್ಲಿಯೂ ಬಿಜೆಪಿಯ ರಮೇಶ್ ಜಿಗಜಿಣಗಿ ಗೆದ್ದಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿನ ಮತ ಹಂಚಿಕೆ ವಿವರ:
2014 ಬಿಜೆಪಿಗೆ ಶೇ.48.80, ಕಾಂಗ್ರೆಸ್ಗೆ ಶೇ.41.58
2019 ಬಿಜೆಪಿಗೆ ಶೇ.57.22, ಜೆಡಿಎಸ್ಗೆ ಶೇ.34
ಇಲ್ಲಿ ನಡೆದ 17 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಗೆದ್ದಿದೆ.
ಈ ಕ್ಷೇತ್ರ ಒಮ್ಮೆ ಪಕ್ಷೇತರ ಅಭ್ಯರ್ಥಿಯ ಪಾಲಾದರೆ, ಮತ್ತೊಮ್ಮೆ ಸ್ವತಂತ್ರ ಪಕ್ಷದ ಪಾಲಾಗಿತ್ತು. ಆ ನಂತರ ಒಮ್ಮೆ ಜನತಾ ಪಕ್ಷ, ಒಮ್ಮೆ ಜನತಾ ದಳ ಗೆದ್ದಿದ್ದವು.
1999ರಿಂದ ಸತತ ಗೆಲುವುಗಳನ್ನು ಕಾಣುತ್ತ ಬಂದಿರುವ ಬಿಜೆಪಿ ಸತತ 5 ಬಾರಿ ಗೆದ್ದಿದೆ.
ಇದರಲ್ಲಿ ಎರಡು ಚುನಾವಣೆಗಳಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಗೆದ್ದಿದ್ದರೆ, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಗೆದ್ದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಒಮ್ಮೆ ಸತತ 3 ಬಾರಿ, ಇನ್ನೊಮ್ಮೆ ಸತತ 2 ಬಾರಿ ಗೆಲುವು ಸಾಧಿಸಿದ ದಾಖಲೆಯಿತ್ತು.
ಮತ್ತೆ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್
ಕಳೆದ 24 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ವಿಜಯಪುರವನ್ನು ಕಾಂಗ್ರೆಸ್ ಈ ಸಲ ತನ್ನದಾಗಿಸಿಕೊಳ್ಳುವ ಯತ್ನದಲ್ಲಿದೆ.
ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ 6 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿಯೂ ಅಂತಹದೇ ಗೆಲುವಿನ ನಿರೀಕ್ಷೆಯಲ್ಲಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೀರಾ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್ ಪಾಲಿಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿನ ಗೆಲುವೇ ಮೆಟ್ಟಿಲಾಗಬೇಕಿದೆ.
ಜಿಲ್ಲೆಗೆ ಎರಡು ಮಂತ್ರಿ ಸ್ಥಾನಗಳನ್ನು ನೀಡಲಾಗಿರುವುದು ಕೂಡ ಲೋಕಸಭಾ ಚುನಾವಣೆಯಲ್ಲಿ ನೆರವಾಗಬಹುದು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ರಾಜು ಅಲಗೂರ ಕಾಂಗ್ರೆಸ್ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ರಾಜು ಅಲಗೂರ ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದರು.
ಅವರು ಪ್ರಬಲ ಚಲವಾದಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಮುದಾಯದ ಬಲ ಅವರ ಕೈಹಿಡಿಯಲಿದೆ ಎನ್ನಲಾಗುತ್ತಿದೆ. ರೈತ, ದಲಿತ ಹೋರಾಟಗಳ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಮಾಜಿ ಉಪನ್ಯಾಸಕ ರಾಜು ಆಲಗೂರ ಒಮ್ಮೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಅನುಭವ ಹೊಂದಿದ್ದಾರೆ.
ಬಿಜೆಪಿಯ ಬಲವೂ ಕಡಿಮೆಯಿಲ್ಲ
ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಮೂರು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವವರು ರಮೇಶ್ ಜಿಗಜಿಣಗಿ. ಬೇರೆ ಕ್ಷೇತ್ರಗಳಿಂದಲೂ ಲೋಕಸಭೆ ಪ್ರವೇಶಿಸಿರುವ ಅವರು ಸತತ 6 ಬಾರಿ ಸಂಸದರಾಗಿರುವ ಹೆಗ್ಗಳಿಕೆ ಹೊಂದಿದ್ದಾರೆ.
71 ವರ್ಷ ವಯಸ್ಸಿನ ಜಿಗಜಿಣಗಿ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿತ್ತು. ಆದರೆ ಪಕ್ಷ ಮತ್ತೆ ಅವರಿಗೇ ಮಣೆ ಹಾಕಿದೆ. ಹಾಗಾಗಿ ಈ ಬಾರಿ ಹ್ಯಾಟ್ರಿಕ್ ಗೆಲುವಿನ ಸರದಾರ ಜಿಗಜಿಣಗಿ ಹಾಗೂ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಇರುವ ಮಾಜಿ ಶಾಸಕ ರಾಜು ಆಲಗೂರ ಅವರ ನಡುವೆ ನೇರ ಸ್ಪರ್ಧೆ ನಡೆಯಲಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಪೈಪೋಟಿಯೊಡ್ಡಿದ್ದು ಜೆಡಿಎಸ್. ವಿಜಯಪುರದಲ್ಲಿ ಒಂದು ಶಾಸಕ ಸ್ಥಾನವನ್ನೂ ಗೆದ್ದಿರುವ ಜೆಡಿಎಸ್, ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ತನ್ನ ಸಾಮರ್ಥ್ಯ ತೋರಿಸಲು ಬಯಸಿತ್ತು. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಹೆಚ್ಚು ಪ್ರಬಲವಾಗಿರುವುದು ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರವನ್ನು ಗೆದ್ದಿರುವ ಜೆಡಿಎಸ್, ಇಂಡಿ, ಬಸವನ ಬಾಗೇವಾಡಿ, ನಾಗಠಾಣಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಮತಗಳನ್ನು ಹೊಂದಿದೆ. ಕಳೆದ ಬಾರಿ ಸುನಿತಾ ಚವ್ಹಾಣ್ ಅವರು ಹತ್ತಿರ ಹತ್ತಿರ 4 ಲಕ್ಷ ಮತಗಳನ್ನು ಪಡೆದಿದ್ದರು.ಆದರೆ ಈಗ ಸೀಟು ಬಿಜೆಪಿ ಪಾಲಾಗಿರುವುದರಿಂದ ಜೆಡಿಎಸ್ ನ ಬಲದಿಂದ ಬಿಜೆಪಿಗೆ ಎಷ್ಟು ಸಹಾಯವಾಗಲಿದೆ ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ಗೆ ರಾಜ್ಯದಲ್ಲಿ ಪಕ್ಷ ಆಡಳಿತದಲ್ಲಿರುವುದು, ಕ್ಷೇತ್ರದಲ್ಲಿರುವ ಪಕ್ಷದ ಆರು ಶಾಸಕರು, ಇಬ್ಬರು ಸಚಿವರು, ಜೊತೆಗೆ ಅಭ್ಯರ್ಥಿ ಆಲಗೂರ ಅವರ ಅನುಭವ ಹಾಗೂ ತಳಮಟ್ಟದಲ್ಲಿ ಅವರಿಗಿರುವ ಸಂಪರ್ಕ ಗೆಲುವಿನ ವಿಶ್ವಾಸ ಮೂಡಿಸಿದೆ.
ಆದರೆ ಕ್ಷೇತ್ರದಲ್ಲಿ ಬಲವಾದ ಸಂಘಟನೆ ಇರುವ ಬಿಜೆಪಿ ಜೆಡಿಎಸ್ ಎರಡೂ ಜೊತೆಯಾಗಿರುವುದರಿಂದ ಮೈತ್ರಿಪಕ್ಷಗಳ ಎದುರು ಕಾಂಗ್ರೆಸ್ ಏನು ರಣತಂತ್ರ ರೂಪಿಸಲಿದೆ ಎಂಬುದು ಈ ಹಂತದಲ್ಲಿ ಬಹಳ ಮುಖ್ಯವಾಗಲಿದೆ.