ವಿಜಯೇಂದ್ರ ತಲೆದಂಡ?!
ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸುದ್ದಿಗೆ ಹೆಸರಾದ ಸುದ್ದಿಮಾಧ್ಯಮದವರಲ್ಲಿ ಅಚ್ಚರಿ ಮೂಡಿಸಿದೆ. ಪುತ್ರ ವ್ಯಾಮೋಹಿ ಯಡಿಯೂರಪ್ಪ, ಕುಟುಂಬ ವ್ಯಾಮೋಹಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಂಗಾಲಾಗಿ ಕೂತಿದ್ದಾರೆ. ಆದರೆ ಇಲ್ಲಿಯವರೆಗೂ ಅವರಲ್ಲಿ ಯಾರೊಬ್ಬರೂ ಸೋಲಿನ ನೈತಿಕ ಹೊಣೆ ಹೊತ್ತಿಲ್ಲ. ಅಷ್ಟು ಮಾತ್ರವಲ್ಲ ಅನುಭವಿ ರಾಜಕಾರಣಿಗಳಾದ ಯಡಿಯೂರಪ್ಪ, ದೇವೇಗೌಡರು ಆತ್ಮಾವಲೋಕನ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಮತದಾರರು ಮಾತ್ರ ನಾವು ಯಾರ ಕುಟುಂಬದ ಜೀತದಾಳುಗಳಲ್ಲ ಎಂದು ಹೆಮ್ಮೆಯ ನಗು ಬೀರುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಮೂರು ಕಡೆ ಗೆದ್ದಿದ್ದಕ್ಕೆ ಬೀಗುತ್ತಾ, ಮಹಾರಾಷ್ಟ್ರ ಸೋತಿದ್ದಕ್ಕೆ ರೋದಿಸುತ್ತಾ ಕೂತಿದ್ದಾರೆ. ಕರ್ನಾಟಕದ ಉಪಚುನಾವಣೆಗಳ ಗೆಲುವಿನ ಕಿರೀಟ ಸಹಜವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಿಗೇರಿದೆ. ಅವರ ಒಳ ಮತ್ತು ಹೊರ ಶತ್ರುಗಳು ಥಂಡಾ ಹೊಡೆಯುವಂತಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಮಹಾರಾಷ್ಟ್ರ ಗೆಲುವಿನ ರೂವಾರಿಯಾಗುವಲ್ಲಿ ವಿಫಲರಾಗಿದ್ದಾರೆ. ದೇಶದಲ್ಲಿ ಬಿಜೆಪಿಗೆ ಎಲ್ಲೇ ಗೆಲುವಾದರೂ ಅದು ಮೋದಿಯವರ ತಲೆಗೆ ತುರಾಯಿ ಆಗುತ್ತದೆ. ಕರ್ನಾಟಕದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದ್ದಕ್ಕೆ ಯಡಿಯೂರಪ್ಪ ಅವರ ಪ್ರೀತಿಯ ಮಗ ವಿಜಯೇಂದ್ರ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ. ಅಷ್ಟಕ್ಕೂ ಪ್ರತಿನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರು ಶಿಗ್ಗಾಂವಿಯಲ್ಲಿ ಠಿಕಾಣಿ ಹೂಡಿ ಭರತ್ ಬೊಮ್ಮಾಯಿಯವರನ್ನು ಗೆಲ್ಲಿಸಿಕೊಂಡು ಪಂಚಮಸಾಲಿ ಸಮುದಾಯದ ಏಕಮೇವಾದ್ವಿತೀಯ ನಾಯಕನೆನಿಸಿಕೊಳ್ಳಬೇಕೆಂಬ ಹುಚ್ಚು ಆಸೆಗೆ ಕಲ್ಲು ಬಿದ್ದಿದೆ.
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಜಾಣ ಮತ್ತು ಅದೃಷ್ಟವಂತ ರಾಜಕಾರಣಿ ಎಂಬುದು ಸಿದ್ದರಾಮಯ್ಯ ಅವರ ಪಾಲಿಗೆ ಕಣ್ಣ ಮುಂದಿನ ಸತ್ಯವಾಗಿ ಗೋಚರಿಸಿದೆ. ಇಳಿಯ ವಯಸ್ಸಿನಲ್ಲಿ ದೇವೇಗೌಡರು ಆಡಿದ ದ್ವೇಷ ಮತ್ತು ದುರಹಂಕಾರದ ಮಾತುಗಳು, ಬಿಜೆಪಿ ಮುಖಂಡರು ವಕ್ಫ್ ಹೋರಾಟ ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯ ಅವರ ಪಾಲಿಗೆ ಅಕ್ಷರಶಃ ವರವಾಗಿ ಪರಿಣಮಿಸಿವೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಕುಟುಂಬ ತುಸು ಎಡವಿದ್ದು ನಿಜ. ಆದರೆ ಕೆಲ ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿಯ ಸತ್ಯ ಹರಿಶ್ಚಂದ್ರ ಮುಖಂಡರು ಒಟ್ಟಿಗೆ ಸೇರಿ ಹೆಣೆದಿದ್ದ ಕುತಂತ್ರದ ಜಾಲ ಈ ಫಲಿತಾಂಶದಿಂದಾಗಿ ಹರಿದು ಹೋಗಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಸೇಫ್; ಅತ್ಯುತ್ತಮ ಕೆಲಸ ಮಾಡಲೆಂದು. ಒಂದೂವರೆ ವರ್ಷದ ಆಡಳಿತ ವ್ಯವಸ್ಥೆಯೇ ಮುಂದುವರಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಹಾರಾಷ್ಟ್ರ ಮಾದರಿಯಲ್ಲಿ ಸ್ವೀಪ್ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಅದಕ್ಕೆ ಕರ್ನಾಟಕ ಕಾಂಗ್ರೆಸ್ ನಾಯಕರೇ ಹೊಣೆಗಾರರಾಗುತ್ತಾರೆ; ಹೊರತು ಇವಿಎಂ ಅಲ್ಲ. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ, ದೇವೇಂದ್ರ ಪಡ್ನವೀಸ್ ಮತ್ತು ಅಜಿತ್ ಪವಾರ್ ಕ್ರಿಯಾಶೀಲತೆಗೆ ಸಮವಾಗುವ ಒಬ್ಬ ನಾಯಕನೂ ಮಹಾ ವಿಕಾಸ್ ಅಘಾಡಿಯಲ್ಲಿ ಇರಲಿಲ್ಲ. ಕ್ರಿಯಾಶೀಲ ನಾಯಕರನ್ನು ಸೈಡ್‌ಲೈನ್ ಮಾಡಿದ್ದರು. ಬಿಜೆಪಿ ಚುನಾವಣಾ ಗೆಲುವೇ ಮಹಾ ವಿಕಾಸ್ ಅಘಾಡಿ ನಾಯಕರಿಗೆ ಮುಳುವಾಯಿತು. ಹಿರಿ ತಲೆಗಳು ಕಿರಿಯರ ಕ್ರಿಯಾಶೀಲತೆ ಮತ್ತು ಉತ್ಸಾಹವನ್ನು ಸಮರ್ಪಕವಾಗಿ ಬಳಸಿಕೊಳ್ಳಲೇ ಇಲ್ಲ.
ಕರ್ನಾಟಕದಲ್ಲಿನ ಉಪಚುನಾವಣೆಯಲ್ಲಿ ಅನುಸರಿಸಿದ ತಂತ್ರಗಾರಿಕೆ ಮಹಾರಾಷ್ಟ್ರದಲ್ಲಿ ಅಳವಡಿಸಿಕೊಂಡಿದ್ದರೆ; ಈ ರೀತಿಯ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಾಣತನ ಮೆಚ್ಚಿಕೊಳ್ಳಲೇಬೇಕು. ಹಣ ಬಲ, ಜಾತಿ ಬಲವನ್ನು ಬಿಜೆ- ಜೆಡಿಎಸ್ ನಾಯಕರು ಕಾಂಗ್ರೆಸ್‌ನವರಿಗಿಂತ ಜಾಸ್ತಿಯೇ ಬಳಸಿದ್ದಾರೆ. ಆದರೆ ಜಾತಿ, ಮತ, ಧರ್ಮದ ಸಮೀಕರಣ ಕಾಂಗ್ರೆಸ್ ಪರವಾಗಿತ್ತು. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಝಮೀರ್ ಅಹ್ಮದ್ ನಡುವೆ ಏನೇ ಭಿನಾಭಿಪ್ರಾಯವಿದ್ದರೂ ಒಗ್ಗಟ್ಟು ಪ್ರದರ್ಶಿಸಿದ್ದರು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಫಲಿತಾಂಶ ತೋರಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಾಯಕರು ಪ್ರಮುಖ ಅಸ್ತ್ರವನ್ನಾಗಿ ಬಳಸಿದ್ದು ವಕ್ಫ್ ಪ್ರಕರಣವನ್ನು. 2023ರ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಬಣದ ನೇತೃತ್ವದ ತಂಡ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕಾಗಿ ಬಳಸಿದ್ದ ಹಿಜಾಬ್, ಹಲಾಲ್ ಕಟ್, ಜಟಕಾ ಕಟ್, ಟಿಪ್ಪು, ಉರಿಗೌಡ-ನಂಜೇಗೌಡ, ಮುಸ್ಲಿಮ್ ಮೀಸಲಾತಿ ರದ್ದು, ಮತಾಂತರ ನಿಷೇಧ ಕಾಯ್ದೆಗಳು ಕೆಲಸ ಮಾಡಲೇ ಇಲ್ಲ. ಈ ವಿಫಲ ಪ್ರಯೋಗದಿಂದಲಾದರೂ ರಾಜ್ಯ ಬಿಜೆಪಿ ನಾಯಕರು ಪಾಠ ಕಲಿಯಬೇಕಿತ್ತು. ಕೋಮುವಾದಿ ರಾಜಕಾರಣದ ಮೇಲೆ ನಂಬಿಕೆ ಇಟ್ಟಿರುವ ಸಂತೋಷ್-ಬಸನಗೌಡ ಬಣ ಯಾವ ಕಾರಣಕ್ಕೂ ಪಾಠ ಕಲಿಯಲಾರದು. ಶಿಗ್ಗಾಂವಿ ಮುಸ್ಲಿಮ್ ಬಾಹುಳ್ಯದ ಮತಕ್ಷೇತ್ರ. ಮಗನ ಕಾರಣಕ್ಕಾಗಿಯಾದರೂ ಬಸವರಾಜ ಬೊಮ್ಮಾಯಿ ಮತೀಯ ರಾಜಕಾರಣದ ಹಾದಿಯನ್ನು ತಿರಸ್ಕರಿಸಬೇಕಿತ್ತು. ಶಿಗ್ಗಾಂವಿಯಲ್ಲಿ ಎರಡು ದಶಕಗಳ ಕಾಲ ಪಂಚಮಸಾಲಿ ಸಮುದಾಯವನ್ನು ವಂಚಿಸುತ್ತ ಬಂದಿದ್ದ ಬಸವರಾಜ ಬೊಮ್ಮಾಯಿ ವಿರುದ್ಧ ಆ ಸಮುದಾಯದ ನಾಯಕರು ಕತ್ತಿಮಸೆಯುತ್ತಿದ್ದರು. ಸಮಯಕ್ಕಾಗಿ ಕಾಯುತ್ತಿದ್ದರು. ಸಂದರ್ಭ ನೋಡಿ ಏಟು ಕೊಟ್ಟರು. ಸೋಮಣ್ಣ ಬೇವಿನ ಮರದ ಸೇರಿದಂತೆ ಪಂಚಮಸಾಲಿ ಮುಖಂಡರು ಮೊದಲ ಬಾರಿಗೆ ಕಾಂಗ್ರೆಸ್ ಪರ ಗಟ್ಟಿಯಾಗಿ ನಿಂತರು.
ಶಿಗ್ಗಾಂವಿ ಮತಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ. ಕುಂದಗೋಳದಲ್ಲಿ ಶಿವಳ್ಳಿ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪರಸ್ಪರ ಕೊಡುಕೊಳ್ಳುವ ವ್ಯವಹಾರ ನಡೆಸಿ ಸಾದರ ಮತ್ತು ಕುರುಬ ಮತಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಸಿದ್ದರಾಮಯ್ಯನವರು ಈ ಕಳ್ಳಾಟವನ್ನು ನಜರ್ ಅಂದಾಜ್ ಮಾಡಿದ್ದರು. ಒಮ್ಮೆ ಕುಸುಮಾ ಶಿವಳ್ಳಿ ಗೆಲುವು ಸಾಧಿಸಿದ್ದೂ ಬಸವರಾಜ ಬೊಮ್ಮಾಯಿಯವರ ಕೃಪಾಶೀರ್ವಾವಾದದಿಂದ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಸ್ಪರ್ಧಿಸಿ ಗೆದ್ದರು. ಶಿಗ್ಗಾಂವಿ, ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಈ ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ಪ್ರಹ್ಲಾದ್ ಜೋಶಿಗೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ದೊರಕಿತ್ತು. ಆದರೆ ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಬಂದಿತ್ತು. ಲೋಕಸಭಾ ಲೆಕ್ಕ ಗಮನಿಸಿದರೆ ಆ ಕ್ಷೇತ್ರದಲ್ಲಿ ಮಗನನ್ನು ಅಭ್ಯರ್ಥಿ ಮಾಡಲೇಬಾರದಿತ್ತು. ತಾನೊಬ್ಬನೇ ಜಾಣ, ಎಲ್ಲರನ್ನೂ ಎಲ್ಲಾ ಕಾಲಕ್ಕೂ ಯಾಮಾರಿಸಬಲ್ಲೆ ಎಂಬ ಬಸವರಾಜ ಬೊಮ್ಮಾಯಿ ದುರಹಂಕಾರಕ್ಕೆ ಮೊದಲ ಬಾರಿ ಸೋಲಾಗಿದೆ. ಬಿಜೆಪಿಯ ವಕ್ಫ್ ಬ್ರಹ್ಮಾಸ್ತ್ರಕ್ಕೆ ಶಿಗ್ಗಾಂವಿಯ ಮುಸ್ಲಿಮ್ ಮತದಾರರು ಒಡಕು ಮರೆತು ಏಕತೆಯ ಮಂತ್ರ ಜಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಚುನಾವಣಾ ಫಲಿತಾಂಶದ ಮೇಲೆಯೇ ತಮ್ಮ ಭವಿಷ್ಯ ಅಡಗಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದರು. ಗಣನೀಯ ಪ್ರಮಾಣದ ಕುರುಬರು ಮತ್ತು ಅಹಿಂದ ಮತದಾರರು ಕಾಂಗ್ರೆಸ್ ಪರ ಗಟ್ಟಿಯಾಗಿ ನಿಂತರು. ಬಸವರಾಜ ಬೊಮ್ಮಾಯಿ ಪುತ್ರ ಭರತ್‌ನ ಹಣಬಲ ಯಶಸ್ವಿಯಾಗಲಿಲ್ಲ.
ಚನ್ನಪಟ್ಟಣದಲ್ಲೂ ಪುತ್ರ ವ್ಯಾಮೋಹ, ಕುಟುಂಬ ರಾಜಕಾರಣ ಮತ್ತು ಮತೀಯ ರಾಜಕಾರಣಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ದೇವೇಗೌಡ-ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಕೂಡಿಕೆ ಮಾಡಿಕೊಂಡಿದ್ದೇ ರಾಮನಗರ, ಚನ್ನಪಟ್ಟಣ ಮಾತ್ರವಲ್ಲ ಕರ್ನಾಟಕದ ಮುಸ್ಲಿಮ್ ಸಮುದಾಯಕ್ಕೆ ಇಷ್ಟವಿರಲಿಲ್ಲ. 2019ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ 40ಕ್ಕೆ ಏರಿದ್ದರಲ್ಲಿ ಮುಸ್ಲಿಮ್ ಮತದಾರರ ಪಾತ್ರ ಬಹಳ ದೊಡ್ಡದಿತ್ತು. ಬಿಜೆಪಿಯೊಂದಿಗೆ ಅನಿವಾರ್ಯವಾಗಿ ರಾಜಕೀಯ ಅಸ್ತಿತ್ವದ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಂಡರೂ ಸಂತೋಷ್-ಬಸನಗೌಡ ಯತ್ನಾಳ್ ತರಹ ಮುಸ್ಲಿಮ್ ವಿರೋಧಿ ರಾಜಕಾರಣ ಮಾಡಬಾರದಿತ್ತು. ಬಿಜೆಪಿಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್‌ಗೆ ಹೋಗಿದ್ದರಿಂದ ಆತನ ಗೆಲುವಿನ ಅಂತರ ಜಾಸ್ತಿಯಾಯಿತು. ಯೋಗೇಶ್ವರ್‌ಗೆ ಮುಸ್ಲಿಮ್ ಮತಗಳ ಜೊತೆಗೆ, ದೇವೇಗೌಡ-ಕುಮಾರಸ್ವಾಮಿ ಕುಟುಂಬಕ್ಕೆ ಹೊರತಾದ ಒಕ್ಕಲಿಗ ವ್ಯಕ್ತಿಯನ್ನು ಬೆಳೆಸಲಾರರು ಎಂಬ ಭಾವನೆ ಹೊಂದಿದ ಗೌಡರ ಮತಗಳು ಸೇರಿಕೊಂಡು ಭರ್ಜರಿ ಗೆಲುವು ಪ್ರಾಪ್ತವಾಗಿದೆ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರಿಗಾದರೂ ಮತೀಯ ರಾಜಕಾರಣ ಕರ್ನಾಟಕದ ಜಾಯಮಾನಕ್ಕೆ ಒಗ್ಗುವುದಿಲ್ಲ ಎಂಬ ಸತ್ಯ ಗೊತ್ತಾಗಬೇಕಿತ್ತು. ಕುಟುಂಬ ವ್ಯಾಮೋಹದಲ್ಲಿ ದೇವೇಗೌಡರು ಋಣಪಜ್ಞೆಯನ್ನೇ ಮರೆತರು. 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾದದ್ದು, 1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳದ 16 ಜನ ಸಂಸದರಾಗಿ ಆಯ್ಕೆಯಾಗಿದ್ದು, ನಂತರ ಅವರು ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಲು ಸಾಧ್ಯವಾಗಿದ್ದು ಮುಸ್ಲಿಮ್ ಮತದಾರರು ಬೆಂಬಲಿಸಿದ್ದರಿಂದ. ದೇವೇಗೌಡರು ಮನಸ್ಸು ಮಾಡಿದ್ದರೆ ಕರ್ನಾಟಕದಲ್ಲಿ ಬಿಜೆಪಿಯ ಮತೀಯ ರಾಜಕಾರಣಕ್ಕೆ ಕಡಿವಾಣ ಹಾಕಬಹುದಿತ್ತು. ಆ ರಾಜಕಾರಣ ಈಗ ಪ್ರೀತಿಯ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಬಲಿತೆಗೆದುಕೊಂಡಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿರಲಿಲ್ಲ. ತುಕಾರಾಂ ಅವರು ತಮ್ಮ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಿಜೆಪಿ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿ ಗೆಲುವಿಗೆ ಹತ್ತಿರವಾಗಿತ್ತು. ಆದರೆ ಚುನಾವಣಾ ಹೊಣೆಗಾರಿಕೆಯನ್ನು ಉತ್ತರ ಕುಮಾರನಂತಿರುವ ಜನಾದರ್ನ ರೆಡ್ಡಿಗೆ ನೀಡಿದ್ದು ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿತು. ರೆಡ್ಡಿ ಬದಲಿಗೆ ಸ್ವತಃ ಯಡಿಯೂರಪ್ಪ ಹೊಣೆಗಾರಿಕೆ ಹೊತ್ತು ಸಂಡೂರಿನಲ್ಲಿ ಕ್ಯಾಂಪ್ ಮಾಡಿದ್ದರೆ ಬಂಗಾರು ಹನುಮಂತು ವಿಧಾನಸಭೆ ಪ್ರವೇಶ ಮಾಡುತ್ತಿದ್ದರು. ಕರ್ನಾಟಕದಾದ್ಯಂತ ಯಡಿಯೂರಪ್ಪ ಅವರಿಗೆ ಪ್ರಭಾವ ಇದೆ. ಆದರೆ ಅವರ ಮಗ ವಿಜಯೇಂದ್ರ ಪ್ರಭಾವ ಬೆಳೆಸಿಕೊಳ್ಳುವುದು ಒತ್ತಟ್ಟಿರಲಿ; ಪಕ್ಷವನ್ನು ಸುಸೂತ್ರವಾಗಿ ನಡೆಸುವ ಸಾಮರ್ಥ್ಯವನ್ನೂ ಸಂಪಾದಿಸಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತನ್ನ ಮಗ ಭರತ್‌ನ ಪಟ್ಟಾಭಿಷೇಕ ಮಾಡುವುದು ಮಾತ್ರ ಮೊದಲ ಆದ್ಯತೆಯಾಗಿತ್ತು. ಆದರೆ ಮಗನ ಹೀನಾಯ ಸೋಲಿಗೆ ವೇದಿಕೆ ಸಿದ್ಧಪಡಿಸಿದ್ದೇ ಅಪ್ಪ ಬಸವರಾಜ ಬೊಮ್ಮಾಯಿ. ಯಡಿಯೂರಪ್ಪ ಕೃಪಾಶೀರ್ವಾದದಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬೊಮ್ಮಾಯಿ ಸಂತೋಷ್ ಸಲಹೆಯಂತೆ ಆಡಳಿತ ನಡೆಸಿ ಮುಸ್ಲಿಮ್ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದ್ದರು. ಹಿಂದೂ-ಮುಸ್ಲಿಮ್ ಧ್ರುವೀಕರಣದ ರಾಜಕಾರಣದ ರೂವಾರಿ ಸಂತೋಷ್. ಆದರೆ ಅದನ್ನು ಆಡಳಿತದ ಎಲ್ಲಾ ಹಂತಗಳಲ್ಲಿ ಪ್ರಯೋಗಿಸಿ ಅನುಷ್ಠಾನಗೊಳಿಸಿದ್ದು ಬಸವರಾಜ ಬೊಮ್ಮಾಯಿ. ಶಿಗ್ಗಾಂವಿಯಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇದೆ ಎಂಬ ಕಟು ವಾಸ್ತವ ಗೊತ್ತಿದ್ದೂ; ಅಂತಹ ಆಡಳಿತ ನೀಡುತ್ತಾರೆಂದರೆ ಬೊಮ್ಮಾಯಿ ಎಂತಹ ದಡ್ಡನಿರಬೇಕು. ಸತತ 20 ವರ್ಷಗಳ ಕಾಲ ಶಿಗ್ಗಾಂವಿ ಮತ್ತು ಹಾವೇರಿ ಜಿಲ್ಲೆಯ ಪಂಚಮಸಾಲಿ ಸಮುದಾಯವನ್ನು ಎಲ್ಲಾ ಹಂತದಲ್ಲಿ ವಂಚಿಸಿ ಚುನಾವಣೆ ಎದುರಿಸುವ ಭಂಡ ಧೈರ್ಯ ತೋರಿಸುತ್ತಾರೆಂದರೆ ಬೊಮ್ಮಾಯಿಯವರಿಗೆ ಹಣ ಬಲದ ಮೇಲೆ ಅದೆಷ್ಟು ನಂಬಿಕೆ ಇರಬೇಕು? ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು ಎಂಬ ಆಸೆ ಇದ್ದಿದ್ದು ಯಡಿಯೂರಪ್ಪ, ವಿಜಯೇಂದ್ರ ಮತ್ತು ಸ್ಪರ್ಧಾ ಕಣದಲ್ಲಿದ್ದ ಅಭ್ಯರ್ಥಿಗಳಿಗೆ ಮಾತ್ರ. ದೇವೇಗೌಡ -ಕುಮಾರಸ್ವಾಮಿಯವರಿಗೆ ನಿಖಿಲ್ ಕುಮಾರಸ್ವಾಮಿ ಗೆಲುವು ಮಾತ್ರ ಮೊದಲ ಆದ್ಯತೆಯಾಗಿತ್ತು.
ಇನ್ನುಳಿದಂತೆ; ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರರ ಕಡು ವಿರೋಧಿಗಳು, ಅದರಲ್ಲೂ ಕರ್ನಾಟಕದ ಬಿಜೆಪಿಯ ನಾಯಕತ್ವದ ಮೇಲೆ ಕಣ್ಣಿಟ್ಟವರು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾವ ಕಾರಣಕ್ಕೂ ಗೆಲ್ಲಬಾರದೆಂದು ಹರಕೆ ಹೊತ್ತಿದ್ದರು. ಹಾಗೆ ಹರಕೆ ಹೊತ್ತವರು ಬಿಜೆಪಿ-ಜೆಡಿಎಸ್ ಮೈತ್ರಿಯ ವಿರೋಧಿಗಳು. ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣ ಮಾಡಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸುವ ಕನಸು ಕಾಣುತ್ತಿರುವವರು. ಈ ಬಣ ಸಂಘ ಪರಿವಾರಕ್ಕೆ ಹತ್ತಿರವಾಗಿದೆ. ಈ ಚುನಾವಣೆಯ ಫಲಿತಾಂಶ ಇವರ ಬಲ ಹೆಚ್ಚಿಸಿದೆ. ಆ ಬಣದಲ್ಲಿ ಸಂತೋಷ್ ನೇಪಥ್ಯದಲ್ಲಿದ್ದು ನೀಲನಕ್ಷೆ ರೂಪಿಸುತ್ತಿದ್ದರೆ; ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಸಿದ್ದೇಶ್ವರ ಮುಂತಾದವರು ಆ ತಂಡದ ಕಾಲಾಳುಗಳಂತೆ ದುಡಿಯುತ್ತಿದ್ದಾರೆ. ಈ ಹೊತ್ತು ಬಿಜೆಪಿಗೆ ದುರ್ಗತಿ ಒದಗಿ ಬರಲು ಯಡಿಯೂರಪ್ಪ ಮತ್ತು ಎಡಬಿಡಂಗಿ ಹೈಕಮಾಂಡ್ ಕಾರಣ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿಯನ್ನು ಕೆಳಹಂತದಿಂದ ಕಟ್ಟಿ ಬೆಳೆಸಿದವರು. ಬೆಲೆ ಏರಿಕೆ, ರೈತ ಪರ ಮತ್ತು ಬಗರ್‌ಹುಕುಂ ಸಾಗುವಳಿದಾರರ ಹಿತಕ್ಕಾಗಿ ಹೋರಾಟಗಳನ್ನು ರೂಪಿಸಿ ಜನನಾಯಕರಾಗಿ ರೂಪುಗೊಂಡವರು. ಕೋಮುಗಲಭೆ ಸೃಷ್ಟಿಸುವ ಪ್ರಕರಣಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ ನಿದರ್ಶನಗಳು ಇಲ್ಲವೇ ಇಲ್ಲ.
2006ರಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಅವಕಾಶ ಒದಗಿ ಬಂದಾಗ ಹಸಿರು ಟವೆಲ್ ಧರಿಸಿ ಪ್ರಮಾಣವಚನ ಸ್ವೀಕರಿಸಿದ್ದರು. ಜೆಡಿಎಸ್‌ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಬಿಜೆಪಿಯ ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರ ನಡೆಸಿದಾಗ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವೇ ಹೊರತು ಮತೀಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡುವ ಯೋಜನೆಗಳನ್ನೇನು ರೂಪಿಸಿರಲಿಲ್ಲ. ಭಾಗ್ಯಲಕ್ಷ್ಮಿ, ಸೈಕಲ್ ವಿತರಣೆಯಂತಹ ಯೋಜನೆಗಳು ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಪರಿಕಲ್ಪನೆಯ ವ್ಯಾಪ್ತಿಯಲ್ಲೇ ರೂಪುಗೊಂಡಿದ್ದವು. ಕುಮಾರಸ್ವಾಮಿಯ ಗ್ರಾಮ ವಾಸ್ತವ್ಯ, ಮತಕ್ಷೇತ್ರಕ್ಕೊಂದು ಮಾದರಿ ಶಾಲೆಗಳ ನಿರ್ಮಾಣ ಯೋಜನೆಗಳನ್ನು ಜನ ಮೆಚ್ಚಿಕೊಂಡಿದ್ದರು. 2006ರಲ್ಲಿ ಬಿಜೆಪಿ-ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂದಾಗ ಹಿಂದಿನ ಧರಂಸಿಂಗ್ ಸರಕಾರ ನೇಮಿಸಿದ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ನೇಮಕಾತಿಯನ್ನು ರದ್ದುಪಡಿಸಿರಲಿಲ್ಲ. 20 ತಿಂಗಳ ನಂತರ ಅಧಿಕಾರ ಹಸ್ತಾಂತರದ ಗೊಂದಲದಿಂದ ಪರಸ್ಪರ ದೂರವಾದರೇ ಹೊರತು ಮತೀಯ ರಾಜಕಾರಣದ ಕಾರಣಕ್ಕೆ ಬಿಕ್ಕಟ್ಟು ತಲೆದೋರಿರಲಿಲ್ಲ.
ಕೊಟ್ಟ ಮಾತಿಗೆ ತಪ್ಪಿದ ಕುಮಾರಸ್ವಾಮಿ ವಿರುದ್ಧ ಹರಕೆಯ ಕುರಿಯಂತೆ ಮತದಾರರ ಎದುರು ಹೋದ ಯಡಿಯೂರಪ್ಪ ಅವರನ್ನು ಜನ ಬೆಂಬಲಿಸಿದರು. ಯಡಿಯೂರಪ್ಪ ಕೋಮುವಾದಿ ರಾಜಕಾರಣ ಮಾಡಲಾರರು ಎಂಬ ಭರವಸೆಯ ಮೇಲೆ ಜನತಾ ಪರಿವಾರದ ಅನೇಕ ಹಿರಿಯ ರಾಜಕಾರಣಿಗಳು ಬಿಜೆಪಿಯನ್ನು ಅಪ್ಪಿಕೊಂಡಿದ್ದರು. ಬಿಜೆಪಿಯ ರಾಜಕೀಯ ನೆಲೆ ವಿಸ್ತಾರಗೊಂಡಿದ್ದೇ ಜನತಾ ಪರಿವಾರದ ಹಿರಿಯ ನಾಯಕರಿಂದ. ರಾಮಕೃಷ್ಣ ಹೆಗಡೆ-ದೇವೇಗೌಡರ ರಾಜಕೀಯ ತಿಕ್ಕಾಟದಲ್ಲಿ ಕೆಲವರು ಕಾಂಗ್ರೆಸ್ ಸೇರಿಕೊಂಡರೆ, ಇನ್ನೂ ಕೆಲವರು ಯಡಿಯೂರಪ್ಪ ನಾಯಕತ್ವ ನಂಬಿ ಬಿಜೆಪಿ ಸೇರಿಕೊಂಡಿದ್ದರು. ಯಡಿಯೂರಪ್ಪ ನಂಬಿದವರ ಕೈಬಿಡುವುದಿಲ್ಲ ಎಂಬ ಪ್ರತೀತಿಯೇ ಕರ್ನಾಟಕದ ಬಿಜೆಪಿಯನ್ನು ಜನ ನಂಬುವಂತಾಯಿತು. ಆ ಕಾರಣಕ್ಕೆ 2008ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ 110 ಶಾಸಕರ ಬಲ ಹೊಂದುವಂತಾಯಿತು. ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಿದ ಯಡಿಯೂರಪ್ಪ ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಹಸಿರು ಟವೆಲ್ ವ್ಯಾಮೋಹ ಕಳೆದುಕೊಂಡಿರಲಿಲ್ಲ. ಕರ್ನಾಟಕದ ಮುಸ್ಲಿಮರು ಅಭದ್ರತೆಯ ಭಾವನೆ ಫೀಲ್ ಮಾಡಿರಲಿಲ್ಲ ಫೀಲ್ ಮಾಡಿರಲಿಲ್ಲ. ಆ ಕಾರಣಕ್ಕೆ ಮುಸ್ಲಿಮ್ ಸಮುದಾಯ ಯಡಿಯೂರಪ್ಪ ಅವರನ್ನು ಕೋಮುವಾದಿ ರಾಜಕಾರಣಿ ಎಂದು ಭಾವಿಸಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳು ಕಾನೂನು ಸ್ವರೂಪ ಪಡೆಯಲೇ ಇಲ್ಲ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇನೆಂದು ಯಡಿಯೂರಪ್ಪ ಮತ್ತೆ ಮತ್ತೆ ಹೇಳುತ್ತಿದ್ದರು. ಆದರೆ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿ ಸಂತೋಷ್ ಬಣ್ಣದ ಕುತಂತ್ರದಿಂದ ಅಧಿಕಾರ ಕಳೆದುಕೊಂಡರು.
ಬಸವರಾಜ ಬೊಮ್ಮಾಯಿಯವರ ಮಿತಿಮೀರಿದ ಕೋಮುವಾದಿ ಆಡಳಿತ ಮತ್ತು ಬಿ.ಎಲ್. ಸಂತೋಷ್ ಅವರ ಹಿಂದೂ-ಮುಸ್ಲಿಮ್ ಧ್ರುವೀಕರಣ ರಾಜಕಾರಣದ ಪ್ರಯೋಗ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣ ವಿಫಲವಾಯಿತು. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೇ ಆ ಪ್ರಯೋಗ ವಿಫಲವಾಯಿತು. ತಮಿಳುನಾಡಿನಲ್ಲಿ ಸಂತೋಷ್ ಶಿಷ್ಯ ಅಣ್ಣಾಮಲೈ ಹಗಲಿರುಳು ಶ್ರಮಿಸಿದ ಮೇಲೂ ಮತೀಯ ರಾಜಕಾರಣದ ಪರಿಣಾಮವಾಗಿ ಮುಗ್ಗರಿಸಿದೆ. ಕರ್ನಾಟಕದಲ್ಲಿ ಕರಾವಳಿ ಪ್ರದೇಶ ಹೊರತುಪಡಿಸಿ ಹಿಂದೂ-ಮುಸ್ಲಿಮ್ ಧ್ರುವೀಕರಣದ ಮತೀಯ ರಾಜಕಾರಣ ಯಶಸ್ಸು ಪಡೆಯುವುದಿಲ್ಲ ಎಂಬ ಕಠೋರ ಸತ್ಯ ಯಡಿಯೂರಪ್ಪನವರಿಗೆ ಸ್ವಾನುಭವದಿಂದ ಗೊತ್ತಿತ್ತು. ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರಿಗೆ ಕರ್ನಾಟಕ ರಾಜಕೀಯದ ಜಾತಿ ಸಮೀಕರಣದ ಪಾಠ ಬೇರೆ ಯಾರೂ ಹೇಳಿ ಕೊಡಬೇಕಿಲ್ಲ. ಇಷ್ಟೆಲ್ಲ ಗೊತ್ತಿದ್ದೂ ವಕ್ಫ್ ಅಭಿಯಾನವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆಸಲಾಗುತ್ತದೆ. ವಿಜಯೇಂದ್ರ ಮುಡಾ ಪಾದಯಾತ್ರೆ ನಡೆಸಿದ್ದು ರಾಜಕಾರಣದ ಒಂದು ಭಾಗ ಎಂದು ಎಲ್ಲರೂ ಭಾವಿಸಿದ್ದರು. ವಿಜಯೇಂದ್ರ ತನ್ನ ತಂದೆ ಯಡಿಯೂರಪ್ಪ ರಾಜಕೀಯ ಮಾದರಿ ಅನುಸರಿಸಿದ್ದರೂ ಈ ಉಪಚುನಾವಣೆಯಲ್ಲಿ ಮುಖ ಉಳಿಸಿಕೊಳ್ಳಬಹುದಿತ್ತು.
ವಕ್ಫ್ ಪ್ರಕರಣವನ್ನು ಆಡಳಿತಾತ್ಮಕ ನೆಲೆಯಲ್ಲಿ ಇತ್ಯರ್ಥ ಪಡಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಎರಡೆರಡು ವರ್ಷ ಅವಕಾಶ ದೊರೆತಿತ್ತು. ಆದರೆ ಅದನ್ನು ಮುಸ್ಲಿಮ್ ವಿರೋಧಿ ಭಾವನೆ ಪ್ರಸಾರ ಮಾಡಲು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಬಿಜೆಪಿ-ಜೆಡಿಎಸ್‌ಗೆ ತಿರುಗುಬಾಣವಾಗಿ ಪರಿಣಮಿಸಿದೆ. ಹಿಂದೂ-ಮುಸ್ಲಿಮ್ ಧ್ರುವೀಕರಣದ ಮತೀಯ ರಾಜಕಾರಣ ಕರ್ನಾಟಕದ ಸಾಮಾಜಿಕ ಸಂದರ್ಭಕ್ಕೆ ಒಗ್ಗುವುದಿಲ್ಲ ಎಂಬ ಸಂದೇಶವನ್ನು ಈ ಉಪಚುನಾವಣೆಯ ಫಲಿತಾಂಶ ರವಾನಿಸಿದೆ. ಅನುಭವಿ ರಾಜಕಾರಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಾಮರಸ್ಯದ ಪಾಠ ಕಲಿಯಲು ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ ಮತ್ತು ವಿಜಯೇಂದ್ರ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ಕುವೆಂಪು ಹೇಳಿದ್ದರು. ಆ ಮಂತ್ರದ ಸಾರ ಪಾಲಿಸಿದ್ದರೆ ಮೂವರನ್ನೂ ಕಾಪಾಡಬಹುದಿತ್ತು. ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿಯವರನ್ನು ಸರ್ವ ಜನಾಂಗದ ಶಾಂತಿಯ ತೋಟವೇ ತಿರಸ್ಕರಿಸಿದೆ. ಸೋಲಿನ ಹೊಣೆ ಹೊತ್ತು ವಿಜಯೇಂದ್ರ ಮನೆಗೆ ಹೋಗುವುದು ಗ್ಯಾರಂಟಿ. ವಕ್ಫ್ ಪ್ರಕರಣವನ್ನು ಆಡಳಿತಾತ್ಮಕ ನೆಲೆಯಲ್ಲಿ ಇತ್ಯರ್ಥ ಪಡಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಎರಡೆರಡು ವರ್ಷ ಅವಕಾಶ ದೊರೆತಿತ್ತು. ಆದರೆ ಅದನ್ನು ಮುಸ್ಲಿಮ್ ವಿರೋಧಿ ಭಾವನೆ ಪ್ರಸಾರ ಮಾಡಲು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ಬಿಜೆಪಿ-ಜೆಡಿಎಸ್‌ಗೆ ತಿರುಗುಬಾಣವಾಗಿ ಪರಿಣಮಿಸಿದೆ. ಹಿಂದೂ-ಮುಸ್ಲಿಮ್ ಧ್ರುವೀಕರಣದ ಮತೀಯ ರಾಜಕಾರಣ ಕರ್ನಾಟಕದ ಸಾಮಾಜಿಕ ಸಂದರ್ಭಕ್ಕೆ ಒಗ್ಗುವುದಿಲ್ಲ ಎಂಬ ಸಂದೇಶವನ್ನು ಈ ಉಪಚುನಾವಣೆಯ ಫಲಿತಾಂಶ ರವಾನಿಸಿದೆ. ಅನುಭವಿ ರಾಜಕಾರಣಿಗಳಾದ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಾಮರಸ್ಯದ ಪಾಠ ಕಲಿಯಲು ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ ಮತ್ತು ವಿಜಯೇಂದ್ರ ಅವರನ್ನು ಬಲಿಪಶು ಮಾಡುವ ಅಗತ್ಯವಿರಲಿಲ್ಲ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವೆಂದು ಕುವೆಂಪು ಹೇಳಿದ್ದರು. ಆ ಮಂತ್ರದ ಸಾರ ಪಾಲಿಸಿದ್ದರೆ ಮೂವರನ್ನೂ ಕಾಪಾಡಬಹುದಿತ್ತು. ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿಯವರನ್ನು ಸರ್ವ ಜನಾಂಗದ ಶಾಂತಿಯ ತೋಟವೇ ತಿರಸ್ಕರಿಸಿದೆ. ಸೋಲಿನ ಹೊಣೆ ಹೊತ್ತು ವಿಜಯೇಂದ್ರ ಮನೆಗೆ ಹೋಗುವುದು ಗ್ಯಾರಂಟಿ.