15 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರು
► ಹಳ್ಳ ಹಿಡಿದ ಜಲ ಜೀವನ್ ಮಿಷನ್ ಕಾಮಗಾರಿ ► ಕುಡಿಯುವ ನೀರಿಗಾಗಿ ಶಾಲೆ ಬಿಡುತ್ತಿರುವ ಮಕ್ಕಳು ► ಕಟ್ಟಿಗೆ ಕಂಬದ ಮೂಲಕ ವಿದ್ಯುತ್‌ಸಂಪರ್ಕ

ಯಾದಗಿರಿ : ಬೇಸಿಗೆ ಆರಂಭವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಆರಂಭವಾಗುತ್ತಿವೆ. ಸರಕಾರ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದರೂ ಪ್ರಯೋಜನೆಯಾಗುತ್ತಿಲ್ಲ.
ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ಮಹಿಳೆಯರು ಮತ್ತು ಮಕ್ಕಳು ರಾತ್ರಿ ಹಗಲೆನ್ನದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಕೇಂದ್ರ ಬಿಂದುವಾಗಿದ್ದರೂ ಹತ್ತು ವರ್ಷಗಳಿಂದ ನಮಗೆ ಕುಡಿಯುವ
ನೀರು ಸಿಗದೇ ಹೈರಾಣಾಗುತ್ತಿದ್ದೇವೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಲ್ಲಿನ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಬಿಂದಿಗೆ ಕುಡಿಯುವ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದರೆ ಶಾಲೆ ಬಿಟ್ಟು ನೀರು ತರುವಂತಹ ಅನಿವಾರ್ಯತೆ ಮಕ್ಕಳಿಗೆ ಎದುರಾಗಿದೆ.
ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಾವು ಸಮಸ್ಯೆಗಳ ಬಗ್ಗೆ ಮಾಧ್ಯಮದವರಿಗೆ ಅಥವಾ ಜನಪ್ರತಿನಿಧಿಗಳಿಗೆ ಹೇಳಿದರೆ ಕೆಲವು ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಜೊತೆಗೆ ಜಗಳಮಾಡಿ ನಮ್ಮ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗುತ್ತದೆ. ಸಮಸ್ಯೆಗಳ ಬಗ್ಗೆ ಮಾತಾನಾಡಲು ಭಯವಾಗುತ್ತದೆ ಎಂದು ಗ್ರಾಮದ ನಿವಾಸಿಯೊಬ್ಬರು ಹೇಳುತ್ತಿದ್ದಾರೆ.
ನಮಗೆ ಕುಡಿಯಲು ನೀರಿಲ್ಲ. ನನ್ನ ಮಗಳು ಒಮ್ಮೊಮ್ಮೆ ನೀರಿಗಾಗಿ ಶಾಲೆಗೆ ರಜೆ ಮಾಡುತ್ತಾಳೆ. ನೀರಿಲ್ಲದ ಕಾರಣ ಎರಡು ಅಥವಾ ಮೂರು ದಿನಕ್ಕೊಂದು ಬಾರಿ ಬಟ್ಟೆ ತೊಳೆಯುತ್ತೇವೆ. ನನಗೆ ಅಂಗವಿಕಲತೆ ಇರುವುದರಿಂದ ಕುಡಿಯುವ ನೀರಿಗಾಗಿ ಬಹಳಷ್ಟು ಕಷ್ಟ ಅನುಭವಿಸುತ್ತಿದ್ದೇನೆ.
-ಲಕ್ಷ್ಮೀ, ಬಳಿಚಕ್ರ ಗ್ರಾಮದ ನಿವಾಸಿ
ನಮ್ಮ ವಾರ್ಡ್‌ಗಳಿಗೆ ವಿದ್ಯುತ್ ಕಂಬಗಳಿಲ್ಲ. ರಾತ್ರಿ ಎಣ್ಣೆ ದೀಪದಿಂದ ಓದುವಂತಹ ಪ್ರಸಂಗ ನಮಗೆ ಬಂದಿದೆ. ಅಧಿಕಾರಿಗಳು ಹುಸಿ ಭರವಸೆ ನೀಡಿ ಹೋಗುತ್ತಾರೆ. ಈಗ ನಾನು ಹತ್ತನೇ ತರಗತಿ ಓದುತ್ತಿದ್ದೇನೆ. ನಮಗೆ ಓದಲು ವಿದ್ಯುತ್ ಬೇಕು. ಕುಡಿಯಲು ನೀರು ಬೇಕು. ಇಲ್ಲದಿದ್ದರೆ ನೀರಿಗಾಗಿ ನಾವು ಶಾಲೆ ಬಿಡಬೇಕಾಗುತ್ತದೆ.
-ಜಗದೀಶ್, ಬಳಿಚಕ್ರ ಗ್ರಾಮದ ವಿದ್ಯಾರ್ಥಿ
ಗ್ರಾಮದಲ್ಲಿನ ಕೆಲವು ವಾರ್ಡ್ ಗಳಲ್ಲಿ 10 ವರ್ಷಗಳಿಂದಲೂ ಸರಿಯಾಗಿ ವಿದ್ಯುತ್ ಸೌಲಭ್ಯವಿಲ್ಲ. ಇಲ್ಲಿಯ ನಿವಾಸಿಗಳು ಕಟ್ಟಿಗೆ ಕಂಬದ ಮೂಲಕ ವಿದ್ಯುತ್ ಪಡೆದು ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ಇಲ್ಲ ಎನ್ನುತ್ತಾರೆ ಸ್ಥಳೀಯರು.
ಶುದ್ಧ ಕುಡಿಯುವ ನೀರಿನ ಘಟಕ ಗ್ರಾಮದ ಐದು ಕಡೆಗಳಲ್ಲಿ ಇದ್ದು, ಸದ್ಯ ನೀರಿನ ಘಟಕಗಳು ಉಪಯೋಗವಿಲ್ಲದೆ ಕೆಟ್ಟು ತುಕ್ಕು ಹಿಡಿದಿದೆ. ನಾವು ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮದ ನಿವಾಸಿಗಳ ಆರೋಪವಾಗಿದೆ.