ವಾಗ್ಷಾ ಫುಡ್ ಪಾಡ್: ಕಲಿಕೆಯೊಂದಿಗೆ ವೃತ್ತಿ ಕೌಶಲ್ಯ ಪರಿಣತಿ
ವಿದ್ಯಾರ್ಥಿಗಳಿಂದ ಕಾರ್ಯನಿರ್ವಹಿಸುವ ಸ್ಟ್ರೀಟ್ ಫುಡ್ ವಾಹನ
ಉಡುಪಿ: ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಅಂಗಸಂಸ್ಥೆಯಾದ ವೆಲ್ಕಮ್ ಗ್ರೂಪ್ ಗ್ರಾಜುವೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಶನ್ (ವಾಗ್ಷಾ) ಹೊಟೇಲ್ ಉದ್ಯಮದ ಕಲಿಕೆಗಿರುವ ದೇಶದ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. 1986ರಿಂದ ಕಾರ್ಯಾಚರಿಸುತ್ತಿರುವ ವಾಗ್ಷಾ ತನ್ನ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ವೃತ್ತಿ ಕೌಶಲ್ಯ ಹಾಗೂ ವೃತ್ತಿ ಪರಿಣತಿ ಪಡೆಯಲು ‘ವಾಗ್ಷಾ ಫುಡ್ ಪಾಡ್’ ಎಂಬ ವಿನೂತನ ಯೋಜನೆಯನ್ನು ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ.
ಫುಡ್ ಪಾಡ್ ಎಂಬುದು ವಾಹನದಲ್ಲಿ ಆಹಾರವನ್ನು ಸರಬರಾಜು ಮಾಡುವ ಯೋಜನೆ. ಮಹಾನಗರ, ಪಟ್ಟಣ ಅಥವಾ ಜನಸೇರುವ ಪೇಟೆಗಳಲ್ಲಿ ಸಂಜೆ ವೇಳೆ ಬೀದಿಬದಿಯಲ್ಲಿ ನಿಂತು ತಮಗಿಷ್ಟದ ಆಹಾರ ಪದಾರ್ಥಗಳ ರುಚಿ ಸವಿಯುವ ಬೀದಿ ಆಹಾರ (ಸ್ಟ್ರೀಟ್ ಪುಡ್)ದ ಸುಧಾರಿತ ಹಾಗೂ ಆಧುನಿಕ ರೂಪ ಇದು ಎನ್ನಬಹುದು.
ಆದರೆ ಇದು ವಾಗ್ಷಾದ ವಿದ್ಯಾರ್ಥಿಗಳಿಗೆ ಓದಿನ, ಕಲಿಕೆಯ ಒಂದು ಭಾಗ. ಇಲ್ಲಿ ವಿದ್ಯಾರ್ಥಿಗಳೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಆಹಾರ ತಯಾರಿ, ಪೊರೈಕೆ ಹಾಗೂ ನಂತರ ಸ್ವಚ್ಛತೆ ಎಲ್ಲವೂ ವಿದ್ಯಾರ್ಥಿಗಳ ಜವಾಬ್ದಾರಿ ಆಗಿರುತ್ತದೆ. ನಿರ್ದಿಷ್ಟ ಸಮಯದಲ್ಲಿ ಗ್ರಾಹಕರ ಸೇವೆಯನ್ನು ಅವರು ಮಾಡಬೇಕಾಗುತ್ತದೆ. ಗ್ರಾಹಕನಿಂದ ಬೇಕಾದ ಆಹಾರದ ಆರ್ಡರ್ ಅನ್ನು ಪಡೆದು ತಾವೇ ತಯಾರಿಸಿ ಆತನಿಗೆ ನೀಡಬೇಕಾಗುತ್ತದೆ.
ಒಮ್ಮೆ ಇಲ್ಲಿ ಐದಾರು ವಿದ್ಯಾರ್ಥಿಗಳು ಕಾರ್ಯನಿರ್ವಹಿಸುತ್ತಾರೆ. ತಮ್ಮ ಎಂದಿನ ತರಗತಿಗಳನ್ನು ಮುಗಿಸಿ ಅವರು ಕಲಿಕೆಯ ಮುಂದುವರಿದ ಭಾಗವಾಗಿ ಕಲಿತ ವಿಷಯಗಳ ನೇರ ಅಳವಡಿಕೆ ಹಾಗೂ ಅನುಭವವನ್ನು ಇಲ್ಲಿ ಪಡೆಯುತ್ತಾರೆ. ಇದರಿಂದ ಹೊಟೇಲ್ ಉದ್ಯಮದಲ್ಲಿ ಗ್ರಾಹಕರ ಅಭಿರುಚಿ, ಇಷ್ಟಗಳ ಕುರಿತು ಅವರು ನೇರವಾಗಿ ಗ್ರಾಹಕನಿಂದಲೇ ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎನ್ನುತ್ತಾರೆ ವಾಗ್ಷಾದ ಪ್ರಾಂಶುಪಾಲ ಹಾಗೂ ಚೆಫ್ ಡಾ.ಕೆ.ತಿರುಜ್ಞಾನಸಂಬಂಧಮ್.
ಫುಡ್ ಪಾಡ್ನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪ್ರಾರಂಭಿಸಿದ್ದಲ್ಲ. ವಿದ್ಯಾರ್ಥಿಗಳ ಕಲಿಕೆಯ ಭಾಗವಾಗಿಯೇ ಪಠ್ಯಕ್ರಮದ ಒಂದಂಶವಾಗಿಯೇ ಹೊಸ ಶಿಕ್ಷಣ ಪದ್ಧತಿಯಲ್ಲಿ ಇದನ್ನು ಅಳವಡಿಸಲಾಗಿದೆ ಎಂದು ಡಾ.ತಿರು ಹೇಳುತ್ತಾರೆ.
ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಅನುಭವದೊಂದಿಗೆ, ಆಹಾರೋದ್ಯಮದಲ್ಲಿ ಆಧುನಿಕತೆಯ ಭಾಗವಾಗಿ ಫುಡ್ ಪಾಡ್ ಇರಲಿದೆ. ಬ್ಯಾಚ್ಗಳಲ್ಲಿ ವಿದ್ಯಾರ್ಥಿಗಳೇ ಫುಡ್ ಪಾಡ್ನಲ್ಲಿದ್ದು, ಗ್ರಾಹಕರ ಬೇಡಿಕೆಯಂತೆ ಸಸ್ಯಾಹಾರ ಅಥವಾ ಮಾಂಸಾಹಾರದ ಖಾದ್ಯ ತಯಾರಿಸಿ ಮಾರಾಟ ಮಾಡಲಿದ್ದಾರೆ ಎಂದರು.
ಸದ್ಯ ವಾಗ್ಷಾ ಫುಡ್ ಪಾಡ್ ಕೆಎಂಸಿಯ ಗ್ರೀನ್ಸ್ನಲ್ಲಿ ಕಾರ್ಯಾಚರಿಸುತ್ತಿದೆ. ಪ್ರತಿದಿನ ಸಂಜೆ 5ರಿಂದ ರಾತ್ರಿ 9-10 ಗಂಟೆಯವರೆಗೆ ಇದು ಇಲ್ಲಿರುತ್ತದೆ. ಬಸ್ನ ರೂಪದಲ್ಲಿರುವ ಇದನ್ನು ಬೇಕಿದ್ದಲ್ಲಿ ಕೊಂಡೊಯ್ಯಲು ಸಾಧ್ಯವಿದೆ. ಬೆಂಗಳೂರಿನಿಂದ ತರಿಸಿದ ಈ ವಾಹನದ ಒಳಾಂಗಣವನ್ನು ವಾಗ್ಷಾದ ವಿದ್ಯಾರ್ಥಿಗಳೇ ತಮಗೆ ಬೇಕಾದಂತೆ ಸಿದ್ಧಪಡಿಸಿಕೊಂಡಿದ್ದಾರೆ. ಇಲ್ಲಿ ಪ್ಲಾಸ್ಟಿಕ್
ಬಳಕೆ ಇಲ್ಲ. ಕಿಚನ್ ಸಂಪೂರ್ಣವಾಗಿ ಸ್ಟೈನ್ಲೆಸ್ ಸ್ಟೀಲ್ನಿಂದ ತಯಾರಾಗಿದೆ. ಮಾಲಿನ್ಯಕಾರಕ
ಯಾವುದೇ ವಸ್ತುಗಳನ್ನು ಇಲ್ಲಿ ಬಳಸುವುದಿಲ್ಲ. ಎಲ್ಲದಕ್ಕೂ ವಿದ್ಯುತ್ ಬಳಸಲಾಗುತ್ತದೆ. ಗ್ಯಾಸ್ ಬಳಕೆ ಇಲ್ಲ. ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಇದನ್ನು ಎಂಐಟಿ, ಟ್ಯಾಪ್ಮಿ ಕ್ಯಾಂಪಸ್ಗೂ ಕೊಂಡೊಯ್ಯಲಾಗುವುದು. ಸದ್ಯ ಮಳೆಗಾಲದವರೆಗೆ ಮಣಿಪಾಲ ಆಸುಪಾಸಿನಲ್ಲಿ ಫುಡ್ ಪಾಡ್ ಕಾರ್ಯಾಚರಿಸಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ ಹಾಗೂ ಸವಾಲು. ಇವುಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ವೃತ್ತಿ ಬದುಕಿನ ಯಶಸ್ಸು ನಿಂತಿದೆ ಎಂದು ಡಾ.ತಿರು ಹೇಳಿದ್ದಾರೆ.