ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನೇ ನಂಬಿ ಸೋತಿತೇ?
ಚುನಾವಣೆಯ ಮೂಲಕ ದೇಶ, ರಾಜ್ಯ ಮತ್ತು ಪ್ರಾಂತದ ಹಲವು ಬಗೆಯ ವಿಚಾರಗಳಡಿ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತವೆ. ದೇಶದ ಪ್ರತಿ ಚುನಾವಣೆಯಲ್ಲಿಯೂ ಹಲವು ಹಿತಾಸಕ್ತಿಗಳ ರಾಜಕೀಯ ದಿಕ್ಸೂಚಿಯ ಮಾಪನಗಳಿರುತ್ತವೆ. ರಾಜ್ಯಗಳ ಚುನಾವಣೆಯಲ್ಲಿ ವಿಭಿನ್ನ ನೆಲೆಯ ಅಭಿವ್ಯಕ್ತತೆಯ ವಿಚಾರಗಳು ಮತ್ತಷ್ಟು ಪ್ರಾದೇಶಿಕ ಅಸ್ಮಿತತೆ ತೆರೆದುಕೊಳ್ಳುತ್ತವೆ. ಪ್ರಾಂತೀಯ ಸ್ಥಳೀಯ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಾಗ ಅವುಗಳ ಆಯ್ಕೆ ವಿಧಾನ ಇನ್ನಷ್ಟು ಪ್ರಾದೇಶಿಕವಾಗಿ ಸಂಕೀರ್ಣವಾಗುತ್ತವೆ.
ಸ್ವತಂತ್ರ ಭಾರತದ ತಲೆಮಾರಿನ ಜನರು ಅವಿದ್ಯಾವಂತರ ಸಮೂಹವಾಗಿದ್ದರೂ ಅವರ ಮುಂದೆ ಜನಪ್ರತಿನಿಧಿ ಆಯ್ಕೆ ಪ್ರಕ್ರಿಯೆಗಳು ಕಾಂಗ್ರೆಸ್, ಸಮಾಜವಾದಿ ಮತ್ತು ಸಮತಾವಾದಿಗಳ ನಡುವೆ ನಡೆಯುತ್ತಿತ್ತು. ಇಂದಿನಂತೆ ಪ್ರಾದೇಶಿಕತೆ ಮತ್ತು ಧರ್ಮದ ವಿಚಾರಗಳ ಮೇಲಿನ ಚರ್ಚೆಗಳು ಬಹಳ ಕಡಿಮೆಯಿದ್ದವು. ಆಗ ಸಾಂಸ್ಥಿಕ ಸಮಸ್ಯೆಗಳನ್ನು ಹಿಮ್ಮೆಟ್ಟಿಸಿ ದೇಶಾಭಿವೃದ್ಧಿಯ ಆಯಾಮಗಳಿಗೆ ಚುನಾವಣೆಗಳು ಅಸ್ತ್ರವಾಗಿದ್ದವು. ಸಹಜವಾಗಿ ಸಮಸ್ಯೆಗಳ ಮಹಾಪೂರ ಹೆಚ್ಚಿದಂತೆಲ್ಲ ಮತದಾರ ಮತ್ತು ಅವನ ಆಯ್ಕೆಗಳು ಬಹುವಿಸ್ತಾರವಾಗಿರುತ್ತವೆ. ಅಂತಹ ಅವಕಾಶ ಭಾರತೀಯರಿಗೆ ಸಿಕ್ಕಿದ್ದು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಮಾತ್ರವೇ. ಆಗ ಭಿನ್ನ ಮನಃಸ್ಥಿತಿಯ ರಾಜಕೀಯ ಮನೋಧರ್ಮಗಳ ಸಮ್ಮಿಲನವಾದರೂ ಅವುಗಳ ಕ್ರೋಡೀಕರಣ ಹೆಚ್ಚುಕಾಲ ಉಳಿಯಲಿಲ್ಲ. ಇಂದಿರಾ ನಿರ್ಗಮನ ಮತ್ತು ರಾಜೀವ್ ಗಾಂಧಿಯ ಆಗಮನದಿಂದ ಕಾಂಗ್ರೆಸ್‌ನ ಹಳೆಯ ಹಡಗಿಗೆ ಹೊಸ ನಾವಿಕನೇರಿದ ಚಲನಾತ್ಮಕ ವಾತಾವರಣ ಸೃಷ್ಟಿಯಾದವು. ಬೊಫೋರ್ಸ್‌ನಂತಹ ಹಗರಣ ಕಾಂಗ್ರೆಸ್‌ನ ಅಧಿಕಾರ ಗದ್ದುಗೆಯ ಮೇಲೆ ಮುಳ್ಳಿನ ಹಾಸಿಗೆ ಹಾಕಿತ್ತು. ಅದು ಮನ ಮೋಹನ್ ಸಿಂಗ್‌ರ ಕಾಲಘಟ್ಟಕ್ಕೆ ಸುಧಾರಿಸಿದರೂ 2014ರ ವೇಳೆಗೆ ಸಾಧಿಸಿದ ದೇಶಾಭಿವೃದ್ಧಿಯ ಪಥದಲ್ಲಿ ದೇಶದ ವಿಶ್ವಾಸಗಳಿಸುವಲ್ಲಿ ಸಂಪೂರ್ಣವಾಗಿ ಸೋತುಹೋಯಿತು.
ಭಾಜಪ ಪ್ರತೀ ಸೋಲಿನಲ್ಲಿಯೂ ಮುಂದಿನ ಗೆಲುವಿನ ಆಯಾಮಗಳನ್ನು ಹುಡುಕುತ್ತಾ ಮುಂದಡಿಯಿಡುತ್ತಾ ಬಂದಿದೆ. ಅದಕ್ಕೆ ಸಂಘ ಪರಿವಾರದವರ ಬೆಂಬಲವಿದೆ. ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರೆಸ್ಸೆಸ್) ಹೊರನೋಟಕ್ಕೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ದುಡಿಯುವ ಸಂಘಟನೆ ಎಂದು ನಾಮಾಂಕಿತವಾಗಿದ್ದರೂ ಅದು ಹಿಂದುತ್ವದ ರಾಜಕೀಯ ಹಿತಾಸಕ್ತಿಯನ್ನು ಸಬಲೀಕರಣ ಮಾಡುವ ಪಯಣದಲ್ಲಿ ಶಸ್ತ್ರರಹಿತ ಹೋರಾಟಗಾರನಂತಿರುತ್ತದೆ. ಭಾಜಪದ ಹೋರಾಟದ ಕಾಲುಗಳಿಗೆ ಶಕ್ತಿ ತುಂಬಿದ್ದು ಸಂಘ ಪರಿವಾರದ ರಥ ಯಾತ್ರೆ; ಅದರ ಚಿಹ್ನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಅಂದಿನ ಯುವಪೀಳಿಗೆಯ ಮೆದುಳಿಗೆ ಹಾಕಿತ್ತು. ಅಲ್ಲಿಂದ ಇಲ್ಲಿಯ ತನಕ ಭಾಜಪ ಗಳಿಸಿದ ಅಧಿಕಾರ ಸಂಘದ ಹೂಮಾಲೆಯಾಗಿದೆ ಅಂದರೆ ತಪ್ಪಾಗದು. ಭಾಜಪ ಹೇಗೆ ಬೆಳೆಯಿತೆಂದರೆ, ಸಮಾಜವಾದಿ ರಾಜಕೀಯ ಪಕ್ಷಗಳ ವ್ಯಕ್ತಿಗತ ಕಿತ್ತಾಟದ ಅವನತಿ ಮತ್ತು ಗತಕಾಲದ ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ವಿಘಟನೆಯ ಮೇಲೆ ತನ್ನ ಬಾವುಟ ನೆಟ್ಟು, ಅಲ್ಲಿಂದಾಚೆಗೆ ಪ್ರಾದೇಶಿಕ ಪಕ್ಷಗಳ ಗೋಣು ಮುರಿದು ಇನ್ನಷ್ಟು ಬಲಿಷ್ಠವಾಯಿತು. ಅದರ ಸಂಘಟನಾತ್ಮಕ ಚಟುವಟಿಕೆಗಳು ವರ್ಷಪೂರ್ತಿ ತಾಲೀಮಿನಂತೆ ನಡೆಯುತ್ತದೆ. ಆದರೆ ಐತಿಹಾಸಿಕ ಕಾಂಗ್ರೆಸಿಗರ ಪಕ್ಷ ಸಂಘಟನೆ ಪ್ರಕ್ರಿಯೆಗಳೆಲ್ಲವೂ ಜಾತ್ರೆಯಲ್ಲಿ ಹಾಕುವ ಅಂಗಡಿಗಳಂತೆ ವಿಜೃಂಭಿಸಿ ಮಾಯವಾಗುತ್ತವೆ. ಅದರ ಕತ್ತಲಲ್ಲಿ ನಡೆಯುವ ರಾಜಕೀಯ ಚತುರತೆಯನ್ನು ಭಾಜಪ 1990ರ ತರುವಾಯ ಅತಿ ಜಾಣ್ಮೆ ಮತ್ತು ಜಾಗೃತತೆಯನ್ನು ಮೈಗೂಡಿಸಿಕೊಂಡಿದೆ. ಇತ್ತೀಚೆಗಂತೂ ಅಧಿಕಾರ ದಾಹದಿಂದ ಭಾರತೀಯ ಜಾತ್ಯತೀತ ರಾಜಕೀಯ ಲಕ್ಷಣಗಳನ್ನು ಧ್ವಂಸಮಾಡುತ್ತಿದೆ. ಅದರಲ್ಲೂ ಅಲ್ಪಸಂಖ್ಯಾತರು ಈ ಮಣ್ಣಿನ ಮಕ್ಕಳಾಗಿದ್ದರೂ ಅವರ ವಿರುದ್ಧ ಧರ್ಮಾಂಧತೆಯ ಕೆನ್ನಾಲಿಗೆ ಚಾಚಿ ಗಲ್ಲಿ ಗಲ್ಲಿಗಳಲ್ಲಿ ಮತದಾರರು ಖಡ್ಗ ಹಿಡಿಯುವಂತೆ ಮಾಡಿದೆ.
ಈ ಮೇಲಿನ ವಿಶ್ಲೇಷಣೆಗಳ ಸಹಾಯದಿಂದ ಕರ್ನಾಟಕದ ರಾಜಕೀಯ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಆಯಾಮಗಳನ್ನು ಸೃಷ್ಟಿಸಲಾಗಿದೆ. ಎಸ್.ಎಂ. ಕೃಷ್ಣ ಕರ್ನಾಟಕದಲ್ಲಿ ಅಂದು ಲೋಕಸಭಾ ಚುನಾವಣೆ ಜೊತೆ ವಿಧಾನ ಸಭೆಯ ಚುನಾವಣೆಗೆ ಹೋಗಿದ್ದರ ತಪ್ಪಿನಿಂದ ಸಮ್ಮಿಶ್ರ ಸರಕಾರ ಬಂತು. ಅದರ ಬೆನ್ನಡಿಯಲ್ಲಿ ರಾತ್ರೋರಾತ್ರಿ ಭಾಜಪ-ಜೆಡಿಎಸ್ ಮೈತ್ರಿ ಬಂತು. ಆಗ ಕುಮಾರಸ್ವಾಮಿ ಅಧಿಕಾರ ನೀಡದ ಪರಿಣಾಮ ಭಾಜಪ ಬೃಹತ್ ಶಕ್ತಿಯಾಗಲು ಕಾರಣವಾಯಿತು. ರಾಷ್ಟ್ರೀಯ ಮಟ್ಟದಲ್ಲಿ ಮಂಡಲ ವರದಿ ಸಂದರ್ಭದಲ್ಲಿ ಮುನ್ನೆಲೆಗೆ ಬಂದ ಭಾಜಪ ರಾಜಕೀಯ ಬೇರುಗಳು ದೇಶಾದ್ಯಂತ ಹರಡಿವೆ. ಕರ್ನಾಟಕದಲ್ಲಿ ಅದರ ಬೇರುಗಳು ಊರು-ಕೇರಿಗಳಲ್ಲಿ ನಾಟಿವೆ.
ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆ ಆದ್ಯತೆಗಳು ಬೇರೆ ಬೇರೆ ಆಗಿರುತ್ತವೆ. ಕರ್ನಾಟಕ 2023ರಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಆಡಳಿತಾರೂಢ ಬಿಜೆಪಿಯನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದರು. ಆಗ 135 ಸ್ಥಾನಗಳು ಕಾಂಗ್ರೆಸ್‌ಗೆ ಬಂದವು. ಚಲಾವಣೆಯಾದ ಮತದಾನದಲ್ಲಿ ಕಾಂಗ್ರೆಸ್ ಶೇ.42.88ರಷ್ಟು, ಭಾಜಪ ಶೇ.36 ಮತ ಗಳಿಸಿ 66 ಸ್ಥಾನಕ್ಕೂ, ಜೆಡಿಎಸ್ 19(13.29ರಷ್ಟು) ಸ್ಥಾನಕ್ಕೆ ಕುಸಿಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 2018ಕ್ಕಿಂತ ಶೇ. 4.74ರಷ್ಟು ಮತಗಳ ಹೆಚ್ಚಳ ಕಂಡಿದ್ದರೆ; ಭಾಜಪ ಶೇ. 0.35 ಇಳಿಕೆಯಾಗಿದೆ. ತೆನೆ ಹೊತ್ತ ಮಹಿಳೆಗೆ ಶೇ. 5.01ರಷ್ಟು ಮತಗಳು ಖೋತಾವಾದವು. ಈ ಪಕ್ಷಗಳು ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಹೇಗೆ ಕರ್ನಾಟಕ ಮತದಾರರ ವಿಶ್ವಾಸಗಳಿಸಿದ್ದವು ಎಂಬ ವಿಶ್ಲೇಷಣೆ ಮಾಡಿದಾಗ 2024 ಲೋಕಸಭಾ ಚುನಾವಣೆಯಲ್ಲಿನ ಸಾಧಕ-ಬಾಧಕಗಳ ಸೀಳುನೋಟ ಸಿಗುತ್ತವೆ.
ಕರ್ನಾಟಕದಲ್ಲಿ 2004ರ ವೇಳೆಗೆ ಭಾಜಪ ತನ್ನ ಸಂಘಟನಾ ಸಾಮರ್ಥ್ಯವನ್ನು ಮುಮ್ಮಡಿಗೊಳಿಸಿರುವ ಕಾರಣ ಅದು ಶೇ. 41.63 ಮತದಿಂದ 18 ಸ್ಥಾನಗಳಿಸಿತ್ತು. ಕಾಂಗ್ರೆಸ್ ಈ ಹಿಂದೆ ಗಳಿಸಿದ್ದ 18 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಭಾಜಪ ಮಡಿಲಿಗೆ ಹಾಕಿತ್ತು. ಜೆಡಿಎಸ್ ಒಂದಂಕಿಯ ಆಟವನ್ನು ಅಲ್ಲಿಂದಲೂ ಪ್ರದರ್ಶನ ಮಾಡುತ್ತಿದೆ. ಗತಕಾಲದ ಕಾಂಗ್ರೆಸ್ ಪಕ್ಷ 2004ರಿಂದ 2024ರ ತನಕ ಹತ್ತರೊಳಗಿನ ಪ್ರದರ್ಶನ ಮಾಡುತ್ತಿದೆ. 2019ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಗೆದ್ದು ಮಾನ ಉಳಿಸಿಕೊಂಡಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ 2024ರ ಚುನಾವಣೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ್ದ ಮತಕ್ಕಿಂತ ಶೇ.2.55ರಷ್ಟು ಮತಗಳಿಕೆ ಹೆಚ್ಚಾಗಿದ್ದರೂ ಸ್ಥಾನಗಳಿಕೆಯಲ್ಲಿ ಮಾತ್ರ ಹೆಚ್ಚಳವಾಗಿಲ್ಲ. ಈ ಕಳಪೆ ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆಗಳ ಮೇಲಿರುವ ನಕಾರಾತ್ಮಕ ಧೋರಣೆಯೇ ಅಥವಾ ಮೋದಿ ಮೇಲಿನ ಪ್ರೀತಿಯೇ ಎಂಬ ಗಂಭೀರ ಪ್ರಶ್ನೆಗಳಿವೆ. ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕ ಮತ್ತು ದಾವಣಗೆರೆ ತನಕ ಉತ್ತಮ ಸಾಧನೆ ಮಾಡಿದೆ. ಹಾಗೆಯೇ ಬೆಳಗಾವಿಯಿಂದ ಮೈಸೂರು ತನಕ ಭಾಜಪ ತನ್ನ ಯಶೋಗಾಥೆಯನ್ನು ಮೆರೆದಿದೆ. ಅದೇ ರೀತಿ, ಹಳೆ ಮೈಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ದೋಸ್ತಿ ಭಾಜಪಕ್ಕೆ ಅಧಿಕ ಮತಗಳಿಕೆ ಮತ್ತು ಸ್ಥಾನಗಳಿಕೆಯನ್ನು ತಂದುಕೊಟ್ಟಿದೆ. ಭಾಜಪಕ್ಕೆ ಕಾಂಗ್ರೆಸ್ ಪಕ್ಷ ಸಾಂಪ್ರದಾಯಿಕ ವೈರಿ; ಸೈದ್ಧಾಂತಿಕವಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಅದರ ಬದ್ಧವೈರಿಗಳು. ಡಿ.ಕೆ. ಶಿವಕುಮಾರ್ ಬಗ್ಗೆ ಭಾಜಪ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. 2023ರ ವಿಧಾನಸಭಾ ಫಲಿತಾಂಶದಿಂದ ಕಂಗೆಟ್ಟ ಭಾಜಪ ಅವರ ಬೆನ್ನು ಮುರಿದು ದನಿ ಅಡಗಿಸಲು ಚುನಾವಣೆ ಪೂರ್ವದಲ್ಲೇ ಚಕ್ರವ್ಯೆಹವೊಂದನ್ನು ರಚಿಸಿತ್ತು. ಆದರೆ ಭಾಜಪ-ಜೆಡಿಎಸ್ ದೋಸ್ತಿಯನ್ನು ಹಗುರವಾಗಿ ಕಂಡು ಗ್ಯಾರಂಟಿ ಧ್ಯಾನದಲ್ಲಿ ಮುಳುಗಿ ಕಾಂಗ್ರೆಸ್ ಮೈಮರೆಯಿತು. ಅದೇ ಭಾಜಪ ತನ್ನ ಸಾಮಾಜಿಕ ತಂತ್ರಗಾರಿಕೆಗಳನ್ನು ವ್ಯಾಪಕವಾಗಿ ವಿಸ್ತರಿಸಿ ಸದ್ದುಗದ್ದಲವಿಲ್ಲದೆ ತನ್ನ ಸಾಂಪ್ರದಾಯಿಕ ಮತಗಳ ಜತೆ ಗೆಲುವಿನ ನಗೆಬೀರಲು ಮುಂದಾಯಿತು.
ಭಾಜಪ 2019ರ ಚುನಾವಣೆಯಲ್ಲಿ ಅದು ಶೇ. 51.38ರಷ್ಟು ಮತಗಳಿಕೆಯಲ್ಲಿ 26 ಸ್ಥಾನ ಬಾಚಿತ್ತು. ಆಶ್ಚರ್ಯಕರವಾಗಿ 2024ರಲ್ಲಿ ಅದರ ಮತಗಳಿಕೆಯ ಪ್ರಮಾಣ ಶೇ. 5.32 ಕುಸಿತವಾಗಿದೆ; ಅಂದರೆ ಅಹಿಂದ ವರ್ಗಗಳ ಮತದಾರರು ಅಲ್ಲಿಂದ ವಿಚಲಿತವಾಗಿರುವ ಸೂಚನೆಗಳಿವು. ಅದರಲ್ಲೂ ಸಂಪೂರ್ಣವಾಗಿ ಅಲ್ಪಸಂಖ್ಯಾತರು ಮತ್ತು ಭಾಗಶಃ ಮೂಲ ಅಸ್ಪಶ್ಯರು ಕಾಂಗ್ರೆಸ್‌ನತ್ತ ವಾಲಿರುವುದರಿಂದ 2024ರಲ್ಲಿ ಅದು ಹೆಚ್ಚುವರಿಯಾಗಿ ಶೇ. 13.55 ರಷ್ಟು ಮತಗಳಿಕೆಯಲ್ಲಿ ಏರಿಕೆಯಾಗಿದೆ. ಈ ಮತ ಗಳಿಕೆಯು ಧನಾತ್ಮಕವಾಗಿದ್ದರೂ ಕ್ಷೇತ್ರವಾರು ಬಹುಕೋನ ಸ್ಪರ್ಧೆಗಳಿಲ್ಲದ ಕಾರಣ ಇನ್ನೂ ಆರೇಳು ಸ್ಥಾನಗಳಿಸುವಲ್ಲಿ ಕುಗ್ಗಿದಂತೆ ಕಾಣುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ನಿರ್ವಹಿಸಿದ ಮೈತ್ರಿ ಬಲವರ್ಧನೆಯಿಂದ ರಾಷ್ಟ್ರೀಯ ಮತದಾನ ಗಳಿಕೆಯಲ್ಲಿ ಶೇ. 21.19ರಷ್ಟು ವೃದ್ಧಿಸಿ 99 ಸ್ಥಾನಗಳಿಸುವಲ್ಲಿ ಯಶಸ್ಸು ಕಂಡಿದೆ. ಮೈತ್ರಿ ಪ್ರಭಾವದಿಂದ ಭಾಜಪ ಸ್ಥಾನಗಳಿಕೆ 240ಕ್ಕೆ ಇಳಿದರೂ ಮತಗಳಿಕೆಯಲ್ಲಿ ಶೇ. 36.56ರಷ್ಟು ಪಡೆದಿದೆ.
ಕಾಂಗ್ರೆಸ್ ಮತ್ತು ಭಾಜಪ ನಡುವಿನ ಸಂಘಟನಾತ್ಮಕ ಚಾತುರ್ಯಗಳ ಹೋಲಿಕೆಯಲ್ಲಿ ಭಾಜಪ ಇಂದಿನ ವಯೋಮಾನದ ಮತದಾರರನ್ನು ಸೆಳೆಯಲು ಅನೇಕ ವಿನೂತನ ತಂತ್ರಗಾರಿಕೆ ಹಾಕಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಭಾರತ ಜೋಡೊ ಮತ್ತು ಭಾರತ ನ್ಯಾಯ ಯಾತ್ರೆಗಳ ಮೂಲಕ ಸುಧಾರಣೆ ಕಂಡಿದ್ದರೂ ಅದರ ಅಂಗ ಸಂಘಟನೆಗಳು ಭಾಜಪವನ್ನು ಹಿಮ್ಮೆಟ್ಟಿಸುವಲ್ಲಿ ಅತ್ಯಂತ ದುರ್ಬಲವಾಗಿವೆ. ಅದರ ಛಾಯೆ ಕರ್ನಾಟಕದಲ್ಲೂ ಹಾಗೆಯೇ ಉಳಿದಿದೆ.
ಲೋಕನೀತಿ ಸಂಸ್ಥೆ ಅಧ್ಯಯನ ಪ್ರಕಾರ ಮೋದಿ ಆಡಳಿತವನ್ನು ಪರಿಪೂರ್ಣವಾಗಿ ಒಪ್ಪಿದವರು ಶೇ.23 ರಷ್ಟು ಮತದಾರರಷ್ಟೇ. ಆದರೂ 240 ಸ್ಥಾನ ಗಳಿಸಿದೆಯೆಂದರೆ ಅದರ ಸಂಘಟನಾತ್ಮಕ ನಡಿಗೆಯಲ್ಲಿ ಸೋಲನ್ನು ಗೆಲುವಾಗಿಸುವ ಅದರ ಮನೋಧೈರ್ಯವನ್ನು ಪರೀಕ್ಷೆಗೆ ಒಡ್ಡುವ ರಾಜನೀತಿಯಾಗಿದೆ. ದಲಿತ, ಅತಿ ಹಿಂದುಳಿದ ಮತ್ತು ಆದಿವಾಸಿಗಳನ್ನು ಪಳಗಿಸಲು ಆರೆಸ್ಸೆಸ್ ಶಾಖೆಗಳಿಲ್ಲದಿದ್ದರೂ ಬಾಹ್ಯ ಚಟುವಟಿಕೆ ಮೂಲಕ ಯಶಸ್ಸು ಕಾಣುತ್ತಿದೆ. ಅದರ ಬೆನ್ನಿಗೆ ನಿಲ್ಲುವ ಸಾವಿರಾರು ಸ್ವಯಂ ಸೇವಾ ಸಂಘಗಳು ನಾಗರಿಕ ಸೇವಾ ಕೈಂಕರ್ಯಗಳ ಮುಖೇನ ಮತದಾರರ ವೃದ್ಧಿಗೆ ದುಡಿಯುತ್ತಿವೆ. ಈ ನಿಟ್ಟಿನಲ್ಲಿ ಹಿಂದುತ್ವದಡಿ ಹಿಂದುಳಿದ ಮತ್ತು ದಲಿತ ಮಠಗಳನ್ನೂ ಬೀದಿಗಿಳಿಸಿದೆ. ಭಾಜಪ ಎದುರಿಸಲು ಕಾಂಗ್ರೆಸ್ ತನ್ನ ಸೈದ್ಧಾಂತಿಕ ಭೂಮಿಕೆಯನ್ನು ಕೈಬಿಡುವ ಅಗತ್ಯವೇನಿಲ್ಲ. ಸಂಘಟನಾತ್ಮಕ ವಿಚಾರದಲ್ಲಿ ಅದಕ್ಕೊಂದು ರಾಷ್ಟ್ರೀಯ, ರಾಜ್ಯಗಳ ಮತ್ತು ವಿಕೇಂದ್ರೀಕೃತ ಪ್ರಾದೇಶಿಕವಾರು ಪರಿಶುದ್ಧ ಕಾಂಗ್ರೆಸ್‌ರಕ್ತ ಸಂಚಲನವಾದರಷ್ಟೇ ಸಾಕಿದೆ.
ರಾಜ್ಯ ಕಾಂಗ್ರೆಸ್ ಬಹಿರಂಗವಾಗಿ 20 ಸ್ಥಾನ ಗೆಲ್ಲುವ ಆಸೆಯಿದ್ದರೂ ಅಂತರಂಗದಲ್ಲಿ 15-17ಕ್ಕೆ ಸೀಮಿತವಾಗಿತ್ತು. ಭಾಜಪ ಸಹ ಗ್ಯಾರಂಟಿ ಯೋಜನೆಗಳಿಂದ ಭಾರೀ ಮರ್ಮಘಾತವಾಗುವುದೆಂದು ಪರಿಭಾವಿಸಿ ಎಲ್ಲಾ ಆಯಾಮಗಳಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಲಿಂಗಾಯತ-ಒಕ್ಕಲಿಗ ಮತ್ತು ಸಣ್ಣಪುಟ್ಟ ಸಮುದಾಯಗಳನ್ನು ಜೋಡಣೆ ಮಾಡಿ ಯಶಸ್ವಿಯಾಯಿತು. ಮಂಡ್ಯದಲ್ಲಿ ಒಕ್ಕಲಿಗ ಕಾಂಗ್ರೆಸಿಗರ ಸುತ್ತಲೂ ಸ್ವಜಾತಿ ಬೇಲಿ ಹಾಕಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಣಿಸಲು ಅದು ಸುರಿದ ಶ್ರಮದಿಂದ ಯಶಸ್ಸು ಕಂಡಿದೆ. ಆ ಮೂಲಕ ಕನಕಪುರದಲ್ಲೂ ಮುಂದೆ ಸಾಮಾನ್ಯ ರೈತರನ್ನೇ ನಿಲ್ಲಿಸಿ ಯಶಸ್ಸು ಕಾಣುವ ತವಕದಲ್ಲಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಲಕ್ಷ ಮತಗಳಿಸಿದರೆ ಕಾಂಗ್ರೆಸ್ ದಾರಿ ಸುಲಭವೆಂಬ ಹುಸಿ ನಂಬಿಕೆಯಿಂದ ಕಾರ್ಯಕರ್ತರ ಮತ್ತು ನಾಯಕರ ನಡುವಿನ ಹೊಂದಾಣಿಕೆ ಕೊರತೆ ಅಧಿಕವಾಗಿತ್ತು. ಈಡಿಗರ ಗರಿಷ್ಠ ಮತಗಳಿಕೆಯಲ್ಲಿ ಹಿನ್ನಡೆ ಕಂಡಿತು. ಹಾಗೆಯೇ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾದ ಛಲವಾದಿ ಮತ್ತು ಮಾದಿಗರನ್ನು ಇತರ ಹಿಂದುಳಿದವರ ಜತೆ ಸೇತುವೆ ಮಾಡುವಲ್ಲಿ ಸಂಪೂರ್ಣ ವಿಫಲರಾದ್ದರಿಂದ ಸೋಲಾಯಿತು. ಕೋಲಾರದಲ್ಲಿ ಛಲವಾದಿಗಳು ಕಾಂಗ್ರೆಸ್ ಟಿಕೆಟ್ ಬೇಕೆಂದು ಹಠಹಿಡಿದರು. ಕೊನೆಗೆ ಮಾದಿಗರಿಗೆ ನೀಡಿದರೂ ಗುಂಪುಗಾರಿಕೆ ಮತ್ತು ಜಿಲ್ಲಾ ನಾಯಕತ್ವದಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಬಹುತೇಕ ಒಕ್ಕಲಿಗರು ಸ್ಪಶ್ಯ ಸಂಬಂಧದ ಬಾವುಟ ಹಾರಿಸಿದರು. ಚಿಕ್ಕಬಳ್ಳಾಪುರದ ಹಗ್ಗಜಗ್ಗಾಟದಲ್ಲಿ ಜೆಡಿಎಸ್‌ನ ಅಧಿಕ ಮತಗಳು ಭಾಜಪಕ್ಕೆ ಹರಿದುಹೋದವು. ತುಮಕೂರು, ಚಿತ್ರದುರ್ಗದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಸೊಗಡು ಅಧಿಕವಾಗಿತ್ತು. ಬಳುವಳಿ ಜಾತಿವಾದದ ಆರಾಧಕ ಸಮುದಾಯವನ್ನು ಕೋಮುವಾದಿ ಕೋವಿ ಹಿಡಿಸಲು ಪ್ರೇರೇಪಿಸುವುದು ಅತಿ ಸುಲಭ ಎಂಬ ಸಂದೇಶವನ್ನು ಭಾಜಪ ಒಕ್ಕಲಿಗರಿರುವ ಜಿಲ್ಲೆಗಳಲ್ಲಿ ರಾಜಕೀಯ ಹುನ್ನಾರ ಹೆಣೆದು ಜಯಶಾಲಿಯಾಗಿದೆ. ಲಿಂಗಾಯತರನ್ನು ಸಹ ಸೆಳೆಯಲು ಇಂತಹ ತಂತ್ರದಿಂದ ಬಂಧಿಸಿದೆ. ಮುಂದೆಯೂ ಇದೇ ತಂತ್ರಗಾರಿಕೆಯನ್ನು ಒಕ್ಕಲಿಗ ಸಮುದಾಯ ಮಾನ್ಯ ಮಾಡುವುದೆಂಬ ಪ್ರಶ್ನೆಗೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಾಕ್ಷಿಯಾಗಬಲ್ಲದು. ದಕ್ಷಿಣ ಕನ್ನಡ, ಕರಾವಳಿ ಹಾಗೂ ಮಲೆನಾಡಿನ ಭಾಗದ ಹಿಂದುಳಿದ ವರ್ಗಗಳ ಕ್ರೋಡೀಕರಣ ಅನಿವಾರ್ಯತೆಯನ್ನು ಈ ಲೋಕಸಭಾ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ ಕಟ್ಟಿದೆ. ಧಾರವಾಡದಲ್ಲಿ ಲಿಂಗಾಯತರ ಅಸಮಾಧಾನದ ನಡುವೆಯೂ ಸಂಘದ ಬಲದಿಂದ ಭಾಜಪ ಗೆದ್ದಿದೆ. ಕಾಂಗ್ರೆಸ್ ಮೊದಲಿಗೆ ಟಿಕೆಟ್ ಆಯ್ಕೆಯಲ್ಲಿ ಸಾಕಷ್ಟು ಎಡವಿದ್ದು ಎದ್ದು ಕಾಣುತ್ತಿದೆ. ಭಾಜಪ ಬೆಂಗಳೂರು ನಗರ ಪ್ರದೇಶದ ಮೂರು ಕ್ಷೇತ್ರಗಳನ್ನು ಸಂಘದ ಕಾರ್ಯಕರ್ತರ ಸಕ್ರಿಯ ಹೋರಾಟದಿಂದ ಗೆದ್ದಿದೆ. ಈ ಕ್ಷೇತ್ರಗಳಲ್ಲಿ ಪ್ರತಿ ಮನೆಯ ಮತದಾರರನ್ನೂ ಗುರುತಿಸುವಲ್ಲಿ ಅದು ಮೈಲಿಗಲ್ಲಿನ ಸಾಧನೆ ಮಾಡುತ್ತಾ ಬಂದಿದೆ.
ಹಾವೇರಿಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದರೂ ಸಾಮಾಜಿಕ ತಂತ್ರಗಾರಿಕೆಯಲ್ಲಿ ಭಾಜಪ ಮೇಲುಗೈ ಸಾಧಿಸಿದೆ. ಉತ್ತರ ಕನ್ನಡದಲ್ಲಿ ಹೊರಗಿನವರೆಂಬ ಗಾಳಿ ಜಾಸ್ತಿಯಿತ್ತು. ಬಿಜಾಪುರದಲ್ಲಿ ಜಿಗಜಿಣಗಿಯ ಕೊನೆಯ ವಿನಂತಿಗೆ ಅಂಚಿನಲ್ಲಿ ಗೆಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ಹಿಂದುಳಿದ ಮತ್ತು ಪರಿಶಿಷ್ಟರ ವಿಮುಖತೆ ಮತ್ತು ಎಂ.ಇ.ಎಸ್. ತಟಸ್ಥ ನಿಲುವುಗಳಿಂದ ಜಗದೀಶ್ ಶೆಟ್ಟರ್‌ಗೆ ಜಯದ ಮಾಲೆ ಒಲಿಯಿತು. ಅತ್ತ ಬಾಗಲಕೋಟೆಯಲ್ಲಿ ರಾಜಕೀಯ ಗಂಧಗಾಳಿಯಿಲ್ಲದ ಅನನುಭವಿ ಹುಡುಗಿ ಬೇಡವೆಂಬ ಕೂಗು ಅಧಿಕವಾಗಿತ್ತು. ಸಾವಿರಾರು ಸಂಘದ ಕಾರ್ಯಕರ್ತರು ತಮ್ಮ ನಾಮರೂಪಗಳನ್ನು ಎಲ್ಲಿಯೂ ಬಿಚ್ಚಿಡದೆ ಗಲ್ಲಿಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ ತಮ್ಮ ಧ್ಯೇಯೋದ್ದೇಶಗಳನ್ನು ಈಡೇರಿಸಲು ಹಸಿದೋ ಬಸಿದೋ ಗುರಿ ಮುಟ್ಟುತ್ತಾರೆ. ಆದರೆ, ಕಾಂಗ್ರೆಸ್‌ನಲ್ಲಿ ಅಧಿಕ ಕಾರ್ಯಕರ್ತರಿದ್ದರೂ ಅವರನ್ನು ಸಂಘಟನಾತ್ಮಕವಾಗಿ ಸಮಯೋಚಿತ ಹೋರಾಟದಲ್ಲಿ ದುಡಿಸಿಕೋಳ್ಳುವ ಸಾಂಸ್ಥಿಕ ಸ್ವರೂಪ ತೀರ ಬಡವಾಗಿದೆ.
ಪಂಚ ಗ್ಯಾರಂಟಿಗಳಿಗೆ ಕೇವಲ ಕಾಂಗ್ರೆಸ್ ಮತದಾರರು ಮಾತ್ರ ಫಲಾನುಭವಿಗಳಾಗಿಲ್ಲ. ಬಹುತೇಕ ಮಂತ್ರಿಗಳು ಮತ್ತು ಶಾಸಕರು ಫುಂಖಾನುಫುಂಖವಾಗಿ ಅದರ ಗುಣಗಾನ ಮಾಡಿದರೇ ಹೊರತು, ಇತರ ಪಕ್ಷಗಳ ಸದರಿ ಫಲಾನುಭವಿಗಳನ್ನು ಭಾಜಪ ವೈಫಲ್ಯಗಳಡಿ ಅವರನ್ನು ಸೈದ್ಧಾಂತಿಕವಾಗಿ ವರ್ಗಾಯಿಸುವ ತಂತ್ರಗಾರಿಕೆಗಳಿಲ್ಲದೆ ಸಂಪೂರ್ಣವಾಗಿ ಸೋತರು. ಕಿತ್ತೂರು ಕರ್ನಾಟಕದ ಬಹುತೇಕ ಲಿಂಗಾಯತ ಸಮುದಾಯಗಳು ಭಾಜಪದ ಗುಂಗಿನಿಂದ ಹೊರಬಾರದಿರುವ ಸಾಮಾಜಿಕ ಸಚಿತ್ರಣಗಳು ಸಹ ಈ ಫಲಿತಾಂಶದಲ್ಲಿ ಮೂಡಿವೆ. ಕಾಂಗ್ರೆಸ್‌ನ ನಾಯಕರು ಮತ್ತು ಕಾರ್ಯಕರ್ತರ ನಡುವಿನ ಸೇತುವೆ ಆಗದಿರುವ ಸಂಕೇತಗಳು ಸೋತ ಕ್ಷೇತ್ರಗಳ ಫಲಿತಾಂಶದ ಅಂತರಗಳು ಸಾಕ್ಷಿ ನುಡಿಯುತ್ತಿವೆ. ಒಂದು ವೇಳೆ ಗ್ಯಾರಂಟಿ ಯೋಜನೆಗಳನ್ನು ಸೋಲಿನ ನೆಪದಡಿ ಕೈಬಿಟ್ಟರೂ ಮುಂದೆ ಕಾಂಗ್ರೆಸ್‌ಗೆ ನಕಾರಾತ್ಮಕ ಅಪಾಯವಿದೆ. ಅವುಗಳ ನೀಡಿಕೆಯ ಜೊತೆ ಆಡಳಿತ ಯಂತ್ರವನ್ನು ಜನಪರವಾಗಿ ಚಲಾಯಿಸಬೇಕಾದ ಅನಿವಾರ್ಯತೆ ಕಾಂಗ್ರೆಸ್ ಸರಕಾರದ ತುರ್ತು ಕೆಲಸವಾಗಬೇಕಿದೆ. ಜನರ ದುಃಖ-ದುಮ್ಮಾನಗಳನ್ನು ಆಲಿಸುವ ಸಚಿವರ ಕಿವಿಗಳು ದೊಡ್ಡದಾಗಬೇಕೆಂಬ ಆಶಯಗಳೂ ಚುನಾವಣೆ ಫಲಿತಾಂಶದಿಂದ ಮೂಡಿದೆ. ಸಚಿವರು ಮತ್ತು ಶಾಸಕರು ಗ್ಯಾರಂಟಿಗಳ ಭ್ರಮೆಯಿಂದ ಹೊರಬಂದು ವಾಸ್ತವಿಕ ನೆಲೆಗಟ್ಟಿನಡಿ ಪಕ್ಷ ಕಟ್ಟಬೇಕಿದೆ. ಮುಂದಿನ ದಿನಗಳಲ್ಲಿ ಭಾಜಪ ಮಣಿಸಲು ನಾಯಕ-ಕಾರ್ಯಕರ್ತ ಮತ್ತು ಮತದಾರರ ಜೋಡಣೆ ಅದರ ನಿರಂತರ ಉಸಿರಾಟದ ಜೀವಾಳವಾಗಬಹುದು. ಸದ್ಯಕ್ಕೆ ಕಾಂಗ್ರೆಸ್ ಸೋಲಿನ ಕೆಸರೆರಚಾಟ ನಿಲ್ಲಿಸಿ ಆತ್ಮಾವಲೋಕನಗಳಲ್ಲಿ ಕಂಡ ಬೆಳಕಿನಲ್ಲಿ ಪ್ರಾಮಾಣಿಕ ರಾಜಕೀಯ ನಡಿಗೆಯನ್ನು ಇಟ್ಟಾಗ ಮಾತ್ರ ಉತ್ತಮ ಸುಧಾರಣೆ ಕಾಣಬಲ್ಲದು. ಗೆದ್ದಿರುವ ಕ್ಷೇತ್ರಗಳನ್ನು ಕಾಪಾಡುತ್ತಲೇ ಸೋತಿರುವ ಕ್ಷೇತ್ರಗಳನ್ನು ಸಂಘಟಿಸುವ ರಾಜಕೀಯ ಹೊಣೆಗಾರಿಕೆಯನ್ನು ಕಾಂಗ್ರೆಸ್ ಮೈಗೂಡಿಸಿಕೊಳ್ಳಬೇಕಾದುದು ಅನಿವಾರ್ಯ.