ಗಾಂಧಿ ಅಸ್ಪೃಶ್ಯರ ರಕ್ಷಕರೇ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿ-ಅಂಬೇಡ್ಕರ್ ಕುರಿತಂತೆ ಚರ್ಚೆಗಳು ಜಾರಿಯಲ್ಲಿವೆ. ಕೆಲ ಚರ್ಚೆಗಳು ಗಂಭೀರವಾಗಿಯೂ ಮತ್ತೆ ಕೆಲವು ಗಾಂಧಿ-ಅಂಬೇಡ್ಕರ್ ಇಬ್ಬರಲ್ಲಿ ಯಾರು ದೊಡ್ಡವರು? ಯಾರು ಹಿತವರು? ಎಂಬಂತಹ ಬಾಲಿಶವಾದ ಪ್ರಶ್ನೆಗಳ ರೀತಿಯಲ್ಲಿಯೂ ಧ್ವನಿಸುತ್ತವೆ. ಇದು ಈ ಹಿಂದೆ ನಮ್ಮೂರಿನ ರಾಜಕುಮಾರ್-ವಿಷ್ಣುವರ್ಧನ್ ಅಭಿಮಾನಿ ಸಂಘಗಳ ನಡುವಿನ ಗುದ್ದಾಟದಂತೆಯೂ ತೋರುತ್ತಿದೆ. ಅದೇನೇ ಇರಲಿ, ಲೇಖಕ ಗೆಳೆಯರೊಬ್ಬರು ಬಹುಮುಖ್ಯವಾದ ವಿಷಯವೊಂದನ್ನು ಮುನ್ನೆಲೆಗೆ ತಂದಿದ್ದಾರೆ. ಅವರು ತಮ್ಮ ಜಾಲತಾಣದ ವಾಲ್ನಲ್ಲಿ ‘‘ಅಂಬೇಡ್ಕರ್ರನ್ನು ಓದುತ್ತಾ ಹೋದಂತೆ ನಿಮ್ಮೊಳಗೆ ಕಳೆದುಹೋಗುವ ಗಾಂಧಿಯನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಬೇಡಿ. ಅಂದರೆ ಗಾಂಧಿಯನ್ನು ವಿರೋಧಿಸಲು ಸಮಯ ವ್ಯರ್ಥ ಮಾಡಬೇಡಿ. ನೀವು ಗಾಂಧಿಯನ್ನು ವಿರೋಧಿಸುತ್ತಿದ್ದೀರಿ ಎಂದರೆ ಅಂಬೇಡ್ಕರ್ರನ್ನು ಅರ್ಥ ಮಾಡಿಕೊಂಡಿಲ್ಲ’’ ಎಂದು ಹೇಳಿದ್ದಾರೆ. ಈ ತರಹದ ವಾದಗಳನ್ನು, ಕೇಳುತ್ತಿದ್ದರೆ, ನೋಡುತ್ತಿದ್ದರೆ, ಗಾಂಧಿವಾದ ಎಂಬುದು ಹೇಗೆ ಈ ಕಾಲದ ಉಳ್ಳವರ ಮತ್ತು ಮೈಗಳ್ಳರ ಪಾಲಿನ ಹೊಸ ಫಿಲಾಸಫಿಯಾಗುತ್ತಿದೆಯಲ್ಲ ಎಂದು ಗಾಬರಿಯಾಗುತ್ತಿದೆ.
ಗೆಳೆಯರ ಚರ್ಚೆಗಳಲ್ಲಿ ದೇಶದ ಕುರಿತು, ಜನರ ಕುರಿತು ಕಳಕಳಿ ಇರುವುದು ನಿಜವಾದರೂ, ಚರ್ಚೆಯ ಪರಿಣಾಮಗಳು, ಚರಿತ್ರೆ-ವರ್ತಮಾನಗಳ ಭೀಕರ ಸತ್ಯಗಳನ್ನು, ನಾವು ವಿಶ್ಲೇಷಿಸಿಕೊಳ್ಳದೆ ಹೋದರೆ ಭವಿಷ್ಯವೂ ಕತ್ತಲಮಯವಾಗುವುದು.
ಈ ಹೊತ್ತು, ಸಂವಿಧಾನ ಎಂಬುದು ನಮಗೆ ಒಂದು ಪುಸ್ತಕದ ದಾಖಲೆಯಾಗಿ ಮಾತ್ರ ಉಳಿದಿದೆ. ಜೀವನ ವಿಧಾನವಾಗಿ ಉಳಿದಿಲ್ಲ. ಸಂವಿಧಾನವನ್ನು ನಮ್ಮ ಜೀವನ ವಿಧಾನವನ್ನಾಗಿ ಅಳವಡಿಸಿಕೊಳ್ಳದ ಹೊರತು, ಭಾರತದ ಪ್ರಜಾಸತ್ತೆ, ಸಂವಿಧಾನ ಉಳಿಯಲು ಸಾಧ್ಯವಿಲ್ಲ. ಇಂತಹ ಕ್ಲಾಶ್ ಆನ್ ಕಾನ್ಸ್ಟಿಟ್ಯೂಷನ್ ಎಂಬ ಅಘೋಷಿತ ಯುದ್ಧ ಭಾರತೀಯ ಸಮಾಜದಲ್ಲಿ ಜಾರಿಯಲ್ಲಿರುವಾಗ ಗಾಂಧಿಯನ್ನು, ಅಂಬೇಡ್ಕರ್ರನ್ನು ಓದಿಕೊಳ್ಳದೆ, ವಿಮರ್ಶಿಸಿಕೊಳ್ಳದೆ ಹೇಗೆ ಇರಲು ಸಾಧ್ಯ?
ವಿದೇಶೀಯರ ಆಳ್ವಿಕೆಯಿಂದ ದೇಶವನ್ನು ಬಿಡುಗಡೆಗೊಳಿಸುವ ರಾಜಕೀಯ ಪ್ರಜ್ಞೆಯನ್ನೇ ಮುಖ್ಯವಾಗಿಟ್ಟುಕೊಂಡು ಹೋರಾಡಿದ ಸಂತ ಗಾಂಧಿ.ವರ್ತಮಾನ ಭಾರತದಲ್ಲಿ, ಅಂಬೇಡ್ಕರ್ ಪ್ರತಿಮೆಗಳನ್ನೇ ಮುಟ್ಟಲು ಹೇಸುವ ಜನ ಇನ್ನೂ ಜೀವಂತ ಇರುವುದು ಮತ್ತು ನಮ್ಮನ್ನು ಆಳುತ್ತಿರುವವರು ಜೀವಂತ ಅಸ್ಪಶ್ಯನನ್ನು ಮುಟ್ಟಿಸಿಕೊಳ್ಳದೆ ಇರಲು ಕಾರಣಗಳನ್ನು ಹುಡುಕಬೇಕಿದೆ! ತಮ್ಮ ಜಾತಿಯ ಮೀಸಲಾತಿಗಾಗಿ ಮೇಲುಜಾತಿಯ ಜಗದ್ಗುರುಗಳು ಪಾದಯಾತ್ರೆ ಮಾಡಿದಾಗಲೂ ಆ ಯಾತ್ರೆಯು ಕೇರಿಗಳ ಮೂಲಕ ಹಾದು ಹೋಗದೆ ಊರ ರಾಜಮಾರ್ಗಗಳ ಮೂಲಕ ಮಾತ್ರವೇ ಹಾದುಹೋಯಿತು. ಸಾಮಾಜಿಕ ನ್ಯಾಯ, ಮೀಸಲಾತಿಗಾಗಿ ಹೋರಾಡಿದ ಅಂಬೇಡ್ಕರ್ರ ಒಂದೇ ಒಂದು ಫೋಟೊ ಕೂಡ ಆ ಪಾದಯಾತ್ರೆಯಲ್ಲಿ ಇರಲಿಲ್ಲ.
ಈ ದೇಶಕ್ಕೆ, ಗಾಂಧಿಯ ಪಾಪಪ್ರಜ್ಞೆ, ಅಂಬೇಡ್ಕರರ ಕಿಚ್ಚು ಎರಡೂ ಬೇಕು, ಎಂದಾಗಲೀ,
ಬಾಪೂವಿನೊಂದಿಗೆ
ಎರಡು ಹೆಜ್ಜೆ,
ಬಾಬಾರೊಂದಿಗೆ
ನಾಲ್ಕು ಹೆಜ್ಜೆ
ಕ್ರಮಿಸಿದರೆ
ದೇಶವೆಂಬ ಕ್ಯಾರವಾನ್ ಒಂದಷ್ಟು ಮುಂದಕ್ಕೆ ಚಲಿಸಬಹುದು ಎಂದೆಲ್ಲಾ ಕಾವ್ಯಾತ್ಮಕವಾಗಿ ನಾವೆಷ್ಟೇ ಮಾತನಾಡಿದರೂ ..ಸತ್ಯ ಬೇರೆಯೇ ಇದೆ.
ಅಂಬೇಡ್ಕರ್ರಿಗಿದ್ದ ಗಾಂಧಿಯ ಬಗೆಗಿನ ಭಾವನೆಯ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಗಾಂಧಿ ಯಾವತ್ತೂ ಅಸ್ಪಶ್ಯರ ರಕ್ಷಕನೆಂದು ಹೇಳಿಕೊಳ್ಳುವ ಕಾಂಗ್ರೆಸ್ನ ನಾಯಕರಿಗೆ ಯಾವುದೇ ರೀತಿಯ ಹಿಂಜರಿಕೆ ಅಥವಾ ಸಂಕೋಚವಿಲ್ಲ. ಈ ಭಾವನೆ ಕೇವಲ ಕಾಂಗ್ರೆಸಿಗರದಷ್ಟೇ ಅಲ್ಲ, ಅಸ್ಪಶ್ಯರ ಉಳಿವಿಗಾಗಿ, ಒಳಿತಿಗಾಗಿ ಹೋರಾಡಿದ ನಾಯಕ ಎಂದರೆ ಅದು ಗಾಂಧಿ ಮಾತ್ರ ಎಂದೇ ಭಾರತದಾದ್ಯಂತ ಬಿಂಬಿತವಾಗಿದೆ. ಯಾರಾದರೂ ಪುರಾವೆ ಕೇಳಿದರೂ ಎನ್ನಿ, ಈ ದೇಶದಲ್ಲಿ ಅಸ್ಪಶ್ಯರ ಒಳಿತಿಗಾಗಿ, ಏಳಿಗೆಗಾಗಿ ಉಪವಾಸ ಕುಳಿತ ಏಕೈಕ ನಾಯಕ ಗಾಂಧಿಯಲ್ಲವೇನು? ಅವರ ಹೊರತು ಬೇರಾವ ನಾಯಕ ಹೋರಾಡಿದ್ದಾರೆ? ಎಂಬ ಮಾತು ಕೇಳಿ ಬರುತ್ತದೆ. ವಾಸ್ತವವಾಗಿ ಅಸ್ಪಶ್ಯ ಸಮುದಾಯಗಳಿಗೆ ರಾಜಕೀಯ ಹಕ್ಕು ದೊರೆತದ್ದೂ ಕೂಡ ಪೂನಾ ಒಪ್ಪಂದದಲ್ಲಿನ ಗಾಂಧಿಯವರ ಪ್ರಯತ್ನದ ಫಲವಲ್ಲದೆ ಮತ್ತೇನು? ಈ ತೆರನಾದ ಅನೇಕ ಉತ್ತರಗಳನ್ನು ನಾವಿಂದು ಕೇಳಿಸಿಕೊಳ್ಳುತ್ತಿದ್ದೇವೆ.
ಇದು ಒಂದು ಎರಡು ದಿನಗಳ ಚರ್ಚೆಯಲ್ಲವೇ ಅಲ್ಲ. ಎಪ್ರಿಲ್ ೧೨,೧೯೪೫ರಲ್ಲಿ ದಮನಿತ ವರ್ಗಗಳ ಸಭೆಯೊಂದರಲ್ಲಿ ರಾಯ್ ಬಹದ್ದೂರ್ ಖನ್ನಾ ಎಂಬುವವರು ‘‘ನಿಮ್ಮ ಸಮುದಾಯದ ಅತ್ಯುತ್ತಮ ಸ್ನೇಹಿತನೆಂದರೆ ಗಾಂಧಿ, ಅಸ್ಪಶ್ಯರ ಹಿತೈಷಿಯೆಂದರೆ ಅದು ಮಹಾತ್ಮಾಗಾಂಧಿ, ನಿಮ್ಮ ಸಮುದಾಯದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಗಾಂಧಿಯವರು ತಮ್ಮ ಜೀವವನ್ನೂ ಲೆಕ್ಕಿಸದೆ ಉಪವಾಸ ಸತ್ಯಾಗ್ರಹದ ಮೂಲಕ ಪೂನಾ ಒಪ್ಪಂದದ ಜಾರಿಗೆ ಕಾರಣರಾದರು. ಆ ಮೂಲಕ ತಮ್ಮಂತಹ ಸಮುದಾಯಗಳಿಗೆ ಸ್ಥಳೀಯ, ರಾಜ್ಯ ಶಾಸನಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಒದಗಿಸಲು ಕಾರಣರಾದವರು. ಆದರೆ ನಿಮ್ಮಲ್ಲಿ ಕೆಲವರು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೈಗೊಂಬೆಯಂತೆ ವರ್ತಿಸುವ ಡಾ.ಅಂಬೇಡ್ಕರ್ರ ಹಿಂದೆ ಬಿದ್ದಿದ್ದಾರೆ, ಅಂಬೇಡ್ಕರ್ ಬ್ರಿಟಿಷರನ್ನು ಮತ್ತಷ್ಟು ಬಲಪಡಿಸುವವರೇ ವಿನಾ ಮತ್ತೇನಿಲ್ಲ. ಅಷ್ಟೇ ಅಲ್ಲ, ಇಂಡಿಯಾವನ್ನು ಒಡೆದು ಬ್ರಿಟಿಷರ ಆಳ್ವಿಕೆ ಮುಂದುವರಿಯಲು ಕಾರಣವಾಗುತ್ತಾರೆ.ಆದ್ದರಿಂದ ತಮ್ಮಲ್ಲಿ ನನ್ನ ಮನವಿಯಿಷ್ಟೆ, ಯಾರು ನಿಮ್ಮ ನಿಜವಾದ ಹಿತೈಷಿಗಳು? ಸ್ವಯಂಘೋಷಿತ ನಾಯಕರು ಮತ್ತು ಹಿತೈಷಿಗಳ ಮಧ್ಯೆಯಿರುವ ಅಂತರವನ್ನು ಅರ್ಥಮಾಡಿಕೊಳ್ಳಿರಿ.’’ ( Free Press Journal,dated ೧೪-೪-೧೯೪೫)
ಆದರೆ, ಪ್ರಸಕ್ತ ಚರ್ಚೆಯನ್ನು ಎತ್ತಿರುವ ಗೆಳೆಯರ ಗಮನಕ್ಕೆ ಇರಲಿ ಎಂದು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವೆ:
(ಅಂಬೇಡ್ಕರ್ ಅವರ ಮಾತುಗಳನ್ನೇ ನಾನಿಲ್ಲಿ ಉಚ್ಚರಿಸುತ್ತಿರುವೆ.)
‘‘ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದರೆ ೧೯೪೪ರಲ್ಲಿ ರಾಯ್ ಬಹದ್ದೂರ್ ಮೆಹರ್ ಚಂದ್ ಖನ್ನಾ ಎಂಬ ಇದೇ ವ್ಯಕ್ತಿ ಮೂರು ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಮೊದಲಿಗೆ ಆತ ಹಿಂದೂ ಮಹಾಸಭಾದ ಕಾರ್ಯದರ್ಶಿಯಾಗಿ ಕಾರ್ಯ ಆರಂಭಿಸಿದರು.
ಆನಂತರ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಏಜೆಂಟರಾಗಿ ವಿದೇಶಕ್ಕೂ ಹೋಗಿ, ಭಾರತದ ಯುದ್ಧದ ಪರಿಣಾಮಗಳನ್ನು ಬ್ರಿಟಿಷ್ ಮತ್ತು ಅಮೆರಿಕದ ಜನರಿಗೆ ವಿವರಿಸಿದವರು.
ಮತ್ತೀಗ ಕಾಂಗ್ರೆಸ್ನ ಎನ್.ಡಬ್ಲ್ಯು.ಎಫ್. ನ ಏಜೆಂಟರೂ ಆಗಿದ್ದಾರೆ.
ಇಂತಹ ರಾಯ್ ಬಹದ್ದೂರ್ ಖನ್ನಾರ ಅಸಹ್ಯಕರ ಭಾಷೆಯ ಮಾತುಗಳು ಬಹುಕಾಲ ಉಳಿಯಲಾರವು. ಬಫೂನ್ನ ರೀತಿಯ ವರ್ತನೆ ಗಳಿವು. ಮಿ. ಗಾಂಧಿಯವರ ಸುತ್ತ ಎಂತೆಂತಹ ಮಿತ್ರರು ಸುತ್ತುವರಿದಿದ್ದಾರೆ? ಹೇಗೆಲ್ಲಾ ಅಸ್ಪಶ್ಯ ರನ್ನು ಮರುಳುಗೊಳಿಸುವ ರೀತಿ ಮಾತಾಡುತ್ತಾರೆ ಮತ್ತು ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಬಲ್ಲರು ಎಂಬುದಕ್ಕಾಗಿ ಖನ್ನಾರ ಹೇಳಿಕೆಯನ್ನು ಉಲ್ಲೇಖಿಸಬೇಕಾಯಿತಷ್ಟೆ.’’
ಇಂತಹದ್ದೇ ಮತ್ತೊಬ್ಬ ಪಾರ್ಸಿ ಪ್ರೊ.ವಾಡಿಯಾ ಹೇಳಿಕೆಗಳೂ ಇದೇ ರೀತಿಯವು. ಪ್ರೊ.ವಾಡಿಯಾರವರ ದೃಷ್ಟಿಕೋನಗಳನ್ನು ಬಾಂಬೆಯಿಂದ ಪ್ರಕಟವಾಗುವ ಗುಜರಾತಿನ ವಾರಪತ್ರಿಕೆಯಾದ ‘ರಸ್ತಾ ರಹಬಾರ್’ ನಲ್ಲಿ ಇ.ಜೆ. ಸಂಜನ್ನಾ ಇವರು ೨೯ನೇ ಅಕ್ಟೋಬರ್ ೧೯೪೪ರಿಂದ ೧೫ನೇ ಎಪ್ರಿಲ್ ೧೯೪೫ವರೆಗಿನ ಅವಧಿಯವರೆಗೆ ಕಟುವಾಗಿ ವಿಮರ್ಶಿಸಿ ‘Sense and Nonsense in Politics’ ಎಂಬ ತಲೆಬರಹದಡಿಯಲ್ಲಿ ನಿರಂತರವಾಗಿ ಬರೆದರು.
ಈಗಾಗಲೇ ಇಂತಹ ಹಸಿ ಸುಳ್ಳುಗಳನ್ನು ಎಷ್ಟು ಅಸ್ಪಶ್ಯ ಸಮುದಾಯಗಳು ನುಂಗಲು ತಯಾರಾಗಿದ್ದಾರೋ ಗೊತ್ತಿಲ್ಲ. ಆದರೆ ನಾಝಿಗಳು ಈಗಾಗಲೇ ಪ್ರೂವ್ ಮಾಡಿರುವ ಒಂದೇ ಸುಳ್ಳನ್ನು ಹಲವು ಬಾರಿ ಹೇಳುವುದರಿಂದ ಸತ್ಯವೆಂದು ಒಪ್ಪಿಕೊಳ್ಳುವ ಹಾಗೆ ಮಾಡಲಾಗುತ್ತದೆ.
ಸ್ವರಾಜ್ಯ ಆಂದೋಲನಕ್ಕಾಗಿ, ಈ ದೇಶದ ಆಸ್ತಿಕ, ನಾಸ್ತಿಕ ಹಿಂದೂಗಳನ್ನು ಒಳಗೊಂಡಂತೆ ಎಲ್ಲರ ಹೃದಯ ಗೆಲ್ಲುವ ತಂತ್ರವನ್ನು ಗಾಂಧಿ ಅನುಸರಿಸಿದರೇ? ಜಾತಿಗಳ ಬಗೆಗಿನ ಗಾಂಧಿಯವರ ಪ್ರೀತಿಯನ್ನು, ಸತ್ಯಾಗ್ರಹದ ಕುರಿತು ನಿಲುವನ್ನು, ಬಡವರ ಉದ್ಧಾರಕ್ಕಾಗಿ ಶ್ರೀಮಂತ ಟ್ರಸ್ಟಿಗಳ ತತ್ವ ಸಿದ್ಧಾಂತಗಳ ಕುರಿತು ಗಾಂಧಿಯವರಿಗಿದ್ದ ಧೋರಣೆಯನ್ನು ಈ ಹೊತ್ತು, ವಿಮರ್ಶೆಗೊಳಪಡಿಸಬೇಕಿದೆ. ಗಾಂಧಿಯವರಲ್ಲಿ ಇದ್ದ ದ್ವಂದ್ವಗಳಂತೆಯೇ ಎರಡು ಪತ್ರಿಕೆಗಳೂ ಇದ್ದವು. ಒಂದು ‘ಹರಿಜನ್’ ಇಂಗ್ಲಿಷ್ ಆವೃತ್ತಿಯದಾಗಿದ್ದರೆ, ಮತ್ತೊಂದು ‘ಯಂಗ್ ಇಂಡಿಯಾ’ ತಮ್ಮದೇ ಮಾತೃಭಾಷೆಯಾದ ಗುಜರಾತಿನಲ್ಲಿ ಬರುತ್ತಿತ್ತು. ಇಂಗ್ಲಿಷ್ ಆವೃತ್ತಿಯಲ್ಲಿ ಗಾಂಧಿಯವರ ಜಾತ್ಯತೀತ, ಅಸ್ಪಶ್ಯತೆಯ ವಿರೋಧಿ ಎಂಬ ನಿಲುವುಗಳನ್ನು ಪ್ರತಿಪಾದಿಸುವ ಲೇಖನಗಳಿದ್ದರೆ, ಗುಜರಾತಿನ ‘ಯಂಗ್ ಇಂಡಿಯಾ’ದ ಬರವಣಿಗೆಗಳಲ್ಲಿ ಮೂಲಭೂತವಾದಿಗಳ ತರಹ ಬರೆದರು. ಜಾತಿಪದ್ಧತಿ, ವರ್ಣಾಶ್ರಮವನ್ನು ಬೆಂಬಲಿಸಿದರು. ಸಾವಿರಾರು ವರ್ಷಗಳಿಂದ ಕತ್ತಲಲ್ಲಿಟ್ಟ ತತ್ವ-ಸಿದ್ಧಾಂತಗಳನ್ನು ಬೆಂಬಲಿಸಿ ಬರೆದರು. ಪಾಶ್ಚಿಮಾತ್ಯ ದೇಶಗಳ ಕಣ್ಣಲ್ಲಿ ಗಾಂಧಿ ಜಾತ್ಯತೀತ, ಪ್ರಜಾಪ್ರಭುತ್ವವಾದಿಯಾಗಿಯೇ ಉಳಿದುಬಿಟ್ಟರು.
ಇವೆಲ್ಲವುಗಳನ್ನು ನೋಡುವಾಗ ಗಾಂಧೀವಾದ ಎಂಬ ವಿರೋಧಾಭಾಸವು ಕಣ್ಣಿಗೆ ರಪ್ಪಂತ ರಾಚುತ್ತದೆ.
ಇಂದು ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ಎಂದೆನಿಸಿಕೊಳ್ಳುವ ನಾವೆಲ್ಲ, ಸಂವಿಧಾನ ಪೀಠಿಕೆಯನ್ನು ಕೈ ಮುಂದೆ ಮಾಡಿ ಶಪಥ ತೆಗೆದುಕೊಳ್ಳುವ ಕೆಲಸವನ್ನು ಮಾಡುತ್ತಿದ್ದೇವೆ. ಹಿಟ್ಲರ್ ಕೂಡ ತನ್ನ ಸೈನಿಕರಿಗೆ ಇದೇ ರೀತಿ ಶಪಥ ಮಾಡಿಸುತ್ತಿದ್ದ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದಲ್ಲೂ ಕೂಡ ಇದೇ ಪರಿಪಾಠ ಇದೆ. ನಮಗರಿವಿಲ್ಲದೆ ನಾವೂ ಅದೇ ಕ್ರಮವನ್ನು ಅನುಸರಿಸುತ್ತಿದ್ದೇವೆ. ಆದರೆ, ಕೈ ಮುಂದಕ್ಕೆ ಚಾಚಿ, ಸಂವಿಧಾನದ ಆತ್ಮವೇ ಆಗಿರುವ ಪೀಠಿಕೆಯನ್ನು ಓದುವ ನಮಗೆ ತಿಳಿದಿರಬೇಕಾದ ಸಂಗತಿ ಏನೆಂದರೆ-ನಾವು ಸಂವಿಧಾನವನ್ನು ಅಂಗೀಕರಿಸಬೇಕಾದದ್ದು ಕೈಯಿಂದಲ್ಲ, ತಲೆಯಿಂದ ಎಂದು. ಹೀಗೆ ಶಪಥ ಮಾಡುವ ಮೂಲಕ ಅವರ ಸಂಜ್ಞೆಗಳನ್ನು ನಾವು ಅನುಸರಿಸುತ್ತಿ ದ್ದೇವೆಯೇ ಹೊರತು, ಸಂವಿಧಾನವನ್ನು ಉಳಿಸಲು ಅಲ್ಲ.-ಹೀಗೆಂದು ಇತ್ತೀಚೆಗೆ ನಡೆದ ಮೇ ಸಾಹಿತ್ಯ ಮೇಳವೊಂದರ ಸಭೆಯಲ್ಲಿ ಹೇಳಿದ ಪ್ರಕಾಶ್ ಅಂಬೇಡ್ಕರ್ ಮಾತು ನೆನಪಾಗುತ್ತದೆ.
ಹಾಗಾಗಿ, ಯಾವ ಸಿದ್ಧಾಂತವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವುದನ್ನು ಯಾರೂ ಹೇಳಿ ಕೊಡಬೇಕಾಗಿಲ್ಲ. ಹಾಗೊಂದು ವೇಳೆ ಯಾರಾದರೂ ಈ ರೀತಿ ಫರ್ಮಾನು ಹೊರಡಿಸಿದರೆ ಅದು ಅವರ ಅಹಮ್ಮಿನ ಒಂದು ಭಾಗವಷ್ಟೇ ಆಗಿ ನೋಡಿ ನಿರ್ಲಕ್ಷಿಸಬೇಕಾಗುತ್ತದೆ.