ರಾಷ್ಟ್ರಪತಿ ಭಾಷಣಕ್ಕೆ ಸೋನಿಯಾ ಗಾಂಧಿಯ ಪ್ರತಿಕ್ರಿಯೆಗೆ ರಾಷ್ಟ್ರಪತಿ ಭವನದಿಂದ ಬಂದ ಸ್ಪಷ್ಟೀಕರಣವು ಅದರ ಐತಿಹಾಸಿಕ ಸಂಯಮಕ್ಕೆ ಹೊಂದಿಕೆಯಾಗುವಂತಿತ್ತೇ?

ಸಂವಿಧಾನದ 60ನೇ ವಿಧಿ ರಾಷ್ಟ್ರಪತಿಗಳ ಜವಾಬ್ದಾರಿಗಳನ್ನು ವ್ಯಾಖ್ಯಾನಿಸುತ್ತದೆ.
ಭಾರತದ ರಾಷ್ಟ್ರಪತಿ ಕೇವಲ ರಾಷ್ಟ್ರದ ಮುಖ್ಯಸ್ಥರಲ್ಲ. ಅವರು ಭಾರತದ ಸಂವಿಧಾನದ ಆತ್ಮಸಾಕ್ಷಿಯೂ ಹೌದು.
ಸಂವಿಧಾನದ ಚೈತನ್ಯ ಯಾವುದೇ ಕಾರಣದಿಂದ ಕಡಿಮೆಯಾದಾಗಲೆಲ್ಲಾ ಅತ್ಯಂತ ಶಕ್ತಿಶಾಲಿ ಮತ್ತು ಅಂತಿಮ ನಿಯಂತ್ರಣ ಸಾಧನವಾಗಿ ರಾಷ್ಟ್ರಪತಿಗಳ ಹುದ್ದೆ ಇದೆಯೆಂಬುದನ್ನು ಗಮನಿಸಬೇಕು. ಈ ಗುರುತರ ಜವಾಬ್ದಾರಿ ಮತ್ತು ಬದ್ಧತೆಗಾಗಿ, ಸಂವಿಧಾನ ಅಧ್ಯಕ್ಷೀಯ ಅಧಿಕಾರಗಳನ್ನು ನೀಡಿದೆ. ಆದರೆ ಎಚ್ಚರಿಕೆಯ ನಿರ್ಬಂಧಗಳನ್ನೂ ಅವು ಹೊಂದಿವೆ.
ರಾಷ್ಟ್ರಪತಿಗಳು ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಾರೆ.ಆದರೆ ಸಾಂವಿಧಾನಿಕ ಅಥವಾ ಪ್ರಜಾಪ್ರಭುತ್ವ ಸಂಪ್ರದಾಯಗಳ ಔಚಿತ್ಯದ ಜೊತೆ ರಾಜಿ ಮಾಡಿಕೊಳ್ಳಲಾಗಿದೆ ಎನ್ನಿಸಿದರೆ, ಅದರ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ನೈತಿಕ ಕರ್ತವ್ಯವನ್ನು ಈ ಅತ್ಯುನ್ನತ ಹುದ್ದೆ ಹೊಂದಿದೆ.
ಒಮ್ಮೆ ಮಾತ್ರ ಮರುಪರಿಶೀಲನೆಗಾಗಿ ಫೈಲ್ ಅನ್ನು ಹಿಂದಿರುಗಿಸುವುದು, ಕಡತಗಳಿಗೆ ಸಹಿ ಮಾಡದಿರುವುದು ಅಥವಾ ಯಾವುದೇ ಕಳವಳವನ್ನು ವ್ಯಕ್ತಪಡಿಸಲು ಕಾರ್ಯಾಂಗದ ಮುಖ್ಯಸ್ಥರೊಂದಿಗೆ ಖಾಸಗಿ ಸಂಭಾಷಣೆ ನಡೆಸುವಂತಹ ಸೌಮ್ಯ ಮತ್ತು ಅಡ್ಡಿಪಡಿಸದ ವಿಧಾನಗಳಿಗೆ ಸಂವಿಧಾನದ ರಚನಾಕಾರರು ಅವಕಾಶ ಮಾಡಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ನಾಗರಿಕರು ಏನು ಬಯಸಿದ್ದಾರೆಯೋ, ಅದು ಸಚಿವ ಸಂಪುಟದಲ್ಲಿ ಇರುವಂತೆ ನೋಡಿ ಕೊಳ್ಳಬೇಕಾದಾಗ, ಪರಿಶೀಲನೆ ಮತ್ತು ಸಮತೋಲನದ ಕೊನೆಯ ಅಸ್ತ್ರವಾಗಿ ಕಾರ್ಯನಿರ್ವಹಿಸುವುದು ಇದರ ಉದ್ದೇಶವಾಗಿದೆ.
ಸರಕಾರ ಮತ್ತು ವಿರೋಧ ಪಕ್ಷಗಳೆರಡೂ ಪರಸ್ಪರ ಬಹಿರಂಗವಾಗಿ ಆರೋಪಗಳನ್ನು ಹೊರಿಸುವ ಸನ್ನಿವೇಶ ನಮ್ಮಲ್ಲಿದೆ. ಈ ರಾಜಕೀಯದ ಗದ್ದಲದಲ್ಲಿ, ರಾಷ್ಟ್ರಪತಿಯವರ ಕಚೇರಿ ರಾಜಕೀಯೇತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಆದರೆ ಆ ಗದ್ದಲದಲ್ಲಿ ಸ್ವತಃ ಭಾಗಿಯಾಗುವುದಿಲ್ಲ.
ವಿಷಯಗಳು ವೈಯಕ್ತಿಕ ಆರೋಪಗಳ ಜಾಗದಲ್ಲಿದ್ದರೆ ಮತ್ತು ರಾಷ್ಟ್ರದ ಸಾಂವಿಧಾನಿಕ ರಚನೆ ಅಥವಾ ಅದರ ಪವಿತ್ರ ಅಗತ್ಯಗಳಿಗೆ ಅಪಾಯವನ್ನು ಉಂಟುಮಾಡದಿದ್ದರೆ, ಅದರಲ್ಲಿ ಮಧ್ಯಪ್ರವೇಶಿಸದೆ ಇರುವುದು ಅಗತ್ಯವಾಗಿರುತ್ತದೆ.
ದೇಶದ ಪ್ರಥಮ ಪ್ರಜೆಯಾಗಿ ರಾಷ್ಟ್ರಪತಿಗಳು ಸಾಂಪ್ರದಾಯಿಕವಾಗಿ ತಮ್ಮ ಬಗ್ಗೆ ಮಾತನಾಡುವುದಿಲ್ಲ. ರಾಷ್ಟ್ರಪತಿಗಳು ವಾಸ್ತವವಾಗಿ ಪಕ್ಷಪಾತವಿಲ್ಲದ ವ್ಯಕ್ತಿಯಾಗಿರಬೇಕು. ರಾಷ್ಟ್ರೀಯ ಮತ್ತು ಸಾಂವಿಧಾನಿಕ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮತ್ತು ತಮ್ಮನ್ನು ಗುರಿಯಾಗಿಟ್ಟುಕೊಂಡು ಮಾಡಿದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಕೂಡದು. ಆಗ ಅದು ಅವರನ್ನು ಪಕ್ಷಪಾತಿ ರಾಜಕಾರಣಿಗಳ ಮಟ್ಟಕ್ಕೆ ತಂದುಬಿಡುತ್ತದೆ.
ಎಲ್ಲಾ ರಾಜಕಾರಣಿಗಳು ಉತ್ಪ್ರೇಕ್ಷೆ ಮಾಡಬಹುದಾದ, ಬಹಿಷ್ಕರಿಸಬಹುದಾದ ಮತ್ತು ತಮ್ಮ ಪಕ್ಷಪಾತದ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ. ಇಂಥ ಎಲ್ಲವನ್ನೂ ರಾಷ್ಟ್ರಪತಿಗಳು ನಿರ್ಲಕ್ಷಿಸುವುದು ಕೂಡ ಅವರ ಜವಾಬ್ದಾರಿಯೇ ಆಗಿರುತ್ತದೆ. ಅದೇ ಐತಿಹಾಸಿಕ ನಿರೀಕ್ಷೆಯ ಹಿನ್ನೆಲೆಯಲ್ಲಿ, ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ಅನೇಕ ರಾಷ್ಟ್ರಪತಿಗಳು ಸರಕಾರದೊಂದಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರಿ ನಿಧಿಯ ಬಳಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಾಷ್ಟ್ರಪತಿಗಳು ಆಗಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ರಾಜೇಂದ್ರ ಪ್ರಸಾದ್ ಅವರ ಪ್ರಕಾರ, ರಾಜ್ಯ ಧಾರ್ಮಿಕತೆಗೆ ಒತ್ತು ನೀಡುವ ಲಕ್ಷಣಗಳು ಬಹಿರಂಗಗೊಳ್ಳುವಷ್ಟು ಗಂಭೀರವಾಗಿದ್ದವು. ಸರಕಾರ ಧಾರ್ಮಿಕತೆಗೆ ಒತ್ತು ನೀಡುವ ಲಕ್ಷಣಗಳು ಬಹಿರಂಗಗೊಳ್ಳುವಷ್ಟು ಗಂಭೀರವಾಗಿದ್ದುದನ್ನು ರಾಜೇಂದ್ರ ಪ್ರಸಾದ್ ಕಂಡಿದ್ದರು.
ನಂತರ, ಡಾ. ಜೈಲ್ ಸಿಂಗ್, ಕೆ.ಆರ್. ನಾರಾಯಣನ್ ಅಥವಾ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಂಥವರು ತಮ್ಮದೇ ಆದ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ಆದರೂ, ಕೆ.ಆರ್. ನಾರಾಯಣನ್ ಅವರೇ ಹೇಳಿದಂತೆ, ಅವೆಲ್ಲವೂ ಸಂವಿಧಾನದ ಚೌಕಟ್ಟಿಗೆ ಒಳಪಟ್ಟೇ ಇದ್ದವು.
ಫಕ್ರುದ್ದೀನ್ ಅಲಿ ಅಹ್ಮದ್ ಅವರಂಥ ಕೆಲವರು ಪ್ರಜಾಪ್ರಭುತ್ವ ವಿರೋಧಿ ತುರ್ತು ಪರಿಸ್ಥಿತಿಗೆ ಒಪ್ಪಿಗೆ ನೀಡುವ ಮೂಲಕ ತಮ್ಮ ಕರ್ತವ್ಯ ಪೂರೈಸುವಲ್ಲಿ ವಿಫಲರಾದರು. ಅದೇ ರೀತಿ, ಮತ್ತೆ ಅನೇಕರು ಅಂಥ ಹಂತಕ್ಕೆ ಹೋಗಿರದೆ ಇದ್ದರೂ, ಮಾತನಾಡುವ ಜವಾಬ್ದಾರಿ ಇದ್ದಾಗ, ಅಂದರೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಬೇಕಿದ್ದಾಗ, ಹಾಗೆ ಮಾಡದೆ ಆ ಪ್ರಮುಖ ಕರ್ತವ್ಯದ ವಿಚಾರವಾಗಿ ರಾಜಿ ಮಾಡಿಕೊಂಡದ್ದಿದೆ.
ಇತ್ತೀಚೆಗೆ, ವಿರೋಧ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡಿದ ನಂತರ ಪ್ರತಿಕ್ರಿಯಿಸಿದ್ದರು.
‘‘ರಾಷ್ಟ್ರಪತಿ, ಆ ಬಡ ಮಹಿಳೆ ಕೊನೆಯ ವೇಳೆಗೆ ತುಂಬಾ ದಣಿದಿದ್ದರು. ಅವರಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಬೇಸರದ ಸಂಗತಿ’’ ಎಂದಿದ್ದರು.
ರಾಷ್ಟ್ರಪತಿಗಳು ಸರಕಾರದ ವಿರುದ್ಧ ಯಾವುದೇ ವಿಷಯ ಹೇಳಲು ಹಿಂಜರಿಯುತ್ತಿರುವ ಬಗ್ಗೆ ಅವರು ಅಂತಹ ಟೀಕೆ ಮಾಡಿದ್ದರು.
ಅವರ ಆ ಹೇಳಿಕೆ, ರಾಷ್ಟ್ರಪತಿಗಳ ಬುಡಕಟ್ಟು ಗುರುತಿನ ಸಂದರ್ಭದ ಹಿನ್ನೆಲೆಯಲ್ಲಿ ನಿಂದನೆ ಎಂಬೆಲ್ಲ ತಕರಾರಿಗೆ ತುತ್ತಾಯಿತು.
ಸಾಮೂಹಿಕವಾಗಿ ಬುಡಕಟ್ಟು ಜನರು, ಮಹಿಳೆಯರು ಮತ್ತು ಸಂವಿಧಾನವನ್ನು ಕೀಳಾಗಿ ಅರ್ಥೈಸಿದಂತಾಗಿದೆ ಎಂಬ ಟೀಕೆಗಳು ಬಂದವು.
ವಿರೋಧ ಪಕ್ಷದ ನಾಯಕಿ ಬಳಸಿದ ಪದ ಮತ್ತು ಮಾತಿನ ಧಾಟಿ ಅನುಚಿತ, ಅನಗತ್ಯ ಮತ್ತು ಗಮನವನ್ನು ಬೇರೆಡೆ ಸೆಳೆಯುವಂತಿತ್ತು ಎಂಬ ಮಾತುಗಳು ಬಂದವು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ರಾಷ್ಟ್ರಪತಿ ಭವನದಿಂದ ಅದಕ್ಕೆ ಸ್ಪಷ್ಟೀಕರಣ ಬಂತೆಂಬುದು. ರಾಷ್ಟ್ರಪತಿಗಳು ಯಾವುದೇ ಹಂತದಲ್ಲಿಯೂ ದಣಿದಿರಲಿಲ್ಲ ಎಂದು ಅದರಲ್ಲಿ ಹೇಳಲಾಯಿತು.
ವಾಸ್ತವವಾಗಿ, ಅವರು ತಮ್ಮ ಭಾಷಣದ ಸಮಯದಲ್ಲಿ ಮಾಡಿದಂತೆ ಅಂಚಿನಲ್ಲಿರುವ ಸಮುದಾಯಗಳ ಪರವಾಗಿ, ಮಹಿಳೆಯರು ಮತ್ತು ರೈತರಿಗಾಗಿ ಮಾತನಾಡುವುದು ಎಂದಿಗೂ ದಣಿವುಂಟುಮಾಡುವುದಿಲ್ಲ ಎಂದು ಅವರು ನಂಬಿದ್ದಾರೆ ಎಂದು ರಾಷ್ಟ್ರಪತಿ ಭವನದ ಆ ಸ್ಪಷ್ಟನೆಯಲ್ಲಿ ಇತ್ತು.
ಅವರಿಗೆ ಹಿಂದಿಯಂತಹ ಭಾರತೀಯ ಭಾಷೆಗಳಲ್ಲಿನ ಭಾಷಾವೈಶಿಷ್ಟ್ಯದ ಬಗ್ಗೆ ಅಷ್ಟು ಪರಿಚಯ ಇಲ್ಲದೆ ಇರಬಹುದು ಮತ್ತು ಹೀಗಾಗಿ ತಪ್ಪು ಅಭಿಪ್ರಾಯವನ್ನು ರೂಪಿಸಿಕೊಂಡಿರಬಹುದು ಎಂದು ರಾಷ್ಟ್ರಪತಿ ಕಚೇರಿ ನಂಬುತ್ತದೆ ಎಂದು ಆ ಸ್ಪಷ್ಟನೆಯಲ್ಲಿ ಹೇಳಲಾಗಿತ್ತು.
ಯಾವುದೇ ಸಂದರ್ಭದಲ್ಲಿ ಅಂತಹ ಟೀಕೆ ಕಳಪೆ ಅಭಿರುಚಿಯವು, ದುರದೃಷ್ಟಕರ ಮತ್ತು ಸಂಪೂರ್ಣವಾಗಿ ದಾರಿ ತಪ್ಪಿಸಬಹುದಾದವು ಎಂದು ರಾಷ್ಟ್ರಪತಿ ಭವನ ಹೇಳಿತ್ತು.
ಇಲ್ಲಿ ಸೋನಿಯಾ ಅವರ ವಿದೇಶಿ ಮೂಲವನ್ನು ಕೆಣಕುವುದು ನಡೆಯಿತೇ ಎಂಬ ಅನುಮಾನಗಳೂ ಎದ್ದಿವೆ.
ಅಂಥ ಹೇಳಿಕೆ ರಾಜಕಾರಣಿಗಳ ಕಡೆಯಿಂದ ಬಂದಿದ್ದಾಗಿದ್ದರೆ ಅದು ಬೇರೆಯಾಗುತ್ತಿತ್ತು. ಆದರೆ ರಾಷ್ಟ್ರಪತಿ ಭವನದ ಐತಿಹಾಸಿಕ ಸಂಯಮಕ್ಕೆ ಖಂಡಿತವಾಗಿಯೂ ಅದು ಹೊಂದಿಕೆಯಾಗುವುದಿಲ್ಲ.
ಆ ಸ್ಪಷ್ಟೀಕರಣದ ಪ್ರಕಟಣೆ ಅಸಾಧಾರಣ ರೀತಿಯಲ್ಲಿ ಪ್ರತಿಕ್ರಿಯಿಸುವ ಉದ್ದೇಶವನ್ನೇ ಪ್ರತಿಬಿಂಬಿಸುತ್ತದೆ.
ಕೆಟ್ಟ ಅಭಿರುಚಿಯಿಂದ ಕೂಡಿದೆ, ದುರದೃಷ್ಟಕರ ಮತ್ತು ಸಂಪೂರ್ಣವಾಗಿ ತಪ್ಪಿಸಬಹುದಾದದ್ದು ಎಂಬ ಮಾತುಗಳು ಆ ಸ್ಪಷ್ಟನೆಯಲ್ಲಿವೆ.
ಇತ್ತೀಚೆಗೆ ಭಾರತದಲ್ಲಿ ಸಾಂವಿಧಾನಿಕ ನೈತಿಕತೆಗೆ ಗಣನೀಯ ಬೆದರಿಕೆಗಳಿವೆ.
ಉದಾಹರಣೆಗೆ, ಲೋಕಸಭೆಯಲ್ಲಿ ಒಬ್ಬ ಸಂಸದರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇನ್ನೊಬ್ಬರನ್ನು ಭಯೋತ್ಪಾದಕ ಎನ್ನುವವರೆಗೂ ಹೋಗಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಪ್ರಜಾಪ್ರಭುತ್ವದ ದೇವಾಲಯದಲ್ಲಿಯೇ ಅಪಾಯಕಾರಿ ಮತ್ತು ಕಾನೂನುಬದ್ಧ ಧ್ರುವೀಕರಣದ ಸ್ಪಷ್ಟ ಪರಿಣಾಮ ಇದೆಂಬುದು ಒಂದೆಡೆ ಇರುವಾಗ, ವೈಯಕ್ತಿಕವಾಗಿ ರಾಷ್ಟ್ರಪತಿಗಳ ಬಗ್ಗೆ ಬಂದ ಟೀಕೆಗೆ ಉತ್ತರಿಸುವುದಕ್ಕೆ ರಾಷ್ಟ್ರಪತಿ ಕಚೇರಿ ಮುಂದಾಯಿತು.
ಮಣಿಪುರದಲ್ಲಿನ ಹಿಂಸಾಚಾರ, ಕೃಷಿ ಬಿಕ್ಕಟ್ಟು, ಧ್ರುವೀಕರಣ, ನಿರುದ್ಯೋಗ, ಅಥವಾ ಇತರ ದೇಶಗಳೊಂದಿಗಿನ ಭಾರತದ ಮುರಿದ ಸಂಬಂಧಗಳಂತಹ ಅನೇಕ ಗಂಭೀರ ಕಳವಳಗಳು ಕಾಡುತ್ತಿವೆ. ಆದರೆ ಇವಾವುದರ ಬಗ್ಗೆಯೂ ಕಾರ್ಯಾಂಗದ ಎದುರು ಕಳವಳ ವ್ಯಕ್ತಪಡಿಸಲು ರಾಷ್ಟ್ರಪತಿ ಭವನ ಮುಂದಾಗಲಿಲ್ಲ. ಕಳವಳ ವ್ಯಕ್ತಪಡಿಸಲು ಅವು ತಕ್ಕವಾಗಿವೆ ಎಂದು ಭಾವಿಸಲೇ ಇಲ್ಲ.
ರೈತರು ವರ್ಷಗಟ್ಟಲೆ ಪ್ರತಿಭಟನಾನಿರತರಾಗಿರುವ ಬಗ್ಗೆ ರಾಷ್ಟ್ರಪತಿ ಭವನದಿಂದ ಹೇಳಿಕೆ ಬರಲಿಲ್ಲ.
ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಮರುಪರಿಶೀಲನೆಗಾಗಿ ಫೈಲ್‌ಗಳನ್ನು ಹಿಂದಿರುಗಿಸುವುದು, ಸರಕಾರಕ್ಕೆ ಸೂಕ್ಷ್ಮವಾದ ಅಂಶಗಳ ಬಗ್ಗೆ ತಮ್ಮದೇ ಆದ ನಿಲುವು ಹೇಳುವುದು ಮತ್ತು 2002ರ ಕೋಮು ಗಲಭೆ ನಂತರ ಮಾಡಿದಂತೆ ಆಗಿನ ಪ್ರಧಾನಿಗೆ ಕಳವಳ ವ್ಯಕ್ತಪಡಿಸಿ ಪತ್ರ ಬರೆಯುವುದು ಮುಂತಾದ ಕ್ರಮಗಳನ್ನು ತೆಗೆದುಕೊಂಡಿದ್ದರು. ಆದರೆ ಅದಾವುದೂ ಈಗ ಕಾಣಿಸುತ್ತಿಲ್ಲ.
ಸಾಮಾಜಿಕ ಸಾಮರಸ್ಯ, ಅಂತರ್‌ರಾಷ್ಟ್ರೀಯ ಸಂಬಂಧಗಳು ಮತ್ತು ದೀನ ದಲಿತರ ವಿಷಯದಲ್ಲಿ ಹೆಚ್ಚು ಗಂಭೀರ ಸಮಸ್ಯೆಗಳಿವೆ ಎಂಬುದು ಕೆ.ಆರ್. ನಾರಾಯಣನ್ ಅವರಿಗೆ ತಿಳಿದಿತ್ತು.
ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೂಡ ತಮ್ಮದೇ ದನಿಯನ್ನು ಖಚಿತವಾಗಿ ವ್ಯಕ್ತಪಡಿಸಿದವರಾಗಿದ್ದರು. ಆದರೆ ಈಗ ಸನ್ನಿವೇಶವೇ ಬದಲಾದ ಹಾಗೆ ತೋರುತ್ತಿದೆ. ರಾಜಕೀಯ ನುಸುಳಿದ ಹಾಗೆ ಕಾಣಿಸುತ್ತದೆ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೂಡ ತಮ್ಮದೇ ದನಿಯನ್ನು ಖಚಿತವಾಗಿ ವ್ಯಕ್ತಪಡಿಸಿದವರಾಗಿದ್ದರು. ಆದರೆ ಈಗ ಸನ್ನಿವೇಶವೇ ಬದಲಾದ ಹಾಗೆ ತೋರುತ್ತಿದೆ. ರಾಜಕೀಯ ನುಸುಳಿದ ಹಾಗೆ ಕಾಣಿಸುತ್ತದೆ.