ಹಿಂದುಳಿದ ವರ್ಗಗಳನ್ನು ಗುರುತಿಸಲು ನ್ಯಾಯಾಂಗದ ಮಾನದಂಡಗಳೇನು?

ಹಿಂದುಳಿದ ವರ್ಗಗಳನ್ನು ಗುರುತಿಸುವ ಮುನ್ನ ಮೀಸಲಾತಿಯ ಉದ್ದೇಶವನ್ನು ಅರಿಯುವುದು ಬಹು ಮುಖ್ಯ. ಮೀಸಲಾತಿಯ ಉದ್ದೇಶವೆಂದರೆ: ಸೂಕ್ತ ಪ್ರಾತಿನಿಧ್ಯವನ್ನು ದೊರಕಿಸಿ ಕೊಡುವ ಮೂಲಕ ಸಾಮಾಜಿಕ ನ್ಯಾಯ ದೊರೆಯುವಂತೆ ಮಾಡುವುದಾಗಿದೆ. ಮೀಸಲಾತಿಯು ಬಡತನ ನಿರ್ಮೂಲನೆಯ ಒಂದು ನೀತಿಯಲ್ಲ.
ಮೀಸಲಾತಿಯು ನಿರುದ್ಯೋಗವನ್ನು ನಿವಾರಣೆ ಮಾಡುವ ಒಂದು ಉಪಬಂಧ ಕೂಡಾ ಅಲ್ಲ. ಸಂವಿಧಾನದಲ್ಲಿ ಈ ಉದ್ದೇಶಗಳನ್ನು ಸಾಧಿಸಲು ಪ್ರತ್ಯೇಕ ಉಪಬಂಧಗಳಿವೆ. ಸಂವಿಧಾನದ ಪ್ರಸ್ತಾವನೆಯೂ ವ್ಯಕ್ತಿ ಗೌರವದ ಆಶ್ವಾಸನೆ ಕೊಡುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಎಲ್ಲಾ ನಾಗರಿಕರಿಗೆ ದೊರೆಯುವಂತೆ ಮಾಡುವ ಉದ್ದೇಶವನ್ನು ಹೊಂದಿರುತ್ತದೆ.(ಪ್ರೊ. ರವಿವರ್ಮ ಕುಮಾರ್ ಆಯೋಗ)
ಒಬಿಸಿ ಎಂಬ ಉಕ್ತಿಯ ಉಪಯೋಗ ಸಾಮಾಜಿಕ ವಾಸ್ತವವನ್ನು ಸೂಚಿಸುತ್ತದೆ. ಅದು ಪಾರಂಪರಿಕವಾಗಿ ಒಪ್ಪಿಕೊಂಡಿರುವ ಹಿಂದುಳಿದ ಅಥವಾ ಶೋಷಣೆಗೆ ಒಳಗಾದ ವರ್ಗಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತದೆ. ಭಾರತದ ಸಂವಿಧಾನವು ಎಲ್ಲಾ ವರ್ಗದ ಜನರಿಗೆ ನ್ಯಾಯವನ್ನು ನಿಶ್ಚಿತ ಪಡಿಸಲು ಬದ್ಧತೆಯನ್ನು ಹೊಂದಿದೆ. ಆದರೆ, ಇತರ ಹಿಂದುಳಿದ ವರ್ಗಗಳು(ಒಬಿಸಿ) ಎಂಬ ನುಡಿಗಟ್ಟು ಬಳಕೆಯಲ್ಲಿಲ್ಲ. ಸಂವಿಧಾನದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು(ಎಸ್‌ಇಬಿಸಿ) ಎಂಬ ನುಡಿಗಟ್ಟು ಬಳಕೆಯಲ್ಲಿದೆ. ಒಬಿಸಿ ಎಂಬುದು ಎಸ್‌ಇಬಿಸಿಯ ಸಂಕ್ಷಿಪ್ತ ರೂಪ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳ ಪ್ರವರ್ಗವು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಅಥವಾ ಇತರ ಹಿಂದುಳಿದ ವರ್ಗಗಳಿಗೆ ಸೇರಿದೆ. ಇದಕ್ಕೆ ಸಾಂವಿಧಾನಿಕ ಸ್ಥಾನಮಾನ ಮತ್ತು ಮಾನ್ಯತೆಯೂ ಇದೆ. ವಿಧಿ 15(4) ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರಗತಿಗೆ ವಿಶೇಷ ನಿಬಂಧನೆಗಳನ್ನು ಮಾಡುವ ಬಗ್ಗೆ ಉಲ್ಲೇಖಿಸುತ್ತದೆ ಮತ್ತು ವಿಧಿ 340 ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅನ್ವೇಷಣೆ ಮಾಡಲು ರಾಷ್ಟ್ರಪತಿಗಳಿಂದ ಆಯೋಗವನ್ನು ನೇಮಿಸುವ ಬಗ್ಗೆ ಹೇಳುತ್ತದೆ. ಇದೇ ನಿಬಂಧನೆಯನ್ನು ಉಪಯೋಗಿಸಿಕೊಂಡು 1953ರಲ್ಲಿ ಕಾಕಾ ಕಾಲೇಲ್ಕರ್ ಆಯೋಗವನ್ನು ರಚಿಸಲಾಗಿತ್ತು. ಹಾಗೆಯೇ 1978ರಲ್ಲಿ ಬಿ.ಪಿ. ಮಂಡಲ್ ಆಯೋಗವನ್ನೂ ರಚಿಸಲಾಗಿತ್ತು. ಮಂಡಲ್ ವರದಿ ಅನುಷ್ಠಾನದ ಅಧಿಸೂಚನೆಯನ್ನು ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ಎತ್ತಿ ಹಿಡಿಯಿತು. ಸಂಸತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ 1993 ಅನ್ನು ಶಾಶ್ವತವಾಗಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ರೂಪಿಸಿತು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಅಥವಾ ತಾಂತ್ರಿಕವಾಗಿ ಒಬಿಸಿಗಳು. ಆದರೆ ಸಾಮಾನ್ಯ ಮತ್ತು ಜನಪ್ರಿಯತೆ ಕಾರಣದಿಂದ ಬಳಕೆಯಲ್ಲಿ ಇದನ್ನು ಹಿಂದುಳಿದ ವರ್ಗಗಳು ಎಂದು ಕರೆಯಲಾಗುತ್ತದೆ.
ಜಾತಿ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ಗುರುತಿಸಬಹುದೇ?:
ಭಾರತದ ಸಂವಿಧಾನವು ಜಾತಿಯ ಆಧಾರದ ಮೇಲೆ ತಾರತಮ್ಯ ನಿರ್ಮೂಲನೆ ಮಾಡಲು ಉದ್ದೇಶಿಸಿದೆ. ಆದರೆ ದೇಶವು ಎದುರಿಸುತ್ತಿರುವ ನಿಜವಾದ ಸಮಸ್ಯೆ: ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡದಿಂದ ಜಾತಿಯನ್ನು ತಳ್ಳಿ ಹಾಕಬಹುದೇ? ಸಂವಿಧಾನದ ಪೂರ್ವದ ಅವಧಿಯಲ್ಲಿ ‘ವರ್ಗ’ ಮತ್ತು ‘ಜಾತಿ’ ಎಂಬ ಪದ ಪ್ರಯೋಗಗಳನ್ನು ಪರಸ್ಪರ ಬದಲಿಯಾಗಿ ಬಳಸಲಾಯಿತು. ವಾಸ್ತವವಾಗಿ ಡಾ. ಅಂಬೇಡ್ಕರ್ ಸಂವಿಧಾನದ ಮೊದಲನೇ ತಿದ್ದುಪಡಿ ಸಮಯದಲ್ಲಿ ಸಂಸತ್ತಿನ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿರುವ ಹಾಗೆ, ‘‘ಹಿಂದುಳಿದ ವರ್ಗಗಳೆಂದರೆ ಬೇರೇನೂ ಅಲ್ಲ; ಆದರೆ ಕೆಲವು ಜಾತಿಗಳ ಒಟ್ಟುಗೂಡಿಸುವಿಕೆ ಅಷ್ಟೇ’’. ಜಾತಿಯು ಒಂದು ಸೀಮಿತ ವರ್ಗವಾಗಿದೆ. 16(4)ನೇ ವಿಧಿಯಲ್ಲಿ ವರ್ಗ ಎಂಬ ಪದ ಬಳಕೆಯ ಬಗ್ಗೆ ಸ್ಪಷ್ಟೀಕರಣ ನೀಡುತ್ತ ಮುಖ್ಯ ನ್ಯಾಯಮೂರ್ತಿ ಕಾನೀಯ ಮತ್ತು ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ, ಅಹಮದಿ ಮತ್ತು ಜೀವನ್ ರೆಡ್ಡಿ ಅವರು, ಮಂಡಲ್ ಪ್ರಕರಣದಲ್ಲಿ 16(4)ನೇ ವಿಧಿಯಲ್ಲಿ ವರ್ಗ ಎಂಬ ಪದ ಪ್ರಯೋಗವನ್ನು ಬಳಸಲು ಸ್ಪಷ್ಟ ಕಾರಣವೆಂದರೆ ಹಿಂದೂಗಳಲ್ಲದವರು ‘ಜಾತಿ’ಯನ್ನು ಬಳಸುವುದಿಲ್ಲವಾದ್ದರಿಂದ, ಅದರ ವ್ಯಾಪ್ತಿಯಿಂದ ಹೊರಗಿಡಲ್ಪಡುತ್ತಿದ್ದರು ಎಂದು ಸೂಚಿಸಿದರು. ಆದ್ದರಿಂದ 16(4)ನೇ ವಿಧಿಯಲ್ಲಿ ‘ವರ್ಗ’ ಎಂಬ ಪದದ ಬಳಕೆಯಿಂದ ವರ್ಗವು ಜಾತಿಗೆ ವಿರುದ್ಧವಾಗಿದೆಯೇ ಅಥವಾ ಜಾತಿಯು ಒಂದು ವರ್ಗವಾಗಿರಲು ಸಾಧ್ಯವಿಲ್ಲವೇ ಅಥವಾ ಅಂತಹ ಜಾತಿಯನ್ನು ಎಂದಿಗೂ ನಾಗರಿಕರ ಹಿಂದುಳಿದ ವರ್ಗವೆಂದು ಪರಿಗಣಿಸಲಾಗುವುದಿಲ್ಲವೇ ಎಂದು ತೀರ್ಮಾನಿಸಲು ಸಾಧ್ಯವಿಲ್ಲ.
ಏಕೈಕ ಅಥವಾ ಪ್ರಬಲ ಮಾನದಂಡವೂ ಅಲ್ಲ
1960ರ ದಶಕದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ಹಿಂದುಳಿದಿರುವಿಕೆಯನ್ನು ಗುರುತಿಸುವಲ್ಲಿ ಜಾತಿಯ ಪ್ರಾಬಲ್ಯದ ಪಾತ್ರವನ್ನು ದುರ್ಬಲಗೊಳಿಸಲು ಪ್ರಯತ್ನಗಳನ್ನು ಮಾಡಿತು. ಬಾಲಾಜಿ v/s ಮೈಸೂರು ರಾಜ್ಯ ಪ್ರಕರಣದಲ್ಲಿ ನ್ಯಾ. ಪಿ.ಬಿ. ಗಜೇಂದ್ರಗಡಕರ್ ಸಂವಿಧಾನ ಪೀಠದ ಸರ್ವ ನ್ಯಾಯಾಧೀಶರ ಪರವಾಗಿ ಮಾತನಾಡುತ್ತಾ, ಹಿಂದೂಗಳಲ್ಲಿರುವ ಜಾತಿ ಅಂಶದ ಕಠಿಣ ವಾಸ್ತವವನ್ನು ಒಪ್ಪಿಕೊಂಡರು. ‘‘ಹಿಂದೂಗಳಿಗೆ ಸಂಬಂಧಿಸಿದಂತೆ ಜಾತಿಗಳು ಅಥವಾ ನಾಗರಿಕರ ಗುಂಪುಗಳು ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸುವಲ್ಲಿ ಪ್ರಸಕ್ತ ಪರಿಗಣಿಸಬೇಕಾದ ಅಂಶವಾಗಿರಬಹುದು. ಆದರೆ ಆ ಪರವಾಗಿ ಅದನ್ನು ಏಕೈಕ ಅಥವಾ ಪ್ರಬಲ ಒರೆಗಲ್ಲನ್ನಾಗಿಸಲು ಸಾಧ್ಯವಿಲ್ಲ’’ ಎಂದು ಸೂಚಿಸಿದರು. ನ್ಯಾ. ಸುಬ್ಬರಾವ್ ಚಿತ್ರಲೇಖ v/s ಮೈಸೂರು ರಾಜ್ಯ ಪ್ರಕರಣದಲ್ಲಿ ತಮ್ಮ ಬಹುಮತದ ತೀರ್ಪಿನಲ್ಲಿ ಅದನ್ನು ಮತ್ತಷ್ಟು ಜಾತ್ಯತೀತಗೊಳಿಸಿದರು. ಯಾವುದೇ ಸಂದರ್ಭದಲ್ಲಿಯೂ ‘ವರ್ಗ’ ವನ್ನು ‘ಜಾತಿ’ಗೆ ಸಮಗೊಳಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಆದರೆ ಒಬ್ಬ ವ್ಯಕ್ತಿಯ ಜಾತಿ ಅಥವಾ ವ್ಯಕ್ತಿಗಳ ಗುಂಪನ್ನು ನಿರ್ದಿಷ್ಟ ವರ್ಗಕ್ಕೆ ಸೇರಿಸುವಲ್ಲಿ ಇತರ ಸಂಬಂಧಿತ ಅಂಶಗಳೊಂದಿಗೆ ಪರಿಗಣಿಸಬಹುದು. ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ವರ್ಗವೊಂದರ ಹಿಂದುಳಿದಿರುವಿಕೆಯನ್ನು ನಿರ್ಧರಿಸುವಲ್ಲಿ ಜಾತಿಯನ್ನು ಹೊರಗಿಟ್ಟರೆ ಅದು ಕೆಟ್ಟದ್ದಲ್ಲ ಎಂದು ಅವರು ಪ್ರಬಲವಾಗಿ ಒತ್ತಿ ಹೇಳಿದರು. ನ್ಯಾ. ಮುಧೋಳ್ಕರ್ ತಮ್ಮ ಭಿನ್ನಾಭಿಪ್ರಾಯದ ತೀರ್ಪಿನಲ್ಲಿ ಒಂದು ವರ್ಗದ ಹಿಂದುಳಿದಿರುವಿಕೆಯನ್ನು ಗುರುತಿಸಲು ವ್ಯಕ್ತಿಯ ಜಾತಿಯನ್ನು ಪರಿಗಣಿಸುವುದು ವಿಧಿಗಳಾದ 15 ಅಥವಾ 29(2)ರ ವಿರುದ್ಧವಾಗಿರುತ್ತದೆ ಎಂದು ಘೋಷಿಸಿದರು. ಅವರ ಅಭಿಪ್ರಾಯದಲ್ಲಿ ವಿಧಿ 15 (4) ‘‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳು ಯಾವುವು ಎಂಬುದನ್ನು ನಿರ್ಧರಿಸುವಲ್ಲಿ ಜಾತಿಗಳು ಯಾವುದೇ ಪ್ರಸ್ತುತತೆಯನ್ನು ಹೊಂದಿಲ್ಲ’’.
1984ರ ನಂತರದ ತೀರ್ಪುಗಳು
ನ್ಯಾಯಾಲಯದ ಈ ವಾದ ಅಥವಾ ತೀರ್ಮಾನವು 60ರ ದಶಕದ್ದಾದರೆ, 1984ರಲ್ಲಿ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಅವರು ಕೆ.ಸಿ. ವಸಂತ್ ಕುಮಾರ್ v/s ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಈ ದೆಸೆಯಲ್ಲಿ ಏನು ಹೇಳಿರುವರು ಎಂಬುದನ್ನು ಗಮನಿಸೋಣ.
ಕೆ.ಸಿ. ವಸಂತ್ ಕುಮಾರ್ v/s ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಹೊರತುಪಡಿಸಿ, ಸಂವಿಧಾನ ಪೀಠದ ಇತರ ನಾಲ್ವರು ನ್ಯಾಯಾಧೀಶರು ಹಿಂದುಳಿದ ಜಾತಿ ಸಂಬಂಧಿತ ವಿಷಯವನ್ನು ತಳಸ್ಪರ್ಶಿಯಾಗಿ ಮತ್ತು ವಿಸ್ತಾರವಾಗಿ ಚರ್ಚಿಸಿರುವರು. ಸಾಮಾಜಿಕ ವ್ಯವಸ್ಥೆಯಲ್ಲಿ ಜಾತೀಯ ಪಾತ್ರವನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಹೇಳಿದರು, ಸಾಮಾಜಿಕ ಶ್ರೇಣಿ ಮತ್ತು ಆರ್ಥಿಕ ಸ್ಥಾನವು ನಿಸ್ಸಂದೇಹವಾಗಿ ಪರಸ್ಪರಾವಲಂಬನೆಯನ್ನು ಪ್ರದರ್ಶಿಸುತ್ತವೆ. ಜಾತಿ ಕೆಳಮಟ್ಟದಲ್ಲಿ ಇದ್ದಷ್ಟೂ ಅದರ ಸದಸ್ಯರು ಬಡವರಾಗಿರುತ್ತಾರೆ. ಜಾತಿ ಮತ್ತು ಆರ್ಥಿಕ ಪರಿಸ್ಥಿತಿ ಕೆಳಮಟ್ಟದಾಗಿರುತ್ತವೆ ಅಷ್ಟೇ ಅಲ್ಲ ಪರಸ್ಪರ ಪ್ರತಿಬಿಂಬಿಸುತ್ತವೆ. ಅವು ಗ್ರಾಮೀಣ ಸಮಾಜದಲ್ಲಿ ಒಬ್ಬ ವ್ಯಕ್ತಿ ಅಥವಾ ವರ್ಗವು ಹೊಂದಿರುವ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸ್ಥಿತಿ ಬಡವರ ಮೇಲೆ ಬೀಳುವ ಹೊರೆಗಳಾಗಿವೆ. ಈ ಕುರಿತು ಮತ್ತಷ್ಟನ್ನು ನ್ಯಾ. ಚಿನ್ನಪ್ಪ ರೆಡ್ಡಿ ಅವರು ಸ್ಪಷ್ಟ ಪಡಿಸುತ್ತಾರೆ-
‘‘ಭಾರತೀಯ ಗ್ರಾಮೀಣ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಶಕ್ತಿಯು ಜಾತಿ ವ್ಯವಸ್ಥೆಯಲ್ಲಿ ಎಷ್ಟು ಹೆಣೆಯಲ್ಪಟ್ಟಿವೆ ಮತ್ತು ಬೆಸೆದುಕೊಂಡಿವೆ, ಒಂದುವೇಳೆ ಬಡತನವೇ ಕಾರಣವಾಗಿದ್ದರೆ, ಜಾತಿಯು ಸಾಮಾಜಿಕ ಹಿಂದುಳಿದಿರುವಿಕೆಯ ಪ್ರಾಥಮಿಕ ಸೂಚ್ಯಂಕವಾಗಿದೆ ಎಂದು ಯಾರಾದರೂ ಹಿಂಜರಿಕೆ ಇಲ್ಲದೆ ಹೇಳಬಹುದು, ಆದ್ದರಿಂದ ಸಾಮಾಜಿಕ ಹಿಂದುಳಿದಿರುವಿಕೆಯು ವ್ಯಕ್ತಿಯ ಜಾತಿಯನ್ನು ಉಲ್ಲೇಖಿಸಿ ಸುಲಭವಾಗಿ ಗುರುತಿಸಲ್ಪಡುತ್ತದೆ’’.
‘‘ಒಬ್ಬ ವ್ಯಕ್ತಿಯು ಕುಟುಂಬದಲ್ಲಿ ಹುಟ್ಟಿನಿಂದಲೇ ಅವನ ಜಾತಿಯ ಆಡಳಿತಗಾರ’’ ಎಂದು ನ್ಯಾ. ಇ.ಎಸ್. ವೆಂಕಟರಾಮಯ್ಯ ತೀರ್ಪು ನೀಡಿದ್ದಾರೆ. ಭಾರತದಲ್ಲಿ ಜಾತಿಯು ಪ್ರಾಚೀನ ಶಕ್ತಿಯನ್ನು ಹೊಂದಿದೆ ಮತ್ತು ಭಾರತೀಯ ಸಮಾಜದಲ್ಲಿ ಜಾತಿಯ ಸರ್ವವ್ಯಾಪಿತ್ವವಿದೆ. ‘‘ನಮ್ಮ ದೇಶದಲ್ಲಿ ಜಾತಿ ಎಷ್ಟು ದುಃಖಕರ ಮತ್ತು ದಬ್ಬಾಳಿಕೆಯಿಂದ ಆಳವಾಗಿ ಬೇರೂರಿದೆ ಎಂದರೆ ಅದು ಧರ್ಮದ ಅಡೆತಡೆಗಳನ್ನು ದಾಟಿದೆ’’.
1990ರ ದಶಕದ ಆರಂಭದವರೆಗಿನ ನ್ಯಾಯಾಂಗ ತೀರ್ಮಾನವೆಂದರೆ ಪಾತ್ರದ ವ್ಯಾಪ್ತಿಯ ಮೇಲಿನ ಒತ್ತು ಏನೇ ಇರಲಿ ಒಂದು ವರ್ಗದ ಹಿಂದುಳಿದಿರುವಿಕೆಯನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಪರಿಗಣಿಸಬೇಕಾದ ಮಾನದಂಡವೆಂದರೆ ಜಾತಿ.
1990ರ ದಶಕದ ಸನ್ನಿವೇಶ, ಜಾತಿಯು ಹಿಂದುಳಿದ ವರ್ಗಗಳ ಗುರುತಿಸುವಿಕೆಗೆ ಆಧಾರ- ಆದರೆ?
ಇಂದ್ರಾ ಸಹಾನಿ v/s ಭಾರತ ಒಕ್ಕೂಟ ಪ್ರಕರಣದಲ್ಲಿ ಜಾತಿಯು ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ಮಾನದಂಡವಾಗಬಹುದೇ? ಎಂದು ನಿರ್ಧರಿಸುವ ನಿರ್ದಿಷ್ಟ ಉದ್ದೇಶಕ್ಕಾಗಿ ಒಂಭತ್ತು ಮಂದಿ ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸಲಾಯಿತು.
ಮುಖ್ಯ ನ್ಯಾಯಮೂರ್ತಿ ಕನೀಯಾ, ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ, ಅಹಮದಿ ಮತ್ತು ಜೀವನ್ ರೆಡ್ಡಿ ಅವರು ಪ್ರಮುಖ ಬಹುಮತದ ತೀರ್ಪನ್ನು ರೂಪಿಸುತ್ತಾ, ಜಾತಿಯು ಸಾಮಾಜಿಕ ವರ್ಗವಲ್ಲದೆ ಬೇರೇನೂ ಅಲ್ಲ- ಸಾಮಾಜಿಕವಾಗಿ ಏಕರೂಪದ ವರ್ಗ, ಇದು ಒಂದು ವ್ಯಕ್ತಿ ಪರ ಗುಂಪು. ಜಾತಿಯು ಸಾಮಾಜಿಕವಾಗಿ ಏಕರೂಪದ ವರ್ಗವಾಗಿದೆ. ಒಳಬಾಂಧವ್ಯ(Endogomy)ಅದರ ಮುಖ್ಯ ಲಕ್ಷಣವಾಗಿದೆ. ತೀರ್ಪಿನ ತೀರ್ಮಾನವೆಂದರೆ- ಒಂದು ಜಾತಿಯು ಭಾರತದಲ್ಲಿ ಸಾಮಾಜಿಕ ವರ್ಗವಾಗಿರಬಹುದು, ಅದು ಸಾಮಾಜಿಕವಾಗಿ ಹಿಂದುಳಿದಿದ್ದರೆ, ಅದು ವಿಧಿ 16(4)ರ ಉದ್ದೇಶಗಳಿಗೆ ಹಿಂದುಳಿದ ವರ್ಗವಾಗಿರುತ್ತದೆ.
ನ್ಯಾ. ಪಾಂಡಿಯನ್ ತಮ್ಮ ಸಹಮತದ ತೀರ್ಪಿನಲ್ಲಿ ಒಂದು ಜಾತಿಯು ನಾಗರಿಕರ ವರ್ಗವೂ ಆಗಿದೆ ಮತ್ತು ಆ ಜಾತಿಯು ಹಿಂದುಳಿದಿರುವಿಕೆಯ ಅಗತ್ಯ ಪರೀಕ್ಷೆಗಳನ್ನು ಪೂರೈಸಿದರೆ, ಆ ಜಾತಿಯನ್ನು ಹಿಂದುಳಿದವರು ಎಂದು ವರ್ಗೀಕರಿಸುವುದು ವಿಧಿ 16(4)ಕ್ಕೆ ವಿರುದ್ಧವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನ್ಯಾ. ಸಾವಂತ್ ತಮ್ಮ ಸಹಮತದ ತೀರ್ಪಿನಲ್ಲಿ ಜಾತಿವಾದವು ಇಡೀ ಭಾರತೀಯ ಸಮಾಜಕ್ಕೆ ಶಾಪವಾಗಿದೆ ಎಂದು ಎತ್ತಿ ತೋರಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ಒಂದು ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ್ದಾನೆ ಮತ್ತು ಆದ್ದರಿಂದ ಅವನು ಹುಟ್ಟಿದ ಜಾತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಒಂದು ಜಾತಿಯು ಸ್ವತ: ಒಂದು ವರ್ಗವನ್ನು ರೂಪಿಸಬಹುದು. ಆದಾಗ್ಯೂ ಹಿಂದುಳಿದ ವರ್ಗವನ್ನು ರೂಪಿಸಲು ಸಂಬಂಧಪಟ್ಟ ಜಾತಿಯು ಸಾಮಾಜಿಕವಾಗಿ ಹಿಂದುಳಿದಿರಬೇಕು ಮತ್ತು ಅದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವುದು ಅದರ ಸಾಮಾಜಿಕ ಹಿಂದುಳಿದಿರುವಿಕೆಯ ಕಾರಣದಿಂದಾಗಿರಬೇಕು ಎಂದು ನ್ಯಾ. ಸಾವಂತ್ ಗಮನ ಸೆಳೆದಿರುವರು.
ಇಂದ್ರಾ ಸಹಾನಿ ಪ್ರಕರಣದಲ್ಲಿ, ಹಿಂದುಳಿದಿರುವಿಕೆಗೆ ಜಾತಿಯೇ ಆಧಾರ ಎಂಬ ಅಂಶವನ್ನು ಪರಿಗಣಿಸಿರುವುದು ಸ್ಪಷ್ಟವಾಗಿದೆ. ಪೀಠದ ಒಂಭತ್ತು ಮಂದಿ ನ್ಯಾಯಾಧೀಶರಲ್ಲಿ ಆರು ಮಂದಿ ನ್ಯಾಯಾಧೀಶರು ತಮ್ಮ ಬಹುಮತದ ತೀರ್ಮಾನದಲ್ಲಿ ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ಜಾತಿಯೇ ಮಾನದಂಡ ಎಂಬುದನ್ನು ಹೇಳಿರುವ ಚಿತ್ರಣ ಹೀಗಿದೆ.
1. ಜಾತಿಯು ಸ್ವತಃ ಒಂದು ವರ್ಗವನ್ನು ರೂಪಿಸಬಹುದು ಮತ್ತು ಹಿಂದುಳಿದಿರುವಿಕೆಯ ನಿರ್ಣಯಕ್ಕೆ ಆಧಾರವಾಗಬಹುದು.
ಈ ನಿರ್ಣಯವನ್ನು ಬಹುಮತದ ತೀರ್ಮಾನ ಕೊಟ್ಟ ಆರು ಮಂದಿ ನ್ಯಾಯಾಧೀಶರು- ಮುಖ್ಯ ನ್ಯಾಯಮೂರ್ತಿ ಕಾನೀಯ ಮತ್ತು ನ್ಯಾಯಾಧೀಶರುಗಳಾದ ಎಂ.ಎನ್. ವೆಂಕಟಾಚಲಯ್ಯ, ಅಹಮದಿ, ಜೀವನ್ ರೆಡ್ಡಿ, ಪಾಂಡಿಯನ್ ಮತ್ತು ಸಾವಂತ್ ಅವರು.
2. ಜಾತಿಯನ್ನು ವರ್ಗವಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅದು ಹಿಂದುಳಿದಿರುವಿಕೆಯ ನಿರ್ಣಯದ ಆಧಾರವಾಗಿರಲು ಸಾಧ್ಯವಿಲ್ಲ.
ಈ ನಿರ್ಣಯವನ್ನು ಮೂರು ಮಂದಿ ನ್ಯಾಯಾಧೀಶರು ಹೇಳಿರುವರು. ನ್ಯಾಯಾಧೀಶರಾದ ತೋಮನ್, ಕುಲದೀಪ್ ಸಿಂಗ್ ಮತ್ತು ಸಹಾಯಿ ಅವರು.
ಹಿಂದುಳಿದ ವರ್ಗಗಳನ್ನು ಗುರುತಿಸಲು ಬಹುತೇಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಅದರಲ್ಲೂ 9 ಮಂದಿ ನ್ಯಾಯಾಧೀಶರ ಪೀಠ ಇಂದ್ರಾ ಸಹಾನಿ ಪ್ರಕರಣದಲ್ಲಿ ಅಂತಿಮವಾಗಿ ಜಾತಿಯೇ ಮೂಲ ಮಾನದಂಡ ಎಂದು ತೀರ್ಪಿತ್ತಿರುವರು. ಆ ತೀರ್ಪು ಹೊರ ಬಂದದ್ದು ನವೆಂಬರ್ 16, 1992ರಂದು. ಇಂಥ ಸ್ಪಷ್ಟ ತೀರ್ಪು ಬಂದ ನಂತರವೂ, ಜಾತಿಯನ್ನು ಹಿಂದುಳಿದಿರುವಿಕೆಗೆ ಮಾನದಂಡವೆಂದು ಪರಿಗಣಿಸಬಾರದು, ಅದು ಬಡತನದ ಆಧಾರದ ಮೇಲೆ ಇರಬೇಕು ಎಂದು ವಿತಂಡವಾದವನ್ನು ಮೀಸಲಾತಿ ವಿರೋಧಿಗಳು ಮಂಡಿಸುತ್ತಲೇ ಬರುತ್ತಿದ್ದರು. ಆದರೆ, ಮಿಂಚಿನೋಪಾದಿಯಲ್ಲಿ ಯಾವುದೇ ಆಯೋಗದ ವರದಿ ಪಡೆಯದೆ ಸಂವಿಧಾನದ 103ನೇ ತಿದ್ದುಪಡಿಯಲ್ಲಿ ಆರ್ಥಿಕ ದುರ್ಬಲರಿಗೂ, ಮೀಸಲಾತಿ ಒದಗಿಸಿದ ಮೇಲೆ, ಮೀಸಲಾತಿ ವಿರೋಧಿಗಳೆಲ್ಲ ಬಾಯಿ ಮುಚ್ಚಿಕೊಂಡು ತೆಪ್ಪಗಾಗುವಂತಾಗಿದೆ.