ಹಿಂದಿ ಹೇರಿಕೆಯ ಬಗ್ಗೆ ಕನ್ನಡಿಗರಲ್ಲಿ ಇರುವ ನಿಜವಾದ ಕಳವಳ ಏನು?
ಮೊನ್ನೆ ಸೆಪ್ಟಂಬರ್ 14ರಂದು ಹಿಂದಿ ದಿವಸ್ ಆಚರಣೆಗೆ ಪ್ರತೀ ವರ್ಷದಂತೆ ತೀವ್ರ ವಿರೋಧ ವ್ಯಕ್ತವಾಯಿತು. ಹಲವೆಡೆಗಳಲ್ಲಿ ಪ್ರತಿಭಟನೆಗಳು ನಡೆದ ವರದಿಗಳು ಬಂದವು. ಹಿಂದಿ ದಿವಸ ಎಂಬುದು ಹಿಂದಿಯನ್ನು ಹೇರುವ ಹುನ್ನಾರವಾಗಿದೆ, ಈ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂಬ ವಾದಗಳು ಕೇಳಿಬಂದವು. ಎಲ್ಲಾ 22 ಅಧಿಕೃತ ಭಾಷೆಗಳನ್ನೂ ಸಮಾನವಾಗಿ ಕಾಣುವಂತಾಗಲು ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಬಹುತ್ವ, ಸಾರ್ವಭೌಮತ್ವವನ್ನು ಕಾಪಾಡಬೇಕು ಎಂಬ ಒತ್ತಾಯವನ್ನೂ ಮಾಡಲಾಯಿತು.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೇಂದ್ರ ಸರಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ವ್ಯವಹಾರದ ಭಾಷೆಯಾಗಬೇಕು. ಎಲ್ಲಾ ಬಗೆಯ ಪತ್ರ ವ್ಯವಹಾರ ಕನ್ನಡದಲ್ಲೇ ನಡೆಯಬೇಕು ಎಂಬ ಆಗ್ರಹವೂ ವ್ಯಕ್ತವಾಯಿತು.
ಹೀಗೆ ಕರ್ನಾಟಕದಲ್ಲಿ ಹಿಂದಿ ವಿರುದ್ಧ ಆಕ್ರೋಶ ವ್ಯಕ್ತವಾದ ಕೂಡಲೇ ಅದನ್ನು ಭಾಷಾ ಅಸಹನೆ ಎಂದೂ, ಭಾಷಾ ಸಂಕುಚಿತತೆ ಎಂದೂ ಹೇಳುವ ಬಿಜೆಪಿ ಪ್ರೇರಿತ ಮನಃಸ್ಥಿತಿಗಳೂ ಇನ್ನೊಂದೆಡೆ ಪ್ರಬಲವಾಗುತ್ತಿವೆ.
ಆದರೆ, ಹಿಂದಿ ವಿರುದ್ಧದ ಅಸಹನೆ ಮತ್ತು ಆಕ್ರೋಶದ ಹಿಂದೆ ಇರುವ ಕಳಕಳಿಯೇ ಬೇರೆ. ಅದು, ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಹಾಕಲು ಹಿಂದಿ ಎಂಬ ಅಸ್ತ್ರ ಹಿಡಿದು ನಿಂತಿರುವವರಿಗೆ ಅರ್ಥವಾಗುವಂಥದ್ದಲ್ಲ ಅಥವಾ ಅವರು ಅದನ್ನು ಬೇಕೆಂದೇ ನಿರ್ಲಕ್ಷಿಡ್ತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೂ ಮೊದಲು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರುದ್ಧದ ಆಂದೋಲನ ಹೆಚ್ಚು ಕಾಣಿಸುತ್ತಿತ್ತು. ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧದ ಸಿಟ್ಟು ಬರೀ ಭಾವನಾತ್ಮಕವಾದುದಲ್ಲ. ಅದನ್ನೂ ಮೀರಿದ ವಿಚಾರಗಳಿವೆ.
ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಬೋರ್ಡ್‌ಗಳಿಗೆ ಮಸಿ ಬಳಿಯುವುದರಿಂದ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳ ತನಕವೂ ವಿವಿಧ ರೀತಿಯಲ್ಲಿ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾಗುವುದನ್ನು ಕಾಣಬಹುದು.
ಇದನ್ನು ಕೆಲವೊಮ್ಮೆ ಅನೇಕರು, ಭಾಷೆಯ ಕುರಿತ ಸಂಕುಚಿತ ಧೋರಣೆ ಎಂದೂ ಟೀಕಿಸುವುದಿದೆ. ಮಾಧ್ಯಮಗಳೂ ಹಾಗೆಯೇ ಹೇಳುವುದಿದೆ. ಆದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದಿಯ ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ನಿಜವಾದ ಕಳವಳಗಳಿವೆ. ಹಾಗಾದರೆ, ಹಿಂದಿ ಹೇರಿಕೆಗೆ ವಿರೋಧದ ಹಿಂದೆ ನಿಜವಾಗಿಯೂ ಇರುವ ಅಂಶಗಳೇನು? ಭಾಷಾ ಹಕ್ಕುಗಳು, ಪ್ರಾದೇಶಿಕ ಅಸ್ಮಿತೆ, ಶಿಕ್ಷಣ ಮತ್ತು ಉದ್ಯೋಗದಲ್ಲಿನ ಅವಕಾಶಗಳ ವಿಚಾರವಾಗಿ ನಾವು ತಿಳಿಯಬೇಕಿರುವುದೇನು?
ನಮ್ಮಲ್ಲಿ ಆಳವಾಗಿ ಬೇರೂರಿರುವ ಎರಡು ತಪ್ಪು ಕಲ್ಪನೆಗಳನ್ನು ಮೊದಲು ಬಗೆಹರಿಸಿಕೊಳ್ಳಬೇಕು.
ಮೊದಲನೆಯದಾಗಿ, ಭಾರತೀಯರೆಲ್ಲರೂ ಒಗ್ಗೂಡಲು ಹಿಂದಿ ಬೇಕು ಎಂಬ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ. ಆದರೆ, ಒಗ್ಗೂಡುವುದಕ್ಕೆ ಹಿಂದಿ ಬೇಕೆಂಬುದು ಖಂಡಿತ ನಿಜವಲ್ಲ.
ಭಾರತ ತನ್ನ ಬಹು ಭಾಷೆ ಮತ್ತು ಬಹು ಸಂಸ್ಕೃತಿಗಳ ಕಾರಣದಿಂದಲೇ ವಿಶಿಷ್ಟವಾಗಿರುವ ದೇಶ. ತನ್ನ ವೈವಿಧ್ಯತೆಯಲ್ಲೇ ಏಕತೆಯ ಗುಣವನ್ನು ಹೊಂದಿರುವ ದೇಶ. ಹಾಗಾಗಿ ಒಗ್ಗೂಡುವುದಕ್ಕೆ ಖಂಡಿತ ಹಿಂದಿಯ ಅಗತ್ಯವಿಲ್ಲ.
ನಿಜ ಏನೆಂದರೆ, ಹಿಂದಿಯಂತಹ ಯಾವುದೇ ಒಂದು ಭಾಷೆಯನ್ನು ಯಾರ ಮೇಲಾದರೂ ಹೇರುವುದೇ ಒಗ್ಗಟ್ಟನ್ನು ಹಾಳು ಮಾಡುವ ಅಂಶವಾಗಿಬಿಡುತ್ತದೆ. ಒಗ್ಗಟ್ಟಿನ ನೆಪ ಮಾಡಿ ಹಿಂದಿ ಹೇರಿಕೆಗೆ ಮುಂದಾದರೆ ಉಂಟಾಗುವುದು ಒಗ್ಗಟ್ಟಲ್ಲ, ಒಡಕು.
ಮತ್ತೂ ಒಂದು ವಿಚಾರವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹೇಳಿಕೊಂಡೇ ಬರಲಾಗಿದೆ. ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬುದು ಆ ವಾದ. ಆದರೆ ಅದು ದೊಡ್ಡ ಸುಳ್ಳು. ಭಾರತಕ್ಕೆ ರಾಷ್ಟ್ರಭಾಷೆ ಎಂಬುದೇ ಇಲ್ಲ.
ಭಾರತ 22 ಅಧಿಕೃತ ಭಾಷೆಗಳನ್ನು ಹೊಂದಿದೆ. ಅದರಲ್ಲಿ ನಮ್ಮ ಕನ್ನಡ ಹೇಗಿದೆಯೊ ಹಾಗೆಯೇ ಹಿಂದಿಯೂ ಇದೆಯೇ ಹೊರತು, ಅದಕ್ಕೆ ರಾಷ್ಟ್ರಭಾಷೆ ಎಂಬ ಇನ್ನೇನೋ ವಿಶೇಷ ಸ್ಥಾನಮಾನ ಇಲ್ಲ.
ಹಿಂದಿ ಸಂಪರ್ಕ ಭಾಷೆಯಾಗಿ ಬೇಕು ಎಂಬುದು ಹಿಂದಿಗೆ ಆದ್ಯತೆ ನೀಡುವವರ ವಾದವಿರಬಹುದು. ಹೀಗಾಗಿ ಹಿಂದಿ ಮಾತನಾಡುವವರು ಇದನ್ನೊಂದು ಸವಲತ್ತಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಗೆ ಕಾಣಿಸುತ್ತಿದೆ.
ಆದರೆ ಸಂಪರ್ಕ ಭಾಷೆಯಾಗಿ ಹಿಂದಿಗಿಂತಲೂ ಇಂಗ್ಲಿಷ್ ಹೆಚ್ಚು ಒಳ್ಳೆಯದು. ಯಾಕೆಂದರೆ, ಅದು ಪ್ರಾದೇಶಿಕ ಒಡಕಿಗೆ ಕಾರಣವಾಗದೆ ವ್ಯಾವಹಾರಿಕವಾಗಿ ನೆರವಿಗೆ ಬರಬಲ್ಲ ಭಾಷೆ.
ಸಂಪರ್ಕ ಭಾಷೆಯಾಗಿ ಹಿಂದಿಯ ಜೊತೆಗೆ 1965ರ ತನಕ ಇಂಗ್ಲಿಷ್ ಕೂಡ ಇರುತ್ತದೆ ಎಂಬುದನ್ನು ನೆಹರೂ ಕೂಡ ಹೇಳಿದ್ದರು. ಅದಾದ ಬಳಿಕ ಹಿಂದಿಯೊಂದೇ ಪ್ರಬಲವಾಗಿಬಿಡಬಹುದು ಎಂಬ ಆತಂಕದಿಂದ ತಮಿಳುನಾಡು ಹೋರಾಟ ಶುರು ಮಾಡಿದಾಗ, ಜನರಿಗೆ ಅಗತ್ಯವಿರುವವರೆಗೆ ಇಂಗ್ಲಿಷ್ ಇದ್ದೇ ಇರುತ್ತದೆ ಎಂದು ಆಗ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭರವಸೆ ನೀಡಿದ್ದರ ಬಗ್ಗೆ ಉಲ್ಲೇಖಗಳಿವೆ.
ಆದರೆ ಬಿಜೆಪಿ ಸರಕಾರ ಈಗ ಇಂಗ್ಲಿಷ್ ಅನ್ನು ಆಪ್ಷನಲ್ ಮಾಡಹೊರಟಿದ್ದು, ಆ ಮೂಲಕ ಹಿಂದಿಯನ್ನೇ ಹೇರುವ ವ್ಯವಸ್ಥಿತ ಯತ್ನ ನಡೆಸುತ್ತಿದೆ ಎಂಬುದು ರಹಸ್ಯವಾಗಿಲ್ಲ.
ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರೋದು ಯಾಕೆ?
ಸಂಸ್ಕೃತಿ ಮತ್ತು ರಾಜಕೀಯ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ವಿಚಾರ ಬಂದಾಗ, ಅದನ್ನು ಅತಿಕ್ರಮಿಸುವಂತೆ ಕಾಣುವ ಹಿಂದಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತ ಬಂದಿದೆ.
ಕರ್ನಾಟಕದಂಥ ಪರಿಸರದಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ, ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಗೆ ಪೆಟ್ಟು ಕೊಡುವ ಅಂಶವಾಗಿ ಕಾಣಿಸುವುದು ಸಹಜ. ಮತ್ತದಕ್ಕೆ ವಿರೋಧ ವ್ಯಕ್ತವಾಗುತ್ತದೆ.
ಆದರೆ ಭಾವನಾತ್ಮಕ ವಿಚಾರದ ಆಚೆಗೆ, ವ್ಯಾವಹಾರಿಕವಾಗಿ ಹಿಂದಿ ಹೇರಿಕೆಗೆ ವಿರೋಧ ತೀವ್ರವಾಗಿರುವುದು ಅದು ಕನ್ನಡಿಗರ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಕಸಿಯುತ್ತದೆ ಎಂಬ ಕಾರಣಕ್ಕೆ.
ಶಾಲೆಗಳಿಂದ ಹಿಡಿದು, ಉದ್ಯೋಗ ಸಂಬಂಧಿತ ಪರೀಕ್ಷೆಗಳ ವರೆಗೆ ಹಿಂದಿ ಕಡ್ಡಾಯ ನೀತಿ ಹಿಂದಿ ಬಾರದ, ಕನ್ನಡ ಮಾತ್ರ ಮಾತಾಡುವವರ ಪಾಲಿಗೆ ದೊಡ್ಡ ಶತ್ರುವಾಗಿಬಿಟ್ಟಿದೆ. ಅದರಿಂದಾಗಿ ಕನ್ನಡಿಗರು ಸಾಕಷ್ಟು ಅವಕಾಶಗಳಿಂದ ವಂಚಿತರಾಗುವ ಹಾಗಾಗಿದೆ.
ಕೇಂದ್ರ ಸರಕಾರ ನೇರವಾಗಿ ಹಿಂದಿಯನ್ನು ಹೇರಿಕೆ ಮಾಡುವುದಕ್ಕೆ ನಿಂತುಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ.
ಈಗಾಗಲೇ ಪ್ರಾದೇಶಿಕ ಅಸ್ಮಿತೆಗಳನ್ನು ಹಾಳು ಮಾಡುವ ಅಜೆಂಡಾಗಳನ್ನು ಪರೋಕ್ಷವಾಗಿ ತನ್ನ ನಡೆ ಮತ್ತು ನಡಾವಳಿಗಳಲ್ಲಿ ತೋರಿಸುತ್ತ ಬಂದಿರುವ ಕೇಂದ್ರ ಸರಕಾರ, ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸಲು, ಒತ್ತೊತ್ತಿ ಹೇಳಲು ನೋಡುತ್ತಿದೆ.
‘‘ಹಿಂದಿಯನ್ನು ಇಡೀ ದೇಶದ ಭಾಷೆಯಾಗಿ ಸ್ವೀಕರಿಸುವ ಅಗತ್ಯವಿದೆ’’ ಎಂದು ಅಮಿತ್ ಶಾ ಥರದವರು ಹೇಳುವಾಗ, ‘ಒಂದು ದೇಶ ಒಂದು ಭಾಷೆ’ ಎನ್ನುವಾಗ, ಅದರ ಹಿಂದಿರುವುದು ಪ್ರಾದೇಶಿಕತೆಯನ್ನು ಅಡಗಿಸಿಬಿಡುವ ರಾಜಕೀಯದಂತೆ ಕಾಣಿಸುತ್ತದೆ.
ಇಲ್ಲಿ ಕೇಂದ್ರ ಸರಕಾರದ ತಾರತಮ್ಯ ನೀತಿ ಸ್ಪಷ್ಟವಾಗಿದೆ ಮತ್ತು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವಂತೆ ಮಾಡಿಬಿಡಬಹುದಾದ ಹುನ್ನಾರವೂ ಇದೆ.
2014ರಲ್ಲಿ ಐಬಿಪಿಎಸ್ ಬ್ಯಾಂಕ್ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸುವುದನ್ನು ಶುರು ಮಾಡಿತು.
2019ರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರವೇ ಪ್ರಿಲಿಮಿನರಿ ಪರೀಕ್ಷೆಗಳನ್ನು ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸಿತು.
ಯುಪಿಎಸ್‌ಸಿಯಂಥ ಪರೀಕ್ಷೆಗಳಿಗೆ ಕೂಡ ಹಿಂದಿ ಮತ್ತು ಇಂಗ್ಲಿಷ್ ಮಾತ್ರವೇ ಕಡ್ಡಾಯವಾದಾಗ ಕರ್ನಾಟಕದಂಥ ರಾಜ್ಯಗಳ ಆಕಾಂಕ್ಷಿಗಳ ತೀವ್ರ ಹತಾಶೆಗೆ ಅದು ಕಾರಣವಾಯಿತು.
ರಾಜಕೀಯ ನಾಯಕರೂ ಇದನ್ನು ವಿರೋಧಿಸಿ ಮಾತನಾಡಿದರು.
ಹಿಂದಿ ಎಂಬ ಕಾರಣಕ್ಕಾಗಿಯೇ ಬ್ಯಾಂಕಿಂಗ್ ನೌಕರಿಗಳಿಗೆ ಅರ್ಜಿ ಹಾಕುವುದಕ್ಕೇ ಕನ್ನಡಿಗರು ಹಿಂಜರಿಯುವಂತಾಗಿದೆ. ಶೇ.10ರಷ್ಟು ಮಂದಿ ಮಾತ್ರವೇ ಆ ಧೈರ್ಯ ಮಾಡುತ್ತಾರೆ ಮತ್ತು ಬ್ಯಾಂಕಿಂಗ್ ವಲಯದ ಶೇ.90ರಷ್ಟು ಉದ್ಯೋಗಗಳು ಕನ್ನಡಿಗರ ಪಾಲಿಗೆ ಸಂಪೂರ್ಣವಾಗಿ ಇಲ್ಲವಾಗುತ್ತಿವೆ ಎಂಬ ವಾದವಿದೆ. ಉದ್ಯೋಗಗಳ ವಿಚಾರವೊಂದೇ ಅಲ್ಲ. ಹಿಂದಿ ಅತಿಕ್ರಮಣದಿಂದ ಕನ್ನಡ ಮಾತ್ರ ಮಾತಾಡುವ ಗ್ರಾಹಕರು ಕೂಡ ಅನನುಕೂಲತೆ ಮತ್ತು ಅವಮಾನ ಎದುರಿಸುವ ಸ್ಥಿತಿ ತಲೆದೋರಿದೆ.
ಬ್ಯಾಂಕ್ ಉದ್ಯೋಗಿಗಳು ಹಿಂದಿಯಲ್ಲಿ ಮಾತಾಡುತ್ತಿದ್ದರೆ ಕನ್ನಡ ಮಾತ್ರ ಮಾತಾಡುವ ಗ್ರಾಹಕರು ಬ್ಯಾಂಕಿಂಗ್ ಸೇವೆ ಸಂಬಂಧ ತಮಗೆ ಅಗತ್ಯವಿರುವ ಮಾಹಿತಿಯನ್ನು ತಿಳಿಯಲು ಆಗದೆ ಒದ್ದಾಡುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಂತೂ ಜನರು ಮಾತೃಭಾಷೆ ಬಿಟ್ಟು ಮತ್ತೊಂದು ಭಾಷೆ ತಿಳಿದಿರುವುದಿಲ್ಲ. ಕರ್ನಾಟಕದ ಹಲವು ಗ್ರಾಮೀಣ ಪ್ರದೇಶಗಳ ಜನರಿಗೆ ಕನ್ನಡ ಬಿಟ್ಟು ಬೇರೊಂದು ಭಾಷೆ ಗೊತ್ತಿರುವುದಿಲ್ಲ. ಹೀಗಿರುವಾಗ, ಹಿಂದಿ ಬಾರದ ಗ್ರಾಹಕರನ್ನು ಬ್ಯಾಂಕ್ ಉದ್ಯೋಗಿಗಳು ಕಡೆಗಣಿಸುವುದು ಹಿಂದಿ ಹೇರಿಕೆಯ ಸ್ಪಷ್ಟ ಉದಾಹರಣೆ ಮತ್ತದು ಆಕ್ರೋಶಕ್ಕೆ ಎಡೆ ಮಾಡಿಕೊಡುತ್ತದೆ. ಮತ್ತೆ ಮತ್ತೆ ಇಂಥ ಘಟನೆಗಳು ನಡೆಯುವುದನ್ನು ಕಂಡಿದ್ದೇವೆ. ಬ್ಯಾಂಕ್ ಉದ್ಯೋಗಿಗಳ ಇಂಥ ದುರಹಂಕಾರಿ ನಡೆಗೆ ಕೇಂದ್ರ ಸರಕಾರದ ನೀತಿಯೇ ಕಾರಣ.
ಬಹಳಷ್ಟು ಬ್ಯಾಂಕ್‌ಗಳ ಖಾತೆ ತೆರೆಯುವ ಅರ್ಜಿ ನಮೂನೆಗಳು, ಚಲನ್‌ಗಳೆಲ್ಲ ಒಂದೋ ಹಿಂದಿ, ಇಲ್ಲವೇ ಇಂಗ್ಲಿಷ್‌ನಲ್ಲಿ ಮಾತ್ರ ಇರುತ್ತವೆ.
ಬ್ಯಾಂಕ್‌ಗಳಲ್ಲಿ ಮಾತ್ರವಲ್ಲದೆ, ಪೋಸ್ಟ್ ಆಫೀಸ್ ಮತ್ತು ಎಲ್‌ಐಸಿ ಕಚೇರಿಗಳಲ್ಲಿ ಕೂಡ ಸರಕಾರಿ ಯೋಜನೆಗಳ ವಿಚಾರವಾಗಿ ವ್ಯವಹರಿಸಲು ಹಿಂದಿ ಗೊತ್ತಿರಲೇಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಣ್ಣ ಉದ್ಯಮಗಳಿಗೆ ನೆರವಾಗುವ ಮುದ್ರಾ ಯೋಜನೆ ಸಾಲದ ಅರ್ಜಿ ಇರುವುದು ಇಂಗ್ಲಿಷ್ ಅಥವಾ ಹಿಂದಿಯಲ್ಲಿ. ಸರಕಾರದ ಏಕಲವ್ಯ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಹಿಂದಿ ಕಡ್ಡಾಯ ಮಾಡಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿನ ಏಕಲವ್ಯ ಶಾಲೆಗಳಲ್ಲಿ ನೇಮಕಗೊಳ್ಳಬೇಕಿದ್ದರೂ ಶಿಕ್ಷಕರಿಗೆ ಹಿಂದಿ ಕಡ್ಡಾಯವಾಗಿದೆ.
ಇನ್ನೊಂದೆಡೆ ಕೇಂದ್ರ ಸರಕಾರ ಪ್ರತೀ ವರ್ಷ ಸೆಪ್ಟಂಬರ್ 14ನ್ನು ‘ಹಿಂದಿ ದಿವಸ್’ ಎಂದು ಆಚರಿಸುವ ಕೆಲಸವನ್ನೂ ಮಾಡುತ್ತಿದೆ.ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಟ್ಟಿರುವ ಬ್ಯಾಂಕ್‌ಗಳು, ರೈಲ್ವೆ, ಅಂಚೆ ಸೇವೆಗಳು, ಐಟಿ ಇಲಾಖೆಗಳು, ಸೆಂಟ್ರಲ್ ಯೂನಿವರ್ಸಿಟಿಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಹಿಂದಿ ದಿವಸ್ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಹಿಂದಿ ಬಾರದ ಸಿಬ್ಬಂದಿಗೆ ಹಿಂದಿಯಲ್ಲೇ ಹಲವಾರು ಸ್ಪರ್ಧೆಗಳನ್ನು ಆಯೋಜಿಸಿದ್ದು ಇದಕ್ಕೊಂದು ಉದಾಹರಣೆ.
ಹೇಗೆ ಕೇಂದ್ರ ಸರಕಾರ ಹಿಂದಿಯನ್ನು ಹೇರಲು ನಿಂತಿದೆ ಎಂಬುದಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಅದು ಸದ್ದಿಲ್ಲದೆ ತರುತ್ತಿರುವ ನೀತಿಗಳನ್ನು ಗಮನಿಸಬೇಕು.
ತಾಂತ್ರಿಕ ಅಥವಾ ತಾಂತ್ರಿಕೇತರ ಬೋಧನೆಯಲ್ಲಿ ಹಿಂದಿಯನ್ನೇ ಮುಖ್ಯ ಮಾಧ್ಯಮವನ್ನಾಗಿ ಅದು ಶಿಫಾರಸು ಮಾಡುತ್ತಿದೆ. ಹಿಂದಿ ಯನ್ನು ಕಡ್ಡಾಯ ಮಾಡುವುದು, ಇಂಗ್ಲಿಷ್ ಅನ್ನು ಐಚ್ಛಿಕ ಮಾಡುವುದು ನಡೆಯುತ್ತಿದೆ. ಏಮ್ಸ್, ಐಐಟಿ, ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯಲ್ಲೇ ಕಲಿಸುವುದನ್ನು ಕಡ್ಡಾಯ ಮಾಡಿ, ಇಂಗ್ಲಿಷ್ ಅನ್ನು ಐಚ್ಛಿಕ ಎಂದು ಮಾಡಿದರೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಇದು ನೇರವಾಗಿ ಭಾಷಾ ವೈವಿಧ್ಯಕ್ಕೆ ದೊಡ್ಡ ಅಪಾಯವಾಗಿ ಎದುರಾಗಲಿದೆ ಮತ್ತು ಹಿಂದಿ ಮಾತಾಡದವರ ಶೈಕ್ಷಣಿಕ ಹಕ್ಕುಗಳನ್ನೇ ಕಸಿಯಲಿದೆ.
ಮೊನ್ನೆ ಬದಲಿಸಲಾದ ಕ್ರಿಮಿನಲ್ ಕಾನೂನುಗಳ ಹೆಸರು ಕೂಡ ಹಿಂದಿಯಲ್ಲೇ ಇರುವುದನ್ನು ಗಮನಿಸಬಹುದು. ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರುಗಳ ಮೂಲಕ ಕೇಂದ್ರ ಸರಕಾರ ಹೇಗೆ ಪ್ರಾದೇಶಿಕತೆಯಿಂದ ಆಗಲೇ ಬಹಳಷ್ಟು ದೂರ ಹೋಗಿಬಿಟ್ಟಿದೆ ಎಂಬುದನ್ನು ಗ್ರಹಿಸಬಹುದಾಗಿದೆ.
ಇದಿಷ್ಟೇ ಅಲ್ಲ. ಇಂಥದ್ದನ್ನು ಬಹಳ ಹಿಂದೆಯೇ ಬಿಜೆಪಿ ಸರಕಾರ ಆರಂಭಿಸಿತು. ಸರಕಾರದ ಯೋಜನೆಗಳ ಹೆಸರು ಗಮನಿಸಿದರೆ ಇದು ಸ್ಪಷ್ಟವಾಗಿಬಿಡುತ್ತದೆ. ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನಾ, ಜನಧನ್ ಯೋಜನಾ ಹೀಗೆ ಹೆಸರುಗಳನ್ನು ಗಮನಿಸಬಹುದು.
ಹಿಂದಿ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ ನೂರಾರು ಕೋಟಿ ಸುರಿಯುತ್ತಿದೆ ಎಂದು ಹೇಳಲಾಗುತ್ತದೆ. ಮೆಟ್ರೊಗಳಲ್ಲಿ, ವಿಮಾನಗಳಲ್ಲಿ ಸುರಕ್ಷಾ ಸೂಚನೆಗಳನ್ನು ಕೂಡ ಹಿಂದಿಯಲ್ಲೇ ಕೊಡುವ ಮಟ್ಟಿಗೆ ಎಲ್ಲೆಲ್ಲೂ ಹಿಂದಿಯೇ ಅತಿಕ್ರಮಿಸಿಕೊಳ್ಳುತ್ತಿದೆ.
ಬೆಂಗಳೂರು-ಚೆನ್ನೈ ವಿಮಾನದಲ್ಲೂ ಹಿಂದಿ ಅನೌನ್ಸ್‌ಮೆಂಟ್ ಇದ್ದರೆ ಅದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?
ಈ ರೀತಿಯಾಗಿ ಹಿಂದಿಯನ್ನು ಯಾವ್ಯಾವುದೋ ನೆಪಗಳನ್ನೊಡ್ಡಿ ಕಡ್ಡಾಯಗೊಳಿಸುತ್ತಿರುವುದರಿಂದ ಹಿನ್ನಡೆ ಕಾಣುತ್ತಿರುವುದು ದಕ್ಷಿಣ ಭಾರತ ಭಾಷೆಗಳು ಮಾತ್ರವಲ್ಲ, ಉತ್ತರಭಾರತದ ಹಿಂದಿಯೇತರ ಭಾಷೆಗಳ ಅಸ್ಮಿತೆಗೂ ಧಕ್ಕೆಯಾಗುತ್ತಿದೆ. ಕಳೆದ ನಾಲ್ಕೈದು ದಶಕಗಳಲ್ಲಿ ಹಿಂದಿ ಮಾತಾಡುವವರ ಪ್ರಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಅಂದರೆ ಎಲ್ಲೆಲ್ಲೂ ಹಿಂದಿ ಆವರಿಸಿಕೊಳ್ಳುತ್ತಿದೆ. ಅದೇ ವೇಳೆ ಇತರ ಭಾಷೆಗಳ ಅಭಿವೃದ್ಧಿ ಪ್ರಮಾಣ ತೀರಾ ನಗಣ್ಯ ಎನ್ನುವಂತಿದೆ.
ಉತ್ತರ ಭಾರತದಲ್ಲಿ ತ್ರಿಭಾಷಾ ಸೂತ್ರದಡಿ ದಕ್ಷಿಣ ಭಾರತದ ಭಾಷೆಗಳನ್ನೇನೂ ಕಲಿಸಲಾಗುತ್ತಿಲ್ಲ. ಕರ್ನಾಟಕ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದೆ. ಆದರೆ ಸಾಧಿಸಿದ್ದೇನು? ತ್ರಿಭಾಷಾ ಸೂತ್ರ ಒಪ್ಪಿಕೊಳ್ಳದ ತಮಿಳುನಾಡಿಗೆ ನಷ್ಟವೇನಾದರೂ ಆಗಿದೆಯೆ?
2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದಿ ಬಳಕೆಗೆ ಒತ್ತು ಕೊಡುವುದು ಅತಿಯಾಗಿದೆ.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾದ ಎಲ್ಲ 22 ಭಾಷೆಗಳೂ ಸಮಾನ ಎಂದು ಅಂಬೇಡ್ಕರ್ ಅವರೇ ಸ್ಪಷ್ಟವಾಗಿ ಹೇಳಿದ್ದರೂ, ಹಿಂದಿಯನ್ನು ಅವೆಲ್ಲಕ್ಕಿಂತ ಹೆಚ್ಚಿನದೆಂಬಂತೆ ಮುನ್ನೆಲೆಗೆ ತರಲಾಗುತ್ತಿರುವ ರಾಜಕೀಯ ಅಪಾಯಕಾರಿ ಎಂಬುದರಲ್ಲಿ ಅನುಮಾನವಿಲ್ಲ.
ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದಿ ವಿರೋಧಿ ಹೋರಾಟಗಳನ್ನು ಅಥವಾ ಪ್ರಾದೇಶಿಕ ಅಸ್ಮಿತೆ ಪರ ಕಾಳಜಿಗಳನ್ನು ದೇಶವಿರೋಧಿ ಎಂದು ಹೇಳುವ ಮಟ್ಟಕ್ಕೆ ವ್ಯವಸ್ಥಿತವಾಗಿ ಹಿಂದಿ ಪರವಾದ ರಾಜಕೀಯವೊಂದು ನಡೆದಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಕರ್ನಾಟಕದ್ದೇ ಅಧಿಕೃತ ಧ್ವಜವನ್ನು ತರಲು ಮುಂದಾದಾಗಲಂತೂ ಅದರ ವಿರುದ್ಧ ಅತಿ ಪ್ರಚೋದನಕಾರಿ ಮಾತುಗಳು ಕೇಳಿಬಂದವು.
ಕರ್ನಾಟಕದ ಬೆಂಗಳೂರಿನಂಥ ಸ್ಥಳದಲ್ಲಿ ಉದ್ಯೋಗ ಇತ್ಯಾದಿಗಳ ಕಾರಣದಿಂದ ಬೇರೆಡೆಯಿಂದ ಬಂದು ನೆಲೆಸುವುದರ ಪರಿಣಾಮ ನಿಧಾನವಾಗಿ ಇಲ್ಲಿನ ಸಂಸ್ಕೃತಿಯೇ ಅಳಿದುಹೋಗುತ್ತಿದೆ. ಸದ್ದಿಲ್ಲದೆ ಪ್ರಾದೇಶಿಕ ಅಸ್ಮಿತೆ ಇಲ್ಲವಾಗಿಬಿಡುವ ಅಪಾಯ ಇದಾಗಿದೆ.