ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣಗಳೇನು? ಪರಿಹಾರವೇನು?

ಪ್ರಥಮ್ ಎಜುಕೇಶನ್ ಫೌಂಡೇಶನ್ ಎಂಬ ಸರಕಾರೇತರ ಸಂಸ್ಥೆಯೊಂದು ವರದಿಯನ್ನು ಸಿದ್ಧಪಡಿಸಿ, ಸರಕಾರಿ ಶಾಲೆಗಳ ಗುಣಮಟ್ಟ ಕುಸಿಯುತ್ತಿದೆ ಎಂಬ ಅಂಶವನ್ನು ಹೊರಹಾಕಿದೆ. ಅದರ ವರದಿಯ ಪ್ರಕಾರ ರಾಜ್ಯದ ಸರಕಾರಿ ಶಾಲೆಗಳ 5ನೇ ತರಗತಿಯ ಶೇಕಡಾ 80ರಷ್ಟು ವಿದ್ಯಾರ್ಥಿಗಳಿಗೆ ಭಾಗಾಕಾರವೇ ಬರುತ್ತಿಲ್ಲ. ಹಾಗೆಯೇ 8ನೇ ತರಗತಿಯ ಶೇಕಡಾ 64ರಷ್ಟು ವಿದ್ಯಾರ್ಥಿಗಳಿಗೆ ಭಾಗಾಕಾರ ಮಾಡಲಾಗುತ್ತಿಲ್ಲ. 5ನೇ ತರಗತಿಯ ಶೇಕಡಾ 68ರಷ್ಟು ಮಕ್ಕಳು 2ನೇ ತರಗತಿಯ ಪಠ್ಯವನ್ನು ಓದಬಲ್ಲರು.
ಇದೇ ಸಂಸ್ಥೆಯು ತನ್ನ ವರದಿಯ ಮುಂದುವರಿದ ಭಾಗವಾಗಿ ಖಾಸಗಿ ಶಾಲೆಯ ಮಕ್ಕಳು ಸರಕಾರಿ ಶಾಲೆಗಳ ಮಕ್ಕಳಿಗಿಂತ ಶೈಕ್ಷಣಿಕವಾಗಿ ಮುಂದಿದ್ದಾರೆ ಎನ್ನುತ್ತದೆ. ಹಿಂದಿನ ಕಾಲದ ಸರಕಾರಿ ಶಾಲೆಗಳಲ್ಲಿ ಓದಿದ ಹಲವರು ಉನ್ನತ ಹುದ್ದೆಯನ್ನು ತಲುಪಿದ್ದಾರೆ. ಆದರೆ ಈಗೇಕೆ ಸರಕಾರಿ ಶಾಲೆಗಳ ಗುಣಮಟ್ಟ ಕುಸಿದಿದೆ? ಎಂದು ವರದಿ ಪ್ರಶ್ನಿಸಿದೆ. ಹಾಗೆಯೇ ಸರಕಾರ ಇಂದು ಸರಕಾರಿ ಶಾಲೆಗಳಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆಯೂ ವರದಿ ಮಾಡಿದೆ. ಈ ಎಲ್ಲಾ ಅಂಶಗಳೂ ಸತ್ಯವೇ ಹಾಗೂ ಸಂಬಂಧಪಟ್ಟ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರಗಳೇ.
ಈ ವರದಿಯ ಹಲವು ವಿಚಾರಗಳನ್ನು ಒಮ್ಮೆ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾ ಹೋದರೆ ಒಂದಿಷ್ಟು ವಿಚಾರಗಳು ಮನದಟ್ಟಾಗುತ್ತವೆ.
ಇದರಲ್ಲಿ ಮೊದಲನೆಯದಾಗಿ ಖಾಸಗಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸರಕಾರಿ ಶಾಲೆಗಳಿಗಿಂತ ಉತ್ತಮವಾಗಿದೆ ಎಂಬುದರಿಂದಲೇ ಪ್ರಾರಂಭಿಸೋಣ. ಸಾಧಾರಣವಾಗಿ ಆರ್ಥಿಕವಾಗಿ ಸಬಲರಾದ, ಮಧ್ಯಮ ವರ್ಗದವರ ಮತ್ತು ಹೆಚ್ಚಿನ ವಿದ್ಯಾವಂತರ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರುತ್ತಾರೆ. ಇಂತಹ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ತಮ್ಮ ಮಕ್ಕಳು ಶಾಲೆಯಲ್ಲಿ ಕಲಿಯುವುದರ ಜೊತೆಗೆ ಇನ್ನೂ ಹೆಚ್ಚಿನ ಕಲಿಕೆಗಾಗಿ ಟ್ಯೂಷನ್‌ಗೆ ಕಳುಹಿಸುವ, ಮನೆಯಲ್ಲಿ ಸ್ವತಃ ತಾವೇ ಮಕ್ಕಳ ಹೋಂವರ್ಕ್ ಇತ್ಯಾದಿ ಮಾಡಿಸುವ ಜವಾಬ್ದಾರಿ ಹೊರುತ್ತಾರೆ. ಪೋಷಕರೂ ಖಾಸಗಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಲು ಕಾರಣವಾಗುತ್ತಾರೆ. ಅಲ್ಲದೆ ಹೆಚ್ಚಿನ ಖಾಸಗಿ ಶಾಲೆಗಳು ತಮ್ಮ ಶಾಲೆಗೆ ದಾಖಲಾತಿಗೂ ಮುನ್ನ ವಿದ್ಯಾರ್ಥಿಗಳ ಕನಿಷ್ಠ ಕಲಿಕಾ ಮಟ್ಟವನ್ನು ಪರೀಕ್ಷಿಸಿ, ಉತ್ತೀರ್ಣರಾದರೆ ಮಾತ್ರ ದಾಖಲಾತಿ ಮಾಡಿಕೊಳ್ಳುತ್ತಾರೆ. ಹಾಗಾಗಿ ಆಯಾ ಖಾಸಗಿ ಶಾಲೆಗಳ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟ ಇರುತ್ತದೆ.
ಎರಡನೆಯದಾಗಿ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಕಾರಣಗಳು ಹಲವು. ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸುವ ಅನೇಕ ಪೋಷಕರು ತೀರಾ ಬಡವರು ಮತ್ತು ಅವಿದ್ಯಾವಂತರು. ಶಾಲಾವಧಿ ಮುಗಿದ ಕೂಡಲೇ ತಮ್ಮ ಮಕ್ಕಳು ತಮ್ಮ ಕೆಲಸಕ್ಕೆ ಸಹಾಯವಾಗಲಿ ಎಂದು ಬಯಸುವವರೇ ಅಧಿಕ. ಅನೇಕರು ಶಾಲಾವಧಿಯಲ್ಲೂ ತಮ್ಮ ಮನೆಯ ಕೆಲಸಕ್ಕೆ ತಮ್ಮ ಮಕ್ಕಳನ್ನು ಬಳಸಿಕೊಳ್ಳುವವರೂ ಇದ್ದಾರೆ. ಹೀಗಿದ್ದಾಗ ಸರಕಾರಿ ಶಾಲೆಯಲ್ಲಿ ಓದುವ ಹೆಚ್ಚುಪಾಲು ಮಕ್ಕಳು ಕೇವಲ ಶಾಲೆಯಲ್ಲಿ ಕಲಿತದ್ದು ಮಾತ್ರ ಕಲಿಕೆ. ಮನೆಗೆ ತೆರಳಿದ ಮೇಲೆ ಅವರ ಕಲಿಕೆಗೆ ಯಾವುದೇ ರೀತಿಯ ಸಹಕಾರವೂ ದೊರೆಯುವುದಿಲ್ಲ. ಹೆಚ್ಚಿನ ಹಣ ತೆತ್ತು ಟ್ಯೂಷನ್‌ಗೆ ಕಳುಹಿಸುವವರೂ ವಿರಳ.
ಸರಕಾರಿ ಶಾಲೆಗೆ ದಾಖಲಾತಿ ಕೇಳಿಕೊಂಡು ಬರುವ ಯಾವ ಮಗುವನ್ನೂ ತಿರಸ್ಕರಿಸುವಂತಿಲ್ಲ. ಖಾಸಗಿ ಶಾಲೆಗಳಂತೆ ಮಕ್ಕಳ ಕಲಿಕಾ ಮಟ್ಟ ಪರೀಕ್ಷಿಸಿ, ಉತ್ತೀರ್ಣರಾದರೆ ಮಾತ್ರ ದಾಖಲಾತಿ ಮಾಡಿಕೊಳ್ಳುವ ಹಾಗಿಲ್ಲ. ಆ ಮಗು ಕಲಿಕೆಯಲ್ಲಿ ಅದೆಷ್ಟು ಹಿಂದಿದ್ದರೂ ಸರಕಾರಿ ಶಾಲೆಗೆ ಸೇರಿಸಿಕೊಳ್ಳಲೇಬೇಕು. ಆ ಮೂಲಕ ಮಗುವಿನ ಶೈಕ್ಷಣಿಕ ಹಕ್ಕನ್ನು ಗೌರವಿಸಬೇಕು, ಗೌರವಿಸೋಣ. ಸರಕಾರಿ ಶಾಲೆಗಿರುವ ಈ ನಿಯಮವನ್ನು ಖಾಸಗಿ ಶಾಲೆಗೆ ಹೇರಲಾಗುವುದಿಲ್ಲ. ಅದಕ್ಕೆ ಆ ಖಾಸಗಿ ಶಾಲೆಗಳ ರೀತಿ, ರಿವಾಜು, ಫೀಸು ಇನ್ನಿತರ ಕಾರಣಗಳಿವೆ. ಇದರ ಜೊತೆಗೆ ಅನೇಕ ಖಾಸಗಿ ಶಾಲೆಗಳಲ್ಲಿ ಹೊರಹಾಕಲ್ಪಟ್ಟ ವಿದ್ಯಾರ್ಥಿಗಳೂ ಸರಕಾರಿ ಶಾಲೆಗೆ ಸೇರುತ್ತಾರೆ. ಒಟ್ಟಿನಲ್ಲಿ ಜರಡಿಯಲ್ಲಿ ಸೋಸಿ ಉಳಿದ ಮಕ್ಕಳೇ ಬಹುಪಾಲು ಸರಕಾರಿ ಶಾಲೆಗಳ ಆಸ್ತಿ. ಜೊತೆಗೆ ತಮ್ಮ ಮಕ್ಕಳು ಸ್ವಲ್ಪ ಓದಿನಲ್ಲಿ ಚೆನ್ನಾಗಿದ್ದಾರೆಂದು ತಿಳಿದರೆ ಸಾಕು ಹಲವು ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಹಾಗಾಗಿ ಎಲ್ಲೂ ಸಲ್ಲದೆ ಉಳಿದ ಹಲವು ಮಕ್ಕಳಿಂದ ಸರಕಾರಿ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ವಿಷಯದಲ್ಲಿ ಹರಸಾಹಸಪಡುವಂತಾಗಿದೆ.
ಅಲ್ಲದೆ ಎಷ್ಟೋ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರಿದ್ದು, ಸರಕಾರದ ಅನೇಕ ಯೋಜನೆಗಳನ್ನು ಪಾಲಿಸುತ್ತಲೇ ಒಂದರಿಂದ ಐದನೇ ತರಗತಿಯವರೆಗಿನ ಎಲ್ಲಾ ವಿಷಯಗಳನ್ನು ಒಬ್ಬರೇ ಶಿಕ್ಷಕ ಬೋಧಿಸುವ ಅನಿವಾರ್ಯತೆಯಿದೆ. ಇದರಿಂದ ಎಂತಹ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯ? ಸರಿಯಾದ ಶೌಚಾಲಯ ಹಾಗೂ ಕಾಂಪೌಂಡ್ ವ್ಯವಸ್ಥೆ ಇಲ್ಲದ ಅನೇಕ ಸರಕಾರಿ ಶಾಲೆಗಳಿವೆ. ಇಂತಹ ಶಾಲೆಗಳಿಂದ ಗುಣಮಟ್ಟ ನಿರೀಕ್ಷಿಸುವುದು ಕಷ್ಟವಾಗುತ್ತದೆ.
ಮೂರನೆಯದ್ದು ಹಿಂದೆ ಸರಕಾರಿ ಶಾಲೆಗಳಲ್ಲಿ ಓದಿದವರು ಉನ್ನತ ಹುದ್ದೆಯನ್ನು ಪಡೆದಿದ್ದಾರೆ. ಆದರೆ ಈಗ ಹಾಗಾಗುತ್ತಿಲ್ಲ ಎಂಬುದು. ಇದು ಸಂಪೂರ್ಣ ಸತ್ಯವಲ್ಲದಿದ್ದರೂ ತೆಗೆದುಹಾಕುವ ವಿಷಯವಲ್ಲ. ಆದರೆ ಅದಕ್ಕೆ ಕಾರಣಗಳನ್ನೂ ಒಮ್ಮೆ ವಿಶ್ಲೇಷಿಸುವುದು ಅಗತ್ಯ. ಹಿಂದೆ ದೇಶಾದ್ಯಂತ ಖಾಸಗಿ ಶಾಲೆಗಳ ಪ್ರಮಾಣ ತೀರಾ ವಿರಳವಾಗಿತ್ತು. ಬಹುಪಾಲು ಸರಕಾರಿ ಶಾಲೆಗಳೇ ಇರುತ್ತಿದ್ದವು. ಹಾಗಾಗಿ ತುಂಬಾ ಜಾಣ ವಿದ್ಯಾರ್ಥಿಗಳೂ ಸರಕಾರಿ ಶಾಲೆಯಲ್ಲಿಯೇ ಓದುತ್ತಿದ್ದರು. ಶೈಕ್ಷಣಿಕವಾಗಿ ಚುರುಕಾಗಿರುತ್ತಿದ್ದುದರಿಂದ ಅಂತಹ ವಿದ್ಯಾರ್ಥಿಗಳಿಂದ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟವೂ ಹೆಚ್ಚುತ್ತಿತ್ತು. ಆ ವಿದ್ಯಾರ್ಥಿಗಳು ಅತ್ಯುತ್ತಮ ಹುದ್ದೆಗೂ ಏರುತ್ತಿದ್ದರು. ಜೊತೆಗೆ ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟಿಗೆ ದಂಡಿಸುವ ಅಧಿಕಾರವೂ ಶಿಕ್ಷಕರಿಗಿತ್ತು. ಆದ್ದರಿಂದ ದಂಡನೆಯ ಭಯಕ್ಕಾದರೂ ಒಂದಿಷ್ಟು ಕಷ್ಟಪಟ್ಟು ಓದಿ, ಉನ್ನತ ಹಂತಕ್ಕೇರುತ್ತಿದ್ದರು. ಆದರೆ ಇಂದು ಶಿಕ್ಷಕರು ಅನೇಕ ರೀತಿಯ ಸ್ವಾತಂತ್ರ್ಯವನ್ನು ಕಳೆದುಕೊಂಡು, ಕೇವಲ ಪಾಠ ಬೋಧನೆಗೆ ಸೀಮಿತವಾಗುವಂತಾಗಿದೆ.
ಇಂದು ಎಲ್ಲಿ ನೋಡಿದರೂ ಖಾಸಗಿ ಶಾಲೆಗಳೇ ಆಗಿವೆ. ಮೇ 2024ರ ವರದಿಯಂತೆ ಕರ್ನಾಟಕದಲ್ಲಿ ಒಟ್ಟು 17,125 ಖಾಸಗಿ ಶಾಲೆಗಳಿವೆ. ಪ್ರಸಕ್ತ ಬೆಂಗಳೂರು ದಕ್ಷಿಣದಲ್ಲಿ ಮಾತ್ರ ಇರುವ 3,351 ಶಾಲೆಗಳಲ್ಲಿ ಖಾಸಗಿ ಶಾಲೆಗಳ ಸಂಖ್ಯೆಯೇ 2,064. ಹೀಗಾಗಿ ಆಗಲೇ ತಿಳಿಸಿದಂತೆ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗಳಲ್ಲಿ ದಾಖಲಾಗುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಓದಿ, ಅತ್ಯುತ್ತಮ ಹುದ್ದೆಗೇರುತ್ತಿರುವವರ ಸಂಖ್ಯೆ ಕಡಿಮೆ ಎನಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಸರಕಾರವು ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪಣ ತೊಟ್ಟಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಪ್ರತಿದಿನ ಕ್ಷೀರ ಭಾಗ್ಯ ಯೋಜನೆ, ಮಧ್ಯಾಹ್ನದ ಬಿಸಿಯೂಟ, ಪ್ರತಿದಿನ ಮೊಟ್ಟೆ(ಎರಡು ದಿನ ಸರಕಾರ, ನಾಲ್ಕು ದಿನ ಅಝೀಂ ಪ್ರೇಮ್ ಜಿ ಫೌಂಡೇಶನ್), ಬಾಳೆಹಣ್ಣು, ಚಿಕ್ಕಿ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಸ್ಕಾಲರ್‌ಶಿಪ್, ಎನ್.ಎಂ.ಎಂ.ಎಸ್. ಮತ್ತು ಎನ್.ಟಿ.ಎಸ್.ಸಿ. ಪರೀಕ್ಷೆ ಮುಂತಾದ ಅನೇಕ ಯೋಜನೆಗಳನ್ನು ಸರಕಾರಿ ಶಾಲಾ ಮಕ್ಕಳಿಗಾಗಿ ನೀಡುತ್ತಿದೆ. ನೂರಾರು ಕೋಟಿ ಹಣವನ್ನು ವೆಚ್ಚ ಮಾಡುತ್ತಿದೆ. ಇವೆಲ್ಲವೂ ಸರಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಅದ್ಭುತ ಯೋಜನೆಗಳು ಎಂಬುದರಲ್ಲಿ ಎರಡು ಮಾತಿಲ್ಲ.
ಅದೇನೇ ಇರಲಿ ಸರಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣಗಳು ನೂರಿರಲಿ, ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೊಣೆಗಾರರಾದ ಪ್ರತಿಯೊಬ್ಬರು ಪ್ರಯತ್ನಿಸಲೇಬೇಕಾದ ಅನಿವಾರ್ಯತೆ ಇದೆ. ಸರಕಾರಿ ಶಾಲೆ ಉಳಿಯಬೇಕು ಹಾಗೂ ಬೆಳೆಯಲೇಬೇಕು. ಆ ದಿಕ್ಕಿನಲ್ಲಿ ಸರಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರೂ ತಮ್ಮ ಹುದ್ದೆಗೆ ತಕ್ಕ ಪ್ರಾಮಾಣಿಕ ಪ್ರಯತ್ನವನ್ನು ಮಾಡಲೇಬೇಕು. ಹಾಗೆ ತಮ್ಮ ವೈಯಕ್ತಿಕ ಜೀವನವನ್ನು ಲೆಕ್ಕಿಸದೆ ಸರಕಾರಿ ಶಾಲಾ ಮಕ್ಕಳಿಗಾಗಿ ಪ್ರಯತ್ನ ಮಾಡುತ್ತಿರುವ ಸಾಕಷ್ಟು ಶಿಕ್ಷಕರಿದ್ದಾರೆ ಕೂಡಾ. ಸರಕಾರವೂ ಮೇಲೆ ತಿಳಿಸಿದ ಎಲ್ಲಾ ಸೌಲಭ್ಯಗಳ ಜೊತೆಗೆ ಸರಕಾರಿ ಪ್ರಾಥಮಿಕ ಶಾಲೆಗಳ ಅನೇಕ ಕೊರತೆಗಳನ್ನು ನೀಗಿಸುವ ಕಡೆ ಗಮನಹರಿಸಬೇಕು. ಉದಾಹರಣೆಗೆ, ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಆಧಾರದ ಶಿಕ್ಷಕರ ನೇಮಕಾತಿಯ ಬದಲಾಗಿ ವಿಷಯವಾರು ಅಥವಾ ತರಗತಿವಾರು ಶಿಕ್ಷಕರನ್ನು ನೇಮಿಸಬಹುದು. ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ದಾಖಲಾಗುವಂತಾಗಿ ದಾಖಲಾತಿಯೂ ಹೆಚ್ಚುತ್ತದೆ. ಗುಣಮಟ್ಟವೂ ಹೆಚ್ಚಾಗುತ್ತದೆ. ಕೊನೆಯದಾಗಿ ಪೋಷಕರು ಖಾಸಗಿ ಶಾಲೆಗಳ ಬಗ್ಗೆ ಇರುವ ಅತಿಯಾದ ವ್ಯಾಮೋಹ ತ್ಯಜಿಸಿ, ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದರೆ ಆಗಲೂ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹಾಗೂ ಗುಣಮಟ್ಟ ಎರಡೂ ಹೆಚ್ಚುತ್ತದೆ. ಸರಕಾರಿ ಶಾಲೆಗಳೂ ಉಳಿಯುತ್ತವೆ.