ಈ ಬಜೆಟ್‌ನಲ್ಲಿ ಆಂಧ್ರಪ್ರದೇಶ, ಬಿಹಾರ ಹೊರತು ಉಳಿದ ರಾಜ್ಯಗಳಿಗೆ ಸಿಕ್ಕಿದ್ದೇನು?
ಹೊಸ ಮೋದಿ ಮೈತ್ರಿ ಸರಕಾರದ ಹೊಸ ಬಜೆಟ್ ಮಂಗಳವಾರ ಮಂಡನೆಯಾಗಿದೆ. ಹೇಗೆ ನೋಡಿದರೂ ಈ ಬಜೆಟ್ ಇಡೀ ದೇಶದ ಆಶೋತ್ತರಗಳನ್ನು ಈಡೇರಿಸುವ ಹಾಗೆ ಇದು ಕಾಣಿಸುತ್ತಿಲ್ಲ.
ಬಜೆಟ್ ಸಿದ್ಧಪಡಿಸುವಾಗ ಒಂದು ಕ್ರಮವಿರುತ್ತದೆ. ದೇಶದ ಎಲ್ಲ ರಾಜ್ಯಗಳೂ, ಅಲ್ಲಿನ ಸ್ಥಿತಿಗತಿಯೂ, ಅಲ್ಲಿನ ಮೂಲಭೂತ ಸೌಕರ್ಯಗಳೂ, ಅಲ್ಲಿನ ಅವಶ್ಯಕತೆಗಳೂ ಗಮನದಲ್ಲಿರಬೇಕಾಗುತ್ತದೆ. ಜೊತೆಗೆ ದೇಶದ ಎಲ್ಲ ಕ್ಷೇತ್ರಗಳು, ವರ್ಗಗಳು, ಅವುಗಳ ಅಗತ್ಯ, ಅವುಗಳಲ್ಲಿರುವ ಕೊರತೆ ಇವೆಲ್ಲವನ್ನೂ ಸಮಗ್ರವಾಗಿ ನೋಡಬೇಕಾಗುತ್ತದೆ. ಆದರೆ ಅವೆಲ್ಲವನ್ನೂ ಬದಿಗಿಟ್ಟು, ಸರಕಾರ ತನ್ನ ಜವಾಬ್ದಾರಿಯನ್ನೇ ಮರೆತು ಈ ಬಜೆಟ್ ಅನ್ನು ಒಪ್ಪಿಸಿದೆ.
ಬಡವರನ್ನು ಗಮನಿಸದ, ರೈತರನ್ನು ಮರೆತ, ಆರ್ಥಿಕತೆಯನ್ನು ದೃಢಪಡಿಸುವ ಯಾವ ಭರವಸೆಯೂ ಇಲ್ಲದೆ ಬಜೆಟ್ ಇಬ್ಬರು ನಾಯಕರ ಮುಖದಲ್ಲಿ ಮಾತ್ರವೇ ನಗುವನ್ನರಳಿಸಿದೆ. ಅವರಲ್ಲಿ ಒಬ್ಬರು, ಬಿಹಾರದ ನಿತೀಶ್ ಕುಮಾರ್ ಹಾಗೂ ಇನ್ನೊಬ್ಬರು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು.
ಈ ಎರಡೂ ರಾಜ್ಯಗಳನ್ನು ಸಂತೃಪ್ತಗೊಳಿಸುವ ಯತ್ನ ಮಾಡುತ್ತಲೇ ಕಾರ್ಪೊರೇಟ್ ಹಿತಾಸಕ್ತಿ ಕಾಯುವುದಕ್ಕೂ ಮೋದಿ ಸರಕಾರ ಗಮನ ಕೊಟ್ಟಿದೆ.
ರೈತರಿಗಾಗಿ ಎಂದು ಮೋದಿ ಹೇಳುತ್ತಿರುವುದು ಬರೀ ಮಾತು. ಅಲ್ಲಿ ರೈತರು ಖಂಡಿತ ಇಲ್ಲ, ಬದಲಾಗಿ ಕಾರ್ಪೊರೇಟ್ ಮಂದಿ ಮತ್ತೊಮ್ಮೆ ಗೆದ್ದಿರುವುದು ಕಾಣಿಸುತ್ತಿದೆ.
ರೈತ ನಾಯಕ ರಾಕೇಶ್ ಟಿಕಾಯತ್ ಹೇಳಿರುವ ಹಾಗೆ, ದಿಲ್ಲಿ ಮಂದಿಗೆ ಈ ಬಜೆಟ್ ಸರಿಯೆನ್ನಿಸಿರಬಹುದು. ಆದರೆ ಗ್ರಾಮೀಣ ಭಾರತದ ದೃಷ್ಟಿಯಿಂದ ಸರಿಯಿಲ್ಲ. ಇದರ ಲಾಭ ರೈತರಿಗಿಲ್ಲ. ಅದರೆ ಕಂಪನಿಗಳಿಗೆ ಖಂಡಿತ ಲಾಭವಿದೆ.
೬ ಕೋಟಿ ರೈತರಿಗಾಗಿ ಭೂಮಿ ನೋಂದಣಿ ವಿಚಾರ, ೫ ರಾಜ್ಯಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಹೇಳಿರುವ ಸರಕಾರ, ರೈತರ ನಿಜವಾದ ಸ್ಥಿತಿಯನ್ನು ಅರ್ಥ ಮಾಡಿಕೊಂಡೇ ಇಲ್ಲ. ಬದಲಾಗಿ ಇದು ಕಾರ್ಪೊರೇಟ್ ಪ್ರವೇಶಕ್ಕೆ ಹಾದಿ ತೆರೆದಂತಿದೆ.
ಮೋದಿ ಹೇಳುತ್ತಿರುವ ವಿಕಸಿತ ಭಾರತದಲ್ಲಿ ರೈತರ ಸ್ಥಿತಿ ಏನಾಗಿರುತ್ತದೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ.
ಕೃಷಿ ವಲಯದ ಜನರನ್ನು ನಿಧಾನವಾಗಿ ಕೆಲಸದ ನೆಪದಲ್ಲಿ ಕೈಗಾರಿಕಾ ವಲಯಕ್ಕೆ ಜೋಡಿಸುತ್ತಿರುವ ಈ ಹೊತ್ತಿನಲ್ಲಿ ಮೂಡುವ ಕಳವಳ ಇದು.
ಇದೊಂದು ಕಡೆಯಾದರೆ, ಇಡೀ ದೇಶವನ್ನು ಗಮನದಲ್ಲಿಟ್ಟುಕೊಳ್ಳಬೇಕಿದ್ದ ಬಜೆಟ್ ಎರಡೇ ರಾಜ್ಯಗಳಿಗೆ ಸೀಮಿತ ಎನ್ನುವ ಹಾಗಾದದ್ದು ಮತ್ತೊಂದು ವಿಪರ್ಯಾಸ. ಆ ಎರಡು ರಾಜ್ಯಗಳನ್ನು ಸಂತುಷ್ಟಪಡಿಸದೇ ಹೋದಲ್ಲಿ ಮೋದಿ ಸರಕಾರವೇ ಇರುವುದಿಲ್ಲ. ಹಾಗಾಗಿ ಇದು ಸರಕಾರವನ್ನು ಉಳಿಸಿಕೊಳ್ಳುವ ಬಜೆಟ್ ಆಯಿತೇ ಹೊರತು, ದೇಶದ ಹಿತಾಸಕ್ತಿಯನ್ನು ಕಾಯುವ ಬಜೆಟ್ ಆಗಲು ಹೇಗೆ ಸಾಧ್ಯ?
ಆ ಎರಡೂ ರಾಜ್ಯಗಳು ಏನೆಲ್ಲ ಕೇಳಿವೆಯೋ ಕೊಟ್ಟುಬಿಡಲಾಗಿದೆ.
ಬಿಹಾರಕ್ಕೆ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕ್ರೀಡಾ ಮೂಲಸೌಕರ್ಯಗಳು ಜೊತೆಗೆ ಹೆದ್ದಾರಿಗಳ ನಿರ್ಮಾಣಕ್ಕೆ ೨೬ ಸಾವಿರ ಕೋಟಿ ರೂ.
ಬೋಧ್‌ಗಯಾ-ವೈಶಾಲಿ ಎಕ್ಸ್‌ಪ್ರೆಸ್‌ವೇ, ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸರ್-ಬಾಗಲ್ಪುರ ಎಕ್ಸ್‌ಪ್ರೆಸ್‌ವೇ, ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ೨೬ ಸಾವಿರ ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ಸೇತುವೆ, ಪಿರ್ ಪಯಾಂತಿಯಲ್ಲಿ ೨೧,೪೦೦ ಕೋಟಿ ರೂ. ವೆಚ್ಚದಲ್ಲಿ ೨,೪೦೦ ಮೆಗಾ ವ್ಯಾಟ್ ವಿದ್ಯುತ್ ಯೋಜನೆ ಸೇರಿದಂತೆ ಹಲವು ವಿದ್ಯುತ್ ಯೋಜನೆಗಳು ಇತ್ಯಾದಿ.
ಬಿಹಾರದ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ, ಗಯಾ, ಬೋಧ್ ಗಯಾಗಳಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಮಾದರಿ ಅಭಿವೃದ್ಧಿ, ಪ್ರವಾಸಿ ತಾಣವಾಗಿ ನಳಂದಾ ವಿವಿ ಅಭಿವೃದ್ಧಿ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಸಮಗ್ರ, ತ್ವರಿತ ಅಭಿವೃದ್ಧಿಗಾಗಿ ‘ಪೂರ್ವೋದಯ’ ಯೋಜನೆಗಳು.
ಇನ್ನು ಆಂಧ್ರಕ್ಕೆ
ಹೈದರಾಬಾದ್-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಹಾಗೂ ವಿಶಾಖಪಟ್ಣಂ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಘೋಷಣೆ. ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು ೧೫ ಸಾವಿರ ಕೋಟಿ ರೂ. ಪ್ಯಾಕೇಜ್. ಪೊಲ್ಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸಲು ಹಾಗೂ ಆರ್ಥಿಕ ನೆರವು ಒದಗಿಸಲು ಬದ್ಧವಾಗಿರುವುದಾಗಿ ಘೋಷಣೆ.
ಆ ಎರಡೂ ರಾಜ್ಯಗಳಿಗೆ ಕೊಡಲೇಬೇಕಾದ ಅನಿವಾರ್ಯತೆ ಸರಕಾರಕ್ಕೆ ಇದ್ದರೂ, ಅದಕ್ಕಾಗಿ ಇತರೆಲ್ಲವನ್ನೂ ಹೇಗೆ ಕಡೆಗಣಿಸಲಾಗಿದೆ ಎಂಬುದು ಪ್ರಶ್ನಾರ್ಹ.
ಅದನ್ನೇ ಅಖಿಲೇಶ್ ಯಾದವ್ ಕೂಡ ಕೇಳಿದ್ದಾರೆ.
ರೈತರಿಗಾಗಿ ಏನೂ ಮಾಡದೆ, ನಿರುದ್ಯೋಗ ನಿವಾರಿಸದೆ, ಬೆಲೆಯೇರಿಕೆ ಬಗೆಹರಿಸದೆ ೧೦ ವರ್ಷಗಳನ್ನು ಕಳೆದ ಬಳಿಕವೂ ಈ ಸರಕಾರ ಮತ್ತದೇ ಸ್ಥಿತಿಯನ್ನು ಉಳಿಸಿಬಿಡುವಂತೆ ಕಾಣುತ್ತಿದೆ. ಸರಕಾರವನ್ನು ಉಳಿಸಿಕೊಳ್ಳುವುದು ಮಾತ್ರವೇ ಇದರ ಜರೂರಿನಂತೆ ಕಾಣುತ್ತಿದೆ.
ಉದ್ಯೋಗವಿಲ್ಲದ, ಆದಾಯ ಏರದ ಸ್ಥಿತಿಯಲ್ಲಿ ಸರಕಾರ ತನಗಾಗಿ ಹಾದಿ ನಿರ್ಮಿಸಿಕೊಳ್ಳಲಾರದೆ, ಹಣವುಳ್ಳವರಿಗಾಗಿ ದಾರಿ ನಿರ್ಮಿಸಿದೆ. ಹಣವುಳ್ಳವರೇ ಸರಕಾರದ ನೀತಿಯಿಂದ ಮತ್ತೂ ಹಣ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಿದೆ ಮತ್ತು ಸರಕಾರ ಅವರಿಗಾಗಿಯೇ ನೀತಿ ರೂಪಿಸಿದೆ.
ಆರ್ಥಿಕ ಚಟುವಟಿಕೆಗಳೇ ಇರದ ಸ್ಥಿತಿಯಲ್ಲಿ ಹಣ ಹೇಗೆ ಹರಿದುಬರುತ್ತದೆ? ಬಳಕೆದಾರರೇ ಇಲ್ಲವಾದಾಗ, ಖರೀದಿಸುವವರೇ ಇಲ್ಲವಾಗುವಾಗ ಹೂಡಿಕೆದಾರರು ಹೇಗೆ ಬರುತ್ತಾರೆ?
ಇಲ್ಲಿ ಯಾವುದರ ಬೆಲೆ ಇಳಿಯಿತು ಎಂದು ನೋಡಿಕೊಳ್ಳುವಾಗ ಕಟು ವಾಸ್ತವ ಗೊತ್ತಾಗುತ್ತದೆ.
ಚಿನ್ನ ಬೆಳ್ಳಿಯ ಬೆಲೆ ಇಳಿಯಿತು ಎಂದು ಮಧ್ಯಮ ವರ್ಗದವರು ಮರುಳಾಗುತ್ತಾರೆ. ಮೊಬೈಲ್, ಚಾರ್ಜರ್ ಬೆಲೆ ಇಳಿಯುವುದರ ಬಗ್ಗೆ ಹೇಳಲಾಗಿದೆ. ಬಡವರಿಗೆ ಬೇಕಾಗಿಯೇ ಇರದ ಪ್ಲಾಟಿನಂ ಬೆಲೆ ಇಳಿಯುವುದರ ಬಗ್ಗೆ ಹೇಳಲಾಗಿದೆ.
ಆದರೆ ದಿನನಿತ್ಯವೂ ಬಳಸುವ, ಜೀವನಾವಶ್ಯಕ ವಸ್ತುಗಳಾದ ಅಕ್ಕಿ, ಬೇಳೆ, ತರಕಾರಿ, ಹಣ್ಣು, ಹೂವು, ಬಟ್ಟೆ ಇವಾವುದರ ಬೆಲೆಯೂ ಇಳಿಸುವುದರ ಬಗ್ಗೆ ಒಂದು ಮಾತೂ ಬಂದಿಲ್ಲ.
ಸರಕಾರಕ್ಕೆ ತೆರಿಗೆ ರೂಪದಲ್ಲಿ ಹೋಗುವ ಬಹುಪಾಲು ಹಣ ಈ ದೇಶದ ಜನಸಾಮಾನ್ಯರು, ಬಡವರು ಮತ್ತು ಮಧ್ಯಮ ವರ್ಗದವರದ್ದು. ಆದರೆ ಅವರಿಗೆ ಬೇಕಾದ ಏನೂ ಇಲ್ಲ. ಅವರು ಕಟ್ಟುವ ತೆರಿಗೆಯೂ ತಗ್ಗುವುದಿಲ್ಲ. ಅವರು ಹೆಚ್ಚು ಖರ್ಚು ಮಾಡುವುದು ಕೂಡ ತಪ್ಪುವುದಿಲ್ಲ.
ಇದೆಲ್ಲದರ ಜೊತೆಗೆ ಸರಕಾರ ತನ್ನ ೯ ಆದ್ಯತೆಗಳ ಬಗ್ಗೆ ಹೇಳಿದೆ. ಅದು ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಉತ್ಪಾದನೆ ಮತ್ತು ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಸುಧಾರಣೆ.
ಈ ಒಂಭತ್ತೂ ಆದ್ಯತೆಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಪೊರೇಟ್ ಜೊತೆ ತಳುಕು ಹಾಕಿಕೊಂಡವುಗಳೇ ಆಗಿವೆ.ಆದ್ಯತೆಗಳು ಎಂದು ಹೇಳುತ್ತಲೇ ಸರಕಾರ ಕಾರ್ಪೊರೇಟ್ ವಲಯದ ಅನಿವಾರ್ಯತೆ ತಲೆದೋರುವುದಕ್ಕೆ ಉಪಾಯ ಹುಡುಕಿದೆ.
ಉದ್ಯೋಗ, ಉತ್ಪಾದನೆ, ನಗರಾಭಿವೃದ್ಧಿ, ಇಂಧನ, ಮೂಲಸೌಕರ್ಯ ಹೀಗೆ ಎಲ್ಲವೂ ಕಾರ್ಪೊರೇಟ್ ಜೊತೆಗೆ ಸಂಬಂಧ ಹೊಂದಿವೆ. ಪ್ರತಿ ಕ್ಷೇತ್ರದಲ್ಲೂ ಕಾರ್ಪೊರೇಟ್ ಆಕ್ರಮಿಸಿಕೊಳ್ಳುವ ಹಾಗೆ ಸನ್ನಿವೇಶ ನಿರ್ಮಾಣವಾಗುತ್ತದೆ.
ಆದಿತ್ಯ ಠಾಕ್ರೆ ಟ್ವೀಟ್ ಮೂಲಕ ಹೇಳಿರುವ ಹಾಗೆ, ಅತಿ ಹೆಚ್ಚು ತೆರಿಗೆ ಕೊಡುವ ಮಹಾರಾಷ್ಟ್ರಕ್ಕೆ ಬಜೆಟ್‌ನಲ್ಲಿ ಏನೆಂದರೆ ಏನೂ ಇಲ್ಲ. ಬಜೆಟ್‌ನಲ್ಲಿ ಒಮ್ಮೆಯೂ ಮಹಾರಾಷ್ಟ್ರದ ಉಲ್ಲೇಖ ಬರುವುದಿಲ್ಲ.
ಸತ್ಯವೇನೆಂದರೆ, ಈ ಸಲದ ಬಜೆಟ್ ಕೇಂದ್ರ ಸರಕಾರದ್ದಷ್ಟೇ ಆಗಿರಲಿಲ್ಲ. ಅಕ್ಕಪಕ್ಕ ನಿಂತು ಸರಕಾರವನ್ನು ಬೆಂಬಲಿಸಿದವರನ್ನು ಸಮಾಧಾನವಾಗಿ ಇರಿಸಬೇಕಾದ ಅನಿವಾರ್ಯತೆ ಮೋದಿಗೆ ಇದ್ದೇ ಇತ್ತು.
ರಾಹುಲ್ ಗಾಂದಿ ಇದನ್ನು ಕುರ್ಚಿ ಬಚಾವೋ ಬಜೆಟ್ ಎಂದು ಲೇವಡಿ ಮಾಡಿದ್ದಾರೆ. ಅಂಬಾನಿ, ಅದಾನಿಗಳನ್ನೇ ಸಂತುಷ್ಟಪಡಿಸಿ, ಬಡವರಿಗೆ ಏನೂ ಇಲ್ಲದಂತೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪ್ರಣಾಳಿಕೆ ಮತ್ತು ಹಿಂದಿನ ಬಜೆಟ್‌ಗಳ ಕಾಪಿ ಪೇಸ್ಟ್ ಎಂದೂ ರಾಹುಲ್ ಟೀಕಿಸಿದ್ದಾರೆ.
ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ೧೫ ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ. ಆದರೆ ಎರಡೇ ರಾಜ್ಯಗಳನ್ನು ಸಮಾಧಾನವಾಗಿರಿಸುವ ಅನಿವಾರ್ಯತೆಯಲ್ಲಿ ಇತರ ರಾಜ್ಯಗಳನ್ನು ಹೇಗೆ ನಿರ್ಲಕ್ಷಿಸಲಾಗಿದೆ ಎಂಬುದು ಕಾಣಿಸುತ್ತದೆ.
ಮಹಾರಾಷ್ಟ್ರಕ್ಕೆ ಅನ್ಯಾಯವಾದುದರ ಬಗ್ಗೆ ಆದಿತ್ಯ ಠಾಕ್ರೆ ಹೇಳಿರುವ ಹಾಗೆಯೇ, ಉತ್ತರ ಪ್ರದೇಶಕ್ಕೆ ಏನೂ ಇಲ್ಲದಂತಾಗಿರುವ ಬಗ್ಗೆ ಅಖಿಲೇಶ್ ಯಾದವ್ ಪ್ರಶ್ನೆಯೆತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದನ್ನು ನಿರಾಶಾದಾಯಕ ಬಜೆಟ್ ಎಂದಿದ್ದಾರೆ. ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಸಿದ್ಧಪಡಿಸಲಾದ ಬಜೆಟ್ ಇದೆಂದು ಅವರು ಹೇಳಿದ್ದಾರೆ.
ರೈತರಿಗಾಗಿ ಈ ಬಜೆಟ್‌ನಲ್ಲಿ ಏನೇನೂ ಇಲ್ಲವೆಂಬುದು ಖರ್ಗೆಯವರ ತಕರಾರು.
ಉತ್ತರ ಪ್ರದೇಶ, ಮಹಾರಾಷ್ಟ್ರವಲ್ಲದೆ, ಪಶ್ಚಿಮ ಬಂಗಾಳವನ್ನೂ ಬಜೆಟ್‌ನಲ್ಲಿ ಪೂರ್ತಿಯಾಗಿ ನಿರ್ಲಕ್ಷಿಸಲಾಗಿದೆ. ಹಾಗಾಗಿಯೇ ಟಿಎಂಸಿ ಬಜೆಟ್ ಭಾಷಣದ ನಡುವೆಯೇ ಸದನದಿಂದ ಹೊರನಡೆಯುವ ಮೂಲಕ ತನ್ನ ವಿರೋಧವನ್ನು ಪ್ರಕಟಿಸಿದೆ.
ಹೀಗೆ ತನ್ನನ್ನು ತಾನು ಬಚಾವ್ ಮಾಡಿಕೊಳ್ಳುವ ಉದ್ದೇಶದೊಂದಿಗೆ ಸರಕಾರ ಈ ಬಜೆಟ್ ರೂಪಿಸಿದೆ.
ಹಾಗಾದರೆ ದೀರ್ಘಾವಧಿಯ ಯೋಜನೆಗಳೇನು? ಇದೆಲ್ಲವೂ ಎಲ್ಲಿಗೆ ಮುಟ್ಟಲಿದೆ? ಮುಂದಿನ ದಿನಗಳಲ್ಲಿ ಏಳಬಹುದಾದ ಸವಾಲುಗಳು ಏನಿರಬಹುದು?
ಅಮೃತಕಾಲದ ಬಗ್ಗೆ ದೊಡ್ಡದಾಗಿ ಹೇಳಲಾಗುತ್ತಿತ್ತಲ್ಲವೆ?
ಈಗ ಅಮೃತ ಕಾಲದ ಸುದ್ದಿಯೂ ಇಲ್ಲ, ಸದ್ದೂ ಇಲ್ಲ.
ಬಜೆಟ್ ಅಂತೂ ಅಮೃತಕಾಲವನ್ನು ಮರೆತೇ ಬಿಟ್ಟಿದೆ ಮತ್ತು ಆ ಮೂಲಕ, ಆಯಾ ಸಮಯಕ್ಕೆ ಏನು ಬೇಕಾಗಿದೆಯೋ ಅದನ್ನು ಅಬ್ಬರದಿಂದ ಹೇಳಿ ಭ್ರಮೆ ಸೃಷ್ಟಿಸುವ ಬಿಜೆಪಿ ಸರಕಾರದ ಹಳೆ ಚಾಳಿಯೇ ಈಗ ಈ ಬಜೆಟ್ ರೂಪದಲ್ಲೂ ಮತ್ತೊಮ್ಮೆ ವ್ಯಕ್ತವಾಗಿದೆ.