ಹೆಚ್ಚುತ್ತಿರುವ ಚುನಾವಣಾ ಹಿಂಸಾಚಾರ ಏನನ್ನು ಸೂಚಿಸುತ್ತಿದೆ?
ಲೋಕಸಭಾ ಚುನಾವಣೆಗೆ ನಾಲ್ಕು ಹಂತಗಳ, 370ಕ್ಕೂ ಹೆಚ್ಚು ಸೀಟುಗಳ ಮತದಾನ ಮುಗಿದಿದೆ.ಅಂದರೆ ಒಟ್ಟು ಸೀಟುಗಳ ಪೈಕಿ ಹೆಚ್ಚಿನ ಸೀಟುಗಳ ಮತದಾನ ಮುಗಿದು ಹೋಗಿದೆ.
ನಾಲ್ಕನೇ ಹಂತದ ಮತದಾನ ಮುಗಿಯುವುದರೊಂದಿಗೆ ಈ ಸಲದ ಚುನಾವಣೆಯ ಬಹುದೊಡ್ಡ ಭಾಗ ಮುಗಿದಂತಾಗಿದೆ.
ಆದರೆ ಈ ಬಾರಿ 400 ಸೀಟುಗಳನ್ನು ಗೆಲ್ಲುತ್ತೇವೆ ಎಂದಿದ್ದವರ ಎದುರಿನ ಸ್ಥಿತಿ ಹೇಗಿದೆ?
ಇನ್ನು ಮೂರು ಹಂತಗಳು ಬಾಕಿ ಇವೆಯಾದರೂ, ದೇಶದ ಮತ್ತು ನಮ್ಮ ಪ್ರಜಾಪ್ರಭುತ್ವದ ಭವಿಷ್ಯ ಕುರಿತ ಬಹುತೇಕ ತೀರ್ಮಾನ ಆಗಲೇ ಇವಿಎಂ ಸೇರಿಯಾಗಿದೆ. ಈಗ ಈ ಹಂತದಲ್ಲಿ ಗಮನಿಸಬೇಕಾಗಿರುವುದು ಹೇಗಿದೆ ಹವಾ ಎಂಬ ವಿಚಾರವನ್ನು.
ದೀರ್ಘ ಸಮಯಕ್ಕೆ ಎಳೆಯಲಾದ ಈ ಸಲದ ಚುನಾವಣೆಯಲ್ಲಿ ಗಾಳಿ ಬೀಸುವ ದಿಕ್ಕು ಬದಲಾಗುವುದಕ್ಕೂ ಸಾಕಷ್ಟು ಅವಕಾಶ ಇತ್ತು ಎನ್ನಿಸುತ್ತದೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಹಲವೆಡೆ ರಾಜಕೀಯ ವಾತಾವರಣ ಬದಲಾಗಿರುವುದು ಕಾಣಿಸತೊಡಗಿದೆ.
ನಾಲ್ಕನೇ ಹಂತದ ಮತದಾನದ ವೇಳೆ ನಡೆದ ಹಿಂಸಾಚಾರವು, ಸೋಲಿನ ಭೀತಿಯಿಂದ ಮೂಡಿರುವ ಹತಾಶೆಯ ಪರಿಣಾಮವೇ ಎಂಬ ಪ್ರಶ್ನೆಗಳೂ ಎದ್ದಿವೆ.
ಗಾಳಿ ಬದಲಾದಂತೆ ಹತಾಶೆಯ ತೀವ್ರತೆಯೂ ಹೆಚ್ಚುತ್ತಿರುವ ಹಾಗಿದೆ. ಯಾಕೆಂದರೆ ಈವರೆಗೂ ಅಷ್ಟಾಗಿ ಕಂಡಿರದ ಹತಾಶ ಮನಃಸ್ಥಿತಿ ಈ ಹಂತದಲ್ಲಿ ಢಾಳಾಗಿಯೇ ಕಾಣಿಸಿದೆ. ಹಲವು ಸಮಸ್ಯೆಗಳು ತಲೆದೋರಿದವು, ಗೊಂದಲಗಳಾದವು, ಹಿಂಸಾಚಾರ ನಡೆದುಹೋಯಿತು.
ಉತ್ತರ ಪ್ರದೇಶದಲ್ಲಿ ಹಲವೆಡೆ ಹಿಂಸಾಚಾರ, ಬೆದರಿಕೆ, ಪೊಲೀಸರಿಂದಲೇ ಹಲ್ಲೆ ಘಟನೆಗಳು ನಡೆದಿವೆ.
ಜೌನ್‌ಪುರ್‌ನಲ್ಲಿ ಬಿಜೆಪಿ ಕಾರ್ಯಕರ್ತ ಪತ್ರಕರ್ತ ಅಶುತೋಷ್ ಎಂಬವರ ಹತ್ಯೆಯಾಗಿದೆ.
ಪ್ರತಾಪ್‌ಗಡ್ ಎಂಬಲ್ಲಿ ಬಸಂತ್ ಕುಮಾರ್ ಎಂಬ ಪತ್ರಕರ್ತನ ಮೇಲೆ ಗುಂಡು ಹಾರಿಸಲಾಗಿದೆ. ಆದರೆ ಆತ ಸುರಕ್ಷಿತವಾಗಿದ್ದಾರೆ.
ರಾಯ್ ಬರೇಲಿಯಲ್ಲಿ ಅಮಿತ್ ಶಾ ರ್ಯಾಲಿ ನಡೆಯುತ್ತಿದ್ದಾಗ ಪತ್ರಕರ್ತ ರಾಘವ್ ತ್ರಿವೇದಿ ಎಂಬವರ ಮೇಲೆ ಹಲ್ಲೆಯಾಗಿದೆ, ಅವರನ್ನು ಕೊಠಡಿಯೊಂದರಲ್ಲಿ ಬಂದ್ ಮಾಡಲಾಗಿದೆ. ಮಹಿಳೆಯರನ್ನು ನೂರು ರೂಪಾಯಿ ಕೊಟ್ಟು ರ್ಯಾಲಿಗೆ ಕರೆದುಕೊಂಡು ಬರಲಾಗಿದೆ ಎಂಬುದರ ಬಗ್ಗೆ ಅವರು ವೀಡಿಯೊ ಮಾಡುತ್ತಾ ಇದ್ದರು.
‘‘ನಾನು ಗಡ್ಡ ಇಟ್ಟಿದ್ದರಿಂದ ಮುಸ್ಲಿಮ್ ಎಂದು ತಿಳಿದುಕೊಂಡ ಬಿಜೆಪಿ ಕಾರ್ಯಕರ್ತರು ನನ್ನನ್ನು ದೇಶದ್ರೋಹಿ ಎಂದು ಕರೆದು ಹಲ್ಲೆ ನಡೆಸಿದ್ದಾರೆ’’ ಎಂದು ಹೇಳಿದ್ದಾರೆ ರಾಘವ್ ತ್ರಿವೇದಿ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ಎದುರು ಸ್ಪರ್ಧಿಸಲು ಬಯಸಿರುವ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರ ನಾಮಪತ್ರವನ್ನೇ ಸ್ವೀಕರಿಸುತ್ತಿಲ್ಲ. ಅವರು ಮಾತ್ರವಲ್ಲ ಅಲ್ಲಿ ಬೇರೆ ಯಾವ ಅಭ್ಯರ್ಥಿಯ ನಾಮಪತ್ರವನ್ನೂ ಸ್ವೀಕರಿಸುತ್ತಿಲ್ಲ ಎಂದು ಶ್ಯಾಮ್ ರಂಗೀಲಾ ದೂರಿದ್ದಾರೆ.
ಇಡೀ ವಿಶ್ವದ ವಿಶ್ವಗುರು ಆಗುವವವರು ಶ್ಯಾಮ್ ರಂಗೀಲಾನಂತಹ ಪ್ರತಿಭಾವಂತ ತನ್ನೆದುರು ಸ್ಪರ್ಧಿಸುತ್ತಾರೆ ಎಂದಾಗ ಸ್ವಾಗತಿಸಬೇಕಿತ್ತು. ಅಲ್ಲವೇ... ?
ಕನೌಜ್‌ನಲ್ಲಿ ಬಿಜೆಪಿ ಸಂಸದ ಸುಬ್ರತ್ ಪಾಠಕ್ ಸೋದರ ಚೋಟು ಪಾಠಕ್ ಎಂಬಾತ ಬೆದರಿಕೆ ಹಾಕಿರುವ, ಹಲ್ಲೆ ಮಾಡಲು ಮುಂದಾಗಿರುವ ವೀಡಿಯೊ ಬಹಿರಂಗವಾಗಿದೆ. ಅಲ್ಲಿ ಬಿಜೆಪಿಯಿಂದ ಬೂತ್ ವಶಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ಎಸ್‌ಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಆದಿತ್ಯನಾಥ್ ಬಂದ ಮೇಲೆ ಉತ್ತರ ಪ್ರದೇಶ ಸಂಪೂರ್ಣ ಗೂಂಡಾ ಮುಕ್ತವಾಗಿದೆ ಎಂದು ಪ್ರಚಾರ ಮಾಡುವ ಬಿಜೆಪಿಯೇ ನಿನ್ನೆ ಕನೌಜ್‌ನಲ್ಲಿ ಎಸ್‌ಪಿ ಕಾರ್ಯಕರ್ತರು ಗೂಂಡಾಗಿರಿ ಮಾಡುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದಿದೆ. ಇದೆಂತಹ ವಿಚಿತ್ರ?
ಬಿಜೆಪಿ ಶಾಸಕ ಕೈಲಾಶ್ ರಜಪೂತ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೀಪು ಪಾಂಡೆ ಎಂಬವರು ಪೊಲೀಸರಿಗೇ ಬೆದರಿಕೆ ಹಾಕಿರುವ ವೀಡಿಯೊ ವೈರಲ್ ಆಗಿದೆ.
ಲಖೀಮ್ ಪುರ್ ಖೇರಿಯಲ್ಲಿ ಎಸ್‌ಪಿಗೆ ಮತ ಹಾಕಿದರೆ ಅದು ಬಿಜೆಪಿಗೆ ಹೋಗುತ್ತಿದೆ ಎಂದು ದೂರು ಬಂತು. ಅಷ್ಟು ಗಂಭೀರ ಆರೋಪದ ಬಗ್ಗೆ ಆಯೋಗ ಮಾತ್ರ ಏನೂ ಮಾತಾಡಲೇ ಇಲ್ಲ.
ಯುಪಿಯಲ್ಲಿ ಹಲವೆಡೆ ಪೊಲೀಸರೇ ಮತದಾರರ ಮೇಲೆ ದರ್ಪ ತೋರಿಸಿರುವ, ಗಂಭೀರ ಹಲ್ಲೆ ಮಾಡಿರುವ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.
ಆಂಧ್ರದ ಪಾಲನಾಡು ಜಿಲ್ಲೆಯ ಕೆಲವೆಡೆ ಚುನಾವಣಾ ಹಿಂಸಾಚಾರ ನಡೆಯಿತು.
ಚಿತ್ತೂರು ಜಿಲ್ಲೆಯಲ್ಲಿ ಅಪಹರಣಕ್ಕೊಳಗಾಗಿದ್ದ ಟಿಡಿಪಿಯ ಮೂವರು ಮತಗಟ್ಟೆ ಏಜೆಂಟರನ್ನು ರಕ್ಷಿಸಲಾಗಿದೆ. ಅನ್ನಮಯ್ಯ ಜಿಲ್ಲೆಯ ಮತಗಟ್ಟೆಯಲ್ಲಿ ಜನಸೇನಾ ಮತಗಟ್ಟೆ ಏಜೆಂಟರನ್ನು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಅಪಹರಿಸಿದ್ದಾರೆ ಎಂದು ಆರೋಪಿಸಿದ ಜನಸೇನಾ ಕಾರ್ಯಕರ್ತರು ದಳವಾಯಿ ಮತಗಟ್ಟೆಯಲ್ಲಿ ಇವಿಎಂ ಧ್ವಂಸಗೊಳಿಸಿದರು.
ಇನ್ನು ಪಶ್ಚಿಮ ಬಂಗಾಳದ ಕೆಲವೆಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಉದ್ವಿಗ್ನ ವಾತಾವರಣ ಉಂಟಾಗಿತ್ತು.
ಹಿಂದಿನ ದಿನಗಳಲ್ಲಾದರೆ ಬೂತ್‌ಗಳನ್ನೇ ವಶಪಡಿಸಿಕೊಳ್ಳುವುದು ನಡೆಯುತ್ತಿತ್ತು. ಈಗ ಚುನಾವಣಾ ಆಯೋಗವನ್ನೇ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪವಿದೆ.
ಮೊಗಲ್, ಮಟನ್, ಮುಸ್ಲಿಮ್, ಜನಸಂಖ್ಯೆ ವಿಚಾರಗಳೆಲ್ಲ ಬಂದು ಹೋದವು. ಹೇಗೆಲ್ಲ ಸರಣಿ ನೀತಿ ಸಂಹಿತೆ ಉಲ್ಲಂಘನೆ ಆಯಿತೆಂಬುದನ್ನೂ ನೋಡಿದೆವು. ಆದರೆ ಈಗ ಮತದಾನದ ದಿನವೂ ಹೇಗೆಲ್ಲ ನಿಯಮಗಳ ಉಲ್ಲಂಘನೆ ಆಯಿತು ಎಂಬುದು ಕಂಡಿದೆ.
ಹೈದರಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮುಸ್ಲಿಮ್ ಮಹಿಳೆಯರ ಮೇಲೆ ಒಂದು ಬಗೆಯಲ್ಲಿ ದರ್ಪವನ್ನೇ ತೋರಿಸಿದರು.
ಮತದಾರರ ಗುರುತಿನ ಚೀಟಿಯನ್ನು ಅಭ್ಯರ್ಥಿಯೊಬ್ಬರು ಚೆಕ್ ಮಾಡಿದ ಅಂಥದೊಂದು ಘಟನೆ ಹಿಂದೆಂದೂ ಕಂಡದ್ದಿಲ್ಲ. ಉವೈಸಿ ವಿರುದ್ಧದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ಮತಗಟ್ಟೆಗೆ ಹೋಗಿ ಮುಸ್ಲಿಮ್ ಮಹಿಳೆಯರ ಬುರ್ಖಾ ತೆಗೆಸಿ ಗುರುತಿನ ಚೀಟಿ ಪರಿಶೀಲಿಸಿರುವುದು ಭಾರೀ ವಿವಾದಕ್ಕೆ ಕಾರಣವಾಯಿತು. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಗಮನಿಸಿದ ಆಯೋಗ ಕ್ರಮ ತೆಗೆದುಕೊಂಡಿದೆ ಎಂಬುದು ಸಮಾಧಾನಕರ ವಿಷಯ. ಆದರೆ, ಬಿಜೆಪಿ ಯಾವ ಮಟ್ಟಕ್ಕೂ ಹೋಗಬಹುದು, ಯಾವ ಮಟ್ಟದಲ್ಲಿ ಬೇಕಾದರೂ ನಿಯಮ ಉಲ್ಲಂಘನೆ ಮಾಡಬಹುದು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಅಷ್ಟಾಗಿಯೂ ಮಾಧವಿ ಲತಾ ತಾನು ಮಾಡಿದ್ದನ್ನು ಸಮರ್ಥಿಸಿಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.
ಮುಸ್ಲಿಮ್ ಮತದಾರರ ಐಡಿ ಪರಿಶೀಲಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಮಾಧವಿ ಲತಾ ವಿರುದ್ಧ ಮಲಕಪೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ ಅಭ್ಯರ್ಥಿಗೆ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕಿದೆ ಎಂದು ಕೂಡ ಮಾಧವಿ ಲತಾ ವಾದಿಸಿದರು.
ನಿಜವಾಗಿಯೂ ಅಂಥ ಹಕ್ಕಿದೆಯೆ? ನಿಯಮ ಏನು ಹೇಳುತ್ತದೆ?
ನಿಯಮ ಹೇಳುವ ಪ್ರಕಾರ ಮೊದಲ ಮತಗಟ್ಟೆ ಅಧಿಕಾರಿ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಾರೆ ಮತ್ತು ಆ ಮೂಲಕ ಬೋಗಸ್ ಅಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಾರೆ.
ಮತಗಟ್ಟೆಯಲ್ಲಿ ಯಾವುದೇ ಪಕ್ಷದ ಪೊಲೀಂಗ್ ಏಜೆಂಟ್ ಇದ್ದರೂ ಆತ ಎಲ್ಲದರ ಮೇಲೆ ಕಣ್ಣಿಡಬಹುದು ಅಷ್ಟೆ.
ಮತಗಟ್ಟೆ ಅಧಿಕಾರಿ ಗುರುತು ಪರಿಶೀಲನೆ ನಡೆಸುತ್ತಿರುವ ಹೊತ್ತಿನಲ್ಲಿ ಅದನ್ನು ಗಮನಿಸಲು ಅಭ್ಯರ್ಥಿ ಇಲ್ಲವೆ ಪೋಲಿಂಗ್ ಏಜೆಂಟ್‌ಗೆ ಅವಕಾಶವಿರುತ್ತದೆ. ಆದರೆ ಸ್ವತಃ ಅಭ್ಯರ್ಥಿಯೇ ಹೀಗೆ ಐಡಿ ಪರಿಶೀಲನೆ ಮಾಡುವಂತಿಲ್ಲ. ಇಷ್ಟು ವರ್ಷಗಳಲ್ಲಿ ಯಾವ ಅಭ್ಯರ್ಥಿಯೂ ಹೀಗೆ ಮತಗಟ್ಟೆಯೊಳಗೆ ಬಂದು ರಾಜಾರೋಷವಾಗಿ ಮಾಡಿದ್ದಿರಲಿಲ್ಲ. ಆದರೆ ಮಾಧವಿ ಲತಾ ಮಾಡಿದ್ದು ಗುರುತು ಪರಿಶೀಲನೆಯಂತಿರಲಿಲ್ಲ. ಅದು ಅಕ್ಷರಶಃ ಬೆದರಿಸುವಂತಿತ್ತು.
ಪೊಲೀಸ್ ಸಿಬ್ಬಂದಿ ಸಕ್ರಿಯವಾಗಿಲ್ಲ. ಅವರು ಏನನ್ನೂ ಪರಿಶೀಲಿಸುತ್ತಿಲ್ಲ ಎಂದೆಲ್ಲ ಮಾಧವಿ ಲತಾ ಆಕ್ಷೇಪಿಸುತ್ತಿದ್ದರು. ಆದರೆ ಒಂದು ಪ್ರಶ್ನೆ ಏನೆಂದರೆ, ಹೀಗೆಲ್ಲ ಮಾಡಲು ಹೇಗೆ ಇಂಥವರಿಗೆ ಧೈರ್ಯ ಬರುತ್ತದೆ? ಯಾರಿಂದ ಅಂಥ ಧೈರ್ಯ ಬರುತ್ತದೆ? ಎಂಬುದು.
ತಾನು ಹೀಗೆ ಮಾಡುವುದರಿಂದ ತನ್ನ ವಿರುದ್ಧವೇ ಕ್ರಮ ಜರುಗಬಹುದು ಎಂಬ ಭಯವೂ ಇಲ್ಲದೆ ಇದನ್ನೆಲ್ಲ ಮಾಡಲು ಧೈರ್ಯ ಬರುವುದು ಹೇಗೆ?
ಇದೇ ಕೆಲಸವನ್ನು ವಿಪಕ್ಷದ ಅಭ್ಯರ್ಥಿ ಮಾಡಿದ್ದಿದ್ದರೆ ಆಗ ಏನಾಗುತ್ತಿತ್ತು? ಆ ಅಭ್ಯರ್ಥಿಯ ಎದುರು ಚುನಾವಣಾ ಆಯೋಗ ಶೌರ್ಯ ಪ್ರದರ್ಶನ ನಡೆಸುತ್ತಿತ್ತಲ್ಲವೆ?
ಹಾಗೆ ನೋಡಿದರೆ, ನಡೆದದ್ದು ಇದೊಂದೇ ಪ್ರಕರಣವಲ್ಲ.
ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧರ್ಮಪುರಿ ಅರವಿಂದ್ ಬುರ್ಖಾ ಧರಿಸಿ ಮತಗಟ್ಟೆಗೆ ಬಂದ ಮಹಿಳೆಯರ ಮೇಲೆ ಎಲ್ಲರ ಸಮ್ಮುಖದಲ್ಲೇ ಅಬ್ಬರಿಸಿದ, ಬೆದರಿಸಿದ ಘಟನೆ ನಡೆಯಿತು. ಸಮಸ್ಯೆಯಿದ್ದರೆ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಮಾತಾಡಬೇಕೇ ಹೊರತು ಮತಗಟ್ಟೆಯೆಂದರೆ ತಮ್ಮದೇ ದರ್ಬಾರಿನ ಅಂಗಳ ಎನ್ನುವಂತೆ ವರ್ತಿಸಬಾರದು. ಆದರೆ ಬಿಜೆಪಿಯ ಮಂದಿಗೆ ಅಂಥ ಯಾವ ನಿಯಮಗಳು ಕೂಡ ಬಹುಶಃ ಅನ್ವಯಿಸುವುದಿಲ್ಲ.
ಗುಂಟೂರು ಜಿಲ್ಲೆಯ ಶಾಸಕ ಶಿವಶಂಕರ್ ಮತ ಹಾಕಲು ಸರದಿ ಮುರಿದು ಹೋದಾಗ ಅದಕ್ಕೆ ಆಕ್ಷೇಪ ಎತ್ತಿದವನ ಮೇಲೆ ದರ್ಪ ತೋರಿದ್ದು, ದೌರ್ಜನ್ಯ ನಡೆಸಿದ್ದು ಕಂಡುಬಂತು.
‘‘ನನ್ನನ್ನು ಹೇಗೆ ತಡೆಯುತ್ತಿ? ನಾನು ಸರದಿಯಲ್ಲಿ ನಿಲ್ಲಬೇಕೆ?’’ ಎಂದು ಕೇಳುತ್ತ ಆ ವ್ಯಕ್ತಿಯ ಕೆನ್ನೆಗೆ ಹೊಡೆದದ್ದೂ ಆಯಿತು. ಇದು ಜನಪ್ರತಿನಿಧಿಯ ದುರಹಂಕಾರ.
ಯುಪಿ, ಬಿಹಾರದಲ್ಲಿಯೂ ಅತಿರೇಕದ ವರ್ತನೆಗಳು ನಡೆದವು. ಕೆಲವೆಡೆ ಅಲ್ಪಸಂಖ್ಯಾತ ಮತದಾರರು ಮತದಾನಕ್ಕೆ ಬರುವಲ್ಲಿ ಸಮಸ್ಯೆ ಸೃಷ್ಟಿಸಿದ ಘಟನೆಗಳೂ ನಡೆದವು. ಮತದಾನ ರದ್ದಾದ ಘಟನೆಗಳೂ ಸಂಭವಿಸಿದವು.
ಇನ್ನು ಚುನಾವಣಾಧಿಕಾರಿಯಂತಹವರೇ ಸಮಸ್ಯೆ ಸೃಷ್ಟಿಸುವುದೂ ನಡೆಯುತ್ತದೆ.
ಉಜ್ಜಯಿನಿಯ ಚುನಾವಣಾಧಿಕಾರಿ ಮತಗಟ್ಟೆಯೊಳಗೇ ಮೋದಿ ಮೋದಿ ಎನ್ನುತ್ತಿದ್ದರು ಎನ್ನಲಾಗಿದೆ. ಜನರು ತಕರಾರೆತ್ತಿ ವೀಡಿಯೊ ಮಾಡಲು ಶುರು ಮಾಡಿದಾಗ ಕ್ಷಮೆ ಕೇಳಿರುವುದಾಗಿ ವರದಿಯಾಗಿದೆ. ಚುನಾವಣಾಧಿಕಾರಿಯೇ ಇಂಥ ವರ್ತನೆ ತೋರಿಸಿದರೆ, ಚುನಾವಣೆ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂದು ಹೇಗೆ ನಂಬುವುದು?
ಮಹಾರಾಷ್ಟ್ರದ ಬಾರಾಮತಿಯಲ್ಲಿ ಹಳೇ ಎನ್‌ಸಿಪಿ ಮತ್ತು ಹೊಸ ಬಣದ ನಡುವೆ ನಿರ್ಣಾಯಕ ಕದನ ಏರ್ಪಟ್ಟಿದೆ. ಅಲ್ಲಿ ಇವಿಎಂ ಇಟ್ಟಲ್ಲಿ 45 ನಿಮಿಷಗಳ ಕಾಲ ವಿದ್ಯುತ್ ವ್ಯತ್ಯಯವಾಗಿ, ಎಲ್ಲಾ ಸಿಸಿಟಿವಿ ಕ್ಯಾಮರಾಗಳು ಬಂದ್ ಆಗಿದ್ದನ್ನು ಎನ್‌ಸಿಪಿ ಶರದ್ ಪವಾರ್ ಬಣದ ಅಭ್ಯರ್ಥಿ ಸುಪ್ರಿಯಾ ಸುಳೆ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.
ಇದು ಅಕಸ್ಮಾತ್ತಾಗಿ ನಡೆಯಿತೋ, ಪಿತೂರಿಯಿಂದಾಗಿ ಆಗಿದೆಯೊ ಗೊತ್ತಿಲ್ಲ. ಆದರೆ ಹೀಗಾಗಬಾರದು ಎಂಬುದು ಮಾತ್ರ ನಿಜ.
ಎಲ್ಲ ಹಂತದ ಮತದಾನಗಳಲ್ಲೂ ಈ ಥರದ ಏನಾದರೊಂದು ಹೊಸ ರಗಳೆಗಳು ನಡೆಯುತ್ತಲೇ ಇವೆ. ಯಾಕೆ ಹೀಗೆ?
400ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವ ಅತಿಯಾದ ವಿಶ್ವಾಸಕ್ಕೆ ಪೆಟ್ಟು ಬೀಳುತ್ತಿದೆ ಎನ್ನಿಸಿದಾಗ ಹೀಗಾಗುತ್ತಿದೆಯೆ?
ಈಗ 400ಕ್ಕೂ ಹೆಚ್ಚು ಸೀಟುಗಳ ಮಾತೇ ನಿಂತಿದೆ. ಯಾಕೆ?
ಜನರ ಮನಸ್ಸು ಬದಲಾಗುತ್ತಿದೆಯೆಂಬ ಸತ್ಯ ಅವರಿಗೆ ಅರ್ಥವಾಗುತ್ತಿದೆಯೇ?
ಚುನಾವಣೆ ಶುರುವಾದ ಹೊತ್ತಿನಲ್ಲಿ ವಿಪಕ್ಷಗಳು ಕೇಸ್‌ಗಳನ್ನು ಎದುರಿಸುತ್ತ, ನಾಯಕರು ಜೈಲಿನಲ್ಲಿರುವ ಕಾರಣಕ್ಕೆ ಒಂದು ಬಗೆಯ ಹಿಂಜರಿಕೆಗೆ ಒಳಗಾಗಿದ್ದವು.
ಅದೇ ವೇಳೆ ಮೋದಿ ಬಹಳ ಏರುಗತಿಯಲ್ಲಿದ್ದುದು ಕಾಣುತ್ತಿತ್ತು. ಈಗ ಅವರು ಕುಸಿದಂತೆ ಕಾಣಿಸತೊಡಗಿದ್ದಾರೆ.
2014ರಲ್ಲಿ ಮೋದಿ ಗೆಲುವು ಸಾಧ್ಯವಾದದ್ದು ಯುಪಿಎ ವಿರುದ್ಧದ ಭ್ರಷ್ಟಾಚಾರ ಆರೋಪದ ಅಲೆಯಿಂದಾಗಿ.
2019ರಲ್ಲಿ ಪುಲ್ವಾಮಾ ದಾಳಿ ಬಿಜೆಪಿಗೆ ಲಾಭದಾಯಕವಾಗಿತ್ತು.
ಆದರೆ ಈ ಬಾರಿ ಯಾವ ಸಾಧನೆಯೂ ಇಲ್ಲದ ಮೋದಿ ಸರಕಾರದ ಬಳಿ ಯಾವುದೇ ಅಸ್ತ್ರ ಇಲ್ಲವಾಗಿದೆ.
ಹಾಗಾಗಿ ಕೈಯಲ್ಲಿ ಕೋಟಿಗಟ್ಟಲೆ ದುಡ್ಡು, ಮೀಡಿಯಾ, ಈ.ಡಿ., ಸಿಬಿಐ, ಐಟಿ, ಆಯೋಗ ಎಲ್ಲವೂ ಇದ್ದರೂ ಮೋದಿ ಪರ ವಾತಾವರಣ ಸೃಷ್ಟಿಸಲು ಸಾಧ್ಯವಾಗದ ಹಾಗಿದೆ.
ಮತದಾರರ ತೀರ್ಮಾನ ಈ ಬಾರಿ ಏನಿರಬಹುದು ಎಂಬ ಅಂದಾಜು ಎಲ್ಲರ ಎದುರು ಇದೆ. ಇದು ಮೋದಿ ಪರ ನಿರೂಪಣೆ ಕುಸಿಯಲು ಒಂದು ಕಾರಣ.
30 ದಿನಗಳ ಹಿಂದೆ ಏನಿತ್ತೋ ಆ ವಾತಾವರಣ ಖಂಡಿತ ಈಗ ಇಲ್ಲವಾಗಿದೆ ಎಂಬ ಚಿತ್ರಗಳೇ ಸಿಗುತ್ತಿವೆ. ಮೋದಿ ಸರಕಾರದ ಎದುರು ನಿರುದ್ಯೋಗ, ಬೆಲೆಯೇರಿಕೆ ಮೊದಲಾದವು ಚುನಾವಣಾ ವಿಷಯಗಳಾಗಿ ನಿಂತಿವೆ.
ಬೆದರಿಸಿಯೇ ಗೆಲ್ಲುತ್ತೇನೆ ಎಂಬ ಮೋದಿ ಭ್ರಮೆ ಕಳಚಿದೆ.
ಸುಳ್ಳುಗಳನ್ನು ಹೇಳಿಯೇ ಜನರನ್ನು ನಂಬಿಸುವ ಅವರ ಯತ್ನ ಅಪಹಾಸ್ಯಕ್ಕೆ ತುತ್ತಾಗುತ್ತಿದೆ. ಯಾಕೆಂದರೆ ಜನರಿಗೆ ವಾಸ್ತವ ಏನೆಂಬುದು ತಿಳಿದಿದೆ.
ಒಂದಂತೂ ಸ್ಪಷ್ಟ, ವಿಪಕ್ಷಗಳ ಪ್ರಚಾರದಲ್ಲಿ ತೀವ್ರತೆ ಕಾಣಿಸುತ್ತಿದೆ. ಮೋದಿ ಬಳಿ ಹೊಸ ಮಾತುಗಳೇ ಇಲ್ಲವಾಗಿದೆ. ಬಿಜೆಪಿಯವರಿಗೇ ಚುನಾವಣೆ ಕೈತಪ್ಪತೊಡಗಿರುವ ಸುಳಿವುಗಳು ಸಿಗತೊಡಗಿವೆ.
ಇಡೀ ವಾತಾವರಣವೇ ಬದಲಾಗುತ್ತಿದೆ. ಈ ಬದಲಾವಣೆ ಬರೆಯಲಿರುವ ಭವಿಷ್ಯ ಖಂಡಿತ ಕುತೂಹಲ ಕೆರಳಿಸಿದೆ.